ಭಾನುವಾರ, ನವೆಂಬರ್ 16, 2008

ಕಥೆ ಕಥೆ ಕಾರಣ, ಬೆಕ್ಕಿನ ತೋರಣ - ನಂಗೂ ಗೊತ್ತು!

ಕಥೆ ಕಥೆ ಕಾರಣ ಎಂಬ ಶರ್ಮರ ಪೋಸ್ಟ್ ನೋಡಿದಾಗ ಬಾಲ್ಯದಲ್ಲಿ ಹೇಳುತ್ತಿದ್ದ ಪದ್ಯವೊಂದು ನೆನೆಪಾಯಿತು. ಇನ್ನೂ ಸ್ವಲ್ಪ ದಿನ ಕಳೆದರೆ ಮರೆತು ಹೋಗಬಹುದು. ಹಾಗಾಗಿ ಈಗಲೇ ಹಾಕುತ್ತಿದ್ದೇನೆ...

ಕಥೆ ಕಥೆ ಕಾರಣ
ಬೆಕ್ಕಿನ ತೋರಣ
ಸಿದ್ಧೆಲ್ಲಿಪ್ಪಣ
ಸೀತಾ ದೇವಿಗೆ
ಹಿಟ್ ಕುಟ್ಟಲ್ ಕಪ್ಪೆ ಬಂತು
ಕಪ್ಪೆ ತಿನ್ನಲ್ ಹಾವ್ ಬಂತು
ಹಾವ್ ಹೊಡ್ಯಲ್ ದೊಣ್ಣೆ ಬಂತು
ದೊಣ್ಣೆ ಸುಡಲ್ ಬೆಂಕಿ ಬಂತು
ಬೆಂಕಿ ನಂದ್ಸಲ್ ನೀರ್ ಬಂತು
ನೀರ್ ಕುಡ್ಯಲ್ ಬಸವ ಬಂದ
ಬಸವನ್ ಕಟ್ಹಾಕಲ್ ದಾಬ್ ಬಂತು
ದಾಬ್ ಹರ್ಯಲ್ ಇಲಿ ಬಂತು
ಇಲಿ ಹೊಡ್ಯಲ್ ಅಜ್ಜ ಬಂದ
ಅಜ್ಜನ್ ಹೊಡ್ಯಲ್(ಕರ್ಯಲ್) ಅಜ್ಜಿ ಬಂತು
** *** ಮೂರು ಕಟ್ಟೆರ
ಕಟ್ಟಂ ಕಟ್ಟಂ ಕಟ್ಟಂ!!!


ಇದರಲ್ಲೇನಾದರೂ ತಪ್ಪಿದ್ದರೆ ಗೊತ್ತಿದ್ದವರು ತಿಳಿಸಿ.

27 ಕಾಮೆಂಟ್‌ಗಳು:

Unknown ಹೇಳಿದರು...

ಕಟಂ ಕಟಂ ಕಟ್ಟಂ ಅಂತ ನಮ್ಮನ್ನು ಚಿಗುಟಲು ಈ ಹಾಡನ್ನು ಹೇಳುತ್ತಾ ಬರುತ್ತಿದ್ದರು. ಅದರ ಹೊರತಾದ ಬದಲಾವಣೆ ಗೊತ್ತಿಲ್ಲ. ಪೂರ್ಣ ನೆನಪಿಸಿದ್ದಕ್ಕೆ ತ್ಯಾಂಕ್ಸ್

Harisha - ಹರೀಶ ಹೇಳಿದರು...

ಶರ್ಮರೆ, ಪದ್ಯ ನೆನಪಿಸಿದ್ದಕ್ಕೆ ನಿಮಗೆ ಮೊದಲ ಧನ್ಯವಾದಗಳು. ಯಾವಾಗ ಹೇಳುತ್ತಿದ್ದರು ಎಂಬುದನ್ನು ನೆನಪಿಸಿದ್ದಕ್ಕೆ ಎರಡನೆಯ ಧನ್ಯವಾದಗಳು. ಪ್ರತಿಕ್ರಿಯಿಸಿದ್ದಕ್ಕೆ ಮೂರನೆಯ ಧನ್ಯವಾದಗಳು :-) ಬರುತ್ತಿರಿ...

shivu.k ಹೇಳಿದರು...

ಹರೀಶ್,
ನಿಮ್ಮ ಹೊಸ ಚೈನ್ ಲಿಂಕ್ ಪದ್ಯ ಚೆನ್ನಾಗಿದೆ. ನಮ್ಮಲ್ಲೂ ಇಂಥದೇ ಒಂದು ಪದ್ಯವಿದೆ. ಮುದುಕನ ಮದುವೆ ಪದ್ಯ.

Harisha - ಹರೀಶ ಹೇಳಿದರು...

ಶಿವು, ಪ್ರತಿಕ್ರಿಯೆಗೆ ಧನ್ಯವಾದಗಳು. ಮುದುಕನ ಮದುವೆ? ಅದೇನು ಅಂತ ವಿವರವಾಗಿ ಬರೀರಿ...

Ittigecement ಹೇಳಿದರು...

ಹರೀಷ್.. ಈ ಪದ್ಯ ಮಗನಿಗೆ ಹೇಳಿ ಕೊಟ್ಟಿದ್ದೆ, "ದೊಣ್ಣೆ" ಹತ್ತಿರ ಮರೆತು ಹೋಗಿತ್ತು. ಈಗ ಪೂರ್ತಿಯಾಗಿ ಹೇಳಿ ಕೋಟ್ಟಿದ್ದೇನೆ.

ಹಳೆಯ ಇಂಥಹ ಹಾಡುಗಳು ಮಜಾಇರುತ್ತವಲ್ಲವೆ.. ?
ಉದಾಹರಣೆಗೆ " ಕಂಬ ಕಂಬದಾಟ..ನಿಂಬೆಯ ತೋಟ.."
ಎಷ್ಟು ಪ್ರಾಸ ಬದ್ಧವಾಗಿ..ಅಲ್ಲವ?

ಧನ್ಯವಾದಗಳು.

ಮನಸ್ವಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮನಸ್ವಿ ಹೇಳಿದರು...

ಹರೀಶ ಭರ್ತಿ ಇದಾಗಿ ಬರದ್ಯಪಾ.. ಎಂತು ಇದಾಗಿ ಅಂದ್ರೆ ಅಂದ್ಯ? ಚನ್ನಾಗಿ ಬರದ್ದೆ ಅಂದಿ

ಅಂತರ್ವಾಣಿ ಹೇಳಿದರು...

ಹರೀಶ್,
ನಾನು ಈ ಪದ್ಯವನ್ನು ಓದಿರಲಿಲ್ಲ.

"ಇಲಿ ಹೊಡ್ಯಲ್ ಅಜ್ಜ ಬಂದ
ಅಜ್ಜನ್ ಹೊಡ್ಯಲ್ ಅಜ್ಜಿ ಬಂತು" ತುಂಬಾ ಚೆನ್ನಾಗಿವೆ :)

Harisha - ಹರೀಶ ಹೇಳಿದರು...

ಪ್ರಕಾಶಣ್ಣ, ನಂಗೆ "ಕಂಬ ಕಂಬದಾಟ" ಗೊತ್ತಿಲ್ಲೆ.. ಫ್ರೀ ಇದ್ದಾಗ ಬರೆದು ಹಾಕಿ..

ಆದಿತ್ಯ, "ಇದಾಗಿ"?! ಹ್ಮ್ಂ... ಧನ್ಯವಾದಗಳು ಅಂದಿ :-)

ಜಯಶಂಕರ್ ಅವರೇ, ಇದೊಂದು ಜನಪದ.. ಹಾಗಾಗಿ ನೀವು ಬಹುಶಃ ಎಲ್ಲೂ ಓದಿರಲು ಸಾಧ್ಯವಿಲ್ಲ. "ಅಜ್ಜನ್ ಹೊಡ್ಯಲ್ ಅಜ್ಜಿ ಬಂತು" - ಈ ಸಾಲಿಗಿಂತ ಅದರ ಮುಂದಿನ ಸಾಲು ಮಜಾ ಇದೆ.. ಆದರೆ ಬ್ಲಾಗಿನಲ್ಲಿ ಬೇಡವೆಂದು ನಾನೇ ಸೆನ್ಸಾರ್ ಕತ್ತರಿಯಾಡಿಸಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.

g.mruthyunjaya ಹೇಳಿದರು...

'kathe kathe kaaraNa' kke bEre ondu version kooDa ide.
kathe kathe kaaraNa bekkina twaaraNa
kaasheeg hOdi kyande tandi
kyend yanta kodchu haayi kodchu
haayi yanta maadje ...heegE munduvaridu,
appaayya yanta koTTa
appachchi koTTa.
endu muktaayavaaguttade. illi appachchi endu ondu peTTu koDuvudu.
madhya biTTiruva bhaaga nanagoo maretuhOgide.
adara poorNa paaTha shreesham avarige maneyallE siguttade! kELi bareyali.

NilGiri ಹೇಳಿದರು...

ನಂಗಂತೂ ಗೊತ್ತಿರಲಿಲ್ಲ ಈ ಪದ್ಯ! ನಾವು " ಅಚ್ಚಚ್ಚೋ ಬೆಲ್ಲದಚ್ಚೋ...ಅಲ್ಲಿ ನೋಡು ಇಲ್ಲಿ ನೋಡು..." ಅಥವಾ .." ಕೈ ..ಕೈ ಎಲ್ಲಿಟ್ಟಿ? ಬಾಗಲಾಗ ಇಟ್ಟೆ.." ಪದ್ಯದ ಹಾಗಾ??!

sunaath ಹೇಳಿದರು...

ಹರೀಶ,ಇಂಥದೇ ಒಂದು ಬಾಲಕವನ ಹೀಗಿದೆ:

ಕಥಿ ಕಥಿ ಕಬ್ಬಿಣ--ಕಾಕಾದೇವಿ
ಧೂಪಾ ಒಯ್ದು--ದೇವರಿಗೆ ಕೊಟ್ಟೆ
ದೇವರು ನನಗ--ಅಚ್ಚಿ ತುಪ್ಪಾ ಕೊಟ್ಟ
ಅಚ್ಚಿ ತುಪ್ಪಾ ಒಯ್ದು--ಅಜ್ಜಗ ಕೊಟ್ಟೆ
ಅಜ್ಜ ನನಗ ದುಡ್ಡು ಕೊಟ್ಟ
ದುಡ್ಡು ಒಯ್ದು--ಗುಲಾಮಗ ಕೊಟ್ಟೆ
ಗುಲಾಮ ನನಗ--ಸಲಾಮ ಕೊಟ್ಟಾ

Harisha - ಹರೀಶ ಹೇಳಿದರು...

Gemjaya, ನಮ್ಮ ಬ್ಲಾಗಿಗೆ ಸ್ವಾಗತ.. ಶರ್ಮರಿಗೆ ಈ ಬಗ್ಗೆ ತಿಳಿಸಿದ್ದೇನೆ. ನೋಡೋಣ! ಪ್ರತಿಕ್ರಿಯೆಗೆ ಧನ್ಯವಾದಗಳು.

ಗಿರಿಜಾ ಅವರೇ, ನೀವು ಹೇಳಿದ ಪದ್ಯಗಳು ನನಗೆ ಗೊತ್ತಿಲ್ಲ! :-( ಬಿಡುವಿದ್ದಾಗ ಪೂರ್ತಿ ಹಾಕಿ.

ಸುನಾಥ್ ಅವರೇ, ನೀವು ಹಾಕಿರುವ ಪದ್ಯವನ್ನೂ ನಾನು ಕೇಳಿರಲಿಲ್ಲ. "ಅಚ್ಚಿ" ಅಂದ್ರೇನು?

Sandeepa ಹೇಳಿದರು...

Harish,
"ಅಜ್ಜನ್ ಹೊಡ್ಯಲ್ ಅಜ್ಜಿ ಬಂತು"
ಯಾಕೋ ಅಷ್ಟು ಸರಿ ಅಂತ ಅನ್ಸದಿಲ್ಲೆ.
ಅದು "ಅಜ್ಜನ್ ಕರ್ಯಲ್ ಅಜ್ಜಿ ಬಂತು" ಅಂತ ನನ್ನ ನೆನಪು.

Harisha - ಹರೀಶ ಹೇಳಿದರು...

ಸಂದೀಪ, ಹೌದಾ! ನಂಗೆ ಸರಿ ನೆನಪಿಲ್ಲೆ.. ನೀ ಹೇಳಿದ್ದೇ ಸರಿ ಅಂತ ಅನ್ಸ್ತು. ಯಾರ್ನಾರೂ ಕೇಳಿ ಪಕ್ಕಾ ಮಾಡ್ಕ್ಯಂಡು ತಿದ್ತಿ.

sunaath ಹೇಳಿದರು...

ಚಪಾತಿಗೆ ಬಾಲಭಾಷೆಯಲ್ಲಿ ಅಚ್ಚಿ ಎನ್ನುತ್ತಾರೆ.

Harisha - ಹರೀಶ ಹೇಳಿದರು...

ಸಂದೀಪ, ತಿದ್ದಿದ್ದಿ... ತಿಳ್ಸಿದ್ದಕ್ಕೆ ಥ್ಯಾಂಕ್ಸು :-)

ಸುನಾಥರೇ, ಹೊಸ ಪದ ಪರಿಚಯಿಸಿದ್ದಕ್ಕೆ ನಿಮಗೂ ಸಹ ಧನ್ಯವಾದಗಳು :-)

NilGiri ಹೇಳಿದರು...

ಇದು ನಮ್ಮತ್ತೆ ಹೇಳಿಕೊಟ್ಟಿದ್ದು :)

ಕೈ ಕೈ ಎಲ್ಲಿಟ್ಟಿ?ಬಾಗಲಾಗ ಇಟ್ಟೆ,
ಬಾಗಲೇನ ಕೊಟ್ತು? ಕಸಬರಿಗಿ ಕೊಟ್ತು
ಕಸಬರಗಿಲೆ ಏನ ಮಾಡ್ದಿ? ಕಸಾ ಬಳದೆ
ಕಸಾ ಏನು ಮಾಡ್ದಿ? ತಿಪ್ಪಿಗೆ ಚಲ್ದೆ
ತಿಪ್ಪಿ ಏನು ಕೊಟ್ತು? ಗೊಬ್ಬರ ಕೊಟ್ತು
ಗೊಬ್ಬರ ಏನ ಮಾಡ್ದಿ? ಹೊಲಕ್ಕ ಹಾಕ್ದೆ
ಹೊಲ ಏನು ಕೊಟ್ತು? ಜ್ವಾಳ ಕೊಟ್ತು
ಜ್ವಾಳ ಏನು ಮಾಡ್ದಿ? ರೊಟ್ಟಿ ಮಾಡ್ದೆ
ರೊಟ್ಟಿ ಏನು ಮಾಡ್ದಿ? ಗಂಡಗ ಕೊಟ್ಟೆ..
ಹೊಹೊಹೊಹೊ...!!

ಇದು ನಾವು ಹಾಡ್ತಾ ಇದ್ದಿದ್ದು :)

ಅಚ್ಚಚ್ಚೋ....ಬೆಲ್ಲದಚ್ಚೋ
ಅಲ್ಲಿ ನೋಡು...ಇಲ್ಲಿ ನೋಡು
ಕೆಂಪತ್ತಿ ಮರದಲಿ ಗುಂಪು ನೋಡು
ಯಾವ ಗುಂಪು; ಕಾಗೆ ಗುಂಪು
ಯಾವ ಕಾಗೆ; ಕಪ್ಪು ಕಾಗೆ
ಯಾವ ಕಪ್ಪು; ಇದ್ದಿಲು ಕಪ್ಪು
ಯಾವ ಇದ್ದಿಲು; ಸೌದೆ ಇದ್ದಿಲು
ಯಾವ ಸೌದೆ;ಕಾಡು ಸೌದೆ
ಯಾವ ಕಾಡು;ಸುಡಗಾಡು
ಯಾವ ಸುಡು; ರೊಟ್ಟಿ ಸುಡು
ಯಾವ ರೊಟ್ಟಿ;ತಿನ್ನೋ ರೊಟ್ಟಿ
ಯಾವ ತಿನ್ನ; ಏಟು ತಿನ್ನಾ
ಯಾವ ಏಟು; ದೊಣ್ಣೆ ಏಟು..
ಯಾವ ದೊಣ್ಣೆ;ದಪ್ಪ ದೊಣ್ಣೆ
ಯಾವ ದಪ್ಪ; ಹೊಟ್ಟೆ ದಪ್ಪ
ಯಾವ ಹೊಟ್ಟೆ; ನಿನ್ನ ಹೊಟ್ಟೆ...ನಿನ್ನ ಹೊಟ್ಟೆ..ಹೊಹೊಹೊಹೊ!!

ನಮ್ಮ ಚಿಕ್ಕಂದಿನ ಪದ್ಯಗಳೆಲ್ಲಾ ಮರೆತು ಹೋಗಬಾರದೆಂದು ನೆನಪಿದ್ದ ಕೆಲವನ್ನು ಬ್ಲಾಗಿನಲ್ಲಿ ಬಂಧಿಸಿಟ್ಟಿದ್ದೇನೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ...
‘ಅಜ್ಜನ್ ಹೊಡೆಯಲೆ ಅಜ್ಜಿ ಬಂತು’ ಅಂತ ನೆನಪು.

Harisha - ಹರೀಶ ಹೇಳಿದರು...

ಶಾಂತಲಕ್ಕ, ಇದೊಳ್ಳೆ ಕಥೆ ಆತಲ! ನಂಗೂ ಹೊಡ್ಯಲೆ ಅಂತ್ಲೇ ನೆನಪು. ಆದರೆ ಸಂದೀಪ ಹುಡ್ಕಲೆ ಅಂತ ಅಂದಿದ್ದಕ್ಕೆ ಬದಲಾಯ್ಸಿದಿ.. ಯಾವುದು ಸರಿ ಅಂತ ನಿಂಗ್ಳೇ ನಿರ್ಧರಿಸಿ ಹೇಳಿ!

Harisha - ಹರೀಶ ಹೇಳಿದರು...

ಗಿರಿಜಾ ಅವರೇ, ನೀವು ಹಾಕಿರುವ ಎರಡೂ ಪದ್ಯಗಳು ಮಜವಾಗಿವೆ. ಪೂರ್ತಿ ಹಾಕಿದ್ದಕ್ಕೆ ಅನಂತ ಧನ್ಯವಾದಗಳು. ನಿಮ್ಮ ಕಡೆ ರೊಟ್ಟಿ ಹೆಚ್ಚು ಬಳಕೆಯಲ್ಲಿದೆ ಎಂದು ಕಾಣುತ್ತದೆ! :-)

ಮನಸ್ವಿ ಹೇಳಿದರು...

ಹರೀಶ... ನಿನ್ನಂಗೆ ಎಂಗೂ ಸಂದೀಪ ಹೇಳಿದ್ದು ಸರಿನಾ, ಶಾಂತಲಾ ಭಂಡಿ ಹೇಳಿದ್ದು ಸರಿನಾ, ಅಥವಾ ಇಬ್ಬರು ಸರಿನಾ, ಅಥವಾ ಇಬ್ರಲ್ಲಿ ಒಬ್ರು ತಪ್ಪಾ ಅಂತ ಗೊತಾಗ್ತಿಲ್ಲೆ, !
ಎನ್ನ ಪ್ರಕಾರನೂ ಹುಡ್ಕಲೆ ಅಜ್ಜಿ ಬಂತು ಸರಿ ಅನುಸ್ತು... ಎಂತೇನ ಸರಿ ಗೊತ್ತಿಲ್ಲೆ ಮಾರಾಯಾ!(ಹಿಂಗೆ ಹೇಳ್ಬಿಟ್ರೆ ಒಳ್ಳೆದಲ್ದಾ?!)

ವಿ.ರಾ.ಹೆ. ಹೇಳಿದರು...

ಪೋಸ್ಟು , ಕಮೆಂಟ್ಸು ಎರಡರಿಂದಲೂ ಸುಮಾರು ತಿಳ್ಕಂಡಂಗಾತು. thanx :)

ಶ್ಯಾಮಾ ಹೇಳಿದರು...

ನಂಗೆ ಗೊತ್ತಿರ ಪದ್ಯ ಹಿಂಗಿದ್ದು....

ಕಥೆ ಕಥೆ ಕಾಪಿ
ಒಲೆ ಮುಂದೆ ಗೋಪಿ
ಗೋಕರ್ಣದ ಅಜ್ಜಿ
ಹಿಟ್ ಬಿಸಕ್ಕೆ ಬಂತು
ಹಿಟ್ಟಿನ ಮೇಲೆ ಕಟ್ಟೇರ
ಕಟ್ಟೇರನ ತಿನ್ನಕ್ಕೆ ಕಪ್ಪೆ ಬಂತು
ಕಪ್ಪೆ ನುಂಗಕ್ಕೆ ಹಾವು ( ಹಾಂವು :) )ಬಂತು
ಹಾವಿನ್ ಸುಡಕ್ಕೆ ಬೆಂಕಿ ಬಂತು
ಬೆಂಕಿ ನಂದ್ಸಕ್ಕೆ ನೀರ್ ಬಂತು
ನೀರು ಕುಡ್ಯಕ್ ಎತ್ತು ಬಂತು
ಎತ್ತಿನ್ ಕಾಯಕ್ ಅಜ್ಜ ಬಂದ
ಅಜ್ಜನ್ ಕಾಲಿಗ್ ಕಟ್ಟೇರ್ ಕಚ್ಚಿ ಗೋವಿಂದ!

ಚಿತ್ರಾ ಸಂತೋಷ್ ಹೇಳಿದರು...

ಸೂಪರ್ರುಉಉ!
-ಚಿತ್ರಾ

Sree ಹೇಳಿದರು...

ಮುತ್ತಿನ ತೋರಣ ಅಂತ ಈಟಿವಿಯಲ್ಲಿ ಸೀರಿಯಲ್ ಬರತ್ತೆ(ನಾನ್ ನೋಡಲ್ಲ), ಅದರ ಟೈಟಲ್ ಸಾಂಗ್ - ಕಥೆ ಕಥೆ ಕಾರಣ ಮುತ್ತಿನ ತೋರಣ...ಅಂತ ಷುರು ಆಗತ್ತೆ...

Harisha - ಹರೀಶ ಹೇಳಿದರು...

ಆದಿತ್ಯ,
ಅವಿಬ್ರದ್ದೂ ತಪ್ಪಿಲ್ಲೆ.. ಅವರವರ ಅನಿಸಿಕೆ ಅವು ಹೇಳಿದ್ದ.. ಅಡ್ಡ ಗೋಡೆ ಮೇಲೆ ದೀಪ ಇಟ್ಹಂಗೆ ಹೇಳಿದ್ಯಲ, ನಿಂದೇ ತಪ್ಪು ;-) ಬರ್ತಾ ಇರು..

ವಿಕಾಸ,
ಜೀವನ ಪೂರ್ತಿ ತಿಳ್ಕಂಡ್ರೂ ಮುಗೀತಿಲ್ಲೇ.. ನಾನೂ ಬರ್ದಿದ್ದಕ್ಕಿಂತ ಹೆಚ್ಚು ಕಾಮೆಂಟ್ನಿಂದ ತಿಳ್ಕಂಡಿ :-) ಬರ್ತಾ ಇರು.

ಶ್ಯಾಮಾ,
ನಮ್ಮ ಬ್ಲಾಗಿಗೆ ಸ್ವಾಗತ :-) ನೀ ಹೇಳಿರ ಪದ್ಯ ಗೊತ್ತಿರಲ್ಲೆ.. ಸದ್ಯ ನಿನ್ ಪದ್ಯದಲ್ಲಿ ಅಜ್ಜನ್ ಕಾಲಿಗಷ್ಟೇ ಕಟ್ಟೆರ ಕಚ್ತು :D ಬರ್ತಾ ಇರು..

ಚಿತ್ರಾ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸುಉಉ :-) ಬರ್ತಾ ಇರಿ..

ಶ್ರೀಮಾತಾ,
ಇನ್ನೊಂದು ವರ್ಶನ್ ತಿಳಿಸಿದ್ದಕ್ಕೆ ಧನ್ಯವಾದಗಳು. ಆ ಧಾರಾವಾಹಿ ಟೈಟಲ್ ಸಾಂಗ್ ನೋಡ್ಬೇಕಾಯ್ತು :-) ಬರ್ತಾ ಇರಿ...