ಗುರುವಾರ, ಡಿಸೆಂಬರ್ 25, 2008

ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ ಅಬೌಟ್ ಕನ್ನಡ ಆನ್ಲೈನ್!

ಇದೇನಪ್ಪ ಇದು ಕನ್ನಡದ ಬಗ್ಗೆ ಅಂತ ಹಾಕಿ ಪೂರ್ತಿ ಇಂಗ್ಲಿಷ್ ಅಲ್ಲಿ ಟೈಟಲ್ ಕೊಟ್ಟಿದ್ದಾನೆ ಅಂದ್ಕೋಬೇಡಿ. ಅಂತರಜಾಲದಲ್ಲಿ, ತಂತ್ರಾಂಶಗಳಲ್ಲಿ ನಾವೆಲ್ಲ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ (FAQ) ನೋಡುತ್ತಲೇ ಇರುತ್ತೇವೆ. ನಿರ್ದಿಷ್ಟ ಕೆಲಸವನ್ನು ಮಾಡುವುದು ಹೇಗೆ, ವೈಶಿಷ್ಟ್ಯಗಳ ಬಗ್ಗೆ ಮಾಹಿತಿ, ಇನ್ನೂ ಅನೇಕ ವಿಷಯಗಳ ಬಗ್ಗೆ ತಿಳಿಸಲು ಇದನ್ನು ಹಾಕಿರುತ್ತಾರೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಈಗ ಅಂತರಜಾಲದಲ್ಲಿ ಗಣನೀಯವಾಗಿ ಮುಂದಿದೆ. ಸಂಪದ, ದಟ್ಸ್-ಕನ್ನಡ, ವೆಬ್ ದುನಿಯಾ, ಕೆಂಡಸಂಪಿಗೆ, ವಿಸ್ಮಯನಗರಿ, ಕನ್ನಡ ಹನಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿಕಿಪೀಡಿಯಾ - ಹೀಗೆ ಅನೇಕ ತಾಣಗಳಲ್ಲಿ ಕನ್ನಡಿಗರು ಬರೆದು/ಓದಿ ಸಂತಸ ಪಡುತ್ತಿದ್ದಾರೆ. ವಿಕಿಪೀಡಿಯಾದ ಲೋಗೋ ಕನ್ನಡದ "ವಿ" ಅಕ್ಷರವನ್ನು ಒಳಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. (ಯುನಿಕೋಡ್ "ವ" ಮತ್ತು ಅದರ ಹಿಂದೆ "ಇ" ಬಂದಿದೆ.. ಅದು ಬೇರೆ ವಿಷಯ. ದೇವನಾಗರಿಯ वि ಕೂಡ ಹೀಗೇ ರೂಪಾಂತರಗೊಂಡಿರುವುದನ್ನು ಗಮನಿಸಬಹುದು)

wikipedia logo

ಬ್ಲಾಗರ್ ಹಾಗೂ ವರ್ಡ್ ಪ್ರೆಸ್ ನ ಕನ್ನಡ ಬ್ಲಾಗುಗಳಂತೂ ಕವನ, ಕಥೆ, ಪ್ರಯಾಣ, ರಾಜಕೀಯ, ಸುದ್ದಿ, ಅನುಭವ, ವಿಮರ್ಶೆ, ಗಾದೆ, ವಿಜ್ಞಾನ, ಸಾಹಿತ್ಯ, ಕಲೆ - ಹೀಗೆ ವೈವಿಧ್ಯಗಳಿಂದ ತುಂಬಿಹೋಗಿದೆ. ಆದರೂ...

ಅಂತರಜಾಲದಲ್ಲಿ ಕನ್ನಡ ಉಪಯೋಗಿಸುವುದರ ಬಗ್ಗೆ ಕೂಡ ಎಲ್ಲರಿಗೂ ತಿಳಿದಿಲ್ಲ. ಹಲವರು ತಮ್ಮ ಅನಿಸಿಕೆಗಳನ್ನು ಆಂಗ್ಲ ಅಕ್ಷರಗಳನ್ನು ಬಳಸಿ ಬರೆಯುತ್ತಾರೆ. ಕೆಲವರು ಕನ್ನಡದಲ್ಲಿ ಹೇಗೆ ಬರೆಯುವುದು ಎಂದು ಕೂಡ ಕೇಳಿದ್ದಾರೆ. ನನ್ನ ಹಲವು ಗೆಳೆಯ/ಗೆಳತಿಯರು ನನ್ನ ಜೊತೆ ಚಾಟ್ ಮಾಡುವಾಗ/ಬ್ಲಾಗ್ ಓದುವಾಗ ನೀನು ಕನ್ನಡದಲ್ಲಿ ಹೇಗೆ ಬರೆಯುತ್ತೀಯ ಎಂದು ಕೇಳುತ್ತಿರುತ್ತಾರೆ. ಕೆಲವರು ಕನ್ನಡದಲ್ಲಿ ನಾನು ಏನಾದರೂ ಕಳಿಸಿದಾಗ ಇದೇನೋ ಇದು ಬಾಕ್ಸ್ ಬಾಕ್ಸ್ ಡಿಸ್ಪ್ಲೇ ಆಗ್ತಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬರಹದಲ್ಲಿ ಬರೆದು ಮತ್ತೆ ಇಲ್ಲಿ ಬಂದು ಕಾಪಿ-ಪೇಸ್ಟ್ ಮಾಡುವುದು ತಲೆನೋವು ಮಾರಾಯ ಎಂದು ಇಂಗ್ಲಿಷ್ ಅಕ್ಷರಗಳಿಗೆ ಮೊರೆಹೋಗುತ್ತಾರೆ. ಅವರಿಗೆಲ್ಲ ಸಹಾಯವಾಗಲಿ ಎಂಬ ಆಶಯದಿಂದ ಈ ಲೇಖನ ಬರೆಯುತ್ತಿದ್ದೇನೆ.

ಈಗ ನೇರವಾಗಿ ವಿಷಯಕ್ಕೆ ಬರೋಣ.

*****

ಅಂತರಜಾಲದಲ್ಲಿ ಕನ್ನಡ ಬಳಸಲು ಏನೇನು ಬೇಕು?
  • ಒಂದು ಗಣಕಯಂತ್ರ
  • ಅಂತರಜಾಲ ಸಂಪರ್ಕ
ಇವೆರಡಿದ್ದರೆ ಕನ್ನಡದಲ್ಲಿ ಬರೆಯುವುದು/ಓದುವುದು ಸಾಧ್ಯ. ಬಹುಪಾಲು ಜನರು ಉಪಯೋಗಿಸುತ್ತಿರುವುದು ವಿಂಡೋಸ್ ಆಗಿರುವುದರಿಂದ ಅದರಲ್ಲಿ ಓದುವುದು/ಬರೆಯುವುದು ಹೇಗೆ ಎಂಬುದನ್ನು ಇಲ್ಲಿ ಬರೆಯುತ್ತಿದ್ದೇನೆ.

ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?

ಅಂತರಜಾಲದಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಲ್ಲಿರುವುದು ಯೂನಿಕೋಡ್ ಅಕ್ಷರಗಳು. ಅವು ಸರಿಯಾಗಿ ಮೂಡಿಬರಲು ಅದಕ್ಕೆ ಬೇಕಾದ ತಂತ್ರಾಂಶ ಸಹಕಾರ ಅಗತ್ಯ. ಅದಕ್ಕಾಗಿ ನೀವು ಮಾಡಬೇಕಾದುದು:
  • Start -> Control Panel ಗೆ ಹೋಗಿ.
  • ನೀವು Category View ನಲ್ಲಿ ಇದ್ದರೆ Date, Time, Language and Regional Options ಅನ್ನು ತೆರೆದುಕೊಳ್ಳಿ. ನೀವು Classic View ನಲ್ಲಿ ಇದ್ದರೆ ಈ ಕ್ರಮದ ಅಗತ್ಯವಿಲ್ಲ.
  • Regional and Language settings ಅನ್ನು ತೆರೆಯಿರಿ.
  • ಅದರಲ್ಲಿ Languages ಎನ್ನುವ ಟ್ಯಾಬ್ ಇರುತ್ತದೆ. ಅಲ್ಲಿಗೆ ಹೋಗಿ.
  • Install files for complex script and right-to-left languages (including Thai) ಎಂದು ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿಕೊಂಡು Apply ಮಾಡಿ. ಈ ಆಯ್ಕೆಯನ್ನು ಸ್ಥಿರಗೊಳಿಸಲು OK ಒತ್ತಿ. ನಿಮಗೆ ಆಪರೇಟಿಂಗ್ ಸಿಸ್ಟಂನ ಸಿಡಿ ಬೇಕಾಗಬಹುದು.
  • ಗಣಕವನ್ನು ರೀಸ್ಟಾರ್ಟ್ ಮಾಡಿ ಕನ್ನಡ ಬ್ಲಾಗುಗಳನ್ನು ಓದಲು ಪ್ರಯತ್ನಿಸಿ.

ನಾನೂ ಕನ್ನಡದಲ್ಲಿ ಬರೆಯಬೇಕು. ಅದು ಹೇಗೆ?

ಕನ್ನಡದಲ್ಲಿ ಬರೆಯಲು ಸಹಾಯಕವಾಗುವ ಅನೇಕ ತಂತ್ರಾಂಶಗಳಿವೆ. ಅವುಗಳಲ್ಲಿ ಜನಪ್ರಿಯವಾಗಿರುವುದು ಬರಹ ತಂತ್ರಾಂಶ. ಇದನ್ನು http://www.baraha.com/baraha.htm ನಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಆಂಗ್ಲ ಅಕ್ಷರಗಳಲ್ಲಿ ಬರೆದು Ctrl+T ಒತ್ತಿದರೆ ತನ್ನಿಂತಾನೇ ಬರೆದಿರುವ ಲೇಖನ ಲಿಪ್ಯಂತರಗೊಳ್ಳುತ್ತದೆ. ಇದರಲ್ಲಿ ಕನ್ನಡವಲ್ಲದೆ ಇನ್ನೂ ಅನೇಕ ಭಾರತೀಯ ಭಾಷೆಗಳನ್ನು ಬರೆಯಬಹುದು.

ನಾನು ಕನ್ನಡದಲ್ಲಿ ಬರೆದು ಬ್ಲಾಗಿನಲ್ಲಿ ಹಾಕಿದ ಲೇಖನ ಬೇರೆ ಗಣಕಗಳಲ್ಲಿ ಸರಿಯಾಗಿ ಕಾಣುತ್ತಿಲ್ಲ. ಏಕೆ ಹೀಗೆ?

ಬರಹದಲ್ಲಿ ಅದರದ್ದೇ ಆದ ಫಾಂಟ್ ಉಪಯೋಗಿಸಲ್ಪಡುತ್ತದೆ. ಅದನ್ನು ನೇರವಾಗಿ ಅಂತರಜಾಲಕ್ಕೆ ಹಾಕಿದರೆ ಬರಹದ ಫಾಂಟ್ ಇರುವ ಗಣಕದಲ್ಲಿ ಮಾತ್ರ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಅಂತರಜಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯೂನಿಕೋಡ್ ಉಪಯೋಗಿಸಿ ಬರೆದರೆ ಎಲ್ಲ ಕಡೆ ಓದಲು ಸಾಧ್ಯವಾಗುತ್ತದೆ. ಬರಹದಲ್ಲಿ ಕಾಪಿ ಮಾಡುವಾಗ ರೈಟ್ ಕ್ಲಿಕ್ ಮಾಡಿ Copy Special... ಆಯ್ಕೆ ಮಾಡಿಕೊಂಡು ಅದರಲ್ಲಿ Text (UNICODE) ಆಯ್ಕೆ ಮಾಡಿಕೊಂಡು ನಂತರ ಬ್ಲಾಗಿನಲ್ಲಿ ಪೇಸ್ಟ್ ಮಾಡಿದರೆ ಎಲ್ಲ ಗಣಕಗಳಲ್ಲೂ ಓದಬಹುದು.

ನಾನು ಬಳಸುತ್ತಿರುವ ಕಛೇರಿಯ ಗಣಕದಲ್ಲಿ ಬರಹ ಇನ್ಸ್ಟಾಲ್ ಮಾಡಲು ನನಗೆ ಅನುಮತಿಯಿಲ್ಲ. ಏನು ಮಾಡಲಿ?

ಬಳಸಲು ಬರಹಕ್ಕಿಂತ ಸುಲಭವಾಗಿರುವ ಇನ್ನೊಂದು ವಿಧಾನವಿದೆ. ಅದು ಗೂಗಲ್ ಲಿಪ್ಯಂತರಣ ಸೇವೆ (Transliteration Service). ಅದು ಈ ಪುಟದಲ್ಲಿ ಲಭ್ಯ: http://www.google.com/transliterate/indic/Kannada. ಇದರಲ್ಲಿ ನಾವು ಸಾಧಾರಣವಾಗಿ ಬರೆಯುವಂತೆ ಬರೆದರೂ ಕೂಡ ಚಾಣಾಕ್ಷವಾಗಿ ಲಿಪ್ಯಂತರಗೊಳ್ಳುತ್ತದೆ. ಆದರೆ ಇದು ಅಂತರಜಾಲ ಸಂಪರ್ಕವಿದ್ದಾಗ ಮಾತ್ರ ಲಭ್ಯ. ಇದೂ ಕೂಡ ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಚಾಟ್ ಮಾಡುವಾಗ ಬರಹ/ಗೂಗಲ್ ನಲ್ಲಿ ಬರೆದು ಕಾಪಿ ಮಾಡಿ ಮತ್ತೆ ಚಾಟ್ ಮಾಡುವಲ್ಲಿಗೆ ಬಂದು ಪೇಸ್ಟ್ ಮಾಡುವಷ್ಟು ಸಹನೆ ನನಗಿಲ್ಲ. ಇದಕ್ಕೇನಾದರೂ ಸುಲಭ ಉಪಾಯವಿದೆಯೆ?

ನೀವು ಬರಹ ಉಪಯೋಗಿಸುತ್ತಿದ್ದಲ್ಲಿ ಉಪಕರಣ ಪಟ್ಟಿಕೆಯಲ್ಲಿರುವ (toolbar) ನೇರ ಬರಹ (Baraha direct) ಆಯ್ಕೆ ಮಾಡಿಕೊಂಡರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ನೇರವಾಗಿ ಬರೆಯಬಹುದು. ಬರೆಯುವ ನಡುವೆ ಇಂಗ್ಲಿಷ್ ಬಳಸಬೇಕಾದಲ್ಲಿ F11 ಅಥವಾ F12 ಉಪಯೋಗಿಸಬಹುದು. ನೇರ ಬರಹವನ್ನು ಸ್ಟಾರ್ಟ್ ಮೆನುವಿನಲ್ಲಿ All Programs -> Baraha 7.0 -> Baraha Direct ನಿಂದ ಕೂಡ ತೆರೆದುಕೊಳ್ಳಬಹುದು.

ಬರಹವಿಲ್ಲದಿದ್ದಾಗ ಹೇಗೆ ಕನ್ನಡದಲ್ಲಿ ಸುಲಭವಾಗಿ ಚಾಟ್ ಮಾಡಬಹುದು?

ನೀವು ಬೆಂಕಿನರಿ (ಫೈರ್ಫಾಕ್ಸ್) ಉಪಯೋಗಿಸುತ್ತಿದ್ದಲ್ಲಿ ಈ ವಿಸ್ತರಣೆ (extension) ಹಾಕಿಕೊಳ್ಳಬಹುದು:
https://addons.mozilla.org/en-US/firefox/addon/8960
ಇದನ್ನು ಹಾಕಿಕೊಂಡ ನಂತರ ಯಾವುದೇ ಪುಟದಲ್ಲಿ ಬೇಕಾದರೂ ಗೂಗಲ್ ಲಿಪ್ಯಂತರಣ ಸೇವೆ ಬಳಸಿಕೊಳ್ಳಬಹುದು.

*****


ಈ ಪ್ರಶ್ನೋತ್ತರ ಸರಣಿ ಉಪಯುಕ್ತವೇ? ಇದಕ್ಕೆ ಸೇರಿಸಬಹುದಾದ ಪ್ರಶ್ನೆಗಳಿದ್ದರೆ ತಿಳಿಸಿ.

ಬುಧವಾರ, ಡಿಸೆಂಬರ್ 10, 2008

ನೀನಾರಿಗಾದೆಯೋ ಎಲೆ ಮಾನವಾ? ಹರಿ ಹರಿ ಗೋವು ನಾನು

ಗೋರಕ್ಷಣೆಯ ಬಗ್ಗೆ ಅನೇಕ ಕಡೆ, ಅನೇಕ ರೀತಿಯಲ್ಲಿ ಚರ್ಚೆಗಳಾಗುತ್ತಿವೆ. ಅದೇನೇ ಇರಲಿ, ಇದರ ಬಗ್ಗೆ ಈಚೆಗೆ ಧರ್ಮಭಾರತಿಗಾಗಿ ಯಜ್ಞೇಶ್ ಬರೆದಿರುವ ಲೇಖನ ಓದಿದಾಗ "ನೀನ್ಯಾರಿಗಾದೆಯೋ ಎಲೆ ಮಾನವ" ಎಂಬ ನುಡಿಗಟ್ಟಿನ ಪೂರ್ಣಪಾಠ ಹಾಕಬೇಕೆನಿಸಿತು. ಹಾಕಿದ್ದೇನೆ:

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||


ನಗರಗಳಲ್ಲಿ ಗುಬ್ಬಿ ಗಿಳಿಗಳು ಕಣ್ಮರೆಯಾಗಿವೆ. ಇತ್ತೀಚಿಗೆ ನಾನು ಎಲ್ಲೋ ಓದಿದಂತೆ ಮಿಂಚು ಹುಳು, ಕೆಲವು ಬಗೆಯ ಏಡಿಗಳು ಕೂಡ ವಿನಾಶದಂಚಿನಲ್ಲಿದೆ. ಗೋವು ಒಂದೇ ಅಲ್ಲ, ಎಲ್ಲ ಪ್ರಾಣಿ ಪಕ್ಷಿಗಳನ್ನೂ ಕಾಪಾಡುವ ಜವಾಬ್ದಾರಿ ಈಗ ಮನುಷ್ಯನ ಮೇಲಿದೆ.

ಎಮ್ಮೆ ತಮ್ಮಣ್ಣ ಚಿತ್ರದಲ್ಲಿರುವ ಹಾಡಿನ ವೀಡಿಯೊ ಕೂಡ ಇದೆ..

(ಕೊಂಡಿ ನೀಡಿದ ಅಂತರ್ವಾಣಿಯ ಜಯಶಂಕರ್ ಅವರಿಗೆ ಧನ್ಯವಾದಗಳು)

ಕೊಸರು (ಸಂಪದದಲ್ಲಿ ಗಿರೀಶ್ ಬರೆದಿದ್ದು): ನೀನಾರಿಗಾದೆಯೋ ಎಲೆ ಮಾನವಾ!!

ಸೋಮವಾರ, ಡಿಸೆಂಬರ್ 1, 2008

ವೋಟಿಗಾಗಿ! ಒಂದು ಸೀಟಿಗಾಗಿ!!

ಒಂದು ಕಡೆ ಭಯೋತ್ಪಾದಕರಿಂದ ದಾಳಿಯಾದರೆ ಸಾಕು... ಆಯಕಟ್ಟಿನ ಜಾಗಗಳಲ್ಲಿ ತಾತ್ಕಾಲಿಕವಾಗಿ ಭದ್ರತೆ ಹೆಚ್ಚುತ್ತದೆ; ಪತ್ರಕರ್ತರು ಯುದ್ಧಪಿಪಾಸುಗಳಂತೆ ವರ್ತಿಸುತ್ತಾ ಕ್ಷಣ-ಕ್ಷಣದ ಸುದ್ದಿಯನ್ನು ರೋಚಕವಾಗಿ ನೀಡುತ್ತಾರೆ; ನಾ ಮುಂದು ತಾ ಮುಂದು ಎಂದು ಎಲ್ಲ ನ್ಯೂಸ್ ಚಾನೆಲ್ಲುಗಳಲ್ಲೂ ಅದರ ಅತಿರಂಜಿತ ವರದಿ ಆರಂಭವಾಗುತ್ತದೆ; ನಡೆಯುತ್ತಿರುವುದರ ಬಗ್ಗೆ ತಲೆ-ಬುಡ ಗೊತ್ತಿಲ್ಲದವರಿಂದ ಅವುಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ; ರಾಜಕಾರಣಿಗಳೆಲ್ಲ ಘಟನೆಯನ್ನು ಖಂಡನಾರ್ಹ, ಪೈಶಾಚಿಕ ಕೃತ್ಯ ಎಂದೆಲ್ಲ ಹೇಳಿಕೆ ಕೊಟ್ಟು ಮೊಸಳೆ ಕಣ್ಣೀರು ಸುರಿಸುತ್ತಾರೆ; ತಕ್ಷಣದ ಪರಿಹಾರವಾಗಿ ಕೆಲ ಅಧಿಕಾರಿಗಳ, ಸಚಿವರ ತಲೆದಂಡ ಪಡೆಯಲಾಗುತ್ತದೆ. ಮಾಡಲು ಕೆಲಸವಿಲ್ಲದೆ ಸುಮ್ಮನೆ ಕುಳಿತವರನ್ನು ಸೇರಿಸಿ ತನಿಖೆಗೆಂದು ಒಂದು ಆಯೋಗ ರಚಿಸಲಾಗುತ್ತದೆ; ಬ್ಲಾಗಿಗರೆಲ್ಲ ಘಟನೆಯನ್ನು ವಿವಿಧ ಕೋನಗಳಿಂದ ವಿಮರ್ಶಿಸಿ ತಮ್ಮ ವೈಚಾರಿಕತೆ ಮೆರೆಯುತ್ತಾರೆ; ಅಂಕಣಕಾರರು ಎಷ್ಟೋ ವರ್ಷ ಹಿಂದಿನ ಘಟನೆಗಳನ್ನೆಲ್ಲ ಹೆಕ್ಕಿ ತೆಗೆದು ಆಗ ಹಾಗಾಗಿತ್ತು, ಈಗ ಹೀಗಾಗಿದೆ ಎಂದು ತಮ್ಮ ಇತಿಹಾಸ ಪಾಂಡಿತ್ಯ ಪ್ರದರ್ಶಿಸುತ್ತಾರೆ. ನನ್ನಂಥ ಕೆಲವರು ಹೊಲಸು ರಾಜಕಾರಣದಿಂದಲೇ ಇದೆಲ್ಲ ಆಗುತ್ತಿರುವುದು ಎಂದು ಹಲುಬುತ್ತಾರೆ; ಇನ್ನು ಕೆಲವು ಬಾಯಿಬಡುಕ ಬುದ್ಧಿಜೀವಿಗಳು ಪರಿಸ್ಥಿತಿಯ ಗಂಭೀರತೆ ಅರಿತು ಸುಮ್ಮನಾಗಿಬಿಡುತ್ತಾರೆ; ಎಲ್ಲರಲ್ಲೂ ದೇಶದ ಬಗ್ಗೆ ಎಂದೂ ಮೂಡದ ಅಭಿಮಾನ, ಕಾಳಜಿ ಒಟ್ಟಿಗೆ ಮೂಡಿ ಬರುತ್ತದೆ... ಅಷ್ಟೇ. ಘಟನೆ ಮರುಕಳಿಸದಂತೆ ಮಾಡಲು ಯಾರೂ ಮುಂದಾಗುವುದಿಲ್ಲ. ಸ್ವಲ್ಪ ದಿನ ಆದ ಮೇಲೆ ಹತ್ತರಲ್ಲಿ ಹನ್ನೊಂದರಂತೆ ಆ ಘಟನೆಯೂ ಕರಾಳ ಅಧ್ಯಾಯ ಎಂದು ಚರಿತ್ರೆಯಲ್ಲಿ ದಾಖಲಾಗಿಬಿಡುತ್ತದೆ.

"ಎ ವೆನ್ಸ್‍ಡೇ" ನಿಜವಾಗಿಯೂ ಆಗಬೇಕೆಂಬುದು ಎಲ್ಲರ ತಲೆಯಲ್ಲೂ ಬರುತ್ತದೆ. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು? ಬುಧವಾರ ಬರುತ್ತದೆ, ಹೋಗುತ್ತದೆ. ಮತ್ತೆ ಮತ್ತೆ ದಾಳಿಗಳು ನಡೆಯುತ್ತವೆ. ಶಾಂತಿಪ್ರಿಯ ಭಾರತದಲ್ಲಿ ಶಾಂತಿಪ್ರಿಯರದೇ ಮಾರಣಹೋಮವಾಗುತ್ತದೆ. ಅಶಾಂತಿ ಸೃಷ್ಟಿಸುವವರ ಅಟ್ಟಹಾಸ ಅಹಿಂಸೆಯ ಕೂಗಿನ ಸದ್ದಡಗಿಸುತ್ತದೆ. ಅಷ್ಟಕ್ಕೂ ಈ ದೇಶದಲ್ಲಿ ಯಾರಿಗೆ ಶಿಕ್ಷೆಯಾಗುತ್ತದೆ? ನಿಜವಾದ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಿದರೂ ಅದು ಕಾರ್ಯರೂಪಕ್ಕೆ ಬರಲು ವರ್ಷಗಟ್ಟಲೆ ಹಿಡಿಯುತ್ತದೆ. ಬದುಕಿರುವವರೆಗೆ ಜೈಲಿನಲ್ಲಿ ಬಿಟ್ಟಿ ಊಟ ಬೇರೆ. ಭಯೋತ್ಪಾದಕರಾದರೆ ಒಪ್ಪೊತ್ತಿಗೆ ಕೂಳಿಲ್ಲದವರಿಗೆಲ್ಲ ಆಜೀವಪರ್ಯಂತ ಊಟ ಸಿಗುತ್ತದೆ ಎಂದಾದರೆ ಯಾರು ಬೇಡ ಎನ್ನುತ್ತಾರೆ? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಹಿಂದೆ ದಂಡಪಿಂಡಗಳು ಧಾರಾವಾಹಿಯಲ್ಲಿ ಬರುತ್ತಿದ್ದ ಸಾಲುಗಳು:
ರಿಸರ್ವೇಷನ್ನು ಇವರ ಜಾತಿಗೆ ಇಲ್ಲ
ಲಂಚ ಕೊಡುವುದಕ್ಕೆ ದುಡ್ಡೇ ಇಲ್ಲ
ಇನ್ಫ್ಲುಯೆನ್ಸ್ ಮಾಡಲು ಯಾವ ಮಿನಿಸ್ತ್ಟ್ರೂ ಗೊತ್ತಿಲ್ಲಾ...

ಯಾರಿಗೆ ಇವಿಲ್ಲವೋ ಅವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ರಿಸರ್ವೇಷನ್ ಇದ್ದವರಿಗೆ ಕಾರ್ಯಾಂಗ ಸಹಕರಿಸುತ್ತದೆ. ಲಂಚ ಕೊಟ್ಟವರಿಗೆ ನ್ಯಾಯಾಂಗ ಸಹಕರಿಸುತ್ತದೆ. ಇನ್ಫ್ಲುಯೆನ್ಸ್ ಮಾಡುವವರಿಗೆ ಇಡೀ ಶಾಸಕಾಂಗವೇ ಸಹಕರಿಸುತ್ತದೆ. ಈ ಕೆಟ್ಟ ವ್ಯವಸ್ಥೆಯ ನಡುವೆ ಬಡವಾಗುವವನು? ಜನಸಾಮಾನ್ಯ... ಸ್ಟುಪಿಡ್ ಕಾಮನ್ ಮ್ಯಾನ್..

ಇವೆಲ್ಲದರ ಮಧ್ಯೆ (ಅಪ್ಪಿ ತಪ್ಪಿ ಸಿಕ್ಕಿ ಬಿದ್ದ) ಭಯೋತ್ಪಾದಕರ ಬಗ್ಗೆ ವಿಚಾರಣೆ ನಡೆಯುವ ಹೊತ್ತಿಗೆ ಸರಿಯಾಗಿ ಇಷ್ಟು ಹೊತ್ತು ಬೆಚ್ಚಗೆ ಮನೆಯಲ್ಲಿ ಕೂತು ಟಿವಿಯಲ್ಲಿ ವರದಿ ನೋಡುತ್ತಿದ್ದ ಗುಂಪೊಂದು ಹೊರಬಂದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ರಾಗ ತೆಗೆಯುತ್ತದೆ. "ಮಾನವ ಹಕ್ಕು"ಗಳ ಬಗ್ಗೆ ಇಷ್ಟೊಂದು ಪುಕಾರೆತ್ತುವ ಜನ "ಮಾನವ ಕರ್ತವ್ಯ"ಗಳ ಬಗ್ಗೆ ಯಾಕೆ ಚಕಾರವೆತ್ತುವುದಿಲ್ಲ? ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಇವರು ಓದಿಲ್ಲವೇ?

ಈ ಜನಸಾಮಾನ್ಯನ ಸ್ಟುಪಿಡಿಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ಅಮೆರಿಕಾದಲ್ಲಿ ೯/೧೧ ರ ನಂತರ ಯಾವ ಅಹಿತಕರ ಘಟನೆಯೂ ನಡೆದಿಲ್ಲ ಎಂದು ಅಲ್ಲಿನ ವ್ಯವಸ್ಥೆಯನ್ನು ಕೊಂಡಾಡುತ್ತಾನೆ. ಅದೇ ವ್ಯವಸ್ಥೆಯನ್ನು ಭಾರತದಲ್ಲಿ ಅಳವಡಿಸಲು ಹೋದರೆ ಅದನ್ನು ವಿರೋಧಿಸುತ್ತಾನೆ. ಸಿಂಗಾಪುರದಲ್ಲಿನ ಸ್ವಚ್ಛತೆಯನ್ನು ಕೊಂಡಾಡುವ ತಾನೇ ಎಲ್ಲೆಂದರಲ್ಲಿ ಉಗುಳುವುದು, ಕಸ ಹಾಕುವುದು ಮಾಡುತ್ತಾನೆ. ಜಪಾನಿನಲ್ಲಿ ಅಪಘಾತಗಳೇ ಆಗುವುದಿಲ್ಲ ಎಂದು ಹೇಳುವ ತಾನು ೨ ನಿಮಿಷ ಸಿಗ್ನಲ್ಲಿನಲ್ಲಿ ನಿಲ್ಲಲೂ ಪರದಾಡುತ್ತಾನೆ, ಫುಟ್ಪಾಥಿನ ಮೇಲೆ ಹೋಗುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ತಿಂಗಳು ಕಳೆದರೂ ಕಂಡ ಕಂಡಲ್ಲಿ ಹೊಗೆ ಬಿಡುತ್ತಾನೆ. ಮಾಡಬಾರದೆಂದು ಯಾವುದನ್ನು ಹೇಳಲಾಗಿದೆಯೋ ಅದನ್ನು ಹಠಕ್ಕೆ ಬಿದ್ದು ಮಾಡುತ್ತಾನೆ.

ರಾಮರಾಜ್ಯ ಎಂದು ಕನಸು ಕಾಣುವ ಎಲ್ಲರೂ ಅದೇ ರಾಮನಿಗಾಗಿ ಅಯೋಧ್ಯೆಯ ದೇಗುಲದಿಂದ ಕನ್ಯಾಕುಮಾರಿಯ ಸೇತುವೆಯವರೆಗೆ ಹೋರಾಡುತ್ತಾರೆ. ಭಾರತದ ನೆಲ ಜಲ ಉಪಯೋಗಿಸುವ ಮಂದಿಯೇ ಭಾರತವನ್ನು ವಿರೋಧಿಸಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಭಾರತದ ಹೆಸರಿಗೆ ಕಳಂಕ ತರುವ ಕೆಲಸಗಳು ದೇಶದೆಲ್ಲೆಡೆ ನಡೆಯುತ್ತಿದ್ದರೆ ಅವುಗಳ ಪರಿವೆಯಿಲ್ಲದ ಜನ ಶಾಸ್ತ್ರೀಯ ಕನ್ನಡ ಎನ್ನಬೇಕೋ ಬೇರೆ ಹೆಸರಿಡಬೇಕೋ ಎಂಬ ಮಹತ್ವದ ಚರ್ಚೆ ನಡೆಸುತ್ತಾರೆ. ವಿರೋಧ ಪಕ್ಷಗಳು ಸಂವಿಧಾನದಲ್ಲಿನ ವಾಚ್ ಡಾಗ್ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ನಾಯಿಯಂತೆ ಬೊಗಳುತ್ತವೆ.

ಒಟ್ಟಿನಲ್ಲಿ, (ಎಸ್.ಪಿ.ಭಾರ್ಗವಿ ಚಿತ್ರದ್ದಿರಬೇಕು) ಈ ದೇಶದ್ ಕಥೆ ಇಷ್ಟೇ ಕಣಮ್ಮೋ... ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ... ಸೋ.. ಇರೋ ಒಂದೈವತ್ತರವತ್ತೆಪ್ಪತ್ತೆಂಭತ್ತು ವರ್ಷ ... ಮಸ್ತ್ ಮಜಾ ಮಾಡಿ!

(ದಾಸರ ಕ್ಷಮೆ ಕೋರಿ...)

ಎಲ್ಲಾರು ಮಾಡುವುದು ವೋಟಿಗಾಗಿ
ಒಂದು ಸೀಟಿಗಾಗಿ, ಬಿ.ಡಿ.ಎ. ಸೈಟಿಗಾಗಿ ||

ಇಂದು ಭರವಸೆ ಕೊಟ್ಟು
ಬಂದು ನಾಳೆ ಅದಕ್ಕಾಗಿ
ಒಂದು ಪ್ಯಾಕೇಜ್ ಘೋಷಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಇನ್ನೈದು ವರ್ಷ ಬರಲಾರೆ
ನೆನ್ನುತ ಗಂಡಿಗೆ ಮದ್ಯ
ಹೆಣ್ಣಿಗ್ ಸೀರೆ ಹಂಚುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಸಾಲದ ಬಡ್ಡಿ ಬಾರದೆಂದು ಪ್ರತಿ
ಸಲ ನೋಡಿದ್ದರೂ ಮನ್ನಾ ಮಾಡಿ
ಸಾಲವನ್ನೇ ಬದುಕಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಶಾಂತಿಯಿಂದ ಇದ್ದ ಜನಕೆ
ಇಂತಿ ನಿಮ್ಮ ಮೀಸಲಾತಿ
ಅಂತ ಎತ್ತಿ ಕಟ್ಟುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಜಾತಿ ನೋಡಿದ ನಂತರವೇ
ಮತ ಹಾಕುವಂತೆ ಜನರ
ಮತಿಗೇಡಿಗಳಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಅಭ್ಯರ್ಥಿಯ ಹಿನ್ನೆಲೆ ಮರೆಸಿ
ಸಭ್ಯತೆಯ ತೋರಗೊಟ್ಟು
ಅಭ್ಯುದಯ ಮಾಡುವೆವೆನ್ನುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಭಯೋತ್ಪಾದಕನಾಗಿದ್ದರೂ
ಆಯೋಗ ರಚನೆ ಮಾಡಿ ಶಿಕ್ಷಾ
ಪ್ರಯೋಗ ಮುಂದೂಡುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ದೇಶದ್ಮಾನ ಹರಾಜಿಟ್ಟು ಸ್ವಂತ
ಕೋಶ ತುಂಬಿಸ್ಕೊಳ್ಳೊ
ಆಷಾಢಭೂತಿಗಳ ಕಿತ್ತೆಸೆಯಿರಿ
ದೇಶಕ್ಕಾಗಿ ನಿಮ್ಮುದ್ಧಾರಕ್ಕಾಗಿ ||

ಭಾನುವಾರ, ನವೆಂಬರ್ 16, 2008

ಕಥೆ ಕಥೆ ಕಾರಣ, ಬೆಕ್ಕಿನ ತೋರಣ - ನಂಗೂ ಗೊತ್ತು!

ಕಥೆ ಕಥೆ ಕಾರಣ ಎಂಬ ಶರ್ಮರ ಪೋಸ್ಟ್ ನೋಡಿದಾಗ ಬಾಲ್ಯದಲ್ಲಿ ಹೇಳುತ್ತಿದ್ದ ಪದ್ಯವೊಂದು ನೆನೆಪಾಯಿತು. ಇನ್ನೂ ಸ್ವಲ್ಪ ದಿನ ಕಳೆದರೆ ಮರೆತು ಹೋಗಬಹುದು. ಹಾಗಾಗಿ ಈಗಲೇ ಹಾಕುತ್ತಿದ್ದೇನೆ...

ಕಥೆ ಕಥೆ ಕಾರಣ
ಬೆಕ್ಕಿನ ತೋರಣ
ಸಿದ್ಧೆಲ್ಲಿಪ್ಪಣ
ಸೀತಾ ದೇವಿಗೆ
ಹಿಟ್ ಕುಟ್ಟಲ್ ಕಪ್ಪೆ ಬಂತು
ಕಪ್ಪೆ ತಿನ್ನಲ್ ಹಾವ್ ಬಂತು
ಹಾವ್ ಹೊಡ್ಯಲ್ ದೊಣ್ಣೆ ಬಂತು
ದೊಣ್ಣೆ ಸುಡಲ್ ಬೆಂಕಿ ಬಂತು
ಬೆಂಕಿ ನಂದ್ಸಲ್ ನೀರ್ ಬಂತು
ನೀರ್ ಕುಡ್ಯಲ್ ಬಸವ ಬಂದ
ಬಸವನ್ ಕಟ್ಹಾಕಲ್ ದಾಬ್ ಬಂತು
ದಾಬ್ ಹರ್ಯಲ್ ಇಲಿ ಬಂತು
ಇಲಿ ಹೊಡ್ಯಲ್ ಅಜ್ಜ ಬಂದ
ಅಜ್ಜನ್ ಹೊಡ್ಯಲ್(ಕರ್ಯಲ್) ಅಜ್ಜಿ ಬಂತು
** *** ಮೂರು ಕಟ್ಟೆರ
ಕಟ್ಟಂ ಕಟ್ಟಂ ಕಟ್ಟಂ!!!


ಇದರಲ್ಲೇನಾದರೂ ತಪ್ಪಿದ್ದರೆ ಗೊತ್ತಿದ್ದವರು ತಿಳಿಸಿ.

ಬುಧವಾರ, ನವೆಂಬರ್ 5, 2008

ಮಹಾಭಾರತ ನಿರ್ಮಾಪಕ ಬಿ.ಆರ್.ಚೋಪ್ರಾ ಇನ್ನಿಲ್ಲ

ಎಂಭತ್ತರ ದಶಕದ ಕೊನೆ ಹಾಗೂ ತೊಂಭತ್ತರ ದಶಕದ ಆದಿಯಲ್ಲಿ ಪ್ರತಿ ಭಾನುವಾರ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ ಯಾರಿಗೆ ತಿಳಿದಿಲ್ಲ ಹೇಳಿ? ಭಾರತೀಯ ದೂರದರ್ಶನ ಇತಿಹಾಸದ ಅತ್ಯಂತ ಯಶಸ್ವಿ ಧಾರಾವಾಹಿಯಾಗಿದ್ದ ಮಹಾಭಾರತದ ನಿರ್ಮಾಪಕ ಬಿ. ಆರ್. ಚೋಪ್ರಾ ಇಂದು ಮುಂಬಯಿಯಲ್ಲಿ ನಿಧನರಾದರು.

ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ಹಿಂದಿ ಚಿತ್ರರಂಗ ಕಂಡ ಉತ್ತಮ ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ಬಲದೇವ್ ರಾಜ್ ಚೋಪ್ರಾ (ಬಿ. ಆರ್. ಚೋಪ್ರಾ) ೧೯೫೫ ರಲ್ಲಿ ತಮ್ಮದೇ ಆದ ಬಿ.ಆರ್.ಫಿಲ್ಮ್ಸ್ ಪ್ರಾರಂಭಿಸಿದ್ದರು.

ಕಾಕತಾಳೀಯವೆಂಬಂತೆ ಅವರು ನಿರ್ಮಿಸಿದ ಮಹಾಭಾರತ ಕೂಡ ೯೪ ಕಂತುಗಳನ್ನು ಹೊಂದಿದ್ದು, ಅದನ್ನು ಉಚಿತವಾಗಿ ನೋಡಲು ಅಥವಾ ಕೊಳ್ಳಲು ಇಲ್ಲಿಗೆ ಹೋಗಬಹುದು:
http://www.rajshri.com/mahabharat/index.asp

ಶುಕ್ರವಾರ, ಅಕ್ಟೋಬರ್ 17, 2008

ಮನಸ್ಸಿದ್ದರೆ ಮಾರ್ಗ

ವಿಶ್ವವೇ ಕಾತರದಿಂದ ಆತನತ್ತ ನೋಡುತ್ತಿದೆ. ಆತನ ಒಂದು, ಒಂದೇ ಒಂದು, ಕಾರ್ಯ ಆತನನ್ನು ಅದ್ಭುತ ಹೀರೋ ಆಗಿಸಬಲ್ಲುದು. ಕೊಂಚ ಎಚ್ಚರ ತಪ್ಪಿದರೂ ಸಾಕು, ಸ್ವಲ್ಪ ಗುರಿ ತಪ್ಪಿದರೂ ಸಾಕು, ಆತನ ವೈಫಲ್ಯ ಪೂರ್ತಿ ದೇಶದ ಮಾನ ತೆಗೆಯಬಲ್ಲುದು. ಜಗತ್ತಿಗೆ ಆತ ಒಬ್ಬ ಫ್ಲಾಪ್ ವ್ಯಕ್ತಿ ಎಂದೆನಿಸಿಬಿಡುತ್ತಾನೆ. ಅಷ್ಟೇ ಅಲ್ಲ, ಇಡೀ ಕೂಟಕ್ಕೇ ಕಪ್ಪು ಚುಕ್ಕಿಯಾಗಿ ಉಳಿದುಬಿಡುತ್ತದೆ... ಆತನಿಗೂ ಅದರ ಅರಿವಿದೆ. ಆತ ಹಿಂಜರಿಯಲಿಲ್ಲ, ಕಂಗೆಡಲಿಲ್ಲ. "ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದನ್ನು ಅರಿತು, ಯಾವುದೇ ರೀತಿಯ ದುಗುಡಕ್ಕೆ ಒಳಗಾಗದೇ ತನ್ನ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿದ. ಆತ ಗುರಿ ತಪ್ಪಲಿಲ್ಲ. ನೆರೆದಿದ್ದ ಸಾವಿರಾರು ಜನರ ನಿರೀಕ್ಷೆಯನ್ನು, ತನ್ನ ನಾಡಿನವರು ತನ್ನ ಮೇಲಿಟ್ಟ ಭರವಸೆಯನ್ನು, ಆತ ಹುಸಿ ಮಾಡಲಿಲ್ಲ. ಇಡೀ ಜಗತ್ತೇ ಆತನ ಸಾಧನೆಯನ್ನು ಕೊಂಡಾಡಿತು. ಆ ಕಾರ್ಯಕ್ರಮ "ನ ಭೂತೋ ನ ಭವಿಷ್ಯತಿ" ಎಂದೆನಿಸಿ ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು.

ನಾನು ಹೇಳುತ್ತಿರುವುದು ಯಾವುದರ ಬಗ್ಗೆ ಎಂದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಅದು ೧೯೯೨ರ ಜುಲೈ ೨೫ರಂದು ಬಾರ್ಸಿಲೋನಾದಲ್ಲಿ ನಡೆದ ಓಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ. ಆಂಟೋನಿಯೋ ರೆಬೋಲ್ಲೋ ಎಂಬ ಪ್ಯಾರಾಲಿಂಪಿಕ್ ಬಿಲ್ಲುಗಾರ ತನಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಆ ದಿನವನ್ನು ಅವಿಸ್ಮರಣೀಯವಾಗಿಸಿದ್ದ.

ಸ್ಪೇನ್ ಹೇಳಿ ಕೇಳಿ ಶೂರರ ನಾಡು. ಗೂಳಿಕಾಳಗ ಅಲ್ಲಿನ ರಾಷ್ಟ್ರೀಯ ಕ್ರೀಡೆ. ಅಂಥ ದೇಶದಲ್ಲಿ ಓಲಿಂಪಿಕ್ ಕ್ರೀಡೆ ಆಯೋಜಿಸಿದರೆ ಏನಾದರೂ ಥ್ರಿಲ್ ಇರುವುದು ಬೇಡವೇ? ಹಾಗಾಗಿ ಬಾಣದಿಂದ ಜ್ಯೋತಿ ಬೆಳಗಿಸುವ ಅಭೂತಪೂರ್ವ ಉಪಾಯಕ್ಕೆ ಸಮಾರಂಭದ ಹೊಣೆ ಹೊತ್ತಿದ್ದ ಸಮಿತಿ ಮಣೆ ಹಾಕಿತು. ಅಕಸ್ಮಾತ್ ಆ ಬಾಣವೇನಾದರೂ ಗುರಿ ತಪ್ಪಿದ್ದರೆ ಸ್ಪೇನಿಗೆ ಪ್ರಪಂಚದೆದುರು ಆಗುತ್ತಿದ್ದ ಅವಮಾನ ಅಷ್ಟಿಷ್ಟಲ್ಲ. ಇದನ್ನು ಸಮಿತಿ ಗಮನಿಸಲಿಲ್ಲವೆಂದೇನಲ್ಲ, ಕಷ್ಟಸಾಧ್ಯವಾದುದನ್ನು ಸಾಧಿಸುವ ಆತ್ಮವಿಶ್ವಾಸ ಅವರಲ್ಲಿತ್ತು, ಅಷ್ಟೆ.

೨೦೦ ಜನ ಬಿಲ್ಗಾರರನ್ನು ಇದಕ್ಕಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಬೇರೆ ಬೇರೆ ಹವಾಮಾನಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ತರಬೇತಿ ನೀಡಿ ಅಭ್ಯಾಸ ಮಾಡಿಸಲಾಯಿತು. ಗಾಳಿ ಹೆಚ್ಚಾಗಿರುವ ಸೂರ್ಯೋದಯದ ವೇಳೆಯಲ್ಲಿ ಸಹ ಅಭ್ಯಾಸ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಕೃತಕವಾಗಿ ವಿವಿಧ ಹವಾಮಾನ ಪರಿಸ್ಥಿತಿ, ಗಾಳಿಯ ಚಲನೆ ಮುಂತಾದವನ್ನು ಸೃಷ್ಟಿಸಲು ಯಂತ್ರಗಳನ್ನು ಬಳಸಲಾಯಿತು. ಅಭ್ಯಾಸದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಬೆರಳುಗಳನ್ನು ಸುಡುತ್ತಿದ್ದ ಬಾಣಗಳನ್ನು ಕೊಟ್ಟು ಸಹ ತರಬೇತಿ ನೀಡಲಾಯಿತು. ಎಷ್ಟೇ ಆದರೂ ಜಗತ್ತಿನೆದುರು ತಲೆ ಎತ್ತಿ ನಿಲ್ಲುವ ಅಥವಾ ಬಗ್ಗಿಸಿ ನಿಲ್ಲುವ ಪ್ರಶ್ನೆಯಲ್ಲವೇ?

ಸಮಾರಂಭಕ್ಕಿಂತ ಸ್ವಲ್ಪ ಮುಂಚೆ ೪ ಜನರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಆದರೆ ಜ್ಯೋತಿ ಬೆಳಗುವ ಗೌರವ ಯಾರಿಗೆ ದಕ್ಕುತ್ತದೆ ಎಂಬುದನ್ನು ಗೌಪ್ಯವಾಗಿಡಲಾಗಿತ್ತು. ಜ್ಯೋತಿ ಬೆಳಗಿಸಲು ಕೇವಲ ೨ ಘಂಟೆ ಇರುವಾಗ ಆಂಟೋನಿಯೋ ಆಯ್ಕೆ ಆಗಿರುವ ವಿಷಯವನ್ನು ಅವರಿಗೆ ತಿಳಿಸಲಾಯಿತು.



ಮುಂದೆ ನಡೆದದ್ದು ನಮ್ಮ ಕಣ್ಣೆದುರಿಗೆ ಇದೆ. ಯಾವುದೇ ಕ್ರೀಡಾ ಸಮಾರಂಭವನ್ನು ತೆಗೆದುಕೊಂಡರೂ ಇಂಥದ್ದೊಂದನ್ನು ಮೀರಿಸಲು ಸಾಧ್ಯವಿಲ್ಲ ಎಂಬಂಥ ಘಟನೆ ನಡೆಯಿತು. ಪ್ರತೀಕ್ಷೆಯ ಉತ್ತುಂಗದಲ್ಲಿ ತುದಿಗಾಲಲ್ಲಿ ಕುಳಿತಿದ್ದ ಕ್ರೀಡಾಂಗಣದ ಪ್ರೇಕ್ಷಕರನ್ನು ಆವರಿಸಿದ್ದ ನೀರವತೆ ದೀಪ ಉರಿಯಲಾರಂಭಿಸಿದ ಕ್ಷಣಮಾತ್ರದಲ್ಲಿ ಹಷೋದ್ಗಾರವಾಗಿ ಮಾರ್ಪಟ್ಟಿತು.

ಇಷ್ಟೇ ಆಗಿದ್ದರೆ ಬರೆಯುವಂಥದ್ದು ಏನೂ ಇರುತ್ತಿರಲಿಲ್ಲವೇನೋ.. ಆದರೆ...

ಕೇವಲ ಎಂಟು ತಿಂಗಳಿದ್ದಾಗ ಆಂಟೋನಿಯೋಗೆ ಪೋಲಿಯೋ ಆಗಿತ್ತು. ಎರಡೂ ಕಾಲುಗಳಲ್ಲಿನ ಬಲ ಕುಂದಿತ್ತು. ಬಲಗಾಲು ಬಹುಪಾಲು ಸ್ವಾಧೀನ ಕಳೆದುಕೊಂಡಿತ್ತು. "ನನಗೆ ಸವಾಲೆನಿಸುವ ಕೆಲಸ ಮಾಡಬಯಸುತ್ತೇನೆ" ಎಂದು ಹೇಳುತ್ತಿದ್ದ ಅವನ ಕಾಲಿನಲ್ಲಿ ಬಲವಿಲ್ಲದಿದ್ದರೇನಾಯಿತು, ಕೈ ಮತ್ತು ನಿಖರ ಗುರಿ ಬೇಕಾದ ಬಿಲ್ವಿದ್ಯೆ ಒಲಿದಿತ್ತು.

antonio-rebollo
ಆಂಟೋನಿಯೋ ರೆಬೋಲ್ಲೋ

ಮುಂದೆ ಆಂಟೋನಿಯೋ ಅಂಗವಿಕಲರ ಕ್ರೀಡಾಕೂಟವಾದ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದ. ವಿಪರ್ಯಾಸವೆಂದರೆ ಎರಡು ಬಾರಿ (೧೯೮೪ ನ್ಯೂಯಾರ್ಕ್, ೧೯೯೨ ಬಾರ್ಸಿಲೋನಾ) ಬೆಳ್ಳಿ ಹಾಗೂ ಒಂದು ಬಾರಿ (೧೯೮೮, ಸಿಯೋಲ್) ಕಂಚು ಗೆದ್ದ ಆತ ಒಂದು ಬಾರಿಯೂ ಚಿನ್ನ ಗೆಲ್ಲಲಿಲ್ಲ. ಆದರೆ ಆತ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಿದ್ದ. ಆಂಟೋನಿಯೋ ರೆಬೋಲ್ಲೋ ಹೆಸರನ್ನು ಜನ ಮರೆಯಬಹುದು. ಆದರೆ ಆತ ಬೆಳಗಿಸಿದ ಜ್ಯೋತಿ ಮಾತ್ರ ನೋಡಿದವರ ಮನದಂಗಳದಲ್ಲಿ ಅಚ್ಚಳಿಯದೆ ಇರುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?

ಮಂಗಳವಾರ, ಅಕ್ಟೋಬರ್ 7, 2008

ವಿಹಂಗಮ ನೋಟ

ಗಾಳಿ ಜೋರಾಗುತ್ತಿದೆ... ಕ್ಷಣ-ಕ್ಷಣಕ್ಕೂ ಎತ್ತರೆತ್ತರಕ್ಕೇರುತ್ತಿದ್ದೇನೆ... ನನ್ನೊಡನಿದ್ದ ಗೆಳೆಯರೆಲ್ಲ ಕುಬ್ಜರಾಗುತ್ತಿದ್ದಾರೆ. ನಾ ನಡೆದು ಬಂದ ದಾರಿ ಕೇವಲ ಒಂದು ಗೆರೆಯಂತೆ ಕಾಣುತ್ತಿದೆ... ಎಷ್ಟೋ ದೂರದಲ್ಲಿರುವ ಕೆರೆಯೊಂದು ಪಕ್ಕದಲ್ಲಿರುವಂತೆ ಭಾಸವಾಗುತ್ತಿದೆ... "ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ..." ಎಂಬ ಗೀತೆ ನೆನಪಿಗೆ ಬರುತ್ತಿದೆ... ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದೊಂದು "ವಿಹಂಗಮ ನೋಟ".

ಪ್ರಮುಖ ಕಾರ್ಯಕ್ರಮಗಳಲ್ಲಿ ವೀಕ್ಷಕ ವಿವರಣೆಕಾರರು ಈ ಪದಪುಂಜ ಉಪಯೋಗಿಸುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಅನುಭವಿಸಿದ್ದೇವಾ? ವಿಮಾನದಲ್ಲಿ ಹೋಗುವಾಗ ಮೋಡದ ಮೇಲೆ ಹಾರುವ ಮನುಷ್ಯ ತಾನು ಕುಳಿತಲ್ಲಿಂದಲೇ ಕಿಟಕಿಯಿಂದ ನೋಡಿ ಖುಷಿ ಪಡಬಹುದೇ ಹೊರತು ತಾನೇ ಹಾರುವ ಕನಸನ್ನು ಸಾಕಾರಗೊಳಿಸಿಕೊಳ್ಳಲಾದೀತಾ? ಬಹುಶಃ ಇರಲಿಕ್ಕಿಲ್ಲ. ಆದರೆ ಮೊನ್ನೆ ಶನಿವಾರ ನಾನು ಅಂಥ ಒಂದು ಅನುಭವ ಪಡೆದೆ.

ಮೊನ್ನೆ ಶನಿವಾರ ಮೈಂಡ್-ಟ್ರೀಯ ಟ್ರೆಕ್ಕಿಂಗ್ ಕ್ಲಬ್ ಹಾಗೂ ಕೇರ್-ಇಂಡಿಯಾದ ಸಹಭಾಗಿತ್ವದಲ್ಲಿ ಹೊಸಕೋಟೆಯ ಬಳಿ ಪ್ಯಾರಾಸೇಲಿಂಗ್ ಆಯೋಜಿಸಲಾಗಿತ್ತು. ತಮ್ಮ ಗೆಳೆಯರನ್ನು ಕರೆದುಕೊಂಡು ಬರಬಹುದೆಂದು ಹೇಳಿದ್ದ ಕಾರಣ ಪ್ರವೀಣ ಈಮೇಲ್ ಕಳಿಸಿ ತಿಳಿಸಿದ್ದ. ಸರಿ, ಬರುತ್ತೇನೆ ಎಂದು ಹಿಂದೆ ಮುಂದೆ ನೋಡದೆ ಹೇಳಿದ್ದೆ.

ಸ್ಥಳ ಕೇವಲ ೧೫ ಕಿಲೋಮೀಟರ್ ದೂರದ ಹೊಸಕೋಟೆಯ ಬಳಿ ಎಂದು ತಿಳಿಸಲಾಗಿದ್ದ ಕಾರಣ ಬಸ್ಸಿನಲ್ಲಿಯೇ ಹೋಗುವುದೆಂದು ನಿರ್ಧರಿಸಿದ್ದೆವು. ಶನಿವಾರ ಬೆಳಿಗ್ಗೆ ಪ್ರವೀಣ, ಅರ್ಚನಾ ಮಾರ್ಕೆಟ್ಟಿನಿಂದ ಬಸ್ ಹತ್ತಿ ಮೊದಲೇ ಹೊರಟಿದ್ದರು. ಅಣ್ಣ-ತಮ್ಮ (ವಿನಯ್-ವಿಜಯ್... ಅವರನ್ನು ನಾವು ಕರೆಯುವುದೇ ಹಾಗೆ) ಎಂದಿನಂತೆ ಬೇಗ ಹೊರಡುತ್ತೇವೆ ಎಂದು ಹೇಳಿ ಲೇಟಾಗಿ ಹೊರಟಿದ್ದರು. ನಾನು ಅವರೆಲ್ಲ ಹೊರಟ ಮೇಲೆ ತಿಂಡಿ ತಿಂದು ಹೊರಟೆ.

ಕೆ.ಆರ್.ಪುರಂ ಬೆಂಗಳೂರಿನ ತುದಿ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ಹೋದಷ್ಟೂ ಹಳ್ಳಿಗಳು ಸಿಗುತ್ತಲೇ ಇದ್ದವು. ನಾಲ್ಕೈದು ಸ್ಟಾಪ್ ಆದ ಮೇಲೆ ಪ್ರವೀಣನಿಂದ ಫೋನು..

ಪ್ರವೀಣ: ಎಲ್ಲಿದೀಯ?
ನಾನು: ಬಸ್ಸಲ್ಲಿ.. ಯಾವೂರು ಅಂತ ಗೊತ್ತಿಲ್ಲ.
ಪ್ರವೀಣ: ನಾವು ಹೊಸಕೋಟೆಗೆ ಬಂದಿದೀವಿ... ಆದರೆ ಆ ಪ್ಲೇಸ್ ಇರೋದು ಇನ್ನೂ ಹಿಂದೆ, ಅದ್ಯಾವ್ದೋ ಬೂದಿಗೆರೆ ಕ್ರಾಸ್ ಅಂತೆ.
ನಾನು: ಸರಿ, ಇಳ್ಕೋತೀನಿ.

ಅಷ್ಟರಲ್ಲಿ ಬಸ್ ನಿಂತಿತ್ತು. ಬಹಳ ಜನ ಇಳಿದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದವನನ್ನು ಬೂದಿಗೆರೆ ಕ್ರಾಸ್ ಯಾವುದು ಎಂದು ಕೇಳಿದೆ. ಇದೇ ಬೂದಿಗೆರೆ ಕ್ರಾಸ್ ಅಂದ. ಬಸ್ ಆಗಲೇ ಹೊರಡಲು ಸಿದ್ಧವಾಗಿತ್ತು. ರೈಲಿನಿಂದ ಹಾರಿರುವವರಿಗೆ (ಆ ಕಥೆ ಇನ್ನೂ ಬರೆದಿಲ್ಲ; ಬಹುಶಃ ಬರೆಯುವುದೂ ಇಲ್ಲ) ಬಸ್ಸಿನಿಂದ ಹಾರುವುದು ಕಷ್ಟವೇ? ತಕ್ಷಣ ಹಾರಿಕೊಂಡೆ. ಎಲ್ಲರಿಗಿಂತ ಕೊನೆಗೆ ಹೊರಟು ಮೊದಲು ಅಲ್ಲಿಗೆ ಹೋಗಿ ಸೇರಿದ್ದೆ. ಎರಡು ಸ್ಟಾಪ್ ಮುಂದೆ ಹೋಗಿದ್ದ ಅಣ್ಣ-ತಮ್ಮ ಐದು ನಿಮಿಷಗಳಲ್ಲಿ ಬಂದರು. ಅದಾಗಿ ಒಂದು ನಿಮಿಷಕ್ಕೆ ಪ್ರವೀಣ-ಅರ್ಚನಾ ಸೇರಿಕೊಂಡರು.

ಸುತ್ತ-ಮುತ್ತ ಎಲ್ಲಿ ನೋಡಿದರೂ ಯಾವುದೇ ಪ್ಯಾರಾಶೂಟ್ ಕಾಣುತ್ತಿರಲಿಲ್ಲ. ಪ್ಯಾರಾಶೂಟ್ ನಿಂದ ಹಾರುವ ಜಾಗವೂ ಅದಾಗಿರಲಿಲ್ಲ. ಅಲ್ಲಿ ಯಾರನ್ನೋ ಕೇಳಿದೆವು. ಆದರೆ ಅವರಿಗೆ ಅದರ ಬಗ್ಗೆ ತಿಳಿದೇ ಇರಲಿಲ್ಲ. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ ಪ್ರವೀಣ ಯಾರಿಗೋ ಫೋನ್ ಮಾಡಿ ದಾರಿ ಕೇಳಿದ. ಅದರಂತೆ ಅದೇ ಕ್ರಾಸಿನಲ್ಲಿ ಸುಮಾರು ೨ ಕಿಲೋಮೀಟರ್ ನಡೆಯಬೇಕಿತ್ತು. ಸ್ವಲ್ಪ ಚಾರಣವೂ ಇರಲಿ ಎಂದು ಐದೂ ಜನ ಸೇರಿ ನಡೆಯಲಾರಂಭಿಸಿದೆವು.

Long walk to Parasailing

ಎರಡಾಯಿತು, ಮೂರಾಯಿತು... ಊಹೂಂ.. ಎಷ್ಟು ಕಿಲೋಮೀಟರ್ ನಡೆದರೂ ಯಾವ ಪ್ಯಾರಾಶೂಟ್ ಕೂಡ ಕಾಣುತ್ತಿಲ್ಲ!! ಅಲ್ಲಿ ಸಿಕ್ಕಿದವರ್ಯಾರಿಗೂ ಅದರ ಬಗ್ಗೆ ತಿಳಿದಿರಲೂ ಇಲ್ಲ. ಅಷ್ಟರಲ್ಲಿ ತಿಂಡಿ ತಿನ್ನಬೇಕೆಂದು ಯಾವುದೋ ಒಂದು ಸಣ್ಣ ಅಂಗಡಿಗೆ ಹೋಗಿ ಚಿತ್ರಾನ್ನ ತಿಂದು ಮುಂದೆ ಹೊರಟೆವು. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ ಸಂದೀಪ ಹಿಂದೆ ಅಲ್ಲಿಗೆ ಹೋಗಿದ್ದು ನೆನಪಾಯಿತು. ಅವನಿಗೆ ಫೋನಾಯಿಸಿದೆ. ಅವನು ಗುಂಡಿ-ಹಂಪಿನಿಂದ ಹಿಡಿದು ಪ್ಯಾರಾಶೂಟ್ ಹಾರುವ ಜಾಗದವರೆಗೆ ಕಣ್ಣಿಗೆ ಕಟ್ಟುವಂತೆ ದಾರಿ ವಿವರಿಸಿದ. ಅವನ ಮಾತು ಮುಂದೆ ಅಲ್ಲಿಗೆ ಹೋಗುವವರಿಗೆ ಬೇಕಾಗಬಹುದೇನೋ:

"ಹೊಸಕೋಟೆ ರೋಡಿನಲ್ಲಿ ಬೂದಿಗೆರೆ ಕ್ರಾಸ್ ಬರ್ತು. ಅಲ್ಲಿ ಎಡಕ್ಕೆ ತಿರುಗು. ಸುಮಾರು ದೂರ ಹೋದ ಮೇಲೆ ಬಾಲ್ಡ್ವಿನ್ ಸ್ಕೂಲ್ ಸಿಗ್ತು. ಅದೇ ದಾರೀಲಿ ಮುಂದೆ ಹೋಗು. ದೊಡ್ಡ ಹಂಪು ಬತ್ತು. ಮುಂದೆ ಹೋಗು. ಇನ್ನೊಂದು ಹಂಪು ಬತ್ತು. ಅಷ್ಟರಲ್ಲಿ ಒಂದು ಊರು ಬರ್ತು. ಹಂಗೆ ಸುಮಾರು ಮೂರು-ನಾಲ್ಕು ಹಂಪು ಸಗ್ತು. ಅಷ್ಟೊತ್ತಿಗೆ ಊರು ದಾಟಿರ್ತು. ಅದಾದಮೇಲೆ ಆಂಡ್ರೂ ವುಡ್ಕ್ರಾಫ್ಟ್ ಅಂತೆಂತೋ ಸಿಗ್ತು. ಅಲ್ಲಿ ಬಲಕ್ಕೆ ತಿರುಗು. ಅದೊಂದ್ ಸಣ್ಣ ರಸ್ತೆ. ಹಂಗೆ ಮುಂದೆ ಹೋದ್ರೆ ಒಂಥರಾ ಡೆಡ್ ಎಂಡ್ ಸಿಗ್ತು. ಆದ್ರೆ ಅದು ಡೆಡ್ ಎಂಡ್ ಅಲ್ಲ.. ಅಲ್ಲಿ ಬಲಕ್ಕೆ ತಿರುಗು. ಒಂದು ಮಡ್ ರೋಡ್ ಸಿಗ್ತು. ಅದೇ ದಾರೀಲಿ ಸೀದಾ ಹೋದ್ರೆ ಫೀಲ್ಡ್ ಸಿಗ್ತು.. ಅಲ್ಲೇ ಅವು ಪ್ಯಾರಾಸೇಲಿಂಗ್ ನಡ್ಸ್ತ. ನಿಂಗ ನಡ್ಕಂಡು ಬರಕ್ಕಾಗಿತ್ತಿಲ್ಲೆ... ಬೈಕ್ ತಗಂಡ್ ಹೋಗಕ್ಕಾಗಿತ್ತು..."

ನನಗೆ ತಿಳಿದಂತೆ ಸಂದೀಪ ಅಲ್ಲಿಗೆ ಹೋಗಿದ್ದು ಮಾರ್ಚ್ ೨೦೦೭ರಲ್ಲಿ. ಅಂದರೆ ಸುಮಾರು ಒಂದೂವರೆ ವರ್ಷದ ಹಿಂದೆ. ಆದರೆ ಆತ ಹೇಳಿದ ದಾರಿ ಮಾತ್ರ ಎಳ್ಳಷ್ಟೂ ತಪ್ಪಿರಲಿಲ್ಲ. ಭೇಷ್ ದೋಸ್ತ!!!

ಅಷ್ಟರಲ್ಲಿ ದಾರಿ ದೂರವಿದೆ ಎಂದು ತಿಳಿದ ಪ್ರವೀಣ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದ ಮೈಂಡ್-ಟ್ರೀಯ ರವಿ ಎಂಬುವವರಿಗೆ ಫೋನ್ ಮಾಡಿ ಬಂದು ಕರೆದುಕೊಂಡು ಹೋಗುವಂತೆ ತಿಳಿಸಿದ್ದ. ಅವರು ತಮ್ಮ ಕಾರನ್ನು ತಂದು ಕರೆದುಕೊಂಡು ಹೋದರು. ನಾವು ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ೧೦ ಘಂಟೆಯಾಗಿತ್ತು. ನಡೆದುಕೊಂಡೇ ಹೋಗಿದ್ದರೆ ಖಂಡಿತ ಮಧ್ಯಾಹ್ನದ ಒಳಗೆ ನಾವು ಅಲ್ಲಿರುತ್ತಿರಲಿಲ್ಲ.

ನಂತರ ಅಲ್ಲಿ ನಮ್ಮ ಹೆಸರು ನೋಂದಾಯಿಸಿ ಕಾಯುತ್ತಾ ಕುಳಿತೆವು. ನಾವೇ ಕಡೆಗೆ ಹೋಗಿದ್ದರಿಂದ ನಾವು ತುಸು ಹೆಚ್ಚೇ ಕಾಯಬೇಕಾಯಿತು. ಅದಾದ ನಂತರ ಒಬ್ಬೊಬ್ಬರಾಗಿ ಹಾರಾಟ ನಡೆಸಿದೆವು.

Parasailing

ಮೊದಲಿಗೆ ಒಂದು ಜಾಕೆಟ್, ನಂತರ ಹೆಲ್ಮೆಟ್, ನಂತರ ಪ್ಯಾರಾಶೂಟ್... ಹೀಗೆ ಎಲ್ಲವನ್ನೂ ತೊಡಿಸಿ ಆದ ಮೇಲೆ ಮಾರುತಿ ಜಿಪ್ಸಿಯೊಂದರಲ್ಲಿ ಎಳೆಯುತ್ತಿದ್ದರು. ನಾಲ್ಕೈದು ಹೆಜ್ಜೆ ನಾವೂ ಓಡಬೇಕು. ಪ್ಯಾರಾಶೂಟ್ ಮೇಲೇರುತ್ತದೆ. ನಂತರ ನಾನು ಮೇಲೆ ತಿಳಿಸಿದಂತೆ ವಿಹಂಗಮ ನೋಟ. ಇದನ್ನು ಅನುಭವಿಸಿಯೇ ತಿಳಿಯಬೇಕು. ಸುಮಾರು ೧೦೦-೧೫೦ ಅಡಿ ಮೇಲೆ ಇರಬಹುದು (ಆಯೋಜಕರು ೩೦೦ ಅಡಿ ಎತ್ತರ ಎಂದು ಹೇಳುತ್ತಾರೆ, ಆದರೆ ಅದು ನಮಗಂತೂ ರಿಯಲಿಸ್ಟಿಕ್ ಅಂತ ಅನಿಸಲಿಲ್ಲ). ಎರಡು ನಿಮಿಷ ಹಕ್ಕಿಯಂತೆ ಬಾನಿನಲ್ಲಿ ಹಾರಾಡಿದ ಮೇಲೆ ಮತ್ತೆ ಭೂಮಿಗೆ. ಒಟ್ಟಿನಲ್ಲಿ ಒಂದು ಅಪೂರ್ವ ಅನುಭವ ನಮ್ಮದಾಗಿತ್ತು.


ಪ್ರತಿ ಶನಿವಾರ, ಭಾನುವಾರ ಅಲ್ಲಿ ಪ್ಯಾರಾಸೇಲಿಂಗ್ ಆಯೋಜಿಸುತ್ತಾರಂತೆ. ಒಬ್ಬರಿಗೆ ೩೫೦/- ರೂಪಾಯಿಗಳು. ನೀವೂ ಅಲ್ಲಿಗೆ ಹೋಗುವುದಾದರೆ ಸ್ವಂತ ವಾಹನ ತೆಗೆದುಕೊಂಡು ಸಂದೀಪ ಹೇಳಿದ ದಾರಿ ಅನುಸರಿಸಿ ಹೋಗುವುದು ಒಳ್ಳೆಯದು. ಬಿ.ಎಂ.ಟಿ.ಸಿ. ಬಸ್ಸಿನಲ್ಲಿಯೇ ಹೋಗುವುದಾದರೆ "ಬೂದಿಗೆರೆ" ಬಸ್ಸಿಗೆ ಹೋಗಬಹುದು. ೩೧೬ ಸೀರೀಸ್ ನ ಕೆಲವು ಬಸ್ಸುಗಳು ಹೋಗುತ್ತವೆ. ಮಂಡೂರಿಗಿಂತ ಸ್ವಲ್ಪ ಮುಂದೆ ಬಲಕ್ಕೆ ಹೋಗುವ ಕ್ರಾಸಿನಲ್ಲಿ ಇಳಿದುಕೊಳ್ಳಬೇಕು.

ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ನೋಡಿ

ಸೋಮವಾರ, ಸೆಪ್ಟೆಂಬರ್ 29, 2008

ಶ್ವಾನ ಪುರಾಣ

ನಾಯಿಯಷ್ಟು ಕೃತಜ್ಞ ಪ್ರಾಣಿ ಇನ್ನೊಂದಿಲ್ಲ. ಯಾರೋ ಒಬ್ಬ ಹೇಳಿದಂತೆ ತನಗಿಂತಲೂ ಹೆಚ್ಚು ತನ್ನ ಒಡೆಯನನ್ನು ಪ್ರೀತಿಸುವ ಪ್ರಾಣಿ ನಾಯಿಯೊಂದೇ. ಇಂತಿಪ್ಪ ನಾಯಿ ಕೆಲವೊಮ್ಮೆ ತನ್ನ ಕುಚೇಷ್ಟೆಗಳಿಂದ irritate ಮಾಡುವುದೂ ಇದೆ.

ಬೆಳಿಗ್ಗೆ ಎದ್ದು ಅಮ್ಮ ದೇವರ ಸ್ತುತಿ ಮಾಡುತ್ತಾ ಬಾಗಿಲಿಗೆ ರಂಗೋಲಿ ಹಾಕಿ ಒಳಗೆ ಹೋಗುತ್ತಾಳೆ. ಹೋಗಿ ಮತ್ತೆ ಹೊರಬರುವಷ್ಟರಲ್ಲಿ ರಂಗೋಲಿಯ ಮೇಲೆ ನಾಯಿಯೊಂದು ಬಂದು ಮಲಗಿರುತ್ತದೆ! "ಥತ್ ಹೊಲಸು ನಾಯಿ" ಎಂದು ಬಯ್ಯುತ್ತಾ ಅದನ್ನು ಓಡಿಸಿ ಒಳಗೆ ಹೋಗುವಷ್ಟರಲ್ಲಿ ಮತ್ತೆ ಹಾಜರ್!! ಇದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲವಾದರೂ ನನಗೆ ಯಾರೋ ಹಿರಿಯರು ಹೇಳಿದಂತೆ ರಂಗೋಲಿ ನಾಯಿಗಳಿಗೆ ಮಣೆ ಹಾಕಿಟ್ಟಂತೆ ಕಂಡು ಬರುವುದಂತೆ. ಅದೇ ಕಾರಣಕ್ಕೆ ಅವು ಅಲ್ಲಿ ಬಂದು ಆಸೀನವಾಗುವುದಂತೆ.

ಅಪ್ಪನ ಪೂಜೆ ಕೊನೆಯ ಹಂತಕ್ಕೆ ಬಂದಿರುತ್ತದೆ. ಮಂಗಳಾರತಿಯ ಸಮಯ ಅಪ್ಪ ಆರತಿ ಘಂಟೆ ಬಾರಿಸಲಾರಂಭಿಸಿದಾಗ ನಾನು ಹೋಗಿ ಜಾಗಟೆ ಬಾರಿಸುತ್ತೇನೆ. ಇದ್ದಕ್ಕಿದ್ದಂತೆ ಹೊರಗೆ ನಾಯಿಗಳ ಬೊಗಳಾಟ ಶುರುವಾಗುತ್ತದೆ. ಒಂದು ನಾಯಿ "ಊಽಽಽಽ" ಎಂದು ಬಾಯ್ತೆರೆಯುವುದೇ ತಡ, ಎಲ್ಲಿರುತ್ತವೆಯೋ ಏನೋ, ಊರಿನ ಎಲ್ಲಾ ನಾಯಿಗಳೂ ಒಮ್ಮೆಲೇ ದೇವರಿಗೆ ಸೇವೆ ಮಾಡಲಾರಂಭಿಸುತ್ತವೆ. ಅಪ್ಪನ ಪೂಜೆ ಮುಗಿದರೂ ಅವುಗಳ ಶಂಖಸೇವೆ ಮುಗಿದಿರುವುದಿಲ್ಲ.

ಸಣ್ಣವನಿದ್ದಾಗ ನನಗೆ ವಿಪರೀತ ನಾಯಿಮರಿಗಳ ಹುಚ್ಚಿತ್ತು. ವಿಪರ್ಯಾಸವೆಂಬಂತೆ ಅಕ್ಕಪಕ್ಕದ ಮನೆಯ ನಾಯಿಗಳೂ ನಮ್ಮ ಮನೆಯ ಸರಹದ್ದಿಗೆ ಬಂದೇ ಮರಿ ಹಾಕುತ್ತಿದ್ದವು. ಪಾಪ, ಅವಕ್ಕೇನು ಗೊತ್ತು, ನಾನು ಆಟ ಆಡಿಸುವ ನೆಪದಲ್ಲಿ ಮರಿಗಳನ್ನು ಗೋಳು ಹೊಯ್ದುಕೊಳ್ಳುತ್ತೇನೆ ಎಂದು!! ಕೆಲವೊಂದು ಬಾರಿ ಅವುಗಳನ್ನು ತೀರಾ ಹಿಂಸಿಸಿದ್ದೂ ಇದೆ.

ನಾಯಿಯೊಂದು ಮರಿ ಹಾಕಿ ಇನ್ನೂ ೨ ತಿಂಗಳಾಗಿತ್ತು. ಅವುಗಳಿಗೆ ಇನ್ನೂ ಸರಿಯಾಗಿ ಓಡಲೂ ಬರುತ್ತಿರಲಿಲ್ಲ; ನನ್ನ ಕೈಗೆ ಸಿಕ್ಕಿಬಿಡುತ್ತಿದ್ದವು. ನಮ್ಮ ಮನೆಯಲ್ಲಿ ಮನೆಯ ಕಟ್ಟೆಯಿಂದ ಬಾವಿ ಕಟ್ಟೆಗೆ ೨ ಅಡಿ ಅಷ್ಟೇ. ಆದರೆ ಆ ನಾಯಿ ಮರಿಗೆ ಅದನ್ನು ಹಾರಿ ದಾಟಲು ಬರುತ್ತಿರಲಿಲ್ಲ. ಅದನ್ನು ಕಲಿಸುವುದು ಬೇಡವೇ! ಅದಕ್ಕೆ ಸರಪಳಿ ಹಾಕಿ ಎಳೆದು ಆ ಕಡೆಯಿಂದ ಈ ಕಡೆಗೆ ಹಾರುವಂತೆ ಮಾಡಲು ಹೋಗಿ, ಅದು ಕೆಳಗೆ ಬಿದ್ದು, ಅದರ ಮೂತಿಗೆ ಪೆಟ್ಟಾಗಿ, "ಕುಂಯ್ಯ್" ಎಂದು ಕೂಗಿ, ಅಮ್ಮ ಬಂದು "ಅದು ದೊಡ್ಡಾದ ಮೇಲೆ ತಾನೇ ಹಾರದ್ನ ಕಲೀತು, ಬಿಡು ಅದನ್ನ" ಎಂದು ಕೂಗಿದರೂ ಕೇಳದೆ, ನನ್ನೊಳಗಿನ ದ್ರೋಣಾಚಾರ್ಯನಿಗೆ ಇದೊಂದು ಸವಾಲೆಂಬಂತೆ ಸ್ವೀಕರಿಸಿ, ಇನ್ನೂ ಒಂದು ಹತ್ತಿಪ್ಪತ್ತು ಬಾರಿ ಪ್ರಯತ್ನಿಸಿ, ಸೋತು, "ಮಳ್ಳ್ ನಾಯಿ ಮರಿ. ಇಷ್ಟ್ ದೂರ ಹಾರಲೂ ಬರ್ತಿಲ್ಲೆ" ಎಂದು ಶಪಿಸುತ್ತಾ ಇನ್ನೊಂದು ನಾಯಿ ಮರಿಗೆ ಟ್ರೇನಿಂಗ್ ಶುರು ಮಾಡುತ್ತಿದ್ದೆ. ಈಗ ನೆನೆಸಿಕೊಂಡರೆ ನಗು ಬರುತ್ತದೆ, ಪಶ್ಚಾತ್ತಾಪವೂ ಆಗುತ್ತದೆ. ಪಾಪ, ಎರಡು ತಿಂಗಳ ಮರಿಗಳು... ಏನೇನೋ ಮಾಡುತ್ತಿದ್ದೆ. ಒಮ್ಮೆ ದೊಡ್ಡ ನಾಯಿಯೊಂದರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದ್ದೂ ಇದೆ! ಪುಣ್ಯಕ್ಕೆ ಕಚ್ಚಿರಲಿಲ್ಲ!!

"ಕುನ್ನಿಗೆ ಕೆಲಸವಿಲ್ಲ, ಕೂರಲು ತೆರಪಿಲ್ಲ" ಎಂದು ಒಂದು ಗಾದೆಯಿದೆ. ಏನೂ ಕೆಲಸವಿಲ್ಲದಿದ್ದರೂ ನಾಯಿಗಳು ಸುಮ್ಮನೆ ಕೂರುವುದಿಲ್ಲ. ಎಲ್ಲೆಲ್ಲೋ ಸುತ್ತುತ್ತಿರುತ್ತವೆ. ಒಂದು ಸಾರಿ ಊರಿನಿಂದ ಹರಿಹರಕ್ಕೆ ಹೊರಟಿದ್ದೆವು. ನಾಯಿ ಮರಿಯೊಂದು ಮೊದಲ ಬಾರಿ ತನ್ನ ತಾಯಿಯೊಂದಿಗೆ ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿತ್ತು. "ನಾಯಿಗೆ ಅಡ್ಡ ಜಂಬರ ಬಂದ ಹಾಗೆ" ಎನ್ನುವ ಇನ್ನೊಂದು ಗಾದೆಯಿದೆ. ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿದ್ದ ಆ ಮರಿಯ ತಾಯಿ ಏನನ್ನೋ ಮೂಸುತ್ತಾ, ಹೋಗುವ ದಾರಿ ಬಿಟ್ಟು ಎಲ್ಲೋ ಹೋಗಿಬಿಟ್ಟಿತು. ಆದರೆ ಮರಿ ನಮ್ಮ ಜೊತೆಯೇ ಬಂದಿತು. ಬಸ್ ಸ್ಟ್ಯಾಂಡಿಗೆ ಹೋಗಿ ನಾವು ಮುಟ್ಟಿದರೂ ಅದರ ತಾಯಿಯ ಸುಳಿವಿಲ್ಲ. ಬಸ್ ಬಂದಿತು. ನಾವು ಹತ್ತಿದೆವು. ಸುಮ್ಮನೆ ಮನೆಗೆ ಹೋಗುವ ಬದಲು ಆ ಮರಿ ಬಸ್ ಹಿಂದೆಯೇ ಓಡಿ ಬರಲಾರಂಭಿಸಿತು. ಬಸ್ಸಿನಲ್ಲಿದ್ದ ನನಗೆ ಸಂಕಟ. ಸುಮಾರು ಒಂದು ಕಿಲೋಮೀಟರ್ ನಮ್ಮ ಬಸ್ಸನ್ನೇ ಹಿಂಬಾಲಿಸಿತು. "ಮನೆಗೆ ಹೇಗೆ ತಿರುಗಿ ಹೋಗುತ್ತದೆ? ಅದಕ್ಕೆ ಮನೆ ದಾರಿ ಗೊತ್ತಿಲ್ಲ, ದಾರಿ ತಪ್ಪುತ್ತದೆ" ಎಂದು ಜೋರಾಗಿ ಬಸ್ಸಿನಲ್ಲಿಯೇ ಅತ್ತು ರಾದ್ಧಾಂತ ಮಾಡಿದ್ದೆ. ಅವುಗಳಿಗೆ ವಾಸನೆಯಿಂದಲೇ ಬಂದ ದಾರಿ ತಿಳಿಯುತ್ತದೆ, ಅಳಬೇಡ ಎಂದು ಅಮ್ಮ ಹೇಳಿದರೂ ನಂಬಿರಲಿಲ್ಲ. ಹರಿಹರಕ್ಕೆ ಹೋದ ಕೂಡಲೇ ಊರಿನಲ್ಲಿದ್ದ ಅತ್ತೆಗೆ ಅಮ್ಮನಿಂದ ಪತ್ರ ಬರೆಸಿದ್ದೆ, ಮನೆಗೆ ನಾಯಿ ಮರಿ ವಾಪಸ್ ಬಂದಿದೆಯೋ ಇಲ್ಲವೋ ಎಂದು. ವಾರದ ನಂತರ ಉತ್ತರ ಬಂದಿತ್ತು, ಮರಿ ಸುರಕ್ಷಿತವಾಗಿ ಮನೆ ಸೇರಿದೆ ಎಂದು. ಆಗಲೇ ನನಗೆ ಸಮಾಧಾನವಾಗಿದ್ದು.

ನಾಯಿ ಮರಿ


ಒಂದು ಕಪ್ಪು ನಾಯಿ ಮರಿ. ನಾನು ಅದನ್ನು ಎಷ್ಟು ಹಚ್ಚಿಕೊಂಡಿದ್ದೆನೋ, ಅದೂ ನನ್ನನ್ನು ಅಷ್ಟೇ ಹಚ್ಚಿಕೊಂಡಿತ್ತು. ನನ್ನ, ನಾಯಿ ಮರಿಯ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ದಿನವೂ ಎದ್ದು ಮೊದಲು ನಾನು ಮಾಡುತ್ತಿದ್ದ ಕೆಲಸ ಬಚ್ಚಲ ಮನೆಯ ಬಳಿ ಹೋಗಿ ಅಲ್ಲಿ ಅಡಿಕೆ ಸಿಪ್ಪೆಯ ಬುಟ್ಟಿಯೊಂದರಲ್ಲಿ ಮಲಗಿರುತ್ತಿದ್ದ ಆ ನಾಯಿ ಮರಿ ನೋಡುವುದು. ಆಮೇಲೆ ಮುಖ ತೊಳೆದುಬಂದು ದೇವರಿಗೆ ಕೈ ಮುಗಿಯುತ್ತಿದ್ದೆ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಅಲ್ಲಿ ಬುಟ್ಟಿಯೂ ಇರಲಿಲ್ಲ, ಮರಿಯೂ ಇರಲಿಲ್ಲ. "ಅಮ್ಮಾ" ಎಂದು ಕೂಗಿದೆ. "ನಾಯಿ ಮರಿ ಎಲ್ಲಿ" ಎಂದು ಕೇಳಿದೆ. "ನಾಯಿ ಮರಿ ಸತ್ ಹೋತು, ಅಂಗಳದಲ್ಲಿದ್ದು" ಎಂದಾಗ ಅಲ್ಲಿಗೆ ಓಡಿದೆ. ಅದನ್ನು ನೋಡಿದ ಕೂಡಲೇ ಅಳು ಬಂದಿತು. ಅಳುವಷ್ಟೂ ಅತ್ತು, ಅದನ್ನು ನಮ್ಮ ಮನೆಯ ಆಳೊಬ್ಬ ಹೋಗಿ ತೋಟದಲ್ಲಿ ಗುಂಡಿ ತೋಡಿ ಹೂತು ಬರುವವರೆಗೂ ಅದರೊಂದಿಗಿದ್ದು ಶ್ರದ್ಧಾಂಜಲಿ ಅರ್ಪಿಸಿದ್ದೆ. ಅದಾದ ನಂತರ ಎಷ್ಟೋ ಬಂಧುಗಳು ಮಡಿದಿದ್ದಾರೆ, ಆದರೆ ನಾನು ಆ ನಾಯಿ ಮರಿ ಸತ್ತಾಗ ಅತ್ತಷ್ಟು ಎಂದೂ ಅತ್ತಿಲ್ಲವೇನೋ.

ಈಗ ಇವೆಲ್ಲ ಯಾವುದೋ ಕಾಲದ ನೆನಪಿನಂತೆ ಕಾಡುತ್ತವೆ. ನನಗೂ ನಾಯಿಗಳಿಗೂ ಈಗ ಅಷ್ಟಕ್ಕಷ್ಟೇ. ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್‍ವೇರ್ ಇಂಜಿನಿಯರ್‌ಗಳು ಮತ್ತು ಬೀದಿ ನಾಯಿಗಳು. ಸಾಫ್ಟ್‍ವೇರ್ ಇಂಜಿನಿಯರ್‌ಗಳಿಗೆ ರಾತ್ರಿ client interaction ಇರುವಂತೆಯೇ ನಮ್ಮ ಮನೆಯ ಬಳಿ ದಿನಾ ರಾತ್ರಿ ೧೨:೩೦ ಕ್ಕೆ conference ಮಾಡುವ ನಾಯಿಗಳೂ ನಿದ್ದೆ ಮಾಡುವುದಿಲ್ಲ; ಮಾಡಲೂ ಬಿಡುವುದಿಲ್ಲ. ಬಹುಶಃ ಅವುಗಳ client ಕೂಡ ಅಮೇರಿಕಾದಲ್ಲಿರಬೇಕು...

ಸೋಮವಾರ, ಸೆಪ್ಟೆಂಬರ್ 22, 2008

ಮಳೆಗಾಲದ ಒಂದು ಸಂಜೆ...

ಮಳೆಗಾಲದ ಒಂದು ಸಂಜೆ. ಅಮ್ಮ ಮಾಡಿದ್ದ ಬಿಸಿ ಬಿಸಿ ಬೋಂಡ ತಿನ್ನುತ್ತಾ ಕಾಫಿ ಹೀರುತ್ತಾ ಜಗಲಿಯಲ್ಲಿ ಕೂತು ತಳಿಗಳ ಮೂಲಕ ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದೆ. ಮನಸ್ಸು ನಾಲ್ಕು ವರ್ಷ ಹಿಂದಕ್ಕೆ ಕರೆದೊಯ್ದಿತು.
***

ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೇ ತಿಂಗಳು. ೧೫ ದಿನದಲ್ಲಿ ಪರೀಕ್ಷೆ ಇದ್ದರೂ ಅರ್ಧ ಸಿಲೆಬಸ್ ಕೂಡ ಮುಗಿದಿರಲಿಲ್ಲ. ಶನಿವಾರ ಸ್ಪೆಷಲ್ ಕ್ಲಾಸ್ ಇಟ್ಟಿದ್ದರು. ಬಹಳಷ್ಟು ಮಂದಿ ಚಕ್ಕರ್ ಹಾಕಿದ್ದರು. ಇದ್ದವರು ನಾವೇ ೮ ಹುಡುಗರು, ೫ ಹುಡುಗಿಯರು. ನನ್ನನ್ನು ಮತ್ತು ಮೂವರು ಹುಡುಗಿಯರನ್ನು ಬಿಟ್ಟರೆ ಉಳಿದವರೆಲ್ಲ ಹಾಸ್ಟೆಲ್ ನಲ್ಲಿ ಇದ್ದವರು.

ಮನೆಯಲ್ಲಿ ಕೂತು ಓದಲಾಗದ ನಾನು ಪಾಠವನ್ನಾದರೂ ಕೇಳೋಣ ಎಂದು ಹೋಗಿದ್ದೆ. ಪಾಠವೇನೂ ಅಷ್ಟೊಂದು ಆಸಕ್ತಿದಾಯಕವಾಗಿರಲಿಲ್ಲ. ಸುಮ್ಮನೆ ಲೆಕ್ಚರರ್ ಹೇಳಿದ್ದನ್ನು ಕೇಳುತ್ತಾ, ನೋಟ್ಸ್ ಗೀಚುತ್ತಾ ಕುಳಿತಿದ್ದೆ. ಹೊರಗೆ ಆಚಾನಕ್ ಮಳೆ ಸುರಿಯಲಾರಂಭಿಸಿತು. ಸುಮಾರು ಮುಕ್ಕಾಲು ಘಂಟೆ ಕಳೆದ ಮೇಲೆ ಕ್ಲಾಸ್ ಮುಗಿಯಿತು. ಎಲ್ಲರೂ ಹೊರಗೆ ಬಂದೆವು. ಬೇಸಿಗೆಯಲ್ಲಿ ಮಳೆ ಬರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಯಾರ ಬಳಿಯೂ ಕೊಡೆ ಇರಲಿಲ್ಲ. ಕಾಲೇಜಿನ ಹಿಂದೇ ಹಾಸ್ಟೆಲ್ ಇದ್ದಿದ್ದರಿಂದ ೭ ಜನ ಹುಡುಗರೂ ಬೇಗ ಓಡಿ ಹೋಗಿ ರೂಮ್ ಸೇರಿಕೊಂಡುಬಿಟ್ಟರು. ೨ ಹುಡುಗಿಯರೂ ಅದೇ ಕೆಲಸ ಮಾಡಿದರು. ಉಳಿದ ಮೂವರು ಹುಡುಗಿಯರಲ್ಲಿ ಒಬ್ಬಳ ಬಳಿ ಸ್ಕೂಟಿ ಇತ್ತು. ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೊಬ್ಬಳನ್ನು ಕರೆದುಕೊಂಡು ಹೋಗಿಬಿಟ್ಟಳು. ಉಳಿದವರಿಬ್ಬರೇ: ನಾನು ಮತ್ತು ಆಕೆ.

ಹುಡುಗಿಯರನ್ನು ಕಂಡರೆ ನನಗೆ ಅದೆಂಥದೋ ಸಂಕೋಚವಿತ್ತು. ಎತ್ತಲೋ ನೋಡುತ್ತಾ ಸುಮ್ಮನೆ ನಿಂತಿದ್ದೆ. ೫ ನಿಮಿಷ ಆಕೆಯೂ ಸುಮ್ಮನೆ ನಿಂತಿದ್ದಳು. ಮೌನ ಆಕೆಗೆ ಬೇಸರ ತರಿಸಿರಬೇಕು. ಟೈಮ್ ಎಷ್ಟು ಎಂದು ಕೇಳಿದಳು. ಆಕೆಯತ್ತ ತಿರುಗಿ ೪:೪೦ ಎಂದೆ. ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ಚಿಂತೆ ಕಂಡು ಬಂದಿತ್ತು. ಎರಡು ನಿಮಿಷ ಮೌನ. ಮನೆ ಎಲ್ಲಿ ಎಂದು ಕೇಳಿದಳು. ಉತ್ತರಿಸಿ ಮತ್ತೆ ಸುಮ್ಮನಾದೆ. ಮತ್ತೆ ಎರಡು ನಿಮಿಷ ಮೌನ. ಆಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದರೂ ಮೆಕ್ಯಾನಿಕಲ್ ಆಗಿ ಉತ್ತರಿಸಿ ಸುಮ್ಮನೆ ಇದ್ದರೆ ತಪ್ಪಾದೀತೆಂದು ಆಕೆಯ ಮನೆಯ ಬಗ್ಗೆ ಕೇಳಿದೆ. ಇಲ್ಲೇ ವಿದ್ಯಾನಗರ ಎಂದಳು. ಕ್ಲಾಸ್ ಒಳಗೆ ಹೋಗಿ ಬೆಂಚ್ ಮೇಲೆ ಕುಳಿತು ಮಾತನಾಡೋಣ ಎಂಬಂತೆ ಸನ್ನೆ ಮಾಡಿದಳು. ಎಂದೂ ಹುಡುಗಿಯರ ಜೊತೆ ಸುಖಾಸುಮ್ಮನೆ ಮಾತನಾಡಿರಲಿಲ್ಲ. ಆಕೆ ಕರೆದ ಮೇಲೆ ಹೋಗಿ ಕೂರದೆ ಬೇರೆ ವಿಧಿಯಿರಲಿಲ್ಲ. ಸರಿ ಎಂದು ಹೋಗಿ ಕುಳಿತೆ.

ಆಕೆಯೇ ಮಾತು ಆರಂಭಿಸಿದಳು. ತನ್ನ ಮನೆಯ ಬಗ್ಗೆ, ತಾನು ಓದಿದ ಬಗ್ಗೆ, ತನಗೆ ಇಷ್ಟವಿರದಿದ್ದರೂ ಮನೆಯಲ್ಲಿ ಇಂಜಿನಿಯರಿಂಗಿಗೆ ಸೇರಿದ ಬಗ್ಗೆ... ಹೀಗೇ ಒಂದು ಘಂಟೆಯಾದರೂ ಕಳೆದಿರಬೇಕು. ಬಹುಶಃ ಆಕೆಯ ಮನಸ್ಸಿನಲ್ಲಿ ಇದ್ದಿದ್ದನ್ನು ಹೊರ ಹಾಕಲು ಆಕೆಗೆ ಯಾರಾದರೂ ಬೇಕಿತ್ತೇನೋ.

ಆಕೆ ಅಷ್ಟೊಂದು ಹೇಳುತ್ತಿದ್ದರೂ ನಾನು ಕೇಳುತ್ತಿದ್ದೆ ಬಿಟ್ಟರೆ ತಿರುಗಿ ಏನೂ ಕೇಳಿರಲಿಲ್ಲ. ಆಕೆ ನನ್ನ ಬಗ್ಗೆಯೂ ಏನೂ ಕೇಳಿರಲಿಲ್ಲ. ನನ್ನ ಮೌನ ಆಕೆಗೆ ಏನು ಅನಿಸಿಕೆ ಮೂಡಿಸಿತೋ. ಮಳೆ ಕಡಿಮೆಯಾಗಿದೆ ಹೋಗೋಣವೆ ಎಂದಳು. ಇಬ್ಬರೂ ಎದ್ದು ಹೊರಟೆವು.

ಸುಮ್ಮನೆ ಇಷ್ಟೊತ್ತು ಬೋರ್ ಹೊಡೆಸಿದೆನಾ ಎಂದು ಕೇಳಿದಳು. ಇಲ್ಲ ಎಂದು ಗೋಣಾಡಿಸಿದೆ. ಏನಾದರೂ ಹೇಳಿಕೊಳ್ಳುವುದಿದ್ದರೆ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದೆಂದು ತಿಳಿಸಿದೆ. ಸರಿ ಎಂದು ಮುಗುಳ್ನಕ್ಕಳು. ಆಕೆಯ ಮುಖ ಮೊದಲಿಗಿಂತ ಸ್ವಲ್ಪ ನಿರಾಳವಾಗಿದ್ದಂತೆ ಕಂಡು ಬಂದಿತು. ಪರಿಚಯ ಆಗಲೇ ಸ್ನೇಹಕ್ಕೆ ತಿರುಗಿತ್ತು.

ಆ ದಿನ ರಾತ್ರಿ ಮಲಗಿದಾಗ ನಿದ್ದೆ ಬರಲಿಲ್ಲ. ಆಕೆಯ ಇತಿಹಾಸವೇ ಮನಸ್ಸಿನಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿತ್ತು. ವ್ಯವಸ್ಥೆಯ ಮೇಲೆ ಕೋಪ ಉಕ್ಕುತ್ತಿತ್ತು.

ಪಿ.ಯು.ಸಿಯಲ್ಲಿ ಪಿ.ಸಿ.ಬಿ ೯೬% ತೆಗೆದಿದ್ದಳು. ಮೆಡಿಕಲ್ ಗೆ ಹೋಗಿ ಒಂದು ಉತ್ತಮ ವೈದ್ಯೆಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿದ್ದ ಆಕೆಯ ತಂದೆಗೆ ಬರುತ್ತಿದ್ದುದು ೫,೫೦೦ ರೂ. ಸಂಬಳ. ಅದರಲ್ಲೇ ಆಕೆ, ಆಕೆಯ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ - ಹೀಗೆ ೫ ಜನರ ಸಂಸಾರ ನಡೆಯಬೇಕಿತ್ತು. ತಾಯಿ ತೀರಿಕೊಂಡು ೩ ವರ್ಷ ಆಗಿತ್ತಂತೆ. ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಆಕೆಯ ಮೇಲೆ ಬಿದ್ದಿತ್ತು. ಸರ್ಕಾರ-ಖಾಸಗಿ ಕಾಲೇಜುಗಳ ಜಗಳದಿಂದಾಗಿ ಮೆಡಿಕಲ್ ಸೀಟು ಕೈಗೆಟುಕದಂತಾಗಿತ್ತು.

ಮತ್ತೆ ಆಕೆ ಸಿಕ್ಕಿದ್ದು ಮಂಗಳವಾರ. ಸೋಮವಾರ ತಮ್ಮನಿಗೆ ಏನೋ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳಂತೆ. ಅದಾದ ಮೇಲೆ ಪರೀಕ್ಷೆ, ರಜೆ ಬಂದಿದ್ದರಿಂದ ಮತ್ತೆ ೨ ತಿಂಗಳು ಆಕೆ ಸಿಗಲೇ ಇಲ್ಲ.

ಮೂರನೆಯ ಸೆಮಿಸ್ಟರ್ ಪ್ರಾರಂಭವಾದ ಮೇಲೆ ಆಕೆಯದು ಬೇರೆ ಬ್ರಾಂಚ್ ಆಗಿದ್ದರಿಂದ ಬೇರೆ ಎಲ್ಲಿಯೋ ಇರುತ್ತಿದ್ದಳು. ಆಗಾಗ ಅಲ್ಲಲ್ಲಿ ಕಂಡಾಗ ಮುಗುಳ್ನಗುತ್ತಿದ್ದಳು. ಒಮ್ಮೆ ರೀಡಿಂಗ್ ರೂಮಿನಲ್ಲಿ ಸಿಕ್ಕಾಗ ತನ್ನ ತಂದೆಗೆ ಬಡ್ತಿ ಸಿಕ್ಕಿದೆಯೆಂದೂ, ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯೆಂದೂ ತಿಳಿಸಿದ್ದಳು. ನಂತರ ಎಷ್ಟೋ ದಿನಗಳ ಕಾಲ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಬಹಳ ದಿನಗಳ ಮೇಲೆ ಹೀಗೇ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದಾಗ ಆಕೆಯ ವಿಷಯ ಬಂದಿತು. ಆಕೆ ಇಂಜಿನಿಯರಿಂಗ್ ಅನ್ನು ಬಿಟ್ಟುಬಿಟ್ಟಿದ್ದಳಂತೆ. ತಮ್ಮನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹಣ ಬೇಕಿದ್ದರಿಂದ ಎಲ್ಲಿಯೋ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ...

ಹೌದು, ಸ್ವಲ್ಪ ದಿನಗಳ ಹಿಂದೆ ತಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ೯೭% ತೆಗೆದಿದ್ದಾನೆ ಎಂದು ಹೇಳಿ ಸ್ವೀಟ್ ಕೊಟ್ಟು ಖುಷಿ ಪಟ್ಟಿದ್ದಳು. ಈಗ ಅದೇ ತಮ್ಮನಿಗಾಗಿ ತನ್ನ ವಿದ್ಯಾಭ್ಯಾಸ ತ್ಯಜಿಸಿದ್ದಳು. ಅದೇ ಕೊನೆ, ಅದಾದ ಮೇಲೆ ಆಕೆ ನನಗೆ ಕಾಣಲೇ ಇಲ್ಲ.
***

"ಕುಡ್ದಾಗಿದ್ರೆ ಲೋಟ ತಂದು ಕೈಸಾಲೆಲ್ಲಿ ಇಡು" ಎಂದು ಅಮ್ಮ ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದು. ಕಾಫಿ ತಣ್ಣಗಾಗಿತ್ತು. ಮಳೆ ನಿಂತಿತ್ತು. ಕಣ್ಣಿನಲ್ಲಿ ಹನಿ ಮೂಡಿತ್ತು.

ಮಂಗಳವಾರ, ಸೆಪ್ಟೆಂಬರ್ 16, 2008

ಮರೆಯಲಾಗದ ತೂತುಕುಡಿ ಎಕ್ಸ್​ಪ್ರೆಸ್!

ಇದು ಕಳೆದ ತಿಂಗಳು ನಾನು ನನ್ನ ಗೆಳೆಯರೊಂದಿಗೆ ಹೋಗಿ ಬಂದ ಪ್ರವಾಸ ಕಥನ.

ಮತ್ತದೇ ಏಕತಾನತೆಯಿಂದ ಬೇಸರವಾಗಿತ್ತು. ಮುಂದಿನ ಪಯಣಕ್ಕೆ ಸ್ಥಳ ಹುಡುಕಾಟ ಪ್ರಾರಂಭವಾಗಿತ್ತು. ಕಾಲೇಜಿನಲ್ಲಿದ್ದಾಗ ಜೋಗ ಪ್ರವಾಸ ತಪ್ಪಿಸಿಕೊಂಡಿದ್ದ ವಿಜಯ್-ವಿನಯ್ ಗೆ ಈಗ ಅಲ್ಲಿಗೆ ಹೋಗುವ ತೆವಲು ಬಂದುಬಿಟ್ಟಿತ್ತು. ಮಳೆಗಾಲ ಆಗಷ್ಟೆ ಆರಂಭವಾಗಿದ್ದರಿಂದ ಲಿಂಗನಮಕ್ಕಿ ಇನ್ನೂ ತುಂಬಿರಲಿಲ್ಲ. ಜೋಗದಲ್ಲಿ ನೀರಿರದಿದ್ದರೆ ಮಳೆಯಲ್ಲಿ ನೆನೆಯಲು ಅಲ್ಲಿಗೆ ಹೋದಂತಾಗುವುದಿಲ್ಲವೇ? ಹಾಗಾಗಿ ಗುಡ್ಡಬೆಟ್ಟ ಸುತ್ತುವುದು, ದೊಡ್ಡ ಜಲಪಾತಗಳಿಗೆ ಹೋಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಸುಮಾರು ಗೂಗ್ಲಿಂಗ್ ಮಾಡಿ ರಂಗನತಿಟ್ಟು, ಬಲಮುರಿಗೆ ಹೋಗಿ ಬಂದರೆ ಹೇಗೆ ಎಂದು ಕೇಳಿ ಕೆಲವರಿಗೆ ಮೇಲ್ ಕಳಿಸಿದೆ. ಒಂದರ್ಧ ಘಂಟೆಯಲ್ಲಿ ಸಕಾರಾತ್ಮಕ ಉತ್ತರ ಬಂತು. ಪ್ರವಾಸ ಇಷ್ಟ ಪಡುವವರೇ ಹಾಗೆ, ತಕ್ಷಣ ಓಕೆ ಅಂದುಬಿಡುತ್ತಾರೆ...

ನಾನು, ವಿಜಯ್, ವಿನಯ್ ಸ್ಥಳ ನಿರ್ಧರಿಸಿದೆವು. ಚಂದ್ರಕಾಂತ ಮತ್ತು ಅವನ ತಮ್ಮ ಕೂಡ ಬರಲೊಪ್ಪಿದರು. ಗುರುವಾರ ಸಂಜೆ ಕೆಲವರಿಗೆ ಫೋನ್ ಮಾಡಿ ತಿಳಿಸಿದೆವು. ಸೋಮ ಬರುತ್ತೇನೆಂದ. ಪ್ರವೀಣ ಊರಿಗೆ ಹೋಗಬೇಕಾದ್ದರಿಂದ ಬರಲಾಗುವುದಿಲ್ಲವೆಂದ. ಅಷ್ಟಕ್ಕೆ ಬಿಡಬಾರದೇ... ರಂಗನತಿಟ್ಟಿನಲ್ಲಿ ನೀರು ಹೆಚ್ಚಾಗಿ ಬೋಟಿಂಗಿಗೆ ಬಿಡುತ್ತಿಲ್ಲ ಎಂದು ತಲೆಯಲ್ಲಿ ಹುಳ ಬಿಟ್ಟ. ಏನೇ ಆದರೂ ಅಲ್ಲಿಗೆ ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದೆವು. ಸಂತೋಷ್ ಜೊತೆ ಚಾಟ್ ಮಾಡುತ್ತಿದ್ದ ನಾನು ಅವನನ್ನೂ ಕೇಳಿದೆ. ಅವನು ಕ್ಷಣವೂ ಯೋಚಿಸದೆ ಬರುತ್ತೇನೆ ಎಂದಿದ್ದು ನೋಡಿ ನನಗೂ ಆಶ್ಚರ್ಯವಾಯಿತು. ಬೆಂಗಳೂರು ಎಲ್ಲರ ಮೇಲೂ ತನ್ನ ಪ್ರಭಾವ ಬೀರಿದೆ ಎಂದುಕೊಂಡೆ. ಇನ್ನೂ ಕೆಲವರಿಗೆ ಏನೇನೋ ತೊಂದರೆಗಳಿದ್ದವಾದ್ದರಿಂದ ಬರಲಾಗುವುದಿಲ್ಲ ಎಂದರು.

ಸರಿ, ಶನಿವಾರ ಬೆಳಿಗ್ಗೆ ೬:೩೦ ರ ರೈಲಿನಲ್ಲಿ ಹೋಗುವುದು ಎಂದು ಎಲ್ಲರಿಗೂ ತಿಳಿಸಿದೆವು. "೫ ಘಂಟೆಗೆ ಮನೆ ಬಿಟ್ಟುಬಿಡು, ಬಸ್ ಸಿಕ್ಕಿ ಅಲ್ಲಿಗೆ ಬರುವಷ್ಟರಲ್ಲಿ ೬ ಆಗಿರುತ್ತದೆ" ಎಂದು ವಿನಯ್ ತನ್ನ ಲಾಜಿಕ್ ಮಂಡಿಸಿದ. ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ನನಗೂ ಗೊತ್ತು. ಆದರೆ ಹ್ಞೂ ಎನ್ನಲು ನನ್ನ ಗಂಟೇನು ಹೋಗಬೇಕು? ಸರಿ ಎಂದು ೫ ಕ್ಕೆ ೫ ನಿಮಿಷ ಇರುವಾಗ ಅಲಾರಂ ಇಟ್ಟು ಮಲಗಿದೆ.

ಬೆಳಿಗ್ಗೆ ಎದ್ದು ಇನ್ನೂ ಬಾತ್‌ರೂಮ್‌ಗೆ ಹೋಗಿದ್ದೆನಷ್ಟೇ.. ಮೊಬೈಲ್ ಹೊಡೆದುಕೊಳ್ಳಲಾರಂಭಿಸಿತು. ಹೊರಗೆ ಬರುವಂತಿಲ್ಲವಲ್ಲ!! ಎಲ್ಲ ಮುಗಿಸಿ ಹೊರ ಬರುವಷ್ಟರಲ್ಲಿ ೫:೧೫ ಆಗಿತ್ತು. ತಿರುಗಿ ಫೋನ್ ಮಾಡಿದೆ. ಅವರಿನ್ನೂ ರೆಡಿಯಾಗುತ್ತಿದ್ದರು. ಸಂತೋಷನಿಗೆ ಆರಾಮ್ ಇಲ್ಲ, ಹಾಗಾಗಿ ಬರುವುದಿಲ್ಲ ಎಂದು ತಿಳಿಯಿತು.

ಅಂತೂ ಇಂತೂ ೫:೪೫ ಸುಮಾರಿಗೆ ಬಸ್ ಹತ್ತಿ ಮತ್ತೆ ಫೋನ್ ಮಾಡಿದೆ. ಆಗಷ್ಟೆ ಅವರೆಲ್ಲ ಮನೆ ಬಿಟ್ಟಿದ್ದರು. ಸಿ.ವಿ.ರಾಮನ್ ನಗರದಿಂದ ಮೆಜೆಸ್ಟಿಕ್‌ಗೆ ಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆ ಬೇಕು. ರೈಲು ಸಿಕ್ಕ ಹಾಗೆ! ಕರ್ಮಕಾಂಡ ಎಂದುಕೊಳ್ಳುತ್ತಾ ಸೋಮನಿಗೆ ಫೋನ್ ಮಾಡಿದರೆ ಎತ್ತುತ್ತಲೇ ಇಲ್ಲ ಆಸಾಮಿ!!

ನಾನು ಮೆಜೆಸ್ಟಿಕ್‌ಗೆ ಹೋಗಿ ರೈಲಿನ ಬಗ್ಗೆ ವಿಚಾರಿಸಿದೆ. ೬:೩೦ಕ್ಕೆ ಒಂದು, ೭:೦೦ಕ್ಕೆ ಒಂದು ರೈಲಿರುವುದು ತಿಳಿಯಿತು. ಅಷ್ಟರಲ್ಲಿ ಸೋಮ ಬಂದ. ಉಳಿದ ನಾಲ್ವರು ಇನ್ನೂ ಬರಬೇಕಾಗಿದ್ದರಿಂದ ಮೊದಲ ರೈಲಿನ ಆಸೆ ಬಿಟ್ಟೆವು. ಸೋಮ ನಾನು ಟಿಕೆಟ್ ತೆಗೆಸಲು ಸಾಲಿನಲ್ಲಿ ನಿಂತಿದ್ದಾಗ ವಿಜಯ್-ವಿನಯ್-(ಚಂದ್ರ)ಕಾಂತ-ಪ್ರಶಾಂತರ ಆಗಮನವಾಯಿತು. ಶ್ರೀರಂಗಪಟ್ಟಣಕ್ಕೆ ಟಿಕೆಟ್ ತೆಗೆಸಿ ಪ್ಲಾಟ್‌ಫಾರ್ಮ್ ಹುಡುಕುವಷ್ಟರಲ್ಲಿ ರೈಲು ಬಂದಿತು.

ಅದೇ ತೂತುಕುಡಿ (Tuticorin) ಎಕ್ಸ್​​ಪ್ರೆಸ್.

ಶ್ರೀರಂಗಪಟ್ಟಣದ ರೈಲ್ವೇ ಸೇತುವೆಯ ಮೇಲೆ
ಪಟ್ಟಣದ ರೈಲ್ವೇ ಸೇತುವೆಯ ಮೇಲೆ...

ಮೆಜೆಸ್ಟಿಕ್‌ನಲ್ಲಿ ರೈಲು ನಿಂತಿದ್ದಾಗ ಮೀನಿನ ಕೆಟ್ಟ ವಾಸನೆ ಹೊಡೆಯುತ್ತಿದ್ದುದನ್ನು ಬಿಟ್ಟರೆ ಏನೂ ತೊಂದರೆಯಾಗಲಿಲ್ಲ. ರೈಲಿನಲ್ಲಿಯೇ ತಿಂಡಿ ತಿಂದೆವು. ಮೂರೂವರೆ ತಾಸಿನ ಪಯಣದ ನಂತರ ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣ ಬಂತು. ಅಲ್ಲಿ ಇಳಿದು ಆಚೆ-ಈಚೆ ನೋಡಿದೆವು. ರೈಲಿನ ಬ್ರಿಡ್ಜ್ ಕಂಡಿತು. ರೈಲು ಹೋದ ಮೇಲೆ ಅದರ ಹಿಂದೆ ನಾವೂ ಹೋದೆವು. ಅಲ್ಲಿನ ನೋಟ ಸುಂದರವಾಗಿತ್ತು. ರಂಗನತಿಟ್ಟಿಗೆ ಹೋಗುವ ದಾರಿಯನ್ನು ಕೇಳಿ ನಮ್ಮ ಚಾರಣ ಆರಂಭಿಸಿದೆವು.

ರಂಗನತಿಟ್ಟು
ರಂಗನತಿಟ್ಟಿನಲ್ಲಿ...

ಹರಟುತ್ತಾ ನಡೆಯುತ್ತಿದ್ದರೆ ದಾರಿ ಸವೆಸಿದ್ದೆ ತಿಳಿಯುವುದಿಲ್ಲ. ಬಹುಬೇಗ ೪ ಕಿಲೋಮೀಟರ್ ನಡೆದಿದ್ದೆವು. ರಂಗನತಿಟ್ಟು ಬಂದಿತ್ತು. ಎಲ್ಲರೂ ಟಿಕೆಟ್ ತೆಗೆದುಕೊಂಡು ಒಳಗೆ ಹೋದೆವು. ಬೋಟಿಂಗ್ ನಡೆಯುತ್ತಿತ್ತು. ನದಿಯಲ್ಲಿ ನೀರು ಹೆಚ್ಚುತ್ತಿತ್ತು. ನಾವು ಬೋಟಿಂಗಿಗೆ ಈಗ ಹೋಗುವುದೋ ನಂತರ ಹೋಗುವುದೋ ಎಂದು ಯೋಚಿಸುತ್ತಾ ಹೋಗುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ "ಹೋಗುವುದಾದರೆ ಬೇಗ ಹೋಗಿ, ನೀರು ಹೆಚ್ಚುತ್ತಿದೆ. ಸದ್ಯದಲ್ಲೇ ಬೋಟಿಂಗ್ ನಿಲ್ಲಿಸುತ್ತಾರೆ" ಎಂದರು.

ಅಂಬಿಗ ನಾ ನಿನ್ನ ನಂಬಿದೆ
ಅಂಬಿಗ ನಾ ನಿನ್ನ ನಂಬಿದೆ...

ಸದ್ಯ ಸಿಕ್ಕಿತಲ್ಲ ಬೋಟಿಂಗ್ ಎಂಬ ಖುಷಿಯಲ್ಲಿ ಮೊದಲು ಬೋಟಿಂಗ್ ಮುಗಿಸಿದೆವು. ಇದ್ದ ಒಂದು ೧೦ ಬಗೆಯ ಪಕ್ಷಿಗಳನ್ನು, ಮೊಸಳೆಗಳನ್ನು ನೋಡಿ ದಡಕ್ಕೆ ಬಂದೆವು. ಹೊರಡುವಾಗ ಇದ್ದಿದ್ದಕ್ಕಿಂತ ಹೆಚ್ಚು ನೀರು ಬಂದಿತ್ತು. ನಮ್ಮದೇ ಕಡೆಯ ದೋಣಿ.. ನೀರಿನ ಸೆಳೆತ ಹೆಚ್ಚಿದ್ದರಿಂದ ಅದಾದ ನಂತರ ಯಾರನ್ನೂ ಬಿಡಲಿಲ್ಲ. ನಮ್ಮ ಅದೃಷ್ಟವನ್ನು ಮೆಚ್ಚಿಕೊಳ್ಳುತ್ತಾ ಮುಂದೆ ನಡೆದೆವು. ಬೋಟಿಂಗ್ ಇಲ್ಲ ಎಂದು ಹಿಂದಿನ ದಿನ ಹುಳ ಬಿಟ್ಟಿದ್ದ ಪ್ರವೀಣನಿಗೆ ಸೋಮನಿಂದ ಫೋನಾಯಣ. ಪಕ್ಷಿಗಳನ್ನು, ಬೋಟಿಂಗ್ ನಲ್ಲಿ ಬಂದ ಮಜವನ್ನು ಸ್ವಲ್ಪ ಹೆಚ್ಚೇ ಎಂಬಂತೆ ವರ್ಣಿಸಿ ಆದಷ್ಟೂ ಆತನ ಹೊಟ್ಟೆ ಉರಿಸಿದ್ದಾಯಿತು.

ನಂತರ ಅಲ್ಲಿಯೇ ಊಟ ಮುಗಿಸಿ ನದಿಯ ಪಕ್ಕದಲ್ಲಿದ್ದ ಕುಟೀರದಲ್ಲಿ ಕುಳಿತೆವು. ನದಿಯ ಜುಳು-ಜುಳು ನಾದ ಹಿತವಾಗಿತ್ತು. ವಿಜಯ ಅಲ್ಲೇ ನದಿಯ ಪಕ್ಕದಲ್ಲಿ ತಾನೊಂದು ಮನೆ ಕಟ್ಟಿದರೆ ಹೇಗೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಭಿಸಿದ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮರಳಿ ಶ್ರೀರಂಗಪಟ್ಟಣಕ್ಕೆ ಹೊರಟೆವು. ನಮ್ಮ ಬದುಕಿನ ಬಗ್ಗೆ ಹರಟುತ್ತಾ ಅಲ್ಲಲ್ಲಿ ನಿಲ್ಲುತ್ತಾ ಅಂತೂ ಪಟ್ಟಣ ತಲುಪಿದೆವು.

ಅಲ್ಲಿ ಹೋಗಿ ಬಲಮುರಿ ಎಷ್ಟು ದೂರ ಎಂದು ಕೇಳಿದರೆ ೧೯ ಕಿ.ಮೀ. ಎಂದು ಹೇಳಬೇಕೆ? ಸಮಯ ಸುಮಾರು ೩ ಆಗಿತ್ತು. ಸೋಮನಿಗೆ ಬೇರೆ ದಾವಣಗೆರೆಗೆ ಹೋಗಬೇಕಿತ್ತು. ಇನ್ನೇನು ಮಾಡುವುದು? ಸರಿ ಶ್ರೀರಂಗಪಟ್ಟಣವನ್ನೇ ನೋಡಿ ಹೋದರಾಯಿತು ಎಂದು ಎರಡು ರಿಕ್ಷಾಗಳನ್ನು ಹಿಡಿದು ಹೊರಟೆವು.

ಕರ್ನಲ್ ಬೈಲಿಯ ಕಾರಾಗೃಹ
ಕರ್ನಲ್ ಬೈಲಿಯ ಕಾರಾಗೃಹದಲ್ಲಿ ಅಣ್ಣ-ತಮ್ಮ

ಟಿಪ್ಪು ಮಡಿದ ಜಾಗ, ಅವನ ಕಾರಾಗೃಹ ಮುಂತಾದ ಸ್ಥಳಗಳನ್ನು ನೋಡಿ ಮುಂದೆ ಹೋದೆವು. ಅವನ ಬೇಸಿಗೆ ಅರಮನೆಯಾಗಿದ್ದ ದರಿಯಾ ದೌಲತ್ ಈಗ ವಸ್ತುಸಂಗ್ರಹಾಲಯವಾಗಿದೆ. ನಾಣ್ಯಗಳು, ಖಡ್ಗಗಳು, ಚಿತ್ರಗಳು, ಬಂದೂಕುಗಳು ಹೀಗೆ ಎಲ್ಲವನ್ನೂ ನೋಡುತ್ತಾ ಹೊರಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆಯಾಗಿರಬೇಕು. ಅಲ್ಲೇ ಸುತ್ತಲಿರುವ ಉದ್ಯಾನದಲ್ಲಿ ಸ್ವಲ್ಪ ಸಮಯ ಕೂತು ಟಿಪ್ಪು ಸುಲ್ತಾನ್, ಆತನ ತಾಯಿ, ತಂದೆ ಹೈದರಾಲಿ ಮತ್ತಿತರನ್ನು ಹೂತಿರುವ ಜಾಗವಾದ ಗುಂಬಜ್ ಗೆ ಹೋಗಿ, ಸುಂದರ ಗುಮ್ಮಟವನ್ನೂ ಟಿಪ್ಪುವಿನ ಸಮಾಧಿಯನ್ನೂ ನೋಡಿ ಮುಂದೆ ಸಂಗಮಕ್ಕೆ ಹೋದೆವು.

ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ
ಜುಮ್ಮಾ ಮಸೀದಿ

ದರಿಯಾ ದೌಲತ್ - ಸಂಗ್ರಹಾಲಯವಾಗಿರುವ ಟಿಪ್ಪುವಿನ ಬೇಸಿಗೆ ಅರಮನೆ
ಈಗ ಸಂಗ್ರಹಾಲಯವಾಗಿರುವ ಟಿಪ್ಪುವಿನ ಬೇಸಿಗೆ ಅರಮನೆ... ದರಿಯಾ ದೌಲತ್

ಟಿಪ್ಪು ಮತ್ತು ಇತರರ ಗೋರಿಗಳಿರುವ ಗುಂಬಜ್
ಟಿಪ್ಪು ಮತ್ತು ಇತರರ ಗೋರಿಗಳಿರುವ ಗುಂಬಜ್

ಗೋರಿಗಳಿರುವ ಸುಂದರ ಗುಮ್ಮಟ
ಸುಂದರ ಗುಮ್ಮಟ

ಹೇಮಾವತಿ, ಅರ್ಕಾವತಿ ಕಾವೇರಿ, ಕಾವೇರಿಯ ಕವಲಾದ ಪಶ್ಚಿಮ ವಾಹಿನಿ ಮತ್ತು ಲೋಕಪಾವನಿ ನದಿಗಳ ಸಂಗಮ. ಅಲ್ಲಿ ತೆಪ್ಪದಲ್ಲಿ ಒಂದು ಸುತ್ತು ಹೋಗಿ ಬಂದೆವು. ಅಲ್ಲಿಂದ ನೇರವಾಗಿ ರಂಗನಾಥ ಸ್ವಾಮಿಯ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದೆವು. ಸಮಯ ೬ ಘಂಟೆಯಾಗಿತ್ತು. ಸೋಮ ಮೈಸೂರಿಗೆ ಹೋಗುವ ರೈಲು ಸಿಗಲಿ ಎಂದು ಪ್ರಾರ್ಥಿಸಿಕೊಂಡ.

ನಮ್ಮನ್ನು ಹಳಿ ತಪ್ಪಿಸಿದ ರೈಲು
ನಮ್ಮನ್ನು ಹಳಿ ತಪ್ಪಿಸಿದ ರೈಲು

ಎಲ್ಲ ಸ್ಥಳಗಳ ಭೇಟಿ ಮುಗಿಸಿ ರೈಲ್ವೆ ನಿಲ್ದಾಣಕ್ಕೆ ಹೋಗುವಷ್ಟರಲ್ಲಿ ಮೈಸೂರಿಗೆ ಹೋಗುವ ರೈಲು ಹೋಗಿಬಿಟ್ಟಿತ್ತು. ಸೋಮ ಸುಮಾರು ಎರಡು ಕಿಲೋಮೀಟರ್ ದೂರದ ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹಿಡಿಯಬೇಕಿತ್ತು. ಆದರೆ ಸದ್ಯದಲ್ಲೇ ಬೆಂಗಳೂರಿಗೆ ಹೋಗುವ ರೈಲು ಬರಲಿದೆ ಎಂದು ತಿಳಿಯಿತು. ತಡಮಾಡದೆ ಅದರಲ್ಲಿ ಹೋಗುವುದು ಎಂದು ನಿರ್ಧರಿಸಿದೆವು. ವಿಜಯ ಕೆ.ಆರ್.ಪುರಂ ಗೆ ಟಿಕೆಟ್ ತೆಗೆಸೋಣ ನಮ್ಮೆಲ್ಲರ ಮನೆಗೂ ಹತ್ತಿರವಾಗುತ್ತದೆ ಎಂದ. ಸೋಮನಿಗೆ ಟಾಟಾ ಹೇಳಿ ಕೆ.ಆರ್.ಪುರಂಗೆ ಟಿಕೆಟ್ ತೆಗೆಸಿದೆವು. ಅಷ್ಟರಲ್ಲಿ ರೈಲು ಬಂದು ನಿಂತುಬಿಟ್ಟಿತ್ತು. ಆಹಾ! ಎಲ್ಲರೂ ರೈಲಿಗೆ ಕಾದರೆ ಇಲ್ಲಿ ರೈಲೇ ನಮಗಾಗಿ ಕಾದಿತ್ತು. ನಾವು ಒಳಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ನಿಧಾನವಾಗಿ ಹೊರಟಿತು.

ನಾವು ಬೆಳಿಗ್ಗೆ ಬಂದಿದ್ದ ಅದೇ ತೂತುಕುಡಿ ಎಕ್ಸ್​​‌ಪ್ರೆಸ್.

ಮುಂದೆ ೯ ಘಂಟೆಗೆ ಕೆ.ಆರ್.ಪುರಂ, ೯:೩೦ ಗೆ ಮನೆ ಎನ್ನುತ್ತಾ ಚಂದ್ರಕಾಂತ ನಿದ್ದೆಗೆ ಶರಣಾದ. ಉಳಿದ ನಾವು ನಾಲ್ಕು ಜನ ಮಧ್ಯ ಮಧ್ಯ ಹರಟುತ್ತಾ, ತಿನ್ನುತ್ತಾ, ಹಾಡು ಕೇಳುತ್ತಾ ಸಮಯ ಕಳೆದೆವು. ೯:೩೦ ರ ಸುಮಾರಿಗೆ ರೈಲು ಮೆಜೆಸ್ಟಿಕ್ ತಲುಪಿತು. ಆದರೆ ನಾವು ಟಿಕೆಟ್ ತೆಗೆಸಿದ್ದು ಕೆ.ಆರ್.ಪುರಕ್ಕಲ್ಲವಾ.. ಹಾಗೆ ರೈಲು ಹೊರಡುವುದನ್ನೇ ಕಾಯುತ್ತಾ ಕುಳಿತೆವು. ಎಷ್ಟೆಂದರೂ ರಾಜಧಾನಿಯ ನಿಲ್ದಾಣವಲ್ಲವೇ? ಅರ್ಧ ಘಂಟೆ ರೈಲು ಅಲ್ಲೇ ನಿಂತಿತು. ಅಂತೂ ೧೦:೦೫ ರ ಸುಮಾರಿಗೆ 'ಬೆಂಗಳೂರು ಸಿಟಿ' ಬಿಟ್ಟೆವು. ನಂತರ ೧೫ ನಿಮಿಷದಲ್ಲಿ ಕಂಟೋನ್ಮೆಂಟ್ ನಿಲ್ದಾಣ. ಕೆ.ಆರ್.ಪುರ ನಿಲ್ದಾಣ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಬಾಗಿಲ ಬಳಿ ಹೋಗಿ ಹೊರಗೆ ನೋಡುತ್ತಾ ನಿಂತೆವು. ಅಲ್ಲೆಲ್ಲೋ ಓಲ್ಡ್ ಮದ್ರಾಸ್ ರೋಡ್ ಕಂಡಿತು. ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ರೈಲು ನಿಧಾನವಾಗಲು ಪ್ರಾರಂಭಿಸಿತು. ಮರಳಿ ಗೂಡಿಗೆ ಬಂದೆವಲ್ಲ ಎಂದು ಎಲ್ಲರೂ ನಿಟ್ಟುಸಿರಿಟ್ಟೆವು. ಅದೋ ಬಿಗ್ ಬಜಾರ್.. ಅದೋ RMZ... ಅದೋ.. ಯಾವಾಗಲೂ ಟ್ರಾಫಿಕ್ ಜಾಮ್ ಮಾಡಿ ಎಲ್ಲರನ್ನೂ ಕಾಡುವ ಬ್ರಿಡ್ಜ್! ಇನ್ನೇನು ಕೆ.ಆರ್.ಪುರಂ ಬಂದೇ ಬಿಟ್ಟಿತು... ಓಹ್! ಇಲ್ಲ... ರೈಲು ಬಲಕ್ಕೆ ತಿರುಗುತ್ತಿದೆ.. ನಾವು ಆ ಬ್ರಿಡ್ಜ್ ಮೇಲೆ ಹೋಗುತ್ತಿದ್ದೇವೆ! ಪಕ್ಕದಲ್ಲಿ ಬಾಟಾ ಶೋರೂಂ ಕಾಣುತ್ತಿದೆ!! ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು. ಕೆ.ಆರ್.ಪುರಂನ ಕೇಬಲ್ ಬ್ರಿಡ್ಜ್ ನಮ್ಮನ್ನು ಅಣಕಿಸುತ್ತಿತ್ತು.. ನಾವೆಲ್ಲ ಕನ್​​ಫ್ಯೂಸ್ ಆಗಿದ್ದರೆ ಕಾಂತ .. "ಅಲ್ನೋಡ್ರೋ ನಮ್ಮನೆ ದಾರಿ... ನಮ್ಮನೆ... ಹೊಯ್ತಲ್ಲೋ.. ನೋಡಿದ್ರಾ" ಎಂದ... ಅಣ್ಣ-ತಮ್ಮಂದಿರ (ಜೊತೆಗೆ ಅದಕ್ಕೆ ಒಪ್ಪಿದ ನಮ್ಮ) ಐಡಿಯಾ ಎಂದಿನಂತೆ ಮತ್ತೆ ಕೈಕೊಟ್ಟಿತ್ತು.

ತೂತುಕುಡಿ ಎಕ್ಸ್​​ಪ್ರೆಸ್ ಹತ್ತಿ ನಾವು ದಾರಿ ತಪ್ಪಿದ್ದೆವು.

ರೈಲು ಕ್ಷಣ-ಕ್ಷಣಕ್ಕೂ ವೇಗ ಪಡೆದುಕೊಳ್ಳುತ್ತಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬೆಂಗಳೂರಿನಿಂದ ಸುಮಾರು ದೂರ ಹೋಗಿಬಿಟ್ಟಿದ್ದೆವು. ಮುಂದಿನ ಸ್ಟಾಪ್ ಎಲ್ಲಿದೆ ಎಂದು ಗೊತ್ತಿಲ್ಲ!! ತಮಿಳುನಾಡಿಗೆ ಹೊರಟಿದ್ದರಿಂದ ಹೊಸೂರು ಇರಬಹುದು ಎಂದು ಊಹಿಸಿದೆ. ಮನಸ್ಸಿನಲ್ಲೇ ಸರಿಯಾಗಿ ಮಾಹಿತಿ ಕೊಡದೆ ಶ್ರೀರಂಗಪಟ್ಟಣದಲ್ಲಿ ನಮಗೆ ಕೆ.ಆರ್.ಪುರಕ್ಕೆ ಟಿಕೆಟ್ ಕೊಟ್ಟವನನ್ನು ಶಪಿಸಿದೆವು. ನಮಗೆ ಚಿಂತೆಯಾಗಿದ್ದರೆ ಕಾಂತ ಮತ್ತೆ "ನೀನು ಕರ್ನಾಟಕದಿಂದ ಹೊರಗಡೆ ಯಾವಾಗಾದ್ರೂ ಹೋಗಿದೀಯ? ಇವತ್ತು ಹೋಗಬಹುದು" ಎಂದ. ಹಾಕಿ ತದುಕುವಷ್ಟು ಸಿಟ್ಟು ಬಂದಿತ್ತು. ಆದರೆ ತದುಕಲಿಲ್ಲ. ಚೈನ್ ಎಳೆಯುವ ಯೋಚನೆ ಕೂಡ ಬಂದಿತ್ತು. ಆದರೆ ಅದು ತಪ್ಪು ಎಂದು ತಿಳಿದಿದ್ದರಿಂದ ತೆಪ್ಪಗೆ ನಿಂತೆವು... ನಿಂತೆವು?... ಹೌದು.. ಕೂರಲು ಜಾಗವಿರಲಿಲ್ಲ.

ಸುಮಾರು ೨೫ ನಿಮಿಷ ಹಾಗೇ ಹೋಗಿ ರೈಲು ಅದ್ಯಾವುದೋ ಜಾಗದಲ್ಲಿ ನಿಧಾನಿಸಿ ನಿಂತಿತು. ಅದನ್ನೇ ಕಾಯುತ್ತಿದ್ದ ನಾವು ಐದೂ ಮಂದಿ ಹಾರಿಕೊಂಡೆವು. ಯಾವುದೋ ಹಳ್ಳಿಯಿರಬೇಕು.. ಪ್ಲಾಟ್‌ಫಾರ್ಮ್ ಇರಲಿಲ್ಲ. ಅಲ್ಲಿದ್ದ ನಿಲ್ದಾಣದಲ್ಲಿ "ಕಾರ್ಮಿಲ್ಲರಾಂ" ಎಂದು ಕನ್ನಡದಲ್ಲೇ ಬರೆದಿದ್ದರು. ಸದ್ಯ ಇನ್ನೂ ಕರ್ನಾಟಕ ಬಿಟ್ಟಿಲ್ಲ ಎಂದು ನಮಗೆ ಸಂತೋಷವಾದರೆ ಕಾಂತ "ಛೆ, ತಮಿಳುನಾಡು ನೋಡುವ ಅವಕಾಶ ತಪ್ಪಿಹೋಯಿತು" ಎಂದು ಗೊಣಗಿಕೊಂಡ. ಹಾಗೇ ಸ್ಟೇಷನ್ ನ ಒಳಗೆ ಹೋದಾಗ ಒಬ್ಬ ಸ್ಟೇಷನ್ ಮಾಸ್ಟರ್ ಕಂಡ. ವಿಜಯ ಆತನನ್ನೇ ವಿಚಾರಿಸಿದ. ಆತ "ಈಗ ನಿಮಗೆ ಬಸ್ ಸಿಗುವುದಿಲ್ಲ.. ೯:೧೫ ಕ್ಕೆ ಕೊನೆಯ ಬಸ್.. ರೈಲು ಇರುವುದು ಬೆಳಿಗ್ಗೆಯೇ.. ಹೀಗೇ ಹೋಗಿ, ಮೇನ್ ರೋಡ್ ಸಿಗುತ್ತೆ.. ಟೆಂಪೋ ಲಾರಿ ಏನಾದರೂ ಸಿಗಬಹುದು" ಎಂದು ಹೇಳಿ ಕಳುಹಿಸಿದ. ಇವನು ಗೋಣಾಡಿಸಿಕೊಂಡು ಬಂದ. ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ೩ ದಾರಿಗಳು ಎದುರಾದವು. ಎತ್ತ ಹೋಗಬೇಕೆಂದು ತಿಳಿದಿರಲಿಲ್ಲ. ಮತ್ತೆ ವಿಜಯ ತಿರುಗಿ ಹೋಗಿ ಕೇಳಿಕೊಂಡು ಬಂದ. ಹಾಗೇ ಸುಮಾರು ೧ ಕಿಲೋಮೀಟರ್ ನಡೆದೆವು. ಯಾವುದೋ ಒಂದು ಹೈವೇ ಸಿಕ್ಕಿತು. ಹತ್ತೂಮುಕ್ಕಾಲು ಘಂಟೆಯಾಗಿತ್ತು. ಒಂದು ಅಂಗಡಿಯೂ ತೆರೆದಿರಲಿಲ್ಲ. ನಾವು ಕೈ ಮಾಡಿದ ಯಾವ ವಾಹನಗಳೂ ನಿಲ್ಲಲಿಲ್ಲ. ಅಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಬಿಟ್ಟರೆ ಒಬ್ಬನೇ ಒಬ್ಬ ನರಪಿಳ್ಳೆಯ ಸುಳಿವೂ ಇಲ್ಲ!!

ಹಾಗೇ ಏನಾದರೂ ಯಾರಾದರೂ ಸಿಗಬಹುದೆಂದು ಮುಂದೆ ನಡೆಯುತ್ತಾ ಹೋದೆವು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಹೋಟೆಲ್ ಬಾಗಿಲು ಹಾಕಿ ಅದರ ಕೆಲಸಗಾರರು ಹೋಗುತ್ತಿದ್ದರು. ಅವರ ಬಳಿ ಅದು ಯಾವ ಸ್ಥಳ ಎಂದು ಕೇಳಿದೆವು. ಅದು ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿ ಎಂಬ ಊರಾಗಿತ್ತು. ಅಲ್ಲಿ ಶುರುವಾಯಿತು ನಮ್ಮ ಪರದಾಟ. ಯಾವ ವಾಹನಗಳನ್ನೂ ನಿಲ್ಲಿಸುತ್ತಿಲ್ಲ, ಕ್ಯಾಬ್​ಗಳು ಕಾಣುತ್ತಿಲ್ಲ... ಏನು ಮಾಡುವುದೆಂದು ಯೋಚಿಸುತ್ತಿರುವಾಗ ಅಣ್ಣ ತಮ್ಮಂದಿರ ವಿಚಾರ ಲಹರಿ ಎತ್ತೆತ್ತಲೋ ಸಾಗಿತ್ತು. ಮಲ್ಲಿಗೆ (ಮಲ್ಲಿ=ಮಲ್ಲಿಕಾರ್ಜುನ) ಕಾಲ್ ಮಾಡಿ ಆ ಸ್ಥಳದ ಅಕ್ಷಾಂಶ, ರೇಖಾಂಶ (latitude, longitude) ವಿಚಾರಿಸಿದರು. ಕರ್ಮಕಾಂಡ! ಅದರ ಜೊತೆ ಬಿ.ಎಂ.ಟಿ.ಸಿ ಬಸ್ ಸಂಖ್ಯೆ, ಅವುಗಳ ವೇಳಾಪಟ್ಟಿ ಎಲ್ಲಾ ವಿಚಾರಿಸಿದ್ದಾಯಿತು... ಅವನ್ನೆಲ್ಲ ತಿಳಿದುಕೊಂಡು ಏನು ಮಾಡಿದರೋ ಗೊತ್ತಿಲ್ಲ.

ಅಷ್ಟರಲ್ಲಿ ಅಲ್ಲೊಂದು ಕ್ಯಾಬ್ ಕಂಡಿತು. ಹೋಗಿ ವಿಚಾರಿಸಿದೆ. ೫೦೦ ರೂ ಹೇಳಿದ. ಸುಮ್ಮನೆ ಹೋಗಬಹುದಿತ್ತು. ಆದರೆ ಚಂದ್ರಕಾಂತನ ಚೌಕಾಶಿ ವ್ಯಾಪಾರಕ್ಕೆ ಬೇಸತ್ತು ಆ ಶೀಘ್ರಕೋಪಿ (short-tempered) ಡ್ರೈವರ್ ಹೋಗಿಯೇ ಬಿಟ್ಟ.

ಸರಿ ಇನ್ನೇನು ಮಾಡುವುದು ಎನ್ನುತ್ತಾ ಆಚೀಚೆ ನೋಡುತ್ತಿರುವಾಗ ವಿನಯನಿಗೆ ಒಂದು (ನಿಜಕ್ಕೂ) ಒಳ್ಳೆಯ ಉಪಾಯ ಹೊಳೆಯಿತು. ತನ್ನ ಆಫೀಸಿನ ಕ್ಯಾಬ್​​ಗೆ ಕರೆ ಮಾಡಿ ಕರೆಸಿದ. ಆ ಕ್ಯಾಬ್ ಡ್ರೈವರ್​​ಗೆ ನಾವೆಲ್ಲಿದ್ದೇವೆ ಎಂದು ತಿಳಿದಿರಲಿಲ್ಲ (ಅಸಲಿಗೆ ನಮಗೇ ತಿಳಿದಿರಲಿಲ್ಲ). ಆದರೂ ಕಷ್ಟ ಪಟ್ಟು ಅಲ್ಲಿಗೆ ಹುಡುಕಿಕೊಂಡು ಬಂದ. ಅವನಿಗೆ ಥ್ಯಾಂಕ್ಸ್ ಹೇಳಲೇ ಬೇಕು.

ಬಾಂಬ್ ದಾಳಿಯಿಂದ ಕಂಗೆಟ್ಟಿದ್ದ ಬೆಂಗಳೂರಿನಲ್ಲಿ ಪೊಲೀಸರ ಕಾಟ ಬೇರೆ. ಹಾಗಾಗಿ ಒಂದು ಇಂಡಿಕಾದಲ್ಲಿ ಐದು ಜನ ಹೇಗೋ ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಂಡೆವು. ಅಂತೂ ಬೆಂಗಳೂರಿಗೆ ಸುರಕ್ಷಿತವಾಗಿ ಬಂದು ಮುಟ್ಟಿದೆವು.

ನಾವು ಹತ್ತಿದ್ದ ತೂತುಕುಡಿ ಎಕ್ಸ್​​ಪ್ರೆಸ್ ಮರೆಯಲಾಗದ ಒಂದು ಅನುಭವ ತಂದಿತ್ತು.

ಶನಿವಾರ, ಸೆಪ್ಟೆಂಬರ್ 13, 2008

ಜೀವಕ್ಕೆ ಬೆಲೆಯೆಲ್ಲಿದೆ?

ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...

ಇದಕ್ಕೆ ಕೊನೆಯೆಂದು? ಎಲ್ಲಿ?

ಮೊನ್ನೆ ೯/೧೧. ಅದು ಆಗಿ ೭ ವರ್ಷಗಳಾಗಿವೆ. ವಿಶ್ವದಾದ್ಯಂತ ಅದನ್ನು ನೆನಪಿಟ್ಟುಕೊಂಡು ಶೋಕ ಆಚರಿಸುತ್ತಾರೆ. ಭಾರತದಲ್ಲಿ ಲೆಕ್ಕವಿಲ್ಲದಷ್ಟು ದಾಳಿಗಳಲ್ಲಿ ಲೆಕ್ಕ ತಪ್ಪುವಷ್ಟು ಜನ ಮಡಿದಿದ್ದಾರೆ. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ತಮ್ಮ ಸುತ್ತಮುತ್ತ ಏನಾದರೂ ಆದರೆ ಎಲ್ಲೂ ಹೋಗದೆ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಬೇರೆಡೆ ಆದ ದಾಳಿಗಳಿಗೂ ಇವರಿಗೂ ಸಂಬಂಧವೇ ಇರುವುದಿಲ್ಲ. ೧೧೫ ಕೋಟಿ ಜನರಲ್ಲಿ ೧೫ ಜನ ಸತ್ತರೆ ಯಾರಿಗೆ ಏನು ನಷ್ಟ ಎಂಬ ಧೋರಣೆಯೆ? ಸತ್ತವರೇನು ನಮ್ಮ ನೆಂಟರಲ್ಲ ಎಂಬ ಭಾವನೆಯೆ?

೨೦೦೫ರ ಡಿಸೆಂಬರ್ ೨೮ರಂದು ಭಾರತೀಯ ವಿಜ್ಞಾನ ಮಂದಿರದ (IISc) ಮೇಲೆ ನಡೆದ ಮೇಲೆ ಅಲ್ಲಿನ ಸೆಕ್ಯುರಿಟಿ ಹೆಚ್ಚಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿಗೆ ಹೋದರೆ ನಿಮ್ಮನ್ನು ಕೇಳುವವರೆ ಇರುವುದಿಲ್ಲ. ವಾಹನ ತೆಗೆದುಕೊಂಡು ಹೋದರೆ ತಡೆದು ನಿಲ್ಲಿಸುತ್ತಾರೆ. ನೀವು ಏನೇ ಹೇಳಿ, ಒಳಗೆ ಬಿಡುತ್ತಾರೆ, ಹೆಚ್ಚೆಂದರೆ ಒಂದು ಎಂಟ್ರಿ ಮಾಡಿ ಎನ್ನುತ್ತಾರೆ; ಮುಗಿಯಿತು. ಮುಂದೆಲ್ಲೂ ಯಾರೂ ಏನನ್ನೂ ಕೇಳುವುದಿಲ್ಲ. ಕನಿಷ್ಠ ಒಂದು ಸಣ್ಣ ಸಾಫ್ಟ್‌‍ವೇರ್ ಕಂಪೆನಿಯಲ್ಲಿ ಇರುವ ಭದ್ರತಾ ವ್ಯವಸ್ಥೆ ಕೂಡ ಇಲ್ಲ.

೨೦೦೧ರ ಡಿಸೆಂಬರ್ ೧೩ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆದಾಗ ಹಾಗೆ, ಹೀಗೆ, ಪ್ರಜಾಪ್ರಭುತ್ವಕ್ಕಾದ ಅವಮಾನ ಎಂದ ರಾಜಕೀಯ ಪಕ್ಷಗಳು ಮಾಡಿದ್ದೇನು? ಅಂಥ ಕೆಲಸ ಮಾಡಿ ಸಿಕ್ಕಿ ಬಿದ್ದವರಿಗೇ ಶಿಕ್ಷೆ ಕೊಡಲು ಹಿಂದೆ ಮುಂದೆ ನೋಡುವ ಭ್ರಷ್ಟ ಸರ್ಕಾರಗಳಿಂದ ಏನನ್ನು ತಾನೇ ನಿರೀಕ್ಷಿಸಲಾದೀತು? ಇನ್ನು ಜನರಾದರೂ ಏನು ಮಾಡಲಾದೀತು?

ಇನ್ನೊಬ್ಬರನ್ನು ಕೊಲ್ಲಿ, ಹಿಂಸಿಸಿ ಎಂದು ಯಾವ ಧರ್ಮವೂ ಹೇಳುವುದಿಲ್ಲ. ಆದರೂ ಇಂತಹ ಕೃತ್ಯಗಳನ್ನು ಏಕೆ ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ. War doesn't decide who's right; it decides who's left ಎಂದು ಎಲ್ಲೋ ಕೇಳಿದ ನೆನಪು... ಜೀವಕ್ಕೆ ಬೆಲೆಯೇ ಇಲ್ಲವೆ?

ಗುರುವಾರ, ಆಗಸ್ಟ್ 28, 2008

ಸುಭಾಷಿತಗಳು

ಒಳ್ಳೆಯ ಮಾತನ್ನು ಯಾರೇ ಹೇಳಲಿ, ಹೇಗೇ ಹೇಳಲಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತದಲ್ಲಿ ಇಂಥ ಸೂಕ್ತಿಗಳ ಭಂಡಾರವೇ ಇದೆ. ಸುಭಾಷಿತಗಳ ಬಗ್ಗೆ ಹೀಗೆ ಹೇಳಲ್ಪಟ್ಟಿದೆ:

सुभाषितरसस्याग्रे सुधा भीता दिवं गता |

ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ |

ಅಂದರೆ, ಸುಭಾಷಿತದ ರಸದ ಮುಂದೆ ಅಮೃತವೂ ಕೂಡ ಹೆದರಿ ಸ್ವರ್ಗಕ್ಕೆ ಹೋಯಿತು ಎಂದು. ಸಂಸ್ಕೃತದಲ್ಲಿರುವ ಸಾವಿರಾರು ಸುಭಾಷಿತಗಳನ್ನು ಓದುತ್ತಾ ಹೋದಂತೆ ಇದು ಅತಿಶಯೋಕ್ತಿಯೆನಿಸದು.

ಭರ್ತೃಹರಿಯ ಶೃಂಗಾರ ಶತಕ, ನೀತಿ ಶತಕ, ವೈರಾಗ್ಯ ಶತಕ ಇವು ಒಂದಕ್ಕಿಂತ ಒಂದು ಚೆನ್ನಾಗಿವೆ. ಅಲ್ಲದೆ ಕಾಳಿದಾಸ, ಭಾಸ, ಮುಂತಾದ ಕವಿಗಳ ನಾಟಕ, ಕಾವ್ಯಗಳ ಮಧ್ಯೆ ಬರುವ ಸುಭಾಷಿತಗಳೂ ಅಮೂಲ್ಯ ನೀತಿಗಳನ್ನು ಹೇಳುತ್ತವೆ. ಅಲ್ಲದೆ ರಾಮಾಯಣ, ಮಹಾಭಾರತಗಳ ನಡುವೆ ಕೂಡ ಸುಭಾಷಿತಗಳು ಕಂಡುಬರುತ್ತವೆ.

ನನಗೆ ಕೆಲವು ಸುಭಾಷಿತಗಳು ಪ್ರಿಯವಾದವುಗಳು. ಬರೆಯಬೇಕೆಂದಾಗಲೆಲ್ಲ ಕೆಲವು ಸುಭಾಷಿತಗಳನ್ನು ಬರೆಯುತ್ತಿರುತ್ತೇನೆ...

ಸದ್ಯಕ್ಕೆ ನನ್ನ ಫೇವರಿಟ್ ಸುಭಾಷಿತ:

न चोरहार्यं न च राजहार्यं
न भ्रातृभाज्यं न च भारकारी |
व्यये कृते वर्धत एव नित्यं
विद्याधनं सर्वधनप्रधानम् ||

ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ ||

ಕಳ್ಳರಿಂದ ಕದಿಯಲಾಗದ, ರಾಜರಿಂದ ಕಸಿದುಕೊಳ್ಳಲಾಗದ, ಅಣ್ಣತಮ್ಮಂದಿರಲ್ಲಿ ಹಂಚಿಕೊಳ್ಳಲು ಬಾರದ, ಭಾರವಲ್ಲದ, ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯಾಧನವೇ ಎಲ್ಲ ಧನಗಳಲ್ಲಿ ಮುಖ್ಯವಾದುದು, ಉತ್ತಮವಾದುದು.

ಇವತ್ತು ಒಬ್ಬನ ಬಳಿ ೧ ಕೋಟಿ ರೂಪಾಯಿ ಇದೆ ಎಂದುಕೊಂಡರೆ ನಾಳೆ ಇರುವುದು ಅವನಿಗೇ ಅನುಮಾನ. ದರೋಡೆ ಆಗಬಹುದು, ಇನ್‌ಕಂ ಟ್ಯಾಕ್ಸ್ ದಾಳಿ ಆಗಬಹುದು ಅಥವಾ ಇನ್ನೇನೋ ಆಗಿ ಸರ್ಕಾರ ಎಮರ್ಜೆನ್ಸಿ ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಅದೇ ಸಂಪಾದಿಸಿದ ಜ್ಞಾನ ನಾಳೆ ಖಂಡಿತ ಇರುತ್ತದೆ. ಸಂಪಾದಿಸಿದ ದುಡ್ಡು ಇಡಲು ಜಾಗ ತಿನ್ನುತ್ತದೆ, ಭಾರವಾಗುತ್ತದೆ, ಆದರೆ ಇವತ್ತು ನಾನು ೨೦೦ ಪುಟ ಓದಿದೆ, ನನ್ನ ತಲೆ ೫೦ ಗ್ರಾಂ ಹೆಚ್ಚು ತೂಗುತ್ತಿದೆ ಎಂದು ಯಾರಾದರೂ ಹೇಳಲಾಗುತ್ತದೆಯೇ? ಊಹೂಂ, ಇಲ್ಲ. ಅಪ್ಪನ ಬಳಿ ೪ ಡಿಗ್ರಿ ಇದೆ. ನಾಳೆ ಮಕ್ಕಳು ಬೇರೆಯಾದರೆ ಅಣ್ಣನಿಗೆರಡು ಡಿಗ್ರಿ, ತಮ್ಮನಿಗೆರಡು ಡಿಗ್ರಿ ಇರಲಿ ಎನ್ನಲಾಗುತ್ತದೆಯೇ? ಇಲ್ಲ. ಅವರವರು ಸಂಪಾದಿಸಿದ್ದು ಅವರಿಗೆ. ಅಷ್ಟೆ ಅಲ್ಲ, ಬೇರೆ ಎಲ್ಲ ಸಂಪತ್ತುಗಳಿಗೆ ವ್ಯತಿರಿಕ್ತವಾಗಿ ವ್ಯಯಿಸಿದಷ್ಟೂ, ಬೇರೆಯವರಿಗೆ ಹಂಚಿದಷ್ಟೂ ಹೆಚ್ಚಾಗುವ ಏಕೈಕ ಸಂಪತ್ತು ಜ್ಞಾನಸಂಪತ್ತು. ಹಾಗಾಗಿಯೇ, ವಿದ್ಯಾಧನಂ ಸರ್ವಧನ ಪ್ರಧಾನಂ.

ವಿ. ಸೂ: ನನಗೆ ಸುಭಾಷಿತಗಳ ಬಗ್ಗೆ ಬರೆಯಲು ಪ್ರೇರೇಪಣೆಯಾದ ಹಂಸಾನಂದಿ ಅವರಿಗೆ ಧನ್ಯವಾದಗಳು :-)

ಗುರುವಾರ, ಆಗಸ್ಟ್ 14, 2008

ನಮ್ಮ ನಾಡ ಯೋಧರು...

Indian army in Kashmir

ಧೀರ ವೀರ ಶೂರರು ನಮ್ಮ ನಾಡ ಯೋಧರು
ದೇಶವನ್ನು ಪೊರೆವರು ಸ್ವಹಿತವನ್ನು ನೋಡರು

ಜೊತೆಗೆ ಇಲ್ಲ ಬಂಧು-ಬಳಗ-ಅಕ್ಕ-ತಂಗಿ-ಅಪ್ಪ-ಅಮ್ಮ
ಸ್ವಾರ್ಥರಹಿತ ರಕ್ಷಕರಿಗೆ ಜನರೇ ಇಲ್ಲಿ ಅಣ್ಣ-ತಮ್ಮ
ಹತ್ತಬೇಕು ಗುಡ್ಡ ಬೆಟ್ಟ, ಅಲೆಯಬೇಕು ಕಾಡು-ಮೇಡು
ಇವರು ಕೂಡ ಸುಖವ ಬಯಸೆ ಹೇಗೆ ಹೇಳಿ ನಮ್ಮ ಪಾಡು?

ಗಡಿವಲಯದ ದಾಳಿಕೋರ ವೈರಿಗಳಿಗೆ ಕಲಿಗಳು
ಹೃದಯವಂತ ಮನುಜರು ಮನುಷ್ಯರೂಪಿ ಹುಲಿಗಳು
ಚಳಿಯೆ ಇರಲಿ ಮಳೆಯೆ ಇರಲಿ ಧಗೆಯೆ ಇರಲಿ ದುಡಿವರು
ನಾಡಿಗಾಗಿ ತಮ್ಮ ಪ್ರಾಣ ಲೆಕ್ಕಿಸದೇ ಮಡಿವರು

ಅಕಾಲಮೃತ್ಯು ಪಾತ್ರರಾದ ಶತ-ಶತಾದಿ ಹುತಾತ್ಮರು
ದೇಶ ಸೇವೆ ಈಶ ಸೇವೆ ಎಂದರಿತ ಮಹಾತ್ಮರು
ಪ್ರಾಣವನ್ನು ತೆತ್ತರು ಸುರಿಸಿ ತಮ್ಮ ನೆತ್ತರು
ಮತ್ತೆ ಮರಳಿ ಬಾರರಿವರು ನಾವು ಎಷ್ಟೆ ಅತ್ತರು

Indian army at Kargil


ಪ್ರತಿ ವರ್ಷ ನಮ್ಮ ದೇಶ ಸ್ವತಂತ್ರವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಸ್ವಾತಂತ್ರ್ಯ ತಂದು ಕೊಟ್ಟವರ, ಆ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹಗಲಿರುಳೆನ್ನದೆ ದೇಶ ಕಾಯುವ ಸೈನಿಕರ ಬಗ್ಗೆ ಕೂಡ ಯೋಚಿಸುವುದು ಒಳಿತಲ್ಲವೇ?

ಎಲ್ಲರಿಗೂ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಮಂಗಳವಾರ, ಜುಲೈ 29, 2008

ನಾನೊಬ್ಬ ಮೂರ್ಖ

ರೆಡ್ ಸಿಗ್ನಲ್ ಬಿದ್ದಿದೆ. ಫ್ರೀ ಲೆಫ್ಟ್ ಇಲ್ಲವೆಂದು ಬೋರ್ಡು ಹಾಕಿದ್ದಾರೆ. ಸಿಗ್ನಲ್ ಹಸಿರಾಗಲು ಕಾಯುತ್ತಾ ನಿಂತಿದ್ದೇನೆ. ನನ್ನ ಹಿಂದಿಂದ ಬಂದ ಒಬ್ಬ ನನ್ನ ಪಕ್ಕ ನಿಲ್ಲಿಸಿದ. ಆಚೀಚೆ ನೋಡಿದ. ಯಾರೂ ಪೋಲೀಸರಿಲ್ಲ. ವಾಹನಗಳೂ ಬರುತ್ತಿಲ್ಲ. ತನ್ನ ಪಾಡಿಗೆ ಎಡ ರಸ್ತೆಗೆ ತಿರುಗಿ ಹೋಗಿಬಿಟ್ಟ. ನಾನಿನ್ನೂ ಕಾಯುತ್ತಲೇ ಇದ್ದೇನೆ...
ನಾನೊಬ್ಬ ಮೂರ್ಖ.

ವೇಗವಾಗಿ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಸಿಗ್ನಲ್ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡಿದೆ. ಇದ್ದ ಬಲವನ್ನೆಲ್ಲಾ ಹಾಕಿ ಬ್ರೇಕ್ ತುಳಿದು ಬೈಕ್ ನಿಲ್ಲಿಸಿದೆ. ಅಷ್ಟರಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದೆ. ನನ್ನ ಹಿಂದಿನಿಂದ ಬಂದ ಇನ್ನೊಬ್ಬ ಇನ್ನೂ ಹಸಿರು ದೀಪವೆ ಇದೆಯೇನೋ ಎಂಬಂತೆ ಮುಂದಕ್ಕೆ ನಡೆದ. ಏನೂ ಆಗಲಿಲ್ಲ. ಆತ ಮುಂದೆ ನಡೆದ. ಮತ್ತೆ ನನ್ನ ಸರತಿ ಬರಲು ನಾನಿನ್ನೂ ೬ ನಿಮಿಷ ಕಾಯಬೇಕು...
ನಾನೊಬ್ಬ ಮೂರ್ಖ.

ಆಫೀಸಿನಿಂದ ಹೊರಗೆ ಬಂದೆ. ನನಗೆ ಹೋಗಬೇಕಾಗಿರುವುದು ಬಲಕ್ಕೆ. ಆದರೆ ಮಧ್ಯ ಡಿವೈಡರ್ ಇರುವುದರಿಂದ ಯೂ-ಟರ್ನ್ ಸಿಗುವವರೆಗೂ ಎಡಕ್ಕೆ ಹೋಗಿ ಅಲ್ಲಿ ತಿರುಗಿಸಿಕೊಂಡು ಬರಬೇಕು. ಏನಿಲ್ಲವೆಂದರೂ ೫ ನಿಮಿಷ ತಗುಲುತ್ತದೆ. ಇರಲಿ ಎಂದು ಎಡಕ್ಕೆ ಹೊರಳುತ್ತೇನೆ. ಅಲ್ಲಿ ಸಿಗ್ನಲ್ ಬಿದ್ದಿದೆ. ಅದೆಲ್ಲ ಮುಗಿದು ಮರಳಿ ಆಫೀಸಿನ ಮುಂದೆ ಬರುವಷ್ಟರಲ್ಲಿ ೧೦ ನಿಮಿಷವಾಗಿದೆ. ನನ್ನ ಸಹೋದ್ಯೋಗಿ, ಆಗಷ್ಟೆ ಹೊರಗೆ ಬಂದವನು ರಾಜಾರೋಷವಾಗಿ ಬಲಕ್ಕೆ ತಿರುಗಿ ಸ್ವಲ್ಪವೇ ದೂರದಲ್ಲಿ ಇರುವ ಕ್ರಾಸಿಂಗ್ ನಲ್ಲಿ ರಸ್ತೆ ದಾಟಿ ನನ್ನನ್ನು ಸೇರಿಕೊಂಡಿದ್ದಾನೆ. ನಾನು ಏನಿಲ್ಲವೆಂದರೂ ಒಂದೈದು ರೂಪಾಯಿ ಪೆಟ್ರೋಲ್ ಕಳೆದುಕೊಂಡೆ. ಆತ ಉಳಿಸಿದ...
ನಾನೊಬ್ಬ ಮೂರ್ಖ.

ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೆ ವಾಹನಗಳು ನಿಂತಿವೆ. ನಾನು ಕಾರನ್ನು ಅವುಗಳ ಹಿಂದೆ ನಿಲ್ಲಿಸಿದೆ. ನನ್ನ ಹಿಂದಿಂದ ಬಂದ ರಿಕ್ಷಾದವನೊಬ್ಬ ನಿಂತಿದ್ದ ಎಲ್ಲ ವಾಹನಗಳನ್ನೂ ಓವರ್ಟೇಕ್ ಮಾಡಿ ಗೇಟಿನ ಬಳಿ ಹೋಗಿ ನಿಲ್ಲಿಸಿದ. ಅವನ ಹಿಂದೆ ಇನ್ನೊಬ್ಬ ಕಾರಿನವನೂ ಅಲ್ಲೇ ಹೋಗಿ ನಿಲ್ಲಿಸಿದ. ರೈಲು ಹೋಯಿತು. ಗೇಟ್ ತೆಗೆದಾಗ ಮುಂದಿನಿಂದ ಬರುವ ವಾಹನಗಳಿಗೆ ಜಾಗವಿರಲಿಲ್ಲ. ಹಾಗಾಗಿ ಆ ರಿಕ್ಷಾ ಮತ್ತು ಕಾರಿನವರನ್ನೇ ಮೊದಲು ಬಿಡಲಾಯಿತು. ನನ್ನ ಮುಂದಿದ್ದ ಎಲ್ಲಾ ವಾಹನಗಳೂ ಹಳಿ ದಾಟಿ ನಾನು ದಾಟುವಷ್ಟರಲ್ಲಿ ೧೫ ನಿಮಿಷ ಆಯಿತು. ನಾನೂ ಆ ರಿಕ್ಷಾದವನಂತೆ ಮಾಡಬಹುದಿತ್ತೇನೋ, ಆದರೆ ಮಾಡಲಿಲ್ಲ...
ನಾನೊಬ್ಬ ಮೂರ್ಖ.

ಟ್ರಾಫಿಕ್ ಜಾಮ್ ಆಗಿದೆ. ಹಿಂದಿನಿಂದ ಅಂಬ್ಯುಲೆನ್ಸ್ ಒಂದು ಶಬ್ದ ಮಾಡುತ್ತಾ ಬರುತ್ತಿದೆ. ಹೇಗಾದರೂ ಅದಕ್ಕೆ ಜಾಗ ಮಾಡಿಕೊಡಬೇಕೆಂದು ಇದ್ದಿದ್ದರಲ್ಲೇ ಸ್ವಲ್ಪ ಆಚೀಚೆ ಸರಿದು ಅಂಬ್ಯುಲೆನ್ಸ್ ಗೆ ಜಾಗ ಮಾಡಿ ಕೊಟ್ಟೆ. ಅಷ್ಟರಲ್ಲಿ ಯಾರೋ ಒಬ್ಬ ಪಕ್ಕದಲ್ಲಿದ್ದವನು ಬೇಕೆಂದಲೇ ಅಂಬ್ಯುಲೆನ್ಸ್ ನ ಮುಂದಕ್ಕೆ ಬಂದು ನಿಂತ. ಅವನು ಸರಿಯುವವರೆಗೂ ಅಂಬ್ಯುಲೆನ್ಸ್ ಚಲಿಸುವಂತಿಲ್ಲ. ಟ್ರಾಫಿಕ್ ಪೋಲಿಸ್ ಅವನು ನಿಂತಿದ್ದ ಲೇನ್ ಅನ್ನು ಮೊದಲು ಬಿಟ್ಟು ಅಂಬ್ಯುಲೆನ್ಸ್ ಗೆ ಜಾಗ ಮಾಡಿಕೊಟ್ಟ. ಆತ ಟ್ರಾಫಿಕ್ ಜಾಮ್ ನಿಂದ ನಿಮಿಷ ಮಾತ್ರದಲ್ಲಿ ಹೊರಗೆ ಹೋದ. ನಾನಿನ್ನೂ ಇಲ್ಲೇ ನಿಂತಿದ್ದೇನೆ...
ನಾನೊಬ್ಬ ಮೂರ್ಖ.

ನಾನೆಂದು ಈ ಮೂರ್ಖತನದಿಂದ ಪಾರಾಗುತ್ತೇನೆ? ನನಗೆ ಬುದ್ಧಿ ಬರುವುದು ಯಾವಾಗ?

ಶನಿವಾರ, ಜುಲೈ 26, 2008

ಆರು ಹಿತವರೋ ಎನಗೆ

ಏಪ್ರಿಲ್ ನಲ್ಲಿ ನಡೆದ ವಿಷಯ. ಏನನ್ನೋ ತರಲು ಬ್ರಿಗೇಡ್ ರೋಡಿಗೆ ಹೋಗಬೇಕಾಗಿತ್ತು. ಟ್ರಿನಿಟಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದೆ. ಎದುರಿನಿಂದ ಒಬ್ಬ ವ್ಯಕ್ತಿ ಕುಂಟುತ್ತಾ ಬರುತ್ತಿದ್ದ. ಪೋಲಿಯೋ ಆಗಿದ್ದಿರಬೇಕು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದನೋ ಏನೋ, ನಡೆದಾಡಲು ಕಷ್ಟ ಪಡುತ್ತಿದ್ದ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್... ಐ ಡೋಂಟ್ ಹ್ಯಾವ್ ಮನಿ. ಪ್ಲೀಸ್ ಗಿವ್ ೧೦ ರುಪೀಸ್" ಎಂದು ಕೇಳಿದ. ನೋಡಿ ಕನಿಕರ ಮೂಡಿತು. ಹತ್ತು ರೂಪಾಯಿ ತೆಗೆದು ಕೊಟ್ಟೆ.

ಸುಮಾರು ಹದಿನೈದು ದಿನಗಳು ಕಳೆದಿರಬಹುದು. ಭಾನುವಾರವಾಗಿದ್ದರಿಂದ ಮಧ್ಯಾಹ್ನದ ಅಡಿಗೆಗೆ ತರಕಾರಿ ತರಲು ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿ ಬರುತ್ತಿದ್ದೆ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್..." ಎಂಬ ಧ್ವನಿ ಕೇಳಿತು. ಅದೇ ವ್ಯಕ್ತಿ! ಎಲಾ ಇವನ! ದುಡ್ಡು ಕಳೆದುಕೊಂಡು ಮೆಜೆಸ್ಟಿಕ್ಕಿಗೆ ಹೋಗುವುದು ಇವನ ಖಾಯಂ ಉದ್ಯೋಗ!! "ಸ್ವಲ್ಪ ದಿನದ ಹಿಂದೆ ಎಂ.ಜಿ.ರೋಡಿನಲ್ಲಿ ಸಿಕ್ಕಿ ಇದೇ ಕಥೆ ಹೇಳಿದ್ದೆಯಲ್ಲಾ" ಎಂದು ಗದರಿದೆ. ಅವನು ಕಕ್ಕಾಬಿಕ್ಕಿಯಾದವನಂತೆ ಕಂಡ. ಮತ್ತೇನೂ ಕೇಳದೆ ಹಾಗೇ ಮುಂದೆ ಹೋಗಿಬಿಟ್ಟ.

ಕಳೆದ ತಿಂಗಳು ಐ.ಟಿ.ಪಿ.ಎಲ್ ಪಕ್ಕದಲ್ಲಿರುವ ನಮ್ಮ ಆಫೀಸಿನ ಮುಂದೆ ನಡೆದು ಬರುತ್ತಿದ್ದೆ. ಅದೇ ವ್ಯಕ್ತಿ ಮತ್ತೆ ಕಂಡ. ಅವನಿಗೆ ನನ್ನ ಗುರುತು ಹೇಗೆ ಸಿಕ್ಕೀತು? "ಸಾರ್.." ಎಂದು ತನ್ನ ವರಸೆ ಆರಂಭಿಸಿದ. ಆದರೆ ಆತ ತನ್ನ ಬಾಯಿ ತೆಗೆಯುವಷ್ಟರಲ್ಲಿಯೇ ಅವನನ್ನು ಸುಮ್ಮನಿರಿಸಿ, ಮತ್ತೆ ಮತ್ತೆ ನನಗೇ ಗಂಟು ಬೀಳುತ್ತೀಯಾ ಎಂದು ಬೈದು ಮುಂದೆ ಹೋದೆ. ಕಾಲು ಹೀಗಾಗಿದ್ದರೂ ಈ ರೀತಿ ಜನರಿಗೆ ಸುಳ್ಳು ಹೇಳಿ ದುಡ್ಡು ಕೀಳುತ್ತಾರಲ್ಲಾ ಎಂದೆನಿಸಿತು.

ಅದಾದ ಮೇಲೆ ನನಗವನು ಕಂಡಿಲ್ಲ. ಆದರೆ ಯಾರೇ ಬೇಡುತ್ತಿರುವವರು ಕಂಡರೂ ಆತ ನನ್ನ ಮನಸ್ಸಿನಲ್ಲಿ ಪ್ರತ್ಯಕ್ಷವಾಗುತ್ತಾನೆ.

***

ಸ್ವಲ್ಪ ದಿನಗಳ ಹಿಂದೆ ರಾತ್ರಿ ಡೈರಿ ಸರ್ಕಲ್ ಬಳಿ ಬಸ್ ಕಾಯುತ್ತಾ ನಿಂತಿದ್ದೆ. ಯಾರೋ ಒಬ್ಬ ಬಂದು "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದ. ಹೌದೆಂದು ತಲೆಯಾಡಿಸಿದೆ. ಮಹಾರಾಷ್ಟ್ರದಿಂದ ಬಂದಿದ್ದಾಗಿಯೂ ತನ್ನ ಪರ್ಸ್ ಅನ್ನು ಯಾರೋ ಕದ್ದಿದ್ದಾರೆಂದೂ, ಈಗ ಇರಲು-ಉಣ್ಣಲು ದುಡ್ಡಿಲ್ಲವೆಂದೂ ತನ್ನ ಕಥೆ ಹೇಳಿದ. ತನಗೇನೂ ದುಡ್ಡು ಬೇಡ, ತನ್ನ ಮಗನಿಗೆ ಊಟಕ್ಕೆ ದುಡ್ಡು ಕೊಟ್ಟುಬಿಡಿ ಎಂದು ತನ್ನ ಮಗನನ್ನು ತೋರಿಸಿದ. ಅವನ ಹೆಂಡತಿಯೂ ಜೊತೆಯಲ್ಲಿದ್ದಳು. ಆಕೆಯೂ ದೀನವಾದ ಮುಖದಿಂದ ಬೇಡಿದಳು. ಆದರೆ ಹಿಂದಿನ ಅನುಭವದಿಂದಲೋ ಏನೋ, ಕೊಡುವುದಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಅವನು ಹೋದ ಮೇಲೆ ಏನೇನೋ ಯೋಚನೆಗಳು ಬಂದವು. ಅವನು ನಿಜವಾಗಿಯೂ ದುಡ್ಡು ಕಳೆದುಕೊಂಡವನಾಗಿದ್ದರೆ...? ಯಾರೋ ಸುಳ್ಳು ಹೇಳಿ ಭಿಕ್ಷೆ ಎತ್ತಿದ್ದರಿಂದಾಗಿ ನಿಜವಾಗಿ ಕಷ್ಟದಲ್ಲಿರುವವರೂ ಏನನ್ನೂ ಪಡೆಯಲಾಗುವುದಿಲ್ಲವಲ್ಲ ಎನಿಸಿತು.

ಮರುದಿನ ಆಫೀಸಿನಿಂದ ಮನೆಗೆ ಬರುವಾಗ ಸಂಜೆ ಮನೆಯ ಬಳಿ ಪಾನೀಪುರಿ ತಿನ್ನುತ್ತಾ ನಿಂತಿದ್ದೆ. ಹಿಂದಿನ ದಿನ ಕಂಡಿದ್ದ ಅದೇ ವ್ಯಕ್ತಿ ಅಲ್ಲಿಗೆ ಬರಬೇಕೆ? ಅವನ ಹೆಂಡತಿಯೂ ಮಗನೂ ಜೊತೆಗಿದ್ದರು. "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದಾಗ "ನಿನ್ನೆ ಡೈರಿ ಸರ್ಕಲ್ ನಲ್ಲಿ ಸಿಕ್ಕಿದ್ಯಲ್ಲಾ" ಎಂದೆ. ಕನ್ನಡದಲ್ಲಿ ನಾನು ಹೇಳಿದ್ದು ಅವನಿಗೆ ತಿಳಿಯಿತೋ ಬಿಟ್ಟಿತೋ, ಆದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ. ಅಲ್ಲಿ ಪಾನೀಪುರಿ ತಿನ್ನಲು ಬಂದವರೆಲ್ಲಾ ನನ್ನನ್ನೇ ನೋಡಲಾರಂಭಿಸಿದರು. ಅವರಲ್ಲೊಬ್ಬ "ಅವನು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ" ಎಂದ. ಆಗ ಆ ವ್ಯಕ್ತಿಯ ಪುರಾಣವನ್ನು ಅಲ್ಲಿದ್ದವರಿಗೆ ತಿಳಿಸಿದೆ. "ಹೀಗೆ ಭಿಕ್ಷೆ ಕೇಳುವವರು ಬಹಳ ಜನರಿದ್ದಾರೆ" ಎಂದು ಕೆಲವರು ಗೊಣಗಿಕೊಂಡರು.

***

ಬೆಂಗಳೂರಿನಲ್ಲಿ ಗೆಳೆಯರು, ಸಂಬಂಧಿಗಳು ಬೇಕೆಂದರೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಇವರು ಮತ್ತೆ ಮತ್ತೆ ನನಗೇ ಸಿಗುತ್ತಾರೆ ಎಂದರೆ ಅದೇನು ವಿಧಿವಿಲಾಸವೋ ಕಾಕತಾಳೀಯವೋ?

ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದೇ ತಿಳಿಯುವುದಿಲ್ಲ. ಆರು ಹಿತವರೋ ಎನಗೆ...

ಭಾನುವಾರ, ಜೂನ್ 29, 2008

ಮೀಲ್ ಪಾಸು ಮತ್ತು ಖೋಟಾ ನೋಟು...

ಎಂದಾದರೂ ಸೊಡೆಕ್ಸ್‍ಹೋ ಮೀಲ್ ಪಾಸ್ ಅಥವಾ ಟಿಕೆಟ್ ಕೂಪನ್ಗಳ ಬಗ್ಗೆ ಕೇಳಿದ್ದೀರಾ? ಕೇಳಿರದಿದ್ದರೆ ಕೇಳಿ, ಕೇಳಿದ್ದರೆ ಅದರ ಬಗ್ಗೆ ಸ್ವಲ್ಪ ಯೋಚಿಸಿ.

ಸೊಡೆಕ್ಸ್‍ಹೋ ಮೀಲ್ ಪಾಸ್ ಮತ್ತು ಟಿಕೆಟ್ ಕೂಪನ್ನು ಇತ್ತೀಚಿಗೆ ಬಹಳಷ್ಟು ಜನರ, ಅದರಲ್ಲೂ ಐಟಿ ಉದ್ಯೋಗಿಗಳ ಕೈಯಲ್ಲಿ ದುಡ್ಡಿಗೆ ಪರ್ಯಾಯವಾಗಿ ಚಲಾವಣೆಯಾಗುತ್ತಿದೆ. ಯಾವುದೇ ಮಧ್ಯಮ ಹಾಗೂ ದೊಡ್ಡ ಹೋಟೆಲ್ ಅಥವಾ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿ ಇದನ್ನು ದುಡ್ಡಿಗೆ ಬದಲಾಗಿ ತೆಗೆದುಕೊಳ್ಳುತ್ತಾರೆ. ಬಹಳಷ್ಟು ಸಾಫ್ಟ್‍ವೇರ್ ಕಂಪನಿಗಳು ಪ್ರತಿ ತಿಂಗಳೂ ಬೋನಸ್ ರೂಪದಲ್ಲಿ ಈ ಕೂಪನ್ನುಗಳನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ವಿತರಿಸುತ್ತವೆ. ೫, ೧೦, ೧೫, ೨೦, ೫೦ ಮುಂತಾದ ಮುಖಬೆಲೆಯಲ್ಲಿ ಸಿಗುವ ಈ ಪಾಸ್ "ಚಿಲ್ಲರೆ ಕೊರತೆ"ಯನ್ನು ನಿವಾರಿಸುವ ನೆಪದಲ್ಲಿ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ಇದರಿಂದಾಗುವ ಪ್ರತಿಕೂಲ ಪರಿಣಾಮಗಳೇನು ಎಂಬುದನ್ನು ಅದನ್ನು ಕೊಡುವವರಾಗಲಿ, ತೆಗೆದುಕೊಳ್ಳುವವರಾಗಲಿ ಅಥವಾ ಉಪಯೋಗಿಸುವವರಾಗಲಿ ಯೋಚಿಸಿದ್ದಾರಾ? ಯೋಚಿಸುತ್ತಾರಾ?

ತೆರಿಗೆ ಕಟ್ಟುವುದು ಕಮ್ಮಿಯಾಗುವುದೆಂಬ ನೆಪ ಒಡ್ಡಿ ಕಂಪನಿಗಳು ಹಣದ ಬದಲಿಗೆ ಕೂಪನ್ನುಗಳನ್ನು ಕೊಡುತ್ತವೆ. ತೆಗೆದುಕೊಳ್ಳುವವರೂ ಇದನ್ನು ನಂಬುತ್ತಾರೆ. ಕಮಿಷನ್ನಿನ ಆಸೆಗೋ ಇನ್ನಾವುದೋ ಆಮಿಷಕ್ಕೋ ಒಳಗಾಗಿ ಅಂಗಡಿಗಳು ಇವನ್ನು ಚಲಾವಣೆಗೆ ತರುತ್ತವೆ. ಅನಧಿಕೃತವಾಗಿದ್ದರೂ ರಾಜಾರೋಷವಾಗಿ ಬಳಕೆಯಾಗುವ ಈ ಕೂಪನ್ನುಗಳು ಕಪ್ಪು ಹಣವಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತವೆ. ಹಾಗಾದರೆ ಇದರಿಂದ ಭರ್ಜರಿ ಲಾಭವಾಗುವುದು, ಭಯಂಕರ ನಷ್ಟವಾಗುವುದು ಯಾರಿಗೆ? ಕೊಡುವವರಿಗೋ, ತೆಗೆದುಕೊಳ್ಳುವವರಿಗೋ ಅಥವಾ ಉಪಯೋಗಿಸುವವರಿಗೋ? ದುರದೃಷ್ಟವಶಾತ್ ಇವರಾರಿಗೂ ಅಲ್ಲ. ಹಾಗೇನಾದರೂ ಆಗಿದ್ದರೆ ಬಹುಶಃ ಇದು ಬಳಕೆಯಾಗುತ್ತಿರಲೇ ಇಲ್ಲ.

ಹಾಗಾದರೆ ನಿಜವಾಗಿ ಇದರಿಂದ ಹೊಡೆತ ಬೀಳುತ್ತಿರುವುದು ಯಾರಿಗೆ? ಸರ್ಕಾರಕ್ಕೆ, ಜನರಿಗೆ. ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್‌ಗೆ ತಿಂಗಳಿಗೆ ೧೦೦೦ ರೂಪಾಯಿಯ ಕೂಪನ್ ಸಿಗುತ್ತದೆ ಎಂದುಕೊಳ್ಳೋಣ. ಒಂದು ಸಾಧಾರಣ ಕಂಪನಿಯಲ್ಲಿ ೧೦೦ ಜನ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡರೆ, ಒಂದು ತಿಂಗಳಿಗೆ ಒಂದು ಕಂಪನಿಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಕೂಪನ್ನು ಚಲಾವಣೆಗೆ ಬರುತ್ತದೆ. ಇಂತಹ ಒಂದು ನೂರು ಕಂಪನಿಗಳಾದರೂ ಇಲ್ಲವೇ ಉದ್ಯಾನನಗರಿಯಲ್ಲಿ? ಪರೋಕ್ಷವಾಗಿ ಒಂದು ಕೋಟಿ ರೂಪಾಯಿಯಷ್ಟು ಕಪ್ಪು ಹಣ ಪ್ರತಿ ತಿಂಗಳೂ ಜನರ ಕೈಗೆ ಹೋದಂತಾಯಿತು. ಅದರಿಂದ ಕೂಪನ್ನುಗಳನ್ನು ತಮ್ಮ ಉದ್ಯೋಗಿಗಳಿಗೆ ಹಂಚುವ ಕಂಪನಿಗೆ ಏನು ಲಾಭವೋ ಸರಿಯಾಗಿ ಗೊತ್ತಿಲ್ಲ. ಆದರೆ ಆ ಕೂಪನ್ನನ್ನು ಪ್ರಿಂಟ್ ಮಾಡಿ ದುಡ್ಡು ತೆಗೆದುಕೊಂಡು ಮಾರುವ ಸೊಡೆಕ್ಸ್‍ಹೊ ಅಥವಾ ಟಿಕೆಟ್ಟಿನವರಿಗಂತೂ ಸುಗ್ಗಿ.

ಸೊಡೆಕ್ಸ್‍ಹೊ ಬ್ಯುಸಿನೆಸ್ ಮಾಡೆಲ್ ಪ್ರಕಾರ ಅಂಗಡಿಯವರು ಜನರಿಂದ ಅವರು ಪಡೆದ ಕೂಪನ್ನುಗಳನ್ನು ಹಿಂದಿರುಗಿಸಿ ಹಣ ಪಡೆಯಬಹುದು. ಆದರೆ ಅದೆಷ್ಟು ಅಂಗಡಿಗಳ ಜನ ಹೀಗೆ ತಮಗೆ ಸೇರಬೇಕಾದ ಹಣವನ್ನು ಹಿಂದೆ ಪಡೆದಿದ್ದಾರೋ ಗೊತ್ತಿಲ್ಲ. ಏನಿಲ್ಲವೆಂದರೂ ಶೇ. ೨೫ ರಷ್ಟಾದರೂ ಜನರ/ಅಂಗಡಿಯವರ ಬಳಿ ಇದೆ ಎಂದುಕೊಳ್ಳಬಹುದಲ್ಲವೆ? ಒಂದೊಮ್ಮೆ ನಾಳೆಯೇ ಈ ಸೊಡೆಕ್ಸ್‍ಹೊ ಕಂಪನಿ ಕೈಕೊಟ್ಟು ಮುಚ್ಚಿಕೊಂಡು ಹೋದರೆ ನಮ್ಮ ಬಳಿ ಇರುವ ಕೂಪನ್ನನ್ನು ಏನು ಮಾಡಬೇಕು? ೨೫ ಲಕ್ಷ ರೂಪಾಯಿ ಏನೂ ಇಲ್ಲದೆಯೇ ಆ ಕೂಪನ್ ಕಂಪನಿಗೆ ಹೋದಂತಾಗಲಿಲ್ಲವೇ? ಹಾಗೇನಾದರೂ ಆದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗುತ್ತದೆಯೆ? ಸರ್ಕಾರ ಅದಕ್ಕೆ ಭರವಸೆ ಕೊಡುತ್ತದೆಯೇ?

ಈಗ ಖೋಟಾ ನೋಟಿನ ವಿಷಯಕ್ಕೆ ಬರೋಣ. ಯಾರೋ ಒಬ್ಬ ಖೋಟಾ ನೋಟನ್ನು ಪ್ರಿಂಟ್ ಮಾಡಿ ಜನರಿಗೆ ಕೊಡುತ್ತಾನೆ. ಜನ ಅದು ಕಪ್ಪು ಹಣವೆಂಬ ಪರಿವೆಯಿಲ್ಲದೆ ಮಾಮೂಲಿನಂತೆ ದಿನನಿತ್ಯ ಬಳಸಲಾರಂಭಿಸುತ್ತಾರೆ. ಅವರಿಗೇನೂ ನಷ್ಟವಿಲ್ಲ. ಅಕಸ್ಮಾತ್ ಖೋಟಾ ನೋಟ್ ಚಲಾವಣೆ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ಆ ಕ್ಷಣದಲ್ಲಿ ಯಾರ ಬಳಿ ನೋಟಿರುತ್ತದೋ ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಕರಾ ಆಗುತ್ತಾನೆ. ಹಾಗಾದರೆ ಇಲ್ಲಿ ಲಾಭವಾಗಿದ್ದು ಯಾರಿಗೆ? ಪ್ರಿಂಟ್ ಮಾಡಿದ ವ್ಯಕ್ತಿಗೆ ತಾನೇ?

ನೋಡಲು ಖೋಟಾ ನೋಟು ನಿಜವಾದ ನೋಟನ್ನು ಹೋಲುತ್ತದೆ. ಆದರೆ ಈ ಮೀಲ್ ಪಾಸುಗಳು ಹೋಲುವುದಿಲ್ಲ. ಇದನ್ನು ಬಿಟ್ಟು ಬೇರೆ ಏನಾದರೂ ವ್ಯತ್ಯಾಸ ನಿಮಗೆ ಕಾಣುತ್ತದೆಯೇ?

ಬುಧವಾರ, ಜೂನ್ 18, 2008

ಅಗ್ನಿ ಜಂಬೂಕ - ಬೆಂಕಿ ನರಿ - ಫೈರ್ ಫಾಕ್ಸ್ !!

ಬೆಂಕಿನರಿಯ (Firefox) ಮೂರನೆಯ ಆವೃತ್ತಿ ಬಂದಿದೆ. ನೋಡಲು ಚೆನ್ನಾಗಿದ್ದು, ಬಳಸಲು ಸುಲಭವಾಗಿರುವುದರ ಜೊತೆ ಗಮನಾರ್ಹ ಬದಲಾವಣೆಗಳನ್ನೂ ತಂದಿದೆ.

ಅಷ್ಟೇ ಹೇಳುವದಾದರೆ ನಾನೇಕೆ ಇದನ್ನು ಬರೆಯಬೇಕಾಗಿತ್ತು? ಕಾರಣವಿದೆ. ಹಿಂದಿನ ಆವೃತ್ತಿಯ firefox ನಲ್ಲಿ ಕೆಲವು ಬ್ಲಾಗುಗಳಲ್ಲಿ justify ಮಾಡಿರುತ್ತಿದ್ದ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿತ್ತು. ಆದರೆ ಈಗ ಬಂದಿರುವ ಈ ಮೂರನೆಯ ಆವೃತ್ತಿಯಲ್ಲಿ ಆ ದೋಷ ಪರಿಹಾರಗೊಂಡಿದೆ. ಹಾಗಾಗಿ ಕೆಲವು ಬ್ಲಾಗುಗಳಿಗಾಗಿ Internet Explorer ಗೆ ಹೋಗುವ ಅಗತ್ಯ ಈಗಿಲ್ಲ.

ನಾನೇನು ಹೇಳಲು ಬಯಸುತ್ತಿದ್ದೇನೆಂದರೆ, ನೀವು ಹಿಂದಿನ ಆವೃತ್ತಿಯನ್ನು ಉಪಯೋಗಿಸುತ್ತಿದ್ದಲ್ಲಿ ಈ ಪರಿಚ್ಛೇದವನ್ನು ಓದುವುದು ಕಷ್ಟ. ಇದನ್ನು ಅನುಭವಿಸಿ ಅಥವಾ ಈಗಲೇ firefox ಅನ್ನು download ಮಾಡಿಕೊಳ್ಳಿ.

ಬೆಂಕಿನರಿಗೆ ಜಯವಾಗಲಿ! ಆಗ್ ಲೋಮಡೀ ಕೀ ಜೈ!! ಜಯತು ಅಗ್ನಿ ಜಂಬೂಕಃ !!!

ಮಂಗಳವಾರ, ಮೇ 27, 2008

ನಿರ್ಣಯ

ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

*****

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.

ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.

ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****

ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?

ಸೋಮವಾರ, ಮೇ 26, 2008

ಅತಿ ಬುದ್ಧಿವಂತಿಕೆ ಹುಟ್ ದರಿದ್ರ!


ಮಾಜಿ ಪ್ರಧಾನಿಯ (ಅಲಿಯಾಸ್ ಅಸ್ಲಿ ಮಣ್ಣಿನ ಮಗ!) ಫೋಟೋ ನೋಡಿ ನಮ್ಮ ಅಜ್ಜಿ ಹೇಳಿದ ಮೇಲಿನ ಗಾದೆ ಮಾತು ಹಾಗೆ ನೆನಪಾಯಿತು!

ಶನಿವಾರ, ಮೇ 3, 2008

ಜೋಗದ ಸಿರಿ ಬೆಳಕಿನಲ್ಲಿ ಮಬ್ಬಾದ ಜಲಪಾತ

ವಿಶ್ವದ ಅತಿ ಎತ್ತರದ ಜಲಪಾತ ಯಾವುದು ಎಂದು ಯಾರನ್ನಾದರೂ ಕೇಳಿ ನೋಡಿ. ಬಹುತೇಕ ಜನರು ಏಂಜೆಲ್ ಎಂದು ಹೇಳುತ್ತಾರೆ. ಅದೇ ಒಬ್ಬ ಭಾರತೀಯನನ್ನುಈ ದೇಶದ ಅತಿ ಎತ್ತರದ ಜಲಪಾತ ಯಾವುದೆಂದು ಕೇಳಿ. ನಿಮಗೆ ಸರಿ ಉತ್ತರ ನೀಡುವವರು ಸಾವಿರಕ್ಕೊಬ್ಬರು ಸಿಕ್ಕರೂ ನೀವು ಅದೃಷ್ಟವಂತರೇ. ಇದೇನಪ್ಪ ಹೀಗೆ ಹೇಳ್ತಿದೀನಿ ಅಂದ್ಕೊಂಡ್ರಾ? ನಮ್ಮ ಕರ್ನಾಟಕದವ್ರಿಗೆನೋ ಗೊತ್ತಿರಬಹುದು. ಆದರೆ ನಾನು ಹೇಳಿದ್ದು ಭಾರತೀಯರ ಬಗ್ಗೆ. ಕರ್ನಾಟಕದವ್ರಲ್ವ, ನೀವೇ ಹೇಳಿ, ಯಾವುದು ಆ ಜಲಪಾತ? ಆಹ ಇದೆಂಥ ಪ್ರಶ್ನೆ ಅಷ್ಟು ಪ್ರಸಿದ್ಧ ಜಲಪಾತ ನಂಗೊತ್ತಿಲ್ದೆ ಏನು ಅಂತಿದೀರ? ಇರ್ಲಿ ಹೇಳ್ಬಿಡಿ... ಊಹುಂ ಕೇಳ್ಲಿಲ್ಲ.. ಸ್ವಲ್ಪ ಜೋರಾಗಿ ಹೇಳಿ... ಆಂ.. ಜೋಗ್ ಫಾಲ್ಸ್ ಅಂದ್ರಾ?
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಎಂಥ ಮಧುರ ಗೀತೆ ಅಲ್ವ? ಹಮ್.. ಅದಿರ್ಲಿ, ನೀವ್ ಹೇಳಿದ ಉತ್ತರ ತಪ್ಪು! ಅದ್ಕೇ ಹೇಳಿದ್ದು ಸಾವಿರಕ್ಕೊಬ್ಬರೂ ಸಿಗಲ್ಲ ಅಂತ. ಜೋಗ ನೋಡಕ್ಕೆ ಸುಂದರವಾಗಿರಬಹುದು, ಜಗತ್ಪ್ರಸಿದ್ಧ ಇರಬಹುದು, ಅದರ ಬಗ್ಗೆ ಕೆ.ಎಸ್. ನಿಸ್ಸಾರ್ ಅಹಮದ್ ಅವರು ಅದ್ಭುತವಾಗಿ ವರ್ಣಿಸಿ ಕವಿತೆ ಬರ್ದಿರಬಹುದು, ಮುಂಗಾರು ಮಳೆಯಲ್ಲಿ ಅಭೋ ಎನಿಸುವಂತೆ ಚಿತ್ರಿಸಿರಬಹುದು. ಹಾಗಂತ ಅದೇ ಎತ್ತರದ್ದು ಅನ್ನೋಕಾಗುತ್ತಾ? ನೀವೇ ಹೇಳಿ.

ಜೋಗ ಅಲ್ದೇ ಹೋದ್ರೆ ಮತ್ತಿನ್ಯಾವ ಜಲಪಾತ ಅದು ಅಂತಿದೀರಾ? ಹಾಗೆ ಬನ್ನಿ ದಾರಿಗೆ; ಅದರ ಹೆಸರು ಕುಂಚಿಕಲ್ ಜಲಪಾತ ಅಂತ, ನಂಗೂ ಗೊತ್ತಿರ್ಲಿಲ್ಲ; ಹೀಗೇ ಗೂಗ್ಲಿಂಗ್ ಮಾಡ್ತಿರ್ಬೇಕಾದ್ರೆ ಸಿಗ್ತು. ಕೆಟ್ಟ ಕುತೂಹಲ ನೋಡಿ, ಮತ್ತಷ್ಟು ವಿವರ ಹುಡುಕಿದೆ. ವಿಕಿಪೀಡಿಯಾದಲ್ಲಿ ಆಗುಂಬೆಯ ಹತ್ರ ಇದೆ, ವರಾಹಿ ನದಿಯ ಜಲಪಾತ ಅಂತ ಗೊತ್ತಾಯ್ತು. ಮ್ಯಾಪ್ ನೋಡಿದೆ. ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮಧ್ಯೆ ಎಲ್ಲೋ ಬರುತ್ತೆ ಅಂತ ತಿಳೀತು. ಹಾಗೆ ಒಂದು ಫೋಟೋ ಇದ್ರೆ ನೋಡೋಣ ಅಂತ ಗೂಗಲ್ ಇಮೇಜ್ ಸರ್ಚ್ ಮಾಡಿದ್ರೆ ಹೇಳ್ಕೊಳ್ಳಕ್ಕಾದ್ರೂ ಒಂದೇ ಒಂದು ಫೋಟೋ ಸಿಗ್ಬಾರ್ದಾ?? (ನನ್ನದೊಂದು ವಿನಂತಿ: ಕುಂಚಿಕಲ್ ಜಲಪಾತದ ಚಿತ್ರ ನಿಮ್ಮಲ್ಲಿ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ವಿಕಿಪೀಡಿಯಾದಲ್ಲಿ ಸೇರಿಸಿ)

ಹೋಗಲಿ, ಇದಕ್ಕೆ ಕಾರಣ ಏನಿರಬಹುದು? ೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ ಭಾರತದ ಅತಿ ಎತ್ತರದ ಜಲಪಾತದ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ? ಜೋಗಕ್ಕಾದ್ರೆ ಸುಮಾರು ೧ ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್ ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ ಹೋಗುವವರಿಗಾದರೂ ಆ ಸ್ಥಳದ ಬಗ್ಗೆ ಮಾಹಿತಿ ಬೇಡವೆ? ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ ಇನ್ನೂ ಕುಂಚಿಕಲ್ ಜಲಪಾತ ಬಿದ್ದಿಲ್ವೆ? ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ ಗೊತ್ತಿಲ್ಲದಿದ್ದರೆ ಇತರರಿಗೆ ತಿಳಿಯುವುದಾದರೂ ಹೇಗೆ? ಜೋಗದ ಸಿರಿ ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು ಮಬ್ಬಾಗಿವೆ. ಇಷ್ಟು ಸುಂದರ ಪರಿಸರವನ್ನು ಇಲ್ಲೇ ಇಟ್ಟುಕೊಂಡು ಪ್ರವಾಸಕ್ಕೆಂದು ಯೂರೋಪ್, ಅಮೇರಿಕಾ, ಸ್ವಿಝರ್ಲೆಂಡ್ ಗೆ ಹೋಗಿ ಬರುವ ಐಷಾರಾಮಿಗಳಿಗೆ ಏನು ಹೇಳಬೇಕು? ಹಿತ್ತಲ ಗಿಡ ಮದ್ದಲ್ಲ ಎಂಬುದು ಸುಳ್ಳಲ್ಲ! ಏನಂತೀರಾ?

ಶುಕ್ರವಾರ, ಏಪ್ರಿಲ್ 18, 2008

ಮನ್ನಣೆ

ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದ ಸೋನಿಯಾ ಔರ್ ಸಾನಿಯಾ ಎಂಬ ಲೇಖನ ನೋಡಿ ನನಗೆ ಈ ಘಟನೆ ನೆನಪಾಯಿತು.

*****

ಅದೊಂದು ಶಾಲೆ. ಅಲ್ಲೊಂದು ಕಂಠಪಾಠ ಸ್ಪರ್ಧೆ. ಭಾಗವಹಿಸಲು ಇಷ್ಟವಿದ್ದವರು ತಮ್ಮ ತರಗತಿಯ ಪಠ್ಯದಲ್ಲಿರುವ ನಿಗದಿಪಡಿಸಿದ ಕನ್ನಡ ಅಥವಾ ಹಿಂದೀ ಪದ್ಯವನ್ನು ಬಾಯಿಪಾಠ ಮಾಡಿ ಹೇಳಬೇಕಾಗಿತ್ತು. ಚೆನ್ನಾಗಿ ಹಾಡು ಹೇಳುವವರಿಗೆ ಸರಿಯಾಗಿ ಕಂಠಪಾಠ ಮಾಡಲು ಕಷ್ಟವಾಗುತ್ತಿತ್ತು; ಕಂಠಪಾಠ ಮಾಡಲು ಎತ್ತಿದ ಕೈ ಎನ್ನುವಂಥವರಿಗೆ ಹಾಡಲು ಬರುತ್ತಿರಲಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆ ಪೈಪೋಟಿ ಏರ್ಪಟ್ಟಿತ್ತು.

ಹೀಗಿರುವಾಗ ಆ ದಿನ ಬಂದೇ ಬಿಟ್ಟಿತು. ಪ್ರೇಕ್ಷಕರಾಗಿ ಎಲ್ಲರೂ ಜಮಾಯಿಸಿದರು. ಎಲ್ಲ ಶಿಕ್ಷಕ-ಶಿಕ್ಷಕಿಯರೂ ಬಂದು ಸೇರಿದರು. ಒಬ್ಬೊಬ್ಬರಾಗಿ ಬಂದು ಪದ್ಯಗಳನ್ನು ತಮಗೆ ತಿಳಿದಷ್ಟು ಚೆನ್ನಾಗಿ ಹೇಳಲಾರಂಭಿಸಿದರು. ಕೆಲವರಿಗೆ ಸಭಾಕಂಪದಿಂದಾಗಿ ಕಲಿತಿದ್ದ ಪದ್ಯ ಮರೆತು ಹೋಯಿತು. ಕೆಲವರು ಕಲಿತಿದ್ದೇ ಸುಳ್ಳು ಎನ್ನುವಂತೆ ಹೇಳಿ ಹೋದರು. ಇನ್ನೂ ಕೆಲವರು ಪದ್ಯಕ್ಕೆ ರಾಗ ಹಾಕುವ ಭರದಲ್ಲಿ ಪದ್ಯ ಮರೆತರು. ಕೆಲವರಿಗೆ ಪದ್ಯ ಹೇಳುತ್ತ ಹೇಳುತ್ತ ನಿಗದಿಪಡಿಸಿದ್ದ ಸಮಯ ಹೋಗಿದ್ದೇ ತಿಳಿಯಲಿಲ್ಲ.

ಹೀಗೇ ಸಾಗುತ್ತಿತ್ತು ಸ್ಪರ್ಧೆ... ಒಬ್ಬ ಬಾಲಕ ಪದ್ಯವೊಂದನ್ನು ಕಥೆ ಹೇಳಿದಂತೆ ಹೇಳಿ ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದ. ಶಾಲೆಯಲ್ಲಿ ಹಾಡು ಹೇಳಲು ಪ್ರಸಿದ್ಧವಾಗಿದ್ದ ಒಬ್ಬ ಬಾಲಕಿ ಬಂದಳು. ಅವಳ ಸುಶ್ರಾವ್ಯವಾದ ಕಂಠಕ್ಕೆ ಎಲ್ಲರೂ ತಲೆದೂಗಲಾರಂಭಿಸಿದರು. ತೃತೀಯ ಭಾಷೆಯನ್ನಾಗಿ ಸಂಸ್ಕೃತವನ್ನು ತೆಗೆದುಕೊಂಡಿದ್ದರೂ ಹಿಂದಿಯ "ಮೇರಾ ನಯಾ ಬಚಪನ್" ಪದ್ಯವನ್ನು ಆಕೆ ಹೇಳಿದ ಪರಿ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಆದರೆ ಸಮಯಾಭಾವದಿಂದ ಆಕೆಗೆ ಕೂಡ ಎರಡೇ ಸೊಲ್ಲು ಹೇಳಲು ಸಮಯ ಸಿಕ್ಕಿತು.

ಮರುದಿನ ತರಗತಿಗೆ ಬಂದ ಮುಖ್ಯೋಪಾಧ್ಯಾಯರು ಕೇಳಿದರು: "ನಿನ್ನೆ ಯಾಕೆ ಎಷ್ಟೊಂದು ಜನ ಭಾಗವಹಿಸಿರಲಿಲ್ಲ?" ಎಲ್ಲರಿಂದ ಮೌನವೇ ಉತ್ತರವಾಗಿತ್ತು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆಯುತ್ತಿದ್ದವರೂ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಪದ್ಯ ಕಂಠಪಾಠ ಮಾಡಲು ಬರಲಿಲ್ಲ ಎನ್ನುವುದು ಯಾರೂ ನಂಬದ ವಿಷಯವಾಗಿತ್ತು. ಆಗ ಮುಖ್ಯೋಪಾಧ್ಯಾಯರು ವಿವರಿಸಿದರು: "ಹಾಡುವುದು, ಭಾಗವಹಿಸುವುದು ಮುಖ್ಯವೇ ಹೊರತು ಗೆಲ್ಲುವುದಲ್ಲ. ನಿನ್ನೆ ಇದ್ದಿದ್ದು ಹಾಡು ಹೇಳುವ ಸ್ಪರ್ಧೆಯಲ್ಲ; ಕಂಠಪಾಠ ಸ್ಪರ್ಧೆ. ಅದರಲ್ಲಿ ನೀವು ಪದ್ಯವನ್ನು ಕಲಿತು ಹೇಳುತ್ತೀರಿ ಎನ್ನುವುದು ಮುಖ್ಯವೇ ಹೊರತು ನೀವು ಎಷ್ಟು ರಾಗವಾಗಿ ಹಾಡುತ್ತೀರಿ ಎನ್ನುವುದಲ್ಲ".

ಉತ್ತಮವಾಗಿ, ಸಂಪೂರ್ಣವಾಗಿ ಹಾಡು ಹೇಳಿದ್ದ ಒಬ್ಬ ಬಾಲಕಿಗೆ ಪ್ರಥಮ ಬಹುಮಾನ ಬಂದಿತ್ತು. ಕಥೆಯಂತೆ ಹೇಳಿ ಹೋಗಿದ್ದ ಬಾಲಕನಿಗೆ ಎರಡನೆಯ ಬಹುಮಾನ ಬಂದಿದ್ದರೆ, ರಾಗವಾಗಿ ಹೇಳಿದ್ದ ಆ ಹುಡುಗಿಗೆ ಮೂರನೆಯ ಬಹುಮಾನ ಬಂದಿತ್ತು. ಎಲ್ಲರಿಗೂ ಆಶ್ಚರ್ಯ! ನಿಜಕ್ಕೂ ರಾಗಕ್ಕಿಂತ ಕಂಠಪಾಠವೇ ಬಹುಮಾನದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸರಿಯಾಗಿ ಪದ್ಯ ಬಂದರೂ ಭಾಗವಹಿಸಿರದಿದ್ದವರ ಮುಖ ಬಾಡಿತ್ತು.

*****

ಹಾಗೆ ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಶಾಲೆಯ ಹೆಸರು ಮೈಸೂರು ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ಟ್ (ಎಂ.ಕೆ.ಇ. ಟಿ/ಎಂಕೆಟಿ). ಹರಿಹರದಲ್ಲಿ ಯಾವ ಶಾಲೆ ಒಳ್ಳೆಯದು ಎಂದು ಯಾರನ್ನೇ ಕೇಳಿದರೂ ತೋರಿಸುತ್ತಿದ್ದ ಶಾಲೆ. ನಮಗೇನು ಗೊತ್ತು ಅದರ ಬೆಲೆ? ನಮ್ಮ ಬಾಯಲ್ಲಿ ಎಂಕೆಟಿ ಎಂಬುದು "ಮಂಡಕ್ಕಿ ಖಾರ ಟೀ" ಆಗಿತ್ತು. ಏನೇ ಇರಲಿ, ಪ್ರತಿಭೆಯನ್ನು ಗುರುತಿಸುತ್ತಿದ್ದ, ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಂಥ ಶಾಲೆಯಲ್ಲಿ ಓದಿದ್ದಕ್ಕೆ ನನಗೆ ಹೆಮ್ಮೆಯಿದೆ.

ಬುಧವಾರ, ಏಪ್ರಿಲ್ 2, 2008

ಹುದ್ಧಾರ ಹಾಗೋದು ಈಗೆ...

ಈಗಷ್ಟೇ ನಡೆದಿದ್ದು. ಇರುವುದನ್ನು ಇರುವ ಹಾಗೇ ಹಾಕಿದ್ದೇನೆ (ಹೆಸರು ಮಾತ್ರ ತೆಗೆದಿದ್ದೇನೆ).
6:19 PM Friend: namaskara....................
me: namaskara
Friend: hen guru samachara............
6:21 PM me: "hen" -- yaava language alli?
Friend: yavudadaru ayetu........................
6:22 PM me: kannadadalli henu andre taleli beleyuttalla.. adu..
6:23 PM Friend: gotilla...
oh nate dt henu stupid......
k hellideyo wt r u dng
6:24 PM me: hellideyo andre enu?
Friend: ayyo i'm asking n which place u r in now
me: i'm in my room
6:25 PM Friend: istu bega hoda ..........
me: bandu ondu ghante aaytu
6:29 PM Friend: hen ketta krlasa madthedeyo room alli

hoge henu ketta kelasa madthedeyo..................
me: henu?
6:30 PM Friend: kannada hartha hagalva
me: artha aagiddakke keliddu.. enu henu madhya iro difference artha maadko..
6:32 PM Friend: hanadru thilko......answer madu aste.........
6:33 PM k gunda going to home ..........................msg u tom k....................bye dumma................

ನೀವೇ ಏಳಿ, ಈಗಾದ್ರೆ ಕನ್ನಡ ಹುದ್ಧಾರ ಹಾಗುತ್ತಾ?

ಮಂಗಳವಾರ, ಮಾರ್ಚ್ 25, 2008

ಕನ್ನಡ ಕನ್ನಡ ಕನ್ನಡವೆಂದುಲಿ...

ಮಾರ್ಚ್ ೧೬ ರ ಬ್ಲಾಗರ್ಸ್ ಮೀಟಿಗೆ ಹೋಗಿ ಬಂದಾಗಿನಿಂದ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ನನಗೆ ಹೇಳಬೇಕೆನಿಸುತ್ತಿರುವುದನ್ನು ಹೇಳಿಬಿಡುತ್ತೇನೆ. ಅಲ್ಲಿಗೆ ಬಂದಿದ್ದ ಪ್ರೊ. ಕೀ. ರಂ. ನಾಗರಾಜ್ ಅವರಿಂದ ವ್ಯಕ್ತವಾದ ಅಭಿಪ್ರಾಯದ ಸಾರಾಂಶ ಹೀಗಿದೆ:
ಒಂದು ಭಾಷೆ ಜನಬಳಕೆಗೆ ಸರಿಹೊಂದುವಂತಾಗಲು ಅದರಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಿರಬೇಕು. ಉದಾಹರಣೆಗೆ ಕೇವಲ ೨೬ ಅಕ್ಷರಗಳನ್ನು ಹೊಂದಿರುವ ಇಂಗ್ಲಿಷ್ ಇಂದು ವಿಶ್ವದಾದ್ಯಂತ ಮಾತನಾಡಲ್ಪಡುತ್ತಿದೆ. ಕನ್ನಡದಲ್ಲಿ ಅನವಶ್ಯಕವಾದ ಅನೇಕ ಅಕ್ಷರಗಳಿವೆ. ಎಲ್ಲ ಮಹಾಪ್ರಾಣಗಳೂ ಅನಾವಶ್ಯಕವಾಗಿವೆ. ಇನ್ನೂ ಕೆಲವು ಅಕ್ಷರಗಳೂ ಕೂಡ ನಿರುಪಯುಕ್ತವಾಗಿವೆ. ಎಲ್ಲ ಸೇರಿ ಇಂತಹ ೧೭ ಅಕ್ಷರಗಳಿವೆ. ಯಾವ ಪದಗಳಲ್ಲಿ ಮಹಾಪ್ರಾಣಗಳಿವೆಯೋ ಅವು ಕನ್ನಡ ಪದಗಳಲ್ಲ, ಬೇರೆ ಭಾಷೆಯಿಂದ ಬಂದ ಪದಗಳು. ಹೀಗಾಗಿ ಈ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕು.
ಮೊದಲ ನೋಟಕ್ಕೆ ಅವರ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತದೆ. ಮಹಾಪ್ರಾಣಾಕ್ಷರಗಳು ಕನ್ನಡದ ಬಹುತೇಕ ಪದಗಳಲ್ಲಿಲ್ಲ. ಅವೇನಿದ್ದರೂ ಸಂಸ್ಕೃತ ಪದಗಳಲ್ಲಿ ಬರುವಂಥವು. ಇವುಗಳೆಲ್ಲವನ್ನು ಬಳಸುವ ಅಗತ್ಯವಿಲ್ಲ. ಹಾಗಾಗಿ ಕನ್ನಡ ವರ್ಣಮಾಲೆಯಿಂದ ೧೭ ಅಕ್ಷರಗಳು (ಸುಮಾರು ಮೂರನೇ ಒಂದು ಭಾಗ) ಕಡಿಮೆಯಾದರೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಆದರೆ ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.

ಇರಲಿ, ಆ ೧೭ ಅಕ್ಷರಗಳನ್ನು ತೆಗೆದಿದ್ದಾರೆ ಎಂದುಕೊಂಡರೆ, ಸಂಸ್ಕೃತ ಶಬ್ದಗಳನ್ನು ಹೇಗೆ ಬರೆಯುತ್ತಾರೆ? ಒಂದೊಂದು ಅಕ್ಷರಕ್ಕೂ ಬೆಲೆ ಕೊಡುವ ಸಂಸ್ಕೃತ ಪದಗಳನ್ನು ಸಂಕ್ಷೇಪಿಸಿದ ಕನ್ನಡ ವರ್ಣಮಾಲೆಯ ಸಹಾಯದಿಂದ ಬರೆಯುವುದು ಅಸಾಧ್ಯ. ಸಂಸ್ಕೃತ ಪದಗಳು ಕನ್ನಡ ಪದಗಳನ್ನು ಮರೆಸಿವೆ ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಉಪಯೋಗಿಸದೆ ಮಾತನಾಡುವುದು ಸಾಧ್ಯವೇ? ನಾವು ಬೇಡ ಬೇಡವೆಂದರೂ ನಮಗೇ ಗೊತ್ತಿಲ್ಲದೆ ನೂರಾರು ಪರಭಾಷೆಯ ಪದಗಳನ್ನು ನಾವು ಉಪಯೋಗಿಸುತ್ತೇವೆ. ನಾವು ದಿನನಿತ್ಯ ಬಳಸುವ ಸೂರ್ಯ, ಚಂದ್ರ, ವಿಮಾನ ಮುಂತಾದವುಗಳಿಗೆ ಅಚ್ಚ ಕನ್ನಡದ ಪದಗಳು (ನೇಸರ, ತಿಂಗಳು, ಗಾಳಿತೇರು) ಎಷ್ಟೊಂದು ಜನರಿಗೆ ತಿಳಿದೇ ಇಲ್ಲ. ಇನ್ನು ನೀರು, ಚಿತ್ತಾರ ಇಂತಹ ಪದಗಳನ್ನು ತದ್ಭವಗಳು ಎಂದು ಕನ್ನಡಕ್ಕೆ ಇಳಿಸಿಬಿಡುತ್ತೇವೆ. (ಇವುಗಳಿಗೆ ಅಚ್ಚ ಕನ್ನಡ ಪದಗಳು ನನಗೂ ತಿಳಿದಿಲ್ಲ, ನಿಮಗೆ ತಿಳಿದಿದ್ದರೆ ತಿಳಿಸಿ). ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ. ಅಷ್ಟಕ್ಕೂ ಸಂಸ್ಕೃತ ಪದಗಳನ್ನು ಉಪಯೋಗಿಸಬಾರದು ಎಂದೇನಿದೆ? ಇಂಗ್ಲಿಷ್ ಸಹ ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆದೇ ಬೆಳೆದಿರುವುದು (ಉದಾ: ಮಾತೃ -> Mother, ಪಿತೃ -> Father, ಭ್ರಾತೃ -> Brother), ಅಲ್ಲವೇ? ಮನುಷ್ಯನೇ ಆಗಲಿ ಭಾಷೆಯೇ ಆಗಲಿ ಬೆಳೆಯುವುದು ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವವಿದ್ದಾಗ ಮಾತ್ರ. ಇದು ನನ್ನದು ಅದು ನಿನ್ನದು ಎಂಬ ಸಂಕುಚಿತ ಮನೋಭಾವದಿಂದಲ್ಲ.

ಕನ್ನಡ ಮಾತನಾಡುವವರು/ಮಾತನಾಡಬೇಕಾದವರು ಯಾರು? ನಾವು ತಾನೆ? ಬೆಂಗಳೂರಿನಲ್ಲಿ "ತಮಿಳ್ ತೆರಿಮಾ" ಎಂದು ಕೇಳಿದರೆ "ತೆರಿದು" ಎನ್ನುವ ಕನ್ನಡಿಗರು ಸಿಗುತ್ತಾರೆಯೇ ಹೊರತು "ಇಲ್ಲ" ಎನ್ನುವವರೆಷ್ಟು ಮಂದಿ? ಕನ್ನಡ ವರ್ಣಮಾಲೆಯನ್ನು ಅಳಿಸಬೇಕೋ ಅಥವಾ ಉಳಿಸಿ, ಬೆಳೆಸಬೇಕೋ ಎಂಬುದು ನಮ್ಮ ನಿಮ್ಮ ವಿಚಾರಕ್ಕೆ ಬಿಟ್ಟ ವಿಷಯ. "ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!

ಅನುಲೇಖ: ಇಲ್ಲಿ ನಾನು ಬರೆದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಲೇಖನದ ಹಿಂದೆ ಯಾರಿಗೂ ನೋವುಂಟು ಮಾಡುವ ಇರಾದೆಯಿಲ್ಲ. ಹಾಗೇನಾದರೂ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.

ಸೋಮವಾರ, ಮಾರ್ಚ್ 24, 2008

ಒಗ್ಗಟ್ಟು - ಧೈರ್ಯ

ಒಗ್ಗಟ್ಟಿಲ್ಲಿ ಬಲವಿದೆ ಎಂಬುದು ನಮಗೆಲ್ಲ ತಿಳಿದಿರುವ ಮಾತು. ಅದಕ್ಕೊಂದು ಉತ್ತಮ ಉದಾಹರಣೆ (YouTubeನಲ್ಲಿ ಅತ್ಯುತ್ತಮ ಪ್ರಾತ್ಯಕ್ಷಿಕೆ ಬಹುಮಾನ ಪಡೆದಿದೆ):


ಆದರೆ ಕೇವಲ ಒಗ್ಗಟ್ಟಿದ್ದರೆ ಸಾಲದು, ಧೈರ್ಯ ಕೂಡ ಮುಖ್ಯ ಎನ್ನಲು ಇನ್ನೊಂದು ಉದಾಹರಣೆ:


ನೀವೇನಂತೀರಾ?

ಸೋಮವಾರ, ಮಾರ್ಚ್ 17, 2008

ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ

ಬೆಂಗಳೂರಿಗೆ ಬಂದ ಮೇಲೆ ಭಾನುವಾರಕ್ಕೊಂದು ಅರ್ಥ ಬಂದಿದೆ (ಹಾಗಂತ ಅನರ್ಥ ನಿಂತಿದೆ ಎಂದಲ್ಲ). ಸಣ್ಣವನಿದ್ದಾಗ ಆಟ ಆಡುವ ದಿನವಾಗಿದ್ದ ಭಾನುವಾರ ಕಾಲೇಜಿಗೆ ಹೋಗುವಾಗ ಎಂದರೆ ರೆಕಾರ್ಡ್ ಬರೆಯುವ, ಅಸೈನ್ಮೆಂಟ್ಸ್ ಮಾಡುವ ದಿನವಾಗಿತ್ತು. ಈಗ ಹಾಗಲ್ಲ ಭಾನುವಾರ ಅಂದ್ರೆ ವೀಕೆಂಡು :) ಆದರೂ ಕೆಲವು ಸಲ "ಬಟ್ಟೆ ಹರಿಯೋ ಅಷ್ಟು" (ಅದು ದಾವಣಗೆರೆಯ ನುಡಿಗಟ್ಟು.. ನಿಮಗೆ ಅರ್ಥ ಆಗ್ಲಿಲ್ವಾ? ಆಗೋದು ಬೇಡ ಬಿಡಿ) ಕೆಲಸ ಇರುತ್ತೆ.

ಆ ಕೆಲಸಗಳೇನೇ ಇರಲಿ, ಹೇಗಾದರು ಮಾಡಿ ಬೆಂಗಳೂರು ಸುತ್ತೋದು ನನ್ನ ಪದ್ಧತಿ. ನಾನೇನೂ ಎಂಜಿ ರೋಡು, ಬ್ರಿಗೇಡ್ ರೋಡು ಸುತ್ತೋದಿಲ್ಲ. ಫ್ರೆಂಡ್ಸ್ ನ ಮೀಟ್ ಮಾಡಿ ಬರೋದು, ಯಾವುದಾದರು ಸ್ಥಳಗಳಿಗೆ ಭೇಟಿ ಕೊಡೋದು ಹೀಗೆ... ಇತ್ತಿಚಿಗೆ (ಅಂದರೆ ಇದನ್ನು ಬರೆದಾದ ಮೇಲೆ) ಇನ್ನೊಂದು ಚಟ ಅಂಟಿಕೊಂಡಿದೆ... ಸಿನಿಮಾ ನೋಡೋದು (ಇಲ್ಲಿ ಸಿನಿಮಾ ನೋಡೋದಕ್ಕಿಂತ ಗೆಳೆಯರ ಭೇಟಿಯೇ ಮುಖ್ಯ ಅನ್ನೋದು ಬೇರೆ ವಿಷಯ).

ಹೋದ ವಾರವಷ್ಟೇ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದರಿಂದ ಈ ವಾರ ಎಲ್ಲಿಗೂ ಹೋಗುವ ಯೋಚನೆ ಇರಲಿಲ್ಲ. (ಕನ್ಫ್ಯೂಸ್ ಆಗ್ಬೇಡಿ, ನನಗಿನ್ನು ೨೨ ವರ್ಷ... ತೀರ್ಥಯಾತ್ರೆ ಬಗ್ಗೆ ಇನ್ಯಾವಾಗಲಾದ್ರೂ ಬರೀತೀನಿ. ಆದರೆ ಇದಕ್ಕೂ ಸಂದೀಪನ ತೀರ್ಥಯಾತ್ರೆಗೂ ಇರುವ ಸಂಬಂಧ ನಂದಿಬೆಟ್ಟಕ್ಕಷ್ಟೇ ಸೀಮಿತ). ಇನ್ನೇನಪ್ಪಾ ಮಾಡೋದು ಅಂತ ಶನಿವಾರ ಮಧ್ಯಾಹ್ನ ಹೀಗೇ ಬ್ರೌಸ್ ಮಾಡ್ತಾ ಕುಳಿತಿದ್ದೆ. ಸುಶ್ರುತನ ಮೌನಗಾಳದಲ್ಲಿ ಆ ಸಂಜೆ, ನಾವೆಲ್ಲ ಸೇರ್ತಿದೀವಿ... ಅಂತ ಬರೆದಿದ್ದನ್ನು ನೋಡಿದೆ. ಈ ಬಾರಿ ಸರಿಯಾಗಿ ಕಲಿತು ವಡಪ್ಪೆಯ ಎಡವಟ್ಟುಗಳು ಮರುಕಳಿಸದಂತೆ ಮಾಡುತ್ತಿದ್ದಾನೆ ಎಂದುಕೊಂಡೆ. ಊಹುಂ, ಅದಲ್ಲ ವಿಷಯ. ಕನ್ನಡ ಬ್ಲಾಗರ್ಸ್ ಮೀಟ್!

ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬ್ಲಾಗರ್ಸ್ ಮೀಟ್ ನಡೆದಿತ್ತು ಎಂಬ ಸುದ್ದಿ ನನಗೆ ಬಂದಿತ್ತು. ಅದು ಹೇಗೆ ನನ್ನ ಕಣ್ಣು ತಪ್ಪಿಸಿತೋ ನಾ ಕಾಣೆ. ಮೊದಲೇ ಗೊತ್ತಾಗಿದ್ದಿದ್ದರೆ ಹೋಗಿರುತ್ತಿದ್ದೇನೋ ಏನೋ. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಕನ್ನಡ ಬ್ಲಾಗರ್ಸ್ ಮೀಟ್ಗಾದ್ರೂ ಹೋಗಲೇ ಬೇಕು, ಆಗಿಂದಾಗ್ಗೆ ಅಂತರ್ಜಾಲದಲ್ಲಿ ನೋಡುವ ಹೆಸರಿನ ವ್ಯಕ್ತಿಗಳು ಯಾರಿರಬಹುದು? ಹೇಗಿರಬಹುದು? ಎಂಬ ಜಿಜ್ಞಾಸೆಯೊಂದಿಗೆ ಹೋಗುವ ನಿರ್ಧಾರಕ್ಕೆ ಬಂದೆ.

ಅಂತೆಯೇ ಭಾನುವಾರ ಬೆಂಗಳೂರಿನ ಪೂರ್ವಕ್ಕೊಂದು ಪ್ರದಕ್ಷಿಣೆ ಹಾಕಿ ದಕ್ಷಿಣಕ್ಕೆ ಹೊರಟೆ. Indian Institute of World Cultures ಎಲ್ಲಿದೆ ಎಂದು ಅವರಿವರನ್ನು ಕೇಳುತ್ತ ಹಾಗೂ ಹೀಗೂ ನಾಲ್ಕೂವರೆಗೆ ತಲುಪಿದೆ. ಮೊದಲಿಗೆ ಅಪರಿಚಿತ ಸ್ಥಳದಂತೆ ಕಂಡು ಬಂದರೂ ಐದೇ ನಿಮಿಷದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದರಿಂದ ಯು.ಬಿ.ಪವನಜ, ಹರಿಪ್ರಸಾದ್ ನಾಡಿಗ್, ಅಬ್ದುಲ್ ರಶೀದ್ ಅವರ ಅನುಭವಗಳು, ಅಭಿಪ್ರಾಯಗಳು, ಸಲಹೆಗಳನ್ನು ಕೇಳುತ್ತ ಕುಳಿತೆ. ಮಧ್ಯ ಚಹಾ ವಿರಾಮದಲ್ಲಿ ಕೆಲವರು ಪರಿಚಯವಾದರು. ಚಹಾನಂತರದ ಚರ್ಚೆ, ಅಭಿಪ್ರಾಯ ಹಂಚಿಕೆಗಳಲ್ಲಿ ಇನ್ನೂ ಕೆಲವರು ಪರಿಚಯವಾದರು. ಎಸ್ ಕೆ ಶ್ಯಾಮಸುಂದರ್ ಅವರ ಮಾತುಗಳು ಓದುಗರನ್ನು ಯೋಚಿಸುವಂತೆ ಮಾಡಲು ಸಫಲವಾಯಿತು.

ಅಂತರ್ಜಾಲದಲ್ಲಿ ಕನ್ನಡ ಬೆಳೆದು ಬಂದ ಬಗೆ, ತಂತ್ರಜ್ಞಾನದಲ್ಲಿ ಕನ್ನಡ ಈಗ ಯಾವ ಹಂತದಲ್ಲಿದೆ, ಇನ್ನೂ ಏನೆಲ್ಲ ಕೆಲಸಗಳು ಬಾಕಿ ಇವೆ, ಬ್ಲಾಗಿಗರ ಸಂಖ್ಯೆ ಏಕೆ ಕಡಿಮೆ ಇದೆ ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು ಬಹಳ ಸಂತಸ ನೀಡಿತು. ಆದರೆ ಇವೆಲ್ಲಾ ಸಂತಸಗಳ ನಡುವೆ ಒಂದು ದುಃಖ ಮಾತ್ರ ಉಳಿದುಹೋಯಿತು. ಬಂದಿದ್ದ ಎಲ್ಲ ಬ್ಲಾಗಿಗರ ಪರಿಚಯವಾಗಲಿಲ್ಲವಲ್ಲ ಎಂಬುದೇ ಆ ದುಃಖ. ಕೇವಲ ೩ ಘಂಟೆಗಳಲ್ಲಿ ನೂರಾರು ಜನರ ವೈಯಕ್ತಿಕ ಪರಿಚಯ ಕಷ್ಟವಾಗುತ್ತಿತ್ತೆನ್ನುವುದು ನಿಜ. ಆದರೆ ಮುಂದಿನ ಬಾರಿ ನಾವು ಭೇಟಿಯಾದಾಗ ಎಲ್ಲರ ಪರಿಚಯಕ್ಕೆಂದೇ ಒಂದಷ್ಟು ಸಮಯ ಮೀಸಲಿರಿಸಿ ಎಲ್ಲ ಬ್ಲಾಗಿಗರನ್ನೂ ಪರಿಚಯಸ್ಥರನ್ನಾಗಿ ಮಾಡುವ ಜವಾಬ್ದಾರಿ ಸಂಘಟಕರ ಮೇಲಿದೆ.

ಒಟ್ಟಿನಲ್ಲಿ ಈ ಭಾನುವಾರ ಬ್ಲಾಗಿಗರನ್ನು, ಬ್ಲಾಗುಗಳನ್ನು ಓದಿ ಸಂತಸ ಪಡುವವರನ್ನು ಒಂದೆಡೆ ಸೇರಿಸಲು ಒಂದು ವೇದಿಕೆಯಾಯಿತು. ಇದಕ್ಕಾಗಿ "ಪ್ರಣತಿ" ತಂಡದವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅಲ್ಲದೆ ಇದು ಕೇವಲ ವೇದಿಕೆಯಾಗಿ ಉಳಿಯದೆ ಅಂತರ್ಜಾಲದಲ್ಲಿ ಕನ್ನಡದ ಮಹಾಕಾವ್ಯಕ್ಕೆ ಮುನ್ನುಡಿಯಾಗಲಿ ಎಂದು ಆಶಿಸುವೆ.

ಇತರರ ಅನಿಸಿಕೆಗಳು:

ಶುಕ್ರವಾರ, ಫೆಬ್ರವರಿ 1, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೨)

ಮೊದಲನೆಯ ಭಾಗದಿಂದ ಮುಂದುವರೆದಿದೆ

ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.

ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.

ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್‍ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!

ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:

"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...

ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.

"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...

ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.

"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"

ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.

ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.

ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.

ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...

"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"

ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...

ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.

*******

ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.

"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!

ಭಾನುವಾರ, ಜನವರಿ 6, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೧)

ಅದು ಶಿರಸಿಯ ಪ್ರಯಾಣವಿರಬಹುದು, ಸಾಗರದ ಪ್ರಯಾಣವಿರಬಹುದು, ಪ್ರತಿಯೊಂದು ಪ್ರಯಾಣದಲ್ಲೂ ಏನಾದರೂ ಘಟಿಸದಿದ್ದರೆ ನನ್ನ ಪ್ರಯಾಣ ಮುಗಿಯುವುದಿಲ್ಲ ಎನಿಸುತ್ತಿದೆ. ಈಗ ಅದಕ್ಕೊಂದು ಹೊಸ ಸೇರ್ಪಡೆ...

೨೦೦೭ರ ಅಕ್ಟೋಬರ್ ೧೧ನೇ ತಾರೀಖು ಗುರುವಾರ ಕೆಲಸಕ್ಕೆ ಸೇರಬೇಕಾಗಿತ್ತು. ಕೆಲವು ಪಂಚಾಂಗಗಳ ಪ್ರಕಾರ ಆ ದಿನ ಅಮಾವಾಸ್ಯೆ. ಅದರಲ್ಲೂ ಮಹಾಲಯ ಅಮಾವಾಸ್ಯೆ. ಇನ್ನು ಕೆಲವು ಪಂಚಾಂಗಗಳ ಪ್ರಕಾರ ಬುಧವಾರವೇ ಅಮಾವಾಸ್ಯೆ. ಹೀಗಾಗಿ ಯಾವುದರ ಗೊಡವೆಯೇ ಬೇಡ ಎಂದು ಮಂಗಳವಾರ ಮಧ್ಯಾಹ್ನ ಸುಮಾರು ೧೨:೩೦ ರ ಸಮಯ ಒಂದು ಸೂಟ್‍ಕೇಸ್, ಇನ್ನೊಂದು ಬ್ಯಾಗ್ ಹಿಡಿದು ಹರಿಹರದ ಬಸ್ ಸ್ಟ್ಯಾಂಡ್ ಬಳಿ ಬಂದೆ. ಅಪ್ಪ ಅಮ್ಮ ನನ್ನನ್ನು ಕಳಿಸಲು ಬಂದಿದ್ದರು. ಅಲ್ಲಿ ನೋಡಿದರೆ ಬೆಂಗಳೂರಿಗೆ ಹೋಗುವ ಯಾವುದೇ ಬಸ್ ಇರಲಿಲ್ಲ. ಹೀಗಾಗಿ ದಾವಣಗೆರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ಬಸ್ ಹಿಡಿದರಾಯಿತು ಎಂದು ನಿರ್ಧರಿಸಿ ದಾವಣಗೆರೆಯ ಬಸ್ ಹತ್ತಿದೆವು. ಹರಿಹರದಲ್ಲಿ ಕಳೆದಿದ್ದ ದಿನಗಳನ್ನು ನೆನಪಿಸಿಕೊಂಡು ಕಂಠ ಗದ್ಗದಿತವಾಗಿತ್ತು. ಅಮ್ಮನ ಮುಖ ನೋಡಿದಾಗ ಅಳು ಬರುವಂತಾಗುತ್ತಿತ್ತು. ಹಾಗಾಗಿ ಹೊರಗೆ ನೋಡುತ್ತಾ ಕುಳಿತೆ. ನಾನು ಓದಿದ ಶಾಲೆ-ಕಾಲೇಜು, ಆಡಿದ ಆಟದ ಮೈದಾನ, ನನ್ನ ಸಹಪಾಠಿಗಳು, ಗೆಳೆಯರು ಎಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತಿದ್ದವು. ಅಷ್ಟರಲ್ಲಿ ದಾವಣಗೆರೆ ಬಂದಿತ್ತು. ನನ್ನನ್ನು ಬಸ್ ಹತ್ತಿಸಿ ಅಪ್ಪ-ಅಮ್ಮ ತಿರುಗಿ ಹರಿಹರದ ದಾರಿ ಹಿಡಿದರು. ಮನಸ್ಸು ಭಾರವಾಗಿತ್ತು. ಏನೇನೋ ಯೋಚನೆಗಳು ಬರುತ್ತಿದ್ದವು. ಮೂರು ಸೀಟಿನ ಬದಿಯಲ್ಲಿ ಕಿಟಕಿಯ ಬಳಿ ಒಂದು ಜಾಗ ಹಿಡಿದು ಕುಳಿತೆ. ಬಸ್ ಹೊರಟಿತು.

ಅಷ್ಟರಲ್ಲಿ ಒಬ್ಬಳು ಹುಡುಗಿ, ಸುಮಾರು ೧೮-೧೯ ವರ್ಷದವಳಿರಬಹುದು, ಖಾಲಿ ಇದ್ದ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತಳು. ಮನಸ್ಸು ಪೂರ್ತಿ ನಾನು ಬೆಂಗಳೂರಿನಲ್ಲಿ ಮಾಡಬೇಕಾಗಿದ್ದ ಕೆಲಸಗಳ ಕಡೆಗೇ ಇದ್ದಿದ್ದರಿಂದ ಆಕೆಯ ಕಡೆ ಹೆಚ್ಚು ಗಮನ ಹೋಗಲಿಲ್ಲ. ಒಂದೈದು ನಿಮಿಷ ಆಗುವಷ್ಟರಲ್ಲಿ ನನ್ನ ಸ್ನೇಹಿತನ ಕರೆ ಬಂದಿತು. ಸ್ವಲ್ಪ ಹೊತ್ತು ಮಾತನಾಡಿ ನಂತರ ಮೊಬೈಲ್‍ನಲ್ಲಿ ಹಾಡು ಕೇಳುತ್ತಾ ಕುಳಿತೆ.

"ಎಕ್ಸ್‍ಕ್ಯೂಸ್ ಮಿ.. ಸ್ವಲ್ಪ ಮೊಬೈಲ್ ಕೊಡ್ತೀರಾ?"

"..."

"ನಾನು ಈ ಬಸ್ಸಿಗೆ ಬರ್ತಿರೋದನ್ನ ನಮ್ಮಣ್ಣಂಗೆ ಹೇಳ್ಬೇಕು. ಮಿಸ್ಡ್ ಕಾಲ್ ಕೊಡ್ತೀನಿ, ಕಾಲ್ ಮಾಡ್ತಾರೆ"

"ನಂಬರ್ ಹೇಳಿ, ನಾನೇ ಮಾಡ್ತೀನಿ"

"9844xxxxxx"

ಕಾಲ್ ಮಾಡಿದೆ. ಕಟ್ ಮಾಡುವಷ್ಟರಲ್ಲಿ ಎತ್ತಿಬಿಟ್ಟಿದ್ದ ಆಕೆಯ ಅಣ್ಣ. ಸ್ಪೈಸ್ ಟು ಸ್ಪೈಸ್ ತಾನೆ, ಹೋಗಲಿ, ಎಂದು ಸುಮ್ಮನಿದ್ದೆ. ಒಂದರ್ಧ ನಿಮಿಷದಲ್ಲಿ ಅವರಣ್ಣನ ಕರೆ ಬಂತು. ಆಕೆಯ ಕೈಗೆ ಮೊಬೈಲ್ ಕೊಟ್ಟು ಹೊರಗೆ ನೋಡುತ್ತಾ ಕುಳಿತೆ. ಒಂದು ನಿಮಿಷ, ಎರಡು ನಿಮಿಷ, ಐದು ನಿಮಿಷ.. ಊಹುಂ, ಅವಳ ಕರೆ ಅಂತ್ಯವಾಗುವ ಯಾವುದೇ ಲಕ್ಷಣಗಳಿರಲಿಲ್ಲ. ಯಾವ ಬಸ್ ಹತ್ತಿದ್ದೇನೆ, ಎಷ್ಟು ಹೊತ್ತಿಗೆ ಹತ್ತಿದ್ದೇನೆ, ಏನು ಊಟ ಮಾಡಿದೆ.. ಹೀಗೇ ಸಾಗುತ್ತಿತ್ತು ಆಕೆಯ ಮಾತು. ಅದೂ ಅಲ್ಲದೆ ಆಕೆಯ ಸೋ-ಕಾಲ್ಡ್ ಅಣ್ಣನನ್ನು "ಮಗಾ" ಎಂದು ಸಂಬೋಧಿಸುತ್ತಿದ್ದಳು. ಅಷ್ಟರಲ್ಲಿ ಕಂಡಕ್ಟರ್ ಬಂದು ಟಿಕೆಟ್ ಕೇಳಿದ. ಸುಮ್ಮನೆ ತನ್ನ ಟಿಕೆಟ್ ತೆಗೆಸುವ ಬದಲು "ಎಲ್ಲಿಗೆ ಹೋಗ್ತಿದೀರಿ ನೀವು?" ಎಂದು ನನ್ನನ್ನು ಕೇಳಿದಳು. ಎಲಾ ಇವಳ! ತನ್ನ ಟಿಕೆಟ್ ತೆಗೆಸಲು ನನ್ನ ಬಗ್ಗೆ ಯಾಕೆ ಕೇಳ್ತಿದ್ದಾಳೆ ಎಂದುಕೊಂಡೆ. ಆದರೂ ಮುಖದಲ್ಲೇನೂ ತೋರಗೊಡದೆ, "ಬೆಂಗಳೂರು" ಎಂದು ನನ್ನ ಟಿಕೆಟ್ ತೆಗೆದುಕೊಂಡೆ. "ನನಗೂ ಬೆಂಗಳೂರಿನ ಟಿಕೆಟ್ ಕೊಡಿ" ಎಂದಳು. ಹಾಗೆಯೇ ಆಕೆಯ ಕರೆಯೂ ಮುಗಿದಿತ್ತು. ಮೊಬೈಲ್ ವಾಪಸ್ ಕೊಟ್ಟಳು. "ಮತ್ತೆ ಮಾಡ್ತಾ ಇರ್ತಾರಂತೆ" ಎಂದಳು.

ಮನಸ್ಸು ಒಂದೇ ಸಮನೆ ತರ್ಕ ಶುರು ಮಾಡಿತು. ಯಾರೇ ಆಗಲಿ, ಬೇರೆಯವರ, ಅದೂ ಅಪರಿಚಿತರ ಮೊಬೈಲ್ ತೆಗೆದುಕೊಂಡು ಇಷ್ಟೊಂದು ಮಾತನಾಡುತ್ತಾರೆಯೆ? "ಏನ್ ಮಗಾ" ಎಂದು ಅಣ್ಣನನ್ನು ಕರೆಯುತ್ತಿದ್ದ ಆಕೆಯ ಭಾಷೆಯೋ ಬಯಲಸೀಮೆಯಲ್ಲೇ ಹುಟ್ಟಿ ಬೆಳೆದ ನನಗೂ ಮುಜುಗರ ತರಿಸುವಂತಿತ್ತು. ಒಂದು ಹುಡುಗಿ ತನ್ನ ಅಣ್ಣನೊಂದಿಗೆ ಹೀಗೆ ಮಾತನಾಡಬಹುದೆ? ಅಥವಾ ಆಕೆ ಅಣ್ಣನಲ್ಲದೆ ಬೇರೆ ಯಾರೊಂದಿಗೋ ಮಾತನಾಡುತ್ತಿದ್ದಿರಬಹುದೆ? ಅಷ್ಟಕ್ಕೂ ತಾನು ಟಿಕೆಟ್ ತೆಗೆಸಲು ನನ್ನ ಗಮ್ಯಸ್ಥಾನ ಕೇಳುವ ಅವಶ್ಯಕತೆಯಾದರೂ ಏನಿತ್ತು? ಹಿಂದಿನ ವಿಚಾರಗಳೆಲ್ಲವೂ ಮಾಯವಾಗಿ ಮನಸ್ಸು ಪೂರ್ತಿ ಬೇರೆ ವಿಚಾರಗಳೇ ತುಂಬಿಕೊಂಡವು. ಬೆಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ಗೆಳೆಯರು ನೆನಪಾದರು. ಒಬ್ಬೊಬ್ಬರದೂ ಒಂದೊಂದು ಕಥೆ. ಒಬ್ಬನು ಮೊಬೈಲ್‍ನಲ್ಲಿ ಮಾತನಾಡುತ್ತ ಬಸ್ ಇಳಿಯುವಾಗ ಕೈಯಿಂದಲೇ ಕಸಿದುಕೊಂಡು ಓಡಿಹೋಗಿದ್ದರು. ಇನ್ನೊಬ್ಬನ ಬಳಿ ಕಾಲ್ ಮಾಡಿಕೊಡುತ್ತೇನೆಂದು ಹೇಳಿ ಮೊಬೈಲ್ ತೆಗೆದುಕೊಂಡು ಅವನು ಅತ್ತಿತ್ತ ನೋಡುತ್ತಿದ್ದಾಗ ಚಳ್ಳೆ ಹಣ್ಣು ತಿನ್ನಿಸಿದ್ದರು. ಎರಡನೆಯ ಪ್ರಸಂಗಕ್ಕೂ ಈಗ ನಡೆಯುತ್ತಿದ್ದ ವಿದ್ಯಮಾನಕ್ಕೂ ತಾಳೆಯಾಗುವಂತೆ ಕಂಡುಬಂದಿತು. ನನ್ನ ಕೈಯಲ್ಲಿದ್ದಿದ್ದು Nokia N73m. ಕೇವಲ ಮೂರು ತಿಂಗಳ ಹಿಂದೆ ಕೊಂಡಿದ್ದು. ಅವರಣ್ಣ ಸ್ವಲ್ಪ ಹೊತ್ತಿನ ನಂತರ ಮತ್ತೆ ಕಾಲ್ ಮಾಡುತ್ತಾನೆ ಎಂದು ಬೇರೆ ಹೇಳಿದ್ದಳು. ಒಮ್ಮೆ ಯಾವ ಬಸ್ಸಿಗೆ ಬರುತ್ತಿದ್ದಾಳೆ ಎಂದು ತಿಳಿದ ಮೇಲೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮಾತನಾಡುವಂಥದ್ದು ಏನಿದ್ದೀತು? ಮುಂದೆ ಘಟಿಸಬಹುದಾದ ಘಟನೆಗಳು, ಅವುಗಳ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿ ಒಮ್ಮೆ ಎದೆ ಝಲ್ಲೆಂದಿತು.

ಮಂಗಳವಾರ ಪ್ರಯಾಣ ಶುಭಕರವಲ್ಲ ಎಂದು ಕೆಲವು ಗೆಳೆಯರು ಸೋಮವಾರವೇ ಹರಿಹರದಿಂದ ಹೊರಟಿದ್ದರು. ಏನಾದರೂ ಆಗಲಿ ಎಂದು ಅವರ ಮುಂದೆ ಕೊಚ್ಚಿಕೊಂಡು ಹೊರಟುಬಂದಿದ್ದ ನನಗೆ ಯಾಕಾದರೂ ಹೊರಟೆನೋ ಎಂದೆನಿಸಲು ಪ್ರಾರಂಭವಾಗಿತ್ತು. ನಾನು ಒಬ್ಬನೇ ಬೇರೆ ಇದ್ದೆ. ಅಕಸ್ಮಾತ್ ನಾನೆಂದುಕೊಂಡಂತೆಯೇ ಆದರೆ ಮೊಬೈಲ್ ನನ್ನ ಕೈ ಬಿಡುವುದು ಶತಃಸಿದ್ಧ. ಕೈಯಲ್ಲಿ ಎರಡು ಬ್ಯಾಗ್ ಬೇರೆ. ಮೊಬೈಲ್ ಕಸಿದುಕೊಂಡು ಓಡಿದರೆ ಅವರನ್ನು ಬೆನ್ನಟ್ಟುವಂತೆಯೂ ಇಲ್ಲ. ಈಗೇನು ಮಾಡುವುದು?

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ಸಂಗೋಽಸ್ತು ಅಕರ್ಮಣಿ

ಎಂಬ ಭಗವದ್ಗೀತೆಯ ವಾಕ್ಯ ನೆನಪಾಯಿತು.

(ಭಾಗ-೨ರಲ್ಲಿ ಮುಂದುವರೆದಿದೆ)