ನಮಸ್ಕಾರ! ಬಹಳ ದಿನವಾಗಿದೆ ಇಲ್ಲಿ ಬರೆದು... ಏನ್ ಮಾಡಲಿ ನಾನು ಏನ್ ಮಾಡಲಿ? ಕೇವಲ ನೀರು, ಶುದ್ಧ ಗಾಳಿ ಮುಂತಾದವುಗಳ ಅಭಾವದಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ನಾನು ಬಂದಾಗಿನಿಂದ (ನನಗೆ) ಹೊಸ ಅಭಾವಗಳು ಶುರುವಾಗಿವೆ. ಬರೆಯೋದಕ್ಕೆ ಬಹಳ ವಿಷಯಗಳಿವೆ, ಆದರೆ ಸಮಯದ ಅಭಾವ. ಸಾಕಷ್ಟು ಸಮಯವಿದೆ, ಆದರೆ ಕಂಪ್ಯೂಟರ್ ಅಭಾವ. ಸಾಕಷ್ಟು ಕಂಪ್ಯೂಟರ್ ಗಳೂ ಇವೆ, ಆದರೆ ಇಂಟರ್ನೆಟ್ ಅಭಾವ. ಹೀಗೆ ಅಭಾವಗಳ ಸುಳಿಗೆ ಸಿಕ್ಕು ಭಾವದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ದೋಣಿಗೆ ಹುಟ್ಟು ಹಾಕುವ ಕಾಲ ಕೂಡಿ ಬಂದಿದೆ.
ರಾಜಧಾನಿಗೆ ನಾನು ಬಂದಾಗಿನಿಂದ ಅನುಭವಿಸಿರುವ ಕಷ್ಟ ಎಂದರೆ ಎಲ್ಲರಿಗೂ ತಿಳಿದಿರುವ ಟ್ರಾಫಿಕ್ ಜಾಮ್. ಅದರಲ್ಲಿ ಸಿಕ್ಕಿ ಹಾಕಿಕೊಂಡಾಗ ಬಹಳಷ್ಟು ಜನ ಮಾಡುವ ಕೆಲಸವೆಂದರೆ ಎಫ್.ಎಂ. ಕೇಳುವುದು ("ಸಿಗ್ನಲ್ ಅಲ್ಲೇ ಶೇವಿಂಗ್ ಮಾಡಿ, ಟ್ರಾಫಿಕ್ ನಲ್ಲೇ ಮೇಕಪ್ ಮಾಡಿ, ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ" ಎನ್ನುವ ಅಮೇರಿಕಾ ಸಂಸ್ಕೃತಿ ಇಲ್ಲಿಲ್ಲವಲ್ಲ!). ಎಫ್.ಎಂ ಆದರೋ ಬರೀ ಕಂಗ್ಲಿಷ್ ಮಾತನಾಡುವ ಆರ್.ಜೆ. ಗಳ ತಂಡ, ಅವರ ನಿರುಪಯುಕ್ತ ಹರಟೆ ಹಾಗೂ ಅಲ್ಲೋ ಇಲ್ಲೋ ಕೆಲವು ಉತ್ತಮ ಹಾಡುಗಳು. ಆದರೆ ಬೇರೆ ಮನರಂಜನೆಯಿಲ್ಲದೆ ಬೆಂಗಾಡಾಗಿರುವ ಈ ಮನಸ್ಸಿಗೆ ಅದೇ ಓಯಸಿಸ್!
ನವೆಂಬರ್ ಬಂದ ತಕ್ಷಣ ಜಾಗೃತವಾಗುವ ಕನ್ನಡ ಸಂಘಗಳು ಎಂದಿನಂತೆ ಈ ಬಾರಿಯೂ ತಮ್ಮ ಕೆಲಸ ಮಾಡಿದವು, ರೇಡಿಯೋ ಜಾಕಿಗಳು ಯಥಾಪ್ರಕಾರ ಕಂಗ್ಲಿಷ್ ಮೆರೆದರು. ಇವೆಲ್ಲದರ ಮಧ್ಯೆ ಕನ್ನಡ ಬಾರದವರ/ಬಂದರೂ ಮಾತನಾದದವರ ಸಂದರ್ಶನ ಬೇರೆ. ಕರ್ನಾಟಕದಲ್ಲೇ ಓದಿ, ಬೆಳೆದಿದ್ದರೂ ಕನ್ನಡ ಮಾತನಾಡಲು ನಾಚುವ(?) ದೀಪಿಕಾ ಪಡುಕೋಣೆಯ ಸಂದರ್ಶನ ಇದರಲ್ಲೊಂದು. ಕನ್ನಡದ ಐಶ್ವರ್ಯ ಎಂದು ಹೆಸರಾಗಿರುವ ಇವಳಿಗೆ ಕನ್ನಡ ಮಾತನಾಡಲು ಅಂಜಿಕೆಯೇ ಅಳುಕೇ? ಆರ್.ಜೆ. ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿದ್ದರೂ ಹಿಂದಿ ಅಥವಾ ಆಂಗ್ಲದಲ್ಲಿಯೇ ಉತ್ತರಿಸುತ್ತಿದ್ದ ಆಕೆಯ ಧೈರ್ಯ ಮೆಚ್ಚಲೇಬೇಕು. ಇನ್ನು ಐಶ್ವರ್ಯಾ ಬಚ್ಚನ್ ಅಂತೂ ತನಗೆ ಕನ್ನಡ ಬರುತ್ತದೆಂದು ಹೇಳಿಕೊಳ್ಳಲೂ ಇಷ್ಟಪಡುವುದಿಲ್ಲ. ಕನ್ನಡ ರಾಜ್ಯೋತ್ಸವದಂದೇ ಆಕೆ ಹುಟ್ಟಿದ್ದು ಕನ್ನಡಿಗರ ಕರ್ಮಕಾಂಡ. ಒಟ್ಟಿನಲ್ಲಿ ಇನ್ನೊಂದು ರಾಜ್ಯೋತ್ಸವ ಮುಗಿದಿದೆ. ನವೆಂಬರ್ ತಿಂಗಳಿನಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಕನ್ನಡಿಗರ ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿದೆ. ಜೇನಿನ ಹೊಳೆಯೋ... ಹಾಲಿನ ಮಳೆಯೋ... ಎಂಬ ಮಾತು ಡಾ|| ರಾಜ್ ರೊಂದಿಗೆ ಅವಸಾನವಾಗಿದೆಯೋ ಎಂಬ ಶಂಕೆ ಉಂಟಾಗುತ್ತಿದೆ.