ಬುಧವಾರ, ಮಾರ್ಚ್ 16, 2011

ಅವಸಾನದ ಅಂಚಿನಲ್ಲಿ ಅಂಕಿಗಳು


ಇತಿಹಾಸ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಭಾಷೆಯಷ್ಟೇ ಮಹತ್ವ ಲಿಪಿಗೂ ಇದೆ. ಒಂದು ಲಿಪಿಯ ಕೊಂಡಿ ಕಳಚಿದರೆ ಅದರೊಂದಿಗೆ ಹಲವು ಸಂಸ್ಕೃತಿಗಳ ಕೊಂಡಿಗಳೂ ಕಳಚಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಸಿಂಧೂತಟದ ನಾಗರೀಕತೆಯ ಲಿಪಿ. ತುಳು ಭಾಷೆಯ ಲಿಪಿ ಈಗಾಗಲೇ ಜನಬಳಕೆಯಿಂದ ದೂರವಾಗಿದೆ. ರೊಸೆಟ್ಟಾ ಶಾಸನ ಸಿಗುವವರೆಗೆ ಪ್ರಾಚೀನ ಈಜಿಪ್ಟಿನ ಚಿತ್ರಲಿಪಿಯನ್ನೂ ಅರ್ಥೈಸಿಕೊಳ್ಳಲು ಸಾಧ್ಯವಾಗಿರಲಿಲ್ಲ.  ಇತ್ತೀಚೆಗೆ ಬೋವಳ ಸಾವಿನೊಂದಿಗೆ ಪ್ರಂಪಂಚದ ಮತ್ತೊಂದು ಪ್ರಾಚೀನ ಭಾಷೆ ಬೋ ಅಂತ್ಯ ಕಂಡಿದ್ದು ಎಚ್ಚರಿಕೆಯ ಘಂಟೆಯಾಗಿದೆ. ಹಲವು ಅಕ್ಷರಗಳು ಹೊಸದಾಗಿ ಸೇರ್ಪಡೆಯಾಗುವುದು ಹಾಗೂ ಬಳಕೆಯಿಂದ ದೂರವಾಗುವುದು ಲಿಪಿಯ ಬೆಳವಣಿಗೆ ಭಾಗವಾಗಿದೆ.

ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅರಬ್ಬೀ ಮತ್ತು ಇಂಗ್ಲಿಷ್‌ನ ಪದಗಳನ್ನು ಬರೆಯಲು ಜ಼ (za) ಮತ್ತು ಫ಼ (fa) ಎಂಬ ಅಕ್ಷರಗಳನ್ನು ಬಳಕೆಗೆ ತಂದುಕೊಂಡಿದ್ದೇವೆ. ಕನ್ನಡದ ಒಂದೂವರೆ ಸಾವಿರ ವರ್ಷದ ಇತಿಹಾಸದಲ್ಲಿ ಸೇರದ ಈ ಅಕ್ಷರಗಳು ಇತ್ತೀಚೆಗೆ ಬಂದು ಸೇರುವುದಕ್ಕೆ ಕಾರಣ ಬಹಳ ಸರಳ. ಕನ್ನಡದಲ್ಲಿ ನಾವು ಯಾವ ರೀತಿ ಮಾತನಾಡುತ್ತೇವೆಯೋ ಹಾಗೇ ಬರೆಯುತ್ತೇವೆ. F ಮತ್ತು z ಅಕ್ಷರಗಳನ್ನೊಳಗೊಂಡ ಉಪೇಕ್ಷಿಸಲಾರದಷ್ಟು ಪದಗಳು ಜನಬಳಕೆಗೆ ಬಂದಿದ್ದರಿಂದ ಈ ಪದಗಳಿಗೆ ತನ್ನದೇ ಆದ ಪ್ರತ್ಯೇಕ ಅಕ್ಷರಗಳನ್ನು ಕೊಡುವುದು ಅನಿವಾರ್ಯವಾಯಿತು. ಹಾಗಾಗಿ Fಗೆ ಹತ್ತಿರವಿರುವ 'ಫ' ಮತ್ತು Zಗೆ ಹತ್ತಿರವಿರುವ 'ಜ' ಅಕ್ಷರಗಳ ಕೆಳಗೆ ಎರಡು ಚುಕ್ಕಿಗಳನ್ನಿಟ್ಟು ಈ ಅಕ್ಷರಗಳನ್ನು ಗುರುತಿಸಲಾರಂಭಿಸಿದರು. ಈ ರೀತಿ ಕನ್ನಡದ ಪದಸಂಪತ್ತನ್ನು ಹೆಚ್ಚಿಸಿ ಹೊಸ ಅಕ್ಷರಗಳ ಸೇರ್ಪಡೆಯಾಯಿತು. ಆದರೆ ಅಕ್ಷರಗಳು ಬಳಕೆಯಿಂದ ದೂರವಾಗುವುದು ಭಾಷೆಯ ದೃಷ್ಟಿಯಿಂದ ಯಾವಾಗಲೂ ಆರೋಗ್ಯಕರವೆಂದು ಹೇಳಲಾಗದು.

ಬದಲಾವಣೆಯ ಭರದಲ್ಲಿ ಈಗಾಗಲೇ ೞ (೧೧ನೇ ಶ) ಮತ್ತು ಱ (೧೬ನೇ ಶ) ಅಕ್ಷರಗಳನ್ನು ಬಳಕೆಯಿಂದ ದೂರಮಾಡಿಬಿಟ್ಟಿದ್ದೇವೆ. ಈ ಅಕ್ಷರಗಳು ದೂರವಾಗುತ್ತಿದ್ದಂತೆ ಬಹುದೊಡ್ಡ ಪದ ಸಂಪತ್ತೂ ಬಳಕೆಯಿಂದ ದೂರವಾಯಿತು. ಬಾೞ್ (ಜೀವನ) ಮತ್ತು ಬಾಳ್‌ (ಕತ್ತಿ) ಇವುಗಳ ಮಧ್ಯೆ ಲಿಪಿಯಲ್ಲಿ ವ್ಯತ್ಯಾಸವಿಲ್ಲವಾಗಿ ಬಾಳ್ ಎಂದೇ ಬರೆಯಲು ಪ್ರಾರಂಭಿಸಿದರು. ಇದರಿಂದಾದ ನಷ್ಟ 'ಬಾೞ್' ಕಾಲದ ಓಟದಲ್ಲಿ ಹಿಂದುಳಿದು ಇಂದಿನ ಲಿಪಿಯಿಂದ ದೂರವಾಗಿಬಿಟ್ಟಿತು. ಇದೇ ರೀತಿ ಹಲವಾರು ಪದಗಳು ತಮ್ಮ ಅರ್ಥ ಕಳೆದುಕೊಂಡುಬಿಟ್ಟಿವೆ (ಕೆಲವು ಉದಾಹರಣೆಗಳು: ಅಱಿ = ತಿಳಿ, ಅರಿ = ಕತ್ತರಿಸು. ಕಱೆ = ಕಪ್ಪು, ಕರೆ = ದಡ. ಪೊೞಿ = ನದಿ, ಪೊಳೆ = ಪ್ರಕಾಶಿಸು. ಆೞ್ = ಮುಳುಗು, ಆಳ್ = ಸೇವಕ). ಸರ್ಕಾರ ಹೊರತರುವ ಶಾಲಾ ಅಕ್ಷರಾಭ್ಯಾಸ ಪುಸ್ತಕಗಳಲ್ಲಿ ಱ ಮತ್ತು ೞ ಅಕ್ಷರಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಮುಂದಿನ ತರಗತಿಗಳಲ್ಲಿ ಯಾವುದಾದರೂ ಹಳೆಗನ್ನಡ ಪದ್ಯಗಳನ್ನು ಅಭ್ಯಾಸಮಾಡುವಾಗ ಈ ಪದಗಳ ಬಳಕೆಯಿದ್ದರೆ ಮಾತ್ರ ಮಕ್ಕಳಿಗೆ ಈ ಅಕ್ಷರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ; ಅದೂ ಕೇವಲ ಆ ಪದ್ಯದ ಮಿತಿಯಲ್ಲಿ. ತಮಿಳಿನಲ್ಲಿ ಈ ಅಕ್ಷರಗಳು (ற ಮತ್ತು ழ) ಈಗಲೂ ಬಳಕೆಯಲ್ಲಿವೆ. ಶಾಲೆಗಳಲ್ಲಿ ಱ,ರ ಮತ್ತು ೞ,ಳ ಗಳನ್ನು ಸರಿಯಾಗಿ ಉಚ್ಛಾರಿಸಲು ಬಂದರಷ್ಟೇ ಶುದ್ಧ ತಮಿಳು ಭಾಷಿಗನೆನ್ನುತ್ತಾರೆ. ಹಾಗೆಯೇ ನಾನು ಕಂಡಂತೆ 'ನ್'ಗೆ ಬಳಸುತ್ತಿದ್ದ ಬಳಕೆಯಿಂದ ಹಿಂದೆ ಸರಿದಿದೆ (ಈ ಅಕ್ಷರಕ್ಕೆ ಯುನಿಕೋಡ್ ಇಲ್ಲ). ಇಂದು ಹಲವು ಕನ್ನಡಿಗರಿಗೆ ಱ ಮತ್ತು ೞ ಬಗ್ಗೆ ತಿಳಿದೇ ಇಲ್ಲ. ಹಲವರಿಗೆ ಇದರ ಉಚ್ಚಾರಣೆ ತಿಳಿದಿಲ್ಲ, ಱ ಮತ್ತು ರ, ೞ ಮತ್ತು ಳ ಒಂದೇ ಎಂದು ತಿಳಿದಿದ್ದಾರೆ. ಮತ್ತೂ ಕೆಲವರಿಗೆ ಇವು ಹಳೆಗನ್ನಡ ಅಕ್ಷರಗಳೆಂದಷ್ಟೇ ಗೊತ್ತು. ಮಕ್ಕಳಿಗೆ ಅಕ್ಷರ ಕಲಿಸುವ ಸಮಯದಲ್ಲೇ ಈ ಅಕ್ಷರಗಳನ್ನೂ ಪರಿಚಯಿಸುವುದು ಒಳ್ಳೆಯದಲ್ಲವೇ? ಈ ರೀತಿ ಮಾಡುವುದರಿಂದ ಕೈಬಿಟ್ಟು ಹೋಗಿರುವ ಪದಸಂಪತ್ತನ್ನು ಮತ್ತೆ ಗಳಿಸಬಹುದು.

ಭಾರತದ ಲಿಪಿಗಳು ಇಂದು ಅಂಕಿಗಳ ವಿಷಯದಲ್ಲಿ ಮತ್ತೊಂದು ಆಪತ್ತನ್ನು ಎದುರಿಸುತ್ತಿವೆ. ಜಾಗತೀಕರಣದ ಹೆಸರಿನಲ್ಲಿ ಸಾವಿರಾರು ವರುಷಗಳಲ್ಲಿ ಅಕ್ಷರಗಳ ಜೊತೆಗೇ ಬೆಳೆದು ಬಂದ ಅಂಕಿಗಳನ್ನು ಕಡೆಗಣಿಸಿದ್ದೇವೆ. ತೆಲುಗು ವಿಕಿಪೀಡಿಯದಲ್ಲಿ ನೇರವಾಗಿ ತೆಲುಗಿನಲ್ಲಿ ಬರೆಯಬಹುದಾದರೂ ಅಂಕಿಗಳನ್ನು ಒತ್ತಿದರೆ ಮೂಡುವುದು ಇಂಗ್ಲಿಷ್ ಅಂಕಿಗಳು!. ಭಾಷಾಭಿಮಾನಕ್ಕೆ ಪ್ರಸಿದ್ಧರಾದ ತಮಿಳು ವಿಕಿಪೀಡಿಯಾದಲ್ಲೂ ಇದೇ ಸ್ಥಿತಿ. ಇವರೂ ಇಂಗ್ಲಿಷ್ ಅಂಕಿಗಳನ್ನು ಯಾವುದೇ ಅಳುಕಿಲ್ಲದೆ ಒಪ್ಪಿಕೊಂಡು ತಮ್ಮ ಭಾಷೆಯ ಅಂಕಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಹಲವು ತೆಲುಗು, ತಮಿಳು ಬ್ಲಾಗ್‌ಗಳನ್ನು ಸುತ್ತಿ ಬಂದರೂ ನಮಗೆ ಕಾಣುವುದು ಇಂಗ್ಲಿಷ್ ಅಂಕಿಗಳೇ. ಹಲವು ತೆಲುಗು ಮಾತನಾಡುವ ಸ್ನೇಹಿತರನ್ನು ಈ ವಿಷಯವಾಗಿ ಕೇಳಿದಾಗ ತೆಲುಗು ಅಂಕಿಗಳನ್ನು ಇತಿಹಾಸದ ಪಳೆಯುಳಿಕೆಯೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ದೃಷ್ಟಿಯಲ್ಲಿ ನೋಡಿದರೆ ಕನ್ನಡಿಗರು ತಮ್ಮ ಅಂಕಿಗಳನ್ನು ಅಷ್ಟೊಂದು ಕಡೆಗಣಿಸಿದಂತೆ ಕಾಣುವುದಿಲ್ಲ. ಹಲವು ಕನ್ನಡ ಪುಸ್ತಕಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಬ್ಲಾಗ್‌ಗಳಲ್ಲಿ, ಆಹ್ವಾನ ಪತ್ರಿಕೆಗಳಲ್ಲಿ ಕನ್ನಡ ಅಂಕಿಗಳು ಬಳಕೆಯಾಗುತ್ತಿರುವುದು ಕಾಣಬಹುದು. ಮುಖ್ಯವಾಗಿ ವಾಹನಗಳ ನೋಂದಣಿ ಸಂಖ್ಯೆಯನ್ನು ಕನ್ನಡ ಅಂಕಿಗಳಲ್ಲಿ ಬರೆಯುವುದು ಇನ್ನೂ ಕನ್ನಡ ಅಂಕಿಗಳು ಜನಸಾಮಾನ್ಯರ ಮನಸ್ಸಿನಲ್ಲಿ ಜೀವಂತ ಇರುವುದಕ್ಕೆ ಸಾಕ್ಷಿ.

ಒಮ್ಮೆ ದಾವಣಗೆರೆಯಲ್ಲಿ ಟಿಕೆಟ್ ಕಾಯ್ದಿರಿಸುವ ಸಲುವಾಗಿ ರೈಲು ನಿಲ್ದಾಣಕ್ಕೆ ಹೋಗಿದ್ದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಅರ್ಜಿಯನ್ನು ತುಂಬಲು ಅವಕಾಶವಿತ್ತು. ನಾನು ಕನ್ನಡದಲ್ಲಿ ತುಂಬಿ ಅರ್ಜಿಯನ್ನು ಸ್ವೀಕರಿಸುತ್ತಿದ್ದ ರೈಲ್ವೇ ಅಧಿಕಾರಿಗೆ ನೀಡಿದೆ. ಅವರು ತಮಗೆ ಕನ್ನಡ ಬರುವುದಿಲ್ಲವೆಂದು ಹಿಂದಿಯಲ್ಲಿ ಹೇಳಿ ಇಂಗ್ಲಿಷ್‌ನಲ್ಲಿ ಅರ್ಜಿ ತುಂಬುವಂತೆ ಹೇಳಿದರು. ವ್ಯವಸ್ಥೆಯು ಕನ್ನಡದಲ್ಲಿ ತುಂಬಲು ಅವಕಾಶ ಕೊಟ್ಟಿವುವಾಗ ನಾನು ಇಂಗ್ಲಿಷ್‌ನಲ್ಲಿ ತುಂಬುವುದಿಲ್ಲವೆಂದು ನಿರಾಕರಿಸಿದೆ. ಸುತ್ತ ಮುತ್ತ ನಿಂತಿದ್ದ ಜನ ನನಗೆ ಬೆಂಬಲಿಸದಿದ್ದರೂ ಯಾವುದೇ ಆಕ್ಷೇಪ ಮಾಡದಿದ್ದುದು ಸಮಾಧಾನ ತಂದಿತು. ನಾನು ಮತ್ತೆ ಮತ್ತೆ ಇಂಗ್ಲಿಷ್‌ನಲ್ಲಿ ಅರ್ಜಿ ತುಂಬಲು ನಿರಾಕರಿಸಿದ್ದರಿಂದ ಆ ಅಧಿಕಾರಿ ಕನ್ನಡಿಗ ಅಧಿಕಾರಿಯನ್ನು ಅರ್ಜಿ ಓದಲು ಕರೆದರು. ಆ ಕನ್ನಡಿಗ ಅರ್ಜಿಯನ್ನು ನೋಡಿದವರೇ ಇದು ಕನ್ನಡವಲ್ಲವೆಂದು ಹಿಂದೆ ಕೊಟ್ಟುಬಿಟ್ಟರು. ನನಗೆ ಆ ವ್ಯಕ್ತಿ ಏಕೆ ಹೀಗೆ ಹೇಳುತ್ತಿದ್ದಾರೆಂಬುದೇ ಒಂದು ಕ್ಷಣ ತಿಳಿಯಲಿಲ್ಲ. ನಂತರ ಅವರೇ 'ನಂಬರ್ಸ್ ಕನ್ನಡ್ದಲ್ಲಿ ಬರ್ದು ಕೊಡಪ್ಪಾ.. ಹಿಂದೀಲಲ್ಲ.." ಅಂದಾಗ್ಲೇ ಗೊತ್ತಾಗಿದ್ದು. ಆ ಪುಣ್ಯಾತ್ಮ ಕನ್ನಡ ಅಂಕಿಗಳನ್ನು ಹಿಂದಿ ಅಂಕಿಯೆಂದುಕೊಂಡುಬಿಟ್ಟಿದ್ದರು. ಅವರ ಪ್ರಕಾರ ಇಂಗ್ಲಿಷ್ ಅಂಕಿಗಳೇ ಕನ್ನಡ ಅಂಕಿಗಳು! ಇಷ್ಟು ಹೊತ್ತು ಸುಮ್ಮನಿದ್ದ ಜನ 'ಅರ್ಥ ಆಗಂಗ್ ಬರ್ದ್ ಕೊಡ್ರೀ... ಪಾಪ ಸ್ಕೂಲ್ ಟೀಚರ್ಸ್‌ಗೇ ಅರ್ಥ ಆಗಲ್ಲ ಈ ನಂಬರ್ಸು..." ಅಂದಾಗ ನಮ್ಮ ಕನ್ನಡಿಗರ ಸಾಕ್ಷರತೆ ಹೇಗೆ ಬೆಳೆಯುತ್ತಿದೆಯೆಂದು ಗಾಬರಿಯಾದೆ. ಕಡೆಗೆ ನಾನೇ ಅರ್ಜಿಯನ್ನು ಓದಿಹೇಳಿ ಬಂದದ್ದಾಯಿತು.

ನಮ್ಮ ಶಿಕ್ಷಣ ವ್ಯವಸ್ಥೆ ಹೀಗೇ ಮುಂದುವರೆದರೆ ಇನ್ನೊಂದೆರಡು ಸಂತತಿಗಳು ಕಳೆಯುವುದರೊಳಗೆ ಕನ್ನಡದ ಅಂಕಿಗಳೂ ಇತಿಹಾಸದ ಪಳೆಯುಳಿಕೆಗಳಾಗುವುದರಲ್ಲಿ ಅನುಮಾನವಿಲ್ಲ. ಇಂದು ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳನ್ನು ಮತ್ತೆ ಬಳಕೆಗೆ ತರಲಾರದಷ್ಟು ಪರಿಸ್ಥಿತಿ ಹಾಳಾಗಿಲ್ಲ. ಉರಿಯುವ ಬೆಂಕಿಗೆ ತುಪ್ಪ ಹಾಕುವಂತೆ ಇಂದಿನ ವ್ಯಾಪಾರೀ ಮನೋಭಾವದ ಪತ್ರಿಕೆಗಳು 'ಸ್ಟೈಲ್ ಶೀಟ್' ಹೆಸರಿನಲ್ಲಿ ಕನ್ನಡದ ಭಾಗವಾಗಿ ಇಂಗ್ಲಿಷ್ ಅಂಕಿಗಳನ್ನು ಉಪಯೋಗಿಸುತ್ತಿವೆ. ವಿಶ್ವ ಕನ್ನಡ ಸಮ್ಮೇಳನದ ಆಮಂತ್ರಣ ಪತ್ರಿಕೆಯ ಮುಖ ಪುಟದ ಹಿಂಭಾಗದಲ್ಲೇ ಇಂಗ್ಲಿಷ್ ಅಂಕಿಗಳನ್ನು ಬಳಸಿ ಸ್ವಾಗತ ಕೋರಿದ್ದಾರೆ. ಇದನ್ನು ಕೇವಲ ಮುದ್ರಣ ದೋಷವೆನ್ನಲಾದೀತೇ? ಸರ್ಕಾರವು ಕನ್ನಡ ಪತ್ರಿಕೆಗಳಲ್ಲಿ ಕನ್ನಡದ್ದೇ ಅಂಕಿಗಳನ್ನು ಉಪಯೋಗಿಸಬೇಕೆಂದು ಒಂದು ಆದೇಶ ಹೊಡಿಸಿದರೆ ಸಾಕು, ದಿನ ಬೆಳಗಾಗುವುದರೊಳಗೆ ಕನ್ನಡ ಅಂಕಿಗಳು ಜನರ ಅಂಕಿಗಳಾಗಿಬಿಡುತ್ತವೆ. ಆದರೆ ನಮ್ಮ ಘನ ಸರ್ಕಾರದ ಇಚ್ಛಾ ಶಕ್ತಿಯ ಕೊರತೆ ಕನ್ನಡವನ್ನು ಸೊರಗಿಸುತ್ತಿದೆ.


ಮುಗಿಸುವ ಮುನ್ನ: ಐ.ಟಿ.ಪಿ.ಬಿ ರಸ್ತೆಯಲ್ಲಿ ತಮಿಳುನಾಡು ನೋಂದಣಿಯ ಒಂದು ಬಸ್ ಸಂಚರಿಸುತ್ತದೆ. ವಿಶೇಷವೆಂದರೆ ಇದರ ನೋಂದಣಿ ಸಂಖ್ಯೆಯನ್ನು ನಾಲ್ಕೂಬದಿಯಲ್ಲಿ ಕೇವಲ ಕನ್ನಡದಲ್ಲಿ ಬರೆದಿದ್ದಾರೆ.

ಭಾನುವಾರ, ಮಾರ್ಚ್ 13, 2011

ಸುಂದರ ನೆನಪು

ಕುಡಿನೋಟ ಆ ಕಿರುನಗೆಯ ಕಾಂತಿ,

ಕರಗಿತು ಮನವಂದು ಬಯಸಿ ನಿನ್ನ ಪ್ರೀತಿ,

ತವಕ ಅಂತರಾಳದೊಳು ತಿಳಿಯದಾದ ವೇದನೆಯಲಿ,

ಸನಿಹವಿದ್ದ ಸಮಯಗಳು ಸರಸ ನಗೆ ಚೆಲ್ಲಾಟದಲಿ,

ಸುಂದರ ದಿನಗಳ ನೆನೆದು ಮೆಲುಕುತಿಹೆನು,

ಪರಿಪರಿಯಾದ ಸಿಹಿನೋವಿನೊಡನೆ ಇಂದು ಆ ಭಾರವಾದ ಹೃದಯದಲಿ.