ಶುಕ್ರವಾರ, ಮಾರ್ಚ್ 30, 2012

ಮರಳಿದ ನೆನಪು

ಬಾ, ಗೆಳತಿ ಇಂದು ನಿನ್ನ ನೆನಪು ಹಸಿಯಾಗಿದೆ
ಅಂದೇ ಹಣ್ಣಾಗಿ ಮಾಗಿದ ಒಲವ ನೀ ನಲ್ಲೆ ಮರೆತೆಯಾ
ನಾ ಮರೆಯಲಾರೆನು.. ಎಂದೂ ನೀ ಬಾರದಾದೆಯಾ

ಸೂತ್ರ ಕಟ್ಟಿ ಹಾರಿಬಿಟ್ಟ ಗಾಳಿಪಟವು ಕಂಡಿದೆ
ಜಾತ್ರೆ ಪೇಟೆಯಲ್ಲಿ ಸುತ್ತಿ ಬಂದ ನೆನಪು ಕಾಡಿದೆ
ರಾತ್ರಿ ಚಂದ್ರನಲ್ಲಿ ಕೂಡ ನಿನ್ನ ಮೊಗವೆ ಮೂಡಿದೆ
ಬಾ, ಗೆಳತಿ ನನ್ನ ಮನವು ನಿನ್ನ ಬಳಿ ಓಡಿದೆ

ನಾವೆಯಲ್ಲಿ ಕೂತು ಹೋದ ನದಿಯ ದಂಡೆ ಕಾದಿದೆ
ಭಾವ ತುಂಬಿ ನೀನು ನುಡಿದ ಮಾತಿನಿಂದ ಬೆಂದಿದೆ
ನೋವಿನಿಂದ ಬೀಳುಕೊಟ್ಟ ದಿನವ ನೆನೆದು ನೊಂದಿದೆ
ಬಾ, ಗೆಳತಿ ನನ್ನ ಹೃದಯ ನಿನ್ನ ಬಳಿ ಬಂದಿದೆ

ಕಣ್ಣ ಒರೆಸಿ ಕಾಣೆಯಾದ ನಿನ್ನ ಬಗ್ಗೆ  ದೂರಿದೆ
ತಣ್ಣಗಾಗಿ ಹೇಳುವಂಥ ನನ್ನ ಕಥೆಯು ನೂರಿದೆ
ಬಣ್ಣ ಬಣ್ಣದಿಂದ ಇರುವ ಜೋಡಿ ಹಕ್ಕಿ ಹಾರಿದೆ
ಬಾ, ಗೆಳತಿ ನನ್ನ ಜೀವ ನಿನ್ನ ಜೊತೆ ಕೋರಿದೆ

(ಸ್ಫೂರ್ತಿ: ಜಯಂತ್ ಕಾಯ್ಕಿಣಿ ರಚಿಸಿರುವ ನೀನೆ ಬರಿ ನೀನೆ ಗುಚ್ಛದ ಸೋನು ನಿಗಮ್ ಹಾಡಿರುವ ಬಾ ನೋಡು ಗೆಳತಿ ನವಿಲುಗರಿಯು ಮರಿ ಹಾಕಿದೆ ಹಾಡು)

ಶುಕ್ರವಾರ, ಮಾರ್ಚ್ 23, 2012

ಯುಗಾದಿ

ಪ್ರತಿ ಅಂತ್ಯಕ್ಕೊಂದು ನಾಂದಿ ಇರುವಂತೆ
ಶರತ್ಕಾಲದ ನಂತರದ ವಸಂತ ಮಾಸದಂತೆ
ಇರುಳಿನ ಹಿಂದೆಯೇ ಬರುವ ಹಗಲಿನಂತೆ

ಹಳೇ ಬೇರಿನಿಂದ ಹೊಸ ಚಿಗುರು ಬರುವಂತೆ
ಹಿರಿಯರ ಆಶೀರ್ವಾದ ನವ ಪೀಳಿಗೆಯ ಏಳ್ಗೆಯಂತೆ
ಎಲ್ಲಾ ಪುರಾತನ ಸೃಷ್ಟಿ ನವೀನವಾಗುವಂತೆ

ಹೊಸ ಹುಮ್ಮಸ್ಸು ಜಡವನ್ನು ಕಿತ್ತೊಗೆಯಲಿ
ಕಾದಿದ್ದ ಎಲ್ಲಾ ಕನಸುಗಳು ನನಸಾಗಲಿ
ಹರುಷದ ಅಲೆಯು ಎಲ್ಲೆಲ್ಲೂ ಹರಡಲಿ

ಯುಗಾದಿಯು, ಬೇವಿನ ಕಹಿ ಕಡಿಮೆ ತರಲಿ
ಬೆಲ್ಲದ ಸಿಹಿ ಬಾಳಲ್ಲಿ ಹೊಳೆಯಾಗಿ ಹರಿಯಲಿ
ಬೇವು-ಬೆಲ್ಲ ಜೀವನದ ಸಾರವಾಗಲಿ

ಸೋಮವಾರ, ಮಾರ್ಚ್ 12, 2012

ಆಶಯ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಿದ ಪಾತ್ರಗಳೆಷ್ಟೋ
ಪಾತ್ರದ ಭಾವನೆಗಳೆಷ್ಟೋ -
ಒಮ್ಮೆ ಅಳು, ಒಮ್ಮೆ ನಗು.
ಒಮ್ಮೆ ದುಃಖ, ಒಮ್ಮೆ ಸುಖ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಬೇಕಾಗಿರುವ ಪಾತ್ರಗಳೆಷ್ಟೋ
ಪಾತ್ರದ ನಿರೀಕ್ಷೆಗಳೆಷ್ಟೋ -
ತುಂಬು ಪ್ರೀತಿ, ಸದಾ ನೆಮ್ಮದಿ.
ಗಟ್ಟಿ ನೆಲೆ, ಆಶಯದ ಸೆಲೆ

ಪಾತ್ರದ ಆಯ್ಕೆ ಸೂತ್ರದಾರನದ್ದು
ನಟಿಸುವ ಸಾಮರ್ಥ್ಯ ಮಾತ್ರ ನಿಮ್ಮದು
ಪಾತ್ರ ಯಾವುದೇ ಇರಲಿ
ರಂಗ ಯಾವುದೇ ಇರಲಿ
ನಿಮ್ಮ ಸಾಮರ್ಥ್ಯ ಎಂದೂ ಕುಗ್ಗದಿರಲಿ
ಯಶಸ್ಸಿನ ಗರಿ ಸದಾ ನಿಮ್ಮೊಂದಿಗಿರಲಿ