ಮಂಗಳವಾರ, ಸೆಪ್ಟೆಂಬರ್ 27, 2011

ಬಾರೆನ್ನ ನಲ್ಲೆ

ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ

ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ

ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ

ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ

ಮಂಗಳವಾರ, ಸೆಪ್ಟೆಂಬರ್ 13, 2011

ಗೆಳತಿಗೊಂದು ಪತ್ರ

ಗೆಳತಿ,

ಅದೇನೋ ಹೇಳುತ್ತಾರಲ್ಲ ಮೊದಲ ಪ್ರೀತಿ ಮರೆಯೋಕೆ ಸಾಧ್ಯ ಇಲ್ಲ ಅಂತ.. ಅದು ಅಕ್ಷರಶಃ ನಿಜ ಕಣೇ. ಆ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ನಿನ್ನ ನೆನಪು ನನ್ನ ಮನಸ್ಸಿನಲ್ಲಿ ಒಂಚೂರೂ ಅಚ್ಚಳಿಯದೆ ಹಾಗೇ ಇದೆ. ಫಳಫಳ ಹೊಳೆಯುವ ದುಂಡನೆಯ ಬಿಳುಪಾದ ಮುಖ, ಕಡುಗಪ್ಪು ಕೂದಲು, ಇವುಗಳಿಗೆ ಹೊಂದುವ ತೆಳುಗುಲಾಬಿ ಬಣ್ಣದ ತುಟಿಗಳು, ನಕ್ಕರೆ ಗುಳಿ ಬೀಳುವ ಬಲಗೆನ್ನೆ, ತಿದ್ದಿ ತೀಡಿದಂತಹ ಹುಬ್ಬು, ನೇರನೋಟಕ್ಕೆ ಸಿಕ್ಕಿದರೆ ಕೊಂದುಬಿಡಡುತ್ತವೇನೋ ಎಂಬಂಥ ಕಣ್ಣುಗಳು, ದಷ್ಟಪುಷ್ಟವಾದರೂ ದಪ್ಪ ಎನ್ನಲಾಗದ ಸುಂದರ ಮೈಮಾಟ, ತನ್ನನ್ನು ಯಾರು ಗಮನಿಸುತ್ತಿದ್ದಾರೆಂದು ಕದ್ದು ನೋಡುವ ಓರೆಗಣ್ಣ ನೋಟ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಸ್ವಭಾವ, ಮಾತನಾಡುವಾಗ ನವರಸಭರಿತ ಹಾವ ಭಾವ - ಇಷ್ಟು ಹೇಳಿದರೆ ಬಹುಶಃ ನಿನ್ನ ಅಂದವೆಂಬ ರಸದೌತಣದ ಒಂದಗುಳಷ್ಟನ್ನಾದರೂ ವರ್ಣಿಸಿದಂತಾಗುತ್ತದೆಯೇನೋ! ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಿದ್ದೇನೆ ಎಂದು ಬೇಸರಗೊಳ್ಳಬೇಡ. ಅಥವಾ ನಿನ್ನ ರೂಪಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದಿದ್ದೆ ಎಂದು ತಪ್ಪು ತಿಳಿಯಬೇಡ. ನಿನ್ನ ಅಂದಕ್ಕಿಂತ ಹೆಚ್ಚಾಗಿ ನನಗೆ ನನಗಿಷ್ಟವಾಗಿದ್ದು ನಿನ್ನ ಗುಣ.

ಅಂದೊಂದು ದಿನ ನಮ್ಮ ಪರೀಕ್ಷೆಯ ಫಲಿತಾಂಶ ಬಂದು ನಾನು ೪ ವಿಷಯಗಳಲ್ಲಿ ಫೇಲ್ ಆಗಿ, ಮನೆಗೂ ಹೋಗದೆ ಬೇಸರದಿಂದ ಒಂಟಿಯಾಗಿ ಕುಳಿತಿದ್ದಾಗ ಬಂದು ನನ್ನನ್ನು ಸಂತೈಸಿದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ? "ರಘು, ಬದುಕು ಎಂದರೆ ಕೇವಲ ನಾವು ಕಾಲೇಜಿನಲ್ಲಿ ಓದಿ ಬರೆಯುವ ಪರೀಕ್ಷೆಯಲ್ಲ. ಅದು ಬಾಳಿನ ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಲೆ. ನೀನು ಹೀಗೆ ಖಿನ್ನನಾಗಿ ಕುಳಿತು ಹಿಂದಿನದನ್ನು ನೆನೆಯುತ್ತಾ ಕೂರೋ ಬದಲು ಮುಂದೆ ಏನು ಮಾಡಬೇಕು ಅನ್ನೋದನ್ನ ಯೋಚಿಸು. ಇವತ್ತು ಪರೀಕ್ಷೆಯಲ್ಲಿ ಫೇಲಾದರೇನಾಯ್ತು.. ಮತ್ತೆ ಪರೀಕ್ಷೆ ಕಟ್ಟಿ ಪಾಸಾಗಬಹುದು. ನಿನ್ನ ಜೀವನ ಮುಗಿದಿಲ್ಲ. ಇಂದಲ್ಲ ನಾಳೆ ನೀನು ಏನಾದರೂ ದೊಡ್ಡದನ್ನ ಸಾಧಿಸಿಯೇ ಸಾಧಿಸ್ತೀಯ ರಘು.. ಆ ಭರವಸೆ ನನಗಿದೆ" ಎಂದು ನೀನು ಅಂದು ಹೇಳಿದ್ದು ನನಗೆ ಇನ್ನೂ ಕಿವಿಯಲ್ಲಿ ರಿಂಗಣಿಸ್ತಾ ಇದೆ. ಅದೇ ನನ್ನ ಬಾಳಿನ ಮುಖ್ಯ ತಿರುವು ಆಗಿತ್ತು ಅಂತ ಇವತ್ತು ನನಗೆ ಗೊತ್ತಾಗ್ತಿದೆ. "ಇನ್ನು ಮುಂದೆ ಈ ರೀತಿ ಮುಖ ಜೋಲು ಮಾಡ್ಕೊಂಡು ಕೂರಲ್ಲ; ಏನೇ ಬರಲಿ ಎದುರಿಸ್ತೀನಿ ಅಂತ ಮಾತು ಕೊಡು ರಘು" ಎಂದು ನೀನು ಕೈ ಚಾಚಿದೆಯಲ್ಲ, ಆ ಕ್ಷಣಕ್ಕೆ ನನಗೆ ಏನು ಮಾಡಬೇಕೆಂದೇ ತೋಚಿರಲಿಲ್ಲ. ಎರಡು ನಿಮಿಷ ಯೋಚಿಸಿ ಆಗಲಿ ಎಂದು ನಿನ್ನ ಕೈಯೊಳಗೆ ಕೈಯಿರಿಸಿ ಮುಗುಳ್ನಕ್ಕಿದ್ದೆ. ಅಂದಿನ ರಾತ್ರಿ ನನಗೆ ನಿದ್ದೆ ಬಂದಿರಲಿಲ್ಲ. ನೀನು ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಂದು ನಾ ಹಿಡಿದ ನಿನ್ನ ಕೈ ಸದಾ ನನ್ನೊಂದಿಗಿರುತ್ತದೆ ಎಂದೇ ಭಾವಿಸಿದೆ. ಅದೇ ನನಗೆ ಬಂದಿದ್ದನ್ನು ಎದುರಿಸುವ ಶಕ್ತಿಯನ್ನು ನೀಡಿತ್ತು. ಮುಂದಿನ ಸೆಮೆಸ್ಟರಿನಲ್ಲಿ ಚೆನ್ನಾಗಿ ಓದಿ ಎಲ್ಲಾ ವಿಷಯಗಳಲ್ಲೂ ತೇರ್ಗಡೆಯಾದೆ. ನನ್ನ ಫಲಿತಾಂಶವನ್ನು ನಾನು ನೋಡುವ ಮೊದಲೇ ನನ್ನ ಬಳಿ ಬಂದು "ರಘು, ನೀನು ಗ್ರೇಟ್ ಕಣೋ... ಎಲ್ಲಾ ಸಬ್ಜೆಕ್ಟಿನಲ್ಲೂ ಪಾಸಾಗಿದೀಯ.. ಈ ಸೆಮ್ ಡಿಸ್ಟಿಂಕ್ಷನ್ ಬೇರೆ ಬಂದಿದೆ" ಅಂತ ಹೇಳಿದ್ದು ನೋಡಿ ನನಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ. "ನಾನೂ ಪಾಸಾಗಿದೀನಿ ಕಣೋ" ಎಂದು ನೀನು ಹೇಳಿದಾಗಲೇ ನನಗೆ ತಿಳಿದಿದ್ದು ನಿನ್ನ ಫಲಿತಾಂಶ ಏನಾಗಿದೆ ಎಂಬುದನ್ನೂ ಕೇಳಿರಲಿಲ್ಲ ಅಂತ.

ನಮ್ಮಿಬ್ಬರ ಒಡನಾಟ ಅಂದಿನಿಂದ ಹೆಚ್ಚಿದ್ದು ನಿನಗೂ ಗೊತ್ತು. ಗೆಳೆಯರೆಲ್ಲ ನಮ್ಮ ಬೆನ್ನ ಹಿಂದೆ ನಮ್ಮನ್ನು ಲವರ್ಸ್ ಎಂದು ಹೇಳುತ್ತಿದ್ದರು. ನೀನು ಅದನ್ನು ಕೇಳಿಯೂ ಕೇಳದಂತೆ ಇರುತ್ತಿದ್ದಿದ್ದನ್ನು ನೋಡಿ ನಿನಗೂ ಅದೇ ಭಾವನೆಯಿದೆ ಎಂದು ಭಾವಿಸಿದೆ. ನಿನಗೆ ನನ್ನ ಬಗ್ಗೆ ಏನು ಅನಿಸಿಕೆ ಇತ್ತೋ ನಾ ಕಾಣೆ. ಆದರೆ ನಾನು ಮಾತ್ರ ನಿನ್ನನ್ನು ನನ್ನ ಬಾಳಿನ ಬೆಳಕು ಎಂದೇ ನಾನು ಭಾವಿಸಿದೆ. ಅದನ್ನೆಂದೂ ನಿನ್ನ ಮುಂದೆ ಹೇಳಬೇಕೆನಿಸಲೇ ಇಲ್ಲ ಅಥವಾ ಹೇಳಬೇಕೆನಿಸಿದರೂ ಅಕಸ್ಮಾತ್ ಅದರಿಂದ ನಮ್ಮ ಸ್ನೇಹಕ್ಕೆಲ್ಲಿ ಕುತ್ತು ಬರುವುದೋ ಎಂಬ ನನ್ನಲ್ಲಿನ ಅಂಜಿಕೆ ಕೇಳದಂತೆ ಮಾಡಿತೋ ಗೊತ್ತಿಲ್ಲ. ನಮ್ಮನ್ನು ನೋಡಿ ಎಲ್ಲರೂ ಒಳಗೇ ಹೊಟ್ಟೆಕಿಚ್ಚು ಪಡುತ್ತಿದ್ದಿದ್ದೂ ನನ್ನ ಗಮನಕ್ಕೆ ಬಂದಿತ್ತು. ಒಟ್ಟಿನಲ್ಲಿ ಆ ಎರಡು ವರ್ಷಗಳ ಕಾಲ ಮಿಂಚಿನಂತೆ ಬಂದು ಮರೆಯಾಗಿ ಹೋಯಿತು. ವಿದ್ಯಾಭ್ಯಾಸ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ನಾನು ನಿನಗೆ "ಆಲ್ ದಿ ಬೆಸ್ಟ್ ಫಾರ್ ಯುವರ್ ಫ್ಯೂಚರ್" ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ "ಥ್ಯಾಂಕ್ಸ್ ರಘು.. ನಿನಗೂ ಸಹ.. ಬಾಳಿನಲ್ಲಿ ಬಯಸಿದ್ದೆಲ್ಲ ಸಿಗಲಿ" ಎಂದು ಬೀಳ್ಕೊಟ್ಟೆ. ಆದರೆ ಆ ಕ್ಷಣವೂ, ಪ್ರತಿ ಕ್ಷಣವೂ ನಾ ಬಯಸಿದ್ದು ನಿನ್ನನ್ನೇ ಎಂದು ನಿನಗೆ ಹೇಗೆ ತಾನೇ ತಿಳಿದೀತು? ತಿಳಿಯಲು ನಾ ತಿಳಿಸಿದ್ದರೆ ತಾನೆ? ನೀ ಹೋದ ದಾರಿಯನ್ನೇ ನಾನು ನೋಡುತ್ತಿದ್ದೆ. ಒಮ್ಮೆ ತಿರುಗಿ ನೋಡುತ್ತೀಯೇನೋ ಎಂದು... ಊಹೂಂ, ನೀನು ತಿರುಗಲೇ ಇಲ್ಲ.

ಕಾಲೇಜು ಮುಗಿಸಿದ ತಕ್ಷಣ ನೀನು ಊರಿಗೆ ಹೋಗಿದ್ದರಿಂದ ನಿನ್ನ ಸಂಪರ್ಕ ಮಾಡಲೇ ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಕಾದೆ.. ನೀನು ಮತ್ತೆ ಸಿಗುತ್ತೀಯೇನೋ ಅಂತ.. ಆದರೆ ಸಿಗಲಿಲ್ಲ. ನೀನು ಸಿಗುತ್ತೀಯ ಅನ್ನೋ ಭರವಸೆ ನನಗೆ ಈಗ ಉಳಿದಿಲ್ಲ. ಆದರೆ ನಾನು ನನ್ನ ಕಾಲ ಮೇಲೆ ನಿಂತು ಸುಖವಾಗಿ ಇರೋದಕ್ಕೆ ಆ ದಿನ ನನಗೆ ಧೈರ್ಯ, ವಿಶ್ವಾಸ ತುಂಬಿದ ನೀನೇ ಕಾರಣ. ಅದನ್ನ ನನ್ನಿಂದ ಎಂದಿಗೂ ಮರೆಯೋಕೆ ಸಾಧ್ಯ ಇಲ್ಲ. ಮುಂದಿನ ಜನ್ಮವೇನಾದರೂ ಇದ್ದರೆ ಈ ಜನ್ಮದಲ್ಲಿ ಆದಂತಾಗದಿರಲಿ. ನೀನು ನನಗೆ ಸಿಗುವಂತಾಗಲಿ ಅಂತ ದೇವರ ಹತ್ರ ಕೇಳ್ಕೋತೀನಿ. ಯಾವ ಹೂವು ಯಾರ ಮುಡಿಗೋ ಅನ್ನುತ್ತಾರಲ್ಲ.. ಇದಕ್ಕೇ ಇರಬೇಕು ಕಣೇ. ಇನ್ನೇನೂ ಬರೆಯಲಾಗುತ್ತಿಲ್ಲ. ನಿನಗೆ ನನ್ನ ಬಗ್ಗೆ ಏನು ಭಾವನೆಯಿತ್ತು, ಅಥವಾ ಈಗ ಯಾವ ಭಾವನೆಯಿದೆ ಎಂದೇ ತಿಳಿಯದೆ ಇಷ್ಟೆಲ್ಲಾ ಬರೆದಿದ್ದಕ್ಕೆ ಕ್ಷಮಿಸಿಬಿಡು..

ಎಂದೆಂದೂ ನಿನ್ನವ,
ರಘು

ಬುಧವಾರ, ಸೆಪ್ಟೆಂಬರ್ 7, 2011

ಮನದ ಹಕ್ಕಿ

ಪಂಜರದಿ ಹೊರಗೆ ಬಾರೊಮ್ಮೆ,
ರೆಕ್ಕೆಯನು ಬಿಚ್ಚಿ ಮನದಿ ಹಾರೊಮ್ಮೆ

ತೇಲಾಡುತ ನೀ ತರುವಾಯ,
ತೆರೆಯ ಮರೆಯಿಂದ ಸರಿದು ಹಾರೊಮ್ಮೆ

ಮರುಕವ ಮರೆಮಾಚುತ ಬರಿದಾದ ಬಯಲಿನಾಚೆಗೆ,
ಹಸಿರೆಡೆಗೆ ಹಸಿದು ಹಾರೊಮ್ಮೆ

ಭಾವನೆಗಳ ಗರಿಯನು ಕೆದರಿ,
ಭರಸದಿ ಮುಗಿಲೆಡೆಗೆ ನಲಿಯುತ ಹಾರೊಮ್ಮೆ

ಕನಸುಗಳ ಮೋಡವ ಸನಿಹದಿ ನೋಡುತ,
ಸ್ವಪ್ನಸಾಗರದೇರಿಯ ಮೇಲೆ ಹಾರೊಮ್ಮೆ

ಒಮ್ಮೆಯಾದರೂ ರೆಕ್ಕೆಯನು ಬಿಚ್ಚಿ ಮನದಿ ನೀ ಹಾರೊಮ್ಮೆ

ಸೋಮವಾರ, ಆಗಸ್ಟ್ 29, 2011

ಜ್ಞಾನದ ಹರಿವು

ನಕ್ಷತ್ರಗಳ ಮೊತ್ತ
ಎಣಿಸಿದಷ್ಟು ನೋಡ

ಅಬ್ಧಿಯ ಆಳ
ಮುಳುಗಿದಷ್ಟು ನೋಡ

ಭೂಮಿಯ ವಿಸ್ತಾರ
ಅಗೆದಷ್ಟು ನೋಡ

ಆಕಾಶದ ಅಗಲ
ಅಳೆದಷ್ಟು ನೋಡ

ಜ್ಞಾನದ ಹರಿವು
ನಕ್ಷತ್ರಾಬ್ಧಿಭೂಮ್ಯಾಕಾಶ ನೋಡ

ಭಾನುವಾರ, ಆಗಸ್ಟ್ 14, 2011

ಕೆಚ್ಚದೆಯ ಕರುಳ ಕುಡಿಗಳೇ..

ಭಾರತ ಮಾತೆಯ ಕೆಚ್ಚದೆಯ ಕರುಳ ಕುಡಿಗಳೇ,
ಮನವ ಮಾತೃಭೂಮಿಗೆ ಮುಡಿಸಿ,
ನೈಜ ಬದುಕ ಬಿಂಬಿಸುವ ಆಚರಣೆ ಎಲ್ಲಿಹುದು,
ಸ್ವಂತ ಸಂಸ್ಕೃತಿಯ ಪರಿಭಾಷೆ ಎನಿಸುವ ನಡತೆ ಎಲ್ಲಿಹುದು,
ಒಗ್ಗಟ್ಟ ಬಲವು ಮೆರೆಸುವ ಆ ಏಕಮತವೆಲ್ಲಿಹುದು,
ಸಹನೆಯ ಸರಿಯಾದ ಅರ್ಥವೆಲ್ಲಿಹುದು,
ಪ್ರಶ್ನಿಸು ನಿನ್ನನೊಮ್ಮೆ ನೀ,
ತಿರುಗಿ ನೋಡೊಮ್ಮೆ ವೀರ ಮನಗಳ ನಡೆದ ದಾರಿಯನು,
ಗುರಿಯೊಂದೆ ಬದುಕಿನಲಿ,
ಬಲವೊಂದು ಮುಷ್ಟಿಯಲಿ,
ಕಠಿಣ ದಾರಿಯ ಕರಗಿಸಿ,
ರಕ್ತದೋಕುಳಿಯ ಹರಿಸಿ,
ಎಲ್ಲಿರುವರಲ್ಲಿಂದ ಸ್ವಂತ ಜೀವನ ಮರೆತು,
ಸ್ವಾತಂತ್ರ ಪಡೆದ ವೀರ ಜನತೆಯರತ್ತ,
ಈ ಮಾತೃಭೂಮಿಯ ಮುದ್ದಿನ ಕಂದಗಳತ್ತ.
ಪ್ರಶ್ನಿಸೊಮ್ಮೆ ನಿನ್ನ ನೀ,
ಎಲ್ಲಿರುವೆವು ಇಂದು ನಾವು ಸ್ವಾತಂತ್ರ್ಯದ ಅರ್ಥದಲಿ...

ಸೋಮವಾರ, ಆಗಸ್ಟ್ 8, 2011

ಬರಬಾರದೇ ಒಮ್ಮೆ

ಬರಬಾರದೇ ಒಮ್ಮೆ
ಕಳೆದು ಹೋದ ನನ್ನ ಬಾಲ್ಯ
ತರಬಾರದೇ ಒಮ್ಮೆ
ಮೊಗದಿ ಮುಗ್ಧ ನಗುವಿನ ಲಾಸ್ಯ |ಪ|

ಮರ ಕೋತಿ ಕಣ್ಣಾ ಮುಚ್ಚಾಲೆ
ಕಳ್ಳ ಪೊಲೀಸ್ ರಾಜ ರಾಣಿ
ನಾಗರ ಪಂಚಮಿಗೆ ಉಯ್ಯಾಲೆ
ಮಳೆ ಬಂದರೆ ಕಾಗದ ದೋಣಿ |೧|

ಯಾರಿಗೆ ಬೇಕು ತೆಂಗಿನ ಕಾಯಿ
ಬೇಕಿದ್ದಿದ್ದು ಕೇವಲ ಕರಟ
ಬಯ್ತಾ ಇದ್ರೂ ತಂದೆ ತಾಯಿ
ಆಡ್ತಾ ಇದ್ದೆ ಲಗೋರಿ ಆಟ |೨|

ಇದ್ದರಾಯ್ತು ಬಾಲು ಬ್ಯಾಟು
ಇಲ್ದೇ ಹೋದರೆ ಚಿನ್ನಿ ದಾಂಡು
ಬೇಕೇ ಇಲ್ಲ ಗರಿಗರಿ ನೋಟು
ಅದು ಕೇವಲ ಕಾಗದ ತುಂಡು |೩|

ಶನಿವಾರ, ಜುಲೈ 23, 2011

ಅಲೆ

ಕಣ್ಣ ಕಡಲೊಳಗೊಂದು ಕನಸು ಹೆಣೆಯುವ ಅಲೆಯು
ಪುಟ್ಟ ಬೀಜದಿಂ ಮರವು ಬೆಳೆಯುವಂತೆ
ಕನಸ ಹಿಡಿಯುವ ಮುನ್ನ ಬಣ್ಣ ಬಣ್ಣದ ಬಣ್ಣ
ಮಳೆಬಿಲ್ಲು ಆಗಸದಿ ಮೂಡುವಂತೆ

ತುಟಿಯ ನಡುಕದಲ್ಲೊಂದು ಮೌನ ಮಾತಿನ ಅಲೆಯು
ತಂಗಾಳಿ ತನ್ಹೆಸರ ಕೂಗಿದಂತೆ
ಪ್ರಾಣ ಸುಳಿಯುವ ಮುನ್ನ ಜೀವ ಜೀವವೂ ಶೂನ್ಯ
ಉರಿಯ ತೊರೆದಿರುವ ದೀಪದಂತೆ

ಕೆನ್ನೆ ಕುಳಿಗಳಲೊಂದು ಮುಗ್ಧ ನಗುನಿನ ಅಲೆಯು
ಬೆಳ್ಳಕ್ಕಿ ಗರಿಬಿಚ್ಚಿ ಹಾರಿದಂತೆ
ಗರಿಯ ಬಿಚ್ಚುವ ಮುನ್ನ ತೀರ ತೀರವೂ ಮನ್ನ
ಮೊದಲ ತೊದಲನುಡಿ ಮೂಡುವಂತೆ

ಕುಡಿನೋಟದೊಳಗೊಂದು ಬಿಕ್ಕಿ ಬೆರೆಯುವ ಅಲೆಯು
ಮಳೆನೀರು ಸಾಗರ ಸೇರುವಂತೆ
ಹನಿಯು ಬೆರೆಯುವ ಮುನ್ನ ಕೋಟಿ ಕೋಟಿಯೂ ಭಿನ್ನ
ವಸುಧೆಯೊಳು ಮನುಜರು ಮೆರೆಯುವಂತೆ

ಮನದ ತೆರೆಯೊಳಗೊಂದು ಮಿಡಿವ ಹೃದಯದ ಅಲೆಯು
ಕೋಗಿಲೆಯು ಮನಬಿಚ್ಚಿ ಹಾಡುವಂತೆ
ಮನವು ತೆರೆಯುವ ಮುನ್ನ ತಾನು ತನ್ನದೇ ಎಲ್ಲಾ
ರಾಜತಾನೆಂದು ಭ್ರಮರ ಸಾರುವಂತೆ

ಮಂಗಳವಾರ, ಏಪ್ರಿಲ್ 26, 2011

ಅಲೌಕಿಕ

"ಯಾಕೋ, ಏನಾಯ್ತು? ಊರಿಗೆ ಹೋಗಿ ಬಂದ ಮೇಲೆ ಒಂಥರಾ ಇದೀಯ, ಆರಾಮಾಗಿದೀಯ ತಾನೆ?", ಇವನು ಕೇಳಿದ. ಯಾವಾಗಲೂ ಲವಲವಿಕೆಯಿಂದಿರುತ್ತಿದ್ದ ಸ್ನೇಹಿತ ಅನ್ಯಮನಸ್ಕನಾಗಿದ್ದಾನೆಂದು ಯಾರು ಬೇಕಾದರು ಹೇಳಬಹುದಿತ್ತು. ಯಾವುದೋ ಬಗೆಹರಿಯದ ತೊಳಲಾಟದಲ್ಲಿ ಅವನಿದ್ದಂತಿತ್ತು. ತುಸು ಹೊತ್ತು ಯೋಚಿಸಿ ನಿಧಾನವಾಗಿ ಒಂದು ನಿರ್ಧಾರಕ್ಕೆ ಬಂದವನಂತೆ ಮೌನ ಮುರಿದು ಹೇಳಿದ: "ಅಂಥದ್ದೇನೂ ಇಲ್ಲ; ನಿನ್ನೆ ಊರಿಂದ ಬರ್ಬೇಕಾದ್ರೆ ಬೈಕಲ್ಲಿ ಹಿಂದೆ ಯಾರೋ ಕೂತ ಹಾಗೆ ಇತ್ತು ಕಣೋ, ಆದ್ರೆ ಯಾರೂ ಇರ್ಲಿಲ್ಲ. ಅದನ್ನೇ ಯೋಚನೆ ಮಾಡ್ತಾ ಇದ್ದೆ ಅಷ್ಟೇ". "ಥೂ ನಿನ್ನ.. ಇಷ್ಟಕ್ಕೆ ಅಷ್ಟೊಂದು ಯೋಚನೆ ಮಾಡ್ತಾ ಇದೀಯ, ಅದೂ ನೀನು?", ಇವನಿಗೆ ನಂಬಿಕೆ ಬರಲಿಲ್ಲ.

ಅವನು ಚಿಕ್ಕವನಾಗಿದ್ದಾಗಿನಿಂದಲೂ ಧೈರ್ಯಶಾಲಿ. ಯಾವುದನ್ನೂ ನೇರವಾಗಿ ನಂಬದೇ ಸ್ವತಃ ಪರೀಕ್ಷಿಸಿ ನೋಡಿಯೇ ನಂಬುವ ಸ್ವಭಾವ ಆತನದು. ಅದರಲ್ಲೂ ದೆವ್ವ-ಭೂತಗಳಲ್ಲಿ ಅಷ್ಟಾಗಿ ನಂಬಿಕೆ ಇರಲಿಲ್ಲ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಪಣ ಕಟ್ಟಿ ರಾತ್ರಿ ಒಬ್ಬೊನೇ ಸ್ಮಶಾನಕ್ಕೆ ಹೋಗಿ ಅಲ್ಲೇನೂ ಇಲ್ಲ ಎಂದು ಸಾಧಿಸಿದವ. ಅಂತಹವನು ಈಗ ಈ ರೀತಿ ಯೋಚಿಸುತ್ತಾ ಕುಳಿತಿದ್ದನ್ನು ನೋಡಿದರೆ ಇವನಿಗೆ ಅವನು ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದು ಮನಗಾಣಲು ಹೆಚ್ಚು ಹೊತ್ತು ಬೇಕಾಗಲಿಲ್ಲ. "ಲೋ, ಏನೋ ಮುಚ್ಚಿಡ್ತಾ ಇದೀಯ; ಏನದು ಹೇಳು", ಎಂದ ಇವನ ಮಾತಿಗೆ ನಿಜ ಹೇಳದೆ ಬೇರೆ ವಿಧಿಯಿಲ್ಲ ಎನಿಸಿತು.

"ನಿನ್ನೆ ಮಧ್ಯಾಹ್ನ ಸುಮಾರು ೨ ಘಂಟೆಗೆ ನಮ್ಮೂರಿಂದ ಹೊರಟೆ. ತಿಪಟೂರಲ್ಲಿ ಚಿಕ್ಕಿನ ಬಿಟ್ಟು ಮುಂದೆ ಬರ್ತಾ ಇದ್ದೆ. ಹೈವೇಯಲ್ವಾ.. ರಸ್ತೆ ಚೆನ್ನಾಗಿದೆ. ಚಚ್ಗೊಂಡ್ ಬರ್ತಾ ಇದ್ದೆ. ಅಷ್ಟರಲ್ಲಿ ಸೂರ್ಯ ಮುಳುಗಿ ಸ್ವಲ್ಪ ಕತ್ತಲಾಯ್ತು. ಹಾಗೇ ಕೆ.ಬಿ. ಕ್ರಾಸ್ ದಾಟಿ ಮುಂದೆ ಬರ್ಬೇಕಾದ್ರೆ ಸ್ವಲ್ಪ ದೂರ ಬಂದಿರ್ಬಹುದು, ಇದ್ದಕ್ಕಿದ್ದಂತೆ ಬೈಕ್ ಭಾರ ಅನ್ಸೋಕೆ ಶುರು ಆಯ್ತು. ಮೊದಲು ಬ್ಯಾಗ್ ಇರ್ಬೇಕು ಅಂದ್ಕೊಂಡೆ. ಆದರೆ ನನ್ನ ಬ್ಯಾಗಲ್ಲಿ ಭಾರ ಆಗುವಂಥದ್ದು ಏನೂ ಇರ್ಲಿಲ್ಲ. ಅಷ್ಟಾದ್ರೂ ನಾನು ಬೈಕ್ ನಿಲ್ಲಿಸ್ಲಿಲ್ಲ. ಮೊದಲಿದ್ದ ವೇಗದಲ್ಲೇ ಹೊಡೀತಾ ಇದ್ದೆ. ಎಡಗಡೆ ಒಂದು ದೊಡ್ಡ ಕೆರೆ ಬಂತು. ಆ ಕೆರೆ ಏರಿ ದಾಟಿ ಮುಂದೆ ಹೋಗ್ತಾ ಹೋಗ್ತಾ ಬೈಕ್ ಮತ್ತೂ ಭಾರ ಆಗ್ತಿದೆ ಅನಿಸ್ತು. ಹಿಂದೆ ಯಾರೋ ಕೂತಿದಾರೇನೋ ಅನ್ಸೋಕೆ ಶುರು ಆಯ್ತು. ಸೈಡ್ ಮಿರರ್‌ನಲ್ಲಿ ಹಿಂದೆ ನೋಡಿದೆ. ಏನೋ ಒಂಥರಾ ಬೆಳಕು ಕಾಣಿಸ್ತು. ಆಗ ಯಾಕೋ ಸ್ವಲ್ಪ ವಿಚಿತ್ರ ಅಂತ ಅನಿಸ್ಲಿಕ್ಕೆ ಶುರು ಆಯ್ತು. ಏನಿದು ನೋಡೇ ಬಿಡೋಣ ಅಂತ ಸ್ವಲ್ಪ ಮುಂದೆ ಹೋಗಿ ಬೈಕ್ ನಿಲ್ಲಿಸಿ ಕೆಳಗಿಳಿದೆ"

ಇಷ್ಟು ಹೊತ್ತು ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದ ಇವ ಮಧ್ಯೆ ಬಾಯಿ ಹಾಕಿದ: "ಏನೂ ಇರ್ಲಿಲ್ಲ ತಾನೆ? ಸುಮ್ನೆ ಏನೇನೋ ಅಂದ್ಕೊಂಡಿರ್ತೀಯ". ಅವ ಮುಂದುವರೆಸಿದ: "ಹ್ಮ್.. ಏನೂ ಇರ್ಲಿಲ್ಲ; ಆದರೆ ನಾನು ಇಷ್ಟು ಹೊತ್ತು ಹೈವೇನಲ್ಲಿ ಬರ್ತಿದೀನಿ ಅಂದ್ಕೊಂಡ್ನಲ್ಲ, ಅಲ್ಲಿ ಹೈವೇ ಇರ್ಲೇ ಇಲ್ಲ. ಹಳ್ಳಿಯೊಂದರ ಮಣ್ಣು ರಸ್ತೆ ಬದಿಯಲ್ಲಿ ನನ್ನ ಬೈಕ್ ನಿಂತಿತ್ತು. ಅದು ಹ್ಯಾಗೆ ಆ ರಸ್ತೆಗೆ ಹೋದೆ ಅಂತ ತಿಳೀತಿಲ್ಲ". "ಎಲ್ಲ ನಿನ್ನ ಭ್ರಮೆ", ಇವ ಉದ್ಗರಿಸಿದ. "ನಾನೂ ಹಾಗೇ ಅಂದ್ಕೊಂಡೆ ಕಣೋ; ಆದ್ರೆ ಆ ದಾರಿ ತಪ್ಪು ಅಂತ ಗೊತ್ತಾದ್ಮೇಲೆ ಅಲ್ಲಿಂದ ಬಂದ ದಾರಿಯಲ್ಲೆ ವಾಪಸ್ ಹೊರಟೆ. ವಿಚಿತ್ರ ಅಂದ್ರೆ ನನ್ ಬೈಕ್ ಮೊದಲಿನ ಥರಾನೆ ಹಗುರ ಅನ್ಸೋಕೆ ಶುರು ಆಯ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಒಬ್ಬ ನಡೆದುಕೊಂಡು ಹೋಗ್ತಾ ಇದ್ದ. ಅವನತ್ರ ಹೈವೇಗೆ ಹೋಗೋದು ಹೇಗೆ ಅಂತ ಕೇಳಿದೆ. ಅವನು ಇಲ್ಲಿಂದ ಸುಮಾರು ೫-೬ ಕಿಲೋಮೀಟರ್ ದೂರ ಹೋದ್ರೆ ಹೈವೇ ಸಿಗುತ್ತೆ ಅಂದ. ಸರಿ ಅಂತ ಹಾಗೆ ಮುಂದೆ ಬಂದು ಹೈವೇ ಸೇರ್ಕೊಂಡೆ."

"ಸರಿ ಹೋಯ್ತು", ಇವನೆಂದ. "ಮನಸ್ಸಲ್ಲೇ ಏನೇನೋ ಅಂದ್ಕೊಂಡು ಸುಮ್ನೇ ಈ ಥರ ಡಲ್ಲಾಗಿದೀಯ. ಈಗಾದ್ರೂ ಪಕ್ಕಾ ಆಯ್ತಾ ಅದು ನಿನ್ ಭ್ರಮೆ ಅಂತ?". ಅವಂಗೆ ಕಿರಿಕಿರಿಯಾಗಲಾರಂಭಿಸಿತು. "ಲೋ, ಹೋಗ್ಬೇಕಾದ್ರೆ ಭ್ರಮೆಯಲ್ಲೇ ಇದ್ದೆ ಅಂದ್ಕೋ. ಆದ್ರೆ ವಾಪಸ್ ಬರ್ಬೇಕಾದ್ರೆ ನಾನು ಸರಿಯಾಗೇ ಇದ್ದೆ. ಆಯ್ತಾ? ನನಗ್ಯಾಕೆ ಅದು ವಿಚಿತ್ರ ಅಂತ ಅನ್ಸ್ತಾ ಇದೆ ಅಂದ್ರೆ, ನಾನು ಆ ಹೈವೇಗೆ ಬಂದು ಸೇರ್ಕೊಂಡ್ನಲ್ಲ, ಅಲ್ಲಿಂದ ನಾನು ಈ ಮಣ್ಣು ರಸ್ತೆಗೆ ಬರ್ಬೇಕು ಅಂದ್ರೆ ಬಲಕ್ಕೆ ತಿರುಗಬೇಕು. ಇರೋ ಟ್ರಾಫಿಕ್ಕಲ್ಲಿ ಮಧ್ಯ ನಿಲ್ಲಿಸ್ದೇ ನಾನ್ ಬಂದ ಥರ ಈ ಕಡೆ ಬಂದಿರ್ಲಿಕ್ಕೆ ಸಾಧ್ಯನೇ ಇಲ್ಲ. ಅದೂ ಅಲ್ಲದೇ ನಾನು ವಾಪಸ್ ಬರೋಕಿಂತ ಮುಂಚೆ ನನ್ನ ಬೈಕಿನ ಸೀಟ್ ನೋಡಿದಾಗ ಅಲ್ಲಿ ಆಗಷ್ಟೇ ಯಾರೋ ಕೂತು ಎದ್ದು ಹೋದಂತಿತ್ತು. ಸೀಟಿನ ಹಿಂಭಾಗ ಕೆಳಗೆ ಹೋಗಿತ್ತು. ಹೆದ್ದಾರಿಗೆ ಬಂದು ಸೇರಿದಾಗ ಬೈಕಿನ ಓಡೋಮೀಟರ್ ಕೂಡ ಗಮನಿಸಿದೆ. ಅದು ಕೂಡ ೧೧ ಕಿಲೋಮೀಟರ್ ಹೆಚ್ಚು ತೋರಿಸುತ್ತಿತ್ತು!".

ಇವನಿಗೆ ಏನನ್ನಿಸಿತೋ ಏನೋ, ತಕ್ಷಣ ಬೈಕಿನ ಬಳಿ ಹೋದ. ನಾಲ್ಕೈದು ತಿಂಗಳ ಹಿಂದಷ್ಟೇ ಕೊಂಡಿದ್ದ ಹೊಸ ಬೈಕು. ಸೀಟಿನ ಹಿಂಭಾಗ ಅವ ಹೇಳಿದಂತೆ ಕೆಳಗೆ ಹೋಗಿದ್ದೇ ಅಲ್ಲದೆ ಒಂದು ಬದಿಯಲ್ಲಿ ಸ್ವಲ್ಪ ಹರಿದಿತ್ತು. ಘಟನೆಯ ಬಗ್ಗೆ ಇನ್ನೂ ಕುತೂಹಲ ಮೂಡಿತು. ಗೂಗಲ್ ಮ್ಯಾಪಿನಲ್ಲಿ ಹೋಗಿ ಬಂದ ಜಾಗದ ವಿವರ ನೋಡಿದ. ಅಲ್ಲಿ ಮತ್ತಷ್ಟು ಆಶ್ಚರ್ಯ ಕಾದಿತ್ತು. ಗೂಗಲ್ ಮ್ಯಾಪಿನಲ್ಲಿ ನೋಡಿದಾಗ ಅವ ಹೇಳಿದ ಸ್ಥಳ ಹಾಗೆಯೇ ಇತ್ತು. ಒಂದು ಮಣ್ಣಿನ ದಾರಿ; ಹೆದ್ದಾರಿಯಿಂದ ಅಲ್ಲಿಗೆ ಹೋಗಲು ಬಲಕ್ಕೆ ತಿರುಗಬೇಕು. ಆದರೆ ಆ ಮಣ್ಣಿನ ರಸ್ತೆಯ ಸುತ್ತ ಮುತ್ತ ಯಾವುದೇ ಕೆರೆ ಇರಲಿಲ್ಲ!

ಇವನು ಇಷ್ಟೆಲ್ಲ ಮಾಡುವುದನ್ನು ನೋಡುತ್ತಿದ್ದ ಅವನು ಕೇಳಿದ: "ಈಗಾದ್ರೂ ಗೊತ್ತಾಯ್ತಾ ನಾನು ಯಾಕೆ ಯೋಚನೆ ಮಾಡ್ತಾ ಇದ್ದೆ ಅಂತ?". ನಂಬಲೇಬೇಕಾದ ಘಟನೆ ಅದಾಗಿತ್ತು. ಆದರೆ ಅಲ್ಲಿ ಕುಳಿತು ಎದ್ದು ಹೋಗಿದ್ದು ಯಾರು, ಅಥವಾ ಏನು; ಅವನು ಅಲ್ಲಿ ಕಂಡ ಕೆರೆ ಯಾವುದು ಎಂಬುದು ಮಾತ್ರ ಒಂದು ನಿಗೂಢವಾಗಿಯೇ ಉಳಿದಿದೆ.

(ಇದು ಮಾರ್ಚ್ ೭, ೨೦೧೦ರಂದು ನನ್ನ ಗೆಳೆಯ ಬೆಂಗಳೂರಿಗೆ ಬರುವಾಗ ನಡೆದ ಸತ್ಯ ಘಟನೆ)

ಬುಧವಾರ, ಮಾರ್ಚ್ 16, 2011

ಅವಸಾನದ ಅಂಚಿನಲ್ಲಿ ಅಂಕಿಗಳು


ಇತಿಹಾಸ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಭಾಷೆಯಷ್ಟೇ ಮಹತ್ವ ಲಿಪಿಗೂ ಇದೆ. ಒಂದು ಲಿಪಿಯ ಕೊಂಡಿ ಕಳಚಿದರೆ ಅದರೊಂದಿಗೆ ಹಲವು ಸಂಸ್ಕೃತಿಗಳ ಕೊಂಡಿಗಳೂ ಕಳಚಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಸಿಂಧೂತಟದ ನಾಗರೀಕತೆಯ ಲಿಪಿ. ತುಳು ಭಾಷೆಯ ಲಿಪಿ ಈಗಾಗಲೇ ಜನಬಳಕೆಯಿಂದ ದೂರವಾಗಿದೆ. ರೊಸೆಟ್ಟಾ ಶಾಸನ ಸಿಗುವವರೆಗೆ ಪ್ರಾಚೀನ ಈಜಿಪ್ಟಿನ ಚಿತ್ರಲಿಪಿಯನ್ನೂ ಅರ್ಥೈಸಿಕೊಳ್ಳಲು ಸಾಧ್ಯವಾಗಿರಲಿಲ್ಲ.  ಇತ್ತೀಚೆಗೆ ಬೋವಳ ಸಾವಿನೊಂದಿಗೆ ಪ್ರಂಪಂಚದ ಮತ್ತೊಂದು ಪ್ರಾಚೀನ ಭಾಷೆ ಬೋ ಅಂತ್ಯ ಕಂಡಿದ್ದು ಎಚ್ಚರಿಕೆಯ ಘಂಟೆಯಾಗಿದೆ. ಹಲವು ಅಕ್ಷರಗಳು ಹೊಸದಾಗಿ ಸೇರ್ಪಡೆಯಾಗುವುದು ಹಾಗೂ ಬಳಕೆಯಿಂದ ದೂರವಾಗುವುದು ಲಿಪಿಯ ಬೆಳವಣಿಗೆ ಭಾಗವಾಗಿದೆ.

ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅರಬ್ಬೀ ಮತ್ತು ಇಂಗ್ಲಿಷ್‌ನ ಪದಗಳನ್ನು ಬರೆಯಲು ಜ಼ (za) ಮತ್ತು ಫ಼ (fa) ಎಂಬ ಅಕ್ಷರಗಳನ್ನು ಬಳಕೆಗೆ ತಂದುಕೊಂಡಿದ್ದೇವೆ. ಕನ್ನಡದ ಒಂದೂವರೆ ಸಾವಿರ ವರ್ಷದ ಇತಿಹಾಸದಲ್ಲಿ ಸೇರದ ಈ ಅಕ್ಷರಗಳು ಇತ್ತೀಚೆಗೆ ಬಂದು ಸೇರುವುದಕ್ಕೆ ಕಾರಣ ಬಹಳ ಸರಳ. ಕನ್ನಡದಲ್ಲಿ ನಾವು ಯಾವ ರೀತಿ ಮಾತನಾಡುತ್ತೇವೆಯೋ ಹಾಗೇ ಬರೆಯುತ್ತೇವೆ. F ಮತ್ತು z ಅಕ್ಷರಗಳನ್ನೊಳಗೊಂಡ ಉಪೇಕ್ಷಿಸಲಾರದಷ್ಟು ಪದಗಳು ಜನಬಳಕೆಗೆ ಬಂದಿದ್ದರಿಂದ ಈ ಪದಗಳಿಗೆ ತನ್ನದೇ ಆದ ಪ್ರತ್ಯೇಕ ಅಕ್ಷರಗಳನ್ನು ಕೊಡುವುದು ಅನಿವಾರ್ಯವಾಯಿತು. ಹಾಗಾಗಿ Fಗೆ ಹತ್ತಿರವಿರುವ 'ಫ' ಮತ್ತು Zಗೆ ಹತ್ತಿರವಿರುವ 'ಜ' ಅಕ್ಷರಗಳ ಕೆಳಗೆ ಎರಡು ಚುಕ್ಕಿಗಳನ್ನಿಟ್ಟು ಈ ಅಕ್ಷರಗಳನ್ನು ಗುರುತಿಸಲಾರಂಭಿಸಿದರು. ಈ ರೀತಿ ಕನ್ನಡದ ಪದಸಂಪತ್ತನ್ನು ಹೆಚ್ಚಿಸಿ ಹೊಸ ಅಕ್ಷರಗಳ ಸೇರ್ಪಡೆಯಾಯಿತು. ಆದರೆ ಅಕ್ಷರಗಳು ಬಳಕೆಯಿಂದ ದೂರವಾಗುವುದು ಭಾಷೆಯ ದೃಷ್ಟಿಯಿಂದ ಯಾವಾಗಲೂ ಆರೋಗ್ಯಕರವೆಂದು ಹೇಳಲಾಗದು.

ಬದಲಾವಣೆಯ ಭರದಲ್ಲಿ ಈಗಾಗಲೇ ೞ (೧೧ನೇ ಶ) ಮತ್ತು ಱ (೧೬ನೇ ಶ) ಅಕ್ಷರಗಳನ್ನು ಬಳಕೆಯಿಂದ ದೂರಮಾಡಿಬಿಟ್ಟಿದ್ದೇವೆ. ಈ ಅಕ್ಷರಗಳು ದೂರವಾಗುತ್ತಿದ್ದಂತೆ ಬಹುದೊಡ್ಡ ಪದ ಸಂಪತ್ತೂ ಬಳಕೆಯಿಂದ ದೂರವಾಯಿತು. ಬಾೞ್ (ಜೀವನ) ಮತ್ತು ಬಾಳ್‌ (ಕತ್ತಿ) ಇವುಗಳ ಮಧ್ಯೆ ಲಿಪಿಯಲ್ಲಿ ವ್ಯತ್ಯಾಸವಿಲ್ಲವಾಗಿ ಬಾಳ್ ಎಂದೇ ಬರೆಯಲು ಪ್ರಾರಂಭಿಸಿದರು. ಇದರಿಂದಾದ ನಷ್ಟ 'ಬಾೞ್' ಕಾಲದ ಓಟದಲ್ಲಿ ಹಿಂದುಳಿದು ಇಂದಿನ ಲಿಪಿಯಿಂದ ದೂರವಾಗಿಬಿಟ್ಟಿತು. ಇದೇ ರೀತಿ ಹಲವಾರು ಪದಗಳು ತಮ್ಮ ಅರ್ಥ ಕಳೆದುಕೊಂಡುಬಿಟ್ಟಿವೆ (ಕೆಲವು ಉದಾಹರಣೆಗಳು: ಅಱಿ = ತಿಳಿ, ಅರಿ = ಕತ್ತರಿಸು. ಕಱೆ = ಕಪ್ಪು, ಕರೆ = ದಡ. ಪೊೞಿ = ನದಿ, ಪೊಳೆ = ಪ್ರಕಾಶಿಸು. ಆೞ್ = ಮುಳುಗು, ಆಳ್ = ಸೇವಕ). ಸರ್ಕಾರ ಹೊರತರುವ ಶಾಲಾ ಅಕ್ಷರಾಭ್ಯಾಸ ಪುಸ್ತಕಗಳಲ್ಲಿ ಱ ಮತ್ತು ೞ ಅಕ್ಷರಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಮುಂದಿನ ತರಗತಿಗಳಲ್ಲಿ ಯಾವುದಾದರೂ ಹಳೆಗನ್ನಡ ಪದ್ಯಗಳನ್ನು ಅಭ್ಯಾಸಮಾಡುವಾಗ ಈ ಪದಗಳ ಬಳಕೆಯಿದ್ದರೆ ಮಾತ್ರ ಮಕ್ಕಳಿಗೆ ಈ ಅಕ್ಷರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ; ಅದೂ ಕೇವಲ ಆ ಪದ್ಯದ ಮಿತಿಯಲ್ಲಿ. ತಮಿಳಿನಲ್ಲಿ ಈ ಅಕ್ಷರಗಳು (ற ಮತ್ತು ழ) ಈಗಲೂ ಬಳಕೆಯಲ್ಲಿವೆ. ಶಾಲೆಗಳಲ್ಲಿ ಱ,ರ ಮತ್ತು ೞ,ಳ ಗಳನ್ನು ಸರಿಯಾಗಿ ಉಚ್ಛಾರಿಸಲು ಬಂದರಷ್ಟೇ ಶುದ್ಧ ತಮಿಳು ಭಾಷಿಗನೆನ್ನುತ್ತಾರೆ. ಹಾಗೆಯೇ ನಾನು ಕಂಡಂತೆ 'ನ್'ಗೆ ಬಳಸುತ್ತಿದ್ದ ಬಳಕೆಯಿಂದ ಹಿಂದೆ ಸರಿದಿದೆ (ಈ ಅಕ್ಷರಕ್ಕೆ ಯುನಿಕೋಡ್ ಇಲ್ಲ). ಇಂದು ಹಲವು ಕನ್ನಡಿಗರಿಗೆ ಱ ಮತ್ತು ೞ ಬಗ್ಗೆ ತಿಳಿದೇ ಇಲ್ಲ. ಹಲವರಿಗೆ ಇದರ ಉಚ್ಚಾರಣೆ ತಿಳಿದಿಲ್ಲ, ಱ ಮತ್ತು ರ, ೞ ಮತ್ತು ಳ ಒಂದೇ ಎಂದು ತಿಳಿದಿದ್ದಾರೆ. ಮತ್ತೂ ಕೆಲವರಿಗೆ ಇವು ಹಳೆಗನ್ನಡ ಅಕ್ಷರಗಳೆಂದಷ್ಟೇ ಗೊತ್ತು. ಮಕ್ಕಳಿಗೆ ಅಕ್ಷರ ಕಲಿಸುವ ಸಮಯದಲ್ಲೇ ಈ ಅಕ್ಷರಗಳನ್ನೂ ಪರಿಚಯಿಸುವುದು ಒಳ್ಳೆಯದಲ್ಲವೇ? ಈ ರೀತಿ ಮಾಡುವುದರಿಂದ ಕೈಬಿಟ್ಟು ಹೋಗಿರುವ ಪದಸಂಪತ್ತನ್ನು ಮತ್ತೆ ಗಳಿಸಬಹುದು.

ಭಾರತದ ಲಿಪಿಗಳು ಇಂದು ಅಂಕಿಗಳ ವಿಷಯದಲ್ಲಿ ಮತ್ತೊಂದು ಆಪತ್ತನ್ನು ಎದುರಿಸುತ್ತಿವೆ. ಜಾಗತೀಕರಣದ ಹೆಸರಿನಲ್ಲಿ ಸಾವಿರಾರು ವರುಷಗಳಲ್ಲಿ ಅಕ್ಷರಗಳ ಜೊತೆಗೇ ಬೆಳೆದು ಬಂದ ಅಂಕಿಗಳನ್ನು ಕಡೆಗಣಿಸಿದ್ದೇವೆ. ತೆಲುಗು ವಿಕಿಪೀಡಿಯದಲ್ಲಿ ನೇರವಾಗಿ ತೆಲುಗಿನಲ್ಲಿ ಬರೆಯಬಹುದಾದರೂ ಅಂಕಿಗಳನ್ನು ಒತ್ತಿದರೆ ಮೂಡುವುದು ಇಂಗ್ಲಿಷ್ ಅಂಕಿಗಳು!. ಭಾಷಾಭಿಮಾನಕ್ಕೆ ಪ್ರಸಿದ್ಧರಾದ ತಮಿಳು ವಿಕಿಪೀಡಿಯಾದಲ್ಲೂ ಇದೇ ಸ್ಥಿತಿ. ಇವರೂ ಇಂಗ್ಲಿಷ್ ಅಂಕಿಗಳನ್ನು ಯಾವುದೇ ಅಳುಕಿಲ್ಲದೆ ಒಪ್ಪಿಕೊಂಡು ತಮ್ಮ ಭಾಷೆಯ ಅಂಕಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಹಲವು ತೆಲುಗು, ತಮಿಳು ಬ್ಲಾಗ್‌ಗಳನ್ನು ಸುತ್ತಿ ಬಂದರೂ ನಮಗೆ ಕಾಣುವುದು ಇಂಗ್ಲಿಷ್ ಅಂಕಿಗಳೇ. ಹಲವು ತೆಲುಗು ಮಾತನಾಡುವ ಸ್ನೇಹಿತರನ್ನು ಈ ವಿಷಯವಾಗಿ ಕೇಳಿದಾಗ ತೆಲುಗು ಅಂಕಿಗಳನ್ನು ಇತಿಹಾಸದ ಪಳೆಯುಳಿಕೆಯೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ದೃಷ್ಟಿಯಲ್ಲಿ ನೋಡಿದರೆ ಕನ್ನಡಿಗರು ತಮ್ಮ ಅಂಕಿಗಳನ್ನು ಅಷ್ಟೊಂದು ಕಡೆಗಣಿಸಿದಂತೆ ಕಾಣುವುದಿಲ್ಲ. ಹಲವು ಕನ್ನಡ ಪುಸ್ತಕಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಬ್ಲಾಗ್‌ಗಳಲ್ಲಿ, ಆಹ್ವಾನ ಪತ್ರಿಕೆಗಳಲ್ಲಿ ಕನ್ನಡ ಅಂಕಿಗಳು ಬಳಕೆಯಾಗುತ್ತಿರುವುದು ಕಾಣಬಹುದು. ಮುಖ್ಯವಾಗಿ ವಾಹನಗಳ ನೋಂದಣಿ ಸಂಖ್ಯೆಯನ್ನು ಕನ್ನಡ ಅಂಕಿಗಳಲ್ಲಿ ಬರೆಯುವುದು ಇನ್ನೂ ಕನ್ನಡ ಅಂಕಿಗಳು ಜನಸಾಮಾನ್ಯರ ಮನಸ್ಸಿನಲ್ಲಿ ಜೀವಂತ ಇರುವುದಕ್ಕೆ ಸಾಕ್ಷಿ.

ಒಮ್ಮೆ ದಾವಣಗೆರೆಯಲ್ಲಿ ಟಿಕೆಟ್ ಕಾಯ್ದಿರಿಸುವ ಸಲುವಾಗಿ ರೈಲು ನಿಲ್ದಾಣಕ್ಕೆ ಹೋಗಿದ್ದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಅರ್ಜಿಯನ್ನು ತುಂಬಲು ಅವಕಾಶವಿತ್ತು. ನಾನು ಕನ್ನಡದಲ್ಲಿ ತುಂಬಿ ಅರ್ಜಿಯನ್ನು ಸ್ವೀಕರಿಸುತ್ತಿದ್ದ ರೈಲ್ವೇ ಅಧಿಕಾರಿಗೆ ನೀಡಿದೆ. ಅವರು ತಮಗೆ ಕನ್ನಡ ಬರುವುದಿಲ್ಲವೆಂದು ಹಿಂದಿಯಲ್ಲಿ ಹೇಳಿ ಇಂಗ್ಲಿಷ್‌ನಲ್ಲಿ ಅರ್ಜಿ ತುಂಬುವಂತೆ ಹೇಳಿದರು. ವ್ಯವಸ್ಥೆಯು ಕನ್ನಡದಲ್ಲಿ ತುಂಬಲು ಅವಕಾಶ ಕೊಟ್ಟಿವುವಾಗ ನಾನು ಇಂಗ್ಲಿಷ್‌ನಲ್ಲಿ ತುಂಬುವುದಿಲ್ಲವೆಂದು ನಿರಾಕರಿಸಿದೆ. ಸುತ್ತ ಮುತ್ತ ನಿಂತಿದ್ದ ಜನ ನನಗೆ ಬೆಂಬಲಿಸದಿದ್ದರೂ ಯಾವುದೇ ಆಕ್ಷೇಪ ಮಾಡದಿದ್ದುದು ಸಮಾಧಾನ ತಂದಿತು. ನಾನು ಮತ್ತೆ ಮತ್ತೆ ಇಂಗ್ಲಿಷ್‌ನಲ್ಲಿ ಅರ್ಜಿ ತುಂಬಲು ನಿರಾಕರಿಸಿದ್ದರಿಂದ ಆ ಅಧಿಕಾರಿ ಕನ್ನಡಿಗ ಅಧಿಕಾರಿಯನ್ನು ಅರ್ಜಿ ಓದಲು ಕರೆದರು. ಆ ಕನ್ನಡಿಗ ಅರ್ಜಿಯನ್ನು ನೋಡಿದವರೇ ಇದು ಕನ್ನಡವಲ್ಲವೆಂದು ಹಿಂದೆ ಕೊಟ್ಟುಬಿಟ್ಟರು. ನನಗೆ ಆ ವ್ಯಕ್ತಿ ಏಕೆ ಹೀಗೆ ಹೇಳುತ್ತಿದ್ದಾರೆಂಬುದೇ ಒಂದು ಕ್ಷಣ ತಿಳಿಯಲಿಲ್ಲ. ನಂತರ ಅವರೇ 'ನಂಬರ್ಸ್ ಕನ್ನಡ್ದಲ್ಲಿ ಬರ್ದು ಕೊಡಪ್ಪಾ.. ಹಿಂದೀಲಲ್ಲ.." ಅಂದಾಗ್ಲೇ ಗೊತ್ತಾಗಿದ್ದು. ಆ ಪುಣ್ಯಾತ್ಮ ಕನ್ನಡ ಅಂಕಿಗಳನ್ನು ಹಿಂದಿ ಅಂಕಿಯೆಂದುಕೊಂಡುಬಿಟ್ಟಿದ್ದರು. ಅವರ ಪ್ರಕಾರ ಇಂಗ್ಲಿಷ್ ಅಂಕಿಗಳೇ ಕನ್ನಡ ಅಂಕಿಗಳು! ಇಷ್ಟು ಹೊತ್ತು ಸುಮ್ಮನಿದ್ದ ಜನ 'ಅರ್ಥ ಆಗಂಗ್ ಬರ್ದ್ ಕೊಡ್ರೀ... ಪಾಪ ಸ್ಕೂಲ್ ಟೀಚರ್ಸ್‌ಗೇ ಅರ್ಥ ಆಗಲ್ಲ ಈ ನಂಬರ್ಸು..." ಅಂದಾಗ ನಮ್ಮ ಕನ್ನಡಿಗರ ಸಾಕ್ಷರತೆ ಹೇಗೆ ಬೆಳೆಯುತ್ತಿದೆಯೆಂದು ಗಾಬರಿಯಾದೆ. ಕಡೆಗೆ ನಾನೇ ಅರ್ಜಿಯನ್ನು ಓದಿಹೇಳಿ ಬಂದದ್ದಾಯಿತು.

ನಮ್ಮ ಶಿಕ್ಷಣ ವ್ಯವಸ್ಥೆ ಹೀಗೇ ಮುಂದುವರೆದರೆ ಇನ್ನೊಂದೆರಡು ಸಂತತಿಗಳು ಕಳೆಯುವುದರೊಳಗೆ ಕನ್ನಡದ ಅಂಕಿಗಳೂ ಇತಿಹಾಸದ ಪಳೆಯುಳಿಕೆಗಳಾಗುವುದರಲ್ಲಿ ಅನುಮಾನವಿಲ್ಲ. ಇಂದು ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳನ್ನು ಮತ್ತೆ ಬಳಕೆಗೆ ತರಲಾರದಷ್ಟು ಪರಿಸ್ಥಿತಿ ಹಾಳಾಗಿಲ್ಲ. ಉರಿಯುವ ಬೆಂಕಿಗೆ ತುಪ್ಪ ಹಾಕುವಂತೆ ಇಂದಿನ ವ್ಯಾಪಾರೀ ಮನೋಭಾವದ ಪತ್ರಿಕೆಗಳು 'ಸ್ಟೈಲ್ ಶೀಟ್' ಹೆಸರಿನಲ್ಲಿ ಕನ್ನಡದ ಭಾಗವಾಗಿ ಇಂಗ್ಲಿಷ್ ಅಂಕಿಗಳನ್ನು ಉಪಯೋಗಿಸುತ್ತಿವೆ. ವಿಶ್ವ ಕನ್ನಡ ಸಮ್ಮೇಳನದ ಆಮಂತ್ರಣ ಪತ್ರಿಕೆಯ ಮುಖ ಪುಟದ ಹಿಂಭಾಗದಲ್ಲೇ ಇಂಗ್ಲಿಷ್ ಅಂಕಿಗಳನ್ನು ಬಳಸಿ ಸ್ವಾಗತ ಕೋರಿದ್ದಾರೆ. ಇದನ್ನು ಕೇವಲ ಮುದ್ರಣ ದೋಷವೆನ್ನಲಾದೀತೇ? ಸರ್ಕಾರವು ಕನ್ನಡ ಪತ್ರಿಕೆಗಳಲ್ಲಿ ಕನ್ನಡದ್ದೇ ಅಂಕಿಗಳನ್ನು ಉಪಯೋಗಿಸಬೇಕೆಂದು ಒಂದು ಆದೇಶ ಹೊಡಿಸಿದರೆ ಸಾಕು, ದಿನ ಬೆಳಗಾಗುವುದರೊಳಗೆ ಕನ್ನಡ ಅಂಕಿಗಳು ಜನರ ಅಂಕಿಗಳಾಗಿಬಿಡುತ್ತವೆ. ಆದರೆ ನಮ್ಮ ಘನ ಸರ್ಕಾರದ ಇಚ್ಛಾ ಶಕ್ತಿಯ ಕೊರತೆ ಕನ್ನಡವನ್ನು ಸೊರಗಿಸುತ್ತಿದೆ.


ಮುಗಿಸುವ ಮುನ್ನ: ಐ.ಟಿ.ಪಿ.ಬಿ ರಸ್ತೆಯಲ್ಲಿ ತಮಿಳುನಾಡು ನೋಂದಣಿಯ ಒಂದು ಬಸ್ ಸಂಚರಿಸುತ್ತದೆ. ವಿಶೇಷವೆಂದರೆ ಇದರ ನೋಂದಣಿ ಸಂಖ್ಯೆಯನ್ನು ನಾಲ್ಕೂಬದಿಯಲ್ಲಿ ಕೇವಲ ಕನ್ನಡದಲ್ಲಿ ಬರೆದಿದ್ದಾರೆ.

ಭಾನುವಾರ, ಮಾರ್ಚ್ 13, 2011

ಸುಂದರ ನೆನಪು

ಕುಡಿನೋಟ ಆ ಕಿರುನಗೆಯ ಕಾಂತಿ,

ಕರಗಿತು ಮನವಂದು ಬಯಸಿ ನಿನ್ನ ಪ್ರೀತಿ,

ತವಕ ಅಂತರಾಳದೊಳು ತಿಳಿಯದಾದ ವೇದನೆಯಲಿ,

ಸನಿಹವಿದ್ದ ಸಮಯಗಳು ಸರಸ ನಗೆ ಚೆಲ್ಲಾಟದಲಿ,

ಸುಂದರ ದಿನಗಳ ನೆನೆದು ಮೆಲುಕುತಿಹೆನು,

ಪರಿಪರಿಯಾದ ಸಿಹಿನೋವಿನೊಡನೆ ಇಂದು ಆ ಭಾರವಾದ ಹೃದಯದಲಿ.

ಸೋಮವಾರ, ಫೆಬ್ರವರಿ 14, 2011

ಪ್ರೀತಿಯ ಪಯಣ

 ಇರುವ ಜಾಗವ ಬಿಟ್ಟು
ಅರಿಯದ ಜಾಗಕೆ ಹೋಗುವುದೇಕೆ?

ಇರುವ ಪ್ರೀತಿಯ ಸುಟ್ಟು
ಸುಟ್ಟ ಪ್ರೀತಿಯ ಹುಡುಕುವುದೇಕೆ?

ಪ್ರೀತಿಯೆಂಬುದು ಪ್ರೀತಿಯಲ್ಲ
ಭಾವನೆಗೊಂದು ಹೆಸರು

ಭಾವನೆಯೊಂದು ಹುಟ್ಟುವದಾದರೆ
ಪ್ರೀತಿಯೊಂದು ಹುಟ್ಟಿದಂತೆ

ಭಾವನೆಯೊಂದು ಸಾಯುವುದಾದರೆ
ಪ್ರೀತಿಯೊಂದು ಮರು ಹುಟ್ಟು ಪಡೆದಂತೆ
ಚಿತ್ರ ಕೃಪೆ: GraphicsDB

ಬುಧವಾರ, ಫೆಬ್ರವರಿ 2, 2011

ಒಲವು

ಸಮಯದ ಪರಿವೆಯಿಲ್ಲ,
ಸ್ಥಳದ ಅರಿವಿಲ್ಲ,
ಇರುವುದೆಲ್ಲ ಒಂದೇ
ನಿಮ್ಮ ಧ್ಯಾನ

ಹಸಿವು ನೀರಡಿಕೆಯಿಲ್ಲ,
ನಿದ್ರೆಯ ಸುಳಿವಿಲ್ಲ,
ಹಂಬಲಿಸುವುದು ಒಂದೇ
ನಿಮ್ಮ ಸನಿಹ

ಮಾತು ಬೇಕಿಲ್ಲ,
ಧ್ವನಿಯ ಹಂಗಿಲ್ಲ,
ಗುನುಗಿರುವುದು ಒಂದೇ
ನಿಮ್ಮ ಹೆಸರು

ನಾನು ನಾನಾಗಿಲ್ಲ,
ನನ್ನದೆಂಬುದು ಏನಿಲ್ಲ,
ಎಲ್ಲದರಲ್ಲೂ ಇರುವುದೊಂದೇ
ನಿಮ್ಮ ಒಲವು

ಭಾನುವಾರ, ಜನವರಿ 30, 2011

ಹಾರೈಕೆ

ಗೆಳತಿ,
ಸುಳಿವ ತಂಗಾಳಿಯಲ್ಲಿ ಬೆರೆಸಿರುವೆ,
ಸುರಿವ ಮಳೆಯಲ್ಲಿ ಕರಗಿಸಿರುವೆ,
ಸೂಸುವ ರಶ್ಮಿಯಲ್ಲಿ ಸೇರಿಸಿರುವೆ,
ಕಂಪಿಸುವ ನಾದದಲ್ಲಿ ಅಡಗಿಸಿರುವೆ,
ಸುಡುವ ಅಗ್ನಿಯಲ್ಲಿ ಬೆಳಗಿಸಿರುವೆ,
ಬೆಳೆಯುವ ಭೂಮಿಯಲ್ಲಿ ಬಿತ್ತಿರುವೆ,

ಒಟ್ಟಿನಲಿ ನೀನಿದ್ದೆಡೆ ತಲುಪಿಸಿರುವೆ
ನಿನ್ನ ಜನ್ಮ ದಿನಕೆ ಹಾರೈಸಿರುವೆ ....