ಗುರುವಾರ, ಡಿಸೆಂಬರ್ 25, 2008

ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ ಅಬೌಟ್ ಕನ್ನಡ ಆನ್ಲೈನ್!

ಇದೇನಪ್ಪ ಇದು ಕನ್ನಡದ ಬಗ್ಗೆ ಅಂತ ಹಾಕಿ ಪೂರ್ತಿ ಇಂಗ್ಲಿಷ್ ಅಲ್ಲಿ ಟೈಟಲ್ ಕೊಟ್ಟಿದ್ದಾನೆ ಅಂದ್ಕೋಬೇಡಿ. ಅಂತರಜಾಲದಲ್ಲಿ, ತಂತ್ರಾಂಶಗಳಲ್ಲಿ ನಾವೆಲ್ಲ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ (FAQ) ನೋಡುತ್ತಲೇ ಇರುತ್ತೇವೆ. ನಿರ್ದಿಷ್ಟ ಕೆಲಸವನ್ನು ಮಾಡುವುದು ಹೇಗೆ, ವೈಶಿಷ್ಟ್ಯಗಳ ಬಗ್ಗೆ ಮಾಹಿತಿ, ಇನ್ನೂ ಅನೇಕ ವಿಷಯಗಳ ಬಗ್ಗೆ ತಿಳಿಸಲು ಇದನ್ನು ಹಾಕಿರುತ್ತಾರೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಈಗ ಅಂತರಜಾಲದಲ್ಲಿ ಗಣನೀಯವಾಗಿ ಮುಂದಿದೆ. ಸಂಪದ, ದಟ್ಸ್-ಕನ್ನಡ, ವೆಬ್ ದುನಿಯಾ, ಕೆಂಡಸಂಪಿಗೆ, ವಿಸ್ಮಯನಗರಿ, ಕನ್ನಡ ಹನಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿಕಿಪೀಡಿಯಾ - ಹೀಗೆ ಅನೇಕ ತಾಣಗಳಲ್ಲಿ ಕನ್ನಡಿಗರು ಬರೆದು/ಓದಿ ಸಂತಸ ಪಡುತ್ತಿದ್ದಾರೆ. ವಿಕಿಪೀಡಿಯಾದ ಲೋಗೋ ಕನ್ನಡದ "ವಿ" ಅಕ್ಷರವನ್ನು ಒಳಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. (ಯುನಿಕೋಡ್ "ವ" ಮತ್ತು ಅದರ ಹಿಂದೆ "ಇ" ಬಂದಿದೆ.. ಅದು ಬೇರೆ ವಿಷಯ. ದೇವನಾಗರಿಯ वि ಕೂಡ ಹೀಗೇ ರೂಪಾಂತರಗೊಂಡಿರುವುದನ್ನು ಗಮನಿಸಬಹುದು)

wikipedia logo

ಬ್ಲಾಗರ್ ಹಾಗೂ ವರ್ಡ್ ಪ್ರೆಸ್ ನ ಕನ್ನಡ ಬ್ಲಾಗುಗಳಂತೂ ಕವನ, ಕಥೆ, ಪ್ರಯಾಣ, ರಾಜಕೀಯ, ಸುದ್ದಿ, ಅನುಭವ, ವಿಮರ್ಶೆ, ಗಾದೆ, ವಿಜ್ಞಾನ, ಸಾಹಿತ್ಯ, ಕಲೆ - ಹೀಗೆ ವೈವಿಧ್ಯಗಳಿಂದ ತುಂಬಿಹೋಗಿದೆ. ಆದರೂ...

ಅಂತರಜಾಲದಲ್ಲಿ ಕನ್ನಡ ಉಪಯೋಗಿಸುವುದರ ಬಗ್ಗೆ ಕೂಡ ಎಲ್ಲರಿಗೂ ತಿಳಿದಿಲ್ಲ. ಹಲವರು ತಮ್ಮ ಅನಿಸಿಕೆಗಳನ್ನು ಆಂಗ್ಲ ಅಕ್ಷರಗಳನ್ನು ಬಳಸಿ ಬರೆಯುತ್ತಾರೆ. ಕೆಲವರು ಕನ್ನಡದಲ್ಲಿ ಹೇಗೆ ಬರೆಯುವುದು ಎಂದು ಕೂಡ ಕೇಳಿದ್ದಾರೆ. ನನ್ನ ಹಲವು ಗೆಳೆಯ/ಗೆಳತಿಯರು ನನ್ನ ಜೊತೆ ಚಾಟ್ ಮಾಡುವಾಗ/ಬ್ಲಾಗ್ ಓದುವಾಗ ನೀನು ಕನ್ನಡದಲ್ಲಿ ಹೇಗೆ ಬರೆಯುತ್ತೀಯ ಎಂದು ಕೇಳುತ್ತಿರುತ್ತಾರೆ. ಕೆಲವರು ಕನ್ನಡದಲ್ಲಿ ನಾನು ಏನಾದರೂ ಕಳಿಸಿದಾಗ ಇದೇನೋ ಇದು ಬಾಕ್ಸ್ ಬಾಕ್ಸ್ ಡಿಸ್ಪ್ಲೇ ಆಗ್ತಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬರಹದಲ್ಲಿ ಬರೆದು ಮತ್ತೆ ಇಲ್ಲಿ ಬಂದು ಕಾಪಿ-ಪೇಸ್ಟ್ ಮಾಡುವುದು ತಲೆನೋವು ಮಾರಾಯ ಎಂದು ಇಂಗ್ಲಿಷ್ ಅಕ್ಷರಗಳಿಗೆ ಮೊರೆಹೋಗುತ್ತಾರೆ. ಅವರಿಗೆಲ್ಲ ಸಹಾಯವಾಗಲಿ ಎಂಬ ಆಶಯದಿಂದ ಈ ಲೇಖನ ಬರೆಯುತ್ತಿದ್ದೇನೆ.

ಈಗ ನೇರವಾಗಿ ವಿಷಯಕ್ಕೆ ಬರೋಣ.

*****

ಅಂತರಜಾಲದಲ್ಲಿ ಕನ್ನಡ ಬಳಸಲು ಏನೇನು ಬೇಕು?
  • ಒಂದು ಗಣಕಯಂತ್ರ
  • ಅಂತರಜಾಲ ಸಂಪರ್ಕ
ಇವೆರಡಿದ್ದರೆ ಕನ್ನಡದಲ್ಲಿ ಬರೆಯುವುದು/ಓದುವುದು ಸಾಧ್ಯ. ಬಹುಪಾಲು ಜನರು ಉಪಯೋಗಿಸುತ್ತಿರುವುದು ವಿಂಡೋಸ್ ಆಗಿರುವುದರಿಂದ ಅದರಲ್ಲಿ ಓದುವುದು/ಬರೆಯುವುದು ಹೇಗೆ ಎಂಬುದನ್ನು ಇಲ್ಲಿ ಬರೆಯುತ್ತಿದ್ದೇನೆ.

ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?

ಅಂತರಜಾಲದಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಲ್ಲಿರುವುದು ಯೂನಿಕೋಡ್ ಅಕ್ಷರಗಳು. ಅವು ಸರಿಯಾಗಿ ಮೂಡಿಬರಲು ಅದಕ್ಕೆ ಬೇಕಾದ ತಂತ್ರಾಂಶ ಸಹಕಾರ ಅಗತ್ಯ. ಅದಕ್ಕಾಗಿ ನೀವು ಮಾಡಬೇಕಾದುದು:
  • Start -> Control Panel ಗೆ ಹೋಗಿ.
  • ನೀವು Category View ನಲ್ಲಿ ಇದ್ದರೆ Date, Time, Language and Regional Options ಅನ್ನು ತೆರೆದುಕೊಳ್ಳಿ. ನೀವು Classic View ನಲ್ಲಿ ಇದ್ದರೆ ಈ ಕ್ರಮದ ಅಗತ್ಯವಿಲ್ಲ.
  • Regional and Language settings ಅನ್ನು ತೆರೆಯಿರಿ.
  • ಅದರಲ್ಲಿ Languages ಎನ್ನುವ ಟ್ಯಾಬ್ ಇರುತ್ತದೆ. ಅಲ್ಲಿಗೆ ಹೋಗಿ.
  • Install files for complex script and right-to-left languages (including Thai) ಎಂದು ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿಕೊಂಡು Apply ಮಾಡಿ. ಈ ಆಯ್ಕೆಯನ್ನು ಸ್ಥಿರಗೊಳಿಸಲು OK ಒತ್ತಿ. ನಿಮಗೆ ಆಪರೇಟಿಂಗ್ ಸಿಸ್ಟಂನ ಸಿಡಿ ಬೇಕಾಗಬಹುದು.
  • ಗಣಕವನ್ನು ರೀಸ್ಟಾರ್ಟ್ ಮಾಡಿ ಕನ್ನಡ ಬ್ಲಾಗುಗಳನ್ನು ಓದಲು ಪ್ರಯತ್ನಿಸಿ.

ನಾನೂ ಕನ್ನಡದಲ್ಲಿ ಬರೆಯಬೇಕು. ಅದು ಹೇಗೆ?

ಕನ್ನಡದಲ್ಲಿ ಬರೆಯಲು ಸಹಾಯಕವಾಗುವ ಅನೇಕ ತಂತ್ರಾಂಶಗಳಿವೆ. ಅವುಗಳಲ್ಲಿ ಜನಪ್ರಿಯವಾಗಿರುವುದು ಬರಹ ತಂತ್ರಾಂಶ. ಇದನ್ನು http://www.baraha.com/baraha.htm ನಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಆಂಗ್ಲ ಅಕ್ಷರಗಳಲ್ಲಿ ಬರೆದು Ctrl+T ಒತ್ತಿದರೆ ತನ್ನಿಂತಾನೇ ಬರೆದಿರುವ ಲೇಖನ ಲಿಪ್ಯಂತರಗೊಳ್ಳುತ್ತದೆ. ಇದರಲ್ಲಿ ಕನ್ನಡವಲ್ಲದೆ ಇನ್ನೂ ಅನೇಕ ಭಾರತೀಯ ಭಾಷೆಗಳನ್ನು ಬರೆಯಬಹುದು.

ನಾನು ಕನ್ನಡದಲ್ಲಿ ಬರೆದು ಬ್ಲಾಗಿನಲ್ಲಿ ಹಾಕಿದ ಲೇಖನ ಬೇರೆ ಗಣಕಗಳಲ್ಲಿ ಸರಿಯಾಗಿ ಕಾಣುತ್ತಿಲ್ಲ. ಏಕೆ ಹೀಗೆ?

ಬರಹದಲ್ಲಿ ಅದರದ್ದೇ ಆದ ಫಾಂಟ್ ಉಪಯೋಗಿಸಲ್ಪಡುತ್ತದೆ. ಅದನ್ನು ನೇರವಾಗಿ ಅಂತರಜಾಲಕ್ಕೆ ಹಾಕಿದರೆ ಬರಹದ ಫಾಂಟ್ ಇರುವ ಗಣಕದಲ್ಲಿ ಮಾತ್ರ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಅಂತರಜಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯೂನಿಕೋಡ್ ಉಪಯೋಗಿಸಿ ಬರೆದರೆ ಎಲ್ಲ ಕಡೆ ಓದಲು ಸಾಧ್ಯವಾಗುತ್ತದೆ. ಬರಹದಲ್ಲಿ ಕಾಪಿ ಮಾಡುವಾಗ ರೈಟ್ ಕ್ಲಿಕ್ ಮಾಡಿ Copy Special... ಆಯ್ಕೆ ಮಾಡಿಕೊಂಡು ಅದರಲ್ಲಿ Text (UNICODE) ಆಯ್ಕೆ ಮಾಡಿಕೊಂಡು ನಂತರ ಬ್ಲಾಗಿನಲ್ಲಿ ಪೇಸ್ಟ್ ಮಾಡಿದರೆ ಎಲ್ಲ ಗಣಕಗಳಲ್ಲೂ ಓದಬಹುದು.

ನಾನು ಬಳಸುತ್ತಿರುವ ಕಛೇರಿಯ ಗಣಕದಲ್ಲಿ ಬರಹ ಇನ್ಸ್ಟಾಲ್ ಮಾಡಲು ನನಗೆ ಅನುಮತಿಯಿಲ್ಲ. ಏನು ಮಾಡಲಿ?

ಬಳಸಲು ಬರಹಕ್ಕಿಂತ ಸುಲಭವಾಗಿರುವ ಇನ್ನೊಂದು ವಿಧಾನವಿದೆ. ಅದು ಗೂಗಲ್ ಲಿಪ್ಯಂತರಣ ಸೇವೆ (Transliteration Service). ಅದು ಈ ಪುಟದಲ್ಲಿ ಲಭ್ಯ: http://www.google.com/transliterate/indic/Kannada. ಇದರಲ್ಲಿ ನಾವು ಸಾಧಾರಣವಾಗಿ ಬರೆಯುವಂತೆ ಬರೆದರೂ ಕೂಡ ಚಾಣಾಕ್ಷವಾಗಿ ಲಿಪ್ಯಂತರಗೊಳ್ಳುತ್ತದೆ. ಆದರೆ ಇದು ಅಂತರಜಾಲ ಸಂಪರ್ಕವಿದ್ದಾಗ ಮಾತ್ರ ಲಭ್ಯ. ಇದೂ ಕೂಡ ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಚಾಟ್ ಮಾಡುವಾಗ ಬರಹ/ಗೂಗಲ್ ನಲ್ಲಿ ಬರೆದು ಕಾಪಿ ಮಾಡಿ ಮತ್ತೆ ಚಾಟ್ ಮಾಡುವಲ್ಲಿಗೆ ಬಂದು ಪೇಸ್ಟ್ ಮಾಡುವಷ್ಟು ಸಹನೆ ನನಗಿಲ್ಲ. ಇದಕ್ಕೇನಾದರೂ ಸುಲಭ ಉಪಾಯವಿದೆಯೆ?

ನೀವು ಬರಹ ಉಪಯೋಗಿಸುತ್ತಿದ್ದಲ್ಲಿ ಉಪಕರಣ ಪಟ್ಟಿಕೆಯಲ್ಲಿರುವ (toolbar) ನೇರ ಬರಹ (Baraha direct) ಆಯ್ಕೆ ಮಾಡಿಕೊಂಡರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ನೇರವಾಗಿ ಬರೆಯಬಹುದು. ಬರೆಯುವ ನಡುವೆ ಇಂಗ್ಲಿಷ್ ಬಳಸಬೇಕಾದಲ್ಲಿ F11 ಅಥವಾ F12 ಉಪಯೋಗಿಸಬಹುದು. ನೇರ ಬರಹವನ್ನು ಸ್ಟಾರ್ಟ್ ಮೆನುವಿನಲ್ಲಿ All Programs -> Baraha 7.0 -> Baraha Direct ನಿಂದ ಕೂಡ ತೆರೆದುಕೊಳ್ಳಬಹುದು.

ಬರಹವಿಲ್ಲದಿದ್ದಾಗ ಹೇಗೆ ಕನ್ನಡದಲ್ಲಿ ಸುಲಭವಾಗಿ ಚಾಟ್ ಮಾಡಬಹುದು?

ನೀವು ಬೆಂಕಿನರಿ (ಫೈರ್ಫಾಕ್ಸ್) ಉಪಯೋಗಿಸುತ್ತಿದ್ದಲ್ಲಿ ಈ ವಿಸ್ತರಣೆ (extension) ಹಾಕಿಕೊಳ್ಳಬಹುದು:
https://addons.mozilla.org/en-US/firefox/addon/8960
ಇದನ್ನು ಹಾಕಿಕೊಂಡ ನಂತರ ಯಾವುದೇ ಪುಟದಲ್ಲಿ ಬೇಕಾದರೂ ಗೂಗಲ್ ಲಿಪ್ಯಂತರಣ ಸೇವೆ ಬಳಸಿಕೊಳ್ಳಬಹುದು.

*****


ಈ ಪ್ರಶ್ನೋತ್ತರ ಸರಣಿ ಉಪಯುಕ್ತವೇ? ಇದಕ್ಕೆ ಸೇರಿಸಬಹುದಾದ ಪ್ರಶ್ನೆಗಳಿದ್ದರೆ ತಿಳಿಸಿ.

ಬುಧವಾರ, ಡಿಸೆಂಬರ್ 10, 2008

ನೀನಾರಿಗಾದೆಯೋ ಎಲೆ ಮಾನವಾ? ಹರಿ ಹರಿ ಗೋವು ನಾನು

ಗೋರಕ್ಷಣೆಯ ಬಗ್ಗೆ ಅನೇಕ ಕಡೆ, ಅನೇಕ ರೀತಿಯಲ್ಲಿ ಚರ್ಚೆಗಳಾಗುತ್ತಿವೆ. ಅದೇನೇ ಇರಲಿ, ಇದರ ಬಗ್ಗೆ ಈಚೆಗೆ ಧರ್ಮಭಾರತಿಗಾಗಿ ಯಜ್ಞೇಶ್ ಬರೆದಿರುವ ಲೇಖನ ಓದಿದಾಗ "ನೀನ್ಯಾರಿಗಾದೆಯೋ ಎಲೆ ಮಾನವ" ಎಂಬ ನುಡಿಗಟ್ಟಿನ ಪೂರ್ಣಪಾಠ ಹಾಕಬೇಕೆನಿಸಿತು. ಹಾಕಿದ್ದೇನೆ:

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||


ನಗರಗಳಲ್ಲಿ ಗುಬ್ಬಿ ಗಿಳಿಗಳು ಕಣ್ಮರೆಯಾಗಿವೆ. ಇತ್ತೀಚಿಗೆ ನಾನು ಎಲ್ಲೋ ಓದಿದಂತೆ ಮಿಂಚು ಹುಳು, ಕೆಲವು ಬಗೆಯ ಏಡಿಗಳು ಕೂಡ ವಿನಾಶದಂಚಿನಲ್ಲಿದೆ. ಗೋವು ಒಂದೇ ಅಲ್ಲ, ಎಲ್ಲ ಪ್ರಾಣಿ ಪಕ್ಷಿಗಳನ್ನೂ ಕಾಪಾಡುವ ಜವಾಬ್ದಾರಿ ಈಗ ಮನುಷ್ಯನ ಮೇಲಿದೆ.

ಎಮ್ಮೆ ತಮ್ಮಣ್ಣ ಚಿತ್ರದಲ್ಲಿರುವ ಹಾಡಿನ ವೀಡಿಯೊ ಕೂಡ ಇದೆ..

(ಕೊಂಡಿ ನೀಡಿದ ಅಂತರ್ವಾಣಿಯ ಜಯಶಂಕರ್ ಅವರಿಗೆ ಧನ್ಯವಾದಗಳು)

ಕೊಸರು (ಸಂಪದದಲ್ಲಿ ಗಿರೀಶ್ ಬರೆದಿದ್ದು): ನೀನಾರಿಗಾದೆಯೋ ಎಲೆ ಮಾನವಾ!!

ಸೋಮವಾರ, ಡಿಸೆಂಬರ್ 1, 2008

ವೋಟಿಗಾಗಿ! ಒಂದು ಸೀಟಿಗಾಗಿ!!

ಒಂದು ಕಡೆ ಭಯೋತ್ಪಾದಕರಿಂದ ದಾಳಿಯಾದರೆ ಸಾಕು... ಆಯಕಟ್ಟಿನ ಜಾಗಗಳಲ್ಲಿ ತಾತ್ಕಾಲಿಕವಾಗಿ ಭದ್ರತೆ ಹೆಚ್ಚುತ್ತದೆ; ಪತ್ರಕರ್ತರು ಯುದ್ಧಪಿಪಾಸುಗಳಂತೆ ವರ್ತಿಸುತ್ತಾ ಕ್ಷಣ-ಕ್ಷಣದ ಸುದ್ದಿಯನ್ನು ರೋಚಕವಾಗಿ ನೀಡುತ್ತಾರೆ; ನಾ ಮುಂದು ತಾ ಮುಂದು ಎಂದು ಎಲ್ಲ ನ್ಯೂಸ್ ಚಾನೆಲ್ಲುಗಳಲ್ಲೂ ಅದರ ಅತಿರಂಜಿತ ವರದಿ ಆರಂಭವಾಗುತ್ತದೆ; ನಡೆಯುತ್ತಿರುವುದರ ಬಗ್ಗೆ ತಲೆ-ಬುಡ ಗೊತ್ತಿಲ್ಲದವರಿಂದ ಅವುಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ; ರಾಜಕಾರಣಿಗಳೆಲ್ಲ ಘಟನೆಯನ್ನು ಖಂಡನಾರ್ಹ, ಪೈಶಾಚಿಕ ಕೃತ್ಯ ಎಂದೆಲ್ಲ ಹೇಳಿಕೆ ಕೊಟ್ಟು ಮೊಸಳೆ ಕಣ್ಣೀರು ಸುರಿಸುತ್ತಾರೆ; ತಕ್ಷಣದ ಪರಿಹಾರವಾಗಿ ಕೆಲ ಅಧಿಕಾರಿಗಳ, ಸಚಿವರ ತಲೆದಂಡ ಪಡೆಯಲಾಗುತ್ತದೆ. ಮಾಡಲು ಕೆಲಸವಿಲ್ಲದೆ ಸುಮ್ಮನೆ ಕುಳಿತವರನ್ನು ಸೇರಿಸಿ ತನಿಖೆಗೆಂದು ಒಂದು ಆಯೋಗ ರಚಿಸಲಾಗುತ್ತದೆ; ಬ್ಲಾಗಿಗರೆಲ್ಲ ಘಟನೆಯನ್ನು ವಿವಿಧ ಕೋನಗಳಿಂದ ವಿಮರ್ಶಿಸಿ ತಮ್ಮ ವೈಚಾರಿಕತೆ ಮೆರೆಯುತ್ತಾರೆ; ಅಂಕಣಕಾರರು ಎಷ್ಟೋ ವರ್ಷ ಹಿಂದಿನ ಘಟನೆಗಳನ್ನೆಲ್ಲ ಹೆಕ್ಕಿ ತೆಗೆದು ಆಗ ಹಾಗಾಗಿತ್ತು, ಈಗ ಹೀಗಾಗಿದೆ ಎಂದು ತಮ್ಮ ಇತಿಹಾಸ ಪಾಂಡಿತ್ಯ ಪ್ರದರ್ಶಿಸುತ್ತಾರೆ. ನನ್ನಂಥ ಕೆಲವರು ಹೊಲಸು ರಾಜಕಾರಣದಿಂದಲೇ ಇದೆಲ್ಲ ಆಗುತ್ತಿರುವುದು ಎಂದು ಹಲುಬುತ್ತಾರೆ; ಇನ್ನು ಕೆಲವು ಬಾಯಿಬಡುಕ ಬುದ್ಧಿಜೀವಿಗಳು ಪರಿಸ್ಥಿತಿಯ ಗಂಭೀರತೆ ಅರಿತು ಸುಮ್ಮನಾಗಿಬಿಡುತ್ತಾರೆ; ಎಲ್ಲರಲ್ಲೂ ದೇಶದ ಬಗ್ಗೆ ಎಂದೂ ಮೂಡದ ಅಭಿಮಾನ, ಕಾಳಜಿ ಒಟ್ಟಿಗೆ ಮೂಡಿ ಬರುತ್ತದೆ... ಅಷ್ಟೇ. ಘಟನೆ ಮರುಕಳಿಸದಂತೆ ಮಾಡಲು ಯಾರೂ ಮುಂದಾಗುವುದಿಲ್ಲ. ಸ್ವಲ್ಪ ದಿನ ಆದ ಮೇಲೆ ಹತ್ತರಲ್ಲಿ ಹನ್ನೊಂದರಂತೆ ಆ ಘಟನೆಯೂ ಕರಾಳ ಅಧ್ಯಾಯ ಎಂದು ಚರಿತ್ರೆಯಲ್ಲಿ ದಾಖಲಾಗಿಬಿಡುತ್ತದೆ.

"ಎ ವೆನ್ಸ್‍ಡೇ" ನಿಜವಾಗಿಯೂ ಆಗಬೇಕೆಂಬುದು ಎಲ್ಲರ ತಲೆಯಲ್ಲೂ ಬರುತ್ತದೆ. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು? ಬುಧವಾರ ಬರುತ್ತದೆ, ಹೋಗುತ್ತದೆ. ಮತ್ತೆ ಮತ್ತೆ ದಾಳಿಗಳು ನಡೆಯುತ್ತವೆ. ಶಾಂತಿಪ್ರಿಯ ಭಾರತದಲ್ಲಿ ಶಾಂತಿಪ್ರಿಯರದೇ ಮಾರಣಹೋಮವಾಗುತ್ತದೆ. ಅಶಾಂತಿ ಸೃಷ್ಟಿಸುವವರ ಅಟ್ಟಹಾಸ ಅಹಿಂಸೆಯ ಕೂಗಿನ ಸದ್ದಡಗಿಸುತ್ತದೆ. ಅಷ್ಟಕ್ಕೂ ಈ ದೇಶದಲ್ಲಿ ಯಾರಿಗೆ ಶಿಕ್ಷೆಯಾಗುತ್ತದೆ? ನಿಜವಾದ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಿದರೂ ಅದು ಕಾರ್ಯರೂಪಕ್ಕೆ ಬರಲು ವರ್ಷಗಟ್ಟಲೆ ಹಿಡಿಯುತ್ತದೆ. ಬದುಕಿರುವವರೆಗೆ ಜೈಲಿನಲ್ಲಿ ಬಿಟ್ಟಿ ಊಟ ಬೇರೆ. ಭಯೋತ್ಪಾದಕರಾದರೆ ಒಪ್ಪೊತ್ತಿಗೆ ಕೂಳಿಲ್ಲದವರಿಗೆಲ್ಲ ಆಜೀವಪರ್ಯಂತ ಊಟ ಸಿಗುತ್ತದೆ ಎಂದಾದರೆ ಯಾರು ಬೇಡ ಎನ್ನುತ್ತಾರೆ? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಹಿಂದೆ ದಂಡಪಿಂಡಗಳು ಧಾರಾವಾಹಿಯಲ್ಲಿ ಬರುತ್ತಿದ್ದ ಸಾಲುಗಳು:
ರಿಸರ್ವೇಷನ್ನು ಇವರ ಜಾತಿಗೆ ಇಲ್ಲ
ಲಂಚ ಕೊಡುವುದಕ್ಕೆ ದುಡ್ಡೇ ಇಲ್ಲ
ಇನ್ಫ್ಲುಯೆನ್ಸ್ ಮಾಡಲು ಯಾವ ಮಿನಿಸ್ತ್ಟ್ರೂ ಗೊತ್ತಿಲ್ಲಾ...

ಯಾರಿಗೆ ಇವಿಲ್ಲವೋ ಅವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ರಿಸರ್ವೇಷನ್ ಇದ್ದವರಿಗೆ ಕಾರ್ಯಾಂಗ ಸಹಕರಿಸುತ್ತದೆ. ಲಂಚ ಕೊಟ್ಟವರಿಗೆ ನ್ಯಾಯಾಂಗ ಸಹಕರಿಸುತ್ತದೆ. ಇನ್ಫ್ಲುಯೆನ್ಸ್ ಮಾಡುವವರಿಗೆ ಇಡೀ ಶಾಸಕಾಂಗವೇ ಸಹಕರಿಸುತ್ತದೆ. ಈ ಕೆಟ್ಟ ವ್ಯವಸ್ಥೆಯ ನಡುವೆ ಬಡವಾಗುವವನು? ಜನಸಾಮಾನ್ಯ... ಸ್ಟುಪಿಡ್ ಕಾಮನ್ ಮ್ಯಾನ್..

ಇವೆಲ್ಲದರ ಮಧ್ಯೆ (ಅಪ್ಪಿ ತಪ್ಪಿ ಸಿಕ್ಕಿ ಬಿದ್ದ) ಭಯೋತ್ಪಾದಕರ ಬಗ್ಗೆ ವಿಚಾರಣೆ ನಡೆಯುವ ಹೊತ್ತಿಗೆ ಸರಿಯಾಗಿ ಇಷ್ಟು ಹೊತ್ತು ಬೆಚ್ಚಗೆ ಮನೆಯಲ್ಲಿ ಕೂತು ಟಿವಿಯಲ್ಲಿ ವರದಿ ನೋಡುತ್ತಿದ್ದ ಗುಂಪೊಂದು ಹೊರಬಂದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ರಾಗ ತೆಗೆಯುತ್ತದೆ. "ಮಾನವ ಹಕ್ಕು"ಗಳ ಬಗ್ಗೆ ಇಷ್ಟೊಂದು ಪುಕಾರೆತ್ತುವ ಜನ "ಮಾನವ ಕರ್ತವ್ಯ"ಗಳ ಬಗ್ಗೆ ಯಾಕೆ ಚಕಾರವೆತ್ತುವುದಿಲ್ಲ? ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಇವರು ಓದಿಲ್ಲವೇ?

ಈ ಜನಸಾಮಾನ್ಯನ ಸ್ಟುಪಿಡಿಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ಅಮೆರಿಕಾದಲ್ಲಿ ೯/೧೧ ರ ನಂತರ ಯಾವ ಅಹಿತಕರ ಘಟನೆಯೂ ನಡೆದಿಲ್ಲ ಎಂದು ಅಲ್ಲಿನ ವ್ಯವಸ್ಥೆಯನ್ನು ಕೊಂಡಾಡುತ್ತಾನೆ. ಅದೇ ವ್ಯವಸ್ಥೆಯನ್ನು ಭಾರತದಲ್ಲಿ ಅಳವಡಿಸಲು ಹೋದರೆ ಅದನ್ನು ವಿರೋಧಿಸುತ್ತಾನೆ. ಸಿಂಗಾಪುರದಲ್ಲಿನ ಸ್ವಚ್ಛತೆಯನ್ನು ಕೊಂಡಾಡುವ ತಾನೇ ಎಲ್ಲೆಂದರಲ್ಲಿ ಉಗುಳುವುದು, ಕಸ ಹಾಕುವುದು ಮಾಡುತ್ತಾನೆ. ಜಪಾನಿನಲ್ಲಿ ಅಪಘಾತಗಳೇ ಆಗುವುದಿಲ್ಲ ಎಂದು ಹೇಳುವ ತಾನು ೨ ನಿಮಿಷ ಸಿಗ್ನಲ್ಲಿನಲ್ಲಿ ನಿಲ್ಲಲೂ ಪರದಾಡುತ್ತಾನೆ, ಫುಟ್ಪಾಥಿನ ಮೇಲೆ ಹೋಗುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ತಿಂಗಳು ಕಳೆದರೂ ಕಂಡ ಕಂಡಲ್ಲಿ ಹೊಗೆ ಬಿಡುತ್ತಾನೆ. ಮಾಡಬಾರದೆಂದು ಯಾವುದನ್ನು ಹೇಳಲಾಗಿದೆಯೋ ಅದನ್ನು ಹಠಕ್ಕೆ ಬಿದ್ದು ಮಾಡುತ್ತಾನೆ.

ರಾಮರಾಜ್ಯ ಎಂದು ಕನಸು ಕಾಣುವ ಎಲ್ಲರೂ ಅದೇ ರಾಮನಿಗಾಗಿ ಅಯೋಧ್ಯೆಯ ದೇಗುಲದಿಂದ ಕನ್ಯಾಕುಮಾರಿಯ ಸೇತುವೆಯವರೆಗೆ ಹೋರಾಡುತ್ತಾರೆ. ಭಾರತದ ನೆಲ ಜಲ ಉಪಯೋಗಿಸುವ ಮಂದಿಯೇ ಭಾರತವನ್ನು ವಿರೋಧಿಸಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಭಾರತದ ಹೆಸರಿಗೆ ಕಳಂಕ ತರುವ ಕೆಲಸಗಳು ದೇಶದೆಲ್ಲೆಡೆ ನಡೆಯುತ್ತಿದ್ದರೆ ಅವುಗಳ ಪರಿವೆಯಿಲ್ಲದ ಜನ ಶಾಸ್ತ್ರೀಯ ಕನ್ನಡ ಎನ್ನಬೇಕೋ ಬೇರೆ ಹೆಸರಿಡಬೇಕೋ ಎಂಬ ಮಹತ್ವದ ಚರ್ಚೆ ನಡೆಸುತ್ತಾರೆ. ವಿರೋಧ ಪಕ್ಷಗಳು ಸಂವಿಧಾನದಲ್ಲಿನ ವಾಚ್ ಡಾಗ್ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ನಾಯಿಯಂತೆ ಬೊಗಳುತ್ತವೆ.

ಒಟ್ಟಿನಲ್ಲಿ, (ಎಸ್.ಪಿ.ಭಾರ್ಗವಿ ಚಿತ್ರದ್ದಿರಬೇಕು) ಈ ದೇಶದ್ ಕಥೆ ಇಷ್ಟೇ ಕಣಮ್ಮೋ... ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ... ಸೋ.. ಇರೋ ಒಂದೈವತ್ತರವತ್ತೆಪ್ಪತ್ತೆಂಭತ್ತು ವರ್ಷ ... ಮಸ್ತ್ ಮಜಾ ಮಾಡಿ!

(ದಾಸರ ಕ್ಷಮೆ ಕೋರಿ...)

ಎಲ್ಲಾರು ಮಾಡುವುದು ವೋಟಿಗಾಗಿ
ಒಂದು ಸೀಟಿಗಾಗಿ, ಬಿ.ಡಿ.ಎ. ಸೈಟಿಗಾಗಿ ||

ಇಂದು ಭರವಸೆ ಕೊಟ್ಟು
ಬಂದು ನಾಳೆ ಅದಕ್ಕಾಗಿ
ಒಂದು ಪ್ಯಾಕೇಜ್ ಘೋಷಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಇನ್ನೈದು ವರ್ಷ ಬರಲಾರೆ
ನೆನ್ನುತ ಗಂಡಿಗೆ ಮದ್ಯ
ಹೆಣ್ಣಿಗ್ ಸೀರೆ ಹಂಚುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಸಾಲದ ಬಡ್ಡಿ ಬಾರದೆಂದು ಪ್ರತಿ
ಸಲ ನೋಡಿದ್ದರೂ ಮನ್ನಾ ಮಾಡಿ
ಸಾಲವನ್ನೇ ಬದುಕಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಶಾಂತಿಯಿಂದ ಇದ್ದ ಜನಕೆ
ಇಂತಿ ನಿಮ್ಮ ಮೀಸಲಾತಿ
ಅಂತ ಎತ್ತಿ ಕಟ್ಟುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಜಾತಿ ನೋಡಿದ ನಂತರವೇ
ಮತ ಹಾಕುವಂತೆ ಜನರ
ಮತಿಗೇಡಿಗಳಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಅಭ್ಯರ್ಥಿಯ ಹಿನ್ನೆಲೆ ಮರೆಸಿ
ಸಭ್ಯತೆಯ ತೋರಗೊಟ್ಟು
ಅಭ್ಯುದಯ ಮಾಡುವೆವೆನ್ನುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಭಯೋತ್ಪಾದಕನಾಗಿದ್ದರೂ
ಆಯೋಗ ರಚನೆ ಮಾಡಿ ಶಿಕ್ಷಾ
ಪ್ರಯೋಗ ಮುಂದೂಡುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ದೇಶದ್ಮಾನ ಹರಾಜಿಟ್ಟು ಸ್ವಂತ
ಕೋಶ ತುಂಬಿಸ್ಕೊಳ್ಳೊ
ಆಷಾಢಭೂತಿಗಳ ಕಿತ್ತೆಸೆಯಿರಿ
ದೇಶಕ್ಕಾಗಿ ನಿಮ್ಮುದ್ಧಾರಕ್ಕಾಗಿ ||