"ಯಾಕೋ, ಏನಾಯ್ತು? ಊರಿಗೆ ಹೋಗಿ ಬಂದ ಮೇಲೆ ಒಂಥರಾ ಇದೀಯ, ಆರಾಮಾಗಿದೀಯ ತಾನೆ?", ಇವನು ಕೇಳಿದ. ಯಾವಾಗಲೂ ಲವಲವಿಕೆಯಿಂದಿರುತ್ತಿದ್ದ ಸ್ನೇಹಿತ ಅನ್ಯಮನಸ್ಕನಾಗಿದ್ದಾನೆಂದು ಯಾರು ಬೇಕಾದರು ಹೇಳಬಹುದಿತ್ತು. ಯಾವುದೋ ಬಗೆಹರಿಯದ ತೊಳಲಾಟದಲ್ಲಿ ಅವನಿದ್ದಂತಿತ್ತು. ತುಸು ಹೊತ್ತು ಯೋಚಿಸಿ ನಿಧಾನವಾಗಿ ಒಂದು ನಿರ್ಧಾರಕ್ಕೆ ಬಂದವನಂತೆ ಮೌನ ಮುರಿದು ಹೇಳಿದ: "ಅಂಥದ್ದೇನೂ ಇಲ್ಲ; ನಿನ್ನೆ ಊರಿಂದ ಬರ್ಬೇಕಾದ್ರೆ ಬೈಕಲ್ಲಿ ಹಿಂದೆ ಯಾರೋ ಕೂತ ಹಾಗೆ ಇತ್ತು ಕಣೋ, ಆದ್ರೆ ಯಾರೂ ಇರ್ಲಿಲ್ಲ. ಅದನ್ನೇ ಯೋಚನೆ ಮಾಡ್ತಾ ಇದ್ದೆ ಅಷ್ಟೇ". "ಥೂ ನಿನ್ನ.. ಇಷ್ಟಕ್ಕೆ ಅಷ್ಟೊಂದು ಯೋಚನೆ ಮಾಡ್ತಾ ಇದೀಯ, ಅದೂ ನೀನು?", ಇವನಿಗೆ ನಂಬಿಕೆ ಬರಲಿಲ್ಲ.
ಅವನು ಚಿಕ್ಕವನಾಗಿದ್ದಾಗಿನಿಂದಲೂ ಧೈರ್ಯಶಾಲಿ. ಯಾವುದನ್ನೂ ನೇರವಾಗಿ ನಂಬದೇ ಸ್ವತಃ ಪರೀಕ್ಷಿಸಿ ನೋಡಿಯೇ ನಂಬುವ ಸ್ವಭಾವ ಆತನದು. ಅದರಲ್ಲೂ ದೆವ್ವ-ಭೂತಗಳಲ್ಲಿ ಅಷ್ಟಾಗಿ ನಂಬಿಕೆ ಇರಲಿಲ್ಲ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಪಣ ಕಟ್ಟಿ ರಾತ್ರಿ ಒಬ್ಬೊನೇ ಸ್ಮಶಾನಕ್ಕೆ ಹೋಗಿ ಅಲ್ಲೇನೂ ಇಲ್ಲ ಎಂದು ಸಾಧಿಸಿದವ. ಅಂತಹವನು ಈಗ ಈ ರೀತಿ ಯೋಚಿಸುತ್ತಾ ಕುಳಿತಿದ್ದನ್ನು ನೋಡಿದರೆ ಇವನಿಗೆ ಅವನು ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದು ಮನಗಾಣಲು ಹೆಚ್ಚು ಹೊತ್ತು ಬೇಕಾಗಲಿಲ್ಲ. "ಲೋ, ಏನೋ ಮುಚ್ಚಿಡ್ತಾ ಇದೀಯ; ಏನದು ಹೇಳು", ಎಂದ ಇವನ ಮಾತಿಗೆ ನಿಜ ಹೇಳದೆ ಬೇರೆ ವಿಧಿಯಿಲ್ಲ ಎನಿಸಿತು.
"ನಿನ್ನೆ ಮಧ್ಯಾಹ್ನ ಸುಮಾರು ೨ ಘಂಟೆಗೆ ನಮ್ಮೂರಿಂದ ಹೊರಟೆ. ತಿಪಟೂರಲ್ಲಿ ಚಿಕ್ಕಿನ ಬಿಟ್ಟು ಮುಂದೆ ಬರ್ತಾ ಇದ್ದೆ. ಹೈವೇಯಲ್ವಾ.. ರಸ್ತೆ ಚೆನ್ನಾಗಿದೆ. ಚಚ್ಗೊಂಡ್ ಬರ್ತಾ ಇದ್ದೆ. ಅಷ್ಟರಲ್ಲಿ ಸೂರ್ಯ ಮುಳುಗಿ ಸ್ವಲ್ಪ ಕತ್ತಲಾಯ್ತು. ಹಾಗೇ ಕೆ.ಬಿ. ಕ್ರಾಸ್ ದಾಟಿ ಮುಂದೆ ಬರ್ಬೇಕಾದ್ರೆ ಸ್ವಲ್ಪ ದೂರ ಬಂದಿರ್ಬಹುದು, ಇದ್ದಕ್ಕಿದ್ದಂತೆ ಬೈಕ್ ಭಾರ ಅನ್ಸೋಕೆ ಶುರು ಆಯ್ತು. ಮೊದಲು ಬ್ಯಾಗ್ ಇರ್ಬೇಕು ಅಂದ್ಕೊಂಡೆ. ಆದರೆ ನನ್ನ ಬ್ಯಾಗಲ್ಲಿ ಭಾರ ಆಗುವಂಥದ್ದು ಏನೂ ಇರ್ಲಿಲ್ಲ. ಅಷ್ಟಾದ್ರೂ ನಾನು ಬೈಕ್ ನಿಲ್ಲಿಸ್ಲಿಲ್ಲ. ಮೊದಲಿದ್ದ ವೇಗದಲ್ಲೇ ಹೊಡೀತಾ ಇದ್ದೆ. ಎಡಗಡೆ ಒಂದು ದೊಡ್ಡ ಕೆರೆ ಬಂತು. ಆ ಕೆರೆ ಏರಿ ದಾಟಿ ಮುಂದೆ ಹೋಗ್ತಾ ಹೋಗ್ತಾ ಬೈಕ್ ಮತ್ತೂ ಭಾರ ಆಗ್ತಿದೆ ಅನಿಸ್ತು. ಹಿಂದೆ ಯಾರೋ ಕೂತಿದಾರೇನೋ ಅನ್ಸೋಕೆ ಶುರು ಆಯ್ತು. ಸೈಡ್ ಮಿರರ್‌ನಲ್ಲಿ ಹಿಂದೆ ನೋಡಿದೆ. ಏನೋ ಒಂಥರಾ ಬೆಳಕು ಕಾಣಿಸ್ತು. ಆಗ ಯಾಕೋ ಸ್ವಲ್ಪ ವಿಚಿತ್ರ ಅಂತ ಅನಿಸ್ಲಿಕ್ಕೆ ಶುರು ಆಯ್ತು. ಏನಿದು ನೋಡೇ ಬಿಡೋಣ ಅಂತ ಸ್ವಲ್ಪ ಮುಂದೆ ಹೋಗಿ ಬೈಕ್ ನಿಲ್ಲಿಸಿ ಕೆಳಗಿಳಿದೆ"
ಇಷ್ಟು ಹೊತ್ತು ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದ ಇವ ಮಧ್ಯೆ ಬಾಯಿ ಹಾಕಿದ: "ಏನೂ ಇರ್ಲಿಲ್ಲ ತಾನೆ? ಸುಮ್ನೆ ಏನೇನೋ ಅಂದ್ಕೊಂಡಿರ್ತೀಯ". ಅವ ಮುಂದುವರೆಸಿದ: "ಹ್ಮ್.. ಏನೂ ಇರ್ಲಿಲ್ಲ; ಆದರೆ ನಾನು ಇಷ್ಟು ಹೊತ್ತು ಹೈವೇನಲ್ಲಿ ಬರ್ತಿದೀನಿ ಅಂದ್ಕೊಂಡ್ನಲ್ಲ, ಅಲ್ಲಿ ಹೈವೇ ಇರ್ಲೇ ಇಲ್ಲ. ಹಳ್ಳಿಯೊಂದರ ಮಣ್ಣು ರಸ್ತೆ ಬದಿಯಲ್ಲಿ ನನ್ನ ಬೈಕ್ ನಿಂತಿತ್ತು. ಅದು ಹ್ಯಾಗೆ ಆ ರಸ್ತೆಗೆ ಹೋದೆ ಅಂತ ತಿಳೀತಿಲ್ಲ". "ಎಲ್ಲ ನಿನ್ನ ಭ್ರಮೆ", ಇವ ಉದ್ಗರಿಸಿದ. "ನಾನೂ ಹಾಗೇ ಅಂದ್ಕೊಂಡೆ ಕಣೋ; ಆದ್ರೆ ಆ ದಾರಿ ತಪ್ಪು ಅಂತ ಗೊತ್ತಾದ್ಮೇಲೆ ಅಲ್ಲಿಂದ ಬಂದ ದಾರಿಯಲ್ಲೆ ವಾಪಸ್ ಹೊರಟೆ. ವಿಚಿತ್ರ ಅಂದ್ರೆ ನನ್ ಬೈಕ್ ಮೊದಲಿನ ಥರಾನೆ ಹಗುರ ಅನ್ಸೋಕೆ ಶುರು ಆಯ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಒಬ್ಬ ನಡೆದುಕೊಂಡು ಹೋಗ್ತಾ ಇದ್ದ. ಅವನತ್ರ ಹೈವೇಗೆ ಹೋಗೋದು ಹೇಗೆ ಅಂತ ಕೇಳಿದೆ. ಅವನು ಇಲ್ಲಿಂದ ಸುಮಾರು ೫-೬ ಕಿಲೋಮೀಟರ್ ದೂರ ಹೋದ್ರೆ ಹೈವೇ ಸಿಗುತ್ತೆ ಅಂದ. ಸರಿ ಅಂತ ಹಾಗೆ ಮುಂದೆ ಬಂದು ಹೈವೇ ಸೇರ್ಕೊಂಡೆ."
"ಸರಿ ಹೋಯ್ತು", ಇವನೆಂದ. "ಮನಸ್ಸಲ್ಲೇ ಏನೇನೋ ಅಂದ್ಕೊಂಡು ಸುಮ್ನೇ ಈ ಥರ ಡಲ್ಲಾಗಿದೀಯ. ಈಗಾದ್ರೂ ಪಕ್ಕಾ ಆಯ್ತಾ ಅದು ನಿನ್ ಭ್ರಮೆ ಅಂತ?". ಅವಂಗೆ ಕಿರಿಕಿರಿಯಾಗಲಾರಂಭಿಸಿತು. "ಲೋ, ಹೋಗ್ಬೇಕಾದ್ರೆ ಭ್ರಮೆಯಲ್ಲೇ ಇದ್ದೆ ಅಂದ್ಕೋ. ಆದ್ರೆ ವಾಪಸ್ ಬರ್ಬೇಕಾದ್ರೆ ನಾನು ಸರಿಯಾಗೇ ಇದ್ದೆ. ಆಯ್ತಾ? ನನಗ್ಯಾಕೆ ಅದು ವಿಚಿತ್ರ ಅಂತ ಅನ್ಸ್ತಾ ಇದೆ ಅಂದ್ರೆ, ನಾನು ಆ ಹೈವೇಗೆ ಬಂದು ಸೇರ್ಕೊಂಡ್ನಲ್ಲ, ಅಲ್ಲಿಂದ ನಾನು ಈ ಮಣ್ಣು ರಸ್ತೆಗೆ ಬರ್ಬೇಕು ಅಂದ್ರೆ ಬಲಕ್ಕೆ ತಿರುಗಬೇಕು. ಇರೋ ಟ್ರಾಫಿಕ್ಕಲ್ಲಿ ಮಧ್ಯ ನಿಲ್ಲಿಸ್ದೇ ನಾನ್ ಬಂದ ಥರ ಈ ಕಡೆ ಬಂದಿರ್ಲಿಕ್ಕೆ ಸಾಧ್ಯನೇ ಇಲ್ಲ. ಅದೂ ಅಲ್ಲದೇ ನಾನು ವಾಪಸ್ ಬರೋಕಿಂತ ಮುಂಚೆ ನನ್ನ ಬೈಕಿನ ಸೀಟ್ ನೋಡಿದಾಗ ಅಲ್ಲಿ ಆಗಷ್ಟೇ ಯಾರೋ ಕೂತು ಎದ್ದು ಹೋದಂತಿತ್ತು. ಸೀಟಿನ ಹಿಂಭಾಗ ಕೆಳಗೆ ಹೋಗಿತ್ತು. ಹೆದ್ದಾರಿಗೆ ಬಂದು ಸೇರಿದಾಗ ಬೈಕಿನ ಓಡೋಮೀಟರ್ ಕೂಡ ಗಮನಿಸಿದೆ. ಅದು ಕೂಡ ೧೧ ಕಿಲೋಮೀಟರ್ ಹೆಚ್ಚು ತೋರಿಸುತ್ತಿತ್ತು!".
ಇವನಿಗೆ ಏನನ್ನಿಸಿತೋ ಏನೋ, ತಕ್ಷಣ ಬೈಕಿನ ಬಳಿ ಹೋದ. ನಾಲ್ಕೈದು ತಿಂಗಳ ಹಿಂದಷ್ಟೇ ಕೊಂಡಿದ್ದ ಹೊಸ ಬೈಕು. ಸೀಟಿನ ಹಿಂಭಾಗ ಅವ ಹೇಳಿದಂತೆ ಕೆಳಗೆ ಹೋಗಿದ್ದೇ ಅಲ್ಲದೆ ಒಂದು ಬದಿಯಲ್ಲಿ ಸ್ವಲ್ಪ ಹರಿದಿತ್ತು. ಘಟನೆಯ ಬಗ್ಗೆ ಇನ್ನೂ ಕುತೂಹಲ ಮೂಡಿತು. ಗೂಗಲ್ ಮ್ಯಾಪಿನಲ್ಲಿ ಹೋಗಿ ಬಂದ ಜಾಗದ ವಿವರ ನೋಡಿದ. ಅಲ್ಲಿ ಮತ್ತಷ್ಟು ಆಶ್ಚರ್ಯ ಕಾದಿತ್ತು. ಗೂಗಲ್ ಮ್ಯಾಪಿನಲ್ಲಿ ನೋಡಿದಾಗ ಅವ ಹೇಳಿದ ಸ್ಥಳ ಹಾಗೆಯೇ ಇತ್ತು. ಒಂದು ಮಣ್ಣಿನ ದಾರಿ; ಹೆದ್ದಾರಿಯಿಂದ ಅಲ್ಲಿಗೆ ಹೋಗಲು ಬಲಕ್ಕೆ ತಿರುಗಬೇಕು. ಆದರೆ ಆ ಮಣ್ಣಿನ ರಸ್ತೆಯ ಸುತ್ತ ಮುತ್ತ ಯಾವುದೇ ಕೆರೆ ಇರಲಿಲ್ಲ!
ಇವನು ಇಷ್ಟೆಲ್ಲ ಮಾಡುವುದನ್ನು ನೋಡುತ್ತಿದ್ದ ಅವನು ಕೇಳಿದ: "ಈಗಾದ್ರೂ ಗೊತ್ತಾಯ್ತಾ ನಾನು ಯಾಕೆ ಯೋಚನೆ ಮಾಡ್ತಾ ಇದ್ದೆ ಅಂತ?". ನಂಬಲೇಬೇಕಾದ ಘಟನೆ ಅದಾಗಿತ್ತು. ಆದರೆ ಅಲ್ಲಿ ಕುಳಿತು ಎದ್ದು ಹೋಗಿದ್ದು ಯಾರು, ಅಥವಾ ಏನು; ಅವನು ಅಲ್ಲಿ ಕಂಡ ಕೆರೆ ಯಾವುದು ಎಂಬುದು ಮಾತ್ರ ಒಂದು ನಿಗೂಢವಾಗಿಯೇ ಉಳಿದಿದೆ.
(ಇದು ಮಾರ್ಚ್ ೭, ೨೦೧೦ರಂದು ನನ್ನ ಗೆಳೆಯ ಬೆಂಗಳೂರಿಗೆ ಬರುವಾಗ ನಡೆದ ಸತ್ಯ ಘಟನೆ)
23 ಕಾಮೆಂಟ್‌ಗಳು:
ನಿರೂಪಣೆ ಚೆನ್ನಾಗಿದ್ದು ..
ಹರೀಶ,
ವಿಚಿತ್ರವಾಗಿದೆ. ನಮಗೂ ಚಾರಣವೊಂದಕ್ಕೆ ಹೋದಾಗ ಇದೇ ರೀತಿಯ ಅನುಭವವಾಗಿತ್ತು! ನಂಬಲಾಗದ ವಿಷಯವನ್ನು ನಂಬಬೇಕಾದ ಅನಿವಾರ್ಯತೆ.
ಕಿರಣ್, ಥ್ಯಾಂಕ್ಸೋ :)
ರಾಜೇಶ್ ಅವರೇ, ಆ ಅನುಭವ ಏನು ಎಂಬುದನ್ನು ಬರೆಯಿರಿ.. ಕೇಳುವ ಕುತೂಹಲವಿದೆ :)
ಇದು ನಿಜವಾಗಿಯೂ ಅಚ್ಚರಿಯ ಘಟನೆ.ಅಲೌಕಿಕ ವಾಸ್ತವತೆಯನ್ನು ನಾವು ನಂಬಲೇಬೇಕು.
ಅಯ್ಯಪ್ಪಾ ಭಯಾ!!!
ಹೀಗೂ ಉಂಟೇ...!
ಖರೇ ಹೌದನ? thrilling ಇದ್ದು!
ತೇಜಸ್
ಹೀಗೆ ಉಂಟು !!
ಸುನಾಥ ಕಾಕಾ, ನಿಮ್ಮ ಅನುಭವದಲ್ಲೂ ಇಂಥ ಘಟನೆಗಳಿದ್ದರೆ ತಿಳಿಸಿ. ಪ್ರತಿಕ್ರಿಯೆಗೆ ಧನ್ಯವಾದಗಳು.
ಗಿರಿಜಾ ಅವರೇ, ಇಂಥ ವಿಚಿತ್ರ ಘಟನೆಗಳು ಮೈ ಜುಮ್ಮೆನಿಸುತ್ತವೆ.
ಪೂಜಾ, ಖರೇ ಹೌದೇ! ನಿನಗಿಂತ ಮುಂಚೆ ತೇಜಸ್ ಅಂತ ಕಮೆಂಟ್ ಹಾಕಿದ್ದ ನೋಡು.. ಅವನೇ "ಅವ".. :)
ತೇಜು, ಸೋಮ.. ಏನ್ರೋ ನಿಮ್ದು?
ವಿಕಾಸ್, ???? :)
ವಿಚಿತ್ರವಾಗಿದೆ , ಆಶ್ಚರ್ಯವೂ ಆಯಿತು.
thrilling anisitu... aadhare e tharaha aagidhe antha nan colleagues maathaadikoLta idru ondu dina... adu bengalooru - thumkooru road nalli aagiddanthe!
ಸುಬ್ರಹ್ಮಣ್ಯ ಅವರೇ, ಹೌದು.. ವಿಚಿತ್ರವಾಗಿದೆ. ಆದರೆ ಇಲ್ಲಿ ಕೆಲವರು ಹೇಳಿರುವಂತೆ ಇದು ಅತಿ ವಿರಳವೇನೂ ಅಲ್ಲ ಎಂದೆನಿಸುತ್ತದೆ. ಪ್ರತಿಕ್ರಿಯೆಗೆ ಧನ್ಯವಾದ. ಬರುತ್ತಿರಿ.
ಸುಧೇಶ್, ನಿಮ್ಮ ಸಹೋದ್ಯೋಗಿಗಳಿಗಾದ ಅನುಭವವನ್ನು ವಿವರವಾಗಿ ಕೇಳಿ ಬರೆಯಿರಿ; ಕುತೂಹಲಕಾರಿಗಾಗಿರುತ್ತದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಯಾಕೆ ಹೀಗಿರಬಾರದು..
ಕೆಲವೊಂದು ಸಲ ಮಿದುಳಿನಲ್ಲಿ ಸಮಾಧಾನ ಸ್ಥಿತಿ ಇಂದ ಅತ್ಯಂತ ಆಳವಾದ ಯೋಚನೆ ಹಾಗು ಅತ್ಯಂತ ಆಳವಾದ ಯೋಚನೆ ಇಂದ ಸಮಾಧಾನ ಸ್ಥಿತಿಗೆ ಬರುವಾಗ ಮಧ್ಯ ನಡೆಯುವ ಸನ್ನಿವೇಶ ಸಿಗದೇ ಅದರ ಹಿಂದಿನ ಸನ್ನಿವೇಶವನ್ನೇ ಎದುರು ನೋಡುತ್ತೇವೆ, ಅದು ಅಲ್ಲ ಎಂದು ಅರಿವಾದಾಗ ಹೋ ಹೌದಲ್ವ ಎಂದು ಮತ್ತೆ ಯಥಾಸ್ಥಿತಿಗೆ ಬರುತ್ತೇವೆ. ಹಾಗು ಬೆಳಕು ಮಿದುಳಿನ ಯೋಚನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತೆ ಅನ್ನೋದನ್ನ ನೆನಪಿಡೋಣ. ಮತ್ತೆ ಕೆಲವೊಂದು ಸಲ ಬೆಳಕು ಹಾಗು ಕತ್ತಲೆಯ ನಡುವೆ ವಿಚಾರಗಳ ಅಥವಾ ದೃಶ್ಯಗಳ ಮಿಶ್ರಣ.
ಇದನ್ನೇ ಇಲ್ಲಿರುವ ಸನ್ನಿವೇಶಕ್ಕೆ ಹೋಲಿಸಿ ನೋಡೋಣ..
ಚಿಕ್ಕಿ ಇಳಿದಾದ ಮೇಲೆ ಸೀಟ್ ನ ನೋಡಿಲ್ಲ.. ಕೂತಿರುವ ಜಾಗದ ಗುರುತು ಹೆಚ್ಚು ಸಮಯ ಸರಿಯದ ಕಾರಣ ಹಾಗೇ ಇರುವ ಸಾಧ್ಯತೆ..
ಒಬ್ಬರೇ ಇರುವಾಗ ಅಂದರೆ ಚಿಕ್ಕಿನ ಇಳಿಸಿದ ಮೇಲೆ ಯೋಚನಾ ಲಹರಿಯಲ್ಲಿ ತೀಕ್ಷ್ಣತೆ ಹಾಗು ಟ್ರಾಫಿಕ್ಕಲ್ಲಿ ಬದಲಿಸಿದ ದಿಕ್ಕಿನ ಅರಿವಾಗದೆ ಇರುವುದು..
ಬೈಕ್ ನ ಭಾರದಲ್ಲಿ ಕಾಣುವ ಬದಲಾವಣೆ ಸಾಮಾನ್ಯ ಏಕೆಂದರೆ ಹೈವೇ ಹಾಗು ಹಳ್ಳಿಯೊಂದರ ಮಣ್ಣು ರಸ್ತೆಯ ಮಧ್ಯ ಇರುವ ವ್ಯತ್ಯಾಸ..
ಇಲ್ಲದಿರುವ ಕೆರೆಯ ಕಾಣುವಿಕೆ ದೃಶ್ಯಗಳ ಮಿಶ್ರಣ, ಅಥವಾ ಇರುವ ನಿಜವಾದ ಕೆರೆ ಗೂಗಲ್ ಮ್ಯಾಪಿನಲ್ಲಿ ಇಲ್ಲದಿರುವುದು.. ಏಕೆಂದರೆ ಗೊತ್ತಿರುವ ಹಾಗೇ ಗೂಗಲ್ ಮ್ಯಾಪಿನಲ್ಲಿ ಪ್ರತಿಯೊಂದು ಸರಿಯಾಗಿಲ್ಲ.
ಸೈಡ್ ಮಿರರ್‌ನಲ್ಲಿ ಹಿಂದೆ ನೋಡಿದಾಗ ಏನೋ ಒಂಥರಾ ಬೆಳಕು ಕಾಣಿಸೋದು ಕತ್ತಲಾದ ಮೇಲೆ ವಿಶೇಷವೇನಲ್ಲ..
೧೧ ಕಿಲೋಮೀಟರು ಹೆಚ್ಚಿಗೆ ತೋರಿಸ್ತಿರೋದು, ದಾರಿ ಬದಲಾಗಿ ಮತ್ತೆ ಅಲ್ಲಿಗೆ ಬಂದರೋದ್ರಿಂದ ಹೆಚ್ಚಿಗೆ ತೋರಿಸಲೇ ಬೇಕು.
ಇದೆಲ್ಲದರ ಜೊತೆಗೆ.. ಎಲ್ಲೋ ಮನಸಿನ ಒಂದು ಭಾಗದಲ್ಲಿ ಹಿಂದೆ ಸ್ಪಿರಿಟ್ ಲೆವೆಲ್ ಮಾಡಿ ದೆವ್ವ ಕರೆಯೋ ಕೆಲಸ ಹಾಗು ಅದರ ಮೇಲಿರುವ ನಂಬಿಕೆ ಮನಸ್ಸನ್ನು ಈ ರೀತಿಯ ಯೋಚನೆಯ ಸಂಕಷ್ಟದಲ್ಲಿ ಮುಳುಗಿಸಿರಬಹುದು.
ಇದು ಒಂದು ಸಣ್ಣ ಅನಿಸಿಕೆ..
ವಿ-ಚಿತ್ರ....ವಿಶಿಷ್ಟ!!!
ಹರೀಶ್,
ತುಸು ಭಯ ಉಂಟಾದರೂ ವಿಚಿತ್ರ ಎನ್ನಿಸಲಿಲ್ಲ. ಕಾರಣ ಇಂತಹ ಅನೇಕ ಅನುಭವಗಳು ನನಗೂ ಆಗಿವೆ.. ಆಗಿರುವವರನ್ನು ಕೇಳಿಯೂ ಬಲ್ಲೆ...!
ವಿಶು, ನಿನ್ನ ಅನಿಸಿಕೆ ಬಹುತೇಕ ಒಪ್ಪುವಂಥದ್ದು... ಆದರೆ ತಾನು ಎಲ್ಲಿ ಹೋಗ್ತಿದೀನಿ ಅನ್ನೋ ವಿವೇಚನೆ ಇಲ್ಲದೇ ೧೧ ಕಿಲೋಮೀಟರ್ ಬೈಕ್ ಓಡಿಸೋದು ಸಾಧ್ಯನಾ?
ವಿಜಯರಾಜ್ ಕನ್ನಂತ ಅವರೇ, ಹೌದು :)
ತೇಜಕ್ಕಾ, ನಿಮಗಾಗಿರುವ ಅನುಭವಗಳನ್ನೂ ಬರೆಯಿರಿ... :)
ಪ್ರತಿಕ್ರಿಯೆಗೆ ಎಲ್ಲರಿಗೂ ಧನ್ಯವಾದ
ಹೌದು ಹರೀಶ್, ಇಲ್ಲಿ ಗಮನಿಸಿದರೆ ೧೧ ಕಿಲೋಮೀಟರು ಅಲ್ಲ ೫ ಕಿಲೋಮೀಟರು ಅರಿವಿಗೆ ಬರದೆ ಇರುವುದು, ಅದಾದ ಮೇಲೆ ಅರಿವಾಗಿರುವುದು. ಆಳವಾದ ಯೋಚನೆ ಕಡೆ ಏಕಾಗ್ರತೆಯಲ್ಲಿ ಮುಳುಗಿರುವುದು.
ವಿಶು, ಇರಬಹುದು.. ಆದರೆ ೫ ಕಿಲೋಮೀಟರ್ ಆದರೂ ತಾನು ಯಾವ ರಸ್ತೆಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಮರೆತು, ಬೈಕಿನಲ್ಲಿ ಸವಾರಿ ಮಾಡಿದ್ದಾನೆ ಅಂತ ನಂಬುವುದು ತುಸು ಕಷ್ಟವೇ..
ನಿರೂಪಣೆ ಚೆನ್ನಾಗಿದೆ ಹರೀಶ್ ..
ಹೈವೆ ಬಿಟ್ಟು ಮಣ್ಣು ರಸ್ತೆ ಗೆ ಬಂದಾಗಲೂ ಗೊತ್ತಾಗಿಲ್ಲ ಅಂದ್ರೆ ಏನೋ ಗಾಡವಾಗಿ ಯೋಚಿಸ್ತಿರಬಹುದು ...
ಒಂದು ಒಳ್ಳೆ ಅನುಭವ ಆಗಿರತ್ತೆ ಅವನಿಗೆ
harish sir,modala bhetiyalle nimma lekhana tumbaa ishtavaayitu.abhinandanegalu.
ಮಂಜು, ಹೌದು.. ಕೇಳಿದವರಿಗೇ ಒಂಥರಾ ಮೈ ಜುಮ್ಮೆನಿಸುವ ಅನುಭವ ಅಂದ್ಮೇಲೆ ಅನುಭವಿಸಿದ ಅವನಿಗೆ ಇನ್ನೂ ಒಳ್ಳೇ ಅನುಭವ ಆಗಿರುತ್ತೆ :-)
ಕಲರವ ಅವರೇ, ನಮ್ಮ ಬ್ಲಾಗಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆಗಾಗ ಬರುತ್ತಿರಿ
very nice write up.. awesome.good luck..
Regards
Rashmigowda
Thirthahalli
ಕಾಮೆಂಟ್ ಪೋಸ್ಟ್ ಮಾಡಿ