ಶುಕ್ರವಾರ, ಆಗಸ್ಟ್ 31, 2007

ಮದುವೆಯ ಈ ಬಂಧ!

ಶಿರಸಿಯ ಲಿಂಗದಕೋಣ ಕಲ್ಯಾಣಮಂಟಪ ಸುಸಜ್ಜಿತವಾಗಿದ್ದು ಸುತ್ತಲಿನ ಹತ್ತೂರಿಗೆ ಹೆಸರುವಾಸಿಯಾಗಿದೆ. ಶಿರಸಿ-ಸಿದ್ಧಾಪುರದ ಸುತ್ತಮುತ್ತಲಿನ ಬಹುತೇಕ ಮದುವೆಗಳು ಅಲ್ಲಿ ನಡೆಯುತ್ತವೆ. ಅಲ್ಲಿ ಎರಡು ಸಭಾಂಗಣಗಳಿದ್ದು ಮೇಲೆ ಹಾಗೂ ಕೆಳಗೆ ಪ್ರತ್ಯೇಕ ಮದುವೆಗಳು ನಡೆಯುವುದು ಸರ್ವೇಸಾಮಾನ್ಯ. ಇನ್ನು ಕೆಲವು ಬಾರಿ, ಮೇಲೆ ಯಾವುದೇ ಮದುವೆಗಳಿಲ್ಲದಿದ್ದರೆ ಕೆಳಗೆ ಮದುವೆ ನಡೆಸುವುದು, ಸಾಂಪ್ರದಾಯಿಕ ಪದ್ಧತಿಯಂತೆ ನೆಲದ ಊಟ ಹಾಕುವುದು, ಮೇಲೆ ಬಫೇ ಸಿಸ್ಟಂ ನಲ್ಲಿ ಊಟ ಹಾಕುವುದು ಕೂಡ ಹೊಸದೇನಲ್ಲ. ಬಂದವರಿಗೆ ಗಡಿಬಿಡಿಯಿದ್ದರೆ (ಇಲ್ಲದಿದ್ದರೂ) ಬೇಗ ಉಂಡು ಹೋಗಲು ಇದರಿಂದ ಸಹಕಾರಿಯಾಗುತ್ತದೆಂಬುದನ್ನು ಬಾಯಿ ಬಿಟ್ಟೇನೂ ಹೇಳಬೇಕಿಲ್ಲ.

ಸಮಯಕ್ಕೆ ಸರಿಯಾಗಿ ಬರುವುದು ಶಿರಸಿ ಕಡೆಯ ಒಂದು ಪದ್ಧತಿ. ಹಾಗೆಂದು ಇವರೇನೂ ಮಹಾ ಸಮಯಪಾಲಕರೆಂದುಕೊಳ್ಳಬೇಡಿ. ನಾನು ಹೇಳಿದ ಪದ್ಧತಿ ಊಟದ ಸಮಯಕ್ಕೆ ಸರಿಯಾಗಿ ಬರುವುದು. ಮದುವೆ ಬೆಳಿಗ್ಗೆ ೯-೩೦ ಕ್ಕೇ ಇರಲಿ, ೧೨-೦೦ ಘಂಟೆಗೇ ಇರಲಿ, ಹೆಚ್ಚಿನ ಮಹಾಪುರುಷರು ಬರುವುದು ೧೨-೩೦ ರ ನಂತರವೇ. ೧೨-೧೫ ರವರೆಗೆ ಖಾಲಿ ಹೊಡೆಯುವ ಸಭಾಂಗಣ ೧ ಘಂಟೆ ಸುಮಾರಿಗೆ ಜನರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ೨-೧೫ ಕ್ಕೆ ನೋಡಿದರೆ ಮತ್ತೆ ೧೨-೧೫ ರ ಸ್ಥಿತಿ! ಗಂಡು-ಹೆಣ್ಣಿನ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಇದು ಇಂದಿನ ವೇಗದ ಬದುಕಿನ ಫಲವೋ, ಅಥವಾ ಶಿಥಿಲವಾಗುತ್ತಿರುವ ಮಾನವ ಸಂಬಂಧಗಳ ಪ್ರತೀಕವೋ ತಿಳಿಯದು.

ಹೀಗಿರುವಾಗ ಭಾನುವಾರ ಒಂದು ಮದುವೆಗೆ ಹೋಗಿದ್ದೆ. ಬಹಳ ಬಂಧು-ಮಿತ್ರರಿದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದುವೆಗೆ ಬಂದಿದ್ದರು. ಮದುವೆ ನಡೆಯಿತು. ಈಗ ಊಟದ ಸಮಯ. ಮೇಲಿನ ಸಭಾಂಗಣದಲ್ಲಿ ಯಾವುದೇ ಮದುವೆಯಿರದಿದ್ದರೂ ಬಫೇ ಇಟ್ಟಿರಲಿಲ್ಲ. ಇದನ್ನು ಮೊದಲೇ ಅರಿತಿದ್ದ ಕೆಲವರು ೧೨-೩೦ ಕ್ಕೆ ಪ್ರಾರಂಭವಾಗುವ ಸಂತರ್ಪಣೆಗೆ ೧೨ ಘಂಟೆಗೇ ಹೋಗಿ ಕುಳಿತಿದ್ದರು. ಹಾಗಾಗಿ ಮೊದಲ ಪಂಕ್ತಿಗೆ ಊಟ ಮಾಡಬೇಕೆಂದು ೧೨-೨೫ ಕ್ಕೆ ಎದ್ದು ಸಿದ್ಧವಾದವರಿಗೆ ಜಾಗವೇ ಇಲ್ಲದಂತಾಗಿ ನಂತರದ ಬಾರಿಗೆ ಕಾಯುವಂತಾಯಿತು. ಇನ್ನು ಎರಡನೇ ಪಂಕ್ತಿಗೆ ಹೋಗಲು ಸಾಲು ಬೇರೆ!! ೫೦ ಜನರ ಬಸ್ನಲ್ಲಿ ಸೀಟು ಹಿಡಿಯುವುದಕ್ಕಿಂತ ೨೦೦ ಜನರು ಹಿಡಿಸುವ ಈ ಭೋಜನಶಾಲೆಯಲ್ಲಿ ಜಾಗ ಹಿಡಿಯುವುದೇ ಕಷ್ಟಕರವಾಗಿತ್ತು. ಇದರಿಂದ ನಿಧಾನವಾಗಿ ಬಂದವರ ಗೊಣಗಾಟ ಆರಂಭವಾಯಿತು. "ಬಫೇ ಇಡಬೇಕಾಗಿತ್ತು. ಇಲ್ಲಿ ಇಷ್ಟೊಂದು ರಶ್ ಆಗ್ತಿರಲಿಲ್ಲ", "ಬಫೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಮನೆಯಲ್ಲಿರಬಹುದಾಗಿತ್ತು" ಎಂಬ ಮಾತುಗಳು ಕೇಳಿ ಬಂದವು. ಆದರೆ ಕಾಯದೆ ವಿಧಿಯಿರಲಿಲ್ಲ! ತಮ್ಮ ಮನೆಯ ಜನರೊಂದಿಗೆ ಒಟ್ಟಿಗೆ ಕುಳಿತು ಉಣ್ಣುವ ಅವಕಾಶ ಬಹುಶಃ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಮನೆಯವರೆಲ್ಲರಿಗೂ ಊಟವಾಗದೆ ಮನೆಗೆ ಹೋಗುವಂತಿಲ್ಲವಲ್ಲ! ಉಂಡಾದವರು ಕುಟುಂಬದವರಿಗಾಗಿ, ಉಳಿದವರು ಊಟಕ್ಕಾಗಿ ಕಾಯುವುದೇ ಕೆಲಸವಾಯಿತು. ಬಂದ ಸುಮಾರು ೮೦೦ ಮಂದಿಗೆ ಊಟವಾಗುವ ಹೊತ್ತಿಗೆ ಸಮಯ ೩-೩೦ ಆಗಿತ್ತು. ಬ್ರಾಹ್ಮಣೋ ಬಹುಜನಪ್ರಿಯಃ ಎಂಬ ಉಕ್ತಿ ಬ್ರಾಹ್ಮಣೋ ಭೋಜನಪ್ರಿಯಃ ಎಂದು ಏಕೆ ಬದಲಾವಣೆಗೊಂಡಿದೆ ಎಂಬುದು ಅರಿವಿಗೆ ಬಂದಿತ್ತು.

ಬಂದವರೆಲ್ಲ ಮಾತನಾಡುತ್ತ ಕುಳಿತಿದ್ದಾಗ ಕೆಲವು ಹೆಂಗಸರು ಹೀಗೆ ಮಾತಾಡುತ್ತಿದ್ದುದು ಕೇಳಿಬಂತು: "ಹಿಂದೆಲ್ಲ ೩-೪ ದಿನ ಮೊದಲೇ ಬಂದು ಎಲ್ಲ ತಯಾರಿ ನಡೆಸುತ್ತಿದ್ದೆವು. ಒಟ್ಟಿಗೆ ಬೆರೆತು ಮಾತನಾಡಲು ಸಮಯವಿರುತ್ತಿತ್ತು. ಈಗ ಕಲ್ಯಾಣಮಂಟಪದಲ್ಲಿ ಮದುವೆ ಆಗಿರೋದ್ರಿಂದ ಆ ಅವಕಾಶವೂ ಇಲ್ಲ. ಇವತ್ತು ಬಫೇ ಇಲ್ಲದೇ ಇದ್ದಿದ್ದಕ್ಕೆ ಎಲ್ಲರೂ ಸಿಕ್ಕು ಮಾತನಾಡುವಂತಾಯಿತು". ಯೋಚಿಸಿ ನೋಡಿ! ಅಕ್ಷರಶಃ ಸತ್ಯವಲ್ಲವೆ? ಮನೆಯನ್ನೆಲ್ಲ ಸುಣ್ಣ-ಬಣ್ಣ ಮಾಡಿ, ಅಂಗಳಕ್ಕೆಲ್ಲ ಚಪ್ಪರ ಹಾಕಿ, ಊರಿನ ಜನರೆಲ್ಲ ಒಂದಾಗಿ ಸೇರಿ ನಡೆಸುತ್ತಿದ್ದ ಅಂದಿನ ಕಾಲದ ಮದುವೆಯ ಸೊಬಗು ಮತ್ತೆ ನೋಡಲು ಸಿಕ್ಕೀತೇ? ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಆಗಬೇಕಾದ ವಿವಾಹ ಇಂದಿನ ಸಿನಿಮಾಗಳಲ್ಲಿ ತೋರಿಸುವಂತೆ ಹಾರ ಬದಲಾಯಿಸುವ ಶಾಸ್ತ್ರವಾಗುವ ಕಾಲ ಬರದಿದ್ದರೆ ಸಾಕು...

ಬುಧವಾರ, ಆಗಸ್ಟ್ 15, 2007

ನನ್ನ ದೇಶ, ನನ್ನ ಜನ

ಆಗಸ್ಟ್ ೧೫. ಸ್ವಾತಂತ್ರ್ಯ ದಿನಾಚರಣೆ. ಕೆಲವೇ ವರ್ಷಗಳ ಹಿಂದಿನ ಮಾತು. ಸಂಭ್ರಮದಿಂದ ನಮ್ಮದೇ ಮನೆಯ ಕಾರ್ಯಕ್ರಮವೇನೋ ಎಂಬಂತೆ ಬೆಳಿಗ್ಗೆ ಎದ್ದು ಧ್ವಜಾರೋಹಣಕ್ಕೆ ಸಿದ್ಧಪಡಿಸಲು ಹೋಗುತ್ತಿದ್ದೆವು. ತಿಂಡಿ ತಿಂದಿರದಿದ್ದರೂ ಶಾಲೆಯಲ್ಲಿ ಕೊಡುತ್ತಿದ್ದ ಒಂದು ನಿಂಬೆ ಹುಳಿ ಚಾಕಲೇಟ್ ತಿಂದು ಮಧ್ಯಾಹ್ನದವರೆಗೆ ನಗರದ ಮುಖ್ಯ ಮೈದಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಮುಗಿಸಿಕೊಂಡೇ ಮನೆಗೆ ಬರುತ್ತಿದ್ದೆವು. "ಆಹಾ! ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ!" ಎಂದು ಇತಿಹಾಸವನ್ನೂ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರನ್ನೂ ನೆನಪಿಸಿಕೊಳ್ಳುತ್ತಿದ್ದೆವು. ಈಗ? "ವಾವ್! ಒನ್ ಡೇ ಫುಲ್ ರೆಸ್ಟ್ ತಗೋಬಹುದು" ಎನ್ನುವ ಭಾವನೆ. ಧ್ವಜಾರೋಹಣಕ್ಕೆ ಹೋಗುವುದಿರಲಿ, ದೂರದರ್ಶದಲ್ಲಿ ತೋರಿಸುವ ಪರೇಡ್ ನೋಡಲೂ ನಮಗೆ ಪುರಸೊತ್ತಿಲ್ಲ.

೩ನೇ ತರಗತಿಯಲ್ಲಿದ್ದಾಗ ಓದಿದ ಒಂದು ಪದ್ಯದ ಪಲ್ಲವಿ ನೆನಪಿಗೆ ಬರುತ್ತಿದೆ:
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ...
ಆಗ ನಾವಿನ್ನೂ ಚಿಕ್ಕವರು. ಇದು ಕೇವಲ ಕಂಠಪಾಠಕ್ಕಾಗಿಟ್ಟ ಒಂದು ಪದ್ಯವಾಗಿತ್ತು. ಆದರೆ ಈಗ ಅದರ ಅರ್ಥ ನೋಡಿದಾಗ ನಿಜಕ್ಕೂ ಕವಿಯ ಬಗ್ಗೆ ಗೌರವ ಉಕ್ಕುತ್ತದೆ. ಈ ದೇಶ ಏನೇನನ್ನು ಕೊಟ್ಟಿಲ್ಲ ನಮಗೆ: ಇರಲು ನೆಲ, ತಿನ್ನಲು ಅನ್ನ, ಉಸಿರಾಡಲು ಗಾಳಿ, ಕುಡಿಯಲು ನೀರು. ಅವನ್ನು ಎಲ್ಲ ದೇಶಗಳೂ ಕೊಡುತ್ತವೆ, ನಿಜ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ಭಾರತ ನಿಲ್ಲುವುದು ಇದರ ಅನೇಕತೆಯಲ್ಲಿನ ಐಕ್ಯತೆಯಿಂದ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಎಲ್ಲ ಜಾತಿ-ಮತದ ಜನರೊಂದಿಗೆ ಸಹಬಾಳ್ವೆ ನಡಸುವ, ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಇನ್ನಾವ ರಾಷ್ಟ್ರದವರಿಗಿದೆ? ಮರುಭೂಮಿ, ಹಿಮಾಚ್ಛಾದಿತ ಪ್ರದೇಶ, ಕರಾವಳಿ, ಜಲಪಾತ, ಪರ್ವತಶ್ರೇಣಿಗಳೆಲ್ಲವನ್ನೂ ಒಂದೆಡೆ ನೋಡಿ ಪ್ರಕೃತಿಯ ಸೊಬಗನ್ನು ಅನುಭವಿಸುವ ಅದೃಷ್ಟ ಇನ್ನಾವ ನಾಡಿನಲ್ಲಿ ಸಿಕ್ಕೀತು?

ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾವು. ೩೫ ಕೋಟಿ ಇದ್ದ ಜನಸಂಖ್ಯೆ ೧೧೫ ಕೋಟಿ ಆಗಿದೆ. ೧.೨೫ ಡಾಲರ್ ಇದ್ದ ರೂಪಾಯಿ ಬೆಲೆ ೦.೦೨೫ ಡಾಲರ್‍ಗೆ ಇಳಿದಿದೆ. ಆದರೆ ಇವಾವುದರ ಪರಿವೆಯೂ ಜನರಿಗಿದ್ದಂತಿಲ್ಲ. ಇಂದಿನ ಮಾಧ್ಯಮಗಳು ಬಿಂಬಿಸುತ್ತಿಲ್ಲ ಕೂಡ. ದುಡ್ಡಿಗಾಗಿ ದೇಶ ಮಾರಲು ಸಿದ್ಧವಿರುವವರು ನಮ್ಮ ರಾಜಕೀಯ ನಾಯಕರು! ದುಡ್ಡಿಗಾಗಿ ತಮ್ಮನ್ನೇ ಮಾರಿಕೊಂಡಿರುವ ಸಿನಿಮಾ ನಟರು, ಕ್ರಿಕೆಟಿಗರು ನಮ್ಮ ಆದರ್ಶವ್ಯಕ್ತಿಗಳು!! ಲಗೇ ರಹೋ ಮುನ್ನಾ ಭಾಯ್ ಚಿತ್ರದಲ್ಲಿನ ಗಾಂಧೀಜಿ ಹೇಳುವಂತೆ, ದೇಶವೇನೋ ನಮ್ಮದಾಗಿದೆ, ಆದರೆ ಜನ ಪರಕೀಯರಾಗಿದ್ದಾರೆ. ನನ್ನ ತಂದೆ ಆಗಾಗ ಹೇಳುವ ಒಂದು ಸಾಲು ಹೀಗಿದೆ:
ದೇಖ್ ತೇರಾ ಸಂಸಾರ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ್...
ಕಿತನಾ ಬದಲ್ ಗಯಾ ಇನ್‍ಸಾನ್...
ನಿನ್ನೆ ಪೇಪರ್‍ನಲ್ಲಿ ಓದಿದ ಒಂದು ಸುದ್ದಿ: "ಅಕ್ರಮವಾಗಿ ಹರಿಸಲಾಗಿದ್ದ ವಿದ್ಯುತ್ ತಂತಿ ತುಳಿದು ತೆಂಗಿನಕಾಯಿ ಕದಿಯಲು ಹೋಗಿದ್ದ ಇಬ್ಬರ ಸಾವು".
ನೀವೇ ಹೇಳಿ, ನಾವೆಲ್ಲಿಗೆ ಬಂದು ನಿಂತಿದ್ದೇವೆ? ಎತ್ತ ಸಾಗುತ್ತಿದ್ದೇವೆ?

ಬುಧವಾರ, ಆಗಸ್ಟ್ 8, 2007

ಸವಿ ಸವಿ ನೆನಪು!!

ನೀವು ಏನೇ ಹೇಳಿ ಈ ಸಂಗೀತದಲ್ಲಿ ಒಂದು ರೀತಿ ಶಕ್ತಿ ಇದೆ ಕಣ್ರಿ! ನಾನಂತೂ ಹಾಡುಗಳನ್ನು ಸದಾ ಕೇಳುತ್ತಲೇ ಇರುತ್ತೇನೆ. ನನಗೆ ತುಂಬಾ ಇಷ್ಟ ಆಗುವ ಹಿನ್ನಲೆ ಗಾಯಕರೆಂದರೆ ಎಸ್.ಪಿ.ಬಿ., ಕಿಶೋರ್ ಕುಮಾರ್, ಪಿ.ಬಿ.ಎಸ್., ಸೋನು ನಿಗಮ್ ಹಾಗೂ ಶ್ರೇಯಾ ಗೋಶಾಲ್. ಸಂಗೀತವು ಮನಸ್ಸಿಗೆ ಒಂದು ರೀತಿಯಾದ ಆಹ್ಲಾದ ನೀಡುತ್ತದೆ!
ಹೀಗೇ ಹಾಡು ಕೇಳುತ್ತಿರುವ ಸಮಯದಲ್ಲಿ ಸುದೀಪ್ ನಟಿಸಿರುವಂತಹ 'ಮೈ ಆಟೊಗ್ರಾಫ್' ಚಿತ್ರದ ಹಾಡು ಮನಸ್ಸಿಗೆ ತುಂಬಾ ಹಿಡಿಸಿತು. ಈ ಹಾಡು ಕೇಳುತಿದ್ದಂತೆ ನನ್ನ ಬಾಲ್ಯ ನೆನಪಾಯಿತು. ಈ ಹಾಡು ತುಂಬಾ ಅರ್ಥ ಪೂರ್ಣವಾಗಿದೆ.
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲ್ಲಿ ಬಚ್ಚಿಕೊಂಡಿರಿವ
ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಎದೆಯಾಳದಲ್ಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ
ಯಾವುದೊ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲೀ... ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು ...
ಮೊದ ಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದ ಮೊದಲ್ ಕದ್ದ ಜಾತ್ರೆಯ ವಾಚು
ಮೊದ ಮೊದಲ್ ಸೇದಿದ ಗಣೇಶ ಬೀಡಿ
ಮೊದ ಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದ ಮೊದಲ್ ಕಂಡ ಟೂರಿಂಗ್ ಸಿನಿಮಾ
ಮೊದ ಮೊದಲ್ ಗೆದ್ದ ಕಬಡ್ಡಿ ಆಟ
ಮೊದ ಮೊದಲ್ ಇದ್ದ ಹಳ್ಳಿಯ ಗರಿ ಮನೆ
ಮೊದ ಮೊದಲ್ ತಿಂದ ಕೈ ತುತ್ತೂಟ
ಮೊದ ಮೊದಲ್ ಅಡಿದ ಚುಕುಬುಕು ಪಯಣ
ಮೊದ ಮೊದಲ್ ಅಳಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಮೊದ ಮೊದಲ್ ಕಲಿತ ಅರೆ ಬರೆ ಈಜು
ಮೊದ ಮೊದಲ್ ಕೊಂಡ ಹೀರೋ ಸೈಕಲ್
ಮೊದ ಮೊದಲ್ ಕಲಿಸಿದ ಕಮಲಾ ಟೀಚರ್
ಮೊದ ಮೊದಲ್ ತಿಂದ ಅಪ್ಪನ ಏಟು
ಮೊದ ಮೊದಲ್ ಅದ ಮೊಣಕೈ ಗಾಯ
ಮೊದ ಮೊದಲ್ ತೆಗೆಸಿದ ಕಲರ್ ಕಲರ್ ಫೊಟೋ
ಮೊದ ಮೊದಲಾಗಿ ಚಿಗುರಿದ ಮೀಸೆ
ಮೊದ ಮೊದಲಾಗಿ ಮೆಚ್ಚಿದ ಹೃದಯ
ಮೊದ ಮೊದಲ್ ಬರೆದ ಪ್ರೇಮದ ಪತ್ರ
ಮೊದ ಮೊದಲಾಗಿ ಪಡೆದ ಮುತ್ತು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಅನುಲೇಖ: ಬಾಲ್ಯದ ನೆನಪುಗಳೇ ಹಾಗೆ. ನಮ್ಮ ಮನದಾಳದಲ್ಲಿ ಅಚ್ಚಳಿಯದೆ ಹಾಗೆ ಉಳಿದು ಬಿಡುತ್ತವೆ. ಆ ಬಾಲ್ಯ ಎಷ್ಟೊಂದು ಸುಂದರ ಅಲ್ವಾ?

ಭಾನುವಾರ, ಆಗಸ್ಟ್ 5, 2007

ಕನಸುಗಳು!

ನೀವೇ ಹೇಳಿ, ಕನಸನ್ನು ಯಾರು ಕಾಣುವುದಿಲ್ಲಾ ಅಂತ?

ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನಷ್ಯನಿಗೂ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಕನಸನ್ನು ಸಹ ಕಂಡಿರುತ್ತಾನೆ. ನಮ್ಮ ಪೂರ್ವ ರಾಷ್ಟ್ರಪತಿಗಳಾದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಹೇಳುವಂತೆ, "ನಾವು ಜೀವನದಲ್ಲಿ ಏನ್ನನ್ನಾದರೂ ಸಾಧಿಸಬೇಕಾದರೆ, ಮೊದಲು ಅದರ ಬಗ್ಗೆ ಕನಸು ಕಾಣುವುದು ಮುಖ್ಯ!" ಅದರೆ ನಮ್ಮಲಿರುವ ದುರಂತ ಎಂಥದು ನೀವೇ ನೋಡಿ, ನಾವು ಕನಸನ್ನೇನೋ ಶ್ರದ್ಧೆಯಿಂದ ಕಾಣುತ್ತೇವೆ, ಆದರೆ ಅದನ್ನು ಸಾಕಾರಗೊಳಿಸುವ ಇಚ್ಛಾ ಶಕ್ತಿ ನಮ್ಮಲ್ಲಿ ಎಷ್ಟು ಜನರಲ್ಲಿರುತ್ತದೆ? ಡಾ. ಕಲಾಂರವರೇ ಹೇಳುವಂತೆ, "ನೀವು ಕಾಣುವ ಕನಸನ್ನು ನಿಜವಾಗಿಸಬೇಕಾದರೆ, ಬೇರೆಯವರು ಕನಸು ಕಾಣುವ ಸಮಯದಲ್ಲಿ ನೀವು ಎಚ್ಚರವಾಗಿರುವುದು ಬಹಳ ಮುಖ್ಯ!" ಅಂದರೆ ನಾವು ಕಾಣುವ ಕನಸನ್ನು ಸಾಕರಗೊಳಿಸಲು ನಾವು ಹಗಲು ರಾತ್ರಿ ಎನ್ನದೆ ಸತತ ಪರಿಶ್ರಮ ಪಡಬೇಕು ಎಂದಾಯಿತು.

ಕೆಲ ದಿನಗಳ ಹಿಂದೆ ನಾನು ನೋಡಿದಂತಹ ಚಿತ್ರವೊಂದರ ಒಂದು ಸನ್ನಿವೇಶದಲ್ಲಿ, ಒಬ್ಬ ತಂದೆ ತನ್ನ ಮಗನಿಗೆ ಕನಸಿನ ಕುರಿತು ಹೇಳುವ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಆ ಮಾತುಗಳು ಹೀಗಿದ್ದವು, "ಜೀವನದಲ್ಲಿ ನಿ
ಗೇನಾದರು ಬೇಕೆನಿಸಿದರೆ, ಅದನ್ನು ಹೋಗಿ ಪಡೆದುಕೊ. ಜನರ ಮಾತಿಗೆ ಕಿವಿಗೊಡಬೇಡ. ಜನರಿಗೆ ತಮ್ಮ ಕೈಯಲ್ಲಿ ಏನ್ನನ್ನಾದರು ಸಾಧಿಸಲಾಗದು ಎಂದೆನಿಸಿದರೆ, ನೀವೂ ಸಹ ಅದನ್ನು ಸಾಧಿಸಲಾರಿರಿ ಎನ್ನುತ್ತಾರೆ. ನಿಮ್ಮ ಬಳಿ ಕನಸಿದ್ದರೆ, ಅದನ್ನು ಜಾಗ್ರತೆಯಿಂದ ಕಾಪಾಡಿ.. ಅದು ಸಾಕಾರಗೊಳ್ಳುವತನಕ..." ನಿಮ್ಮ ಮನದಲ್ಲಿ ಚಿಗುರುವಂತಹ ಕನಸುಗಳಿಗೆ, ಈ ಜಗತ್ತನ್ನು ನೊಡುವ ಅವಕಾಶ ಮಾಡಿಕೊಡಿ... ಪ್ಲೀಸ್!!! ಅದನ್ನು ದಯವಿಟ್ಟು ಭ್ರೂಣದಲ್ಲಿಯೇ ಹತ್ಯೆಗಯ್ಯಬೇಡಿ.

ನಾವು ಜೀವನದಲ್ಲಿ ಸ್ಫೂರ್ತಿಗಾಗಿ ಎಲ್ಲೆಲ್ಲೋ ಹುಡುಕಾಟ ನಡೆಸುತ್ತೇವೆ. ಆದರೆ ಒಂದು ಕ್ಷಣ ಈ ಹುಡುಕಾಟ ನಿಲ್ಲಿಸಿ, ನಿಮ್ಮ ಮನದಲ್ಲೇ ಹುದುಗಿ ಹೋಗಿರುವಂತಹ ಅಸಂಖ್ಯಾತ ಕನಸುಗಳಿಗೆ ಒಮ್ಮೆ ನಿಮ್ಮ ಕಿವಿಕೊಟ್ಟು ನೋಡಿ. ನಿಮಗೆ ನಿಮ್ಮ ಹುಡುಕಾಟ ಎಷ್ಟು ನಿರರ್ಥಕ ಎನಿಸುತ್ತದೆ. ಹಾಗಾದರೆ ಕನಸುಗಳಿಗೂ ಮಾತನಾಡಲು ಬರುತ್ಯೆ? ಹೌದ್ ಕಣ್ರೀ! ಆ ಪಿಸು ಮಾತುಗಳನ್ನು ಕೇಳುವಂತಹ ವ್ಯವಧಾನ ನಮ್ಮಲ್ಲಿ ಇರಬೇಕು ಅಷ್ಟೇ!!! ನೀವು ಯಾವುದೇ ಒಬ್ಬ ಯಶಸ್ವಿ ವ್ಯಕ್ತಿಯನ್ನು, ಅವರ ಯಶಸ್ಸಿನ ಗುಟ್ಟು ಏನು ಎಂದು ಕೇಳಿನೋಡಿ. ಅವರು ಖಂಡಿತವಾಗಿಯೂ ತಮ್ಮ ಯಶಸ್ಸಿನ ಬೇರು, ತಾವು ಕಂಡಂತಹ ಆ ಒಂದು ಪುಟ್ಟ ಕನಸು, ಎಂಬುದನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ. ಹಾಗಾದರೆ ಕನಸುಗಳ ಶಕ್ತಿ ಎಂಥಹದು ಎಂಬುದನ್ನು ನೀವೇ ಲೆಕ್ಕಹಾಕಿ.

ಕನಸುಕಾಣುವುದಕ್ಕೆ ಕಾಸು ಕೊಡಬೇಕೇ? ಇಲ್ಲ. ಆದರೆ ಅದನ್ನು ಸಾಕಾರಗೊಳಿಸಲು ಮಾತ್ರ ಒಳ್ಳೆಯ ಬೆಲೆಯನ್ನೇ ತೆರಬೇಕು! ದಯವಿಟ್ಟು ನೀವು ಕಾಣುವ ಕನಸನ್ನು ಕೇವಲ ಒಬ್ಬ ತಿರುಕನ ಕನಸಾಗಲು ಬಿಡಬೇಡಿ... It certainly deservers more respect!!!

ನೀವು ಸಹ ಏನಾದರು ಕನಸು ಕಂಡಿದ್ದಿರಾ? ಹಾಗದರೆ ನೀವು ಯಾರಿಗೋಸ್ಕರ ಕಾಯುತ್ತಿರುವಿರಿ? ಹೋಗಿ... ನೀವು ಕಂಡಂತಹ ಕನಸನ್ನು ಸಾಕಾರಗೊಳಿಸಿಕೊಳ್ಳಿ! ಗುಡ್ ಲಕ್!!!