ಗುರುವಾರ, ಸೆಪ್ಟೆಂಬರ್ 30, 2010

ತುಮುಲ

ದಟ್ಟಡವಿಯ ಪಯಣದಲಿ ಹೊತ್ತು ಮುಗಿಯುವ ಮುನ್ನ
ನಿಶೆಯು ಆವರಿಸೆ ನೀ ಅಳುಕದಿರು ಮನವೇ...

ಮರುಭೂಮಿ ಮಡಿಲಲ್ಲಿ ಬಾಯಾರಿ ಅಲೆವಾಗ
ಮರಳ ಮರೀಚಿಕೆಯ ಕಂಡು ಸೋಲದಿರು ಮನವೇ...

ಭರವಸೆಯ ಬೆನ್ನತ್ತಿ ಕನಸ ಕುದುರೆಯನೇರೆ
ಸ್ವಪ್ನ ಗೋಪುರವ ಕಂಡು ಮರುಗದಿರು ಮನವೇ...

ಸಂಸಾರ ಸಾಗರದಿ ಅಂಬಿಗನು ಮೈಮರೆಯೆ
ಅಲೆಯ ಸೆಳೆತಕ್ಕೆ ನೀ ಅಂಜದಿರು ಮನವೇ...

ಕತ್ತಲೆಯ ಜಗದಲ್ಲಿ ಅಜ್ಞಾನ ಕದನದಲಿ
ನೆರಳೂ ಜೊತೆ ಬಿಡಲು ನೀ ಚಿಂತಿಸದಿರು ಮನವೇ...

ಬದುಕೆಂಬ ಆಟದಲಿ ಸೋಲು ಗೆಲುವುಗಳ
ಮೀರಿ ತಟಸ್ಥ ಭಾವದಿ ಸ್ಥಿತಪ್ರಜ್ಞನಾಗು ಮನವೇ...