ಬುಧವಾರ, ಡಿಸೆಂಬರ್ 29, 2010

ನಿನ್ನೆ

ಏನೋ ಒಂದು ಆತಂಕ. ಕುಳಿತಲ್ಲೇ ಕೈ ಬೆವರುತ್ತಿದೆ. ಸುತ್ತ ಮುತ್ತ ಇರುವವರೆಲ್ಲಾ ಗಡಿಬಿಡಿಯಲ್ಲಿ ತಮ್ಮ ಚೀಲದಿಂದ ಹೋಂವರ್ಕ್ ಪುಸ್ತಕ ಹೊರ ತೆರೆಯುತ್ತಿದ್ದರೆ ನಾನು ಹೆಸರನ್ನುಳಿದು ಮತ್ತೇನನ್ನೂ ಬರೆದಿರದ ಪುಸ್ತಕವನ್ನು ಕೈನಲ್ಲಿ ಹಿಡಿದು ಕುಳಿತ್ತಿದ್ದೆ. ಹೋಂವರ್ಕ್ ಮಾಡಿಲ್ಲ...

ಮಿಸ್ ಎಲ್ಲರಿಗೂ ತಮ್ಮ ಪುಸ್ತಕವನ್ನು ಅವರ ಮೇಜಿನ ಮೇಲೆ ಇಡಲು ಹೇಳುತ್ತಿದ್ದಾಗ ನನ್ನ ಹೋಂವರ್ಕ್ ಪುಸ್ತಕದ ಗರಿಗರಿ ಹಾಳೆಗಳ ವಾಸನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಒಬ್ಬೊಬ್ಬರಾಗಿ ಪುಸ್ತಕ ಇಟ್ಟು ಹಾಜರಿ ಹಾಕಿಸಿ ಬರುತ್ತಿದ್ದಾರೆ. ನನ್ನ ಪಕ್ಕದವ ಈಗಷ್ಟೇ ಎದ್ದು ಹೋದ, ಮುಂದಿನವ ನಾನೇ... ಕೈ ನಡುಗುತ್ತಿವೆ. ಗಂಟಲು ಒಣಗಿ ಬಹಳ ಹೊತ್ತಾಗಿದೆ. ಕಣ್ಣು ನೀರ ಹನಿಯಿಂದ ಮಂಜಾಗುತ್ತಿದೆ. ನನ್ನ ಸರದಿ...

ನಿನ್ನಿಂದಲೇ... ನಿನ್ನಿಂದಲೇ..

ಹುಲಿಯ ಮುಂದೆ ನಿಂತ ಹರಿಣದ ಮನಕ್ಕೆ ಆಹ್ಲಾದಕರವಾದ ಎಲ್ಲಿಂದಲೋ ತೇಲಿ ಬಂದ ಸಂಗೀತ ಸಾಂತ್ವನದ ಸಿಂಚನ ಮಾಡಿತ್ತು. ಹಾಡಿನಲ್ಲಿ ಮೈರೆಯಬೇಕೆನ್ನುವಷ್ಟರಲ್ಲಿ ಗಾಢ ಮೌನ.

"ನೇಕ್ಸ್ಟ್..."

ಮಿಸ್‌ನ ಗಟ್ಟಿಯಾದ ದ್ವನಿ ನನ್ನನ್ನು ಅಷ್ಟೇ ಗಟ್ಟಿಯಾಗಿ ನಡುಗಿಸಿಬಿಟ್ಟಿತು. ನನ್ನ ಖಾಲಿಪುಸ್ತಕ ಹಿಡಿದು ನಿಧಾನವಾಗಿ ಅವರೆಡೆಗೆ ಹೊರಟೆ. ನನ್ನ ಎದೆಯ ಬಡಿತ ಜೋರಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಏನೆಂದು ಹೇಳಲಿ? ಹತ್ತು ಹಲವು ಕಾಲ್ಪನಿಕ ಕಾರಣಗಳನ್ನು ಮನ್ನಸ್ಸು ಯೋಚಿಸುತ್ತಿತ್ತು.

ನಿನ್ನಿಂದಲೇ... ನಿನ್ನಿಂದಲೇ...

ಅರೇ, ಈ ಹಾಡನ್ನು ಎಲ್ಲೋ ಕೇಳಿದ್ದೀನಲ್ಲಾ!

ನನ್ನ ಖಾಲಿ ಪುಸ್ತಕವನ್ನು ಅವರ ಮೇಜಿನ ಮೇಲಿಟ್ಟೆ. ಅಂದಿನ ಹೋಂವರ್ಕ್ ಇರುವ ಪುಟವನ್ನು ಎಲ್ಲರೂ ತೆರೆದಿಟ್ಟಿದ್ದರು. ಮಿಸ್ ನನ್ನನ್ನೇ ನೋಡುತ್ತಿದ್ದರೆ ನಾನು ಅವರ ಕೈನಲ್ಲಿರುವ ಬೆತ್ತದತ್ತ ನೋಡಿ ಏನೂ ಮಾಡಲೂ ತೋಚದೆ ನಿಂತುಬಿಟ್ಟಿದ್ದೇನೆ.

ಜ್ವರ ಬಂದಿತ್ತು ಅಂತ ಹೇಳಲಾ, ಪುಸ್ತಕ ಕಳೆದು ಹೋಗಿತ್ತು ಆದ್ದರಿಂದ ಇಂದು ಹೊಸ ಪುಸ್ತಕ ಇಟ್ಟಿದ್ದೇನೆಂದು ಹೇಳಲಾ ಅಥವಾ ತೆರೆದಿರುವ ತರಗತಿಯ ಬಾಗಿಲಿನಿಂದ ಓಡಿಹೋಗಲಾ? ಊಹೂಂ, ಯಾವುದಕ್ಕೂ ಧೈರ್ಯ ಸಾಲುತ್ತಿಲ್ಲ. ಬೆತ್ತದೇಟು ಬೀಳುವುದು ಕಾಯಂ...

ನಿನ್ನಿಂದಲೇ... ನಿನ್ನಿಂದಲೇ...

ಅರೇ ಇದು ನನ್ನ ಮೊಬೈಲ್‌ನ ಅಲಾರಂ ಟ್ಯೂನ್. ನಾನು ಕನಸು ಕಾಣುತ್ತಿದ್ದೇನೆಯೇ? ಹೌದು ನಾನು ಶಾಲಾ ಮಟ್ಟವನ್ನು ಮೀರಿ ಇಂಜಿನೀರಿಂಗ್ ಮುಗಿಸಿ ಬಹಳ ವರ್ಷಗಳೇ ಆಯ್ತಲ್ಲಾ!

ಎಲ್ಲಿಂದಲೋ ಕಳಚಿಬಿದ್ದ ಅನುಭವ. ತನ್ನಪಾಡಿಗೆ ಹಾಡಿಕೊಳ್ಳುತ್ತಿದ್ದ ಮೊಬೈಲನ್ನು ಮಲಗಿಸಿ ಮತ್ತೆ ಹೊದಿಕೆ ಎಳೆದುಕೊಂಡು ಮಲಗಿದೆ. ನಿದ್ರೆ ಹತ್ತಲಿಲ್ಲ. ಏನನ್ನೋ ಕಳೆದುಕೊಂಡ ಬೇಸರ. ನೂರು ಬೆತ್ತದೇಟು ಬಿದ್ದರೂ ಸರಿ, ಕಳೆದು ಹೋದ ಆ ದಿನಗಳೊಳಗೆ ಧುಮುಕಬೇಕೆನ್ನುವ ಹಂಬಲ. ಬೆತ್ತದೇಟಿಗೆ ಹೆದರಿ ಬಿಗಿ ಹಿಡಿದಿದ್ದ ಮುಷ್ಟಿಯನ್ನು ನಿಧಾನವಾಗಿ ಸಡಿಲಿಸಿದೆ...

ಮಂಗಳವಾರ, ಡಿಸೆಂಬರ್ 7, 2010

ಮೌನದ ಮಾತಲ್ಲಿ......

ಕಣ್ಣುಗಳೆರಡು ಒಂದನ್ನೊಂದು ಸಂಧಿಸಲಾಗದೆ ಗೋಡೆಗಳ ಮೇಲಿನ ಚಿತ್ರಪಟಗಳ ಮೊರೆ ಹೋಗಿದ್ದವು. ಅಲ್ಲಿದ್ದ ಇಬ್ಬರ ನಡುವೆ ಇದ್ದುದು ಕೃತಕ ನಗೆ ಮಾತ್ರ. ಆದರೆ ಆ ನಗೆಯ ಮರೆಯಲ್ಲಿ ತುಂಬಿಕೊಂಡಂಥವು ನೂರಾರು ಭಾವಗಳು. ತಮ್ಮನ್ನು ತಾವೇ ಎಂದು ಬಿಂಬಿಸಿಕೊಳ್ಳಲಾರದೆ ತಾತ್ಕಾಲಿಕ ನಗೆಯ ರೂಪದ ಮುಖವಾಡ ತೊಟ್ಟಿದ್ದವು. ಆದರೆ ಮೊಗವಾಡದ ಒಳಗಿಂದ ಇಣುಕಿ ನೋಡುವ ಕಣ್ಣುಗಳು ಅದ್ಹೇಗೆ ತಾನೇ ಸುಮ್ಮನಿದ್ದಾವು?! ತಮಗರಿವಿಲ್ಲದಂತೆ ಜಾರಿಸಿದವು ಕಣ್ಣೀರ ಹನಿಗಳನು ತುಂಬಿಕೊಂಡು ಭಾರದ ಭಾವಗಳನು. ಆ ಕ್ಷಣದಲ್ಲಿ ಅಲ್ಲೊಂದು ದಿವ್ಯ ಮೌನ. ಅಲ್ಲಿದ್ದುದು ಕೇವಲ ಮೌನದ ಮಾತು. ಭಾವನೆಗಳು ಬೇರೆಯಾದರೇನು, ದುಃಖದ ಮೂಲ ಒಂದು ಎಂದು ಸಾರಿದ್ದವು ಜಾರಿ ಬಿದ್ದ ಹನಿಗಳು. ಬಿದ್ದ ಹನಿಗಳು ಒಂದಾಗಿ ಹೇಳಿದವು ನೊಂದ ಹೃದಯಗಳೇ ಒಂದಾಗಿ ಎಂದು. ಆದರೆ ಅದಾಗಲೇ ನೊಂದ ಹೃದಯಗಳು ಬೆಂದು ಹೋಗಿದ್ದವು. ಕಣ್ಣೀರ ಹನಿಗಳ ಕಥೆಯ ಕೇಳುವ ಮನಸ್ಸು ಕರಗುವ ಬದಲು ಸುಟ್ಟು ಕರಕಲಾಗಿದ್ದಿತು. ಕೋಪ ತಾಪಗಳು ಸುಟ್ಟು ಬೂದಿಯಾಗಿದ್ದವು. ಎರಡೂ ಹೃದಯಗಳಲ್ಲೂ ಈಗ ಯಾವ ಕೋಪವಿಲ್ಲ, ತಾಪವಿಲ್ಲ. ಹಾಗಾದರೆ ಆ ಎರಡು ಮನಗಳು ಮತ್ತೆ ಸೇರಿಯಾವೆ? ಒಂದಾಗಲು ಬಯಸಿ ಹುಡುಕುತ್ತಿವೆ ತಮ್ಮ ಕಳೆದು ಹೋದ ಪ್ರೀತಿಯನ್ನು, ಊಹುಂ... ಸಿಗಲಿಲ್ಲ! ಅರಿವಾಯಿತು ಎರಡೂ ಹೃದಯಗಳಿಗೆ ತಮ್ಮ ಪ್ರೀತಿ ಸಿಗಲು ಸಾಧ್ಯವೇ ಇಲ್ಲ! ತಾವೇ ಹಚ್ಚಿದ ಕೋಪ ತಾಪಗಳ ಕೆನ್ನಾಲಿಗೆಯು ತಮ್ಮ ಮಂಜಿನಂಥ ಪ್ರೀತಿಯನ್ನು ಎಂದೋ ಕರಗಿಸಿ ಇನ್ನಿಲ್ಲವಾಗಿಸಿದೆ ಎಂದು ನಶ್ವರತೆಯ ಬಿಂದುವಿನಲ್ಲಿ ಕಣ್ಣುಗಳು ಸಂಧಿಸಿ ಮುಚ್ಚಿದವು ಶಾಶ್ವತವಾಗಿ.


*** (ಇದೊಂದು ಎರಡು ಆಯಾಮಗಳ ಕಥೆ) ***


ಕಳೆದ ವರ್ಷ ಇದೇ ಸಮಯದಲ್ಲಿ ಕೋಪನ್‌ಹೇಗನ್‌ನಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಅದರಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾಗವಹಿಸಿದ್ದವು. ನನ್ನ ಕಥೆಯಲ್ಲಿ ಈ ಎರಡು ಬಣಗಳೇ ಎರಡು ಹೃದಯಗಳಾಗಿ ಮಿಡಿದಿವೆ. ಎಲ್ಲ ರಾಷ್ಟ್ರಗಳಿಗೂ ಹವಾಮಾನ ವೈಪರೀತ್ಯದ ಪರಿಣಾಮದುಂಟಾಗುವ ಭಾವನೆಗಳು ಒಳಗೆ ತುಂಬಿಕೊಂಡಿದ್ದರೂ ಎಲ್ಲರೂ ಕೃತಕ ನಗೆಯ ಮೂಲಕ ಸವಾಲನ್ನು ಹಗುರಾಗಿ ಸ್ವೀಕರಿಸಿದಂತೆ ತೋರ್ಗೊಡುತ್ತಿದ್ದರು. ಹವಾಮಾನ ವೈಪರೀತ್ಯದ ಗಹನತೆ ಅರಿತಾಗ ಎಲ್ಲರಿಗೂ ಒಳಗೊಳಗೇ ಆತಂಕ, ಆದರೆ ಜವಾಬ್ದಾರಿಯನ್ನು ಹೊರಲಾರದೆ ದಿವ್ಯ ಮೌನ. ಎಲ್ಲ ರಾಷ್ಟ್ರಗಳ ಅವಶ್ಯಕತೆ ಬೇರೆಯಾದರೂ ನಾಳೆ ನಾವು ಅನುಭವಿಸಬೇಕಾಗಿರುವ ದುಃಖದ ಮೂಲ ಒಂದೇ ಎಂದು ಹೇಳುತ್ತಿವೆ, ಆಗಲೇ ಅನುಭವಿಸುತ್ತಿರುವ ರಾಷ್ಟ್ರಗಳು. ಎಲ್ಲ ರಾಷ್ಟ್ರಗಳೂ ಅದನ್ನು ಉಪೇಕ್ಷಿಸಿ ತಮ್ಮ ಪ್ರತಿಷ್ಠೆಯನ್ನು ತೋರಲು ಸಮಸ್ಯೆಯನ್ನು ಹಾಗೇ ಬಿಟ್ಟಿದ್ದಾರೆ ಎಂದು ಭಾವಿಸಿ ಅದರ ಅಂತ್ಯವೇನಾಗಬಹುದೆಂಬುದನ್ನು ಕಥೆಯು ಹೇಳುತ್ತದೆ. ತಾವೇ ಮುಂದೊಂದು ದಿನ ತಮ್ಮ ಪ್ರತಿಷ್ಠೆ, ಅಹಂ (ಕೋಪ-ತಾಪ) ಅನ್ನು ತೊರೆದು ಒಂದಾಗಿ ಭುವಿಯ ರಕ್ಷಣೆಗೆ ಬಂದರೂ ಭೂ ತಾಪದಿಂದ ಹಿಮವೆಲ್ಲ ಕರಗಿ ಜಗತ್ತೇ ಮುಳುಗಿ ಹೋಗಿರುತ್ತದೆ. ಆಗ ಎಲ್ಲರೂ ನಿಸ್ಸಹಾಯಕರಾಗಿ ಕಣ್ಮುಚ್ಚಿ ಚಿರನಿದ್ರೆಗೆ ಜಾರಬೇಕಾಗುತ್ತದೆ.

ಈಗ ಈ ದೃಷ್ಟಿಕೋನದಿಂದ ಮತ್ತೊಮ್ಮೆ ಕಥೆಯನ್ನು ಓದುವಿರಾ?