ಮಂಗಳವಾರ, ಅಕ್ಟೋಬರ್ 1, 2019

ತತ್ತ್ವಮಸಿ

ತತ್ತ್ವಮಸಿ ವಾಕ್ಯವನು ಅರ್ಥಯಿಸಬೇಕಿದೆ
ನನ್ನೊಳಗೆ ನನ್ನನ್ನು ಹುಡುಕಾಡಬೇಕಿದೆ
ನಾನೇ ಜಗವೆಂದು ಮನಗಾಣಬೇಕಿದೆ 
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಕಣ್ಣ ನಾ ಬಿಗಿಹಿಡಿಯೆ ಎಲ್ಲೆಲ್ಲೂ ಬೆಳಕಿಲ್ಲ 
ಕಿವಿಯ ನಾ ಮುಚ್ಚಿರಲು ನಾದದಾ ಮೊಳಗಿಲ್ಲ
ನಾಸಿಕವ ಬಿಗಿಹಿಡಿಯೆ ಜಗದಿ ಪರಿಮಳವಿಲ್ಲ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ನನ್ನ ಕಲ್ಪನೆಯ ನರಕ, ನನ್ನ ಕಲ್ಪನೆಯ ನಾಕ
ನಾನೆಂಬ ಕಲ್ಪನೆಯ ಫಲದಿಂದಲೇ ಲೋಕ
ನಾನಿಲ್ಲವಾದರೆ ಇರಬಹುದೇ ಈ ಲೋಕ 
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಎಲ್ಲವೂ ನನ್ನ ಮಾಯೆ, ಕೋಪವೇತಕೆ ಮನವೆ 
ಎಲ್ಲರೂ ನನ್ನ ಛಾಯೆ, ತಾಪವೇತಕೆ ತನುವೆ 
ನನ್ನನ್ನು ಬೇರ್ಪಡಿಸಿ ಹುಡುಕುವುದು ತರವೆ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ನಾ ಜನಿಸೆ ಜಗದುದಯ, ನಾ ಮಡಿಯೆ ಜಗದ ಲಯ
ನನ್ನಿಂದ ಜಗದ ನಡೆ ನಾನಲ್ಲವೇ ಜಗದೊಡೆಯ
ಅರಿತ ಮರುಕ್ಷಣದಿಂದ ಬದುಕು ಆನಂದಮಯ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಗುರುವಾರ, ಏಪ್ರಿಲ್ 11, 2019

ಭಾವರಂದ್ರನಕ್ಷತ್ರಗಳು ಮಿನುಗುತ್ತಿವೆ
ತನ್ನ ಸುತ್ತ ಜೀವ ತುಂಬಿಸಿ

ಹಲವು ಭೂಮಿಗಳು ನಲಿದಿವೆ
ನೂರು ನೆನಪುಗಳ ಕೂಡಿಸಿ

ತಾರೆಗಳಿಗೂ ಮುಪ್ಪಾವರಿಸಿದೆ
ನಲಿವುಗಳು ನೆನಪುಗಳಾಗಿವೆ

ಸಣ್ಣ ತಾರೆಗದು ಸಿಡಿಯುವ ಚಕ್ರ
ದೊಡ್ಡ ನಕ್ಷತ್ರವಿನ್ನು ಕಪ್ಪು ರಂದ್ರ

ಕಪ್ಪುರಂದ್ರವದು ಬಹು ಸಾಂದ್ರ
ಭಾವನೆಗಳೂ ಹೊರನುಸುಳವಿನ್ನು

ಕಪ್ಪು ಗೋರಿಗಳು ಜಗಕೆ ನಿರ್ಜೀವ
ಆದರದಕೆ ತನ್ನೊಳಗೊಂದು ವಿಶ್ವ

ಇಲ್ಲಿ ಕಾಣುವುದೆಲ್ಲವೂ ಸಾಪೇಕ್ಷ
ಆದರೆ ಇರುವುದೆಲ್ಲವೂ ನಿರಪೇಕ್ಷ

ಕಪ್ಪುಗೋರಿಗಳೂ ಇಲ್ಲಿ ಸಾಯುತ್ತಿವೆ
ಭಾವಗಳು ವಿಕಿರಣವಾಗಿ ನಶಿಸುತ್ತಿವೆ

ಬುಧವಾರ, ಸೆಪ್ಟೆಂಬರ್ 20, 2017

ನಿನ್ನೆ - ನಾಳೆ

ನಾನಿದ್ದೀನಿ ಇಲ್ಲಿ
ಎತ್ತರವೋ ಆಳವೋ
ದೂರದಲ್ಲೋ ಹತ್ತಿರದಲ್ಲೋ

ಹತ್ತಿದಾಗ ಆಳ
ಇಳಿದಾದ ಎತ್ತರ
ನಡೆದಷ್ಟೂ ಹತ್ತಿರವು ದೂರ

ಅಲ್ಲಿರುವ ಅವ
ಇಲ್ಲಿದ್ದನೋ ಅಂದು
ಅಲ್ಲಿಗಳ ಇಲ್ಲಿ ಓಟದಲ್ಲಿ

ಅಲ್ಲಿರುವುದು ಆಳವೋ
ಇಲ್ಲಿರುವುದು ಎತ್ತರವೋ
ಕಂಡಹಾಗೆ ಅವನಿಗೆ ನಾನು

ಕಾಣುವುದು ಹೀಗೇ
ನೋಡುವುದು ಹೀಗೇ
ನೋಟ ಕಾಣುವುದು ಹಾಗೆ

ನನ್ನ ಆಳದಲ್ಲಿ
ಅವನ ಎತ್ತರದಲ್ಲಿ
ಹತ್ತಿರ ದೂರವೆಂಬುದು ಎಲ್ಲಿ?

ಸೋಮವಾರ, ಜನವರಿ 30, 2017

ಭ್ರಮಾಲೋಕ

ದಟ್ಟಡವಿಯೊಳು ದುಗುಡದಿ ನಡೆದಂತೆ ಬುದ್ಧಿಜೀವಿಗಳ ಬದುಕಾಗಿಹುದಯ್ಯಾ,
ತಾಕಂಡ ಕಾಣರಿಯದ ಬಲೆಯ ಹೆಣೆಯುತಲಿ ತಾವೇ ಬಲೆಗೆ ಸಿಲುಕುವರಯ್ಯಾ,
ಹಸನಾದ ಬದುಕಿನಲಿ ಹುಸಿ ಕನಸುಗಳ ಕಟ್ಟಿ ಹಳಸಿದ ಜೀವನ ನಡೆಸುವರಯ್ಯಾ,
ಸಂಬಂಧದೆಳೆಯ ಕಳಚಿ ಸಮಯವೆಂಬೆಳೆಯೊಳು ನಾನ್ ತಾಮುಂದೆನ್ನುತ ತೇಲುತಿಹರಯ್ಯಾ,
ತಿಳಿಯದಾ ಲೋಕದೊಳು ಭ್ರಮೆಯಂಬ ಮಾಯೆಯೊಳು ಮಂಪಿರುವ ಚಿತ್ತದಲಿ ಮುಳುಗುತಿಹರಯ್ಯಾ.

ಶುಕ್ರವಾರ, ಡಿಸೆಂಬರ್ 23, 2016

ಏನಿದು ಕವನ!?

ಏನಿದು ಕವನ!? ನನ್ನಲೇಕೋ ಮೌನ.
ಬರೆವ ಕುಳಿತರೂ, ಬರದೀ ಮನಕೆ!?

ಭಾವನೆ ಎಲ್ಲಿಹುದು!? ಮನದಿ ತಡಕಾಡಿದರೂ ಸಿಗದಾಗಿಹುದು.
ಮಳೆಯಿಲ್ಲದ ನೆಲದಲ್ಲಿ, ಜಲಕೆ ಪರಿತಪಿಸುವಂತಾಗಿಹುದು.

ಜೀವನದ ಜಂಜಾಟದಿ, ಮರೆತೆನಾ ನನ್ನನೇ!?
ಸಮಯದಾ ಕುದುರೆಯೇರಿ, ತೊರೆದೆನಾ ಭಾವನೆಯನ್ನೆ!?

ಏನಿದು ಕವನ!? ನನ್ನಲೇಕೋ ಮೌನ.