ಶನಿವಾರ, ಜುಲೈ 23, 2011

ಅಲೆ

ಕಣ್ಣ ಕಡಲೊಳಗೊಂದು ಕನಸು ಹೆಣೆಯುವ ಅಲೆಯು
ಪುಟ್ಟ ಬೀಜದಿಂ ಮರವು ಬೆಳೆಯುವಂತೆ
ಕನಸ ಹಿಡಿಯುವ ಮುನ್ನ ಬಣ್ಣ ಬಣ್ಣದ ಬಣ್ಣ
ಮಳೆಬಿಲ್ಲು ಆಗಸದಿ ಮೂಡುವಂತೆ

ತುಟಿಯ ನಡುಕದಲ್ಲೊಂದು ಮೌನ ಮಾತಿನ ಅಲೆಯು
ತಂಗಾಳಿ ತನ್ಹೆಸರ ಕೂಗಿದಂತೆ
ಪ್ರಾಣ ಸುಳಿಯುವ ಮುನ್ನ ಜೀವ ಜೀವವೂ ಶೂನ್ಯ
ಉರಿಯ ತೊರೆದಿರುವ ದೀಪದಂತೆ

ಕೆನ್ನೆ ಕುಳಿಗಳಲೊಂದು ಮುಗ್ಧ ನಗುನಿನ ಅಲೆಯು
ಬೆಳ್ಳಕ್ಕಿ ಗರಿಬಿಚ್ಚಿ ಹಾರಿದಂತೆ
ಗರಿಯ ಬಿಚ್ಚುವ ಮುನ್ನ ತೀರ ತೀರವೂ ಮನ್ನ
ಮೊದಲ ತೊದಲನುಡಿ ಮೂಡುವಂತೆ

ಕುಡಿನೋಟದೊಳಗೊಂದು ಬಿಕ್ಕಿ ಬೆರೆಯುವ ಅಲೆಯು
ಮಳೆನೀರು ಸಾಗರ ಸೇರುವಂತೆ
ಹನಿಯು ಬೆರೆಯುವ ಮುನ್ನ ಕೋಟಿ ಕೋಟಿಯೂ ಭಿನ್ನ
ವಸುಧೆಯೊಳು ಮನುಜರು ಮೆರೆಯುವಂತೆ

ಮನದ ತೆರೆಯೊಳಗೊಂದು ಮಿಡಿವ ಹೃದಯದ ಅಲೆಯು
ಕೋಗಿಲೆಯು ಮನಬಿಚ್ಚಿ ಹಾಡುವಂತೆ
ಮನವು ತೆರೆಯುವ ಮುನ್ನ ತಾನು ತನ್ನದೇ ಎಲ್ಲಾ
ರಾಜತಾನೆಂದು ಭ್ರಮರ ಸಾರುವಂತೆ