ಬುಧವಾರ, ಅಕ್ಟೋಬರ್ 24, 2012

ಬೆಳದಿಂಗಳ ಬೇಗೆ

ಸರಿಯಿದೆಯೆ ಈ ಕ್ರಮ ಹೇಳೆಲೋ ಚಂದ್ರಮ
ಪರಿತಾಪದಲ್ಲಿಯೂ ನಿನಗೇಕೆ ಸಂಭ್ರಮ

ಚೆಲುವಿನ ಹೂವು ಕೂಡ ಕಪ್ಪಾಗಿ ಕಂಡಿದೆ
ಮಿನುಗುವ ತಾರೆಯೂ ಮಂಕಾಗಿ ಹೋಗಿದೆ
ಏಕೊ ಏನೊ ನನ್ನ ಸಖಿಯ ಮುಖ ಬಾಡಿದೆ
ಅದರಿಂದ ನನ್ನ ಮನದಿ ಬೇಸರವು ಮೂಡಿದೆ

ಮತ್ತೆ ಮತ್ತೆ ಕೇಳುವಂಥ ಮಾಧುರ್ಯದ ದನಿ
ಕೇಳದಂತೆ ಆಗಿದೆ ಮೌನವಾಗಿ ಕೂತಿದೆ
ತಿರುಗಿ ತಿರುಗಿ ನೋಡುವಂಥ ಸೌಂದರ್ಯದ ಖನಿ
ಧುಮ್ಮಿಕ್ಕಿ ಹರಿದಿದೆ ಧಾರೆಯಾಗಿ ಕಂಬನಿ

ಕಾರಣವೆ ಸಿಗದ ರೀತಿ ಮನಸಿನಲ್ಲಿ ತತ್ತರ
ಬೆಳದಿಂಗಳು ಕೂಡ ನನಗೆ ಬೇಗೆಯಾಗಿ ಹೋಗಿದೆ
ನನ್ನ ಮನದ ಪ್ರಶ್ನೆಯ ಕೇಳಿ ನಿನ್ನ ಹತ್ತಿರ
ಕಾದು ಕುಳಿತೆ ಚಂದ್ರಮ ಬರಲಿ ನಿನ್ನ ಉತ್ತರ