ಮಂಗಳವಾರ, ಸೆಪ್ಟೆಂಬರ್ 27, 2011

ಬಾರೆನ್ನ ನಲ್ಲೆ

ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ

ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ

ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ

ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ

ಮಂಗಳವಾರ, ಸೆಪ್ಟೆಂಬರ್ 13, 2011

ಗೆಳತಿಗೊಂದು ಪತ್ರ

ಗೆಳತಿ,

ಅದೇನೋ ಹೇಳುತ್ತಾರಲ್ಲ ಮೊದಲ ಪ್ರೀತಿ ಮರೆಯೋಕೆ ಸಾಧ್ಯ ಇಲ್ಲ ಅಂತ.. ಅದು ಅಕ್ಷರಶಃ ನಿಜ ಕಣೇ. ಆ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ನಿನ್ನ ನೆನಪು ನನ್ನ ಮನಸ್ಸಿನಲ್ಲಿ ಒಂಚೂರೂ ಅಚ್ಚಳಿಯದೆ ಹಾಗೇ ಇದೆ. ಫಳಫಳ ಹೊಳೆಯುವ ದುಂಡನೆಯ ಬಿಳುಪಾದ ಮುಖ, ಕಡುಗಪ್ಪು ಕೂದಲು, ಇವುಗಳಿಗೆ ಹೊಂದುವ ತೆಳುಗುಲಾಬಿ ಬಣ್ಣದ ತುಟಿಗಳು, ನಕ್ಕರೆ ಗುಳಿ ಬೀಳುವ ಬಲಗೆನ್ನೆ, ತಿದ್ದಿ ತೀಡಿದಂತಹ ಹುಬ್ಬು, ನೇರನೋಟಕ್ಕೆ ಸಿಕ್ಕಿದರೆ ಕೊಂದುಬಿಡಡುತ್ತವೇನೋ ಎಂಬಂಥ ಕಣ್ಣುಗಳು, ದಷ್ಟಪುಷ್ಟವಾದರೂ ದಪ್ಪ ಎನ್ನಲಾಗದ ಸುಂದರ ಮೈಮಾಟ, ತನ್ನನ್ನು ಯಾರು ಗಮನಿಸುತ್ತಿದ್ದಾರೆಂದು ಕದ್ದು ನೋಡುವ ಓರೆಗಣ್ಣ ನೋಟ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಸ್ವಭಾವ, ಮಾತನಾಡುವಾಗ ನವರಸಭರಿತ ಹಾವ ಭಾವ - ಇಷ್ಟು ಹೇಳಿದರೆ ಬಹುಶಃ ನಿನ್ನ ಅಂದವೆಂಬ ರಸದೌತಣದ ಒಂದಗುಳಷ್ಟನ್ನಾದರೂ ವರ್ಣಿಸಿದಂತಾಗುತ್ತದೆಯೇನೋ! ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಿದ್ದೇನೆ ಎಂದು ಬೇಸರಗೊಳ್ಳಬೇಡ. ಅಥವಾ ನಿನ್ನ ರೂಪಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದಿದ್ದೆ ಎಂದು ತಪ್ಪು ತಿಳಿಯಬೇಡ. ನಿನ್ನ ಅಂದಕ್ಕಿಂತ ಹೆಚ್ಚಾಗಿ ನನಗೆ ನನಗಿಷ್ಟವಾಗಿದ್ದು ನಿನ್ನ ಗುಣ.

ಅಂದೊಂದು ದಿನ ನಮ್ಮ ಪರೀಕ್ಷೆಯ ಫಲಿತಾಂಶ ಬಂದು ನಾನು ೪ ವಿಷಯಗಳಲ್ಲಿ ಫೇಲ್ ಆಗಿ, ಮನೆಗೂ ಹೋಗದೆ ಬೇಸರದಿಂದ ಒಂಟಿಯಾಗಿ ಕುಳಿತಿದ್ದಾಗ ಬಂದು ನನ್ನನ್ನು ಸಂತೈಸಿದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ? "ರಘು, ಬದುಕು ಎಂದರೆ ಕೇವಲ ನಾವು ಕಾಲೇಜಿನಲ್ಲಿ ಓದಿ ಬರೆಯುವ ಪರೀಕ್ಷೆಯಲ್ಲ. ಅದು ಬಾಳಿನ ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಲೆ. ನೀನು ಹೀಗೆ ಖಿನ್ನನಾಗಿ ಕುಳಿತು ಹಿಂದಿನದನ್ನು ನೆನೆಯುತ್ತಾ ಕೂರೋ ಬದಲು ಮುಂದೆ ಏನು ಮಾಡಬೇಕು ಅನ್ನೋದನ್ನ ಯೋಚಿಸು. ಇವತ್ತು ಪರೀಕ್ಷೆಯಲ್ಲಿ ಫೇಲಾದರೇನಾಯ್ತು.. ಮತ್ತೆ ಪರೀಕ್ಷೆ ಕಟ್ಟಿ ಪಾಸಾಗಬಹುದು. ನಿನ್ನ ಜೀವನ ಮುಗಿದಿಲ್ಲ. ಇಂದಲ್ಲ ನಾಳೆ ನೀನು ಏನಾದರೂ ದೊಡ್ಡದನ್ನ ಸಾಧಿಸಿಯೇ ಸಾಧಿಸ್ತೀಯ ರಘು.. ಆ ಭರವಸೆ ನನಗಿದೆ" ಎಂದು ನೀನು ಅಂದು ಹೇಳಿದ್ದು ನನಗೆ ಇನ್ನೂ ಕಿವಿಯಲ್ಲಿ ರಿಂಗಣಿಸ್ತಾ ಇದೆ. ಅದೇ ನನ್ನ ಬಾಳಿನ ಮುಖ್ಯ ತಿರುವು ಆಗಿತ್ತು ಅಂತ ಇವತ್ತು ನನಗೆ ಗೊತ್ತಾಗ್ತಿದೆ. "ಇನ್ನು ಮುಂದೆ ಈ ರೀತಿ ಮುಖ ಜೋಲು ಮಾಡ್ಕೊಂಡು ಕೂರಲ್ಲ; ಏನೇ ಬರಲಿ ಎದುರಿಸ್ತೀನಿ ಅಂತ ಮಾತು ಕೊಡು ರಘು" ಎಂದು ನೀನು ಕೈ ಚಾಚಿದೆಯಲ್ಲ, ಆ ಕ್ಷಣಕ್ಕೆ ನನಗೆ ಏನು ಮಾಡಬೇಕೆಂದೇ ತೋಚಿರಲಿಲ್ಲ. ಎರಡು ನಿಮಿಷ ಯೋಚಿಸಿ ಆಗಲಿ ಎಂದು ನಿನ್ನ ಕೈಯೊಳಗೆ ಕೈಯಿರಿಸಿ ಮುಗುಳ್ನಕ್ಕಿದ್ದೆ. ಅಂದಿನ ರಾತ್ರಿ ನನಗೆ ನಿದ್ದೆ ಬಂದಿರಲಿಲ್ಲ. ನೀನು ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಂದು ನಾ ಹಿಡಿದ ನಿನ್ನ ಕೈ ಸದಾ ನನ್ನೊಂದಿಗಿರುತ್ತದೆ ಎಂದೇ ಭಾವಿಸಿದೆ. ಅದೇ ನನಗೆ ಬಂದಿದ್ದನ್ನು ಎದುರಿಸುವ ಶಕ್ತಿಯನ್ನು ನೀಡಿತ್ತು. ಮುಂದಿನ ಸೆಮೆಸ್ಟರಿನಲ್ಲಿ ಚೆನ್ನಾಗಿ ಓದಿ ಎಲ್ಲಾ ವಿಷಯಗಳಲ್ಲೂ ತೇರ್ಗಡೆಯಾದೆ. ನನ್ನ ಫಲಿತಾಂಶವನ್ನು ನಾನು ನೋಡುವ ಮೊದಲೇ ನನ್ನ ಬಳಿ ಬಂದು "ರಘು, ನೀನು ಗ್ರೇಟ್ ಕಣೋ... ಎಲ್ಲಾ ಸಬ್ಜೆಕ್ಟಿನಲ್ಲೂ ಪಾಸಾಗಿದೀಯ.. ಈ ಸೆಮ್ ಡಿಸ್ಟಿಂಕ್ಷನ್ ಬೇರೆ ಬಂದಿದೆ" ಅಂತ ಹೇಳಿದ್ದು ನೋಡಿ ನನಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ. "ನಾನೂ ಪಾಸಾಗಿದೀನಿ ಕಣೋ" ಎಂದು ನೀನು ಹೇಳಿದಾಗಲೇ ನನಗೆ ತಿಳಿದಿದ್ದು ನಿನ್ನ ಫಲಿತಾಂಶ ಏನಾಗಿದೆ ಎಂಬುದನ್ನೂ ಕೇಳಿರಲಿಲ್ಲ ಅಂತ.

ನಮ್ಮಿಬ್ಬರ ಒಡನಾಟ ಅಂದಿನಿಂದ ಹೆಚ್ಚಿದ್ದು ನಿನಗೂ ಗೊತ್ತು. ಗೆಳೆಯರೆಲ್ಲ ನಮ್ಮ ಬೆನ್ನ ಹಿಂದೆ ನಮ್ಮನ್ನು ಲವರ್ಸ್ ಎಂದು ಹೇಳುತ್ತಿದ್ದರು. ನೀನು ಅದನ್ನು ಕೇಳಿಯೂ ಕೇಳದಂತೆ ಇರುತ್ತಿದ್ದಿದ್ದನ್ನು ನೋಡಿ ನಿನಗೂ ಅದೇ ಭಾವನೆಯಿದೆ ಎಂದು ಭಾವಿಸಿದೆ. ನಿನಗೆ ನನ್ನ ಬಗ್ಗೆ ಏನು ಅನಿಸಿಕೆ ಇತ್ತೋ ನಾ ಕಾಣೆ. ಆದರೆ ನಾನು ಮಾತ್ರ ನಿನ್ನನ್ನು ನನ್ನ ಬಾಳಿನ ಬೆಳಕು ಎಂದೇ ನಾನು ಭಾವಿಸಿದೆ. ಅದನ್ನೆಂದೂ ನಿನ್ನ ಮುಂದೆ ಹೇಳಬೇಕೆನಿಸಲೇ ಇಲ್ಲ ಅಥವಾ ಹೇಳಬೇಕೆನಿಸಿದರೂ ಅಕಸ್ಮಾತ್ ಅದರಿಂದ ನಮ್ಮ ಸ್ನೇಹಕ್ಕೆಲ್ಲಿ ಕುತ್ತು ಬರುವುದೋ ಎಂಬ ನನ್ನಲ್ಲಿನ ಅಂಜಿಕೆ ಕೇಳದಂತೆ ಮಾಡಿತೋ ಗೊತ್ತಿಲ್ಲ. ನಮ್ಮನ್ನು ನೋಡಿ ಎಲ್ಲರೂ ಒಳಗೇ ಹೊಟ್ಟೆಕಿಚ್ಚು ಪಡುತ್ತಿದ್ದಿದ್ದೂ ನನ್ನ ಗಮನಕ್ಕೆ ಬಂದಿತ್ತು. ಒಟ್ಟಿನಲ್ಲಿ ಆ ಎರಡು ವರ್ಷಗಳ ಕಾಲ ಮಿಂಚಿನಂತೆ ಬಂದು ಮರೆಯಾಗಿ ಹೋಯಿತು. ವಿದ್ಯಾಭ್ಯಾಸ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ನಾನು ನಿನಗೆ "ಆಲ್ ದಿ ಬೆಸ್ಟ್ ಫಾರ್ ಯುವರ್ ಫ್ಯೂಚರ್" ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ "ಥ್ಯಾಂಕ್ಸ್ ರಘು.. ನಿನಗೂ ಸಹ.. ಬಾಳಿನಲ್ಲಿ ಬಯಸಿದ್ದೆಲ್ಲ ಸಿಗಲಿ" ಎಂದು ಬೀಳ್ಕೊಟ್ಟೆ. ಆದರೆ ಆ ಕ್ಷಣವೂ, ಪ್ರತಿ ಕ್ಷಣವೂ ನಾ ಬಯಸಿದ್ದು ನಿನ್ನನ್ನೇ ಎಂದು ನಿನಗೆ ಹೇಗೆ ತಾನೇ ತಿಳಿದೀತು? ತಿಳಿಯಲು ನಾ ತಿಳಿಸಿದ್ದರೆ ತಾನೆ? ನೀ ಹೋದ ದಾರಿಯನ್ನೇ ನಾನು ನೋಡುತ್ತಿದ್ದೆ. ಒಮ್ಮೆ ತಿರುಗಿ ನೋಡುತ್ತೀಯೇನೋ ಎಂದು... ಊಹೂಂ, ನೀನು ತಿರುಗಲೇ ಇಲ್ಲ.

ಕಾಲೇಜು ಮುಗಿಸಿದ ತಕ್ಷಣ ನೀನು ಊರಿಗೆ ಹೋಗಿದ್ದರಿಂದ ನಿನ್ನ ಸಂಪರ್ಕ ಮಾಡಲೇ ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಕಾದೆ.. ನೀನು ಮತ್ತೆ ಸಿಗುತ್ತೀಯೇನೋ ಅಂತ.. ಆದರೆ ಸಿಗಲಿಲ್ಲ. ನೀನು ಸಿಗುತ್ತೀಯ ಅನ್ನೋ ಭರವಸೆ ನನಗೆ ಈಗ ಉಳಿದಿಲ್ಲ. ಆದರೆ ನಾನು ನನ್ನ ಕಾಲ ಮೇಲೆ ನಿಂತು ಸುಖವಾಗಿ ಇರೋದಕ್ಕೆ ಆ ದಿನ ನನಗೆ ಧೈರ್ಯ, ವಿಶ್ವಾಸ ತುಂಬಿದ ನೀನೇ ಕಾರಣ. ಅದನ್ನ ನನ್ನಿಂದ ಎಂದಿಗೂ ಮರೆಯೋಕೆ ಸಾಧ್ಯ ಇಲ್ಲ. ಮುಂದಿನ ಜನ್ಮವೇನಾದರೂ ಇದ್ದರೆ ಈ ಜನ್ಮದಲ್ಲಿ ಆದಂತಾಗದಿರಲಿ. ನೀನು ನನಗೆ ಸಿಗುವಂತಾಗಲಿ ಅಂತ ದೇವರ ಹತ್ರ ಕೇಳ್ಕೋತೀನಿ. ಯಾವ ಹೂವು ಯಾರ ಮುಡಿಗೋ ಅನ್ನುತ್ತಾರಲ್ಲ.. ಇದಕ್ಕೇ ಇರಬೇಕು ಕಣೇ. ಇನ್ನೇನೂ ಬರೆಯಲಾಗುತ್ತಿಲ್ಲ. ನಿನಗೆ ನನ್ನ ಬಗ್ಗೆ ಏನು ಭಾವನೆಯಿತ್ತು, ಅಥವಾ ಈಗ ಯಾವ ಭಾವನೆಯಿದೆ ಎಂದೇ ತಿಳಿಯದೆ ಇಷ್ಟೆಲ್ಲಾ ಬರೆದಿದ್ದಕ್ಕೆ ಕ್ಷಮಿಸಿಬಿಡು..

ಎಂದೆಂದೂ ನಿನ್ನವ,
ರಘು

ಬುಧವಾರ, ಸೆಪ್ಟೆಂಬರ್ 7, 2011

ಮನದ ಹಕ್ಕಿ

ಪಂಜರದಿ ಹೊರಗೆ ಬಾರೊಮ್ಮೆ,
ರೆಕ್ಕೆಯನು ಬಿಚ್ಚಿ ಮನದಿ ಹಾರೊಮ್ಮೆ

ತೇಲಾಡುತ ನೀ ತರುವಾಯ,
ತೆರೆಯ ಮರೆಯಿಂದ ಸರಿದು ಹಾರೊಮ್ಮೆ

ಮರುಕವ ಮರೆಮಾಚುತ ಬರಿದಾದ ಬಯಲಿನಾಚೆಗೆ,
ಹಸಿರೆಡೆಗೆ ಹಸಿದು ಹಾರೊಮ್ಮೆ

ಭಾವನೆಗಳ ಗರಿಯನು ಕೆದರಿ,
ಭರಸದಿ ಮುಗಿಲೆಡೆಗೆ ನಲಿಯುತ ಹಾರೊಮ್ಮೆ

ಕನಸುಗಳ ಮೋಡವ ಸನಿಹದಿ ನೋಡುತ,
ಸ್ವಪ್ನಸಾಗರದೇರಿಯ ಮೇಲೆ ಹಾರೊಮ್ಮೆ

ಒಮ್ಮೆಯಾದರೂ ರೆಕ್ಕೆಯನು ಬಿಚ್ಚಿ ಮನದಿ ನೀ ಹಾರೊಮ್ಮೆ