ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 13, 2011

ಗೆಳತಿಗೊಂದು ಪತ್ರ

ಗೆಳತಿ,

ಅದೇನೋ ಹೇಳುತ್ತಾರಲ್ಲ ಮೊದಲ ಪ್ರೀತಿ ಮರೆಯೋಕೆ ಸಾಧ್ಯ ಇಲ್ಲ ಅಂತ.. ಅದು ಅಕ್ಷರಶಃ ನಿಜ ಕಣೇ. ಆ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ನಿನ್ನ ನೆನಪು ನನ್ನ ಮನಸ್ಸಿನಲ್ಲಿ ಒಂಚೂರೂ ಅಚ್ಚಳಿಯದೆ ಹಾಗೇ ಇದೆ. ಫಳಫಳ ಹೊಳೆಯುವ ದುಂಡನೆಯ ಬಿಳುಪಾದ ಮುಖ, ಕಡುಗಪ್ಪು ಕೂದಲು, ಇವುಗಳಿಗೆ ಹೊಂದುವ ತೆಳುಗುಲಾಬಿ ಬಣ್ಣದ ತುಟಿಗಳು, ನಕ್ಕರೆ ಗುಳಿ ಬೀಳುವ ಬಲಗೆನ್ನೆ, ತಿದ್ದಿ ತೀಡಿದಂತಹ ಹುಬ್ಬು, ನೇರನೋಟಕ್ಕೆ ಸಿಕ್ಕಿದರೆ ಕೊಂದುಬಿಡಡುತ್ತವೇನೋ ಎಂಬಂಥ ಕಣ್ಣುಗಳು, ದಷ್ಟಪುಷ್ಟವಾದರೂ ದಪ್ಪ ಎನ್ನಲಾಗದ ಸುಂದರ ಮೈಮಾಟ, ತನ್ನನ್ನು ಯಾರು ಗಮನಿಸುತ್ತಿದ್ದಾರೆಂದು ಕದ್ದು ನೋಡುವ ಓರೆಗಣ್ಣ ನೋಟ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಸ್ವಭಾವ, ಮಾತನಾಡುವಾಗ ನವರಸಭರಿತ ಹಾವ ಭಾವ - ಇಷ್ಟು ಹೇಳಿದರೆ ಬಹುಶಃ ನಿನ್ನ ಅಂದವೆಂಬ ರಸದೌತಣದ ಒಂದಗುಳಷ್ಟನ್ನಾದರೂ ವರ್ಣಿಸಿದಂತಾಗುತ್ತದೆಯೇನೋ! ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಿದ್ದೇನೆ ಎಂದು ಬೇಸರಗೊಳ್ಳಬೇಡ. ಅಥವಾ ನಿನ್ನ ರೂಪಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದಿದ್ದೆ ಎಂದು ತಪ್ಪು ತಿಳಿಯಬೇಡ. ನಿನ್ನ ಅಂದಕ್ಕಿಂತ ಹೆಚ್ಚಾಗಿ ನನಗೆ ನನಗಿಷ್ಟವಾಗಿದ್ದು ನಿನ್ನ ಗುಣ.

ಅಂದೊಂದು ದಿನ ನಮ್ಮ ಪರೀಕ್ಷೆಯ ಫಲಿತಾಂಶ ಬಂದು ನಾನು ೪ ವಿಷಯಗಳಲ್ಲಿ ಫೇಲ್ ಆಗಿ, ಮನೆಗೂ ಹೋಗದೆ ಬೇಸರದಿಂದ ಒಂಟಿಯಾಗಿ ಕುಳಿತಿದ್ದಾಗ ಬಂದು ನನ್ನನ್ನು ಸಂತೈಸಿದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ? "ರಘು, ಬದುಕು ಎಂದರೆ ಕೇವಲ ನಾವು ಕಾಲೇಜಿನಲ್ಲಿ ಓದಿ ಬರೆಯುವ ಪರೀಕ್ಷೆಯಲ್ಲ. ಅದು ಬಾಳಿನ ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಲೆ. ನೀನು ಹೀಗೆ ಖಿನ್ನನಾಗಿ ಕುಳಿತು ಹಿಂದಿನದನ್ನು ನೆನೆಯುತ್ತಾ ಕೂರೋ ಬದಲು ಮುಂದೆ ಏನು ಮಾಡಬೇಕು ಅನ್ನೋದನ್ನ ಯೋಚಿಸು. ಇವತ್ತು ಪರೀಕ್ಷೆಯಲ್ಲಿ ಫೇಲಾದರೇನಾಯ್ತು.. ಮತ್ತೆ ಪರೀಕ್ಷೆ ಕಟ್ಟಿ ಪಾಸಾಗಬಹುದು. ನಿನ್ನ ಜೀವನ ಮುಗಿದಿಲ್ಲ. ಇಂದಲ್ಲ ನಾಳೆ ನೀನು ಏನಾದರೂ ದೊಡ್ಡದನ್ನ ಸಾಧಿಸಿಯೇ ಸಾಧಿಸ್ತೀಯ ರಘು.. ಆ ಭರವಸೆ ನನಗಿದೆ" ಎಂದು ನೀನು ಅಂದು ಹೇಳಿದ್ದು ನನಗೆ ಇನ್ನೂ ಕಿವಿಯಲ್ಲಿ ರಿಂಗಣಿಸ್ತಾ ಇದೆ. ಅದೇ ನನ್ನ ಬಾಳಿನ ಮುಖ್ಯ ತಿರುವು ಆಗಿತ್ತು ಅಂತ ಇವತ್ತು ನನಗೆ ಗೊತ್ತಾಗ್ತಿದೆ. "ಇನ್ನು ಮುಂದೆ ಈ ರೀತಿ ಮುಖ ಜೋಲು ಮಾಡ್ಕೊಂಡು ಕೂರಲ್ಲ; ಏನೇ ಬರಲಿ ಎದುರಿಸ್ತೀನಿ ಅಂತ ಮಾತು ಕೊಡು ರಘು" ಎಂದು ನೀನು ಕೈ ಚಾಚಿದೆಯಲ್ಲ, ಆ ಕ್ಷಣಕ್ಕೆ ನನಗೆ ಏನು ಮಾಡಬೇಕೆಂದೇ ತೋಚಿರಲಿಲ್ಲ. ಎರಡು ನಿಮಿಷ ಯೋಚಿಸಿ ಆಗಲಿ ಎಂದು ನಿನ್ನ ಕೈಯೊಳಗೆ ಕೈಯಿರಿಸಿ ಮುಗುಳ್ನಕ್ಕಿದ್ದೆ. ಅಂದಿನ ರಾತ್ರಿ ನನಗೆ ನಿದ್ದೆ ಬಂದಿರಲಿಲ್ಲ. ನೀನು ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಂದು ನಾ ಹಿಡಿದ ನಿನ್ನ ಕೈ ಸದಾ ನನ್ನೊಂದಿಗಿರುತ್ತದೆ ಎಂದೇ ಭಾವಿಸಿದೆ. ಅದೇ ನನಗೆ ಬಂದಿದ್ದನ್ನು ಎದುರಿಸುವ ಶಕ್ತಿಯನ್ನು ನೀಡಿತ್ತು. ಮುಂದಿನ ಸೆಮೆಸ್ಟರಿನಲ್ಲಿ ಚೆನ್ನಾಗಿ ಓದಿ ಎಲ್ಲಾ ವಿಷಯಗಳಲ್ಲೂ ತೇರ್ಗಡೆಯಾದೆ. ನನ್ನ ಫಲಿತಾಂಶವನ್ನು ನಾನು ನೋಡುವ ಮೊದಲೇ ನನ್ನ ಬಳಿ ಬಂದು "ರಘು, ನೀನು ಗ್ರೇಟ್ ಕಣೋ... ಎಲ್ಲಾ ಸಬ್ಜೆಕ್ಟಿನಲ್ಲೂ ಪಾಸಾಗಿದೀಯ.. ಈ ಸೆಮ್ ಡಿಸ್ಟಿಂಕ್ಷನ್ ಬೇರೆ ಬಂದಿದೆ" ಅಂತ ಹೇಳಿದ್ದು ನೋಡಿ ನನಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ. "ನಾನೂ ಪಾಸಾಗಿದೀನಿ ಕಣೋ" ಎಂದು ನೀನು ಹೇಳಿದಾಗಲೇ ನನಗೆ ತಿಳಿದಿದ್ದು ನಿನ್ನ ಫಲಿತಾಂಶ ಏನಾಗಿದೆ ಎಂಬುದನ್ನೂ ಕೇಳಿರಲಿಲ್ಲ ಅಂತ.

ನಮ್ಮಿಬ್ಬರ ಒಡನಾಟ ಅಂದಿನಿಂದ ಹೆಚ್ಚಿದ್ದು ನಿನಗೂ ಗೊತ್ತು. ಗೆಳೆಯರೆಲ್ಲ ನಮ್ಮ ಬೆನ್ನ ಹಿಂದೆ ನಮ್ಮನ್ನು ಲವರ್ಸ್ ಎಂದು ಹೇಳುತ್ತಿದ್ದರು. ನೀನು ಅದನ್ನು ಕೇಳಿಯೂ ಕೇಳದಂತೆ ಇರುತ್ತಿದ್ದಿದ್ದನ್ನು ನೋಡಿ ನಿನಗೂ ಅದೇ ಭಾವನೆಯಿದೆ ಎಂದು ಭಾವಿಸಿದೆ. ನಿನಗೆ ನನ್ನ ಬಗ್ಗೆ ಏನು ಅನಿಸಿಕೆ ಇತ್ತೋ ನಾ ಕಾಣೆ. ಆದರೆ ನಾನು ಮಾತ್ರ ನಿನ್ನನ್ನು ನನ್ನ ಬಾಳಿನ ಬೆಳಕು ಎಂದೇ ನಾನು ಭಾವಿಸಿದೆ. ಅದನ್ನೆಂದೂ ನಿನ್ನ ಮುಂದೆ ಹೇಳಬೇಕೆನಿಸಲೇ ಇಲ್ಲ ಅಥವಾ ಹೇಳಬೇಕೆನಿಸಿದರೂ ಅಕಸ್ಮಾತ್ ಅದರಿಂದ ನಮ್ಮ ಸ್ನೇಹಕ್ಕೆಲ್ಲಿ ಕುತ್ತು ಬರುವುದೋ ಎಂಬ ನನ್ನಲ್ಲಿನ ಅಂಜಿಕೆ ಕೇಳದಂತೆ ಮಾಡಿತೋ ಗೊತ್ತಿಲ್ಲ. ನಮ್ಮನ್ನು ನೋಡಿ ಎಲ್ಲರೂ ಒಳಗೇ ಹೊಟ್ಟೆಕಿಚ್ಚು ಪಡುತ್ತಿದ್ದಿದ್ದೂ ನನ್ನ ಗಮನಕ್ಕೆ ಬಂದಿತ್ತು. ಒಟ್ಟಿನಲ್ಲಿ ಆ ಎರಡು ವರ್ಷಗಳ ಕಾಲ ಮಿಂಚಿನಂತೆ ಬಂದು ಮರೆಯಾಗಿ ಹೋಯಿತು. ವಿದ್ಯಾಭ್ಯಾಸ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ನಾನು ನಿನಗೆ "ಆಲ್ ದಿ ಬೆಸ್ಟ್ ಫಾರ್ ಯುವರ್ ಫ್ಯೂಚರ್" ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ "ಥ್ಯಾಂಕ್ಸ್ ರಘು.. ನಿನಗೂ ಸಹ.. ಬಾಳಿನಲ್ಲಿ ಬಯಸಿದ್ದೆಲ್ಲ ಸಿಗಲಿ" ಎಂದು ಬೀಳ್ಕೊಟ್ಟೆ. ಆದರೆ ಆ ಕ್ಷಣವೂ, ಪ್ರತಿ ಕ್ಷಣವೂ ನಾ ಬಯಸಿದ್ದು ನಿನ್ನನ್ನೇ ಎಂದು ನಿನಗೆ ಹೇಗೆ ತಾನೇ ತಿಳಿದೀತು? ತಿಳಿಯಲು ನಾ ತಿಳಿಸಿದ್ದರೆ ತಾನೆ? ನೀ ಹೋದ ದಾರಿಯನ್ನೇ ನಾನು ನೋಡುತ್ತಿದ್ದೆ. ಒಮ್ಮೆ ತಿರುಗಿ ನೋಡುತ್ತೀಯೇನೋ ಎಂದು... ಊಹೂಂ, ನೀನು ತಿರುಗಲೇ ಇಲ್ಲ.

ಕಾಲೇಜು ಮುಗಿಸಿದ ತಕ್ಷಣ ನೀನು ಊರಿಗೆ ಹೋಗಿದ್ದರಿಂದ ನಿನ್ನ ಸಂಪರ್ಕ ಮಾಡಲೇ ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಕಾದೆ.. ನೀನು ಮತ್ತೆ ಸಿಗುತ್ತೀಯೇನೋ ಅಂತ.. ಆದರೆ ಸಿಗಲಿಲ್ಲ. ನೀನು ಸಿಗುತ್ತೀಯ ಅನ್ನೋ ಭರವಸೆ ನನಗೆ ಈಗ ಉಳಿದಿಲ್ಲ. ಆದರೆ ನಾನು ನನ್ನ ಕಾಲ ಮೇಲೆ ನಿಂತು ಸುಖವಾಗಿ ಇರೋದಕ್ಕೆ ಆ ದಿನ ನನಗೆ ಧೈರ್ಯ, ವಿಶ್ವಾಸ ತುಂಬಿದ ನೀನೇ ಕಾರಣ. ಅದನ್ನ ನನ್ನಿಂದ ಎಂದಿಗೂ ಮರೆಯೋಕೆ ಸಾಧ್ಯ ಇಲ್ಲ. ಮುಂದಿನ ಜನ್ಮವೇನಾದರೂ ಇದ್ದರೆ ಈ ಜನ್ಮದಲ್ಲಿ ಆದಂತಾಗದಿರಲಿ. ನೀನು ನನಗೆ ಸಿಗುವಂತಾಗಲಿ ಅಂತ ದೇವರ ಹತ್ರ ಕೇಳ್ಕೋತೀನಿ. ಯಾವ ಹೂವು ಯಾರ ಮುಡಿಗೋ ಅನ್ನುತ್ತಾರಲ್ಲ.. ಇದಕ್ಕೇ ಇರಬೇಕು ಕಣೇ. ಇನ್ನೇನೂ ಬರೆಯಲಾಗುತ್ತಿಲ್ಲ. ನಿನಗೆ ನನ್ನ ಬಗ್ಗೆ ಏನು ಭಾವನೆಯಿತ್ತು, ಅಥವಾ ಈಗ ಯಾವ ಭಾವನೆಯಿದೆ ಎಂದೇ ತಿಳಿಯದೆ ಇಷ್ಟೆಲ್ಲಾ ಬರೆದಿದ್ದಕ್ಕೆ ಕ್ಷಮಿಸಿಬಿಡು..

ಎಂದೆಂದೂ ನಿನ್ನವ,
ರಘು

ಸೋಮವಾರ, ಆಗಸ್ಟ್ 8, 2011

ಬರಬಾರದೇ ಒಮ್ಮೆ

ಬರಬಾರದೇ ಒಮ್ಮೆ
ಕಳೆದು ಹೋದ ನನ್ನ ಬಾಲ್ಯ
ತರಬಾರದೇ ಒಮ್ಮೆ
ಮೊಗದಿ ಮುಗ್ಧ ನಗುವಿನ ಲಾಸ್ಯ |ಪ|

ಮರ ಕೋತಿ ಕಣ್ಣಾ ಮುಚ್ಚಾಲೆ
ಕಳ್ಳ ಪೊಲೀಸ್ ರಾಜ ರಾಣಿ
ನಾಗರ ಪಂಚಮಿಗೆ ಉಯ್ಯಾಲೆ
ಮಳೆ ಬಂದರೆ ಕಾಗದ ದೋಣಿ |೧|

ಯಾರಿಗೆ ಬೇಕು ತೆಂಗಿನ ಕಾಯಿ
ಬೇಕಿದ್ದಿದ್ದು ಕೇವಲ ಕರಟ
ಬಯ್ತಾ ಇದ್ರೂ ತಂದೆ ತಾಯಿ
ಆಡ್ತಾ ಇದ್ದೆ ಲಗೋರಿ ಆಟ |೨|

ಇದ್ದರಾಯ್ತು ಬಾಲು ಬ್ಯಾಟು
ಇಲ್ದೇ ಹೋದರೆ ಚಿನ್ನಿ ದಾಂಡು
ಬೇಕೇ ಇಲ್ಲ ಗರಿಗರಿ ನೋಟು
ಅದು ಕೇವಲ ಕಾಗದ ತುಂಡು |೩|

ಮಂಗಳವಾರ, ಏಪ್ರಿಲ್ 26, 2011

ಅಲೌಕಿಕ

"ಯಾಕೋ, ಏನಾಯ್ತು? ಊರಿಗೆ ಹೋಗಿ ಬಂದ ಮೇಲೆ ಒಂಥರಾ ಇದೀಯ, ಆರಾಮಾಗಿದೀಯ ತಾನೆ?", ಇವನು ಕೇಳಿದ. ಯಾವಾಗಲೂ ಲವಲವಿಕೆಯಿಂದಿರುತ್ತಿದ್ದ ಸ್ನೇಹಿತ ಅನ್ಯಮನಸ್ಕನಾಗಿದ್ದಾನೆಂದು ಯಾರು ಬೇಕಾದರು ಹೇಳಬಹುದಿತ್ತು. ಯಾವುದೋ ಬಗೆಹರಿಯದ ತೊಳಲಾಟದಲ್ಲಿ ಅವನಿದ್ದಂತಿತ್ತು. ತುಸು ಹೊತ್ತು ಯೋಚಿಸಿ ನಿಧಾನವಾಗಿ ಒಂದು ನಿರ್ಧಾರಕ್ಕೆ ಬಂದವನಂತೆ ಮೌನ ಮುರಿದು ಹೇಳಿದ: "ಅಂಥದ್ದೇನೂ ಇಲ್ಲ; ನಿನ್ನೆ ಊರಿಂದ ಬರ್ಬೇಕಾದ್ರೆ ಬೈಕಲ್ಲಿ ಹಿಂದೆ ಯಾರೋ ಕೂತ ಹಾಗೆ ಇತ್ತು ಕಣೋ, ಆದ್ರೆ ಯಾರೂ ಇರ್ಲಿಲ್ಲ. ಅದನ್ನೇ ಯೋಚನೆ ಮಾಡ್ತಾ ಇದ್ದೆ ಅಷ್ಟೇ". "ಥೂ ನಿನ್ನ.. ಇಷ್ಟಕ್ಕೆ ಅಷ್ಟೊಂದು ಯೋಚನೆ ಮಾಡ್ತಾ ಇದೀಯ, ಅದೂ ನೀನು?", ಇವನಿಗೆ ನಂಬಿಕೆ ಬರಲಿಲ್ಲ.

ಅವನು ಚಿಕ್ಕವನಾಗಿದ್ದಾಗಿನಿಂದಲೂ ಧೈರ್ಯಶಾಲಿ. ಯಾವುದನ್ನೂ ನೇರವಾಗಿ ನಂಬದೇ ಸ್ವತಃ ಪರೀಕ್ಷಿಸಿ ನೋಡಿಯೇ ನಂಬುವ ಸ್ವಭಾವ ಆತನದು. ಅದರಲ್ಲೂ ದೆವ್ವ-ಭೂತಗಳಲ್ಲಿ ಅಷ್ಟಾಗಿ ನಂಬಿಕೆ ಇರಲಿಲ್ಲ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಪಣ ಕಟ್ಟಿ ರಾತ್ರಿ ಒಬ್ಬೊನೇ ಸ್ಮಶಾನಕ್ಕೆ ಹೋಗಿ ಅಲ್ಲೇನೂ ಇಲ್ಲ ಎಂದು ಸಾಧಿಸಿದವ. ಅಂತಹವನು ಈಗ ಈ ರೀತಿ ಯೋಚಿಸುತ್ತಾ ಕುಳಿತಿದ್ದನ್ನು ನೋಡಿದರೆ ಇವನಿಗೆ ಅವನು ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದು ಮನಗಾಣಲು ಹೆಚ್ಚು ಹೊತ್ತು ಬೇಕಾಗಲಿಲ್ಲ. "ಲೋ, ಏನೋ ಮುಚ್ಚಿಡ್ತಾ ಇದೀಯ; ಏನದು ಹೇಳು", ಎಂದ ಇವನ ಮಾತಿಗೆ ನಿಜ ಹೇಳದೆ ಬೇರೆ ವಿಧಿಯಿಲ್ಲ ಎನಿಸಿತು.

"ನಿನ್ನೆ ಮಧ್ಯಾಹ್ನ ಸುಮಾರು ೨ ಘಂಟೆಗೆ ನಮ್ಮೂರಿಂದ ಹೊರಟೆ. ತಿಪಟೂರಲ್ಲಿ ಚಿಕ್ಕಿನ ಬಿಟ್ಟು ಮುಂದೆ ಬರ್ತಾ ಇದ್ದೆ. ಹೈವೇಯಲ್ವಾ.. ರಸ್ತೆ ಚೆನ್ನಾಗಿದೆ. ಚಚ್ಗೊಂಡ್ ಬರ್ತಾ ಇದ್ದೆ. ಅಷ್ಟರಲ್ಲಿ ಸೂರ್ಯ ಮುಳುಗಿ ಸ್ವಲ್ಪ ಕತ್ತಲಾಯ್ತು. ಹಾಗೇ ಕೆ.ಬಿ. ಕ್ರಾಸ್ ದಾಟಿ ಮುಂದೆ ಬರ್ಬೇಕಾದ್ರೆ ಸ್ವಲ್ಪ ದೂರ ಬಂದಿರ್ಬಹುದು, ಇದ್ದಕ್ಕಿದ್ದಂತೆ ಬೈಕ್ ಭಾರ ಅನ್ಸೋಕೆ ಶುರು ಆಯ್ತು. ಮೊದಲು ಬ್ಯಾಗ್ ಇರ್ಬೇಕು ಅಂದ್ಕೊಂಡೆ. ಆದರೆ ನನ್ನ ಬ್ಯಾಗಲ್ಲಿ ಭಾರ ಆಗುವಂಥದ್ದು ಏನೂ ಇರ್ಲಿಲ್ಲ. ಅಷ್ಟಾದ್ರೂ ನಾನು ಬೈಕ್ ನಿಲ್ಲಿಸ್ಲಿಲ್ಲ. ಮೊದಲಿದ್ದ ವೇಗದಲ್ಲೇ ಹೊಡೀತಾ ಇದ್ದೆ. ಎಡಗಡೆ ಒಂದು ದೊಡ್ಡ ಕೆರೆ ಬಂತು. ಆ ಕೆರೆ ಏರಿ ದಾಟಿ ಮುಂದೆ ಹೋಗ್ತಾ ಹೋಗ್ತಾ ಬೈಕ್ ಮತ್ತೂ ಭಾರ ಆಗ್ತಿದೆ ಅನಿಸ್ತು. ಹಿಂದೆ ಯಾರೋ ಕೂತಿದಾರೇನೋ ಅನ್ಸೋಕೆ ಶುರು ಆಯ್ತು. ಸೈಡ್ ಮಿರರ್‌ನಲ್ಲಿ ಹಿಂದೆ ನೋಡಿದೆ. ಏನೋ ಒಂಥರಾ ಬೆಳಕು ಕಾಣಿಸ್ತು. ಆಗ ಯಾಕೋ ಸ್ವಲ್ಪ ವಿಚಿತ್ರ ಅಂತ ಅನಿಸ್ಲಿಕ್ಕೆ ಶುರು ಆಯ್ತು. ಏನಿದು ನೋಡೇ ಬಿಡೋಣ ಅಂತ ಸ್ವಲ್ಪ ಮುಂದೆ ಹೋಗಿ ಬೈಕ್ ನಿಲ್ಲಿಸಿ ಕೆಳಗಿಳಿದೆ"

ಇಷ್ಟು ಹೊತ್ತು ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದ ಇವ ಮಧ್ಯೆ ಬಾಯಿ ಹಾಕಿದ: "ಏನೂ ಇರ್ಲಿಲ್ಲ ತಾನೆ? ಸುಮ್ನೆ ಏನೇನೋ ಅಂದ್ಕೊಂಡಿರ್ತೀಯ". ಅವ ಮುಂದುವರೆಸಿದ: "ಹ್ಮ್.. ಏನೂ ಇರ್ಲಿಲ್ಲ; ಆದರೆ ನಾನು ಇಷ್ಟು ಹೊತ್ತು ಹೈವೇನಲ್ಲಿ ಬರ್ತಿದೀನಿ ಅಂದ್ಕೊಂಡ್ನಲ್ಲ, ಅಲ್ಲಿ ಹೈವೇ ಇರ್ಲೇ ಇಲ್ಲ. ಹಳ್ಳಿಯೊಂದರ ಮಣ್ಣು ರಸ್ತೆ ಬದಿಯಲ್ಲಿ ನನ್ನ ಬೈಕ್ ನಿಂತಿತ್ತು. ಅದು ಹ್ಯಾಗೆ ಆ ರಸ್ತೆಗೆ ಹೋದೆ ಅಂತ ತಿಳೀತಿಲ್ಲ". "ಎಲ್ಲ ನಿನ್ನ ಭ್ರಮೆ", ಇವ ಉದ್ಗರಿಸಿದ. "ನಾನೂ ಹಾಗೇ ಅಂದ್ಕೊಂಡೆ ಕಣೋ; ಆದ್ರೆ ಆ ದಾರಿ ತಪ್ಪು ಅಂತ ಗೊತ್ತಾದ್ಮೇಲೆ ಅಲ್ಲಿಂದ ಬಂದ ದಾರಿಯಲ್ಲೆ ವಾಪಸ್ ಹೊರಟೆ. ವಿಚಿತ್ರ ಅಂದ್ರೆ ನನ್ ಬೈಕ್ ಮೊದಲಿನ ಥರಾನೆ ಹಗುರ ಅನ್ಸೋಕೆ ಶುರು ಆಯ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಒಬ್ಬ ನಡೆದುಕೊಂಡು ಹೋಗ್ತಾ ಇದ್ದ. ಅವನತ್ರ ಹೈವೇಗೆ ಹೋಗೋದು ಹೇಗೆ ಅಂತ ಕೇಳಿದೆ. ಅವನು ಇಲ್ಲಿಂದ ಸುಮಾರು ೫-೬ ಕಿಲೋಮೀಟರ್ ದೂರ ಹೋದ್ರೆ ಹೈವೇ ಸಿಗುತ್ತೆ ಅಂದ. ಸರಿ ಅಂತ ಹಾಗೆ ಮುಂದೆ ಬಂದು ಹೈವೇ ಸೇರ್ಕೊಂಡೆ."

"ಸರಿ ಹೋಯ್ತು", ಇವನೆಂದ. "ಮನಸ್ಸಲ್ಲೇ ಏನೇನೋ ಅಂದ್ಕೊಂಡು ಸುಮ್ನೇ ಈ ಥರ ಡಲ್ಲಾಗಿದೀಯ. ಈಗಾದ್ರೂ ಪಕ್ಕಾ ಆಯ್ತಾ ಅದು ನಿನ್ ಭ್ರಮೆ ಅಂತ?". ಅವಂಗೆ ಕಿರಿಕಿರಿಯಾಗಲಾರಂಭಿಸಿತು. "ಲೋ, ಹೋಗ್ಬೇಕಾದ್ರೆ ಭ್ರಮೆಯಲ್ಲೇ ಇದ್ದೆ ಅಂದ್ಕೋ. ಆದ್ರೆ ವಾಪಸ್ ಬರ್ಬೇಕಾದ್ರೆ ನಾನು ಸರಿಯಾಗೇ ಇದ್ದೆ. ಆಯ್ತಾ? ನನಗ್ಯಾಕೆ ಅದು ವಿಚಿತ್ರ ಅಂತ ಅನ್ಸ್ತಾ ಇದೆ ಅಂದ್ರೆ, ನಾನು ಆ ಹೈವೇಗೆ ಬಂದು ಸೇರ್ಕೊಂಡ್ನಲ್ಲ, ಅಲ್ಲಿಂದ ನಾನು ಈ ಮಣ್ಣು ರಸ್ತೆಗೆ ಬರ್ಬೇಕು ಅಂದ್ರೆ ಬಲಕ್ಕೆ ತಿರುಗಬೇಕು. ಇರೋ ಟ್ರಾಫಿಕ್ಕಲ್ಲಿ ಮಧ್ಯ ನಿಲ್ಲಿಸ್ದೇ ನಾನ್ ಬಂದ ಥರ ಈ ಕಡೆ ಬಂದಿರ್ಲಿಕ್ಕೆ ಸಾಧ್ಯನೇ ಇಲ್ಲ. ಅದೂ ಅಲ್ಲದೇ ನಾನು ವಾಪಸ್ ಬರೋಕಿಂತ ಮುಂಚೆ ನನ್ನ ಬೈಕಿನ ಸೀಟ್ ನೋಡಿದಾಗ ಅಲ್ಲಿ ಆಗಷ್ಟೇ ಯಾರೋ ಕೂತು ಎದ್ದು ಹೋದಂತಿತ್ತು. ಸೀಟಿನ ಹಿಂಭಾಗ ಕೆಳಗೆ ಹೋಗಿತ್ತು. ಹೆದ್ದಾರಿಗೆ ಬಂದು ಸೇರಿದಾಗ ಬೈಕಿನ ಓಡೋಮೀಟರ್ ಕೂಡ ಗಮನಿಸಿದೆ. ಅದು ಕೂಡ ೧೧ ಕಿಲೋಮೀಟರ್ ಹೆಚ್ಚು ತೋರಿಸುತ್ತಿತ್ತು!".

ಇವನಿಗೆ ಏನನ್ನಿಸಿತೋ ಏನೋ, ತಕ್ಷಣ ಬೈಕಿನ ಬಳಿ ಹೋದ. ನಾಲ್ಕೈದು ತಿಂಗಳ ಹಿಂದಷ್ಟೇ ಕೊಂಡಿದ್ದ ಹೊಸ ಬೈಕು. ಸೀಟಿನ ಹಿಂಭಾಗ ಅವ ಹೇಳಿದಂತೆ ಕೆಳಗೆ ಹೋಗಿದ್ದೇ ಅಲ್ಲದೆ ಒಂದು ಬದಿಯಲ್ಲಿ ಸ್ವಲ್ಪ ಹರಿದಿತ್ತು. ಘಟನೆಯ ಬಗ್ಗೆ ಇನ್ನೂ ಕುತೂಹಲ ಮೂಡಿತು. ಗೂಗಲ್ ಮ್ಯಾಪಿನಲ್ಲಿ ಹೋಗಿ ಬಂದ ಜಾಗದ ವಿವರ ನೋಡಿದ. ಅಲ್ಲಿ ಮತ್ತಷ್ಟು ಆಶ್ಚರ್ಯ ಕಾದಿತ್ತು. ಗೂಗಲ್ ಮ್ಯಾಪಿನಲ್ಲಿ ನೋಡಿದಾಗ ಅವ ಹೇಳಿದ ಸ್ಥಳ ಹಾಗೆಯೇ ಇತ್ತು. ಒಂದು ಮಣ್ಣಿನ ದಾರಿ; ಹೆದ್ದಾರಿಯಿಂದ ಅಲ್ಲಿಗೆ ಹೋಗಲು ಬಲಕ್ಕೆ ತಿರುಗಬೇಕು. ಆದರೆ ಆ ಮಣ್ಣಿನ ರಸ್ತೆಯ ಸುತ್ತ ಮುತ್ತ ಯಾವುದೇ ಕೆರೆ ಇರಲಿಲ್ಲ!

ಇವನು ಇಷ್ಟೆಲ್ಲ ಮಾಡುವುದನ್ನು ನೋಡುತ್ತಿದ್ದ ಅವನು ಕೇಳಿದ: "ಈಗಾದ್ರೂ ಗೊತ್ತಾಯ್ತಾ ನಾನು ಯಾಕೆ ಯೋಚನೆ ಮಾಡ್ತಾ ಇದ್ದೆ ಅಂತ?". ನಂಬಲೇಬೇಕಾದ ಘಟನೆ ಅದಾಗಿತ್ತು. ಆದರೆ ಅಲ್ಲಿ ಕುಳಿತು ಎದ್ದು ಹೋಗಿದ್ದು ಯಾರು, ಅಥವಾ ಏನು; ಅವನು ಅಲ್ಲಿ ಕಂಡ ಕೆರೆ ಯಾವುದು ಎಂಬುದು ಮಾತ್ರ ಒಂದು ನಿಗೂಢವಾಗಿಯೇ ಉಳಿದಿದೆ.

(ಇದು ಮಾರ್ಚ್ ೭, ೨೦೧೦ರಂದು ನನ್ನ ಗೆಳೆಯ ಬೆಂಗಳೂರಿಗೆ ಬರುವಾಗ ನಡೆದ ಸತ್ಯ ಘಟನೆ)

ಬುಧವಾರ, ಡಿಸೆಂಬರ್ 29, 2010

ನಿನ್ನೆ

ಏನೋ ಒಂದು ಆತಂಕ. ಕುಳಿತಲ್ಲೇ ಕೈ ಬೆವರುತ್ತಿದೆ. ಸುತ್ತ ಮುತ್ತ ಇರುವವರೆಲ್ಲಾ ಗಡಿಬಿಡಿಯಲ್ಲಿ ತಮ್ಮ ಚೀಲದಿಂದ ಹೋಂವರ್ಕ್ ಪುಸ್ತಕ ಹೊರ ತೆರೆಯುತ್ತಿದ್ದರೆ ನಾನು ಹೆಸರನ್ನುಳಿದು ಮತ್ತೇನನ್ನೂ ಬರೆದಿರದ ಪುಸ್ತಕವನ್ನು ಕೈನಲ್ಲಿ ಹಿಡಿದು ಕುಳಿತ್ತಿದ್ದೆ. ಹೋಂವರ್ಕ್ ಮಾಡಿಲ್ಲ...

ಮಿಸ್ ಎಲ್ಲರಿಗೂ ತಮ್ಮ ಪುಸ್ತಕವನ್ನು ಅವರ ಮೇಜಿನ ಮೇಲೆ ಇಡಲು ಹೇಳುತ್ತಿದ್ದಾಗ ನನ್ನ ಹೋಂವರ್ಕ್ ಪುಸ್ತಕದ ಗರಿಗರಿ ಹಾಳೆಗಳ ವಾಸನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಒಬ್ಬೊಬ್ಬರಾಗಿ ಪುಸ್ತಕ ಇಟ್ಟು ಹಾಜರಿ ಹಾಕಿಸಿ ಬರುತ್ತಿದ್ದಾರೆ. ನನ್ನ ಪಕ್ಕದವ ಈಗಷ್ಟೇ ಎದ್ದು ಹೋದ, ಮುಂದಿನವ ನಾನೇ... ಕೈ ನಡುಗುತ್ತಿವೆ. ಗಂಟಲು ಒಣಗಿ ಬಹಳ ಹೊತ್ತಾಗಿದೆ. ಕಣ್ಣು ನೀರ ಹನಿಯಿಂದ ಮಂಜಾಗುತ್ತಿದೆ. ನನ್ನ ಸರದಿ...

ನಿನ್ನಿಂದಲೇ... ನಿನ್ನಿಂದಲೇ..

ಹುಲಿಯ ಮುಂದೆ ನಿಂತ ಹರಿಣದ ಮನಕ್ಕೆ ಆಹ್ಲಾದಕರವಾದ ಎಲ್ಲಿಂದಲೋ ತೇಲಿ ಬಂದ ಸಂಗೀತ ಸಾಂತ್ವನದ ಸಿಂಚನ ಮಾಡಿತ್ತು. ಹಾಡಿನಲ್ಲಿ ಮೈರೆಯಬೇಕೆನ್ನುವಷ್ಟರಲ್ಲಿ ಗಾಢ ಮೌನ.

"ನೇಕ್ಸ್ಟ್..."

ಮಿಸ್‌ನ ಗಟ್ಟಿಯಾದ ದ್ವನಿ ನನ್ನನ್ನು ಅಷ್ಟೇ ಗಟ್ಟಿಯಾಗಿ ನಡುಗಿಸಿಬಿಟ್ಟಿತು. ನನ್ನ ಖಾಲಿಪುಸ್ತಕ ಹಿಡಿದು ನಿಧಾನವಾಗಿ ಅವರೆಡೆಗೆ ಹೊರಟೆ. ನನ್ನ ಎದೆಯ ಬಡಿತ ಜೋರಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಏನೆಂದು ಹೇಳಲಿ? ಹತ್ತು ಹಲವು ಕಾಲ್ಪನಿಕ ಕಾರಣಗಳನ್ನು ಮನ್ನಸ್ಸು ಯೋಚಿಸುತ್ತಿತ್ತು.

ನಿನ್ನಿಂದಲೇ... ನಿನ್ನಿಂದಲೇ...

ಅರೇ, ಈ ಹಾಡನ್ನು ಎಲ್ಲೋ ಕೇಳಿದ್ದೀನಲ್ಲಾ!

ನನ್ನ ಖಾಲಿ ಪುಸ್ತಕವನ್ನು ಅವರ ಮೇಜಿನ ಮೇಲಿಟ್ಟೆ. ಅಂದಿನ ಹೋಂವರ್ಕ್ ಇರುವ ಪುಟವನ್ನು ಎಲ್ಲರೂ ತೆರೆದಿಟ್ಟಿದ್ದರು. ಮಿಸ್ ನನ್ನನ್ನೇ ನೋಡುತ್ತಿದ್ದರೆ ನಾನು ಅವರ ಕೈನಲ್ಲಿರುವ ಬೆತ್ತದತ್ತ ನೋಡಿ ಏನೂ ಮಾಡಲೂ ತೋಚದೆ ನಿಂತುಬಿಟ್ಟಿದ್ದೇನೆ.

ಜ್ವರ ಬಂದಿತ್ತು ಅಂತ ಹೇಳಲಾ, ಪುಸ್ತಕ ಕಳೆದು ಹೋಗಿತ್ತು ಆದ್ದರಿಂದ ಇಂದು ಹೊಸ ಪುಸ್ತಕ ಇಟ್ಟಿದ್ದೇನೆಂದು ಹೇಳಲಾ ಅಥವಾ ತೆರೆದಿರುವ ತರಗತಿಯ ಬಾಗಿಲಿನಿಂದ ಓಡಿಹೋಗಲಾ? ಊಹೂಂ, ಯಾವುದಕ್ಕೂ ಧೈರ್ಯ ಸಾಲುತ್ತಿಲ್ಲ. ಬೆತ್ತದೇಟು ಬೀಳುವುದು ಕಾಯಂ...

ನಿನ್ನಿಂದಲೇ... ನಿನ್ನಿಂದಲೇ...

ಅರೇ ಇದು ನನ್ನ ಮೊಬೈಲ್‌ನ ಅಲಾರಂ ಟ್ಯೂನ್. ನಾನು ಕನಸು ಕಾಣುತ್ತಿದ್ದೇನೆಯೇ? ಹೌದು ನಾನು ಶಾಲಾ ಮಟ್ಟವನ್ನು ಮೀರಿ ಇಂಜಿನೀರಿಂಗ್ ಮುಗಿಸಿ ಬಹಳ ವರ್ಷಗಳೇ ಆಯ್ತಲ್ಲಾ!

ಎಲ್ಲಿಂದಲೋ ಕಳಚಿಬಿದ್ದ ಅನುಭವ. ತನ್ನಪಾಡಿಗೆ ಹಾಡಿಕೊಳ್ಳುತ್ತಿದ್ದ ಮೊಬೈಲನ್ನು ಮಲಗಿಸಿ ಮತ್ತೆ ಹೊದಿಕೆ ಎಳೆದುಕೊಂಡು ಮಲಗಿದೆ. ನಿದ್ರೆ ಹತ್ತಲಿಲ್ಲ. ಏನನ್ನೋ ಕಳೆದುಕೊಂಡ ಬೇಸರ. ನೂರು ಬೆತ್ತದೇಟು ಬಿದ್ದರೂ ಸರಿ, ಕಳೆದು ಹೋದ ಆ ದಿನಗಳೊಳಗೆ ಧುಮುಕಬೇಕೆನ್ನುವ ಹಂಬಲ. ಬೆತ್ತದೇಟಿಗೆ ಹೆದರಿ ಬಿಗಿ ಹಿಡಿದಿದ್ದ ಮುಷ್ಟಿಯನ್ನು ನಿಧಾನವಾಗಿ ಸಡಿಲಿಸಿದೆ...

ಬುಧವಾರ, ಮಾರ್ಚ್ 24, 2010

ಪ್ರತಿಬಿಂಬ

ಹೃದಯವೆಂಬ ಕನ್ನಡಿಯಲಿ
ಬಿಂಬಿಸಿದ ನಿನ್ನ ಛಾಯೆಯ
ನಗುವಿನಲಿ ಮರೆಯಲೆತ್ನಿಸಿದೆ
ಆದರೆ ಕಣ್ಣೀರಿನಲಿ ನೀ ಮೂಡಿದ್ದೆ
ನಿದ್ರೆಯಲಿ ಮುಚ್ಚಲೆತ್ನಿಸಿದೆ
ಕನಸಿನಲ್ಲೂ ನೀ ಬಂದು ಕುಳಿತಿದ್ದೆ
ವಿದ್ಯಾರ್ಜನೆಯ ಬೆಳಕ ಹಚ್ಚಿದೆ
ಆ ದೀಪದಡಿಯಲ್ಲಿ ನೀ ನಕ್ಕಿದ್ದೆ
ಕೊನೆಗೆ ಬಳಲಿ ಕನ್ನಡಿಯ ಒಡೆದಾಗ
ನೂರು ಚೂರಿನಲ್ಲೂ ನೀ ಕಾಡುತ್ತಿರುವೆ

ಬುಧವಾರ, ಡಿಸೆಂಬರ್ 10, 2008

ನೀನಾರಿಗಾದೆಯೋ ಎಲೆ ಮಾನವಾ? ಹರಿ ಹರಿ ಗೋವು ನಾನು

ಗೋರಕ್ಷಣೆಯ ಬಗ್ಗೆ ಅನೇಕ ಕಡೆ, ಅನೇಕ ರೀತಿಯಲ್ಲಿ ಚರ್ಚೆಗಳಾಗುತ್ತಿವೆ. ಅದೇನೇ ಇರಲಿ, ಇದರ ಬಗ್ಗೆ ಈಚೆಗೆ ಧರ್ಮಭಾರತಿಗಾಗಿ ಯಜ್ಞೇಶ್ ಬರೆದಿರುವ ಲೇಖನ ಓದಿದಾಗ "ನೀನ್ಯಾರಿಗಾದೆಯೋ ಎಲೆ ಮಾನವ" ಎಂಬ ನುಡಿಗಟ್ಟಿನ ಪೂರ್ಣಪಾಠ ಹಾಕಬೇಕೆನಿಸಿತು. ಹಾಕಿದ್ದೇನೆ:

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||


ನಗರಗಳಲ್ಲಿ ಗುಬ್ಬಿ ಗಿಳಿಗಳು ಕಣ್ಮರೆಯಾಗಿವೆ. ಇತ್ತೀಚಿಗೆ ನಾನು ಎಲ್ಲೋ ಓದಿದಂತೆ ಮಿಂಚು ಹುಳು, ಕೆಲವು ಬಗೆಯ ಏಡಿಗಳು ಕೂಡ ವಿನಾಶದಂಚಿನಲ್ಲಿದೆ. ಗೋವು ಒಂದೇ ಅಲ್ಲ, ಎಲ್ಲ ಪ್ರಾಣಿ ಪಕ್ಷಿಗಳನ್ನೂ ಕಾಪಾಡುವ ಜವಾಬ್ದಾರಿ ಈಗ ಮನುಷ್ಯನ ಮೇಲಿದೆ.

ಎಮ್ಮೆ ತಮ್ಮಣ್ಣ ಚಿತ್ರದಲ್ಲಿರುವ ಹಾಡಿನ ವೀಡಿಯೊ ಕೂಡ ಇದೆ..

(ಕೊಂಡಿ ನೀಡಿದ ಅಂತರ್ವಾಣಿಯ ಜಯಶಂಕರ್ ಅವರಿಗೆ ಧನ್ಯವಾದಗಳು)

ಕೊಸರು (ಸಂಪದದಲ್ಲಿ ಗಿರೀಶ್ ಬರೆದಿದ್ದು): ನೀನಾರಿಗಾದೆಯೋ ಎಲೆ ಮಾನವಾ!!

ಭಾನುವಾರ, ನವೆಂಬರ್ 16, 2008

ಕಥೆ ಕಥೆ ಕಾರಣ, ಬೆಕ್ಕಿನ ತೋರಣ - ನಂಗೂ ಗೊತ್ತು!

ಕಥೆ ಕಥೆ ಕಾರಣ ಎಂಬ ಶರ್ಮರ ಪೋಸ್ಟ್ ನೋಡಿದಾಗ ಬಾಲ್ಯದಲ್ಲಿ ಹೇಳುತ್ತಿದ್ದ ಪದ್ಯವೊಂದು ನೆನೆಪಾಯಿತು. ಇನ್ನೂ ಸ್ವಲ್ಪ ದಿನ ಕಳೆದರೆ ಮರೆತು ಹೋಗಬಹುದು. ಹಾಗಾಗಿ ಈಗಲೇ ಹಾಕುತ್ತಿದ್ದೇನೆ...

ಕಥೆ ಕಥೆ ಕಾರಣ
ಬೆಕ್ಕಿನ ತೋರಣ
ಸಿದ್ಧೆಲ್ಲಿಪ್ಪಣ
ಸೀತಾ ದೇವಿಗೆ
ಹಿಟ್ ಕುಟ್ಟಲ್ ಕಪ್ಪೆ ಬಂತು
ಕಪ್ಪೆ ತಿನ್ನಲ್ ಹಾವ್ ಬಂತು
ಹಾವ್ ಹೊಡ್ಯಲ್ ದೊಣ್ಣೆ ಬಂತು
ದೊಣ್ಣೆ ಸುಡಲ್ ಬೆಂಕಿ ಬಂತು
ಬೆಂಕಿ ನಂದ್ಸಲ್ ನೀರ್ ಬಂತು
ನೀರ್ ಕುಡ್ಯಲ್ ಬಸವ ಬಂದ
ಬಸವನ್ ಕಟ್ಹಾಕಲ್ ದಾಬ್ ಬಂತು
ದಾಬ್ ಹರ್ಯಲ್ ಇಲಿ ಬಂತು
ಇಲಿ ಹೊಡ್ಯಲ್ ಅಜ್ಜ ಬಂದ
ಅಜ್ಜನ್ ಹೊಡ್ಯಲ್(ಕರ್ಯಲ್) ಅಜ್ಜಿ ಬಂತು
** *** ಮೂರು ಕಟ್ಟೆರ
ಕಟ್ಟಂ ಕಟ್ಟಂ ಕಟ್ಟಂ!!!


ಇದರಲ್ಲೇನಾದರೂ ತಪ್ಪಿದ್ದರೆ ಗೊತ್ತಿದ್ದವರು ತಿಳಿಸಿ.

ಸೋಮವಾರ, ಸೆಪ್ಟೆಂಬರ್ 29, 2008

ಶ್ವಾನ ಪುರಾಣ

ನಾಯಿಯಷ್ಟು ಕೃತಜ್ಞ ಪ್ರಾಣಿ ಇನ್ನೊಂದಿಲ್ಲ. ಯಾರೋ ಒಬ್ಬ ಹೇಳಿದಂತೆ ತನಗಿಂತಲೂ ಹೆಚ್ಚು ತನ್ನ ಒಡೆಯನನ್ನು ಪ್ರೀತಿಸುವ ಪ್ರಾಣಿ ನಾಯಿಯೊಂದೇ. ಇಂತಿಪ್ಪ ನಾಯಿ ಕೆಲವೊಮ್ಮೆ ತನ್ನ ಕುಚೇಷ್ಟೆಗಳಿಂದ irritate ಮಾಡುವುದೂ ಇದೆ.

ಬೆಳಿಗ್ಗೆ ಎದ್ದು ಅಮ್ಮ ದೇವರ ಸ್ತುತಿ ಮಾಡುತ್ತಾ ಬಾಗಿಲಿಗೆ ರಂಗೋಲಿ ಹಾಕಿ ಒಳಗೆ ಹೋಗುತ್ತಾಳೆ. ಹೋಗಿ ಮತ್ತೆ ಹೊರಬರುವಷ್ಟರಲ್ಲಿ ರಂಗೋಲಿಯ ಮೇಲೆ ನಾಯಿಯೊಂದು ಬಂದು ಮಲಗಿರುತ್ತದೆ! "ಥತ್ ಹೊಲಸು ನಾಯಿ" ಎಂದು ಬಯ್ಯುತ್ತಾ ಅದನ್ನು ಓಡಿಸಿ ಒಳಗೆ ಹೋಗುವಷ್ಟರಲ್ಲಿ ಮತ್ತೆ ಹಾಜರ್!! ಇದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲವಾದರೂ ನನಗೆ ಯಾರೋ ಹಿರಿಯರು ಹೇಳಿದಂತೆ ರಂಗೋಲಿ ನಾಯಿಗಳಿಗೆ ಮಣೆ ಹಾಕಿಟ್ಟಂತೆ ಕಂಡು ಬರುವುದಂತೆ. ಅದೇ ಕಾರಣಕ್ಕೆ ಅವು ಅಲ್ಲಿ ಬಂದು ಆಸೀನವಾಗುವುದಂತೆ.

ಅಪ್ಪನ ಪೂಜೆ ಕೊನೆಯ ಹಂತಕ್ಕೆ ಬಂದಿರುತ್ತದೆ. ಮಂಗಳಾರತಿಯ ಸಮಯ ಅಪ್ಪ ಆರತಿ ಘಂಟೆ ಬಾರಿಸಲಾರಂಭಿಸಿದಾಗ ನಾನು ಹೋಗಿ ಜಾಗಟೆ ಬಾರಿಸುತ್ತೇನೆ. ಇದ್ದಕ್ಕಿದ್ದಂತೆ ಹೊರಗೆ ನಾಯಿಗಳ ಬೊಗಳಾಟ ಶುರುವಾಗುತ್ತದೆ. ಒಂದು ನಾಯಿ "ಊಽಽಽಽ" ಎಂದು ಬಾಯ್ತೆರೆಯುವುದೇ ತಡ, ಎಲ್ಲಿರುತ್ತವೆಯೋ ಏನೋ, ಊರಿನ ಎಲ್ಲಾ ನಾಯಿಗಳೂ ಒಮ್ಮೆಲೇ ದೇವರಿಗೆ ಸೇವೆ ಮಾಡಲಾರಂಭಿಸುತ್ತವೆ. ಅಪ್ಪನ ಪೂಜೆ ಮುಗಿದರೂ ಅವುಗಳ ಶಂಖಸೇವೆ ಮುಗಿದಿರುವುದಿಲ್ಲ.

ಸಣ್ಣವನಿದ್ದಾಗ ನನಗೆ ವಿಪರೀತ ನಾಯಿಮರಿಗಳ ಹುಚ್ಚಿತ್ತು. ವಿಪರ್ಯಾಸವೆಂಬಂತೆ ಅಕ್ಕಪಕ್ಕದ ಮನೆಯ ನಾಯಿಗಳೂ ನಮ್ಮ ಮನೆಯ ಸರಹದ್ದಿಗೆ ಬಂದೇ ಮರಿ ಹಾಕುತ್ತಿದ್ದವು. ಪಾಪ, ಅವಕ್ಕೇನು ಗೊತ್ತು, ನಾನು ಆಟ ಆಡಿಸುವ ನೆಪದಲ್ಲಿ ಮರಿಗಳನ್ನು ಗೋಳು ಹೊಯ್ದುಕೊಳ್ಳುತ್ತೇನೆ ಎಂದು!! ಕೆಲವೊಂದು ಬಾರಿ ಅವುಗಳನ್ನು ತೀರಾ ಹಿಂಸಿಸಿದ್ದೂ ಇದೆ.

ನಾಯಿಯೊಂದು ಮರಿ ಹಾಕಿ ಇನ್ನೂ ೨ ತಿಂಗಳಾಗಿತ್ತು. ಅವುಗಳಿಗೆ ಇನ್ನೂ ಸರಿಯಾಗಿ ಓಡಲೂ ಬರುತ್ತಿರಲಿಲ್ಲ; ನನ್ನ ಕೈಗೆ ಸಿಕ್ಕಿಬಿಡುತ್ತಿದ್ದವು. ನಮ್ಮ ಮನೆಯಲ್ಲಿ ಮನೆಯ ಕಟ್ಟೆಯಿಂದ ಬಾವಿ ಕಟ್ಟೆಗೆ ೨ ಅಡಿ ಅಷ್ಟೇ. ಆದರೆ ಆ ನಾಯಿ ಮರಿಗೆ ಅದನ್ನು ಹಾರಿ ದಾಟಲು ಬರುತ್ತಿರಲಿಲ್ಲ. ಅದನ್ನು ಕಲಿಸುವುದು ಬೇಡವೇ! ಅದಕ್ಕೆ ಸರಪಳಿ ಹಾಕಿ ಎಳೆದು ಆ ಕಡೆಯಿಂದ ಈ ಕಡೆಗೆ ಹಾರುವಂತೆ ಮಾಡಲು ಹೋಗಿ, ಅದು ಕೆಳಗೆ ಬಿದ್ದು, ಅದರ ಮೂತಿಗೆ ಪೆಟ್ಟಾಗಿ, "ಕುಂಯ್ಯ್" ಎಂದು ಕೂಗಿ, ಅಮ್ಮ ಬಂದು "ಅದು ದೊಡ್ಡಾದ ಮೇಲೆ ತಾನೇ ಹಾರದ್ನ ಕಲೀತು, ಬಿಡು ಅದನ್ನ" ಎಂದು ಕೂಗಿದರೂ ಕೇಳದೆ, ನನ್ನೊಳಗಿನ ದ್ರೋಣಾಚಾರ್ಯನಿಗೆ ಇದೊಂದು ಸವಾಲೆಂಬಂತೆ ಸ್ವೀಕರಿಸಿ, ಇನ್ನೂ ಒಂದು ಹತ್ತಿಪ್ಪತ್ತು ಬಾರಿ ಪ್ರಯತ್ನಿಸಿ, ಸೋತು, "ಮಳ್ಳ್ ನಾಯಿ ಮರಿ. ಇಷ್ಟ್ ದೂರ ಹಾರಲೂ ಬರ್ತಿಲ್ಲೆ" ಎಂದು ಶಪಿಸುತ್ತಾ ಇನ್ನೊಂದು ನಾಯಿ ಮರಿಗೆ ಟ್ರೇನಿಂಗ್ ಶುರು ಮಾಡುತ್ತಿದ್ದೆ. ಈಗ ನೆನೆಸಿಕೊಂಡರೆ ನಗು ಬರುತ್ತದೆ, ಪಶ್ಚಾತ್ತಾಪವೂ ಆಗುತ್ತದೆ. ಪಾಪ, ಎರಡು ತಿಂಗಳ ಮರಿಗಳು... ಏನೇನೋ ಮಾಡುತ್ತಿದ್ದೆ. ಒಮ್ಮೆ ದೊಡ್ಡ ನಾಯಿಯೊಂದರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದ್ದೂ ಇದೆ! ಪುಣ್ಯಕ್ಕೆ ಕಚ್ಚಿರಲಿಲ್ಲ!!

"ಕುನ್ನಿಗೆ ಕೆಲಸವಿಲ್ಲ, ಕೂರಲು ತೆರಪಿಲ್ಲ" ಎಂದು ಒಂದು ಗಾದೆಯಿದೆ. ಏನೂ ಕೆಲಸವಿಲ್ಲದಿದ್ದರೂ ನಾಯಿಗಳು ಸುಮ್ಮನೆ ಕೂರುವುದಿಲ್ಲ. ಎಲ್ಲೆಲ್ಲೋ ಸುತ್ತುತ್ತಿರುತ್ತವೆ. ಒಂದು ಸಾರಿ ಊರಿನಿಂದ ಹರಿಹರಕ್ಕೆ ಹೊರಟಿದ್ದೆವು. ನಾಯಿ ಮರಿಯೊಂದು ಮೊದಲ ಬಾರಿ ತನ್ನ ತಾಯಿಯೊಂದಿಗೆ ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿತ್ತು. "ನಾಯಿಗೆ ಅಡ್ಡ ಜಂಬರ ಬಂದ ಹಾಗೆ" ಎನ್ನುವ ಇನ್ನೊಂದು ಗಾದೆಯಿದೆ. ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿದ್ದ ಆ ಮರಿಯ ತಾಯಿ ಏನನ್ನೋ ಮೂಸುತ್ತಾ, ಹೋಗುವ ದಾರಿ ಬಿಟ್ಟು ಎಲ್ಲೋ ಹೋಗಿಬಿಟ್ಟಿತು. ಆದರೆ ಮರಿ ನಮ್ಮ ಜೊತೆಯೇ ಬಂದಿತು. ಬಸ್ ಸ್ಟ್ಯಾಂಡಿಗೆ ಹೋಗಿ ನಾವು ಮುಟ್ಟಿದರೂ ಅದರ ತಾಯಿಯ ಸುಳಿವಿಲ್ಲ. ಬಸ್ ಬಂದಿತು. ನಾವು ಹತ್ತಿದೆವು. ಸುಮ್ಮನೆ ಮನೆಗೆ ಹೋಗುವ ಬದಲು ಆ ಮರಿ ಬಸ್ ಹಿಂದೆಯೇ ಓಡಿ ಬರಲಾರಂಭಿಸಿತು. ಬಸ್ಸಿನಲ್ಲಿದ್ದ ನನಗೆ ಸಂಕಟ. ಸುಮಾರು ಒಂದು ಕಿಲೋಮೀಟರ್ ನಮ್ಮ ಬಸ್ಸನ್ನೇ ಹಿಂಬಾಲಿಸಿತು. "ಮನೆಗೆ ಹೇಗೆ ತಿರುಗಿ ಹೋಗುತ್ತದೆ? ಅದಕ್ಕೆ ಮನೆ ದಾರಿ ಗೊತ್ತಿಲ್ಲ, ದಾರಿ ತಪ್ಪುತ್ತದೆ" ಎಂದು ಜೋರಾಗಿ ಬಸ್ಸಿನಲ್ಲಿಯೇ ಅತ್ತು ರಾದ್ಧಾಂತ ಮಾಡಿದ್ದೆ. ಅವುಗಳಿಗೆ ವಾಸನೆಯಿಂದಲೇ ಬಂದ ದಾರಿ ತಿಳಿಯುತ್ತದೆ, ಅಳಬೇಡ ಎಂದು ಅಮ್ಮ ಹೇಳಿದರೂ ನಂಬಿರಲಿಲ್ಲ. ಹರಿಹರಕ್ಕೆ ಹೋದ ಕೂಡಲೇ ಊರಿನಲ್ಲಿದ್ದ ಅತ್ತೆಗೆ ಅಮ್ಮನಿಂದ ಪತ್ರ ಬರೆಸಿದ್ದೆ, ಮನೆಗೆ ನಾಯಿ ಮರಿ ವಾಪಸ್ ಬಂದಿದೆಯೋ ಇಲ್ಲವೋ ಎಂದು. ವಾರದ ನಂತರ ಉತ್ತರ ಬಂದಿತ್ತು, ಮರಿ ಸುರಕ್ಷಿತವಾಗಿ ಮನೆ ಸೇರಿದೆ ಎಂದು. ಆಗಲೇ ನನಗೆ ಸಮಾಧಾನವಾಗಿದ್ದು.

ನಾಯಿ ಮರಿ


ಒಂದು ಕಪ್ಪು ನಾಯಿ ಮರಿ. ನಾನು ಅದನ್ನು ಎಷ್ಟು ಹಚ್ಚಿಕೊಂಡಿದ್ದೆನೋ, ಅದೂ ನನ್ನನ್ನು ಅಷ್ಟೇ ಹಚ್ಚಿಕೊಂಡಿತ್ತು. ನನ್ನ, ನಾಯಿ ಮರಿಯ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ದಿನವೂ ಎದ್ದು ಮೊದಲು ನಾನು ಮಾಡುತ್ತಿದ್ದ ಕೆಲಸ ಬಚ್ಚಲ ಮನೆಯ ಬಳಿ ಹೋಗಿ ಅಲ್ಲಿ ಅಡಿಕೆ ಸಿಪ್ಪೆಯ ಬುಟ್ಟಿಯೊಂದರಲ್ಲಿ ಮಲಗಿರುತ್ತಿದ್ದ ಆ ನಾಯಿ ಮರಿ ನೋಡುವುದು. ಆಮೇಲೆ ಮುಖ ತೊಳೆದುಬಂದು ದೇವರಿಗೆ ಕೈ ಮುಗಿಯುತ್ತಿದ್ದೆ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಅಲ್ಲಿ ಬುಟ್ಟಿಯೂ ಇರಲಿಲ್ಲ, ಮರಿಯೂ ಇರಲಿಲ್ಲ. "ಅಮ್ಮಾ" ಎಂದು ಕೂಗಿದೆ. "ನಾಯಿ ಮರಿ ಎಲ್ಲಿ" ಎಂದು ಕೇಳಿದೆ. "ನಾಯಿ ಮರಿ ಸತ್ ಹೋತು, ಅಂಗಳದಲ್ಲಿದ್ದು" ಎಂದಾಗ ಅಲ್ಲಿಗೆ ಓಡಿದೆ. ಅದನ್ನು ನೋಡಿದ ಕೂಡಲೇ ಅಳು ಬಂದಿತು. ಅಳುವಷ್ಟೂ ಅತ್ತು, ಅದನ್ನು ನಮ್ಮ ಮನೆಯ ಆಳೊಬ್ಬ ಹೋಗಿ ತೋಟದಲ್ಲಿ ಗುಂಡಿ ತೋಡಿ ಹೂತು ಬರುವವರೆಗೂ ಅದರೊಂದಿಗಿದ್ದು ಶ್ರದ್ಧಾಂಜಲಿ ಅರ್ಪಿಸಿದ್ದೆ. ಅದಾದ ನಂತರ ಎಷ್ಟೋ ಬಂಧುಗಳು ಮಡಿದಿದ್ದಾರೆ, ಆದರೆ ನಾನು ಆ ನಾಯಿ ಮರಿ ಸತ್ತಾಗ ಅತ್ತಷ್ಟು ಎಂದೂ ಅತ್ತಿಲ್ಲವೇನೋ.

ಈಗ ಇವೆಲ್ಲ ಯಾವುದೋ ಕಾಲದ ನೆನಪಿನಂತೆ ಕಾಡುತ್ತವೆ. ನನಗೂ ನಾಯಿಗಳಿಗೂ ಈಗ ಅಷ್ಟಕ್ಕಷ್ಟೇ. ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್‍ವೇರ್ ಇಂಜಿನಿಯರ್‌ಗಳು ಮತ್ತು ಬೀದಿ ನಾಯಿಗಳು. ಸಾಫ್ಟ್‍ವೇರ್ ಇಂಜಿನಿಯರ್‌ಗಳಿಗೆ ರಾತ್ರಿ client interaction ಇರುವಂತೆಯೇ ನಮ್ಮ ಮನೆಯ ಬಳಿ ದಿನಾ ರಾತ್ರಿ ೧೨:೩೦ ಕ್ಕೆ conference ಮಾಡುವ ನಾಯಿಗಳೂ ನಿದ್ದೆ ಮಾಡುವುದಿಲ್ಲ; ಮಾಡಲೂ ಬಿಡುವುದಿಲ್ಲ. ಬಹುಶಃ ಅವುಗಳ client ಕೂಡ ಅಮೇರಿಕಾದಲ್ಲಿರಬೇಕು...

ಸೋಮವಾರ, ಸೆಪ್ಟೆಂಬರ್ 22, 2008

ಮಳೆಗಾಲದ ಒಂದು ಸಂಜೆ...

ಮಳೆಗಾಲದ ಒಂದು ಸಂಜೆ. ಅಮ್ಮ ಮಾಡಿದ್ದ ಬಿಸಿ ಬಿಸಿ ಬೋಂಡ ತಿನ್ನುತ್ತಾ ಕಾಫಿ ಹೀರುತ್ತಾ ಜಗಲಿಯಲ್ಲಿ ಕೂತು ತಳಿಗಳ ಮೂಲಕ ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದೆ. ಮನಸ್ಸು ನಾಲ್ಕು ವರ್ಷ ಹಿಂದಕ್ಕೆ ಕರೆದೊಯ್ದಿತು.
***

ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೇ ತಿಂಗಳು. ೧೫ ದಿನದಲ್ಲಿ ಪರೀಕ್ಷೆ ಇದ್ದರೂ ಅರ್ಧ ಸಿಲೆಬಸ್ ಕೂಡ ಮುಗಿದಿರಲಿಲ್ಲ. ಶನಿವಾರ ಸ್ಪೆಷಲ್ ಕ್ಲಾಸ್ ಇಟ್ಟಿದ್ದರು. ಬಹಳಷ್ಟು ಮಂದಿ ಚಕ್ಕರ್ ಹಾಕಿದ್ದರು. ಇದ್ದವರು ನಾವೇ ೮ ಹುಡುಗರು, ೫ ಹುಡುಗಿಯರು. ನನ್ನನ್ನು ಮತ್ತು ಮೂವರು ಹುಡುಗಿಯರನ್ನು ಬಿಟ್ಟರೆ ಉಳಿದವರೆಲ್ಲ ಹಾಸ್ಟೆಲ್ ನಲ್ಲಿ ಇದ್ದವರು.

ಮನೆಯಲ್ಲಿ ಕೂತು ಓದಲಾಗದ ನಾನು ಪಾಠವನ್ನಾದರೂ ಕೇಳೋಣ ಎಂದು ಹೋಗಿದ್ದೆ. ಪಾಠವೇನೂ ಅಷ್ಟೊಂದು ಆಸಕ್ತಿದಾಯಕವಾಗಿರಲಿಲ್ಲ. ಸುಮ್ಮನೆ ಲೆಕ್ಚರರ್ ಹೇಳಿದ್ದನ್ನು ಕೇಳುತ್ತಾ, ನೋಟ್ಸ್ ಗೀಚುತ್ತಾ ಕುಳಿತಿದ್ದೆ. ಹೊರಗೆ ಆಚಾನಕ್ ಮಳೆ ಸುರಿಯಲಾರಂಭಿಸಿತು. ಸುಮಾರು ಮುಕ್ಕಾಲು ಘಂಟೆ ಕಳೆದ ಮೇಲೆ ಕ್ಲಾಸ್ ಮುಗಿಯಿತು. ಎಲ್ಲರೂ ಹೊರಗೆ ಬಂದೆವು. ಬೇಸಿಗೆಯಲ್ಲಿ ಮಳೆ ಬರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಯಾರ ಬಳಿಯೂ ಕೊಡೆ ಇರಲಿಲ್ಲ. ಕಾಲೇಜಿನ ಹಿಂದೇ ಹಾಸ್ಟೆಲ್ ಇದ್ದಿದ್ದರಿಂದ ೭ ಜನ ಹುಡುಗರೂ ಬೇಗ ಓಡಿ ಹೋಗಿ ರೂಮ್ ಸೇರಿಕೊಂಡುಬಿಟ್ಟರು. ೨ ಹುಡುಗಿಯರೂ ಅದೇ ಕೆಲಸ ಮಾಡಿದರು. ಉಳಿದ ಮೂವರು ಹುಡುಗಿಯರಲ್ಲಿ ಒಬ್ಬಳ ಬಳಿ ಸ್ಕೂಟಿ ಇತ್ತು. ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೊಬ್ಬಳನ್ನು ಕರೆದುಕೊಂಡು ಹೋಗಿಬಿಟ್ಟಳು. ಉಳಿದವರಿಬ್ಬರೇ: ನಾನು ಮತ್ತು ಆಕೆ.

ಹುಡುಗಿಯರನ್ನು ಕಂಡರೆ ನನಗೆ ಅದೆಂಥದೋ ಸಂಕೋಚವಿತ್ತು. ಎತ್ತಲೋ ನೋಡುತ್ತಾ ಸುಮ್ಮನೆ ನಿಂತಿದ್ದೆ. ೫ ನಿಮಿಷ ಆಕೆಯೂ ಸುಮ್ಮನೆ ನಿಂತಿದ್ದಳು. ಮೌನ ಆಕೆಗೆ ಬೇಸರ ತರಿಸಿರಬೇಕು. ಟೈಮ್ ಎಷ್ಟು ಎಂದು ಕೇಳಿದಳು. ಆಕೆಯತ್ತ ತಿರುಗಿ ೪:೪೦ ಎಂದೆ. ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ಚಿಂತೆ ಕಂಡು ಬಂದಿತ್ತು. ಎರಡು ನಿಮಿಷ ಮೌನ. ಮನೆ ಎಲ್ಲಿ ಎಂದು ಕೇಳಿದಳು. ಉತ್ತರಿಸಿ ಮತ್ತೆ ಸುಮ್ಮನಾದೆ. ಮತ್ತೆ ಎರಡು ನಿಮಿಷ ಮೌನ. ಆಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದರೂ ಮೆಕ್ಯಾನಿಕಲ್ ಆಗಿ ಉತ್ತರಿಸಿ ಸುಮ್ಮನೆ ಇದ್ದರೆ ತಪ್ಪಾದೀತೆಂದು ಆಕೆಯ ಮನೆಯ ಬಗ್ಗೆ ಕೇಳಿದೆ. ಇಲ್ಲೇ ವಿದ್ಯಾನಗರ ಎಂದಳು. ಕ್ಲಾಸ್ ಒಳಗೆ ಹೋಗಿ ಬೆಂಚ್ ಮೇಲೆ ಕುಳಿತು ಮಾತನಾಡೋಣ ಎಂಬಂತೆ ಸನ್ನೆ ಮಾಡಿದಳು. ಎಂದೂ ಹುಡುಗಿಯರ ಜೊತೆ ಸುಖಾಸುಮ್ಮನೆ ಮಾತನಾಡಿರಲಿಲ್ಲ. ಆಕೆ ಕರೆದ ಮೇಲೆ ಹೋಗಿ ಕೂರದೆ ಬೇರೆ ವಿಧಿಯಿರಲಿಲ್ಲ. ಸರಿ ಎಂದು ಹೋಗಿ ಕುಳಿತೆ.

ಆಕೆಯೇ ಮಾತು ಆರಂಭಿಸಿದಳು. ತನ್ನ ಮನೆಯ ಬಗ್ಗೆ, ತಾನು ಓದಿದ ಬಗ್ಗೆ, ತನಗೆ ಇಷ್ಟವಿರದಿದ್ದರೂ ಮನೆಯಲ್ಲಿ ಇಂಜಿನಿಯರಿಂಗಿಗೆ ಸೇರಿದ ಬಗ್ಗೆ... ಹೀಗೇ ಒಂದು ಘಂಟೆಯಾದರೂ ಕಳೆದಿರಬೇಕು. ಬಹುಶಃ ಆಕೆಯ ಮನಸ್ಸಿನಲ್ಲಿ ಇದ್ದಿದ್ದನ್ನು ಹೊರ ಹಾಕಲು ಆಕೆಗೆ ಯಾರಾದರೂ ಬೇಕಿತ್ತೇನೋ.

ಆಕೆ ಅಷ್ಟೊಂದು ಹೇಳುತ್ತಿದ್ದರೂ ನಾನು ಕೇಳುತ್ತಿದ್ದೆ ಬಿಟ್ಟರೆ ತಿರುಗಿ ಏನೂ ಕೇಳಿರಲಿಲ್ಲ. ಆಕೆ ನನ್ನ ಬಗ್ಗೆಯೂ ಏನೂ ಕೇಳಿರಲಿಲ್ಲ. ನನ್ನ ಮೌನ ಆಕೆಗೆ ಏನು ಅನಿಸಿಕೆ ಮೂಡಿಸಿತೋ. ಮಳೆ ಕಡಿಮೆಯಾಗಿದೆ ಹೋಗೋಣವೆ ಎಂದಳು. ಇಬ್ಬರೂ ಎದ್ದು ಹೊರಟೆವು.

ಸುಮ್ಮನೆ ಇಷ್ಟೊತ್ತು ಬೋರ್ ಹೊಡೆಸಿದೆನಾ ಎಂದು ಕೇಳಿದಳು. ಇಲ್ಲ ಎಂದು ಗೋಣಾಡಿಸಿದೆ. ಏನಾದರೂ ಹೇಳಿಕೊಳ್ಳುವುದಿದ್ದರೆ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದೆಂದು ತಿಳಿಸಿದೆ. ಸರಿ ಎಂದು ಮುಗುಳ್ನಕ್ಕಳು. ಆಕೆಯ ಮುಖ ಮೊದಲಿಗಿಂತ ಸ್ವಲ್ಪ ನಿರಾಳವಾಗಿದ್ದಂತೆ ಕಂಡು ಬಂದಿತು. ಪರಿಚಯ ಆಗಲೇ ಸ್ನೇಹಕ್ಕೆ ತಿರುಗಿತ್ತು.

ಆ ದಿನ ರಾತ್ರಿ ಮಲಗಿದಾಗ ನಿದ್ದೆ ಬರಲಿಲ್ಲ. ಆಕೆಯ ಇತಿಹಾಸವೇ ಮನಸ್ಸಿನಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿತ್ತು. ವ್ಯವಸ್ಥೆಯ ಮೇಲೆ ಕೋಪ ಉಕ್ಕುತ್ತಿತ್ತು.

ಪಿ.ಯು.ಸಿಯಲ್ಲಿ ಪಿ.ಸಿ.ಬಿ ೯೬% ತೆಗೆದಿದ್ದಳು. ಮೆಡಿಕಲ್ ಗೆ ಹೋಗಿ ಒಂದು ಉತ್ತಮ ವೈದ್ಯೆಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿದ್ದ ಆಕೆಯ ತಂದೆಗೆ ಬರುತ್ತಿದ್ದುದು ೫,೫೦೦ ರೂ. ಸಂಬಳ. ಅದರಲ್ಲೇ ಆಕೆ, ಆಕೆಯ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ - ಹೀಗೆ ೫ ಜನರ ಸಂಸಾರ ನಡೆಯಬೇಕಿತ್ತು. ತಾಯಿ ತೀರಿಕೊಂಡು ೩ ವರ್ಷ ಆಗಿತ್ತಂತೆ. ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಆಕೆಯ ಮೇಲೆ ಬಿದ್ದಿತ್ತು. ಸರ್ಕಾರ-ಖಾಸಗಿ ಕಾಲೇಜುಗಳ ಜಗಳದಿಂದಾಗಿ ಮೆಡಿಕಲ್ ಸೀಟು ಕೈಗೆಟುಕದಂತಾಗಿತ್ತು.

ಮತ್ತೆ ಆಕೆ ಸಿಕ್ಕಿದ್ದು ಮಂಗಳವಾರ. ಸೋಮವಾರ ತಮ್ಮನಿಗೆ ಏನೋ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳಂತೆ. ಅದಾದ ಮೇಲೆ ಪರೀಕ್ಷೆ, ರಜೆ ಬಂದಿದ್ದರಿಂದ ಮತ್ತೆ ೨ ತಿಂಗಳು ಆಕೆ ಸಿಗಲೇ ಇಲ್ಲ.

ಮೂರನೆಯ ಸೆಮಿಸ್ಟರ್ ಪ್ರಾರಂಭವಾದ ಮೇಲೆ ಆಕೆಯದು ಬೇರೆ ಬ್ರಾಂಚ್ ಆಗಿದ್ದರಿಂದ ಬೇರೆ ಎಲ್ಲಿಯೋ ಇರುತ್ತಿದ್ದಳು. ಆಗಾಗ ಅಲ್ಲಲ್ಲಿ ಕಂಡಾಗ ಮುಗುಳ್ನಗುತ್ತಿದ್ದಳು. ಒಮ್ಮೆ ರೀಡಿಂಗ್ ರೂಮಿನಲ್ಲಿ ಸಿಕ್ಕಾಗ ತನ್ನ ತಂದೆಗೆ ಬಡ್ತಿ ಸಿಕ್ಕಿದೆಯೆಂದೂ, ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯೆಂದೂ ತಿಳಿಸಿದ್ದಳು. ನಂತರ ಎಷ್ಟೋ ದಿನಗಳ ಕಾಲ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಬಹಳ ದಿನಗಳ ಮೇಲೆ ಹೀಗೇ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದಾಗ ಆಕೆಯ ವಿಷಯ ಬಂದಿತು. ಆಕೆ ಇಂಜಿನಿಯರಿಂಗ್ ಅನ್ನು ಬಿಟ್ಟುಬಿಟ್ಟಿದ್ದಳಂತೆ. ತಮ್ಮನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹಣ ಬೇಕಿದ್ದರಿಂದ ಎಲ್ಲಿಯೋ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ...

ಹೌದು, ಸ್ವಲ್ಪ ದಿನಗಳ ಹಿಂದೆ ತಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ೯೭% ತೆಗೆದಿದ್ದಾನೆ ಎಂದು ಹೇಳಿ ಸ್ವೀಟ್ ಕೊಟ್ಟು ಖುಷಿ ಪಟ್ಟಿದ್ದಳು. ಈಗ ಅದೇ ತಮ್ಮನಿಗಾಗಿ ತನ್ನ ವಿದ್ಯಾಭ್ಯಾಸ ತ್ಯಜಿಸಿದ್ದಳು. ಅದೇ ಕೊನೆ, ಅದಾದ ಮೇಲೆ ಆಕೆ ನನಗೆ ಕಾಣಲೇ ಇಲ್ಲ.
***

"ಕುಡ್ದಾಗಿದ್ರೆ ಲೋಟ ತಂದು ಕೈಸಾಲೆಲ್ಲಿ ಇಡು" ಎಂದು ಅಮ್ಮ ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದು. ಕಾಫಿ ತಣ್ಣಗಾಗಿತ್ತು. ಮಳೆ ನಿಂತಿತ್ತು. ಕಣ್ಣಿನಲ್ಲಿ ಹನಿ ಮೂಡಿತ್ತು.

ಶುಕ್ರವಾರ, ಏಪ್ರಿಲ್ 18, 2008

ಮನ್ನಣೆ

ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದ ಸೋನಿಯಾ ಔರ್ ಸಾನಿಯಾ ಎಂಬ ಲೇಖನ ನೋಡಿ ನನಗೆ ಈ ಘಟನೆ ನೆನಪಾಯಿತು.

*****

ಅದೊಂದು ಶಾಲೆ. ಅಲ್ಲೊಂದು ಕಂಠಪಾಠ ಸ್ಪರ್ಧೆ. ಭಾಗವಹಿಸಲು ಇಷ್ಟವಿದ್ದವರು ತಮ್ಮ ತರಗತಿಯ ಪಠ್ಯದಲ್ಲಿರುವ ನಿಗದಿಪಡಿಸಿದ ಕನ್ನಡ ಅಥವಾ ಹಿಂದೀ ಪದ್ಯವನ್ನು ಬಾಯಿಪಾಠ ಮಾಡಿ ಹೇಳಬೇಕಾಗಿತ್ತು. ಚೆನ್ನಾಗಿ ಹಾಡು ಹೇಳುವವರಿಗೆ ಸರಿಯಾಗಿ ಕಂಠಪಾಠ ಮಾಡಲು ಕಷ್ಟವಾಗುತ್ತಿತ್ತು; ಕಂಠಪಾಠ ಮಾಡಲು ಎತ್ತಿದ ಕೈ ಎನ್ನುವಂಥವರಿಗೆ ಹಾಡಲು ಬರುತ್ತಿರಲಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆ ಪೈಪೋಟಿ ಏರ್ಪಟ್ಟಿತ್ತು.

ಹೀಗಿರುವಾಗ ಆ ದಿನ ಬಂದೇ ಬಿಟ್ಟಿತು. ಪ್ರೇಕ್ಷಕರಾಗಿ ಎಲ್ಲರೂ ಜಮಾಯಿಸಿದರು. ಎಲ್ಲ ಶಿಕ್ಷಕ-ಶಿಕ್ಷಕಿಯರೂ ಬಂದು ಸೇರಿದರು. ಒಬ್ಬೊಬ್ಬರಾಗಿ ಬಂದು ಪದ್ಯಗಳನ್ನು ತಮಗೆ ತಿಳಿದಷ್ಟು ಚೆನ್ನಾಗಿ ಹೇಳಲಾರಂಭಿಸಿದರು. ಕೆಲವರಿಗೆ ಸಭಾಕಂಪದಿಂದಾಗಿ ಕಲಿತಿದ್ದ ಪದ್ಯ ಮರೆತು ಹೋಯಿತು. ಕೆಲವರು ಕಲಿತಿದ್ದೇ ಸುಳ್ಳು ಎನ್ನುವಂತೆ ಹೇಳಿ ಹೋದರು. ಇನ್ನೂ ಕೆಲವರು ಪದ್ಯಕ್ಕೆ ರಾಗ ಹಾಕುವ ಭರದಲ್ಲಿ ಪದ್ಯ ಮರೆತರು. ಕೆಲವರಿಗೆ ಪದ್ಯ ಹೇಳುತ್ತ ಹೇಳುತ್ತ ನಿಗದಿಪಡಿಸಿದ್ದ ಸಮಯ ಹೋಗಿದ್ದೇ ತಿಳಿಯಲಿಲ್ಲ.

ಹೀಗೇ ಸಾಗುತ್ತಿತ್ತು ಸ್ಪರ್ಧೆ... ಒಬ್ಬ ಬಾಲಕ ಪದ್ಯವೊಂದನ್ನು ಕಥೆ ಹೇಳಿದಂತೆ ಹೇಳಿ ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದ. ಶಾಲೆಯಲ್ಲಿ ಹಾಡು ಹೇಳಲು ಪ್ರಸಿದ್ಧವಾಗಿದ್ದ ಒಬ್ಬ ಬಾಲಕಿ ಬಂದಳು. ಅವಳ ಸುಶ್ರಾವ್ಯವಾದ ಕಂಠಕ್ಕೆ ಎಲ್ಲರೂ ತಲೆದೂಗಲಾರಂಭಿಸಿದರು. ತೃತೀಯ ಭಾಷೆಯನ್ನಾಗಿ ಸಂಸ್ಕೃತವನ್ನು ತೆಗೆದುಕೊಂಡಿದ್ದರೂ ಹಿಂದಿಯ "ಮೇರಾ ನಯಾ ಬಚಪನ್" ಪದ್ಯವನ್ನು ಆಕೆ ಹೇಳಿದ ಪರಿ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಆದರೆ ಸಮಯಾಭಾವದಿಂದ ಆಕೆಗೆ ಕೂಡ ಎರಡೇ ಸೊಲ್ಲು ಹೇಳಲು ಸಮಯ ಸಿಕ್ಕಿತು.

ಮರುದಿನ ತರಗತಿಗೆ ಬಂದ ಮುಖ್ಯೋಪಾಧ್ಯಾಯರು ಕೇಳಿದರು: "ನಿನ್ನೆ ಯಾಕೆ ಎಷ್ಟೊಂದು ಜನ ಭಾಗವಹಿಸಿರಲಿಲ್ಲ?" ಎಲ್ಲರಿಂದ ಮೌನವೇ ಉತ್ತರವಾಗಿತ್ತು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆಯುತ್ತಿದ್ದವರೂ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಪದ್ಯ ಕಂಠಪಾಠ ಮಾಡಲು ಬರಲಿಲ್ಲ ಎನ್ನುವುದು ಯಾರೂ ನಂಬದ ವಿಷಯವಾಗಿತ್ತು. ಆಗ ಮುಖ್ಯೋಪಾಧ್ಯಾಯರು ವಿವರಿಸಿದರು: "ಹಾಡುವುದು, ಭಾಗವಹಿಸುವುದು ಮುಖ್ಯವೇ ಹೊರತು ಗೆಲ್ಲುವುದಲ್ಲ. ನಿನ್ನೆ ಇದ್ದಿದ್ದು ಹಾಡು ಹೇಳುವ ಸ್ಪರ್ಧೆಯಲ್ಲ; ಕಂಠಪಾಠ ಸ್ಪರ್ಧೆ. ಅದರಲ್ಲಿ ನೀವು ಪದ್ಯವನ್ನು ಕಲಿತು ಹೇಳುತ್ತೀರಿ ಎನ್ನುವುದು ಮುಖ್ಯವೇ ಹೊರತು ನೀವು ಎಷ್ಟು ರಾಗವಾಗಿ ಹಾಡುತ್ತೀರಿ ಎನ್ನುವುದಲ್ಲ".

ಉತ್ತಮವಾಗಿ, ಸಂಪೂರ್ಣವಾಗಿ ಹಾಡು ಹೇಳಿದ್ದ ಒಬ್ಬ ಬಾಲಕಿಗೆ ಪ್ರಥಮ ಬಹುಮಾನ ಬಂದಿತ್ತು. ಕಥೆಯಂತೆ ಹೇಳಿ ಹೋಗಿದ್ದ ಬಾಲಕನಿಗೆ ಎರಡನೆಯ ಬಹುಮಾನ ಬಂದಿದ್ದರೆ, ರಾಗವಾಗಿ ಹೇಳಿದ್ದ ಆ ಹುಡುಗಿಗೆ ಮೂರನೆಯ ಬಹುಮಾನ ಬಂದಿತ್ತು. ಎಲ್ಲರಿಗೂ ಆಶ್ಚರ್ಯ! ನಿಜಕ್ಕೂ ರಾಗಕ್ಕಿಂತ ಕಂಠಪಾಠವೇ ಬಹುಮಾನದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸರಿಯಾಗಿ ಪದ್ಯ ಬಂದರೂ ಭಾಗವಹಿಸಿರದಿದ್ದವರ ಮುಖ ಬಾಡಿತ್ತು.

*****

ಹಾಗೆ ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಶಾಲೆಯ ಹೆಸರು ಮೈಸೂರು ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ಟ್ (ಎಂ.ಕೆ.ಇ. ಟಿ/ಎಂಕೆಟಿ). ಹರಿಹರದಲ್ಲಿ ಯಾವ ಶಾಲೆ ಒಳ್ಳೆಯದು ಎಂದು ಯಾರನ್ನೇ ಕೇಳಿದರೂ ತೋರಿಸುತ್ತಿದ್ದ ಶಾಲೆ. ನಮಗೇನು ಗೊತ್ತು ಅದರ ಬೆಲೆ? ನಮ್ಮ ಬಾಯಲ್ಲಿ ಎಂಕೆಟಿ ಎಂಬುದು "ಮಂಡಕ್ಕಿ ಖಾರ ಟೀ" ಆಗಿತ್ತು. ಏನೇ ಇರಲಿ, ಪ್ರತಿಭೆಯನ್ನು ಗುರುತಿಸುತ್ತಿದ್ದ, ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಂಥ ಶಾಲೆಯಲ್ಲಿ ಓದಿದ್ದಕ್ಕೆ ನನಗೆ ಹೆಮ್ಮೆಯಿದೆ.

ಸೋಮವಾರ, ಅಕ್ಟೋಬರ್ 8, 2007

ದೋಣಿ ಸಾಗಲಿ, ಮುಂದೆ ಹೋಗಲಿ...

ಹರಿಹರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ... ಇದೇ ತಿಂಗಳು ೧೧ನೇ ತಾರೀಖಿನಿಂದ ಕೆಲಸಕ್ಕೆ ಸೇರಬೇಕಾಗಿರುವುದರಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಹೊಸ ಬಾಳನ್ನು ಆರಂಭಿಸುತ್ತಿದ್ದೇನೆ. ಬಾಲ್ಯದ ಹುಡುಗಾಟಗಳು, ಗೆಳೆಯರ ಸಂಗ, ಶಾಲೆ-ಕಾಲೇಜುಗಳ ಜೀವನ ಇವೆಲ್ಲವಕ್ಕೂ ಸಾಕ್ಷಿಯಾದ ಈ ಊರು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇದೇನಪ್ಪಾ, ಕೆಲಸಕ್ಕೆ ಸೇರುವವನಿಗೆ ಇಷ್ಟೊಂದು ಫೀಲಿಂಗಾ ಅನ್ಬೇಡಿ. ಇದಕ್ಕೆ ಕಾರಣವಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಷ್ಟೇ ಅಲ್ಲದೆ ನಮ್ಮ ಕುಟುಂಬವೂ ನಮ್ಮೂರಾದ ಮಂಚಾಲೆಯಲ್ಲಿ ನೆಲೆಸಲಿದೆ. ಹಾಗಾಗಿ ನಾನು ಮತ್ತೆ ಹರಿಹರಕ್ಕೆ ಎಂದು ಬರುತ್ತೇನೆ ಎಂಬುದು ಅನಿಶ್ಚಿತ. ಆದರೆ ಒಂದಂತೂ ಸತ್ಯ. ಅಸಂಖ್ಯ ಮಧುರ ನೆನಪುಗಳನ್ನು ನೀಡಿದ ಹರಿಹರ ಸದಾ ನನ್ನ ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುತ್ತದೆ...

ಉದ್ಯಾನನಗರಿಯ ಬದುಕು ಸುಂದರವಾಗಿರುತ್ತದೆಂದು ಆಶಿಸುತ್ತಾ ಬಾಳೆಂಬ ದೋಣಿ ಹೀಗೇ ಮುಂದುವರಿಯುತ್ತದೆಂದು ಬಯಸುತ್ತೇನೆ. ಕುವೆಂಪು ರಚಿಸಿರುವ ಮಿಸ್ ಲೀಲಾವತಿ ಚಿತ್ರದ ಈ ಹಾಡು ಈ ಸಮಯದಲ್ಲಿ ಪ್ರಸ್ತುತವೆಂದೆನಿಸುತ್ತಿದೆ:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುಡುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿರೆ ||೨||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

(ಈ ಹಾಡನ್ನು ಕನ್ನಡಆಡಿಯೋ.ಕಾಂ ನ ಈ ಪುಟದಿಂದ ಕೇಳಬಹುದು)

ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು

ಶುಕ್ರವಾರ, ಸೆಪ್ಟೆಂಬರ್ 28, 2007

ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......

ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.

ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.

ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!

ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಶುಕ್ರವಾರ, ಆಗಸ್ಟ್ 31, 2007

ಮದುವೆಯ ಈ ಬಂಧ!

ಶಿರಸಿಯ ಲಿಂಗದಕೋಣ ಕಲ್ಯಾಣಮಂಟಪ ಸುಸಜ್ಜಿತವಾಗಿದ್ದು ಸುತ್ತಲಿನ ಹತ್ತೂರಿಗೆ ಹೆಸರುವಾಸಿಯಾಗಿದೆ. ಶಿರಸಿ-ಸಿದ್ಧಾಪುರದ ಸುತ್ತಮುತ್ತಲಿನ ಬಹುತೇಕ ಮದುವೆಗಳು ಅಲ್ಲಿ ನಡೆಯುತ್ತವೆ. ಅಲ್ಲಿ ಎರಡು ಸಭಾಂಗಣಗಳಿದ್ದು ಮೇಲೆ ಹಾಗೂ ಕೆಳಗೆ ಪ್ರತ್ಯೇಕ ಮದುವೆಗಳು ನಡೆಯುವುದು ಸರ್ವೇಸಾಮಾನ್ಯ. ಇನ್ನು ಕೆಲವು ಬಾರಿ, ಮೇಲೆ ಯಾವುದೇ ಮದುವೆಗಳಿಲ್ಲದಿದ್ದರೆ ಕೆಳಗೆ ಮದುವೆ ನಡೆಸುವುದು, ಸಾಂಪ್ರದಾಯಿಕ ಪದ್ಧತಿಯಂತೆ ನೆಲದ ಊಟ ಹಾಕುವುದು, ಮೇಲೆ ಬಫೇ ಸಿಸ್ಟಂ ನಲ್ಲಿ ಊಟ ಹಾಕುವುದು ಕೂಡ ಹೊಸದೇನಲ್ಲ. ಬಂದವರಿಗೆ ಗಡಿಬಿಡಿಯಿದ್ದರೆ (ಇಲ್ಲದಿದ್ದರೂ) ಬೇಗ ಉಂಡು ಹೋಗಲು ಇದರಿಂದ ಸಹಕಾರಿಯಾಗುತ್ತದೆಂಬುದನ್ನು ಬಾಯಿ ಬಿಟ್ಟೇನೂ ಹೇಳಬೇಕಿಲ್ಲ.

ಸಮಯಕ್ಕೆ ಸರಿಯಾಗಿ ಬರುವುದು ಶಿರಸಿ ಕಡೆಯ ಒಂದು ಪದ್ಧತಿ. ಹಾಗೆಂದು ಇವರೇನೂ ಮಹಾ ಸಮಯಪಾಲಕರೆಂದುಕೊಳ್ಳಬೇಡಿ. ನಾನು ಹೇಳಿದ ಪದ್ಧತಿ ಊಟದ ಸಮಯಕ್ಕೆ ಸರಿಯಾಗಿ ಬರುವುದು. ಮದುವೆ ಬೆಳಿಗ್ಗೆ ೯-೩೦ ಕ್ಕೇ ಇರಲಿ, ೧೨-೦೦ ಘಂಟೆಗೇ ಇರಲಿ, ಹೆಚ್ಚಿನ ಮಹಾಪುರುಷರು ಬರುವುದು ೧೨-೩೦ ರ ನಂತರವೇ. ೧೨-೧೫ ರವರೆಗೆ ಖಾಲಿ ಹೊಡೆಯುವ ಸಭಾಂಗಣ ೧ ಘಂಟೆ ಸುಮಾರಿಗೆ ಜನರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ೨-೧೫ ಕ್ಕೆ ನೋಡಿದರೆ ಮತ್ತೆ ೧೨-೧೫ ರ ಸ್ಥಿತಿ! ಗಂಡು-ಹೆಣ್ಣಿನ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಇದು ಇಂದಿನ ವೇಗದ ಬದುಕಿನ ಫಲವೋ, ಅಥವಾ ಶಿಥಿಲವಾಗುತ್ತಿರುವ ಮಾನವ ಸಂಬಂಧಗಳ ಪ್ರತೀಕವೋ ತಿಳಿಯದು.

ಹೀಗಿರುವಾಗ ಭಾನುವಾರ ಒಂದು ಮದುವೆಗೆ ಹೋಗಿದ್ದೆ. ಬಹಳ ಬಂಧು-ಮಿತ್ರರಿದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದುವೆಗೆ ಬಂದಿದ್ದರು. ಮದುವೆ ನಡೆಯಿತು. ಈಗ ಊಟದ ಸಮಯ. ಮೇಲಿನ ಸಭಾಂಗಣದಲ್ಲಿ ಯಾವುದೇ ಮದುವೆಯಿರದಿದ್ದರೂ ಬಫೇ ಇಟ್ಟಿರಲಿಲ್ಲ. ಇದನ್ನು ಮೊದಲೇ ಅರಿತಿದ್ದ ಕೆಲವರು ೧೨-೩೦ ಕ್ಕೆ ಪ್ರಾರಂಭವಾಗುವ ಸಂತರ್ಪಣೆಗೆ ೧೨ ಘಂಟೆಗೇ ಹೋಗಿ ಕುಳಿತಿದ್ದರು. ಹಾಗಾಗಿ ಮೊದಲ ಪಂಕ್ತಿಗೆ ಊಟ ಮಾಡಬೇಕೆಂದು ೧೨-೨೫ ಕ್ಕೆ ಎದ್ದು ಸಿದ್ಧವಾದವರಿಗೆ ಜಾಗವೇ ಇಲ್ಲದಂತಾಗಿ ನಂತರದ ಬಾರಿಗೆ ಕಾಯುವಂತಾಯಿತು. ಇನ್ನು ಎರಡನೇ ಪಂಕ್ತಿಗೆ ಹೋಗಲು ಸಾಲು ಬೇರೆ!! ೫೦ ಜನರ ಬಸ್ನಲ್ಲಿ ಸೀಟು ಹಿಡಿಯುವುದಕ್ಕಿಂತ ೨೦೦ ಜನರು ಹಿಡಿಸುವ ಈ ಭೋಜನಶಾಲೆಯಲ್ಲಿ ಜಾಗ ಹಿಡಿಯುವುದೇ ಕಷ್ಟಕರವಾಗಿತ್ತು. ಇದರಿಂದ ನಿಧಾನವಾಗಿ ಬಂದವರ ಗೊಣಗಾಟ ಆರಂಭವಾಯಿತು. "ಬಫೇ ಇಡಬೇಕಾಗಿತ್ತು. ಇಲ್ಲಿ ಇಷ್ಟೊಂದು ರಶ್ ಆಗ್ತಿರಲಿಲ್ಲ", "ಬಫೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಮನೆಯಲ್ಲಿರಬಹುದಾಗಿತ್ತು" ಎಂಬ ಮಾತುಗಳು ಕೇಳಿ ಬಂದವು. ಆದರೆ ಕಾಯದೆ ವಿಧಿಯಿರಲಿಲ್ಲ! ತಮ್ಮ ಮನೆಯ ಜನರೊಂದಿಗೆ ಒಟ್ಟಿಗೆ ಕುಳಿತು ಉಣ್ಣುವ ಅವಕಾಶ ಬಹುಶಃ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಮನೆಯವರೆಲ್ಲರಿಗೂ ಊಟವಾಗದೆ ಮನೆಗೆ ಹೋಗುವಂತಿಲ್ಲವಲ್ಲ! ಉಂಡಾದವರು ಕುಟುಂಬದವರಿಗಾಗಿ, ಉಳಿದವರು ಊಟಕ್ಕಾಗಿ ಕಾಯುವುದೇ ಕೆಲಸವಾಯಿತು. ಬಂದ ಸುಮಾರು ೮೦೦ ಮಂದಿಗೆ ಊಟವಾಗುವ ಹೊತ್ತಿಗೆ ಸಮಯ ೩-೩೦ ಆಗಿತ್ತು. ಬ್ರಾಹ್ಮಣೋ ಬಹುಜನಪ್ರಿಯಃ ಎಂಬ ಉಕ್ತಿ ಬ್ರಾಹ್ಮಣೋ ಭೋಜನಪ್ರಿಯಃ ಎಂದು ಏಕೆ ಬದಲಾವಣೆಗೊಂಡಿದೆ ಎಂಬುದು ಅರಿವಿಗೆ ಬಂದಿತ್ತು.

ಬಂದವರೆಲ್ಲ ಮಾತನಾಡುತ್ತ ಕುಳಿತಿದ್ದಾಗ ಕೆಲವು ಹೆಂಗಸರು ಹೀಗೆ ಮಾತಾಡುತ್ತಿದ್ದುದು ಕೇಳಿಬಂತು: "ಹಿಂದೆಲ್ಲ ೩-೪ ದಿನ ಮೊದಲೇ ಬಂದು ಎಲ್ಲ ತಯಾರಿ ನಡೆಸುತ್ತಿದ್ದೆವು. ಒಟ್ಟಿಗೆ ಬೆರೆತು ಮಾತನಾಡಲು ಸಮಯವಿರುತ್ತಿತ್ತು. ಈಗ ಕಲ್ಯಾಣಮಂಟಪದಲ್ಲಿ ಮದುವೆ ಆಗಿರೋದ್ರಿಂದ ಆ ಅವಕಾಶವೂ ಇಲ್ಲ. ಇವತ್ತು ಬಫೇ ಇಲ್ಲದೇ ಇದ್ದಿದ್ದಕ್ಕೆ ಎಲ್ಲರೂ ಸಿಕ್ಕು ಮಾತನಾಡುವಂತಾಯಿತು". ಯೋಚಿಸಿ ನೋಡಿ! ಅಕ್ಷರಶಃ ಸತ್ಯವಲ್ಲವೆ? ಮನೆಯನ್ನೆಲ್ಲ ಸುಣ್ಣ-ಬಣ್ಣ ಮಾಡಿ, ಅಂಗಳಕ್ಕೆಲ್ಲ ಚಪ್ಪರ ಹಾಕಿ, ಊರಿನ ಜನರೆಲ್ಲ ಒಂದಾಗಿ ಸೇರಿ ನಡೆಸುತ್ತಿದ್ದ ಅಂದಿನ ಕಾಲದ ಮದುವೆಯ ಸೊಬಗು ಮತ್ತೆ ನೋಡಲು ಸಿಕ್ಕೀತೇ? ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಆಗಬೇಕಾದ ವಿವಾಹ ಇಂದಿನ ಸಿನಿಮಾಗಳಲ್ಲಿ ತೋರಿಸುವಂತೆ ಹಾರ ಬದಲಾಯಿಸುವ ಶಾಸ್ತ್ರವಾಗುವ ಕಾಲ ಬರದಿದ್ದರೆ ಸಾಕು...

ಬುಧವಾರ, ಆಗಸ್ಟ್ 15, 2007

ನನ್ನ ದೇಶ, ನನ್ನ ಜನ

ಆಗಸ್ಟ್ ೧೫. ಸ್ವಾತಂತ್ರ್ಯ ದಿನಾಚರಣೆ. ಕೆಲವೇ ವರ್ಷಗಳ ಹಿಂದಿನ ಮಾತು. ಸಂಭ್ರಮದಿಂದ ನಮ್ಮದೇ ಮನೆಯ ಕಾರ್ಯಕ್ರಮವೇನೋ ಎಂಬಂತೆ ಬೆಳಿಗ್ಗೆ ಎದ್ದು ಧ್ವಜಾರೋಹಣಕ್ಕೆ ಸಿದ್ಧಪಡಿಸಲು ಹೋಗುತ್ತಿದ್ದೆವು. ತಿಂಡಿ ತಿಂದಿರದಿದ್ದರೂ ಶಾಲೆಯಲ್ಲಿ ಕೊಡುತ್ತಿದ್ದ ಒಂದು ನಿಂಬೆ ಹುಳಿ ಚಾಕಲೇಟ್ ತಿಂದು ಮಧ್ಯಾಹ್ನದವರೆಗೆ ನಗರದ ಮುಖ್ಯ ಮೈದಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಮುಗಿಸಿಕೊಂಡೇ ಮನೆಗೆ ಬರುತ್ತಿದ್ದೆವು. "ಆಹಾ! ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ!" ಎಂದು ಇತಿಹಾಸವನ್ನೂ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರನ್ನೂ ನೆನಪಿಸಿಕೊಳ್ಳುತ್ತಿದ್ದೆವು. ಈಗ? "ವಾವ್! ಒನ್ ಡೇ ಫುಲ್ ರೆಸ್ಟ್ ತಗೋಬಹುದು" ಎನ್ನುವ ಭಾವನೆ. ಧ್ವಜಾರೋಹಣಕ್ಕೆ ಹೋಗುವುದಿರಲಿ, ದೂರದರ್ಶದಲ್ಲಿ ತೋರಿಸುವ ಪರೇಡ್ ನೋಡಲೂ ನಮಗೆ ಪುರಸೊತ್ತಿಲ್ಲ.

೩ನೇ ತರಗತಿಯಲ್ಲಿದ್ದಾಗ ಓದಿದ ಒಂದು ಪದ್ಯದ ಪಲ್ಲವಿ ನೆನಪಿಗೆ ಬರುತ್ತಿದೆ:
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ...
ಆಗ ನಾವಿನ್ನೂ ಚಿಕ್ಕವರು. ಇದು ಕೇವಲ ಕಂಠಪಾಠಕ್ಕಾಗಿಟ್ಟ ಒಂದು ಪದ್ಯವಾಗಿತ್ತು. ಆದರೆ ಈಗ ಅದರ ಅರ್ಥ ನೋಡಿದಾಗ ನಿಜಕ್ಕೂ ಕವಿಯ ಬಗ್ಗೆ ಗೌರವ ಉಕ್ಕುತ್ತದೆ. ಈ ದೇಶ ಏನೇನನ್ನು ಕೊಟ್ಟಿಲ್ಲ ನಮಗೆ: ಇರಲು ನೆಲ, ತಿನ್ನಲು ಅನ್ನ, ಉಸಿರಾಡಲು ಗಾಳಿ, ಕುಡಿಯಲು ನೀರು. ಅವನ್ನು ಎಲ್ಲ ದೇಶಗಳೂ ಕೊಡುತ್ತವೆ, ನಿಜ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ಭಾರತ ನಿಲ್ಲುವುದು ಇದರ ಅನೇಕತೆಯಲ್ಲಿನ ಐಕ್ಯತೆಯಿಂದ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಎಲ್ಲ ಜಾತಿ-ಮತದ ಜನರೊಂದಿಗೆ ಸಹಬಾಳ್ವೆ ನಡಸುವ, ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಇನ್ನಾವ ರಾಷ್ಟ್ರದವರಿಗಿದೆ? ಮರುಭೂಮಿ, ಹಿಮಾಚ್ಛಾದಿತ ಪ್ರದೇಶ, ಕರಾವಳಿ, ಜಲಪಾತ, ಪರ್ವತಶ್ರೇಣಿಗಳೆಲ್ಲವನ್ನೂ ಒಂದೆಡೆ ನೋಡಿ ಪ್ರಕೃತಿಯ ಸೊಬಗನ್ನು ಅನುಭವಿಸುವ ಅದೃಷ್ಟ ಇನ್ನಾವ ನಾಡಿನಲ್ಲಿ ಸಿಕ್ಕೀತು?

ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾವು. ೩೫ ಕೋಟಿ ಇದ್ದ ಜನಸಂಖ್ಯೆ ೧೧೫ ಕೋಟಿ ಆಗಿದೆ. ೧.೨೫ ಡಾಲರ್ ಇದ್ದ ರೂಪಾಯಿ ಬೆಲೆ ೦.೦೨೫ ಡಾಲರ್‍ಗೆ ಇಳಿದಿದೆ. ಆದರೆ ಇವಾವುದರ ಪರಿವೆಯೂ ಜನರಿಗಿದ್ದಂತಿಲ್ಲ. ಇಂದಿನ ಮಾಧ್ಯಮಗಳು ಬಿಂಬಿಸುತ್ತಿಲ್ಲ ಕೂಡ. ದುಡ್ಡಿಗಾಗಿ ದೇಶ ಮಾರಲು ಸಿದ್ಧವಿರುವವರು ನಮ್ಮ ರಾಜಕೀಯ ನಾಯಕರು! ದುಡ್ಡಿಗಾಗಿ ತಮ್ಮನ್ನೇ ಮಾರಿಕೊಂಡಿರುವ ಸಿನಿಮಾ ನಟರು, ಕ್ರಿಕೆಟಿಗರು ನಮ್ಮ ಆದರ್ಶವ್ಯಕ್ತಿಗಳು!! ಲಗೇ ರಹೋ ಮುನ್ನಾ ಭಾಯ್ ಚಿತ್ರದಲ್ಲಿನ ಗಾಂಧೀಜಿ ಹೇಳುವಂತೆ, ದೇಶವೇನೋ ನಮ್ಮದಾಗಿದೆ, ಆದರೆ ಜನ ಪರಕೀಯರಾಗಿದ್ದಾರೆ. ನನ್ನ ತಂದೆ ಆಗಾಗ ಹೇಳುವ ಒಂದು ಸಾಲು ಹೀಗಿದೆ:
ದೇಖ್ ತೇರಾ ಸಂಸಾರ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ್...
ಕಿತನಾ ಬದಲ್ ಗಯಾ ಇನ್‍ಸಾನ್...
ನಿನ್ನೆ ಪೇಪರ್‍ನಲ್ಲಿ ಓದಿದ ಒಂದು ಸುದ್ದಿ: "ಅಕ್ರಮವಾಗಿ ಹರಿಸಲಾಗಿದ್ದ ವಿದ್ಯುತ್ ತಂತಿ ತುಳಿದು ತೆಂಗಿನಕಾಯಿ ಕದಿಯಲು ಹೋಗಿದ್ದ ಇಬ್ಬರ ಸಾವು".
ನೀವೇ ಹೇಳಿ, ನಾವೆಲ್ಲಿಗೆ ಬಂದು ನಿಂತಿದ್ದೇವೆ? ಎತ್ತ ಸಾಗುತ್ತಿದ್ದೇವೆ?

ಬುಧವಾರ, ಆಗಸ್ಟ್ 8, 2007

ಸವಿ ಸವಿ ನೆನಪು!!

ನೀವು ಏನೇ ಹೇಳಿ ಈ ಸಂಗೀತದಲ್ಲಿ ಒಂದು ರೀತಿ ಶಕ್ತಿ ಇದೆ ಕಣ್ರಿ! ನಾನಂತೂ ಹಾಡುಗಳನ್ನು ಸದಾ ಕೇಳುತ್ತಲೇ ಇರುತ್ತೇನೆ. ನನಗೆ ತುಂಬಾ ಇಷ್ಟ ಆಗುವ ಹಿನ್ನಲೆ ಗಾಯಕರೆಂದರೆ ಎಸ್.ಪಿ.ಬಿ., ಕಿಶೋರ್ ಕುಮಾರ್, ಪಿ.ಬಿ.ಎಸ್., ಸೋನು ನಿಗಮ್ ಹಾಗೂ ಶ್ರೇಯಾ ಗೋಶಾಲ್. ಸಂಗೀತವು ಮನಸ್ಸಿಗೆ ಒಂದು ರೀತಿಯಾದ ಆಹ್ಲಾದ ನೀಡುತ್ತದೆ!
ಹೀಗೇ ಹಾಡು ಕೇಳುತ್ತಿರುವ ಸಮಯದಲ್ಲಿ ಸುದೀಪ್ ನಟಿಸಿರುವಂತಹ 'ಮೈ ಆಟೊಗ್ರಾಫ್' ಚಿತ್ರದ ಹಾಡು ಮನಸ್ಸಿಗೆ ತುಂಬಾ ಹಿಡಿಸಿತು. ಈ ಹಾಡು ಕೇಳುತಿದ್ದಂತೆ ನನ್ನ ಬಾಲ್ಯ ನೆನಪಾಯಿತು. ಈ ಹಾಡು ತುಂಬಾ ಅರ್ಥ ಪೂರ್ಣವಾಗಿದೆ.
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲ್ಲಿ ಬಚ್ಚಿಕೊಂಡಿರಿವ
ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಎದೆಯಾಳದಲ್ಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ
ಯಾವುದೊ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲೀ... ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು ...
ಮೊದ ಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದ ಮೊದಲ್ ಕದ್ದ ಜಾತ್ರೆಯ ವಾಚು
ಮೊದ ಮೊದಲ್ ಸೇದಿದ ಗಣೇಶ ಬೀಡಿ
ಮೊದ ಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದ ಮೊದಲ್ ಕಂಡ ಟೂರಿಂಗ್ ಸಿನಿಮಾ
ಮೊದ ಮೊದಲ್ ಗೆದ್ದ ಕಬಡ್ಡಿ ಆಟ
ಮೊದ ಮೊದಲ್ ಇದ್ದ ಹಳ್ಳಿಯ ಗರಿ ಮನೆ
ಮೊದ ಮೊದಲ್ ತಿಂದ ಕೈ ತುತ್ತೂಟ
ಮೊದ ಮೊದಲ್ ಅಡಿದ ಚುಕುಬುಕು ಪಯಣ
ಮೊದ ಮೊದಲ್ ಅಳಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಮೊದ ಮೊದಲ್ ಕಲಿತ ಅರೆ ಬರೆ ಈಜು
ಮೊದ ಮೊದಲ್ ಕೊಂಡ ಹೀರೋ ಸೈಕಲ್
ಮೊದ ಮೊದಲ್ ಕಲಿಸಿದ ಕಮಲಾ ಟೀಚರ್
ಮೊದ ಮೊದಲ್ ತಿಂದ ಅಪ್ಪನ ಏಟು
ಮೊದ ಮೊದಲ್ ಅದ ಮೊಣಕೈ ಗಾಯ
ಮೊದ ಮೊದಲ್ ತೆಗೆಸಿದ ಕಲರ್ ಕಲರ್ ಫೊಟೋ
ಮೊದ ಮೊದಲಾಗಿ ಚಿಗುರಿದ ಮೀಸೆ
ಮೊದ ಮೊದಲಾಗಿ ಮೆಚ್ಚಿದ ಹೃದಯ
ಮೊದ ಮೊದಲ್ ಬರೆದ ಪ್ರೇಮದ ಪತ್ರ
ಮೊದ ಮೊದಲಾಗಿ ಪಡೆದ ಮುತ್ತು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಅನುಲೇಖ: ಬಾಲ್ಯದ ನೆನಪುಗಳೇ ಹಾಗೆ. ನಮ್ಮ ಮನದಾಳದಲ್ಲಿ ಅಚ್ಚಳಿಯದೆ ಹಾಗೆ ಉಳಿದು ಬಿಡುತ್ತವೆ. ಆ ಬಾಲ್ಯ ಎಷ್ಟೊಂದು ಸುಂದರ ಅಲ್ವಾ?