ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಡಿಸೆಂಬರ್ 29, 2010

ನಿನ್ನೆ

ಏನೋ ಒಂದು ಆತಂಕ. ಕುಳಿತಲ್ಲೇ ಕೈ ಬೆವರುತ್ತಿದೆ. ಸುತ್ತ ಮುತ್ತ ಇರುವವರೆಲ್ಲಾ ಗಡಿಬಿಡಿಯಲ್ಲಿ ತಮ್ಮ ಚೀಲದಿಂದ ಹೋಂವರ್ಕ್ ಪುಸ್ತಕ ಹೊರ ತೆರೆಯುತ್ತಿದ್ದರೆ ನಾನು ಹೆಸರನ್ನುಳಿದು ಮತ್ತೇನನ್ನೂ ಬರೆದಿರದ ಪುಸ್ತಕವನ್ನು ಕೈನಲ್ಲಿ ಹಿಡಿದು ಕುಳಿತ್ತಿದ್ದೆ. ಹೋಂವರ್ಕ್ ಮಾಡಿಲ್ಲ...

ಮಿಸ್ ಎಲ್ಲರಿಗೂ ತಮ್ಮ ಪುಸ್ತಕವನ್ನು ಅವರ ಮೇಜಿನ ಮೇಲೆ ಇಡಲು ಹೇಳುತ್ತಿದ್ದಾಗ ನನ್ನ ಹೋಂವರ್ಕ್ ಪುಸ್ತಕದ ಗರಿಗರಿ ಹಾಳೆಗಳ ವಾಸನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಒಬ್ಬೊಬ್ಬರಾಗಿ ಪುಸ್ತಕ ಇಟ್ಟು ಹಾಜರಿ ಹಾಕಿಸಿ ಬರುತ್ತಿದ್ದಾರೆ. ನನ್ನ ಪಕ್ಕದವ ಈಗಷ್ಟೇ ಎದ್ದು ಹೋದ, ಮುಂದಿನವ ನಾನೇ... ಕೈ ನಡುಗುತ್ತಿವೆ. ಗಂಟಲು ಒಣಗಿ ಬಹಳ ಹೊತ್ತಾಗಿದೆ. ಕಣ್ಣು ನೀರ ಹನಿಯಿಂದ ಮಂಜಾಗುತ್ತಿದೆ. ನನ್ನ ಸರದಿ...

ನಿನ್ನಿಂದಲೇ... ನಿನ್ನಿಂದಲೇ..

ಹುಲಿಯ ಮುಂದೆ ನಿಂತ ಹರಿಣದ ಮನಕ್ಕೆ ಆಹ್ಲಾದಕರವಾದ ಎಲ್ಲಿಂದಲೋ ತೇಲಿ ಬಂದ ಸಂಗೀತ ಸಾಂತ್ವನದ ಸಿಂಚನ ಮಾಡಿತ್ತು. ಹಾಡಿನಲ್ಲಿ ಮೈರೆಯಬೇಕೆನ್ನುವಷ್ಟರಲ್ಲಿ ಗಾಢ ಮೌನ.

"ನೇಕ್ಸ್ಟ್..."

ಮಿಸ್‌ನ ಗಟ್ಟಿಯಾದ ದ್ವನಿ ನನ್ನನ್ನು ಅಷ್ಟೇ ಗಟ್ಟಿಯಾಗಿ ನಡುಗಿಸಿಬಿಟ್ಟಿತು. ನನ್ನ ಖಾಲಿಪುಸ್ತಕ ಹಿಡಿದು ನಿಧಾನವಾಗಿ ಅವರೆಡೆಗೆ ಹೊರಟೆ. ನನ್ನ ಎದೆಯ ಬಡಿತ ಜೋರಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಏನೆಂದು ಹೇಳಲಿ? ಹತ್ತು ಹಲವು ಕಾಲ್ಪನಿಕ ಕಾರಣಗಳನ್ನು ಮನ್ನಸ್ಸು ಯೋಚಿಸುತ್ತಿತ್ತು.

ನಿನ್ನಿಂದಲೇ... ನಿನ್ನಿಂದಲೇ...

ಅರೇ, ಈ ಹಾಡನ್ನು ಎಲ್ಲೋ ಕೇಳಿದ್ದೀನಲ್ಲಾ!

ನನ್ನ ಖಾಲಿ ಪುಸ್ತಕವನ್ನು ಅವರ ಮೇಜಿನ ಮೇಲಿಟ್ಟೆ. ಅಂದಿನ ಹೋಂವರ್ಕ್ ಇರುವ ಪುಟವನ್ನು ಎಲ್ಲರೂ ತೆರೆದಿಟ್ಟಿದ್ದರು. ಮಿಸ್ ನನ್ನನ್ನೇ ನೋಡುತ್ತಿದ್ದರೆ ನಾನು ಅವರ ಕೈನಲ್ಲಿರುವ ಬೆತ್ತದತ್ತ ನೋಡಿ ಏನೂ ಮಾಡಲೂ ತೋಚದೆ ನಿಂತುಬಿಟ್ಟಿದ್ದೇನೆ.

ಜ್ವರ ಬಂದಿತ್ತು ಅಂತ ಹೇಳಲಾ, ಪುಸ್ತಕ ಕಳೆದು ಹೋಗಿತ್ತು ಆದ್ದರಿಂದ ಇಂದು ಹೊಸ ಪುಸ್ತಕ ಇಟ್ಟಿದ್ದೇನೆಂದು ಹೇಳಲಾ ಅಥವಾ ತೆರೆದಿರುವ ತರಗತಿಯ ಬಾಗಿಲಿನಿಂದ ಓಡಿಹೋಗಲಾ? ಊಹೂಂ, ಯಾವುದಕ್ಕೂ ಧೈರ್ಯ ಸಾಲುತ್ತಿಲ್ಲ. ಬೆತ್ತದೇಟು ಬೀಳುವುದು ಕಾಯಂ...

ನಿನ್ನಿಂದಲೇ... ನಿನ್ನಿಂದಲೇ...

ಅರೇ ಇದು ನನ್ನ ಮೊಬೈಲ್‌ನ ಅಲಾರಂ ಟ್ಯೂನ್. ನಾನು ಕನಸು ಕಾಣುತ್ತಿದ್ದೇನೆಯೇ? ಹೌದು ನಾನು ಶಾಲಾ ಮಟ್ಟವನ್ನು ಮೀರಿ ಇಂಜಿನೀರಿಂಗ್ ಮುಗಿಸಿ ಬಹಳ ವರ್ಷಗಳೇ ಆಯ್ತಲ್ಲಾ!

ಎಲ್ಲಿಂದಲೋ ಕಳಚಿಬಿದ್ದ ಅನುಭವ. ತನ್ನಪಾಡಿಗೆ ಹಾಡಿಕೊಳ್ಳುತ್ತಿದ್ದ ಮೊಬೈಲನ್ನು ಮಲಗಿಸಿ ಮತ್ತೆ ಹೊದಿಕೆ ಎಳೆದುಕೊಂಡು ಮಲಗಿದೆ. ನಿದ್ರೆ ಹತ್ತಲಿಲ್ಲ. ಏನನ್ನೋ ಕಳೆದುಕೊಂಡ ಬೇಸರ. ನೂರು ಬೆತ್ತದೇಟು ಬಿದ್ದರೂ ಸರಿ, ಕಳೆದು ಹೋದ ಆ ದಿನಗಳೊಳಗೆ ಧುಮುಕಬೇಕೆನ್ನುವ ಹಂಬಲ. ಬೆತ್ತದೇಟಿಗೆ ಹೆದರಿ ಬಿಗಿ ಹಿಡಿದಿದ್ದ ಮುಷ್ಟಿಯನ್ನು ನಿಧಾನವಾಗಿ ಸಡಿಲಿಸಿದೆ...

ಮಂಗಳವಾರ, ಡಿಸೆಂಬರ್ 7, 2010

ಮೌನದ ಮಾತಲ್ಲಿ......

ಕಣ್ಣುಗಳೆರಡು ಒಂದನ್ನೊಂದು ಸಂಧಿಸಲಾಗದೆ ಗೋಡೆಗಳ ಮೇಲಿನ ಚಿತ್ರಪಟಗಳ ಮೊರೆ ಹೋಗಿದ್ದವು. ಅಲ್ಲಿದ್ದ ಇಬ್ಬರ ನಡುವೆ ಇದ್ದುದು ಕೃತಕ ನಗೆ ಮಾತ್ರ. ಆದರೆ ಆ ನಗೆಯ ಮರೆಯಲ್ಲಿ ತುಂಬಿಕೊಂಡಂಥವು ನೂರಾರು ಭಾವಗಳು. ತಮ್ಮನ್ನು ತಾವೇ ಎಂದು ಬಿಂಬಿಸಿಕೊಳ್ಳಲಾರದೆ ತಾತ್ಕಾಲಿಕ ನಗೆಯ ರೂಪದ ಮುಖವಾಡ ತೊಟ್ಟಿದ್ದವು. ಆದರೆ ಮೊಗವಾಡದ ಒಳಗಿಂದ ಇಣುಕಿ ನೋಡುವ ಕಣ್ಣುಗಳು ಅದ್ಹೇಗೆ ತಾನೇ ಸುಮ್ಮನಿದ್ದಾವು?! ತಮಗರಿವಿಲ್ಲದಂತೆ ಜಾರಿಸಿದವು ಕಣ್ಣೀರ ಹನಿಗಳನು ತುಂಬಿಕೊಂಡು ಭಾರದ ಭಾವಗಳನು. ಆ ಕ್ಷಣದಲ್ಲಿ ಅಲ್ಲೊಂದು ದಿವ್ಯ ಮೌನ. ಅಲ್ಲಿದ್ದುದು ಕೇವಲ ಮೌನದ ಮಾತು. ಭಾವನೆಗಳು ಬೇರೆಯಾದರೇನು, ದುಃಖದ ಮೂಲ ಒಂದು ಎಂದು ಸಾರಿದ್ದವು ಜಾರಿ ಬಿದ್ದ ಹನಿಗಳು. ಬಿದ್ದ ಹನಿಗಳು ಒಂದಾಗಿ ಹೇಳಿದವು ನೊಂದ ಹೃದಯಗಳೇ ಒಂದಾಗಿ ಎಂದು. ಆದರೆ ಅದಾಗಲೇ ನೊಂದ ಹೃದಯಗಳು ಬೆಂದು ಹೋಗಿದ್ದವು. ಕಣ್ಣೀರ ಹನಿಗಳ ಕಥೆಯ ಕೇಳುವ ಮನಸ್ಸು ಕರಗುವ ಬದಲು ಸುಟ್ಟು ಕರಕಲಾಗಿದ್ದಿತು. ಕೋಪ ತಾಪಗಳು ಸುಟ್ಟು ಬೂದಿಯಾಗಿದ್ದವು. ಎರಡೂ ಹೃದಯಗಳಲ್ಲೂ ಈಗ ಯಾವ ಕೋಪವಿಲ್ಲ, ತಾಪವಿಲ್ಲ. ಹಾಗಾದರೆ ಆ ಎರಡು ಮನಗಳು ಮತ್ತೆ ಸೇರಿಯಾವೆ? ಒಂದಾಗಲು ಬಯಸಿ ಹುಡುಕುತ್ತಿವೆ ತಮ್ಮ ಕಳೆದು ಹೋದ ಪ್ರೀತಿಯನ್ನು, ಊಹುಂ... ಸಿಗಲಿಲ್ಲ! ಅರಿವಾಯಿತು ಎರಡೂ ಹೃದಯಗಳಿಗೆ ತಮ್ಮ ಪ್ರೀತಿ ಸಿಗಲು ಸಾಧ್ಯವೇ ಇಲ್ಲ! ತಾವೇ ಹಚ್ಚಿದ ಕೋಪ ತಾಪಗಳ ಕೆನ್ನಾಲಿಗೆಯು ತಮ್ಮ ಮಂಜಿನಂಥ ಪ್ರೀತಿಯನ್ನು ಎಂದೋ ಕರಗಿಸಿ ಇನ್ನಿಲ್ಲವಾಗಿಸಿದೆ ಎಂದು ನಶ್ವರತೆಯ ಬಿಂದುವಿನಲ್ಲಿ ಕಣ್ಣುಗಳು ಸಂಧಿಸಿ ಮುಚ್ಚಿದವು ಶಾಶ್ವತವಾಗಿ.


*** (ಇದೊಂದು ಎರಡು ಆಯಾಮಗಳ ಕಥೆ) ***


ಕಳೆದ ವರ್ಷ ಇದೇ ಸಮಯದಲ್ಲಿ ಕೋಪನ್‌ಹೇಗನ್‌ನಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಅದರಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾಗವಹಿಸಿದ್ದವು. ನನ್ನ ಕಥೆಯಲ್ಲಿ ಈ ಎರಡು ಬಣಗಳೇ ಎರಡು ಹೃದಯಗಳಾಗಿ ಮಿಡಿದಿವೆ. ಎಲ್ಲ ರಾಷ್ಟ್ರಗಳಿಗೂ ಹವಾಮಾನ ವೈಪರೀತ್ಯದ ಪರಿಣಾಮದುಂಟಾಗುವ ಭಾವನೆಗಳು ಒಳಗೆ ತುಂಬಿಕೊಂಡಿದ್ದರೂ ಎಲ್ಲರೂ ಕೃತಕ ನಗೆಯ ಮೂಲಕ ಸವಾಲನ್ನು ಹಗುರಾಗಿ ಸ್ವೀಕರಿಸಿದಂತೆ ತೋರ್ಗೊಡುತ್ತಿದ್ದರು. ಹವಾಮಾನ ವೈಪರೀತ್ಯದ ಗಹನತೆ ಅರಿತಾಗ ಎಲ್ಲರಿಗೂ ಒಳಗೊಳಗೇ ಆತಂಕ, ಆದರೆ ಜವಾಬ್ದಾರಿಯನ್ನು ಹೊರಲಾರದೆ ದಿವ್ಯ ಮೌನ. ಎಲ್ಲ ರಾಷ್ಟ್ರಗಳ ಅವಶ್ಯಕತೆ ಬೇರೆಯಾದರೂ ನಾಳೆ ನಾವು ಅನುಭವಿಸಬೇಕಾಗಿರುವ ದುಃಖದ ಮೂಲ ಒಂದೇ ಎಂದು ಹೇಳುತ್ತಿವೆ, ಆಗಲೇ ಅನುಭವಿಸುತ್ತಿರುವ ರಾಷ್ಟ್ರಗಳು. ಎಲ್ಲ ರಾಷ್ಟ್ರಗಳೂ ಅದನ್ನು ಉಪೇಕ್ಷಿಸಿ ತಮ್ಮ ಪ್ರತಿಷ್ಠೆಯನ್ನು ತೋರಲು ಸಮಸ್ಯೆಯನ್ನು ಹಾಗೇ ಬಿಟ್ಟಿದ್ದಾರೆ ಎಂದು ಭಾವಿಸಿ ಅದರ ಅಂತ್ಯವೇನಾಗಬಹುದೆಂಬುದನ್ನು ಕಥೆಯು ಹೇಳುತ್ತದೆ. ತಾವೇ ಮುಂದೊಂದು ದಿನ ತಮ್ಮ ಪ್ರತಿಷ್ಠೆ, ಅಹಂ (ಕೋಪ-ತಾಪ) ಅನ್ನು ತೊರೆದು ಒಂದಾಗಿ ಭುವಿಯ ರಕ್ಷಣೆಗೆ ಬಂದರೂ ಭೂ ತಾಪದಿಂದ ಹಿಮವೆಲ್ಲ ಕರಗಿ ಜಗತ್ತೇ ಮುಳುಗಿ ಹೋಗಿರುತ್ತದೆ. ಆಗ ಎಲ್ಲರೂ ನಿಸ್ಸಹಾಯಕರಾಗಿ ಕಣ್ಮುಚ್ಚಿ ಚಿರನಿದ್ರೆಗೆ ಜಾರಬೇಕಾಗುತ್ತದೆ.

ಈಗ ಈ ದೃಷ್ಟಿಕೋನದಿಂದ ಮತ್ತೊಮ್ಮೆ ಕಥೆಯನ್ನು ಓದುವಿರಾ?

ಮಂಗಳವಾರ, ಅಕ್ಟೋಬರ್ 19, 2010

ಬೇಬೀಸ್ ಬಸ್ ಔಟ್


ಒಂದಿನಾನೂ ತಪ್ದೆ ಸರಿಯಾಗಿ ಬೆಳೆಗ್ಗೆ ೬.೩೦ಗೆ ಕೂಗಕ್ಕೆ ಶುರು ಮಾಡ್ಬಿಡತ್ತೆ ನನ್ ಮೊಬೈಲು. ನಾನ್ ದಿನಾ ನಾಲ್ಕ್‌ ಸರಿ ಅದನ್ನ ತೆಪ್ಪಗಾಗ್ಸಿ ಮುಕ್ಕಾಲ್ಗಂಟೆ ಆದ್ಮೇಲೇ ಎದ್ದೇಳದು ಅಂತ ಗೊತ್ತಿದ್ರೂ ಒಂದೈದ್ ನಿಮಿಷನೂ ಹಿಂದೆ-ಮುಂದೆ ಹೊಡ್ಕೊಂಡಿಲ್ಲ. ಅವತ್ತೂ ಹಾಗೇ ಆಯ್ತು. ಎಲ್ಲಾ ದಿನದ್ ತರ ಅವತ್ತೂ ಒಂದೈದ್ ಸರ್ತಿ ಸ್ನ್ನೂಜ್ ಮಾಡಿದ್ಮೇಲೇನೇ ಎದ್ದಿದ್ದು. ದಡಬಡ ಅಂತ ತಯಾರಾಗಿ, ಅಜ್ಜಿಗೆ ಒಂದ್‌ಸರ್ತಿ ಮುಖ ತೋರ್ಸಿ ಬೈಕ್ ಹತ್ತಿ ಐ.ಟಿ.ಪಿ.ಬಿ ಬಾಗ್ಲಿಗೆ ಬಂದಾಗ್ಲೇ ನಾನ್ ನನ್ ಐಡಿ ಮರ್ತು ಬಂದಿರದು ಗೊತ್ತಾಗಿದ್ದು. ೮ ಗಂಟೆ ಒಳಗೆ ಲಾಗ್‌ಇನ್ ಆಗ್ತಿದೌನು ೯ ದಾಟಿದ್ಮೇಲೆ ಮನೆ ಬಿಡಕ್ಕೆ ಶುರುಮಾಡಿ ಬಾಳಾ ದಿನಾನೇ ಆಗಿತ್ತು. ಇವತ್ತು ಸಮಯ ಆಗ್ಲೇ ೯.೪೦ ದಾಟಿತ್ತು. ಬಿಗ್‌ಬಜಾರ್, ಎಸ್.ಎ.ಪಿ ಹತ್ರ ಟ್ರಾಫಿಕ್ ನೆನೆಸ್ಕೊಂಡು ಮತ್ತೆ ಮನೆ ತಂಕಾ ಹೋಗ್ಬರಕ್ಕೆ ಬೇಜಾರಾಯ್ತು. ಐ.ಟಿ.ಪಿ.ಬಿ ಬಾಗ್ಲಲ್ಲಿ ಸಂದರ್ಶಕರ ಪಾಸ್ ತಗೋಳೋಕ್ನಿಂತಿರೋರ್ನ ನೋಡಿ ಆ ಅರ್ಧ ಮೈಲಿ ಸಾಲಲ್ಲಿ ನಿಂತು ಕಾಯೋಕಿಂತ ಮುಕ್ಕಾಲ್ಗಂಟೆ ಟ್ರಾಫಿಕ್‌ನಲ್ಲಿ ಮನೆಗೆ ಹೋಗಿಬರೋದೇ ವಾಸಿ ಅಂನ್ಕೊಂಡೆ.


ಅಂದ್ಕೋಂಡ ಹಾಗೇ ಟ್ರಾಫಿಕ್‌ ಜಾಸ್ತಿನೇ ಇತ್ತು. ಅಡ್ಡ ನುಗ್ಗೋರ್ನ ಬೈಕೊಂಡು, ಫುಟ್‌ಪಾತ್ ಮೇಲೆ ಬೈಕ್ ಹತ್ತಿಸಿ ಮನೆ ಸೇರೋದ್ರೊಳಗೆ ಸಮಯ ಆಗ್ಲೇ ೧೦.೩೦ ದಾಟಿತ್ತು. ಹ್ಮೂಂ, ಇವತ್ತು ರಜ ಹಾಕ್ಬಿಡಣ ಅಂತ ಯೋಚ್ನೆ ಬಂತು. ಏನಾದ್ರು ಆಗ್ಲಿ ಆಫಿಸ್‌ಗೆ ಬೇಗ ಹೋಗಿ ಮಾಡೋದೂ ಅಷ್ಟರಲ್ಲೇ ಇದೆ ಅಂದ್ಕೊಂಡು ಪುನಃ ಹೊರಟೆ. ಯಾವತ್ತೂ ಇಲ್ಲದ ಟ್ರಾಫಿಕ್ ಇವತ್ತು ಸಿ.ಎಮ್.ಆರ್ ಹತ್ರದಿಂದನೇ ಕಚ್ಕೋಂಡಿತ್ತು. ನಮ್ ವೋಲ್ವೋ ಬಸ್‌ಗಳೋ, ರಸ್ತೆ ಮಧ್ಯೆ ನಿಲ್ಲಿಸಿ ಜನರನ್ನ ಇಳಿಸ್ತಾವೆ. ಅಂಥಾ ೩ ಬಸ್‌ಗಳು ನನ್ನ ಮುಂದೆ ಟ್ರಾಫಿಕ್ಕಿಗೆ ನಾನ್ ಕಾರಣ ಅಲ್ಲ ಅನ್ನೋತರ ಒಂದನ್ನೊಂದು ಓವರ್‌ಟೇಕ್ ಮಾಡೋ ಆತುರದಲ್ಲಿ ಪೂರ್ಣ ರಸ್ತೆ ಜಾಮಾಗಿತ್ತು. ಒಳ್ಳೇ ಕಥೆ ಆಯ್ತಲ್ಲಾ, ಇವತ್ತು ಮೇಲ್‌ ಚೆಕ್ ಮಾಡಿದ ತಕ್ಷಣ ಕ್ಯಾಂಟೀನ್‌ಗೆ ಹೋಗೋದು ಬೇಡ, ಒಟ್ಟಿಗೇ ಊಟಕ್ಕೇ ಹೋದ್ರೆ ಆಯ್ತು ಅಂತ ಮನಸ್ನಲ್ಲೇ ಲೆಕ್ಕಾಚಾರಾ ಹಾಕ್ಕೊಂಡೆ. ಅಷ್ಟರಲ್ಲಿ ಸ್ನೇಹಿತನೊಬ್ಬಂಗೆ ನನ್ನ ನೆನಪಾಗಿ ಕಾಲ್ ಮಾಡ್ದ. ಹೇಗೂ ಒಂದಿಂಚೂ ಮುಂದೆಹೋಗೋಕಾದ್ತಿರ್ಲಿಲ್ಲ, ಹೆಲ್ಮೆಟ್ ತೆಗೆದು ಮಾತಾಡೋಕ್ಕೆ ಶುರು ಮಾಡ್ದೆ. ನಾನ್ ೫ ನಿಮಿಷ ಮತಾಡಿ ಮುಗ್ಸಿದ್ರೂ ಟ್ರಾಫಿಕ್ ಕ್ಲಿಯರ್ ಆಗೋ ಯಾವ್ದೇ ಲಕ್ಷಣ ಕಾಣಿಸ್ತಿರ್ಲಿಲ್ಲ. ಸರಿ, ಇನ್ನೇನ್ ಮಾಡೋದು, ಸುತ್ತಾ ಮುತ್ತಾ ಇರೋ ಜನ್ರನ್ನಾ,ಎದುರುಗಡೆಯಿಂದ ಬರೋ ವೊಲ್ವೋಗಳನ್ನಾ, ಅದ್ರಲ್ಲಿರೋ ಹುಡ್ಗೀರ್ನ ಜನರನ್ನ ನೋಡ್ತಾ ನಿಂತ್ಕೊಂಡಿದ್ದೆ. ಐ.ಟಿ ನವ್ರು ಜಾಸ್ತಿ ಕೊಟ್ರೆ ಏನೂ ಆಗಲ್ಲಾ ಅಂತಾನೋ, ಅತ್ವಾ ಮಾಮೂಲಿ ಬಸ್‌ಗಳಿಗೆ ಅವ್ರು ಹತ್ತಲ್ಲ ಅಂತಾನೋ,ನಮ್ ರೂಟಲ್ಲಿ ಮಾಮೂಲಿ ಬಸ್‌ಗಳಿಗಿಂತ ವೋಲ್ವೂಗಳೇ ಜಾಸ್ತಿ.


ಐ.ಟಿ.ಪಿ.ಎಲ್‌ಗೆ ಹೋಗೋ ರಸ್ತೆ ಜಾಮಾಗಿದ್ರೂ ವಾಪಸ್ ಬರೋ ರಸ್ತೆ ಅಷ್ಟು ಟ್ರಾಫಿಕ್ ಇಲ್ರಿಲ್ಲ. ಅಷ್ಟರಲ್ಲಿ ಮೆಜೆಷ್ಟಿಕ್‌ಗೆ ಹೊರಟ್ಟಿದ್ದ ವೋಲ್ವೋ ಯಾವ್ದೂ ರೇಸ್ನಲ್ಲಿ ಬಿದ್ದಿರೋ ತರಾ ಜನರನ್ನ ಇಳಿಸಿ ಮುಂದೆ ಹೋಯ್ತು. ಮುಕ್ಕಾಲು ಇಂಜಿನೀರಿಂಗ್ ಕಾಲೇಜ್‌ನವ್ರಿದ್ರು. ಅವರೆಲ್ಲರ ಜೊತೆ ಒಂದು ೨-೩ ವರ್ಷದ ಮಗೂನೂ ಇಳಿದಿತ್ತು. ಟಿ.ವಿ ಜಾಹಿರಾತುಗಳಲ್ಲಿ ಬರುತ್ವಲ್ಲಾ, ಹಾಗೆ, ತುಂಬಾ ಮುದ್ದಾಗಿತ್ತು. ಮಾಮೂಲಿ ರೀತಿಲಿ ನಾನು ದೂರದಿಂದಲೇ 'ಹಾಯ್' ಮಾಡ್ದೆ. ಒಂದ್ಸರ್ತಿ ನನ್ನ ನೋಡಿ ಸ್ವಲ್ಪ ನಕ್ಕು ಬೇರೆ ಕಡೆ ತಿರುಗ್ಬಿಡ್ತು. ಅದ್ರ ಶೂ ನೆಡೆದಾಗ 'ಪುಯ್-ಪುಯ್' ಅನ್ನುತ್ತಲ್ಲಾ, ಆತರದ್ದು. ನಾವೆಲ್ಲಾ ಟ್ರಾಫಿಕ್ ಮಧ್ಯೆ ಯಾವ್ದೋ ಚಿಂತೆಲಿ ಮುಳ್ಗಿರೋ ಹೊತ್ತಲ್ಲಿ ಯಾವ್ ಚಿಂತೇನೂ ಇಲ್ದೇ ಆರಾಮವಾಗಿ ನಗ್ತಿರೋ ಮಗೂ ನೋಡಿ ಒಂದು ಕ್ಷಣ ನಾನು ಕಳೆದು ಹೋಗಿದ್ದು ಸುಳ್ಳಲ್ಲ.


ಬಸ್‌ನಿಂದ ಇಳಿದ ಜನ ಸ್ವಲ್ಪ ಹೊತ್ತಲ್ಲಿ ಅವರವರ ಪಾಡಿಗೆ ನಡೆದು ಹೋದ್ರು. ಅಯ್ಯೋ, ಮಗು ಮಾತ್ರಾ ಒಂದೇ ನಿಂತಿದೆ. ಯಾರಾದ್ರು ಜೊತೆಗೆ ಇದ್ದಾರಾ ಅಂತ ನಾನು ನಿಂತಲ್ಲೇ ಹುಡುಕ್ತಿದ್ದೆ, ಅದು ಕಿಟಾರನೆ ಚೀರಿ ಅಳೋಕೆ ಶುರು ಮಾಡ್ತು... ಇನ್ನೂ ಒಂದೆರಡು ಕ್ಷಣ ನೋಡಿದೆ, ಊಹ್ಮೂಂ, ಯಾರೂ ಮಗು ಕಡೆಯವ್ರು ಅದರ ಹತ್ರ ಬತ್ರಿಲ್ಲ... ಮಗು ಬಸ್‌ನಿಂದಾನೇ ಇಳೀತಾ ಅಥವಾ ಮೊದ್ಲೇ ಅಲ್ಲೇ ಇತ್ತಾ? ಬಸ್‌ನಿಂದ ಇಳಿದ್ಮೇಲೆ ಮಗೂನ ಬಿಟ್ಟು ಹೋಗ್ಬಿಟ್ರಾ? ಅಥ್ವಾ ಮಗು ತಾನು ಮಾತ್ರಾ ಬಸ್‌ನಿಂದ ಇಳ್ಕೋಂಡ್‌ಬಿಡ್ತಾ??? ತಲೇಲಿ ತರಾವರಿ ಯೋಚನೆಗಳು ಬಂದು ಹೋದ್ವು. ತಿರುಗಿ ನೋಡ್ದೆ, ಟ್ರಾಫಿಕ್ ಸಾಗರದ ಮಧ್ಯೆ ಆ ಬಸ್ ಇನ್ನೂ ಕಾಣ್ತಾ ಇತ್ತು. ನನ್ ಬೈಕ್‍ನ ಅಲ್ಲೇ ಬಿಟ್ಟು ಮಗು ಹತ್ರ ಓಡ್ದೆ. 'ಹಲೋ, ಈ ಮಗು ನಿಂಮ್ದಾ...?' ಅಂತ ಸ್ವಲ್ಪ ದೂರ ನಿಂತಿದ್ದವನ್ರೆಲ್ಲಾ ಕೇಳಿದ್ರೂ ಹೌದು ಇಲ್ಲ ಅಂತಾ ಕೂಡಾ ಉತ್ರ ಕೊಡ್ದೆ ಜನ ನಿಂತಿದ್ರು. ಉಫ್, ನಾನು ಇರೋದು ಬೆಂಗ್ಳೂರಲ್ಲಿ ಅಂತ ನೆನಪ್ಮಾಡ್ಕೊಂಡು ಇಂಗ್ಲೀಷ್‌ನಲ್ಲೂ ಕೇಳಿದ್ದಾಯ್ತು (ನಂಗೆ ತಮಿಳು, ತೆಲುಗು ಬರೋಲ್ಲ). ಈಗ 'ನೋ' ಅಂತಾ ಉತ್ರ ಸಿಕ್ಕಿದ್ದೇ ಲಾಭ. ಮಗು ಬಸ್ ಕಡೆ ಕೈ ತೋಸ್ರಿ 'ಮಮ್ಮಿ...' ಅಂತ ಅಳ್ತಿರೋದ್ ಬಿಟ್ಟು ಇನ್ನೇನೂ ಮಾತಾಡ್ತಿಲ್ಲ. ನಿನ್ನಪ್ಪ, ಅಮ್ಮ ಎಲ್ಲಿ ಅಂತಾ ಮಗೂನ ಕನ್ನಡ ಇಂಗ್ಲೀಷ್ ಎರಡರಲ್ಲೂ ಕೇಳ್ದೆ. ಅಳೋದ್ ಬಿಟ್ಟು ಇನ್ನೇನೂ ಹೇಳ್ಲಿಲ್ಲ.


ನನ್ ಹತ್ರ ಇದಿದ್ದು ೩ ದಾರಿ. ಒಂದು ಮಗೂನ ಅಲ್ಲೆ ಬಿಟ್ಟು ನನ್ ಪಾಡಿಗೆ ನಾನು ಆಫಿಸ್‌ಗೆ ಹೋಗ್ಬಿಡೋದು. ಎರಡನೇದು ಪೋಲೀಸ್‌ಗೆ ಮಗೂ ಕೊಡೋದು. ಕಡೇದು ಇನ್ನೂ ಕಾಣ್ತಿರೋ ಬಸ್‌ನ ಫಾಲೋ ಮಾಡಿ ಹಿಡ್ದು, ಅದರಲ್ಲಿ ಮಗೂ ಕಡೆಯವ್ರು ಇದ್ದಾರಾಂತ ನೋಡೋದು. ಮಗೂನ ಅಲ್ಲೇ ಬಿಟ್ಟು ಹೋಗಕ್ಕೆ ಮನಸಾಗ್ಲಿಲ್ಲ. ಮೊದ್ಲು ಬಸ್‌ನಲ್ಲಿ ನೋಡಿ ಅಲ್ಲಿ ಸಂಬಂಧ ಪಟ್ಟವ್ರು ಯಾರೂ ಇರ್ಲಿಲ್ಲ ಅಂದ್ರೆ ಪೋಲೀಸ್‌ಗೆ ಕೊಟ್ಟ್ರಾಯ್ತು ಅಂತ ಅಂದ್ಕೊಂಡು ಮಗೂನ ಎತ್ಕೊಂಡೆ. ಯಾರಾದ್ರು ತಪ್ಪಾಗಿ ತಿಳ್ಕೋಂಡು ಧರ್ಮದೇಟು ಕೊಡೋಕ್ಕೆ ಬರ್ತಿದ್ದಾರಾ ಅಂತ ನೋಡ್ದೆ. ಸುತ್ತಾ ಮುತ್ತಾ ಇದ್ದ ಜನ ಕಳ್ಳನನ್ನ ನೋಡೋತರ ನೋಡಿದ್ರೆ ಹೊರ್ತು ಯಾರಪ್ಪ ನೀನು, ಮಗು ಯಾರ್ದು ಅಂತ ಕೇಳೋ ಗೋಜಿಗೇ ಹೋಗ್ಲಿಲ್ಲ. ಜಾಸ್ತಿ ರಂಪಾಟ ಮಾಡ್ದೆ ಮಗು ಸುಮ್ನೆ ನಂಜೊತೆ ಬಂತು. ರೋಡ್ ಕ್ರಾಸ್ ಮಾಡಿ ನನ್ ಬೈಕ್ ಹತ್ರ ಬರೋ ಹೊತ್ತಿಗೆ ಸ್ವಲ್ಪ ಟ್ರಾಫಿಕ್ ರಿಲೀಸ್ ಆಗಿತ್ತು. ಹತ್ತಿರದಲ್ಲಿ ಯು ಟರ್ನ್ ಇರ್ಲಿಲ್ಲ. ಮುಂದೆ ಹೋಗಿ ಯು ಟರ್ನ್ ತಗೊಂಡು ಬರೋತನಕ ಬಸ್ ನನಗಾಗಿ ಕಾಯ್ತಾ ನಿಂತಿರುತ್ತೆ ಅನ್ನೋ ಭ್ರಮೆಗೆ ಒಳಗಾಗ್ದೆ ರಾಂಗ್ ಸೈಡ್‌ನಲ್ಲೇ ಗಾಡಿ ಓಡಿಸ್ಕೋಂಡ್ ಹೊರ್ಟೆ.


ಎದುರಿಗೆ ಸಿಕ್ಕವರೆಲ್ಲಾ ನನ್ನ ಕೆಕ್ಕರಿಸಿ ನೋಡ್ತಿದ್ರು (ರಾಂಗ್ ಸೈಡ್‌ ಯಾರಾದ್ರು ಬಂದ್ರೆ ನಾನೂ ಹಾಗೇ ನೋಡೋದು ಬಿಡಿ). ಇಷ್ಟೋತಂಕ ಅಳ್ತಿದ್ದ ಮಗು ಈಗ ಸ್ವಲ್ಪ ಸುಮ್ಮನಾಗಿ ಸರ್ಕಸ್ ರೈಡ್ ಎಂಜಾಯ್ ಮಾಡ್ತಿತ್ತು. ಟಾಟಾ ಮೋಟಾರ್ಸ್ ಹತ್ರ ಎಡಗಡೆ ರೋಡಿಗೆ ಸೇರೋಕ್ಕೆ ಜಾಗ ಇತ್ತು. ಇನ್ನೇನು ಬೈಕ್ ಪಕ್ಕಕ್ಕೆ ತಿರುಗಿಸಬೇಕು, ಎದುರಿನಿಂದ ಬಂದ (ಅವ್ರು ಸರಿಯಾಗೇ ಬರ್ತಿದ್ರು, ನಾನೇ ರಾಂಗ್‌ಸೈಡ್ ನಲ್ಲಿದ್ದೆ) ಒಂದು ಸ್ವಿಫ್ಟ್ ಯು ಟರ್ನ್ ತಗೋಳಕ್ಕೆ ಹೋಗಿ ಹಿಂದೇನೂ ಹೋಗಕ್ಕಾಗ್ದೆ, ಮುಂದೆನೂ ಬರೋಕ್ಕಾಗ್ದೆ ಸಿಕ್ಕಾಕ್ಕೋಂಡ್ ಬಿಡ್ತು. ಸಾಮಾನ್ಯವಾಗಿ ಇಂತಾ ಸನ್ನಿವೇಶಗಳು ಎದುರಾದಾಗ ಡ್ರೈವರ್ ಹುಡುಗನೋ, ಹುಡುಗಿಯೋ, ಅಜ್ಜನೋ ಅಜ್ಜಿಯೋ ಅಥವಾ ಲೈಸನ್ಸ್ ಇಲ್ಲದಿರೋ ಮಕ್ಕಳೋ ಅಂತ ಒಂದು ಊಹೆ ಮಾಡೊದು ನನ್ನ ಅಭ್ಯಾಸ. ಈ ಬಾರಿಯೂ ನನ್ನ ಊಹೆ ಸರಿಯಾಗಿತ್ತು. ಡ್ರೈವರ್ ಸೀಟ್‌ನಲ್ಲಿರೋರು ಗಾಬರಿಯಾಗಿ ಚಡಪಡಾಯಿಸ್ತಿರೋದು ಕಾಣಿಸ್ತಿತ್ತು. ಇದೆಲ್ಲಾ ಸರ್ಕಸ್‌ಗಳು ನಡಿತಿರ್ಬೇಕಾದ್ರೆ ಬಸ್ ಮುಂದೆ ಹೋಗಿದ್ದು ಕಾಣಿಸ್ತು. ಜನ ಏನಾರ್ದು ಬೈಕೊಳ್ಳಿ ಅಂತ ಅಂದ್ಕೋಂಡು ಎಲ್ಲರ ಮಧ್ಯೆನೇ ಬೈಕ್ ನುಗ್ಸಿ ಎಡಗಡೆಗೆ ಬಂದೆ. ಬಸ್ ಆಗ್ಲೇ ಬ್ರೂಕ್‌ಫೀಲ್ಡ್ ನಿಲ್ದಾಣದಿಂದ ಮುಂದೆ ಹೋಗಿತ್ತು. ನನ್ ಸ್ನೇಹಿತ್ರು ಹೇಳೋ ಭಾಷೆಲಿ, ವಿಡಿಯೋ ಗೇಮ್ ತರ ಬೈಕ್ ಓಡಿಸ್ಕೋಂಡು ಹೋದೆ. ಕಾಸ್ಮೋಸ್ ಹತ್ರ ಹೊಸ್ದಾಗಿ ಹಂಪ್ ಹಾಕಿದ್ರು. ಅದ್ರ ಮುಂದೆ ಯಾದುದೋ ನದಿಯ ಮೂಲ ಹರಿದು ಹೋಗ್ತಿತ್ತು (ನಾವು ೨ ವರ್ಷದ ಹಿಂದೆ ಮನೆ ಹುಡ್ಕಕ್ಕೆ ಈ ಏರಿಯಾದಲ್ಲಿ ಅಡ್ಡಾಡ್ಬೇಕಾದ್ರೆ ಮೊದಲಸಲ ನೋಡಿದ್ದೆ. ಬಹುಶಃ ಈ ನದಿ ಮೂಲಕ್ಕೆ ಇನ್ನೂ ದೊಡ್ದ ಇತಿಹಾಸ ಇರಬಹುದು. ಹನಿ-ಹನಿ ಉಳಿಸಿ ಅಂತ ಹೊಡ್ಕೊಳ್ಳೊ ಮಹಾನಗರಪಾಲಿಕೆಗೆ ವರ್ಷಗಳಿಂದ ನಿರಂತರ ಸೋರ್ತಿರೋ ಪೈಪ್ ಸರಿ ಮಾಡೋ ಮನಸ್ಸಾಗಿಲ್ಲ). ಅನಿವಾರ್ಯವಾಗಿ ಸ್ಪೀಡ್ ಕಮ್ಮಿ ಮಾಡ್ಕುಳ್ಳೇಬೇಕಾಯ್ತು. ಸರಿ, ಅಲ್ಲಿಂದ ರಿಲಯನ್ಸ್ ಫ್ರೆಶ್ ತನಕ ರೇಸ್ ನಡ್ಸಿದ್ರೂ ಕುಂದಲಹಳ್ಳಿ ಸರ್ಕಲ್ ಸಿಗ್ನಲ್‌ನಲ್ಲಿ ನನ್ನ ಮತ್ತು ಬಸ್ ಮಧ್ಯೆ ಹತ್ತಾರು ಬೇರೆ ವಾಹನಗಳು ಸೈಕಲ್ ಕೂಡಾ ಹೋಗೋಕ್ಕಾಗ್ದಷ್ಟು ಒತ್ತಾಗಿ ನಿಂತ್ಕೊಂಡಿದ್ವು. ಗಾಡಿ ಅಲ್ಲೇ ನಿಲ್ಸಿ ಮಗೂ ಎತ್ಕೋಂಡ್ ಬಸ್ ಹತ್ರ ಓಡ್ಬೇಕು ಅಂತ ಗಾಡಿಯಿಂದ ಇಳ್ಯಕ್ಕೂ, ಸಿಗ್ನಲ್ ಬೀಳಕ್ಕೂ ಸರಿಹೋಯ್ತು. ಇನ್ನೂ ಹಸಿರು ದೀಪ ಹತ್ತಿಲ್ಲ, ಆಗ್ಲೇ ನಮ್ ಬಸ್ ಡ್ರೈವರ್ ಮಹಾಶಯ ಬಲಗಡೆ ಮಾರುತಹಳ್ಳಿ ಕಡೆ ಬಸ್ ತಿರುಗಿಸಿಯಾಗಿತ್ತು (ಭಾರತದಲ್ಲಿ ಎಫ್೧ ರೇಸ್ಗಳು ಯಾಕೆ ಜಾಸ್ತಿ ಪ್ರಸಿದ್ದಿಯಲ್ಲಿಲ್ಲ ಅಂತ ಅವತ್ತು ಗೊತ್ತಾಯ್ತು. ಜನಕ್ಕೆ ದಿನಾ ರೇಸ್ ಮಾಡಿ, ಎಫ್೧ನಲ್ಲಿ ಏನೂ ಸ್ಪೆಷಲ್ ಕಾಣೋಲ್ವೇನೋ!). ನಾನು ಕುಂದಲಹಳ್ಳಿ ಸರ್ಕಲ್ ಕ್ರಾಸ್ ಮಾಡೋ ಹೊತ್ತಿಗೆ ಬಸ್ ಒಂದು ಸ್ಟಾಪ್ ಕೊಟ್ಟು ಮುಂದೆ ಹೊರಟಾಗಿತ್ತು. ಆ ರೋಡ್ನಲ್ಲಿ ಟ್ರಾಫಿಕ್ಕೇ ಇರ್ಲಿಲ್ಲ. ಮಾರುತಹಳ್ಳಿ ಬ್ರಿಡ್ಜ್ ಮೇಲೆ ಇದ್ದ ಟ್ರಾಫಿಕ್ಕಿಗೇ ಮತ್ತೆ ಬಸ್ ನಿಂತಿದ್ದು. ಈ ಸಾರಿ ಯಾವ್ದೇ ತಪ್ಪು ಮಾಡ್ದೇ ಬಸ್ನ ಹಿಂದೆನೇ ಹೋಗಿ ಬೈಕ್ ನಿಲ್ಲಿಸಿ ಮಗು ಎತ್ಕೊಂಡು ಬಸ್ ಬಾಗಿಲಿನ ಹತ್ರ ಓಡಿದೆ.


ಹಿಂದೆ ೩ ಸ್ಟಾಪ್‌ಗಳಲ್ಲಿ ಮಗು ಕಡೆಯವ್ರು ಇಳ್ಕೋಂಡ್ ಬಿಟ್ರಾಂತ ಒಂದು ಸಣ್ಣ ಭಯ ಶುರುವಾಗಿತ್ತು. ಬಸ್ ಪಕ್ಕಕ್ಕೆ ಹೋಗ್ತಿದ್ದ ಹಾಗೇ ಪಪ್ಪಾ... ಅಂತ ಯಾರನ್ನೋ ತೋರ್ಸಿ ಅಳೋಕ್ಕೆ ಶುರು ಮಾಡ್ತು. ಉಫ್, ನಾನು ಮೊದಲಸಲ ಒಂದು ಮಗು ಅಳೋದು ಕೇಳಿ ಖುಷ್ ಆಗಿದ್ದೆ. ಆ ವ್ಯಕ್ತಿ ಸುಮಾರು ೩೫ರ ಆಜುಜಾಜಿನವರಿರಬೇಕು. ಮಗೂನ ಕಿಡ್ಕಿಲಿ ನೋಡಿದ ತಕ್ಷಣ ಬಾಗಿಲು ತೆಗ್ಸಿ ಓಡಿ ಬಂದ್ರು. ಆಚೆ ಬಂದವ್ರೇ "೧ ಮಿನಿಟ್ ಸಾರ್..." ಅಂತೇಳಿ ಮತ್ತೆ ಬಸ್ ಒಳಗೆ ಓಡಿದ್ರು, ಮಗು ನನ್ ಹತ್ರಾನೇ ಬಿಟ್ಟು! ಇದೋಳ್ಳೇ ಕಥೆ ಆಯ್ತಲಪ್ಪಾ ಅಂತ ಏನೂ ಅರ್ಥ ಆಗ್ದೇ ನಿಂತಿದ್ದೆ. ಈ ನಡುವೆ ಮಗು ಮತ್ತೆ ಅಳು ನಿಲ್ಲಿಸಿತ್ತು. ಬಸ್‍ನಿಂದ ಆ ವ್ಯಕ್ತಿ ಒಬ್ಬರು ಹೆಂಗಸಿನ ಜೊತೆ ಹೊರಗೆ ಬಂದ್ರು. ಮಗುವಿನ ತಾಯಿ ಅದನ್ನ ಎಳ್ಕೋಂಡು ತಬ್ಬಿ ಅಳೋಕ್ಕೆ ಶುರು ಮಾಡಿದ್ರು. ಇಷ್ಟೋತಂಕ ಸುಮ್ನಿದ್ದ ಮಗೂನೂ ಅಳೋಕೆ ಶುರು ಮಾಡ್ತು. ನಂಗೆ 'ಥ್ಯಾಂಕ್ಸ್ ಸಾರ್..' ಅಂತೇಳಿದ ಆ ವ್ಯಕ್ತಿ ಮಗು ತಾಯಿನ ಹಿಂದಿ ತರಾ ಕೇಳೋ ಭಾಷೆಲಿ ಬಯ್ಯೋಕ್ಕೆ ಶುರು ಮಾಡ್ದ. ನಂಗೆ ಆಫಿಸ್ ನೆನಪಾಗಿ, ಮಾಮೂಲಿ ಬೈಗುಳ ಬೈದು, ಮಗು ಒಂದೇ ಹೇಗೆ ಬಸ್‌ನಿಂದ ಕಳಗಿಳಿತು ಅಂತ ತಿಳ್ಕೋಂಡು ಹೊರಟೆ. ತಿರುಗಿ ನೋಡಿದೆ, ಮಗು ಇನ್ನೂ ಬಿಕ್ಕಳಿಸಿ ಅಳುತ್ತಿತ್ತು.


ಮುಂದೆ ಅರ್ಧ ಕಿಲೋಮೀಟರ್ ತನಕ ಯು ಟರ್ನ್ ಇರ್ಲಿಲ್ಲ. ೧೧.೧೫ ದಾಟಿದ್ರೂ ಆಫಿಸ್‌ನಲ್ಲಿ ಲಾಗ್‌ಇನ್ ಆಗಿ, ಕ್ಯಾಂಟೀನ್‌ನಲ್ಲಿ ಟೀ ಹೀರುತ್ತಾ ಎಲ್ಲವನ್ನೂ ಮತ್ತೆ ಯೋಚಿಸಿದೆ. ಅಲ್ಲಿ ಆದದ್ದಿಷ್ಟು, ಐ.ಟಿ.ಪಿ.ಎಲ್ ಹತ್ರ ಮಗು ಮತ್ತು ಅದರ ತಂದೆ ಬಸ್‌ನ ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದಾರೆ, ಅದರ ತಾಯಿ ಮುಂಭಾಗದ ಸೀಟ್‌. ಸ್ವಲ್ಪ ಹೊತ್ತಿನಲ್ಲಿ ಆಕೆಗೆ ನಿದ್ದೆ ಹತ್ತಿದೆ. ಮಗು ತಾಯಿ ಹತ್ರ ಹೋಗ್ಬೇಕು ಅಂತ ಹೇಳಿದಕ್ಕೆ ಅದರ ತಂದೆ ಮುಂದೆ ಇದ್ದಾರೆ ಹೋಗು ಅಂತ ಬಿಟ್ಟು ತಾನೂ ನಿದ್ದೆ ಮಾಡಿದ್ದಾರೆ. ಅಷ್ಟರಲ್ಲಿ ಸಿ.ಎಮ್.ಆರ್ ಸ್ಟಾಪ್ ಬಂದಿದೆ. ಬೇರೇ ಜನಗಳ ಜೋತೆ ಮಗೂನೂ ಇಳ್ಕೋಂಡ್ಬಿಟ್ಟಿದೆ...

ಸೋಮವಾರ, ಸೆಪ್ಟೆಂಬರ್ 22, 2008

ಮಳೆಗಾಲದ ಒಂದು ಸಂಜೆ...

ಮಳೆಗಾಲದ ಒಂದು ಸಂಜೆ. ಅಮ್ಮ ಮಾಡಿದ್ದ ಬಿಸಿ ಬಿಸಿ ಬೋಂಡ ತಿನ್ನುತ್ತಾ ಕಾಫಿ ಹೀರುತ್ತಾ ಜಗಲಿಯಲ್ಲಿ ಕೂತು ತಳಿಗಳ ಮೂಲಕ ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದೆ. ಮನಸ್ಸು ನಾಲ್ಕು ವರ್ಷ ಹಿಂದಕ್ಕೆ ಕರೆದೊಯ್ದಿತು.
***

ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೇ ತಿಂಗಳು. ೧೫ ದಿನದಲ್ಲಿ ಪರೀಕ್ಷೆ ಇದ್ದರೂ ಅರ್ಧ ಸಿಲೆಬಸ್ ಕೂಡ ಮುಗಿದಿರಲಿಲ್ಲ. ಶನಿವಾರ ಸ್ಪೆಷಲ್ ಕ್ಲಾಸ್ ಇಟ್ಟಿದ್ದರು. ಬಹಳಷ್ಟು ಮಂದಿ ಚಕ್ಕರ್ ಹಾಕಿದ್ದರು. ಇದ್ದವರು ನಾವೇ ೮ ಹುಡುಗರು, ೫ ಹುಡುಗಿಯರು. ನನ್ನನ್ನು ಮತ್ತು ಮೂವರು ಹುಡುಗಿಯರನ್ನು ಬಿಟ್ಟರೆ ಉಳಿದವರೆಲ್ಲ ಹಾಸ್ಟೆಲ್ ನಲ್ಲಿ ಇದ್ದವರು.

ಮನೆಯಲ್ಲಿ ಕೂತು ಓದಲಾಗದ ನಾನು ಪಾಠವನ್ನಾದರೂ ಕೇಳೋಣ ಎಂದು ಹೋಗಿದ್ದೆ. ಪಾಠವೇನೂ ಅಷ್ಟೊಂದು ಆಸಕ್ತಿದಾಯಕವಾಗಿರಲಿಲ್ಲ. ಸುಮ್ಮನೆ ಲೆಕ್ಚರರ್ ಹೇಳಿದ್ದನ್ನು ಕೇಳುತ್ತಾ, ನೋಟ್ಸ್ ಗೀಚುತ್ತಾ ಕುಳಿತಿದ್ದೆ. ಹೊರಗೆ ಆಚಾನಕ್ ಮಳೆ ಸುರಿಯಲಾರಂಭಿಸಿತು. ಸುಮಾರು ಮುಕ್ಕಾಲು ಘಂಟೆ ಕಳೆದ ಮೇಲೆ ಕ್ಲಾಸ್ ಮುಗಿಯಿತು. ಎಲ್ಲರೂ ಹೊರಗೆ ಬಂದೆವು. ಬೇಸಿಗೆಯಲ್ಲಿ ಮಳೆ ಬರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಯಾರ ಬಳಿಯೂ ಕೊಡೆ ಇರಲಿಲ್ಲ. ಕಾಲೇಜಿನ ಹಿಂದೇ ಹಾಸ್ಟೆಲ್ ಇದ್ದಿದ್ದರಿಂದ ೭ ಜನ ಹುಡುಗರೂ ಬೇಗ ಓಡಿ ಹೋಗಿ ರೂಮ್ ಸೇರಿಕೊಂಡುಬಿಟ್ಟರು. ೨ ಹುಡುಗಿಯರೂ ಅದೇ ಕೆಲಸ ಮಾಡಿದರು. ಉಳಿದ ಮೂವರು ಹುಡುಗಿಯರಲ್ಲಿ ಒಬ್ಬಳ ಬಳಿ ಸ್ಕೂಟಿ ಇತ್ತು. ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೊಬ್ಬಳನ್ನು ಕರೆದುಕೊಂಡು ಹೋಗಿಬಿಟ್ಟಳು. ಉಳಿದವರಿಬ್ಬರೇ: ನಾನು ಮತ್ತು ಆಕೆ.

ಹುಡುಗಿಯರನ್ನು ಕಂಡರೆ ನನಗೆ ಅದೆಂಥದೋ ಸಂಕೋಚವಿತ್ತು. ಎತ್ತಲೋ ನೋಡುತ್ತಾ ಸುಮ್ಮನೆ ನಿಂತಿದ್ದೆ. ೫ ನಿಮಿಷ ಆಕೆಯೂ ಸುಮ್ಮನೆ ನಿಂತಿದ್ದಳು. ಮೌನ ಆಕೆಗೆ ಬೇಸರ ತರಿಸಿರಬೇಕು. ಟೈಮ್ ಎಷ್ಟು ಎಂದು ಕೇಳಿದಳು. ಆಕೆಯತ್ತ ತಿರುಗಿ ೪:೪೦ ಎಂದೆ. ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ಚಿಂತೆ ಕಂಡು ಬಂದಿತ್ತು. ಎರಡು ನಿಮಿಷ ಮೌನ. ಮನೆ ಎಲ್ಲಿ ಎಂದು ಕೇಳಿದಳು. ಉತ್ತರಿಸಿ ಮತ್ತೆ ಸುಮ್ಮನಾದೆ. ಮತ್ತೆ ಎರಡು ನಿಮಿಷ ಮೌನ. ಆಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದರೂ ಮೆಕ್ಯಾನಿಕಲ್ ಆಗಿ ಉತ್ತರಿಸಿ ಸುಮ್ಮನೆ ಇದ್ದರೆ ತಪ್ಪಾದೀತೆಂದು ಆಕೆಯ ಮನೆಯ ಬಗ್ಗೆ ಕೇಳಿದೆ. ಇಲ್ಲೇ ವಿದ್ಯಾನಗರ ಎಂದಳು. ಕ್ಲಾಸ್ ಒಳಗೆ ಹೋಗಿ ಬೆಂಚ್ ಮೇಲೆ ಕುಳಿತು ಮಾತನಾಡೋಣ ಎಂಬಂತೆ ಸನ್ನೆ ಮಾಡಿದಳು. ಎಂದೂ ಹುಡುಗಿಯರ ಜೊತೆ ಸುಖಾಸುಮ್ಮನೆ ಮಾತನಾಡಿರಲಿಲ್ಲ. ಆಕೆ ಕರೆದ ಮೇಲೆ ಹೋಗಿ ಕೂರದೆ ಬೇರೆ ವಿಧಿಯಿರಲಿಲ್ಲ. ಸರಿ ಎಂದು ಹೋಗಿ ಕುಳಿತೆ.

ಆಕೆಯೇ ಮಾತು ಆರಂಭಿಸಿದಳು. ತನ್ನ ಮನೆಯ ಬಗ್ಗೆ, ತಾನು ಓದಿದ ಬಗ್ಗೆ, ತನಗೆ ಇಷ್ಟವಿರದಿದ್ದರೂ ಮನೆಯಲ್ಲಿ ಇಂಜಿನಿಯರಿಂಗಿಗೆ ಸೇರಿದ ಬಗ್ಗೆ... ಹೀಗೇ ಒಂದು ಘಂಟೆಯಾದರೂ ಕಳೆದಿರಬೇಕು. ಬಹುಶಃ ಆಕೆಯ ಮನಸ್ಸಿನಲ್ಲಿ ಇದ್ದಿದ್ದನ್ನು ಹೊರ ಹಾಕಲು ಆಕೆಗೆ ಯಾರಾದರೂ ಬೇಕಿತ್ತೇನೋ.

ಆಕೆ ಅಷ್ಟೊಂದು ಹೇಳುತ್ತಿದ್ದರೂ ನಾನು ಕೇಳುತ್ತಿದ್ದೆ ಬಿಟ್ಟರೆ ತಿರುಗಿ ಏನೂ ಕೇಳಿರಲಿಲ್ಲ. ಆಕೆ ನನ್ನ ಬಗ್ಗೆಯೂ ಏನೂ ಕೇಳಿರಲಿಲ್ಲ. ನನ್ನ ಮೌನ ಆಕೆಗೆ ಏನು ಅನಿಸಿಕೆ ಮೂಡಿಸಿತೋ. ಮಳೆ ಕಡಿಮೆಯಾಗಿದೆ ಹೋಗೋಣವೆ ಎಂದಳು. ಇಬ್ಬರೂ ಎದ್ದು ಹೊರಟೆವು.

ಸುಮ್ಮನೆ ಇಷ್ಟೊತ್ತು ಬೋರ್ ಹೊಡೆಸಿದೆನಾ ಎಂದು ಕೇಳಿದಳು. ಇಲ್ಲ ಎಂದು ಗೋಣಾಡಿಸಿದೆ. ಏನಾದರೂ ಹೇಳಿಕೊಳ್ಳುವುದಿದ್ದರೆ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದೆಂದು ತಿಳಿಸಿದೆ. ಸರಿ ಎಂದು ಮುಗುಳ್ನಕ್ಕಳು. ಆಕೆಯ ಮುಖ ಮೊದಲಿಗಿಂತ ಸ್ವಲ್ಪ ನಿರಾಳವಾಗಿದ್ದಂತೆ ಕಂಡು ಬಂದಿತು. ಪರಿಚಯ ಆಗಲೇ ಸ್ನೇಹಕ್ಕೆ ತಿರುಗಿತ್ತು.

ಆ ದಿನ ರಾತ್ರಿ ಮಲಗಿದಾಗ ನಿದ್ದೆ ಬರಲಿಲ್ಲ. ಆಕೆಯ ಇತಿಹಾಸವೇ ಮನಸ್ಸಿನಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿತ್ತು. ವ್ಯವಸ್ಥೆಯ ಮೇಲೆ ಕೋಪ ಉಕ್ಕುತ್ತಿತ್ತು.

ಪಿ.ಯು.ಸಿಯಲ್ಲಿ ಪಿ.ಸಿ.ಬಿ ೯೬% ತೆಗೆದಿದ್ದಳು. ಮೆಡಿಕಲ್ ಗೆ ಹೋಗಿ ಒಂದು ಉತ್ತಮ ವೈದ್ಯೆಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿದ್ದ ಆಕೆಯ ತಂದೆಗೆ ಬರುತ್ತಿದ್ದುದು ೫,೫೦೦ ರೂ. ಸಂಬಳ. ಅದರಲ್ಲೇ ಆಕೆ, ಆಕೆಯ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ - ಹೀಗೆ ೫ ಜನರ ಸಂಸಾರ ನಡೆಯಬೇಕಿತ್ತು. ತಾಯಿ ತೀರಿಕೊಂಡು ೩ ವರ್ಷ ಆಗಿತ್ತಂತೆ. ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಆಕೆಯ ಮೇಲೆ ಬಿದ್ದಿತ್ತು. ಸರ್ಕಾರ-ಖಾಸಗಿ ಕಾಲೇಜುಗಳ ಜಗಳದಿಂದಾಗಿ ಮೆಡಿಕಲ್ ಸೀಟು ಕೈಗೆಟುಕದಂತಾಗಿತ್ತು.

ಮತ್ತೆ ಆಕೆ ಸಿಕ್ಕಿದ್ದು ಮಂಗಳವಾರ. ಸೋಮವಾರ ತಮ್ಮನಿಗೆ ಏನೋ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳಂತೆ. ಅದಾದ ಮೇಲೆ ಪರೀಕ್ಷೆ, ರಜೆ ಬಂದಿದ್ದರಿಂದ ಮತ್ತೆ ೨ ತಿಂಗಳು ಆಕೆ ಸಿಗಲೇ ಇಲ್ಲ.

ಮೂರನೆಯ ಸೆಮಿಸ್ಟರ್ ಪ್ರಾರಂಭವಾದ ಮೇಲೆ ಆಕೆಯದು ಬೇರೆ ಬ್ರಾಂಚ್ ಆಗಿದ್ದರಿಂದ ಬೇರೆ ಎಲ್ಲಿಯೋ ಇರುತ್ತಿದ್ದಳು. ಆಗಾಗ ಅಲ್ಲಲ್ಲಿ ಕಂಡಾಗ ಮುಗುಳ್ನಗುತ್ತಿದ್ದಳು. ಒಮ್ಮೆ ರೀಡಿಂಗ್ ರೂಮಿನಲ್ಲಿ ಸಿಕ್ಕಾಗ ತನ್ನ ತಂದೆಗೆ ಬಡ್ತಿ ಸಿಕ್ಕಿದೆಯೆಂದೂ, ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯೆಂದೂ ತಿಳಿಸಿದ್ದಳು. ನಂತರ ಎಷ್ಟೋ ದಿನಗಳ ಕಾಲ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಬಹಳ ದಿನಗಳ ಮೇಲೆ ಹೀಗೇ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದಾಗ ಆಕೆಯ ವಿಷಯ ಬಂದಿತು. ಆಕೆ ಇಂಜಿನಿಯರಿಂಗ್ ಅನ್ನು ಬಿಟ್ಟುಬಿಟ್ಟಿದ್ದಳಂತೆ. ತಮ್ಮನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹಣ ಬೇಕಿದ್ದರಿಂದ ಎಲ್ಲಿಯೋ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ...

ಹೌದು, ಸ್ವಲ್ಪ ದಿನಗಳ ಹಿಂದೆ ತಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ೯೭% ತೆಗೆದಿದ್ದಾನೆ ಎಂದು ಹೇಳಿ ಸ್ವೀಟ್ ಕೊಟ್ಟು ಖುಷಿ ಪಟ್ಟಿದ್ದಳು. ಈಗ ಅದೇ ತಮ್ಮನಿಗಾಗಿ ತನ್ನ ವಿದ್ಯಾಭ್ಯಾಸ ತ್ಯಜಿಸಿದ್ದಳು. ಅದೇ ಕೊನೆ, ಅದಾದ ಮೇಲೆ ಆಕೆ ನನಗೆ ಕಾಣಲೇ ಇಲ್ಲ.
***

"ಕುಡ್ದಾಗಿದ್ರೆ ಲೋಟ ತಂದು ಕೈಸಾಲೆಲ್ಲಿ ಇಡು" ಎಂದು ಅಮ್ಮ ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದು. ಕಾಫಿ ತಣ್ಣಗಾಗಿತ್ತು. ಮಳೆ ನಿಂತಿತ್ತು. ಕಣ್ಣಿನಲ್ಲಿ ಹನಿ ಮೂಡಿತ್ತು.

ಮಂಗಳವಾರ, ಮೇ 27, 2008

ನಿರ್ಣಯ

ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

*****

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.

ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.

ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****

ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?

ಶುಕ್ರವಾರ, ಫೆಬ್ರವರಿ 1, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೨)

ಮೊದಲನೆಯ ಭಾಗದಿಂದ ಮುಂದುವರೆದಿದೆ

ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.

ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.

ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್‍ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!

ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:

"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...

ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.

"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...

ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.

"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"

ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.

ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.

ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.

ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...

"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"

ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...

ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.

*******

ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.

"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!

ಭಾನುವಾರ, ಜನವರಿ 6, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೧)

ಅದು ಶಿರಸಿಯ ಪ್ರಯಾಣವಿರಬಹುದು, ಸಾಗರದ ಪ್ರಯಾಣವಿರಬಹುದು, ಪ್ರತಿಯೊಂದು ಪ್ರಯಾಣದಲ್ಲೂ ಏನಾದರೂ ಘಟಿಸದಿದ್ದರೆ ನನ್ನ ಪ್ರಯಾಣ ಮುಗಿಯುವುದಿಲ್ಲ ಎನಿಸುತ್ತಿದೆ. ಈಗ ಅದಕ್ಕೊಂದು ಹೊಸ ಸೇರ್ಪಡೆ...

೨೦೦೭ರ ಅಕ್ಟೋಬರ್ ೧೧ನೇ ತಾರೀಖು ಗುರುವಾರ ಕೆಲಸಕ್ಕೆ ಸೇರಬೇಕಾಗಿತ್ತು. ಕೆಲವು ಪಂಚಾಂಗಗಳ ಪ್ರಕಾರ ಆ ದಿನ ಅಮಾವಾಸ್ಯೆ. ಅದರಲ್ಲೂ ಮಹಾಲಯ ಅಮಾವಾಸ್ಯೆ. ಇನ್ನು ಕೆಲವು ಪಂಚಾಂಗಗಳ ಪ್ರಕಾರ ಬುಧವಾರವೇ ಅಮಾವಾಸ್ಯೆ. ಹೀಗಾಗಿ ಯಾವುದರ ಗೊಡವೆಯೇ ಬೇಡ ಎಂದು ಮಂಗಳವಾರ ಮಧ್ಯಾಹ್ನ ಸುಮಾರು ೧೨:೩೦ ರ ಸಮಯ ಒಂದು ಸೂಟ್‍ಕೇಸ್, ಇನ್ನೊಂದು ಬ್ಯಾಗ್ ಹಿಡಿದು ಹರಿಹರದ ಬಸ್ ಸ್ಟ್ಯಾಂಡ್ ಬಳಿ ಬಂದೆ. ಅಪ್ಪ ಅಮ್ಮ ನನ್ನನ್ನು ಕಳಿಸಲು ಬಂದಿದ್ದರು. ಅಲ್ಲಿ ನೋಡಿದರೆ ಬೆಂಗಳೂರಿಗೆ ಹೋಗುವ ಯಾವುದೇ ಬಸ್ ಇರಲಿಲ್ಲ. ಹೀಗಾಗಿ ದಾವಣಗೆರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ಬಸ್ ಹಿಡಿದರಾಯಿತು ಎಂದು ನಿರ್ಧರಿಸಿ ದಾವಣಗೆರೆಯ ಬಸ್ ಹತ್ತಿದೆವು. ಹರಿಹರದಲ್ಲಿ ಕಳೆದಿದ್ದ ದಿನಗಳನ್ನು ನೆನಪಿಸಿಕೊಂಡು ಕಂಠ ಗದ್ಗದಿತವಾಗಿತ್ತು. ಅಮ್ಮನ ಮುಖ ನೋಡಿದಾಗ ಅಳು ಬರುವಂತಾಗುತ್ತಿತ್ತು. ಹಾಗಾಗಿ ಹೊರಗೆ ನೋಡುತ್ತಾ ಕುಳಿತೆ. ನಾನು ಓದಿದ ಶಾಲೆ-ಕಾಲೇಜು, ಆಡಿದ ಆಟದ ಮೈದಾನ, ನನ್ನ ಸಹಪಾಠಿಗಳು, ಗೆಳೆಯರು ಎಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತಿದ್ದವು. ಅಷ್ಟರಲ್ಲಿ ದಾವಣಗೆರೆ ಬಂದಿತ್ತು. ನನ್ನನ್ನು ಬಸ್ ಹತ್ತಿಸಿ ಅಪ್ಪ-ಅಮ್ಮ ತಿರುಗಿ ಹರಿಹರದ ದಾರಿ ಹಿಡಿದರು. ಮನಸ್ಸು ಭಾರವಾಗಿತ್ತು. ಏನೇನೋ ಯೋಚನೆಗಳು ಬರುತ್ತಿದ್ದವು. ಮೂರು ಸೀಟಿನ ಬದಿಯಲ್ಲಿ ಕಿಟಕಿಯ ಬಳಿ ಒಂದು ಜಾಗ ಹಿಡಿದು ಕುಳಿತೆ. ಬಸ್ ಹೊರಟಿತು.

ಅಷ್ಟರಲ್ಲಿ ಒಬ್ಬಳು ಹುಡುಗಿ, ಸುಮಾರು ೧೮-೧೯ ವರ್ಷದವಳಿರಬಹುದು, ಖಾಲಿ ಇದ್ದ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತಳು. ಮನಸ್ಸು ಪೂರ್ತಿ ನಾನು ಬೆಂಗಳೂರಿನಲ್ಲಿ ಮಾಡಬೇಕಾಗಿದ್ದ ಕೆಲಸಗಳ ಕಡೆಗೇ ಇದ್ದಿದ್ದರಿಂದ ಆಕೆಯ ಕಡೆ ಹೆಚ್ಚು ಗಮನ ಹೋಗಲಿಲ್ಲ. ಒಂದೈದು ನಿಮಿಷ ಆಗುವಷ್ಟರಲ್ಲಿ ನನ್ನ ಸ್ನೇಹಿತನ ಕರೆ ಬಂದಿತು. ಸ್ವಲ್ಪ ಹೊತ್ತು ಮಾತನಾಡಿ ನಂತರ ಮೊಬೈಲ್‍ನಲ್ಲಿ ಹಾಡು ಕೇಳುತ್ತಾ ಕುಳಿತೆ.

"ಎಕ್ಸ್‍ಕ್ಯೂಸ್ ಮಿ.. ಸ್ವಲ್ಪ ಮೊಬೈಲ್ ಕೊಡ್ತೀರಾ?"

"..."

"ನಾನು ಈ ಬಸ್ಸಿಗೆ ಬರ್ತಿರೋದನ್ನ ನಮ್ಮಣ್ಣಂಗೆ ಹೇಳ್ಬೇಕು. ಮಿಸ್ಡ್ ಕಾಲ್ ಕೊಡ್ತೀನಿ, ಕಾಲ್ ಮಾಡ್ತಾರೆ"

"ನಂಬರ್ ಹೇಳಿ, ನಾನೇ ಮಾಡ್ತೀನಿ"

"9844xxxxxx"

ಕಾಲ್ ಮಾಡಿದೆ. ಕಟ್ ಮಾಡುವಷ್ಟರಲ್ಲಿ ಎತ್ತಿಬಿಟ್ಟಿದ್ದ ಆಕೆಯ ಅಣ್ಣ. ಸ್ಪೈಸ್ ಟು ಸ್ಪೈಸ್ ತಾನೆ, ಹೋಗಲಿ, ಎಂದು ಸುಮ್ಮನಿದ್ದೆ. ಒಂದರ್ಧ ನಿಮಿಷದಲ್ಲಿ ಅವರಣ್ಣನ ಕರೆ ಬಂತು. ಆಕೆಯ ಕೈಗೆ ಮೊಬೈಲ್ ಕೊಟ್ಟು ಹೊರಗೆ ನೋಡುತ್ತಾ ಕುಳಿತೆ. ಒಂದು ನಿಮಿಷ, ಎರಡು ನಿಮಿಷ, ಐದು ನಿಮಿಷ.. ಊಹುಂ, ಅವಳ ಕರೆ ಅಂತ್ಯವಾಗುವ ಯಾವುದೇ ಲಕ್ಷಣಗಳಿರಲಿಲ್ಲ. ಯಾವ ಬಸ್ ಹತ್ತಿದ್ದೇನೆ, ಎಷ್ಟು ಹೊತ್ತಿಗೆ ಹತ್ತಿದ್ದೇನೆ, ಏನು ಊಟ ಮಾಡಿದೆ.. ಹೀಗೇ ಸಾಗುತ್ತಿತ್ತು ಆಕೆಯ ಮಾತು. ಅದೂ ಅಲ್ಲದೆ ಆಕೆಯ ಸೋ-ಕಾಲ್ಡ್ ಅಣ್ಣನನ್ನು "ಮಗಾ" ಎಂದು ಸಂಬೋಧಿಸುತ್ತಿದ್ದಳು. ಅಷ್ಟರಲ್ಲಿ ಕಂಡಕ್ಟರ್ ಬಂದು ಟಿಕೆಟ್ ಕೇಳಿದ. ಸುಮ್ಮನೆ ತನ್ನ ಟಿಕೆಟ್ ತೆಗೆಸುವ ಬದಲು "ಎಲ್ಲಿಗೆ ಹೋಗ್ತಿದೀರಿ ನೀವು?" ಎಂದು ನನ್ನನ್ನು ಕೇಳಿದಳು. ಎಲಾ ಇವಳ! ತನ್ನ ಟಿಕೆಟ್ ತೆಗೆಸಲು ನನ್ನ ಬಗ್ಗೆ ಯಾಕೆ ಕೇಳ್ತಿದ್ದಾಳೆ ಎಂದುಕೊಂಡೆ. ಆದರೂ ಮುಖದಲ್ಲೇನೂ ತೋರಗೊಡದೆ, "ಬೆಂಗಳೂರು" ಎಂದು ನನ್ನ ಟಿಕೆಟ್ ತೆಗೆದುಕೊಂಡೆ. "ನನಗೂ ಬೆಂಗಳೂರಿನ ಟಿಕೆಟ್ ಕೊಡಿ" ಎಂದಳು. ಹಾಗೆಯೇ ಆಕೆಯ ಕರೆಯೂ ಮುಗಿದಿತ್ತು. ಮೊಬೈಲ್ ವಾಪಸ್ ಕೊಟ್ಟಳು. "ಮತ್ತೆ ಮಾಡ್ತಾ ಇರ್ತಾರಂತೆ" ಎಂದಳು.

ಮನಸ್ಸು ಒಂದೇ ಸಮನೆ ತರ್ಕ ಶುರು ಮಾಡಿತು. ಯಾರೇ ಆಗಲಿ, ಬೇರೆಯವರ, ಅದೂ ಅಪರಿಚಿತರ ಮೊಬೈಲ್ ತೆಗೆದುಕೊಂಡು ಇಷ್ಟೊಂದು ಮಾತನಾಡುತ್ತಾರೆಯೆ? "ಏನ್ ಮಗಾ" ಎಂದು ಅಣ್ಣನನ್ನು ಕರೆಯುತ್ತಿದ್ದ ಆಕೆಯ ಭಾಷೆಯೋ ಬಯಲಸೀಮೆಯಲ್ಲೇ ಹುಟ್ಟಿ ಬೆಳೆದ ನನಗೂ ಮುಜುಗರ ತರಿಸುವಂತಿತ್ತು. ಒಂದು ಹುಡುಗಿ ತನ್ನ ಅಣ್ಣನೊಂದಿಗೆ ಹೀಗೆ ಮಾತನಾಡಬಹುದೆ? ಅಥವಾ ಆಕೆ ಅಣ್ಣನಲ್ಲದೆ ಬೇರೆ ಯಾರೊಂದಿಗೋ ಮಾತನಾಡುತ್ತಿದ್ದಿರಬಹುದೆ? ಅಷ್ಟಕ್ಕೂ ತಾನು ಟಿಕೆಟ್ ತೆಗೆಸಲು ನನ್ನ ಗಮ್ಯಸ್ಥಾನ ಕೇಳುವ ಅವಶ್ಯಕತೆಯಾದರೂ ಏನಿತ್ತು? ಹಿಂದಿನ ವಿಚಾರಗಳೆಲ್ಲವೂ ಮಾಯವಾಗಿ ಮನಸ್ಸು ಪೂರ್ತಿ ಬೇರೆ ವಿಚಾರಗಳೇ ತುಂಬಿಕೊಂಡವು. ಬೆಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ಗೆಳೆಯರು ನೆನಪಾದರು. ಒಬ್ಬೊಬ್ಬರದೂ ಒಂದೊಂದು ಕಥೆ. ಒಬ್ಬನು ಮೊಬೈಲ್‍ನಲ್ಲಿ ಮಾತನಾಡುತ್ತ ಬಸ್ ಇಳಿಯುವಾಗ ಕೈಯಿಂದಲೇ ಕಸಿದುಕೊಂಡು ಓಡಿಹೋಗಿದ್ದರು. ಇನ್ನೊಬ್ಬನ ಬಳಿ ಕಾಲ್ ಮಾಡಿಕೊಡುತ್ತೇನೆಂದು ಹೇಳಿ ಮೊಬೈಲ್ ತೆಗೆದುಕೊಂಡು ಅವನು ಅತ್ತಿತ್ತ ನೋಡುತ್ತಿದ್ದಾಗ ಚಳ್ಳೆ ಹಣ್ಣು ತಿನ್ನಿಸಿದ್ದರು. ಎರಡನೆಯ ಪ್ರಸಂಗಕ್ಕೂ ಈಗ ನಡೆಯುತ್ತಿದ್ದ ವಿದ್ಯಮಾನಕ್ಕೂ ತಾಳೆಯಾಗುವಂತೆ ಕಂಡುಬಂದಿತು. ನನ್ನ ಕೈಯಲ್ಲಿದ್ದಿದ್ದು Nokia N73m. ಕೇವಲ ಮೂರು ತಿಂಗಳ ಹಿಂದೆ ಕೊಂಡಿದ್ದು. ಅವರಣ್ಣ ಸ್ವಲ್ಪ ಹೊತ್ತಿನ ನಂತರ ಮತ್ತೆ ಕಾಲ್ ಮಾಡುತ್ತಾನೆ ಎಂದು ಬೇರೆ ಹೇಳಿದ್ದಳು. ಒಮ್ಮೆ ಯಾವ ಬಸ್ಸಿಗೆ ಬರುತ್ತಿದ್ದಾಳೆ ಎಂದು ತಿಳಿದ ಮೇಲೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮಾತನಾಡುವಂಥದ್ದು ಏನಿದ್ದೀತು? ಮುಂದೆ ಘಟಿಸಬಹುದಾದ ಘಟನೆಗಳು, ಅವುಗಳ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿ ಒಮ್ಮೆ ಎದೆ ಝಲ್ಲೆಂದಿತು.

ಮಂಗಳವಾರ ಪ್ರಯಾಣ ಶುಭಕರವಲ್ಲ ಎಂದು ಕೆಲವು ಗೆಳೆಯರು ಸೋಮವಾರವೇ ಹರಿಹರದಿಂದ ಹೊರಟಿದ್ದರು. ಏನಾದರೂ ಆಗಲಿ ಎಂದು ಅವರ ಮುಂದೆ ಕೊಚ್ಚಿಕೊಂಡು ಹೊರಟುಬಂದಿದ್ದ ನನಗೆ ಯಾಕಾದರೂ ಹೊರಟೆನೋ ಎಂದೆನಿಸಲು ಪ್ರಾರಂಭವಾಗಿತ್ತು. ನಾನು ಒಬ್ಬನೇ ಬೇರೆ ಇದ್ದೆ. ಅಕಸ್ಮಾತ್ ನಾನೆಂದುಕೊಂಡಂತೆಯೇ ಆದರೆ ಮೊಬೈಲ್ ನನ್ನ ಕೈ ಬಿಡುವುದು ಶತಃಸಿದ್ಧ. ಕೈಯಲ್ಲಿ ಎರಡು ಬ್ಯಾಗ್ ಬೇರೆ. ಮೊಬೈಲ್ ಕಸಿದುಕೊಂಡು ಓಡಿದರೆ ಅವರನ್ನು ಬೆನ್ನಟ್ಟುವಂತೆಯೂ ಇಲ್ಲ. ಈಗೇನು ಮಾಡುವುದು?

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ಸಂಗೋಽಸ್ತು ಅಕರ್ಮಣಿ

ಎಂಬ ಭಗವದ್ಗೀತೆಯ ವಾಕ್ಯ ನೆನಪಾಯಿತು.

(ಭಾಗ-೨ರಲ್ಲಿ ಮುಂದುವರೆದಿದೆ)

ಶುಕ್ರವಾರ, ಸೆಪ್ಟೆಂಬರ್ 28, 2007

ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......

ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.

ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.

ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!

ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಗುರುವಾರ, ಸೆಪ್ಟೆಂಬರ್ 13, 2007

ಸೆಪ್ಟೆಂಬರ್ ೧೩ರ ಕರಾಳ ರಾತ್ರಿ!

ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...

ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಕಾರ್ ಡ್ರೈವ್ ಮಾಡುತ್ತಿದ್ದ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳಿದ. "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?" ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ..." ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ, ಕಾರನ್ನು ಹಿಂದಕ್ಕೆ ತಗೊಂಡ...

***

ಆ ಕರಾಳ ರಾತ್ರಿ ಘಟಿಸಿ, ಇವತ್ತಿಗೆ ಸರಿಯಾಗಿ ಒಂದ್ ವರ್ಷ ತುಂಬುತ್ತೆ. ಕೆಳ ದಿನಗಳ ಹಿಂದೆ ಭಟ್ಟ ಸಿಕ್ಕಿದ್ದ. ಆ ಕರಾಳ ರಾತ್ರಿಯ ನೆನಪುಗಳನ್ನು ಭಟ್ಟ ಮೆಲುಕು ಹಾಕುತ್ತಾ ಹೋದಂತೆಲ್ಲಾ, ನಾನೂ ಸಹ ಆ ಕರಾಳ ರಾತ್ರಿಯ ಪ್ರತ್ಯಕ್ಷ ದರ್ಶಿಯಾಗಿದ್ನೇನೋ ಅಂತ ಅನಿಸೋದಕ್ಕೆ ಶುರು ಆಯಿತು. ಕಳೆದ ವರ್ಷ ಸೆಪ್ಟೆಂಬರ್ ೧೩ರಂದು ನನ್ನ ಗೆಳೆಯರಾದಂತಹ ವಾಗೀಶ್ ಅಲಿಯಾಸ್ ವಾಗಿ, ರಾಜೇಶ್ ಅಲಿಯಾಸ ರಾಜು ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ರು. ಕಾಕತಾಳಿಯವೆನೋ ಎಂಬಂತೆ ಭರತ್ ಅಲಿಯಾಸ್ ಭಟ್ಟನೂ ಅವತ್ತು ಬೆಂಗಳೊರಿನಲ್ಲೆ ಇದ್ದ. ವಾಗಿ ಹಾಗು ರಾಜು ೧೩ರರ ರಾತ್ರಿನೇ ದಾವಣಗೆರೆಗೆ ವಾಪಸ್ ಬರೋದು ಅಂತ ಡಿಸೈಡ್ ಆಗಿತ್ತು. ಎಂದಿನಂತೆ ವಾಗಿ ಭಟ್ಟನಿಗೆ ಫೋನ್ ಮಿಲಾಯಿಸಿದ. ಅವರ ನಡುವೆ ನಡೆದ ಫೋನಾಯಣದ ಫಲಶ್ರುತಿಯೇ, ಮೂವರೂ ಸೇರಿ ವಾಗಿಯ ಮಾರುತಿ ೮೦೦ ಕಾರಿನಲ್ಲಿ ದಾವಣಗೆರೆಗೆ ರಿಟರ್ನ್ ಆಗಿದ್ದು!

ಸಮಯ ಸುಮಾರು ರಾತ್ರಿಯ ೧೦:೩೦... ಮೆಜೆಸ್ಟಿಕ್ ಬಳಿಯ ಹೋಟೆಲಿನಲ್ಲಿ...

ವಾಗಿ ಹಾಗು ರಾಜು ಮೆಜೆಸ್ಟಿಕ್ ಬಳಿಯಿರುವ ಕಾಮತ್ ಹೋಟೆಲಿನಲ್ಲಿ ರಾತ್ರಿಯ ಫುಲ್ ಮೀಲ್ಸ್ ಮುಗಿಸಿ ವಾಗಿಯ ಬಿಳೀ ಮಾರುತಿ ಕಾರಿನಲ್ಲಿ ಕುಳಿತು ಸೀದಾ ಸಿಟಿ ರೈಲ್ವೇ ನಿಲ್ದಾಣದ ಕಡೆ ತೆರಳಿದರು. ರಾಜು ಕಾರಿನಲ್ಲಿದ್ದ ಎಫ್.ಎಂ. ಆನ್ ಮಾಡಲು ವಾಗಿಗೆ ಹೇಳಿದ. ಅದರಲ್ಲಿ ಬರುತ್ತಿದ್ದ ಯಾವುದೋ ಒಂದು ಸಾಂಗ್ ಕೆಳ್ತಾ, ಗಿಜಿ ಗಿಜಿ ಎಂದು ಗುಯ್ಗುಡುವ ಟ್ರಾಫಿಕನ್ನು ದಾಟಿ ಕೊನೆಗೂ ಸಿಟಿ ರೈಲ್ವೆ ನಿಲ್ದಾಣ ತಲುಪಿದರು. ಕೊಟ್ಟ ಮಾತಿಗೆ ತಪ್ಪದವನಂತೆ ಅಲ್ಲಿಯೇ ಎಂಟ್ರೆನ್ಸ್ ಬಳಿ ಭಟ್ಟನು ಇವರಿಗಾಗಿ ಕಾಯುತ್ತಿದ್ದದ್ದು ಕಂಡುಬಂತು. ಭಟ್ಟನನ್ನು ಹಿಂಬದಿಯ ಸೀಟ್ನಲ್ಲಿ ಕುಂದ್ರುಸ್ಕಂಡ ಇವರು, ಸೀದಾ ದಾವಣಗೆರೆಯ ಕಡೆಗೆ ತಮ್ಮ ಪಯಣ ಬೆಳೆಸಿದರು. ಹೈವೇ ರೀಚ್ ಆಗೋ ಹೋತ್ತಿಗೆ, ಸ್ವಲ್ಪ ಹೆವೀಯಾಗೇ ಊಟ ಮಾಡಿದ್ದ ರಾಜೂಗೆ ನಿದ್ರಾದೇವಿಯು, "ಬಾ ನನ್ನನ್ನು ಆಲಂಗಿಸೂ..." ಎಂದು ಕರೆಯುತ್ತಿದ್ದಳು. ಕಾರಿನಲ್ಲಿ ಆಗಿಂದಲೂ ಒಂದೇ ಸಮನೆ ಹೊಡ್ಕೋತಿದ್ದ ಎಫ್.ಎಂ ಅನ್ನು ಬಂದ್ ಮಾಡಲು ವಾಗಿಗೆ ಹೇಳಿ, ಅವನ ಉತ್ತರಕ್ಕೂ ಕಾಯದೆ ನಿದ್ರೆಗೆ ಜಾರಿದ, ಆ ಭೂಪ! ಭಟ್ಟನಿಗೆ ಅದೇಕೋ ಏನೋ ಅವತ್ತು ಎಷ್ಟೇ ಟ್ರೈ ಮಾಡಿದ್ರೂ ನಿದ್ದೇನೇ ಬರ್ತಾ ಇಲ್ಲಾ. ಅವನು ಎಷ್ಟೇ ಮಗ್ಗಲು ಬದಲಾಯಿಸಿದರೂ ನಿದ್ರಾ ದೇವಿ ತನ್ನ ಕೃಪೆ ತೋರಲೇ ಇಲ್ಲ! ಇವನು ಪಡುತಿದ್ದ ಎಲ್ಲಾ ಕಷ್ಟಗಳನ್ನು ಅದುವರೆಗೂ ಕಾರಿನ ಕನ್ನಡಿಯಲ್ಲಿ ನೋಡುತಿದ್ದ ವಾಗಿ, "ಲೇ ಯಾಕ್ ಅಷ್ಟೋಂದು ಒದ್ದಾಡ್ತಾ ಇದೀಯಾ... ಯಾವ್ದಾದ್ರು ಒಳೆ ಸಾಂಗ್ ಹಾಕ್ತೀನಿ ತಡೀ..." ಎಂದು, ಕಾರಿನಲಿದ್ದ ಸಿ.ಡಿ. ಒಂದನ್ನು ತೆಗೆದು ತನ್ನ ಮ್ಯುಸಿಕ್ ಸಿಸ್ಟಂನೊಳಗೆ ಜಾರಿಸಿದನು. ಎಲ್ಲಿ ರಾಜು ಮತ್ತೆ ಎದ್ದು ಬಿಡ್ತಾನೋ ಅನ್ನೋ ಹೆದರಿಕೆಯಿಂದ ಸ್ವಲ್ಪ ಕೆಳ ಧ್ವನಿಯಲ್ಲಿ ಇಬ್ಬರೂ ಹಾಡಿನ ಮಜಾ ತಗೊಳೋಕೆ ಶುರು ಹಚ್ಚಿದ್ರು. ಇದರಲ್ಲಿ ವಾಗಿಯ ಸ್ವಾರ್ಥವೂ ಇತ್ತು ಬಿಡ್ರಿ... ಹಾಡ್ ಹಾಕಿರೋದ್ರಿಂದ ಭಟ್ಟ ಎಚ್ಚರವಾಗಿರ್ತಾನೆ. ಸೋ... ನನ್ಗೆ ಡ್ರೈವ್ ಮಾಡೋವಾಗ ಒಳ್ಳೆ ಸಾಥ್ ಕೊಡ್ತಾನೆ ಅನ್ನೋ ಒಂದು ಚಿಕ್ಕ ಸ್ವಾರ್ಥ... ಅಷ್ಟೆ!

ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...

ಮ್ಯುಸಿಕ್ ಸಿಸ್ಟಂನಿಂದ ಮೆಲು ಧ್ವನಿಯಲ್ಲಿ ಕೇಳಿಬರುತ್ತಿದ್ದ ’ಡಾನ್" ಚಿತ್ರದ, "... ಮುಝ್ಕೊ ಪೆಹೆಚಾನುಲೋ... ಮೆ ಹೂ ಡಾನ್..." ಕೆಳುತ್ತಾ, ಅದು ಇದು ಅಂತ ಶುಂಟಿ ಸುಡುಗಾಡು ವಿಷಯಗಳ ಬಗ್ಗೆ ಹರಟುತ್ತಾ ಹೊರಟಿದ್ದರು. ಶಿರಾದಿಂದ ಸ್ವಲ್ಪ ದೂರದ ಬಳಿ ಬರುತ್ತಿದ್ದಂತೆ ಅವರಿಗೆ ಯಾರೋ ತಮ್ಮ ಕಾರಿಗೆ ಕೈ ಮಾಡುತ್ತಿರುವುದು ಕಂಡು ಬಂತು. ಕಾರನ್ನು ಹಾಗೆ ಹತ್ರಕ್ಕೆ ತಗೋತಿದ್ದ ಹಾಗೆ ತಮ್ಮ ಕಾರಿಗೆ ಕೈ ಮಾಡಿದ್ದು ಒಬ್ಬ ಮುದುಕ ಎಂದು ತಿಳಿದು ಬಂತು. ಕುರುಚಲು ಗಡ್ದ, ಒಗೆತವೇ ಕಾಣದ ಬಿಳಿ(?) ಬಣ್ಣದ ಕುರ್ತಾ ಹಾಕಿದ್ದ ಅವನು ಸುಮಾರು ೬೦ ವರ್ಷದವನಂತೆ ಕಾಣುತಿದ್ದ. ತನ್ನ ಬಳಿಯಿದ್ದ ಒಂದು ಕಿಟ್ ಬ್ಯಾಗನ್ನು ರಸ್ತೆಗೆ ರೋಡ್ ಹಂಪಿನಂತೆ ಅಡ್ಡ ಇಟ್ಟು, "ದಯವಿಟ್ಟು ಯಾರಾದ್ರು ನಂಗೆ ಡ್ರಾಪ್ ಕೊಡ್ರಪ್ಪಾ..." ಅನ್ನೋ ರೀತೀಲಿ ಲಿಫ್ಟ್ ಕೇಳ್ತಾ ಇದ್ದ.

ವಾಗಿ ಕಾರನ್ನು ಗೊಣಗುತ್ತಲೇ ಅಜ್ಜನ ಬಳಿ ನಿಲ್ಲಿಸಿದ. ಕಾರು ನಿಲ್ಲಿಸುವುದನ್ನೇ ಕಾಯ್ತಾಯಿದ್ದ ಆ ಮುದುಕ, "ಬೇಟಾ ನನ್ಗೆ ಸ್ವಲ್ಪ ದೂರ್ದಲ್ಲಿ ಇಳ್ಕೊ ಬೇಕಿದೆ... ಥೋಡ ಡ್ರಾಪ್ ಕೊಡಿ..." ಅಂತ ಅಂಗಲಾಚಿದ. ತಾವು ಡ್ರೈವ್ ಮಾಡ್ತಾ ಇರೋದು ಹೈವೇನಲ್ಲಿ, ಅದೂ ರಾತ್ರಿ ಹೊತ್ನಲ್ಲಾದ್ದರಿಂದ್ದ, ಗುರುತು ಪರಿಚಯ ಇರದವರಿಗೆ ಡ್ರಾಪ್ ಕೊಡೋದು ಅಷ್ಟೋಂದು ಸೇಫ್ ಅಲ್ಲ ಅಂತ ವಾಗಿ ಕಾರನ್ನು ಮುಂದಕ್ಕೆ ಡ್ರೈವ್ ಮಾಡ್ಕೊಂಡು ಹೊರಟ. ಆಗ ಭಟ್ಟ ವಾಗಿಗೆ, "ಲೇ ನೀನ್ ಸ್ವಲ್ಪ ಓವರ್ ಕಾಶಿಯಸ್ಸಾಗಿ ಬಿಹೇವ್ ಮಾಡ್ದಿ ಅನ್ನುಸ್ತಾ ಐತಲೆ ನನಿಗೆ..." ಅಂದ. ಆಗ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳ್ದ, "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?". ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ...". ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ ಕಾರನ್ನು ಹಿಂದ್ದಕ್ಕೆ ತಗೊಂಡ...

ಪುನಃ ರಿಟರ್ನ್ ಆದ ಕಾರನ್ನು ಕಂಡ ಮುದುಕ ಸ್ವಲ್ಪ ಚಿಯರ್ ಅಪ್ ಆದವನಂತೆ ಕಂಡು ಬಂದ. ಈ ಬಾರಿ ಭಟ್ಟ ಹಿಂಬದಿಯ ಕಾರ್ ಡೋರನ್ನು ತೆಗೆದು, "ಕ್ಯಾ ಮಿಯಾ ಕಿದರ್ ಜಾನಾ ಹೈ ಆಪ್ಕೋ?" ಎಂದು ಕೇಳಿದ. "ಯಹೀ ಪಾಸ್ ಮೇ ಹೀ ಉತರ್ ಜಾವೂಂಗಾ" ಅಂತ ಹೇಳ್ದೋನೇ, ತನ್ನ ಕಿಟ್ ಬ್ಯಾಗನ್ನು ಬ್ಯಾಕ್ ಸೀಟ್ನಲ್ಲಿ ಇಟ್ಟು ತಾನೂ ಕಾರೊಳಗೆ ಸೇರ್ಕೊಂಡ್ಬಿಟ್ಟ. ಇವೆಲ್ಲದಕ್ಕೂ ನನ್ಗೂ ಸಂಬಂಧವೇ ಇಲ್ಲವೇನೋ ಎಂಬಂತೆ ರಾಜು ಮುಂಬದಿಯ ಸೀಟಿನಲ್ಲಿ ಡೀಪ್ ಸ್ಲೀಪ್ಗೆ ರಿಟೈರ್ ಆಗಿದ್ದ!

ರಾತ್ರಿಯ ಸಮಯ ಸುಮಾರು ೧೨:೪೫... ಹೈವೇದಾಗ್ ಎಲ್ಲೋ...

ವಾಗಿಗೋ ಭಟ್ಟನ ಮೇಲೆ ಎಲ್ಲಿಲ್ಲದ ಕೋಪ. ಅದನ್ನ ಹೇಳ್ಕೋಳೋ ಹಂಗಿಲ್ಲ ಬಿಡಂಗೂ ಇಲ್ಲದಂತಹ ಧರ್ಮ ಸಂಕಟ! ಮುದುಕ ಆಗ್ ಇಳೀತಾನೆ ಈಗ್ ಇಳೀತಾನೆ ಅಂತ ಡ್ರೈವ್ ಮಾಡ್ತಾನೆ ಇದ್ದ ವಾಗಿ... ಸುಮಾರು ೧ ಘಂಟೆಯ ನಂತರ ವಾಗಿಗೆ ತಡ್ಕೋಳೊಕೆ ಆಗ್ಲೇ ಇಲ್ಲ. ಅವನು ಭಟ್ಟನನ್ನು ನೋಡಿ, "ಲೇ ಅವನು ಯಾವಾಗ ಇಳೀತಾನ್ ಕೇಳಲೇ?" ಅಂತ, ತನ್ನೋಳಗಿದ್ದ ಅಸಮಾಧಾನವನ್ನೆಲ್ಲಾ ಒಮ್ಮೆಲೆ ಹೊರಹಾಕಿದ. ಭಟ್ಟ ಅಜನ್ನನ್ನು ಕೇಳಿದ,"ಕ್ಯಾ ಮಿಯಾ ಆಪ್ ಥೋಡಿ ದೇರ್ ಕರ್ಕೋ ಬೋಲೆ... ಲೇಕಿನ್ ೧ ಘಂಟಾ ಹೋಗಯಾ? ಠೀಕ್ಸೇ ಬತಾವ್ ಆಪ್ಕೋ ಕಿದರ್ ಉತರ್ನಾ ಹೈ..." ಎಂದು ಸ್ವಲ್ಪ ಜೋರಾಗಿಯೇ ಕೇಳಿದ. ಅದಕ್ಕೆ ಅಜ್ಜ, "ಬಸ್ ಥೋಡಿ ದೇರ್ ಔರ್ ಬೇಟಾ... ಉಸ್ಕೆ ಬಾದ್ ಲೆಫ್ಟ್ ಮೇ ಲೇಲೋ..." ಅಂತ ಹೇಳಿದ.

ರಾತ್ರಿಯ ಸಮಯ ಸುಮಾರು ೧:೧೦... ಮಡ್ ರೋಡ್ ಕಡೆ ಹೋಗೊ ಡೀವಿಯೇಶನ್ ಬಳಿ...

ಆದರೆ ಈ ಬಾರಿ ಅಜ್ಜ ಹೇಳಿದ್ದು ನಿಜವಾಗಿತ್ತು. ಸುಮಾರು ೨೫ ನಿಮಿಷ ಡ್ರೈವ್ ಮಾಡಿದ ಬಳಿಕ ಹೈವೆಯ ಬದಿಯಲ್ಲಿ ಒಂದು ಮಡ್ ರೋಡ್ ಕಂಡು ಬಂತು. ಕೂಡಲೆ ವಾಗಿ ಭಟ್ಟಂಗೆ ಕೇಳ್ದಾ, "ಇದೇ ಏನ್ಲೇ ಆ ರೋಡ್?" ಆಗ ಅಜ್ಜ ಮಧ್ಯ ಬಾಯಿ ಹಾಕಿ, "ಯಹೀ ಲೆಫ್ಟ್ ಮೆ ಲೋ ಬೇಟಾ..." ಎಂದ. ವಾಗಿಯ ಮುಖದಲ್ಲಿ ನಗು ಪುನಃ ಮರಳುವ ಸೂಚನೆ ಕಂಡು ಬಂದವು. ಕೊನೆಗೂ ಈ ಅಜ್ಜನ್ನಿಂದ ಮುಕ್ತಿ ಸಿಗ್ತಲ್ಲಾ ಅಂತ ಖುಶಿ ಖುಶಿಯಿಂದಲೇ ಅಜ್ಜ ಹೇಳಿದ ಮಾರ್ಗವಾಗಿ ಗಾಡಿ ಡ್ರೈವ್ ಮಾಡ್ತಾ ಹೋದ. ಹಿಂಬದಿಯ ಸೀಟಿನಲ್ಲಿ ಕೂತಿದ್ದ ಭಟ್ಟ ಇದ್ದಕಿದ್ದ ಹಾಗೆ ವಾಗಿಗೆ ಹೇಳ್ದ, "ಎನ್ಲೆ ಇದು... ಇಲ್ಲಿ ಒಂದೇ ಒಂದು ಮನೇನೂ ಇಲ್ಲ. ಈ ಅಜ್ಜ ಏನ್ ಕಾಡಿನಲ್ಲಿ ಇರ್ತಾನೋ ಹೆಂಗೆ?" ಅಂತ ಕೇಳ್ದಾಗ್ಲೆ, ವಾಗಿಗೆ ತೋಚಿದ್ದು ತಾನೆಲ್ಲಿ ಡ್ರೈವ್ ಮಡ್ಕೋಂಡು ಬರ್ತಾ ಇದ್ದೀನಿ ಅಂತ... ಅಷ್ಟೋತ್ತಿಗಾಗ್ಲೆ ಹೈವೇಯಿಂದ ಸುಮಾರು ದೂರ ಬಂದಾಗಿತ್ತು. ಅವರು ಹೋದಂತಹ ರೋಡ್‍ನ ಆಜು ಬಾಜುಬಲ್ಲಿ ಕಗ್ಗತ್ತಲು. ಅಲ್ಲಿ ಯಾರು ತಲೆ ಹೊಡ್ದ್ರೂ ಗೊತ್ತಾಗಲ್ಲ, ಅಂಥ ಜಾಗ ಅದು! ಮೊದಲ ಬಾರಿಗೆ ಭಟ್ಟನಿಗೆ, ಆ ಅಜ್ಜನಿಗೆ ನಾವು ಯಾಕಾದ್ರು ಡ್ರಾಪ್ ಕೊಡೋಕೆ ಒಪ್ಪಿಕೊಂಡೆವು ಅಂತ ಅನ್ನಿಸೋದಕ್ಕೆ ಶುರುವಾಯಿತು. ಆದರೆ ಅದನ್ನು ಬಾಯಿ ಬಿಟ್ಟು ಹೇಳಂಗಿಲ್ಲ, ಯಾಕಂದ್ರೆ ಅವ್ನೆ ಪಾಪ ಹೋಗ್ಲಿ ಬಿಡು ಅಂತ ಆ ಅಜ್ಜನನ್ನು ಹತ್ಸ್ಕೊಂಡಿದ್ದು! ಮೊದಲ ಬಾರಿಗೆ ಅವರಿಬ್ಬರಿಗೂ ಅಜ್ಜನ ಮೇಲೆ ಸಂದೇಹ ಮೂಡಲು ಶುರುವಾಯಿತು. ಮನಸ್ಸಿನ ಮೂಲೆಯಲ್ಲೆಲ್ಲೋ ಭಯ ಚಿಗುರೊಡೆಯೋದಕ್ಕೆ ಪ್ರಾರಂಭವಾಯಿತು. ಇಷ್ಟೊತ್ತೂ ಹೋಡ್ಕೊತಾ ಇದ್ದ ಮ್ಯೂಸಿಕ್ ಸಿಸ್ಟಮ್ ಈಗ ಏಕ್ ದಮ್ ಬಂದ್! ಇಬ್ಬರಿಗೂ ತಮ್ಮ ಎದೆಯ ಬಡಿತ ಸ್ಪಷ್ಟವಾಗಿ ಕೇಳಿಸ್ತಾ ಇತ್ತು!

ರಾತ್ರಿಯ ಸಮಯ ಸುಮಾರು ೧:೨೫... ಕಗ್ಗತ್ತಲೇ ಇರುವಂತಹ ನಿರ್ಜನ ಪ್ರದೇಶ...

ಯಾರೊಬ್ಬ ನರಪಿಳ್ಳೆಯೂ ಸುಳಿಯದಂತಹ ದಟ್ಟ ಕಾಡಿನಲ್ಲಿ ಚಲಿಸುತ್ತಿರುವಂತಹ ಅನುಭವದ ಮಧ್ಯೆಯೇ ಆ ಅಜ್ಜ ಇವರ ಮೌನವನ್ನು ಮುರಿದ. "ಆ ಗಯಾ ಬೇಟಾ... ವಹಾ ರೈಟ್ ಮೇ ಜೋ ಘರ್ ಹೈನಾ... ವಹೀ" ಅಂತಾ ತನ್ನ ಬೆರಳಿನಿಂದ ತೋರಿಸ್ತಾ ಹೇಳಿದ. ಅಜ್ಜನು ತೋರಿಸಿದ ಮನೆಯು ಒಂದು ಹಳೆಯ ಕಾಲದ ಹಂಚಿನ ಮನೆಯಂತೆ ಕಂಡು ಬಂತು. ಅಜ್ಜನ ಮನೆಯ ಮುಂದೆಯೂ ಘೊರ ಕಗ್ಗತ್ತಲು. ಬಹುಶಃ ಅಲ್ಲಿ ಅಜ್ಜನನ್ನು ಬಿಟ್ಟರ್‍ಎ ಬೇರಾರೂ ವಾಸ ಮಾಡ್ತಾ ಇರ್ಲಿಲ್ಲಾ ಅಂತ ಯಾರು ಬೇಕಾದ್ರು ಸರ್ಟಿಫಿಕೇಟ್ ಕೊಡ್ಬೋದಿತ್ತು. ಅಜ್ಜನ ಮನೆಯ ಮುಂದೆ ಕೇವಲ ಒಂದು ಗಾಡಿ ಹೋಗೋ ಅಷ್ಟು ಜಾಗ ಮಾತ್ರ ಇತ್ತು. ವಾಗಿ ಗಾಡಿಯನ್ನು ಸೀದಾ ಅಜ್ಜನ ಮನೆಯ ಮುಂದೆ ನಿಲ್ಲಿಸಿ, "ಲೇ ಅಜ್ಜಂಗೆ ಬಡ ಬಡ ಇಳ್ಕೋ ಅಂತ ಹೇಳು..." ಎಂದು ಭಟ್ಟನಿಗೆ ಆರ್ಡರ್ ಮಾಡುವ ಧ್ವನಿಯಲ್ಲಿ ಹೇಳಿದ. ಇವನ ಮಾತು ಅರ್ಥ ಮಾಡ್ಕೊಂಡೋನ ಹಾಗೆ, ಸರ ಸರನೆ ಕಾರಿನಿಂದ ಇಳಿದು ಮನೆಯ ಕಡೆಗೆ ಹೋದ. ಕಾರಿನ ಬೆಳುಕಿನಲ್ಲಿ, ಅಜ್ಜನು ಆ ಮನೆಯ ಮರದ ಗೇಟ್ ತೆಗೆದು ಒಳ ಹೋಗಿದ್ದು ಸ್ಪಷ್ಟವಾಗಿ ಕಂಡಿತು. ಇದ್ದಕ್ಕಿದ್ದಂತೆ ವಾಗಿ ಜೋರಾಗಿ, ಸ್ವಲ್ಪ ಸಿಟ್ಟಿನಿಂದಾನೇ ಭಟ್ಟನಿಗೆ ಹೇಳ್ದ, "ಲೇ ಅಜ್ಜ ಬ್ಯಾಗ್ ಇಲ್ಲೇ ಬಿಟ್ಟ್ ಹೋದ್ನಲ್ಲೋ... ಕರಿಯಲೇ ಅವನ್ನಾ..." ಎಂದ. ಅದಕ್ಕೆ ಭಟ್ಟ, ಅದ್ರಲೇನಿದೆ ದೊಡ್ಡ ವಿಷಯ ಎಂಬಂತೆ, "ಲೇ.., ಮೋಸ್ಟ್ಲಿ ಅಜ್ಜ ಲೈಟ್ ಆನ್ ಮಾಡ್ ಬರಕ್ಕೆ ಹೋಗಿರಬಹುದು... ಬರ್ತಾನ್ ಬಿಡು ಟೆನ್ಷನ್ ಯಾಕೆ ಮಾಡ್ಕೊತೀಯಾ?" ಅಂತ ತನ್ನ ಸೋಮಾರಿತನವನ್ನು ಮರೆಮಾಚಲು ಕುಂಟು ನೆಪ ಹೇಳಿ ಬಿಟ್ಟ. ಅದಕ್ಕೆ ವಾಗಿ ನೀಡಿದ ಉತ್ತರ ಕೇಳಿ ಭಟ್ಟನಲ್ಲಿ ಇದ್ದ ಅಲ್ಪ ಸ್ವಲ್ಪ ಧೈರ್ಯಾನೂ ಮಾಯವಾಯಿತು. ವಾಗಿ ಹೇಳ್ದ, "ಲೇ... ಅವಾಗ್ಲಿಂದ ನಾನೆ ಡ್ರೈವ್ ಮಾಡ್ಕೋಂಡ್ ಬರ್ತಾ ಇದೀನೀ, ಒಂದೇ ಒಂದು ಎಲೆಕ್ಟ್ರಿಕ್ ಕಂಬಾನೂ ಕಣ್ಣಿಗೆ ಬಿದ್ದಿಲ್ಲಾ... ಲೈಟ್ ಆನ್ ಮಾಡೋಕ್ಕೆ ಹೋದ ಅಂತೀಯಲ್ಲಾ... ನಿನಿಗ್ ಏನ್ ಹೇಳ್ಲಿ?" ಎಂದ. ಭಟ್ಟನಿಗೆ ಆಗ ಏನ್ ಹೇಳ್ಬೇಕೋ ತಿಳೀಲೇ ಇಲ್ಲ. ಆದ್ರೂ ಅಜ್ಜನ ಮೇಲೆ ಮಹಾ ನಂಬಿಕೆ ಉಳ್ಳವನಂತೆ, "ವಾಗಿ... ಅಜ್ಜ ಏನ್ ಓಡಿ ಹೋಗಲ್ಲ... ಬರ್ತಾನೆ ಬಿಡ್ಲೇ... ನೋಡಪ್ಪಾ ೫ ಐದ್ ನಿಮಿಷ ವೇಟ್ ಮಾಡೋಣ... ಬಂದಿಲ್ಲಾ ಅಂದ್ರೆ... ಮುಂದೆ ಏನ್ ಮಾಡಬೇಕೂ ಅಂತ ನೋಡೋಣ..." ಎಂದು ಹೇಳ್ದ. ಭಟ್ಟನ ಮಾತು ಕೆಲ್ಸ ಮಾಡ್ತು ಅಂತ ಕಾಣುತ್ತೆ, ವಾಗಿ ಸ್ವಲ್ಪ ಹೊತ್ತು ಕಾಯೋದಕ್ಕೆ ಒಪ್ಕೊಂಡ.

ರಾತ್ರಿಯ ಸಮಯ ಸುಮಾರು ೧:೩೫... ಅಜ್ಜನ ಮನೆಯ ಮುಂದೆ...

೫ ನಿಮಿಷ ಆಯಿತು, ೧೦ ನಿಮಿಷ ಆಯಿತು ಆ ಅಜ್ಜ ಹೋರ ಬರುವ ಲಕ್ಷಣಗಳೇ ಕಾಣ್ತಾಯಿಲ್ಲಾ... ವಾಗಿಗೆ ಪಿತ್ತ ನೆತ್ತಿಗೇರಿತು... ಬಹಳ ಕೋಪದಿಂದಲೇ ಭಟ್ಟನಿಗೆ, "ಲೇ ಅಜ್ಜ ಯಾಕೋ ಹೋರಗೆ ಬರುವಹಾಗೆ ಕಾಣ್ತಾ ಇಲ್ಲ... ನಾನ್ ಎಷ್ಟು ಬ್ಯಾಡ ಬ್ಯಾಡ ಅಂದ್ರೂ ನೀನೇ ಅವನನ್ನ ಹತ್ತುಸ್ಕೋ ಅಂದ್ದಿದ್ದು... ಅದೇನ್ ಮಾಡ್ತೀಯೋ ಗೊತ್ತಿಲ್ಲ... ಹೋಗಿ ಅಜ್ಜ ಎಲ್ಲಿದ್ದಾನೆ ಅಂತ ನೋಡ್ಕೋಂಡ್ ಬಾ.." ಅಂತ ಹೇಳಿದ. ಆಗಲೇ ಫ್ಯೂಸ್ ಔಟಾಗಿದ್ದ ಭಟ್ಟ ವಿಧಿ ಇಲ್ದೆ, ಒಲ್ಲದ ಮನಸ್ಸಿನಿಂದ ಕಾರಿಂದ ಇಳಿದ... ಕಾರಿನ ಹೆಡ್ ಲೈಟ್ ಚೆಲ್ಲುತ್ತಿದ್ದ ಬೆಳಕಿನಲ್ಲೇ ಅವನೂ ಸಹ, "ನಾನ್ ಯಾಕಾದ್ರೂ ಆ ಅಜ್ಜನಿಗೆ ಲಿಫ್ಟ್ ಕೊಡ್ಸಿದ್ನೋ..." ಅಂತ ಗೊಣುಗುತ್ತಾ, ಅಜ್ಜನ ಮನೆಯ ಗೇಟ್ ತೆಗೆದು ಒಳಕ್ಕೆ ಹೋದ. ಕಾರು ಕೇವಲ ೧೦ ಅಡಿಯ ದೂರದಲ್ಲಿಯೇ ಪಾರ್ಕ್ ಆಗಿದ್ದರಿಂದ, ಭಟ್ಟನಿಗೆ ಏನೋ ಒಂದು ರೀತಿಯ ಧೈರ್ಯ. ಅಕಸ್ಮತ್ ಏನಾದ್ರೂ ಎಡ್ವಟ್ಟಾದ್ರೆ, ವಾಗಿ ಹೆಲ್ಪಿಗೆ ಬಂದೇ ಬರ್ತಾನೇ ಅನ್ನೋ ಖಾತ್ರಿ!

ಇಷ್ಟೊತ್ತಿಗೆ ಅಜ್ಜ ಕಡೆ ಪಕ್ಷ ಸೀಮೇ ಎಣ್ಣೆಯ ಬುಡ್ಡಿಯನ್ನಾದ್ರೂ ಹಚ್ಚಿರ್ ಬೋದು ಅಂತ ಎಣಿಸಿ, ಭಟ್ಟ, "ಮಿಯಾ... ಆಪ್ ಕಿದರ್ ಹೈ... ಘರ್ ಮೇ ಕೊಯಿ ಹೈ..." ಅಂತ ಕೊಂಚ ಹಿಂಜರಿಕೆಯಿಂದಲೇ ಆವಾಜ಼್ ಹಾಕ್ತ ಇದ್ದ... ಆದರೆ ಮನೆಯೊಳಗಿಂದ ಒಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ... ಭಟ್ಟ ಹಾಗೇ ಒಮ್ಮೆ ಕಾರಿನೆಡೆಗೆ ತಿರುಗಿ, "ಲೇ... ಏನ್ ಮಾಡ್ಲಿ? ಅಜ್ಜ ರಿಪ್ಲೈ ಮಾಡ್ತಾ ಇಲ್ಲ..." ಅಂತ ತನ್ನ ನಿಸ್ಸಹಾಯಕ ಸ್ಥಿತಿ ಸೂಚಿಸಿದ. ಆಗ ವಾಗಿ, "ಲೇ... ಅಲ್ಲೇ ಒಳಗಡೆ ಇರ್ತಾನೇ, ಸ್ವಲ್ಪ ಜೋರಾಗಿ ಬಾಗ್ಲಾ ಬಡಿ... " ಅಂದ. ವಾಗಿಯ ಮಾತನ್ನು ತಳ್ಳಿ ಹಾಕುವ ಪ್ರಶ್ನೆಯೇ ಇರಲಿಲ್ಲ.

ತನ್ನ ಬಳಿ ಇದ್ದ ನೋಕಿಯಾ ೧೧೧೨ ಹ್ಯಾಂಡ್ ಸೆಟ್ಟಿನಿಂದ ಚೆಲ್ಲುತ್ತಿದ್ದ ಅಲ್ಪ ಸ್ವಲ್ಪ ಬೆಳುಕಿನಲ್ಲೇ, ಉಳಿದ ಪಳಿದ ಎಲ್ಲಾ ಧೈರ್ಯವನ್ನೂ ಒಟ್ಟುಗೂಡಿಸಿ, ಭಟ್ಟ ಮನೆಯೋಳಗೆ ಕಾಲ್ ಇಟ್ಟೇ ಬಿಟ್ಟ... ಮನೆಯೋಳಗೆ ಯಾರೋಬ್ಬರು ಇದ್ದಂಗೆ ಕಾಣಿಸುತ್ತಿರಲ್ಲಿಲ್ಲ... ಮನೇ ಪೂರ್ತಿ ಜಾಲಾಡೀದ್ರೂ ಯಾವನೇ ಒಬ್ಬ ನರಪಿಳ್ಳೆಯೂ ಕಣ್ಣಿಗೆ ಕಾಣಲಿಲ್ಲ... ಆ ಅಜ್ಜ ಏನಾದ್ರೂ ಮನೆಯ ಸೈಡಿಗಿದ್ದ ಜಾಗಕ್ಕೆ ಹೋಗ್ಯಾನ ಅಂತ ನೋಡಲು ಭಟ್ಟ ಮನೆಯ ಸುತ್ತ ಮುತ್ತಾನೂ ಜಾಲಾಡಿದ... ಯಾವಗ್ ಆ ಅಜ್ಜನ ಸುಳಿವು ಅವನಿಗೆ ಸಿಗಲಿಲ್ಲವೋ ಅವನಿಗೆ ಒಂದು ರೀತಿಯ ಡರ್ ಹೋಡೆಯಲು ಶುರುವಾಯಿತು... ಅಲ್ಲೆನೋ ಫಾಲ್ಟ್ ಹೋಡ್ದಿದೆ ಅನ್ನುವುದು ಅವನಿಗೆ ಖಾತ್ರಿಯಾಗ್ ಹೋಯ್ತು!

ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡೋಡಿ ಕಾರ್ ಬಳಿ ಬಂದು... "ವಾಗಿ... ಗಡಾ ಕಾರ್ ವಾಪಸ್ ತಕ್ಕ... ಮನೇ ಪೂರ್ತಿ ಸ್ಕ್ಯಾನ್ ಹೋಡ್ದೀನಿ... ಆ ಅಜ್ಜ ಎಲ್ಲೂ ಇಲ್ಲಾ ಲೇ... ಇಲ್ಲೇನೋ ಆಗೈತ್ಲೇ... ಫಸ್ಟ್ ಗಾಡಿ ರಿವರ್ಸ್ ತಗೋ..." ಎಂದು ಒಂದೇ ಸಮನೆ ಪೀಡಿಸತೊಡಗಿದ... ಇಷ್ಟೆಲ್ಲಾ ಆದ್ರೂ ರಾಜು ಮಾತ್ರ ನಿದ್ರೆಯಿಂದ ಏಳಲೇ ಇಲ್ಲ... ಭಟ್ಟ ತನಗೆ ಹೇಳಬೇಕದ್ದನೆಲ್ಲಾ ಒಂದೇ ಉಸಿರಿಗೆ ಹೇಳ್ದೋನೆ ಅವಸರ ಅವಸರವಾಗಿ ಕಾರಿನ ಹಿಂಬದಿಯ ಸೀಟಿನಲ್ಲಿ ಭದ್ರವಾಗಿ ತಳವೂರಿಬಿಟ್ಟ... ವಾಗಿಗೂ ಏನೂ ತೊಚದಂತಾಗಿ, ತಾವು ಯಾಕಾದ್ರೂ ಇಲ್ಲಿಗೆ ಬರೋಕ್ಕೆ ಹೋದ್ವೋ ಅಂತ ಅಂದ್ಕೊಂಡು ಗಾಡಿಯನ್ನು ರಿವರ್ಸ್ ತಗೋಂಡು ಸೀದಾ ಹೈವೇ ಕಡೆಗೆ ಹೊರಟ್ ಬಿಟ್ಟ...

ರಾತ್ರಿಯ ಸಮಯ ಸುಮಾರು ೨:೦೫... ಪುನಃ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ...

ಯಾವಗ್ ಹೈವೆ ಸಿಗುತ್ತಪ್ಪಾ ಅಂತ ಎದುರು ನೋಡುತ್ತಾ ಡ್ರೈವ್ ಮಾಡ್ಕೋಂಡು ಬಂದ ವಾಗಿಗೆ ತನ್ನ ಜೀವ ಉಳೀತೂ ಅಂತ ಅನ್ಸಿದ್ದೆ ಪುನಃ ಹೆದ್ದಾರಿ ರೀಚ್ ಆದಾಗ... ಬದುಕೋಂಡ್ಯಾ ಬಡ್ ಜೀವೀ ಅಂತ ನಿಟ್ಟಿಸಿರು ಬಿಡುತ್ತಾ ಭಟ್ಟ ಹಾಗು ವಾಗಿ ದಾವಣಗೆರೆ ಬರುವುದನ್ನೇ ಕಾಯುತ್ತಾ ಇದ್ದರು. ಸ್ವಲ್ಪ ಸಮಯದ ನಂತರ ವಾಗಿ, "ಭಟ್ಟ... ನೋಡ್ಲೆ... ಹ್ಯಾಂಗೆ ಮೈಮ್ಯಾಗೆ ಹರಾಸ್ ಇಲ್ಲ್ದೋರಹಂಗೆ ಬಿದ್ಕೋಂಡಾನೇ ಭೂಪ..." ಅಂತ ರಾಜೂನ ತೋರಿಸಿ ಹೇಳ್ದ. ಆ ಟೈಮಿಗಾಗಲೆ ಸ್ವಲ್ಪ ಚೇತರಿಸಿಕೊಂಡಿದ್ದ ಭಟ್ಟ ಏನೋ ನಗ್ ಬೇಕಲ್ಲಾ ಅಂತ ಒಲ್ಲದ ಮನಸ್ಸಿನಿಂದ ನಕ್ಕು ಸುಮ್ಮನಾಗಿ ಬಿಟ್ಟ. ಆದ್ರೂ ಇಬ್ಬರಿಗೂ ಒಳ್ಗೋಳಗೆ ತೀಳಿದಿದ್ದ ಸತ್ಯ ಏನಪ್ಪಾ ಅಂದರೆ, ಇದೆಲ್ಲಾ ತಮ್ಮಲ್ಲಿದ್ದ ಹೆದರಿಕೆಯನ್ನು ಮರೆಮಾಚೊದಕ್ಕೇನೇ ಹೀಗೆ ಮಾಡ್ತಾಯಿದ್ದೀವಿ ಅಂತ... ಅವರ ಬಳಿ ಬೇರೆ ದಾರೀನೆ ಇರ್ಲಿಲ್ಲಾ... ಅವರು ಯಾವಾಗ್ ದಾವಣಗೆರೆ ತಲುಪುತ್ತೇವೋ ಅಂತ ಯೋಚನೆ ಮಾಡ್ತಾ ಇದ್ರು...

ಮುಂಜಾನೆಯ ಸಮಯ ಸುಮಾರು ೫:೨೫... ದಾವಣಗೆರೆಯ ಹೊರವಲಯದಲ್ಲಿ ...

ದಾವಣಗೆರೆ ಮುಟ್ಟುತ್ತಿದ್ದಂತೆ ಇಬ್ಬರಿಗೂ ಒಂದು ರೀತಿಯ ಸಮಧಾನ. ಹೋದ ಜೀವ ಬಂದ ಹಾಗಾಯಿತು... ಇನ್ನೂ ಕತ್ತಲೆಯೇ ಆವರಿಸಿದ್ದ ಆಕಾಶ, ನಾಳೆಯನ್ನು ಬರಮಾಡಿಕೋಳ್ಳಲು ಇನ್ನು ಪ್ರಿಪೇರ್ ಆಗ್ತಾ ಇತ್ತು... ಕೆಲ ಸಮಯದ ಬಳಿಕ ವಾಗಿಯ ಮನೆ ಮುಂದೆ ಕಾರು ನಿಂತಿತು... ರಾತ್ರಿಯಿಡಿ ಆ ಅಜ್ಜನ ಸಲುವಾಗಿ ಎಚ್ಚರದಿಂದಿರಬೇಕಾಗಿದ್ದ ಕಾರಣ ಇಬ್ಬರಿಗೂ ಯಾವಾಗ್ ಮಲಗಿಕೊಂಡೆವೋ ಅಂತ... ಇತ್ತ ಆರಾಮಾಗಿಯೇ ನಿದ್ರೆ ಮಾಡುತ್ತಿದ್ದ ರಾಜುವನ್ನು ಇಬ್ಬರೂ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಒಂದು ರೂಮಿನಲ್ಲಿ ’ಬಿಸಾಡಿ’, ತಾವು ಹಾಲ್ನಲ್ಲೆ ಬಿದ್ದು ಕೊಂಡರು...

ಬೆಳಿಗ್ಗೆ ಸಮಯ ಸುಮಾರು ೯:೪೫... ವಾಗಿಯ ಮನೆಯ ಒಳಗೆ...

ಹಿಂದಿನ ರಾತ್ರಿಯ ಬಗ್ಗೆ ಏನೂ ಗೊತ್ತಿರದ ರಾಜು ಕಣ್ ಬಿಟ್ಟಾಗ ತಿಳಿದಿದ್ದು, ತಾನು ವಾಗಿಯ ಮನೇಲಿದ್ದೇನೆ ಅಂತ... ಎದ್ದವನೇ ಸೀದಾ ಹಾಲಿಗೆ ಬಂದು, ಗಾಢವಾದ ನಿದ್ರೆಯಲ್ಲಿದ್ದ ವಾಗಿ ಹಾಗು ಭಟ್ಟನನ್ನು ತಿವಿದು ತಿವಿದು, "ಲೇ... ಏಳ್ರಲೇ... ಏನ್ ಹಂಗ್ ಬಿದ್ಕೋಂಡಿದ್ದಿರಲ್ಲಾ... ಆಗ್ಲೇ ೧೦ ಘಂಟೆ ಆಗೋಕೆ ಬಂತು..." ಎಂದು ಒಂದೇ ಸಮನೇ ಕಾಡೋಕೆ ಶುರು ಮಾಡ್ದ... ಸುಮಾರು ಹೊತ್ತಿನ ಪ್ರಯತ್ನದ ಬಳಿಕ, ಇಬ್ಬರೂ ಎದ್ದರು... ಎಲ್ಲರೂ ತಮ್ಮ ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿಕೊಂಡ ಬಳಿಕ, ಮನೆಯ ಬಳಿಯಿದ್ದ ಟೀ ಸ್ಟಾಲಿಗೆ ಹೋಗಿ ಒಂದು ಕಪ್ ಕಡಕ್ ಟೀ ಹೀರಿ ಬಂದರು...

ಬೆಳಿಗ್ಗೆಯ ಸಮಯ ಸುಮಾರು ೧೦:೪೫... ವಾಗಿ ಮನೆಯ ಹೊರಗೆ...

ಕಾರಿನ್ನೂ ಮನೆಯ ಮುಂದೇನೆ ಪಾರ್ಕ್ ಆಗಿದ್ದನ್ನು ನೋಡಿದ ವಾಗಿ, "ತಡೀಲೇ ಭಟ್ಟ... ಕಾರನ್ನ ಶೆಡ್ನಲ್ಲಿ ನಿಲ್ಲಿಸಿ ಬರ್ತೀನಿ.." ಅಂತ ಹೇಳಿ ಹೋದ. ಇನ್ನೇನು ಕಾರ್ ಬಾಗಿಲು ತೆಗೆದು ಒಳಗಡೆ ಕೂತ್ಕೋ ಬೇಕು, ಅವನ ದೃಷ್ಟಿ ಬ್ಯಾಕ್ ಸೀಟಿನಲ್ಲಿದ್ದ ಕಿಟ್ ಬ್ಯಾಗ ಕಡೆಗೆ ಬಿತ್ತು... ಒಂದು ಕ್ಷಣ ಹಿಂದಿನ ರಾತ್ರಿ ನಡೆದದ್ದೆಲ್ಲಾ ಕಣ್ಮುಂದೆ ಬಂದಂತಾಗಿ, "ಲೇ ಭಟ್ಟ... ಬೇಗ್ ಬಾರಲೇ... " ಅಂತ ಕಿರುಚಿದ.

ಇವನ್ಯಾಕಪ್ಪಾ ಹಿಂಗ್ ಕಿರುಚ್ಕೋಂಡ ಅಂತ ಭಟ್ಟ ಹಾಗು ರಾಜು ಇಬ್ಬರೂ ಅವನ ಬಳಿ ಓಡಿ ಬಂದರು. ವಾಗಿ ಕಾರಿನಲ್ಲಿದ್ದ ಆ ಬ್ಯಾಗನ್ನೇ ತೋರಿಸುತ್ತಾ ನಿಂತನು... ಭಟ್ಟನೂ ಕೆಲ ಕ್ಷಣ ಗರ ಬಡ್ದೋರಹಾಗೆ ನಿಂತು ಬಿಟ್ಟ... ಇವರಿಬ್ರೂ ಯಾಕ್ ಹಿಂಗೆ ಕರ್‍ಎಂಟ್ ಹೊಡ್ದ್ ಕಾಗಿ ಆದಂಗಾದ್ರು ಅಂತ ರಾಜು ವಿಚಾರ ಮಾಡಲು ಶುರು ಮಾಡ್ದ... ಆಗ ವಾಗಿ, "ಲೇ ಭಟ್ಟ ಎಂಥಾ ಕೆಲ್ಸ ಮಾಡ್ಬಿಟ್ವಲೆ ನಾವು... ಅಜ್ಜನ ಬ್ಯಾಗ್ನ್ ಹಾಗೇ ತಗೋಂಡ್ ಬಂದ್ ಬಿಟ್ವಲ್ಲೋ.." ಅಂತ ಆತಂಕ ವ್ಯಕ್ತ ಪಡಿಸಿದ. ಅಲ್ಲಿದ್ದ ೩ ವರಿಗೂ ಒಂದೇ ತೆರನಾದ ಕುತೂಹಲ. ಕೊನೇಗೂ ವಾಗಿ ಧೈರ್ಯ ಮಾಡಿ ಆ ಬ್ಯಾಗನ್ನು ಮನೆ ಒಳಗೆ ಹೋಗಿ ತೆರೆದೇ ಬಿಟ್ಟ...

ಬ್ಯಾಗ್ ಒಳಗಿದ್ದ ವಸ್ತುಗಳನ್ನು ನೋಡುತ್ತಿದ್ದಂತೆ, ಮೂವರೂ ಫ್ಯೂಸ್ ಔಟ್ ಆದವರಂತೆ, ಬಿಟ್ಟ ಕಣ್ಣು ಬಿಟ್ಟಂತೆ ಒಬ್ಬರ ಮುಖವನ್ನೊಬ್ಬರು ನೋಡ್ಕೋತ ನಿಂತ್ ಬಿಟ್ರು... ಅದನ್ನು ನೋಡಿದ ಬಳಿಕ ಯಾರೊಬ್ಬರಿಗೂ ೩ ದಿನ ಊಟ ಸೇರಲಿಲ್ಲಾ...

ಇಷ್ಟೆಲ್ಲಾ ವಿವರಗಳನ್ನು ನೀಡಿದ ಭಟ್ಟ, ಕೊನೆಗೆ ಹೇಳುದ್ದು ಕೇಳಿ ಕೆಲ ಕ್ಷಣ ನನಗೂ ಕೈಕಾಲು ಆಡದ ಹಾಗೆ ಆದವು. ಭಟ್ಟ ಹೇಳಿದ, "ಲೇ... ಅವತ್ತು ಏನಾದ್ರೂ ಹೈವೇನಲ್ಲಿ ಟ್ರಾಫಿಕ್ ಪೋಲೀಸ್ ನಮ್ಮನ್ನು ನಿಲ್ಲಿಸಿ ಕಿಟ್ ಬ್ಯಾಗ್ ಚೆಕ್ ಮಾಡಿದಿದ್ದರೆ, ನಮ್ಗೆ ಕಾಯಂ ಟಾಡಾ ಕೇಸಿನಲ್ಲಿ ೧೦ ವರ್ಷ ಜೈಲ್ ಆಗುತಿತ್ತಲೇ... ಪುಣ್ಯ, ಹೇಗೋ ಆ ಕಿಟ್ ಬ್ಯಾಗು ಯಾರ್ ಕೈಗೂ ಸಿಕ್ಕಲಿಲ್ಲ..." ಎಂದು ನಿಟ್ಟುಸಿರು ಬಿಟ್ಟ. ಅವನು ಹೇಳಿದನ್ನು ಕೇಳಿದ ಬಳಿಕ ನಾನೂ ಸಹ ಒಪ್ಕೊಂಡೆ, ಅದು ನಿಜವಾಗ್ಲೂ ಒಂದು ಕರಾಳ ರಾತ್ರಿಯೇ ಸರಿ ಅಂತ!