ಗುರುವಾರ, ಏಪ್ರಿಲ್ 11, 2019

ಭಾವರಂದ್ರ



ನಕ್ಷತ್ರಗಳು ಮಿನುಗುತ್ತಿವೆ
ತನ್ನ ಸುತ್ತ ಜೀವ ತುಂಬಿಸಿ

ಹಲವು ಭೂಮಿಗಳು ನಲಿದಿವೆ
ನೂರು ನೆನಪುಗಳ ಕೂಡಿಸಿ

ತಾರೆಗಳಿಗೂ ಮುಪ್ಪಾವರಿಸಿದೆ
ನಲಿವುಗಳು ನೆನಪುಗಳಾಗಿವೆ

ಸಣ್ಣ ತಾರೆಗದು ಸಿಡಿಯುವ ಚಕ್ರ
ದೊಡ್ಡ ನಕ್ಷತ್ರವಿನ್ನು ಕಪ್ಪು ರಂದ್ರ

ಕಪ್ಪುರಂದ್ರವದು ಬಹು ಸಾಂದ್ರ
ಭಾವನೆಗಳೂ ಹೊರನುಸುಳವಿನ್ನು

ಕಪ್ಪು ಗೋರಿಗಳು ಜಗಕೆ ನಿರ್ಜೀವ
ಆದರದಕೆ ತನ್ನೊಳಗೊಂದು ವಿಶ್ವ

ಇಲ್ಲಿ ಕಾಣುವುದೆಲ್ಲವೂ ಸಾಪೇಕ್ಷ
ಆದರೆ ಇರುವುದೆಲ್ಲವೂ ನಿರಪೇಕ್ಷ

ಕಪ್ಪುಗೋರಿಗಳೂ ಇಲ್ಲಿ ಸಾಯುತ್ತಿವೆ
ಭಾವಗಳು ವಿಕಿರಣವಾಗಿ ನಶಿಸುತ್ತಿವೆ