ಶುಕ್ರವಾರ, ಫೆಬ್ರವರಿ 1, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೨)

ಮೊದಲನೆಯ ಭಾಗದಿಂದ ಮುಂದುವರೆದಿದೆ

ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.

ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.

ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್‍ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!

ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:

"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...

ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.

"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...

ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.

"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"

ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.

ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.

ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.

ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...

"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"

ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...

ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.

*******

ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.

"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!