ಸೋಮವಾರ, ಏಪ್ರಿಲ್ 23, 2012

ಹಳೇ ಮಳೆ

ಬಿಸಿಗಾಲದಲ್ಲಿ ಖಗ ನೀಲದಲ್ಲಿ
ಹಿಂಡಾಗಿ ಬಂತು ಮೋಡ
ಮಳೆ ಬರುವುದೆಂಬ ಹೊಸ ಆಸೆಯೊಂದು
ಮೂಡಿತ್ತು ಮನದಿ ನೋಡ

ಕರಿಮೋಡ ಸುತ್ತ ಬರೆದಾನ ಬೆಳ್ಳಿ
ಗೆರೆಯಲ್ಲಿ ಸೂರ್ಯ ಚಿತ್ರ
ಮನೆಯಲ್ಲೆ ನಿಂತು ಸೊಬಗನ್ನ ನೋಡಿ
ನಲಿದಿತ್ತು ಮಗುವು ಮಿತ್ರ

ಕೋಲ್ಮಿಂಚಿನಾಟ ನೋಡುತ್ತ ಕಂದ
ಕೇಳಿತ್ತು ಗುಡುಗು ಸಿಡಿಲ
ಹೌಹಾರಿ ಬೆದರಿ ಕ್ಷಣದಲ್ಲಿ ತಾನು
ಸೇರಿತ್ತು ತಾಯಿ ಮಡಿಲ

ಬಾನನ್ನು ತೊರೆದು ಭುವಿಯತ್ತ ಹೊರಟು
ಸುರಿದಿತ್ತು ಮೊದಲ ಮಳೆಯು
ನೀರಲ್ಲಿ ಮಿಂದು ನೆಲವೆಲ್ಲ ನೆನೆದು
ಪಸರಿತ್ತು ಕಂಪ ಇಳೆಯು