ಶುಕ್ರವಾರ, ಜೂನ್ 7, 2013

ಜೀವನ

ಬೆಟ್ಟದಂಚೆಂದು ಬೆದರದಿರು ಮನವೆ
ಜಲಪಾತಕ್ಕದೇ ತುದಿಯು ಮೂಲ
ಕಷ್ಟವೆಂದಿನಿತೂ ಬಾಡದಿರು ಮನವೆ
ಪ್ರತಿಯೊಂದಕ್ಕೂ ಇರುವುದೊಂದು ಕಾಲ

ದಹಿಸಿದರು ಎಂದು ಕೊರಗುವುದೆ ಬೆಣ್ಣೆ
ಘಮಿಸುವುದು ತಾನು ತುಪ್ಪವಾಗಿ
ಸೇರುವುದು ಎಲ್ಲರೂ ಒಂದು ದಿನ ಮಣ್ಣೆ
ಬದುಕು ನೀ ಇರುವಾಗ ಒಪ್ಪವಾಗಿ

ಎಷ್ಟು ಮೆರೆದರೆ ತಾನೆ ಏನು ಬಂತು
ಹುಟ್ಟಿನಲು ಸಾವಿನಲು ಒಂದೆ ವೇಷ
ಬಾಳೊಂದು ಪಾಪ ಪುಣ್ಯಗಳ ಕಂತು
ನಿನ್ನೆ ನಾಳೆಯ ನಡುವೆ ಬೇಕೆ ದ್ವೇಷ

ಭಾನುವಾರ, ಜೂನ್ 2, 2013

ಹ್ಯಾಂಗ್ ಔಟ್‍ನಿಂದ ಟಾಕ್‍ಗೆ

ಇತ್ತೀಚೆಗೆ ಗೂಗಲ್ ತನ್ನ ಆಂಡ್ರಾಯ್ಡ್ ಆವೃತ್ತಿಯ ಹರಟೆ ಸಾಧನ "ಟಾಕ್" ಜಾಗದಲ್ಲಿ "ಹ್ಯಾಂಗ್ ಔಟ್"ಎನ್ನುವ ಹೊಸ ಸಾಧನವನ್ನು ಸೇರಿಸಿತು. ಡೆಸ್ಕ್‌ಟಾಪ್ "ಹ್ಯಾಂಗ್ ಔಟ್"ನ ಮಾದರಿಯಲ್ಲೇ ಹೆಚ್ಚಿನ ವಿಶೇಷತೆಯೊಂದಿಗೆ ಕೂಡಿರಬಹುದೆಂದು ನಾನು ಮೊದಲಿದ್ದ ಟಾಕ್ ಅನ್ನು ಮೇಲ್ಮಟ್ಟಕ್ಕೇರಿಸಿಕೊಂಡೆ.

ಈ ಹೊಸ ಆವೃತ್ತಿಯಲ್ಲಿ ಕೆಲವು ತೊಂದರೆಗಳು ಕಂಡವು,
೧. ಸಂಪರ್ಕ ಪಟ್ಟಿಯಲ್ಲಿರುವವರ ಸ್ಥಿತಿ (ಲಭ್ಯ, ಕಾರ್ಯನಿರತ) ತಿಳಿಯುವುದಿಲ್ಲ.
೨. ನಮ್ಮ ಸ್ಥಿತಿ ಮತ್ತು ಸಂದೇಶವನ್ನು ತಿಳಿಯಲು, ಮಾರ್ಪಡಿಸಲು ಸಾಧ್ಯವಿಲ್ಲ.
೩. ಅದೃಶ್ಯ ಸ್ಥಿತಿ ಬೆಂಬಲಿತವಿಲ್ಲ.
೪. ಕಡತ ವಿನಿಮಯ ಸಾಧ್ಯವಿಲ್ಲ.
೫. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಉಪಯೋಗಿಸಲು ಸಾಧ್ಯವಿಲ್ಲ.

ಈ ಕಾರಣಗಳಿಂದಾಗಿ ಹೊಸ ಹ್ಯಾಂಗ್ ಔಟ್ ತನ್ನ ತೊಂದರೆಗಳನ್ನು ನಿವಾರಿಸಿಕೊಂಡು ಬಳಕೆದಾರ ಸ್ನೇಹಿಯಾಗುವವರೆಗೂ ಟಾಕ್‍ಗೆ ಹಿಂತಿರುಗಲು ನಿರ್ಧಾರಿಸಿದೆ. ಗೂಗಲ್ ತನ್ನ ಆಟದಂಗಡಿಯಿಂದ ಟಾಕ್ ಅನ್ನು ತೆರವುಗೊಳಿಸಿದ್ದರಿಂದ ಹಳೆಯ ಟಾಕ್ ಅನ್ನು ಮರು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಲವು ಹುಡುಕಾಟಗಳ ನಂತರ ಸರಳವಾಗಿ ಟಾಕ್‍ಗೆ ಹಿಂತಿರುಗುವ ದಾರಿ ಸಿಕ್ಕಿತು.

* ಗೂಗಲ್ "ಹ್ಯಾಂಗ್ ಔಟ್"ನಿಂದ "ಟಾಕ್"ಗೆ ಹಿಂತಿರುಗುವುದು ಹೇಗೆ?
>> ಅಪ್ಲಿಕೇಶನ್ ಮ್ಯಾನೇಜರ್‍ನ ಮೂಲಕ ಅಪ್ಡೇಟ್‍ಗಳನ್ನು ತೆಗೆದುಹಾಕಿದರಾಯಿತು! 
(Application manager-> Hangouts -> Uninstall updates)ಗೂಗಲ್ 'ಆನೆ ನಡೆದಿದ್ದೇ ದಾರಿ' ಎಂಬಂತೆ ಇಂತಹ ಹುಚ್ಚಾಟಗಳನ್ನು ಮುಂದುವರೆಸಿದರೆ ಆರ್ಕುಟ್‍ನಿಂದ ಪಾಠ ಕಲಿತಿಲ್ಲವೆಂದೇ ಅರ್ಥ...