ಭಾನುವಾರ, ನವೆಂಬರ್ 24, 2013

ಕನ್ನಡಕ್ಕೊಂದು ಸ್ಪೆಲ್ ಚೆಕ್ಕರ್

ನೀವೆಲ್ಲ MS Word ಅಥವಾ ಬೇರೆ ಯಾವುದಾದರೂ ತಂತ್ರಾಂಶಗಳನ್ನು ಬಳಸುವಾಗ, ಕಾಗುಣಿತ ದೋಷ ಕಂಡುಬಂದಲ್ಲಿ ಅದಕ್ಕೆ ಕೆಂಪು ಅಡಿಗೆರೆ (underline) ಕಂಡುಬರುವುದನ್ನು ಗಮನಿಸಿರುತ್ತೀರಿ. ಅದಕ್ಕೆ ಸ್ಪೆಲ್ ಚೆಕ್ಕರ್ (spell checker) ಎಂದು ಕರೆಯುತ್ತಾರೆ. ಹೆಚ್ಚಾಗಿ ನಾವು ಬಳಸುವುದು ಆಂಗ್ಲ ಭಾಷೆಯೇ ಆದರೂ ಎಲ್ಲ ಭಾಷೆಗಳಲ್ಲೂ ಇದನ್ನು ಮಾಡುವುದು ಸಾಧ್ಯ.

ಒಂದು ವರ್ಷದ ಹಿಂದೆ ಇದರ ಬಗ್ಗೆ ಸ್ವಲ್ಪ ಗಮನ ಕೊಟ್ಟಾಗ, Firefox ಮುಂತಾದ web browserಗಳಲ್ಲೂ ಸಹ ಈ ರೀತಿ ಸ್ಪೆಲ್ ಚೆಕ್ಕರ್ ಇರುವುದು ಗಮನಕ್ಕೆ ಬಂದಿತು. ಆದರೆ ಫೈರ್‌ಫಾಕ್ಸಿನಲ್ಲಿ ಕನ್ನಡಕ್ಕೆ ಯಾವುದೇ ರೀತಿಯ ಸ್ಪೆಲ್ ಚೆಕ್ಕರ್ ಇರಲಿಲ್ಲ. https://addons.mozilla.org/en-US/firefox/language-tools/ - ಈ ಪುಟಕ್ಕೆ ಹೋದರೆ ಅಲ್ಲಿ ತಮಿಳು, ತೆಲುಗು, ಹಿಂದೀ ಭಾಷೆಗಳಿಗೆ ಸ್ಪೆಲ್ ಚೆಕ್ಕರ್ ಇದ್ದರೂ ಕನ್ನಡದ ಮುಂದೆ ಖಾಲಿ ಜಾಗವಿದ್ದಿದ್ದು ಬೇಸರ ತಂದಿತ್ತು. ಅದು ಓಪನ್ ಸೋರ್ಸ್ ಆಗಿರುವುದರಿಂದ ನಾನೇ ಏಕೆ ಮಾಡಬಾರದು ಎಂದುಕೊಂಡೆ. ಅಂತೆಯೇ ನನ್ನ ಕೈಲಾದ ಮಟ್ಟಿಗೆ ಒಂದು ಸ್ಪೆಲ್ ಚೆಕ್ಕರ್ ಮಾಡಿ ಹಾಕಿದೆ. ಈಗ ಈ ಸ್ಪೆಲ್ ಚೆಕ್ಕರ್‌ಗೆ ಐದು ನೂರಕ್ಕೂ ಹೆಚ್ಚು ಬಳಕೆದಾರರಿದ್ದಾರೆ!

https://addons.mozilla.org/en-US/firefox/addon/kannada-spell-checker/

ಇದನ್ನು ಬಳಸುವುದು ಹೇಗೆ?
  • ಮೊದಲು ಫೈರ್‌ಫಾಕ್ಸ್ ಬ್ರೌಸರ್ ಅನ್ನು ತೆರೆದುಕೊಳ್ಳಿ.
  • ಮೇಲೆ ಕೊಟ್ಟಿರುವ ಈ ಕೊಂಡಿಗೆ ಹೋಗಿ.
  • "+ Add to Firefox" ಎಂಬ ಬಟನ್ ಕ್ಲಿಕ್ಕಿಸಿ.

  • ೩ ಸೆಕೆಂಡುಗಳ ಕಾಲ ಕಾದು, ನಂತರ "Install Now" ಒತ್ತಿ.


    ಇದರಿಂದ ಆಡ್ ಆನ್ ಅನುಸ್ಥಾಪನೆಗೊಳ್ಳುತ್ತದೆ.
  • ನಂತರ ಯಾವುದಾದರೂ text fieldಗೆ ಹೋಗಿ (ಕಮೆಂಟ್ ಬರೆಯುವ, ಪೋಸ್ಟ್ ಬರೆಯುವ - ಇತ್ಯಾದಿ ಟೈಪ್ ಮಾಡಬಹುದಾದ ಸ್ಥಳಗಳು) ರೈಟ್ ಕ್ಲಿಕ್ ಮಾಡಿ Check Spelling ಎಂಬುದನ್ನು ಆಯ್ದುಕೊಳ್ಳಿ.

  • ನಂತರ ಮತ್ತೆ ರೈಟ್ ಕ್ಲಿಕ್ ಮಾಡಿ Languages->Kannada ಎಂಬುದನ್ನು ಆಯ್ದುಕೊಳ್ಳಿ.


ನೀವು ಬರೆಯುತ್ತಾ ಹೋದಂತೆ ತಪ್ಪು ಪದಗಳು ಕಂಡಲ್ಲಿ ಅಡಿಗೆರೆ ಮೂಡಲಾರಂಭಿಸುತ್ತದೆ. ಯಾವ ಪದಗಳಿಗೆ ಯಾವ ಪ್ರತ್ಯಯಗಳು ಸೇರುತ್ತವೆ ಎಂಬುದನ್ನೆಲ್ಲ ಪಟ್ಟಿ ಮಾಡಿ ಅವುಗಳನ್ನು ವಿಂಗಡಿಸಿ ಬರೆಯಬೇಕಿತ್ತು. ಇದಕ್ಕಿಂತ ಹೆಚ್ಚಾಗಿ ಪದಗಳ ಪಟ್ಟಿ ಬೇಕು. ಇದಕ್ಕಾಗಿ ನನ್ನ ಅನೇಕ ಗೆಳೆಯರು ಸಹಕರಿಸಿದರು. ಅವರಿಗೆಲ್ಲ ನನ್ನ ಧನ್ಯವಾದಗಳು.

ನೀವೂ ಸಹಕರಿಸಬಹುದು!
ಈ ಸ್ಪೆಲ್ ಚೆಕ್ಕರ್ ಸಂಪೂರ್ಣವಲ್ಲ. ಏಕೆಂದರೆ ಕನ್ನಡದಲ್ಲಿ ಲಕ್ಷಗಟ್ಟಲೆ ಪದಗಳಿವೆ. ಸದ್ಯಕ್ಕೆ ಇದರಲ್ಲಿ ಮುಖ್ಯವಾದ ೪೦೦೦+ ಪದಗಳು ಮಾತ್ರ ಇವೆ. ಅಲ್ಲದೇ, ಕನ್ನಡದ ಕ್ರಿಯಾಪದಗಳು ಸಂಕೀರ್ಣವಾದ ಪ್ರತ್ಯಯಗಳನ್ನು ಹೊಂದಿರುವುದರಿಂದ ಅವುಗಳನ್ನು ಸ್ಪೆಲ್ ಚೆಕ್ಕರ್ ಸರಿಯಾಗಿ ಗುರುತಿಸದೇ ಇರಬಹುದು. ಮುಂದಿನ ಆವೃತ್ತಿಗಳಲ್ಲಿ ಇದನ್ನು ಖಂಡಿತ ಸರಿಪಡಿಸಲಾಗುವುದು.

ಆದರೆ ಇದನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಸಹಕರಿಸಬಹುದು. ನೀವು ಬರೆಯುವಾಗ ಸರಿಯಾದ ಪದಗಳಿಗೂ ಇದು ಅಡಿಗೆರೆ ತೋರಿಸಿದಲ್ಲಿ, ರೈಟ್ ಕ್ಲಿಕ್ ಮಾಡಿ Add to Dictionary ಎಂಬುದನ್ನು ಒತ್ತಬಹುದು. ನಂತರ Help -> Troubleshooting Information ಕ್ಲಿಕ್ಕಿಸಿ Profile Directory ಯ ಮುಂದಿರುವ Open Directory ಒತ್ತಿ, ಅದರಲ್ಲಿರುವ persdict.dat ಫೈಲ್ ಅನ್ನು ನನಗೆ ಕಳುಹಿಸಿದರೆ ಅದರಲ್ಲಿನ ಪದಗಳನ್ನು ಮುಂದಿನ ಆವೃತ್ತಿಯಲ್ಲಿ ಅಳವಡಿಸಲಾಗುವುದು.

ತಾಂತ್ರಿಕ ವಿವರಗಳು
ಬೇರೆ ಬೇರೆ ರೀತಿಯ ಸ್ಪೆಲ್ ಚೆಕ್ಕರ್‌ಗಳಿದ್ದರೂ ಸಹ aspell ಮತ್ತು hunspell ಮಾದರಿಯ ಸ್ಪೆಲ್ ಚೆಕ್ಕರ್‌ಗಳು ಗಮನಾರ್ಹವಾದವುಗಳು. ಫೈರ್‌ಫಾಕ್ಸ್ hunspell ಮಾದರಿಯ ಸ್ಪೆಲ್ ಚೆಕ್ಕರ್ ಬಳಸುತ್ತದೆ. ಈ ಶಿಷ್ಟತೆಯನ್ನು ಅಳವಡಿಸಿಕೊಂಡರೆ ಅದನ್ನು ಫೈರ್‌ಫಾಕ್ಸ್ ಅಷ್ಟೇ ಅಲ್ಲದೇ Open Office, Libre Office, Notepad++ ಮುಂತಾದ ಮುಕ್ತ ತಂತ್ರಾಂಶಗಳಲ್ಲಿ ಕೂಡ ಬಳಸಬಹುದು.

ಈ ಸ್ಪೆಲ್ ಚೆಕ್ಕರ್‌ನ ಸಂಪೂರ್ಣ ಸೋರ್ಸ್ ಕೋಡ್ ಇಲ್ಲಿ ಲಭ್ಯ: https://github.com/mgharish/kn-hunspell/
ಇದು GNU/GPL v2.0+ ಅನುಮತಿಯನ್ನು ಹೊಂದಿರುವುದರಿಂದ, ಯಾರು ಬೇಕಾದರೂ ಇದನ್ನು ಸ್ವತಃ ಬದಲಾಯಿಸಿಕೊಳ್ಳಬಹುದು.

ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಸಕ್ತಿ ಇರುವವರು ನನ್ನನ್ನು mgharish ಎಟ್ gmail ಡಾಟ್ com ಮೂಲಕ ಸಂಪರ್ಕಿಸಬಹುದು.