ನಮ್ಮೂರ ಜಾತ್ರೆಲ್ಲಿ ಕಪ್ಪಡರೋ ಹೊತ್ತಲ್ಲಿ
ನನಗಾಗಿ ಕಾದಿದ್ದು ನಿಜವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ರಥಬೀದಿ ಬದಿಯಲ್ಲಿ ಗೆಳತಿಯರ ಸಂದಲ್ಲಿ
ಕುಡಿನೋಟ ಬೀರಿದ್ದು ದಿಟವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ಮುಸ್ಸಂಜೆ ಮಬ್ಬಲ್ಲಿ ನಿನ್ನ ತುಟಿಯಂಚಲ್ಲಿ
ನನಗಲ್ಲಿ ಕಂಡಿದ್ದು ನಗುವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ಮರೆಯಾಗೋ ಮೊದಲಲ್ಲಿ ನಿನ್ನ ಕಣ್ಣಂಚಲ್ಲಿ
ಮಿಂಚಾಗಿ ಮೂಡಿದ್ದು ಒಲವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ