ಬುಧವಾರ, ಅಕ್ಟೋಬರ್ 14, 2009

ದೀಪಾವಳಿಗೆ... ಅದಕ್ಕೂ ಮುಂಚೆ...

"ದೀಪ್ ದೀಪ್ ದೀವಳಿಗ್ಯೋ... ಹಬ್ಬಕ್ಕೊಂದ್ ಹೋಳಿಗ್ಯೋ..." ಎಂದು ಕೂಗುತ್ತ ಊರ ಮುಂದೆ ಸಾಗಬೇಕು. ಹಚ್ಚಿಕೊಂಡು ತಂದ ಆರುತ್ತಿರುವ ಬೆಂಕಿಯ ಕೋಲುಗಳನ್ನು ರಸ್ತೆಬದಿಯಲ್ಲಿಯೋ, ಬೇಲಿ ಗೂಟಗಳಿಗೋ ಸಿಕ್ಕಿಸಬೇಕು. ಕೋಲು ಆರುವಷ್ಟರಲ್ಲಿ ಇನ್ನೊಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಎಲ್ಲ ಕೋಲುಗಳೂ ಖಾಲಿಯಾಗುವವರೆಗೂ ಹೀಗೇ ಕೂಗುತ್ತ ಸಾಗಬೇಕು. ಯಾರು ಜೋರಾಗಿ ಕೂಗುತ್ತಾರೋ ಅವರ ಹಬ್ಬದ ಸಡಗರ ಹೆಚ್ಚು ಎಂಬ ಭಾವನೆ. ಅಲ್ಲಿಗೆ ದೀಪಾವಳಿ ಮುಗಿಯುತ್ತದೆ. ಅದಕ್ಕೂ ಮುಂಚೆ...

ಅಡಿಕೆಮರದ ದಬ್ಬೆಯಾಗಲಿ ಅಥವಾ ನೇರವಾದ ಮರದ ಟೊಂಗೆಗಳಿಂದಾಗಲಿ ಸುಮಾರು ಎರಡರಿಂದ ಮೂರಡಿ ಉದ್ದದ ಕೋಲುಗಳನ್ನು ಮಾಡಿ ತುದಿಗೆ ಬಟ್ಟೆ ಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿಕೊಂಡು ಸಿದ್ಧಪಡಿಸಿಕೊಳ್ಳಬೇಕು. ದೀಪಾವಳಿಯ ಪೂಜೆಯ ಕಡೆಯ ಅಂಗವಾಗಿ ಮನೆದೇವರಿಗೆ ಮಹಾ ಮಂಗಳಾರತಿ ಮಾಡಿ ಅದೇ ದೀಪದಿಂದ ಒಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಈ ವರ್ಷದ ಹಬ್ಬವನ್ನು ಬೀಳ್ಕೊಟ್ಟು ಕಳುಹಿಸಿ ಬರಲು ಹೊರಡಬೇಕು. ಅದಕ್ಕೂ ಮುಂಚೆ...

ಬೆಳಿಗ್ಗೆ ಎದ್ದು ಕೊಟ್ಟಿಗೆಯನ್ನು ತೊಳೆದು ಶುಭ್ರಗೊಳಿಸಿ, ಸಿಂಗರಿಸಿ, ದನ-ಕರುಗಳ ಮೈ ತೊಳೆಯಬೇಕು. ಒಂದು ಲೋಟಕ್ಕೆ ಮಧ್ಯದಲ್ಲಿ ಒಂದು ದಾರ ಕಟ್ಟಿ ಕೆಂಪು-ಬಿಳಿ ಬಣ್ಣದಲ್ಲಿ ಅದ್ದಿ ಗೋವುಗಳ ಮೇಲೆ ಗೋಪಾದಗಳನ್ನು ಮೂಡಿಸಬೇಕು. ದೊಡ್ಡ ಹಸುಗಳ ಕೋಡುಗಳಿಗೆ ಬಣ್ಣ ಬಳಿಯಬೇಕು. ಕರುಗಳ ಕೊರಳಿಗೆ ಗಂಟೆ ಕಟ್ಟಿ ಸಂಭ್ರಮಿಸಬೇಕು. ಗೋವಿನ ಉಪಕಾರಗಳನ್ನು ಸ್ಮರಿಸುತ್ತ ಗೋಪೂಜೆ ಮಾಡಬೇಕು. ಗೋಗ್ರಾಸ ನೀಡಬೇಕು. ಪೂಜೆಯಾದ ಮೇಲೆ ಗೋವುಗಳನ್ನು ಮೇಯಲು ಬಿಟ್ಟು ಜಾಗಟೆ, ಗಂಟೆ ಮೊದಲಾದವುಗಳನ್ನು ಬಾರಿಸಬೇಕು. ಆ ಸದ್ದಿಗೆ ಬೆದರಿ ಓಡುವ ಅವುಗಳ ಜೊತೆ ನಾನೂ ಓಡಬೇಕು. ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಕೂತು "ರೇಸ್"ನಲ್ಲಿ ಭಾಗವಹಿಸಬೇಕು.

"ಬಲ್ಲೇಳು ಬಲಿವೀಂದ್ರನು ರಾಯ ಬಂದಾನು ತನ್ನ ರಾಜ್ಯಕೆ..." ಎಂದು ಜ್ಯೋತಿ ಹಿಡಿದು ನಡುರಾತ್ರಿಯಲ್ಲಿ ಹಾಡುತ್ತ ಮನೆ-ಮನೆಗೆ ಬರುವ ಹಬ್ಬಾಡುವವರನ್ನು ಸ್ವಾಗತಿಸಬೇಕು. "ಜಾನ್ಪೂರ್ಣಂ ಜಗಂಜ್ಯೋತಿ... ನಿರ್ಮಲವಾದ ಮನವೇ ಕರ್ಪೂರದಾರತಿ..." ಎಂದು ಅವರು ಹಾಡುವ ಅರ್ಥಪೂರ್ಣ ಪದ್ಯಗಳನ್ನು ಗಮನವಿಟ್ಟು ಆಲಿಸಬೇಕು. ಅವರು ತಂದ ಜ್ಯೋತಿಯಿಂದ ನಮ್ಮ ಮನೆಯ ದೀಪವನ್ನೂ ಬೆಳಗಿಕೊಳ್ಳಬೇಕು. ಅವರ ಜ್ಯೋತಿಗೆ ಎಣ್ಣೆಯನ್ನು ಹಾಕಬೇಕು. ಅವರಿಗೆ ಯಥೋಚಿತ ಅಡಿಕೆ-ಅಕ್ಕಿ-ದುಡ್ಡನ್ನು ದಾನ ಮಾಡಬೇಕು. ಅದಕ್ಕೂ ಮುಂಚೆ...

ನರಕ ಚತುರ್ದಶಿಯಂದು ಬೆಳಿಗ್ಗೆ ಬೇಗ ಎದ್ದು ಮೈ, ಕೈ, ಕಿವಿಗೆಲ್ಲ ಎಣ್ಣೆ ಹಾಕಿಕೊಳ್ಳಬೇಕು. ಹಿಂದಿನ ದಿನ ರಾತ್ರಿ ತುಂಬಿಸಿಟ್ಟ ಬಚ್ಚಲ ಮನೆಯ ಹಂಡೆಯ ಬಿಸಿ ಬಿಸಿಯಾದ ನೀರಿನಲ್ಲಿ ಹಚ್ಚಿಕೊಂಡಿದ್ದ ಎಣ್ಣೆಯೆಲ್ಲ ಹೋಗುವಂತೆ ಸ್ನಾನ ಮಾಡಬೇಕು. ದೇವರ ಮನೆ, ವಾಸ್ತು ಕಂಬ, ವಾಸ್ತು ಬಾಗಿಲು, ಒರಳು, ಒನಕೆ, ಒಲೆ, ಅಕ್ಕಿ ಮರಿಗೆ, ಬಾವಿ, ಬಚ್ಚಲು, ತುಳಸಿ, ದುಡ್ಡಿನ ಪೆಟ್ಟಿಗೆ - ಹೀಗೆ ಮುಖ್ಯವಾದ ಕಡೆಗಳಲ್ಲಿ ಎಲೆ, ಅಡಿಕೆ, ಹಿಂಗಾರ, ಪಚ್ಚೆ ತೆನೆ ಇಡಬೇಕು. ಎಲ್ಲ ಕಡೆಯಲ್ಲಿಯೂ ಪೂಜೆ ಮಾಡಿ, ಆರತಿ ಮಾಡಿ, ಸುಖ-ಸಮೃದ್ಧಿಗಳು ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಬಲೀಂದ್ರನನ್ನು ಪೂಜಿಸಬೇಕು. ಅದಕ್ಕೂ ಮುಂಚೆ...

"ದೊಡ್ಹಬ್ಬ" ದೀಪಾವಳಿಗೆ ಊರಿಗೆ ಹೋಗಬೇಕು! ಅದಕ್ಕೂ ಮುಂಚೆ... ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

ಗುರುವಾರ, ಅಕ್ಟೋಬರ್ 1, 2009

ಮನಸಿನ ಕನಸು

ಬಾನಲಿ ಸುಂದರ ಚಂದಿರನೋಟ
ನಿಲ್ಲದ ಕಾಲವ ಸೂಚಿಸಿದೆ
ಮೈಮರೆಸುವ ಈ ನಿನ್ನಯ ನೋಟ
ಚಂದಿರನನ್ನೂ ನಾಚಿಸಿದೆ

ಗುಡುಗಿನ ಜೊತೆಗೆ ಮಿಂಚಿನ ಆಟ
ಭೂಮಿಗೆ ಮಳೆಯನು ಸುರಿಸುತಿದೆ
ಮಿಂಚಿನ ನೋಟದ ನಿನ್ನೊಡನಾಟ
ನನ್ನಲಿ ಪ್ರೀತಿಯ ಹರಿಸುತಿದೆ

ನಡೆಸುವೆ ನಾನು ಬಲು ಹುಡುಕಾಟ
ಮರೆಯಾದರೆ ನೀನೊಂದೊಪ್ಪೊತ್ತು
ಹಗಲಿರುಳೆನ್ನದೆ ನಿನ್ನದೆ ಕಾಟ
ಕಾರಣ ವಯಸ್ಸಿದು ಇಪ್ಪತ್ತು!

ಒಲವಿನ ದಾಹ, ಸ್ನೇಹದ ಕೂಟ
ಸೋತಿತು ಹೇಗೋ ಈ ಮನಸು
ಬಾರದು ನಿದ್ದೆ, ರುಚಿಸದು ಊಟ
ಮನದಲಿ ಬರಿ ನಿನದೇ ಕನಸು