ಶುಕ್ರವಾರ, ಆಗಸ್ಟ್ 8, 2014

ಆಂಡ್ರಾಯ್ಡ್ ಫೋನಿನಲ್ಲಿ ಕನ್ನಡ ಬರೆಯುವುದು ಹೇಗೆ?

ಇದು ಸ್ಮಾರ್ಟ್ ಫೋನ್ ಯುಗ. ಬಹುತೇಕ ಎಲ್ಲರ ಬಳಿಯೂ ಒಂದಲ್ಲ ಒಂದು ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಅದರಲ್ಲಿಯೂ ಆಂಡ್ರಾಯ್ಡ್ ಫೋನುಗಳ ಪಾಲು ಅಧಿಕವಾಗಿದೆ. ಜೆಲ್ಲಿ ಬೀನ್ ಅಥವಾ ಅದರ ಮುಂದಿನ ಆವೃತ್ತಿಯ ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳ ಲಿಪಿಗಳನ್ನು ಯಾವುದೇ ತೊಂದರೆಯಿಲ್ಲದೇ ಓದಬಹುದು. ಆದರೆ ಬಹುತೇಕ ಜನರಿಗೆ ಎದುರಾಗುವ ಪ್ರಶ್ನೆ ಕನ್ನಡ ಬರೆಯುವುದು ಹೇಗೆ ಎಂದು.

ಕನ್ನಡ ಬರೆಯಲು ಸಹಕಾರಿಯಾಗುವ ಹಲವಾರು ಕೀಬೋರ್ಡ್ ತಂತ್ರಾಂಶಗಳಿವೆ. ಅವುಗಳಲ್ಲಿ ಕೆಲವನ್ನು ವಿಕಾಸ್ ಹೆಗಡೆಯವರು ಇಲ್ಲಿ ತಿಳಿಸಿದ್ದಾರೆ. ಇವುಗಳಲ್ಲಿ ನಾನು ಬಳಸಿರುವ ವಿಧಾನಗಳಲ್ಲಿ ಅತ್ಯಂತ ಸುಲಭವಾದದ್ದು ಮಲ್ಟಿಲಿಂಗ್ ಕೀಬೋರ್ಡ್. ಅದನ್ನು ಬಳಸುವುದು ಹೇಗೆ ಎಂದು ಇಲ್ಲಿ ವಿವರಿಸುತ್ತೇನೆ.

  • ಮೊದಲಿಗೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಮಲ್ಟಿಲಿಂಗ್ ಬೀಟಾ ಕೀಬೋರ್ಡನ್ನು ಅನುಸ್ಥಾಪಿಸಿಕೊಳ್ಳಿ. ಇಲ್ಲಿ ಕ್ಲಿಕ್ಕಿಸಿ: Multiling Keyboard (new beta)
  • ನಂತರ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ Settings -> Language & Input ಗೆ ಹೋಗಿ. ಅಲ್ಲಿ Multiling O Keyboard ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. 
  • Multiling O Keyboard ಪಕ್ಕದಲ್ಲಿ ಇರುವ ಸೆಟ್ಟಿಂಗ್ ಐಕಾನ್ ಒತ್ತಿ ಒಳಗೆ ಹೋಗಿ.
  • Downloads ಆಯ್ಕೆ ಮಾಡಿಕೊಳ್ಳಿ. ನಿಮ್ಮ ಫೋನಿನ ವೆಬ್ ಬ್ರೌಸರ್ ತೆರೆದುಕೊಳ್ಳುತ್ತದೆ.
  • Dictionaries ಆಯ್ಕೆ ಮಾಡಿಕೊಳ್ಳಿ. ಮುಂದಿನ ಪುಟದಲ್ಲಿ Other languages ಆಯ್ಕೆ ಮಾಡಿಕೊಳ್ಳಿ.
  • ಅದರ ಮುಂದಿನ ಪುಟದಲ್ಲಿ South Asia (Indic Languages) ಎಂಬುದನ್ನು ಆಯ್ದುಕೊಳ್ಳಿ.
  • ಅಲ್ಲಿ ಕನ್ನಡ ಸಹಿತ ಅನೇಕ ಭಾಷೆಗಳ ಪಟ್ಟಿ ಕಂಡುಬರುತ್ತದೆ. ಅಲ್ಲಿ ಕನ್ನಡ ಆಯ್ದುಕೊಳ್ಳಿ. (ಬೇರೆ ಭಾಷೆಗಳೂ ಬೇಕಾದಲ್ಲಿ ಅವುಗಳನ್ನೂ ಹಾಕಿಕೊಳ್ಳಬಹುದು).
  • Google Play Store (Android Market) ಅಥವಾ Alternative link ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಯಾವುದಾದರೂ ಅಪ್ಲಿಕೇಷನ್ ಓಪನ್ ಮಾಡಿ ಬರೆಯುವ ಜಾಗಕ್ಕೆ ಹೋಗಿ. ನಂತರ ಮೇಲೆ ನೋಟಿಫಿಕೇಷನ್ ಬಾರ್‌ನಲ್ಲಿ Choose input method ಎಂಬುದನ್ನು ಆಯ್ದುಕೊಳ್ಳಿ.
  • ಬರುವ ಆಯ್ಕೆಯಲ್ಲಿ Multiling O Keyboard ಎಂಬುದನ್ನು ಆಯ್ದುಕೊಳ್ಳಿ. ಈಗ ಮಲ್ಟಿಲಿಂಗ್ ಕೀಬೋರ್ಡ್ ಕಾಣಿಸಿಕೊಳ್ಳುತ್ತದೆ.
  • ಸ್ಪೇಸ್ ಬಾರ್ (ಅದರ ಮೇಲೆ English ಎಂದು ಬರೆದಿರುತ್ತದೆ) ಒತ್ತಿ ಹಿಡಿದುಕೊಂಡು Languages ಆಯ್ದುಕೊಳ್ಳಿ.
  • ಅಲ್ಲಿ South Asian ಆಯ್ದುಕೊಳ್ಳಿ ನಂತರ ಕನ್ನಡ ಆಯ್ದುಕೊಳ್ಳಿ.
  • ಕನ್ನಡ ಆಯ್ದುಕೊಳ್ಳಿ.
  • ನೀವು ಈಗ ಕನ್ನಡ ಬರೆಯಬಹುದು. ಇಂಗ್ಲಿಷ್ ಬೇಕಾದಲ್ಲಿ ಮತ್ತೆ ಸ್ಪೇಸ್ ಬಾರ್ ಒತ್ತಿ English ಆಯ್ದುಕೊಳ್ಳಬಹುದು.



ಕನ್ನಡ ಎಂದು ಬರೆಯಲು ಕ ನ   ್ ನ ಡ ಎಂದು ಬರೆಯಬೇಕಾಗುತ್ತದೆ.
ಕನ್ನಡ ಅಥವಾ ಭಾರತೀಯ ಭಾಷೆಗಳನ್ನು ಬರೆಯುವಾಗ ಒಂದು ಪದದ ಬದಲು ಇನ್ನೊಂದು ಪದ ಬರುವುದನ್ನು ತಪ್ಪಿಸಲು ಮಲ್ಟಿಲಿಂಗ್ ಕೀಬೋರ್ಡಿನ ಸೆಟ್ಟಿಂಗ್‌ಗೆ ಹೋಗಿ, Word Prediction -> Correction ಎಂಬುದನ್ನು ತೆಗೆದುಹಾಕಿ.
ಈ ಮಲ್ಟಿಲಿಂಗ್ ಬೀಟಾ ಕೀಬೋರ್ಡಿನಲ್ಲಿ ಆಂಗ್ಲದಲ್ಲಿ ಬರೆಯುವಂತೆ ಸ್ವೈಪ್ ಮಾಡಿ ಕೂಡ ಬರೆಯಬಹುದು.

ಸೋಮವಾರ, ಏಪ್ರಿಲ್ 14, 2014

ಅಬ್ ಕೀ ಬಾರ್ ಮೋದಿ ಸರ್ಕಾರ್

ಏಪ್ರಿಲ್ ೧೩ರ ಬೆಳಿಗ್ಗೆ ೯ ಘಂಟೆಗೆ "ಕವಲುದಾರಿಯಲ್ಲಿ ಭಾರತ - ಬಿಜೆಪಿ ದೃಷ್ಟಿ - ಶ್ರೀ ಮನೋಹರ ಪರಿಕ್ಕರ್ ಅವರೊಂದಿಗೆ ಒಂದು ಸಂವಾದ" ಎಂಬ ಕಾರ್ಯಕ್ರಮವನ್ನು ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಭಾನುವಾರ ಸೂರ್ಯ ನೆತ್ತಿಗೆ ಬರುವವರೆಗೂ ಏಳದ ನಾನು ಐಐಟಿಯಲ್ಲಿ ಓದಿಯೂ ಕೇಜ್ರಿವಾಲರಂತೆ ಅದರ ಬಗ್ಗೆ ಹೆಚ್ಚು ಹೇಳಿಕೊಳ್ಳದ, ಗೋವಾದ ಮುಖ್ಯಮಂತ್ರಿಯಾಗಿದ್ದರೂ ಸಾಮಾನ್ಯ ಜನರಂತೆಯೇ ಇದ್ದುಕೊಂಡು ಅದನ್ನು ಪ್ರಚಾರ ಮಾಡದ ಮನೋಹರ ಪರಿಕ್ಕರ್ ಅವರ ಬಗ್ಗೆ ಇದ್ದ ಕುತೂಹಲದಿಂದ ಕಾರ್ಯಕ್ರಮಕ್ಕೆ ನನ್ನ ಸ್ನೇಹಿತನೊಂದಿಗೆ ಹೋದೆ.

ಒಂಭತ್ತು ಘಂಟೆಯಿಂದಲೇ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ತಿಂಡಿ ತಿಂದು, ಸಭಾಂಗಣದ ಕಡೆ ಹೊರಟೆವು. ಸಭಾಂಗಣದ ಹೊರಗೆ ಇಟ್ಟಿದ್ದ ನರೇಂದ್ರ ಮೋದಿಯವರ ವ್ಯಕ್ತಿತ್ವದ ಬಗ್ಗೆ ಮತ್ತು ಈ ಬಾರಿ ಏಕೆ ಬಿಜೆಪಿಗೆ ಮತ ಹಾಕಬೇಕು ಎಂಬುದರ ಬಗ್ಗೆ ಕೆಲವು ಪುಸ್ತಕ, ಕರಪತ್ರಗಳನ್ನಿಟ್ಟಿದ್ದರು. ಅವುಗಳಲ್ಲಿ ಇಷ್ಟವಾಗಿದ್ದನ್ನು ತೆಗೆದುಕೊಂಡು ಹೋಗಿ ಓದುತ್ತಾ ಕುಳಿತುಕೊಂಡೆವು. ಕೆಲವೇ ಸಮಯದಲ್ಲಿ ಮನೋಹರ ಪರಿಕ್ಕರ್ ಬಂದರು. ಸೀದಾ ಸಾದಾ ಮನುಷ್ಯ. "ದಯವಿಟ್ಟು ಎಲ್ಲರೂ ನಿಮ್ಮ ನಿಮ್ಮ ಮೊಬೈಲನ್ನು ಮನಮೋಹನ್ ಸಿಂಗ್ ಮೋಡಿನಲ್ಲಿಡಿ" ಎಂದು ಆಯೋಜಕರು ಕಾರ್ಯಕ್ರಮ ಆರಂಭಿಸಿದಾಗಲೇ ಕಾರ್ಯಕ್ರಮ ಲವಲವಿಕೆಯಿಂದ ಕೂಡಿರುತ್ತದೆ ಎಂದು ಅರಿವಾಯಿತು.

ವಂದೇ ಮಾತರಂನಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ನ್ಯೂ ಹಾರಿಜನ್ ಕಾಲೇಜಿನ ಮುಖ್ಯಸ್ಥ ಮೋಹನ್ ಮಂಘ್ನಾನಿ ಮುಂತಾದವರು ಮಾತನಾಡದ ನಂತರ ಪರಿಕ್ಕರ್ ಅವರು ಮಾತು ಶುರು ಮಾಡಿದರು. ಹಿಂದಿಯಲ್ಲಿ ಮಾತನಾಡಲೇ, ಇಂಗ್ಲಿಷಿನಲ್ಲಿ ಮಾತನಾಡಲೇ ಎಂದು ಕೇಳಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದ್ದರಿಂದ "ಸರಿ, ಎರಡನ್ನೂ ಸೇರಿಸಿ ಮಾತನಾಡುತ್ತೇನೆ, ಇದು ದಕ್ಷಿಣ ಭಾರತವಾಗಿದ್ದರಿಂದ ಹಿಂದಿಯನ್ನು ಸ್ವಲ್ಪ ತಪ್ಪು ಮಾತನಾಡಿದರೂ ನಡೆಯುತ್ತದೆ. ಇಂಗ್ಲಿಷಿನಲ್ಲೂ ಹೇಳುತ್ತೇನೆ. ಇಲ್ಲಿ I and You ಮಾತ್ರ ಇದೆ. ಆಪ್ ಇಲ್ಲ" ಎಂದು AAP ಪಕ್ಷದ ಬಗ್ಗೆ ಪರೋಕ್ಷವಾಗಿ ಹೇಳಿ ಮಾತು ಪ್ರಾರಂಭಿಸಿದರು.

ಗೋವಾದ ಬಗ್ಗೆ, ಬಿಜೆಪಿ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿದರು. ನಂತರ ಪ್ರಶ್ನೋತ್ತರಗಳ ಸರದಿ. ಅವರು ಹೇಳಿದ್ದರಲ್ಲಿ ಕೆಲವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ:

  • ಅವರ ಐಐಟಿ ಓದಿನ ಬಗ್ಗೆ ಮಾತನಾಡಿ ಅರವಿಂದ ಕೇಜ್ರಿವಾಲ್ ಬಂದಮೇಲೆಯೇ ನನ್ನ ಐಐಟಿ ಓದಿನ ಬಗ್ಗೆ ದೇಶದ ಜನರಿಗೆ ತಿಳಿಯುತ್ತಿದೆ. ಅಲ್ಲಿಯವರೆಗೆ ಗೋವಾದಲ್ಲಿ ೧೨ ಐಟಿಐಗಳಿವೆ. ಅದರಲ್ಲಿ ಓದಿದವರಲ್ಲಿ ನೀವೂ ಒಬ್ಬರಾದರೆ ಅದರಲ್ಲೇನು ಹೆಚ್ಚುಗಾರಿಕೆ ಎಂದು ಕೇಳುತ್ತಿದ್ದರು ಎಂದು ಜನರನ್ನು ನಗೆಗಡಲಲ್ಲಿ ಮುಳುಗಿಸಿದರು (IIT ಮತ್ತು ITIಗಳಿಗೆ ಇರುವ ವ್ಯತ್ಯಾಸವನ್ನು ಗಮನಿಸಿ).
  • ನೀವು ಸಿಂಪಲ್ ಆಗಿ ಇರುತ್ತೀರಿ, ಅದರಿಂದ ನಿಮ್ಮ ಆಡಳಿತಕ್ಕೆ ಅನುಕೂಲವಾಗಿದೆಯೇ ಎಂದು ಕೇಳಿದಾಗ ಸರಳ ಜೀವನ ಎಂಬುದು ವೈಯಕ್ತಿಕ ಜೀವನ. ಅದು ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಬಲ್ಲುದೇ ಹೊರತು ನಿಮ್ಮ ಆಡಳಿತ ನಡೆಸುವ ವೈಖರಿಯನ್ನು ಖಂಡಿತ ಬದಲಿಸುವುದಿಲ್ಲ ಎಂದರು. ಅಲ್ಲದೇ ಅರವಿಂದ ಕೇಜ್ರಿವಾಲರಂತೆ ತಮ್ಮ ಸರಳತೆಯನ್ನು ಪ್ರಚಾರಕ್ಕಾಗಿ ಬಳಸುವುದು ತಪ್ಪು ಎಂದರು.
  • ಗೋವಾದಲ್ಲಿ ಈ ಬಾರಿ ೭೮% ಮತದಾನವಾಗಿದೆ. ಕಳೆದ ಬಾರಿಯ ೫೬%ಗಿಂತ ೨೨% ಹೆಚ್ಚು. ಇದರಲ್ಲಿ ದೇಶಾದ್ಯಂತ ೧೨% ಹೆಚ್ಚಾಗಿರುವುದನ್ನು ಗಣನೆಗೆ ತೆಗೆದುಕೊಂಡರೂ ಗೋವಾದಲ್ಲಿ ಮತ್ತೆ ೧೦% ಹೆಚ್ಚಾಗಿದೆ. ಇದಕ್ಕೆ ಉತ್ತಮ ಆಡಳಿತವೇ ಕಾರಣ. ಜನರಿಗೆ ನಾಯಕರ ಮೇಲಿನ ನಂಬಿಕೆ ಹೆಚ್ಚಾದಾಗ ಮತದಾನ ಹೆಚ್ಚಾಗುತ್ತದೆ ಎಂದರು.
  • ಅಧಿಕಾರಿಗಳೆಂದರೆ ಬಾಟಲಿಯಲ್ಲಿನ ನೀರಿದ್ದಂತೆ. ಅದಕ್ಕೆ ಬಣ್ಣ, ರುಚಿ, ಆಕಾರ ಯಾವುದೂ ಇರುವುದಿಲ್ಲ. ಯಾವ ನಾಯಕ ಬರುತ್ತಾನೋ, ಆ ರೀತಿಯ ಗುಣವನ್ನು ಅವು ಹೊಂದುತ್ತವೆ. ಈ ಬಾರಿ ಮೋದಿಯೆಂಬ ಶರಬತ್ತನ್ನು ಅದರಲ್ಲಿ ತುಂಬಿಸಿ ನೋಡಿ ಎಂದರು.
  • ನಿನ್ನೆ ಎರಡು ಸಂದರ್ಶನಗಳನ್ನು ನೋಡಿದೆ ರಾಹುಲ್ ಗಾಂಧಿಯವರ ಸಂದರ್ಶನದಲ್ಲಿ ಅವರು "ದೇಖಿಯೇ" ಎಂದರು, ನಾಲ್ಕು ಬಾರಿ ನೋಡಿದೆ. ಏನೂ ತಿಳಿಯಲಿಲ್ಲ. "ಸೋಚಿಯೇ" ಎಂದರು, ಏನು ಯೋಚಿಸಬೇಕೆಂದೇ ತಿಳಿಯಲಿಲ್ಲ. ಆ ವ್ಯಕ್ತಿಯನ್ನು ನೋಡಿದರೆ ಪಾಪ ಎನಿಸುತ್ತಿದೆ ಎಂದರು. ಅದೇ ಮೋದಿಯವರ ಸಂದರ್ಶನ ಸ್ಪಷ್ಟವಾಗಿ ನೇರವಾಗಿತ್ತು ಎಂದರು.
  • ಬಿಜೆಪಿಯನ್ನು ಕೋಮುವಾದಿ ಎನ್ನುವವರನ್ನು ತರಾಟೆಗೆ ತೆಗೆದುಕೊಂಡು, ಗೋವಾದಲ್ಲಿ ಬಿಜೆಪಿಯ ಆರು ಜನ ಕ್ಯಾಥೋಲಿಕ್ಕರಿದ್ದಾರೆ. ಅದರಲ್ಲಿ ಕೆಲವರು ಹಿಂದೂಗಳೇ ಹೆಚ್ಚಾಗಿರುವ ಕ್ಷೇತ್ರಗಳಿಂದ ಗೆದ್ದು ಬಂದವರು. ಅವರನ್ನೂ ಸೇರಿ ೧೦ ಜನ ಕ್ಯಾಥೋಲಿಕ್ ಶಾಸಕರಿಂದ ನನ್ನ ಸರ್ಕಾರ ನಡೆಯುತ್ತಿದೆ. ಅದು ಹಿಂದೂವಾದವೇ ಎಂದು ಮರುಪ್ರಶ್ನೆ ಹಾಕಿದರು.
  • ಬಿಜೆಪಿಯ ಪ್ರಣಾಳಿಕೆಗೂ, ಬೇರೆ ಪಕ್ಷಗಳ ಪ್ರಣಾಳಿಕೆಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆಗೆ "ಬಿಜೆಪಿಯ ಪ್ರಣಾಳಿಕೆ ಅನುಷ್ಠಾನಗೊಳ್ಳುತ್ತದೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು. ಕೇಂದ್ರ ಸರ್ಕಾರದ ಗಣಿ ನಿಷೇಧದಿಂದಾಗಿ ಗೋವಾದ ೨೫% ಆದಾಯ ಕಡಿಮೆಯಾಯಿತು. ಆದರೂ ತಮ್ಮ ಸರ್ಕಾರ ಎರಡೇ ವರ್ಷದಲ್ಲಿ ತಮ್ಮ ಪ್ರಣಾಳಿಕೆಯಲ್ಲಿದ್ದ ಸುಮಾರು ಶೇಕಡಾ ೮೦ರಿಂದ ೮೫ ಭಾಗವನ್ನು ಈಡೇರಿಸಿದೆ ಎಂದರು.
  • ಮನಮೋಹನ್ ಸಿಂಗ್ ಈಗಿನ ಪ್ರಧಾನಿ. ಸಿಂಗ್ ಎಂದರೆ ಸಿಂಹ ಎಂದರ್ಥ. ಆದರೆ ಈ ಕಾಂಗ್ರೆಸ್ ಸರ್ಕಾರ ಅವರನ್ನು ಘರ್ಜಿಸದಂತೆ ಮಾಡಿಬಿಟ್ಟಿದೆ. ಅವರನ್ನು ಮೂಕನನ್ನಾಗಿ ಮಾಡಿದೆ. ಅವರು ಅಕಸ್ಮಾತ್ ಬಾಯಿ ಬಿಟ್ಟರೆ "ಅಬ್ ಕೀ ಬಾರ್, ಮೋದಿ ಸರ್ಕಾರ್" ಎಂದು ಬಿಡುತ್ತಾರೆ ಎನ್ನುವ ವಾಟ್ಸಾಪ್ ಸಂದೇಶ ಬಂದಿತ್ತು ಎಂದರು.
  • ಗೋವಾದಲ್ಲಿ ಪೆಟ್ರೋಲ್ ಬೆಲೆ ೬೦ರೂಪಾಯಿ ಇದೆ. ಉಳಿದಿದ್ದೆಲ್ಲವೂ ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹೋಗುತ್ತದೆ. ನಿಜವಾಗಿ ಡಾಲರ್ ಬೆಲೆ ೨೫ ರೂಪಾಯಿಯ ಹತ್ತಿರ ಇರಬೇಕಿತ್ತು. ಕೇಂದ್ರ ಸರ್ಕಾರದ ಅನುಚಿತ ರಫ್ತು ನೀತಿಯಿಂದಾಗಿ ಈ ರೀತಿ ಬೆಲೆ ರೂಪಾಯಿಯ ಅಪಮೌಲ್ಯ, ಬೆಲೆ ಏರಿಕೆ ಉಂಟಾಗಿದೆ. ಈಗ ಮೋದಿ ಪ್ರಧಾನಿ ಆಗುತ್ತಾರೆ ಎಂಬ ಭರವಸೆಯಿಂದಲೇ ರೂಪಾಯಿ ಚೇತರಿಸಿಕೊಳ್ಳುತ್ತಿದೆ. ಇನ್ನು ಮೋದಿ ಪ್ರಧಾನಿ ಆಗಿಬಿಟ್ಟರೆ ರಾಜ್ಯ ಸರ್ಕಾರದ ತೆರಿಗೆ ಹೊರತಾಗಿಯೂ ಪೆಟ್ರೋಲ್ ಬೆಲೆ ೬೦ರ ಆಸುಪಾಸು ಸಿಗುವಂತಾಗುತ್ತದೆ ಎಂದರು.
  • ತಾವು ಹಿಂದೊಮ್ಮೆ ಅಮೆರಿಕಾಕ್ಕೆ ಹೋಗಿದ್ದಾಗ ಮಗ ಕೆಲಸಕ್ಕೆ ಹೋದಾಗ ತಾವು ವಾಲ್ಮಾರ್ಟ್‌ಗೆ ಹೋಗಿ ಅಲ್ಲಿನ ವಸ್ತುಗಳನ್ನು ನೋಡಿದ್ದರಂತೆ. ಅಲ್ಲಿ ಮೇಡ್ ಇನ್ ಮಲೇಷ್ಯಾ, ಮೇಡ್ ಇನ್ ಚೀನಾ, ಮೇಡ್ ಇನ್ ಥಾಯ್‌ಲ್ಯಾಂಡ್ ಎನ್ನುವ ಸರಕುಗಳಿದ್ದವೇ ಹೊರತು, ಮೇಡ್ ಇನ್ ಯೂಎಸ್‌ಎ ಎಂಬುದು ವಿರಳವಾಗಿತ್ತು. ಅಂದರೆ, ವಾಲ್ಮಾರ್ಟ್‌ನಂತಹ ಕಂಪನಿಗಳಿಂದ ದೇಶೀಯ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿಬಿಡುತ್ತದೆ. ಅದಕ್ಕಾಗಿಯೇ ಬಿಜೆಪಿಯು ಬಿಡಿ ಮಾರಾಟದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸುತ್ತಿದೆ ಎಂದರು.
  • ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಈಗಾಗಲೇ ಅಸ್ತಿತ್ವದಲ್ಲಿದೆ. ಅದರಿಂದ ಯಾವ ನಾಗರಿಕರಿಗೂ ತೊಂದರೆಯಾಗಿಲ್ಲ. ಅದು ದೇಶಾದ್ಯಂತ ಜಾರಿಯಾಗಬೇಕು ಎಂದರು.

ಇವುಗಳ ನಡುವೆ ಕೆಲವು ಕಥೆಗಳ ಮೂಲಕವೂ ಅವರು ತಮ್ಮ ಸಂದೇಶವನ್ನು ತಲುಪಿಸಿದರು. ಒಂದು ಬಾರಿ ಒಂದು ಎರಡು ಸಿಂಹಗಳು ತಪ್ಪಿಸಿಕೊಂಡುಬಿಟ್ಟವಂತೆ. ಒಂದು ಸಿಂಹ ಕಾಡಿನ ಕಡೆಗೂ, ಇನ್ನೊಂದು ಸಿಂಹ ನಾಡಿನ ಕಡೆಗೂ ಹೋದವಂತೆ. ಕಾಡಿನ ಸಿಂಹವನ್ನು ಐದೇ ದಿನದಲ್ಲಿ ಹಿಡಿದು ಪಂಜರದಲ್ಲಿ ಹಾಕಿದರಂತೆ. ನಾಡಿನ ಸಿಂಹವನ್ನು ಹಿಡಿಯಲು ಏಳೆಂಟು ತಿಂಗಳು ಹಿಡಿಯಿತಂತೆ. ಪಂಜರದಲ್ಲಿ ಒಟ್ಟುಸೇರಿದ ಮೇಲೆ ನಾಡಿನ ಸಿಂಹಕ್ಕೆ ಕಾಡಿನ ಸಿಂಹ ಕೇಳಿತಂತೆ: "ನಾನು ಕಾಡಿನಲ್ಲಿದ್ದವನು. ಕಾಡಿನ ರಾಜ. ಆದರೂ ಸಿಕ್ಕಿಹಾಕಿಕೊಂಡುಬಿಟ್ಟೆ. ನೀನು ನಾಡಿನಲ್ಲಿ ಹೇಗೆ ಯಾರಿಗೂ ಸಿಗದೇ ಇಷ್ಟು ದಿನ ಸ್ವತಂತ್ರವಾಗಿದ್ದೆ?". ಅದಕ್ಕೆ ನಾಡಿನ ಸಿಂಹ ಹೇಳಿತಂತೆ: "ನಾನು ಒಂದು ಸರ್ಕಾರಿ ಕಛೇರಿಯ ಕಡತಗಳ ಹಿಂದೆ ಅಡಗಿ ಕುಳಿತಿದ್ದೆ". ಕಾಡಿನ ಸಿಂಹ ಮತ್ತೆ ಕೇಳಿತಂತೆ: "ಹಾಗಾದರೆ ನೀನು ತಿನ್ನುವುದಕ್ಕೆ ಏನು ಮಾಡುತ್ತಿದ್ದೆ?". ಅದಕ್ಕೆ ನಾಡಿನ ಸಿಂಹ "ಹಸಿವಾದಾಗಲೆಲ್ಲ ಅಲ್ಲಿದ್ದ ಸರ್ಕಾರಿ ನೌಕರರನ್ನು ಒಬ್ಬೊಬ್ಬರಾಗಿ ತಿನ್ನುತ್ತಿದ್ದೆ. ಅದು ಯಾರಿಗೂ ತಿಳಿಯುತ್ತಿರಲೇ ಇಲ್ಲ" ಎಂದಿತಂತೆ. ಅದಕ್ಕೆ ಕುತೂಹಲಗೊಂಡ ಕಾಡಿನ ಸಿಂಹ ಕೇಳಿತಂತೆ "ಹಾಗಾದರೆ ನೀನು ಸಿಕ್ಕಿಹಾಕಿಕೊಂಡಿದ್ದು ಹೇಗೆ?". ಅದಕ್ಕೆ ನಾಡಿನ ಸಿಂಹ ಹೇಳಿತಂತೆ, "ತಿಳಿಯದೇ ಒಬ್ಬ ಚಹಾ ಮಾರುವ ಬಾಲಕನನ್ನು ತಿಂದುಬಿಟ್ಟೆ. ಅಲ್ಲಿನ ಸರ್ಕಾರಿ ನೌಕರರನ್ನು ತಿಂದಾಗ ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ತಮಗೆ ಹೊತ್ತು ಹೊತ್ತಿನ ಚಹಾ ಬರುವುದು ನಿಂತು ಹೋದಾಗ ಅವರೆಲ್ಲರೂ ಹುಡುಕಲಾರಂಭಿಸಿದರು. ನಾನು ಸಿಕ್ಕಿಹಾಕಿಕೊಂಡುಬಿಟ್ಟೆ. ತಪ್ಪೆಲ್ಲ ನನ್ನದೇ". ಇದರಿಂದ ಆಡಳಿತಯಂತ್ರದ ಜಡತ್ವ ಮತ್ತು ಚಹಾ ಮಾರುವ ಹುಡುಗನ (ಮೋದಿಯ) ಅಗತ್ಯವನ್ನು ಸಾರಿದರು.

ಇನ್ನೊಂದು ಕಥೆಯ ಮೂಲಕ ಏಕೆ ಮೋದಿಯ ಈಗಿನ ಅಗತ್ಯ ಎಂಬುದನ್ನು ಹೇಳಿದರು. "ನಾಲ್ಕನೇ ತರಗತಿಯಲ್ಲಿ ಒಂದು ಲೆಕ್ಕ ಕೇಳಲಾಗಿತ್ತು. ೬೦ ಕೊಡ ನೀರು ಹಿಡಿಯುವ ಒಂದು ಟ್ಯಾಂಕಿಗೆ ಒಬ್ಬನು ಘಂಟೆಗೆ ೧೫ ಕೊಡ ನೀರು ಹಾಕುವುದಾದರೆ, ಅದು ತುಂಬಲು ಎಷ್ಟು ಹೊತ್ತು ಬೇಕು?. ಇದು ಸುಲಭವಾದ ಲೆಕ್ಕ. ಬಹಳಷ್ಟು ಜನ ವಿದ್ಯಾರ್ಥಿಗಳು ನಾಲ್ಕು ಎಂದು ಹೇಳಿದರು. ಈಗ ಇನ್ನೊಂದು ವಿಷಯವನ್ನು ಪ್ರಶ್ನೆಗೆ ಸೇರಿಸಲಾಯಿತು. ಆ ಟ್ಯಾಂಕಿನಲ್ಲಿ ಒಂದು ತೂತಿದೆ. ಅದರಿಂದ ಘಂಟೆಗೆ ೮ ಕೊಡ ನೀರು ಸೋರಿ ಹೋಗುತ್ತದೆ. ಹಾಗಾದರೆ ಅದೇ ಟ್ಯಾಂಕನ್ನು ತುಂಬಲು ಈಗ ಎಷ್ಟು ಸಮಯ ಹಿಡಿಯುತ್ತದೆ?" ಇದಕ್ಕೆ ಪರಿಕ್ಕರ್ ಸಹಿತ ಕೆಲವರು ಉತ್ತರಿಸಿದ್ದರಂತೆ. ಆದರೆ ಅವರು ಹೇಳಿದ ಮಾತು ಮಾತ್ರ ಎಲ್ಲರೂ ಗಮನಿಸಬೇಕಾದ್ದು. "ನಾನು ನಾಲ್ಕನೇ ತರಗತಿಯಿಂದ ಮುಖ್ಯಮಂತ್ರಿಯಾಗುವವರೆಗೆ ಒಂದು ವಿಷಯ ಅರ್ಥವಾಗಲಿಲ್ಲ. ಲೆಕ್ಕ ಮಾಡುವುದೇನೋ ಸರಿ, ಆದರೆ ತೂತಾಗಿ ಸೋರುತ್ತಿರುವ ಟ್ಯಾಂಕಿಗೆ ಯಾಕೆ ನೀರು ತುಂಬಿಸಬೇಕು? ಮುಖ್ಯಮಂತ್ರಿಯಾದ ಮೇಲೆ ಅದು ಅರ್ಥವಾಯಿತು. ಸರ್ಕಾರದ ತಿಜೋರಿ ಎಂಬುದು ಸೋರುವ ಟ್ಯಾಂಕಿನಂತೆ. ಅದರಲ್ಲಿನ ದುಡ್ಡು ರಾಜಾರಂಥವರ ಮನೆಗೆ, ಕಲ್ಮಾಡಿಯಂಥವರ ಮನೆಗೆ ಸೋರಿ ಹೋಗುತ್ತದೆ. ಮೋದಿ ಪ್ರಧಾನಿಯಾದಮೇಲೆ ಮಾಡುವ ಮೊದಲ ಕೆಲಸ ಎಂದರೆ ಅಂತಹ ತೂತನ್ನು ಮುಚ್ಚುವುದು. ಅದರಿಂದ ದೇಶಕ್ಕೆ ಖಂಡಿತ ಒಳ್ಳೆಯದಾಗಲಿದೆ".

ನಾಳಿನ ಒಳಿತಿಗಾಗಿ, ಎಲ್ಲರೂ ಮತದಾನ ಮಾಡಿ! ಅಬ್ ಕೀ ಬಾರ್ ಮೋದಿ ಸರ್ಕಾರ್!!

ಶುಕ್ರವಾರ, ಫೆಬ್ರವರಿ 14, 2014

ಆಶಿಕೀ

ನಾ ನಿನ್ನನ್ನು ಬಿಟ್ಟಿರಲಾರೆ
ನನ್ನಯ ಬಾಳನು ಬೆಳಗುವೆಯಾ

ನಾ ನಿನ್ನನ್ನು ಬಿಟ್ಟಿರಲಾರೆ
ನನ್ನಯ ಬಾಳನು ಬೆಳಗುವೆಯಾ
ನೀನಿಲ್ಲದೆ ನಾ ಬಾಳಲಿ ಹೇಗೆ
ನನ್ನಯ ಪ್ರೀತಿಯ ಒಪ್ಪುವೆಯಾ

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ನಿನ್ನ ನನ್ನ ಜನುಮದ ಜೋಡಿ
ಹಾಲಿನ ಜೊತೆ ಸೇರಿದ ಜೇನು
ನನ್ನನು ನೀನು ಮಾಡಿಹೆ ಮೋಡಿ
ನೀನಿರದಿರೆ ನನ್ನ ಗತಿಯೇನು
ಬರದಿರಲಿ.. ನನಗಂಥ ದಿನ
ಉಸಿರಾಗಿಹೆ ನೀ ನನಗೆ..

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ಬಾರೇ ನೀ.. ಬಾರೇ ನೀ....
ನನ್ನನೆ ನಾ ಕಳೆದುಕೊಂಡೆ
ನಿನ್ನಲೆ ನಾ ಖುಷಿಯ ಕಂಡೆ
ನಿನ್ನಿಂದಲೇ ನಾನು ಬದಲಾದೆ
ನಿನ್ನ್ನೊಂದಿಗೆ ಸೇರಲನುವಾದೆ
ನಿನ್ನೊಡನೆ ಇರುವಾಸೆಯಿದೆ
ನಿನ್ನೊಪ್ಪಿಗೆಗಾಗಿ ನಾ ಕಾದೆ... ಹ್ಮ್..

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ಗುರುವಾರ, ಜನವರಿ 30, 2014

ಇದು ಕವನ ..... ವೇ (way)!?


    ಕವನ ಬರೆಯಲೇ ಬೇಕೆಂದು
    ಹಟ ಹಿಡಿದು ಕುಳಿತವಂಗೆ
    ಸಿಗುವುದು ಮೂರು ಕವಿಗಳು
    ಛಂದೊಬದ್ಧವಾಗಿರಬೇಕೆಂದರೆ
    ಪಂಪ ರನ್ನ ಪೊನ್ನ   
    ಅಛಂದವಾದರೂ ಚೆಂದವಾಗಿರಬೇಕಾದರೆ
    ಬೇಂದ್ರೆ ಕುವೆಂಪು ಪುತಿನ

     ಆದರೆ ,
             ಅವರಂತೆಯೇ ಬರೆವೆನೆಂಬುವಂಗೆ
             ಸಿಗಬಹುದು ಅವರ ನೂರು ಪದಗಳು
             ಸಿಗಲಾರವು ಅವರ ಭಾವನುಭವ ವಿನ್ಯಾಸಗಳು
             ಅನ್ಯರೊರೆದುದನೆ ಬರೆದುದನೆ ಬರೆಯಲು
             ಆಗುವುದು ಕಾವ್ಯವಲ್ಲ ಕನ್ನಡಿಯ ಚೂರು
             ತನ್ನಾಭಿವ್ಯಕ್ತಿಯ ಮುಡಿಸಿದರೆ ಅದು ಬರಿ ಕಾವ್ಯವಲ್ಲ ಚಂದ್ರನ ಹೋಳು .



ಗೆಳತಿಯ ಜನ್ಮ ದಿನಕ್ಕೆ ಈ ನನ್ನ ಕವನವಲ್ಲದ ಕವನದ ಉಡುಗೊರೆ