ಒಂದು ಭಾಷೆ ಜನಬಳಕೆಗೆ ಸರಿಹೊಂದುವಂತಾಗಲು ಅದರಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಿರಬೇಕು. ಉದಾಹರಣೆಗೆ ಕೇವಲ ೨೬ ಅಕ್ಷರಗಳನ್ನು ಹೊಂದಿರುವ ಇಂಗ್ಲಿಷ್ ಇಂದು ವಿಶ್ವದಾದ್ಯಂತ ಮಾತನಾಡಲ್ಪಡುತ್ತಿದೆ. ಕನ್ನಡದಲ್ಲಿ ಅನವಶ್ಯಕವಾದ ಅನೇಕ ಅಕ್ಷರಗಳಿವೆ. ಎಲ್ಲ ಮಹಾಪ್ರಾಣಗಳೂ ಅನಾವಶ್ಯಕವಾಗಿವೆ. ಇನ್ನೂ ಕೆಲವು ಅಕ್ಷರಗಳೂ ಕೂಡ ನಿರುಪಯುಕ್ತವಾಗಿವೆ. ಎಲ್ಲ ಸೇರಿ ಇಂತಹ ೧೭ ಅಕ್ಷರಗಳಿವೆ. ಯಾವ ಪದಗಳಲ್ಲಿ ಮಹಾಪ್ರಾಣಗಳಿವೆಯೋ ಅವು ಕನ್ನಡ ಪದಗಳಲ್ಲ, ಬೇರೆ ಭಾಷೆಯಿಂದ ಬಂದ ಪದಗಳು. ಹೀಗಾಗಿ ಈ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕು.ಮೊದಲ ನೋಟಕ್ಕೆ ಅವರ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತದೆ. ಮಹಾಪ್ರಾಣಾಕ್ಷರಗಳು ಕನ್ನಡದ ಬಹುತೇಕ ಪದಗಳಲ್ಲಿಲ್ಲ. ಅವೇನಿದ್ದರೂ ಸಂಸ್ಕೃತ ಪದಗಳಲ್ಲಿ ಬರುವಂಥವು. ಇವುಗಳೆಲ್ಲವನ್ನು ಬಳಸುವ ಅಗತ್ಯವಿಲ್ಲ. ಹಾಗಾಗಿ ಕನ್ನಡ ವರ್ಣಮಾಲೆಯಿಂದ ೧೭ ಅಕ್ಷರಗಳು (ಸುಮಾರು ಮೂರನೇ ಒಂದು ಭಾಗ) ಕಡಿಮೆಯಾದರೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಆದರೆ ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.
ಇರಲಿ, ಆ ೧೭ ಅಕ್ಷರಗಳನ್ನು ತೆಗೆದಿದ್ದಾರೆ ಎಂದುಕೊಂಡರೆ, ಸಂಸ್ಕೃತ ಶಬ್ದಗಳನ್ನು ಹೇಗೆ ಬರೆಯುತ್ತಾರೆ? ಒಂದೊಂದು ಅಕ್ಷರಕ್ಕೂ ಬೆಲೆ ಕೊಡುವ ಸಂಸ್ಕೃತ ಪದಗಳನ್ನು ಸಂಕ್ಷೇಪಿಸಿದ ಕನ್ನಡ ವರ್ಣಮಾಲೆಯ ಸಹಾಯದಿಂದ ಬರೆಯುವುದು ಅಸಾಧ್ಯ. ಸಂಸ್ಕೃತ ಪದಗಳು ಕನ್ನಡ ಪದಗಳನ್ನು ಮರೆಸಿವೆ ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಉಪಯೋಗಿಸದೆ ಮಾತನಾಡುವುದು ಸಾಧ್ಯವೇ? ನಾವು ಬೇಡ ಬೇಡವೆಂದರೂ ನಮಗೇ ಗೊತ್ತಿಲ್ಲದೆ ನೂರಾರು ಪರಭಾಷೆಯ ಪದಗಳನ್ನು ನಾವು ಉಪಯೋಗಿಸುತ್ತೇವೆ. ನಾವು ದಿನನಿತ್ಯ ಬಳಸುವ ಸೂರ್ಯ, ಚಂದ್ರ, ವಿಮಾನ ಮುಂತಾದವುಗಳಿಗೆ ಅಚ್ಚ ಕನ್ನಡದ ಪದಗಳು (ನೇಸರ, ತಿಂಗಳು, ಗಾಳಿತೇರು) ಎಷ್ಟೊಂದು ಜನರಿಗೆ ತಿಳಿದೇ ಇಲ್ಲ. ಇನ್ನು ನೀರು, ಚಿತ್ತಾರ ಇಂತಹ ಪದಗಳನ್ನು ತದ್ಭವಗಳು ಎಂದು ಕನ್ನಡಕ್ಕೆ ಇಳಿಸಿಬಿಡುತ್ತೇವೆ. (ಇವುಗಳಿಗೆ ಅಚ್ಚ ಕನ್ನಡ ಪದಗಳು ನನಗೂ ತಿಳಿದಿಲ್ಲ, ನಿಮಗೆ ತಿಳಿದಿದ್ದರೆ ತಿಳಿಸಿ). ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ. ಅಷ್ಟಕ್ಕೂ ಸಂಸ್ಕೃತ ಪದಗಳನ್ನು ಉಪಯೋಗಿಸಬಾರದು ಎಂದೇನಿದೆ? ಇಂಗ್ಲಿಷ್ ಸಹ ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆದೇ ಬೆಳೆದಿರುವುದು (ಉದಾ: ಮಾತೃ -> Mother, ಪಿತೃ -> Father, ಭ್ರಾತೃ -> Brother), ಅಲ್ಲವೇ? ಮನುಷ್ಯನೇ ಆಗಲಿ ಭಾಷೆಯೇ ಆಗಲಿ ಬೆಳೆಯುವುದು ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವವಿದ್ದಾಗ ಮಾತ್ರ. ಇದು ನನ್ನದು ಅದು ನಿನ್ನದು ಎಂಬ ಸಂಕುಚಿತ ಮನೋಭಾವದಿಂದಲ್ಲ.
ಕನ್ನಡ ಮಾತನಾಡುವವರು/ಮಾತನಾಡಬೇಕಾದವರು ಯಾರು? ನಾವು ತಾನೆ? ಬೆಂಗಳೂರಿನಲ್ಲಿ "ತಮಿಳ್ ತೆರಿಮಾ" ಎಂದು ಕೇಳಿದರೆ "ತೆರಿದು" ಎನ್ನುವ ಕನ್ನಡಿಗರು ಸಿಗುತ್ತಾರೆಯೇ ಹೊರತು "ಇಲ್ಲ" ಎನ್ನುವವರೆಷ್ಟು ಮಂದಿ? ಕನ್ನಡ ವರ್ಣಮಾಲೆಯನ್ನು ಅಳಿಸಬೇಕೋ ಅಥವಾ ಉಳಿಸಿ, ಬೆಳೆಸಬೇಕೋ ಎಂಬುದು ನಮ್ಮ ನಿಮ್ಮ ವಿಚಾರಕ್ಕೆ ಬಿಟ್ಟ ವಿಷಯ. "ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!
ಅನುಲೇಖ: ಇಲ್ಲಿ ನಾನು ಬರೆದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಲೇಖನದ ಹಿಂದೆ ಯಾರಿಗೂ ನೋವುಂಟು ಮಾಡುವ ಇರಾದೆಯಿಲ್ಲ. ಹಾಗೇನಾದರೂ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.