೨೦೦೭ರ ಅಕ್ಟೋಬರ್ ೧೧ನೇ ತಾರೀಖು ಗುರುವಾರ ಕೆಲಸಕ್ಕೆ ಸೇರಬೇಕಾಗಿತ್ತು. ಕೆಲವು ಪಂಚಾಂಗಗಳ ಪ್ರಕಾರ ಆ ದಿನ ಅಮಾವಾಸ್ಯೆ. ಅದರಲ್ಲೂ ಮಹಾಲಯ ಅಮಾವಾಸ್ಯೆ. ಇನ್ನು ಕೆಲವು ಪಂಚಾಂಗಗಳ ಪ್ರಕಾರ ಬುಧವಾರವೇ ಅಮಾವಾಸ್ಯೆ. ಹೀಗಾಗಿ ಯಾವುದರ ಗೊಡವೆಯೇ ಬೇಡ ಎಂದು ಮಂಗಳವಾರ ಮಧ್ಯಾಹ್ನ ಸುಮಾರು ೧೨:೩೦ ರ ಸಮಯ ಒಂದು ಸೂಟ್‍ಕೇಸ್, ಇನ್ನೊಂದು ಬ್ಯಾಗ್ ಹಿಡಿದು ಹರಿಹರದ ಬಸ್ ಸ್ಟ್ಯಾಂಡ್ ಬಳಿ ಬಂದೆ. ಅಪ್ಪ ಅಮ್ಮ ನನ್ನನ್ನು ಕಳಿಸಲು ಬಂದಿದ್ದರು. ಅಲ್ಲಿ ನೋಡಿದರೆ ಬೆಂಗಳೂರಿಗೆ ಹೋಗುವ ಯಾವುದೇ ಬಸ್ ಇರಲಿಲ್ಲ. ಹೀಗಾಗಿ ದಾವಣಗೆರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ಬಸ್ ಹಿಡಿದರಾಯಿತು ಎಂದು ನಿರ್ಧರಿಸಿ ದಾವಣಗೆರೆಯ ಬಸ್ ಹತ್ತಿದೆವು. ಹರಿಹರದಲ್ಲಿ ಕಳೆದಿದ್ದ ದಿನಗಳನ್ನು ನೆನಪಿಸಿಕೊಂಡು ಕಂಠ ಗದ್ಗದಿತವಾಗಿತ್ತು. ಅಮ್ಮನ ಮುಖ ನೋಡಿದಾಗ ಅಳು ಬರುವಂತಾಗುತ್ತಿತ್ತು. ಹಾಗಾಗಿ ಹೊರಗೆ ನೋಡುತ್ತಾ ಕುಳಿತೆ. ನಾನು ಓದಿದ ಶಾಲೆ-ಕಾಲೇಜು, ಆಡಿದ ಆಟದ ಮೈದಾನ, ನನ್ನ ಸಹಪಾಠಿಗಳು, ಗೆಳೆಯರು ಎಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತಿದ್ದವು. ಅಷ್ಟರಲ್ಲಿ ದಾವಣಗೆರೆ ಬಂದಿತ್ತು. ನನ್ನನ್ನು ಬಸ್ ಹತ್ತಿಸಿ ಅಪ್ಪ-ಅಮ್ಮ ತಿರುಗಿ ಹರಿಹರದ ದಾರಿ ಹಿಡಿದರು. ಮನಸ್ಸು ಭಾರವಾಗಿತ್ತು. ಏನೇನೋ ಯೋಚನೆಗಳು ಬರುತ್ತಿದ್ದವು. ಮೂರು ಸೀಟಿನ ಬದಿಯಲ್ಲಿ ಕಿಟಕಿಯ ಬಳಿ ಒಂದು ಜಾಗ ಹಿಡಿದು ಕುಳಿತೆ. ಬಸ್ ಹೊರಟಿತು.
ಅಷ್ಟರಲ್ಲಿ ಒಬ್ಬಳು ಹುಡುಗಿ, ಸುಮಾರು ೧೮-೧೯ ವರ್ಷದವಳಿರಬಹುದು, ಖಾಲಿ ಇದ್ದ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತಳು. ಮನಸ್ಸು ಪೂರ್ತಿ ನಾನು ಬೆಂಗಳೂರಿನಲ್ಲಿ ಮಾಡಬೇಕಾಗಿದ್ದ ಕೆಲಸಗಳ ಕಡೆಗೇ ಇದ್ದಿದ್ದರಿಂದ ಆಕೆಯ ಕಡೆ ಹೆಚ್ಚು ಗಮನ ಹೋಗಲಿಲ್ಲ. ಒಂದೈದು ನಿಮಿಷ ಆಗುವಷ್ಟರಲ್ಲಿ ನನ್ನ ಸ್ನೇಹಿತನ ಕರೆ ಬಂದಿತು. ಸ್ವಲ್ಪ ಹೊತ್ತು ಮಾತನಾಡಿ ನಂತರ ಮೊಬೈಲ್‍ನಲ್ಲಿ ಹಾಡು ಕೇಳುತ್ತಾ ಕುಳಿತೆ.
"ಎಕ್ಸ್‍ಕ್ಯೂಸ್ ಮಿ.. ಸ್ವಲ್ಪ ಮೊಬೈಲ್ ಕೊಡ್ತೀರಾ?"
"..."
"ನಾನು ಈ ಬಸ್ಸಿಗೆ ಬರ್ತಿರೋದನ್ನ ನಮ್ಮಣ್ಣಂಗೆ ಹೇಳ್ಬೇಕು. ಮಿಸ್ಡ್ ಕಾಲ್ ಕೊಡ್ತೀನಿ, ಕಾಲ್ ಮಾಡ್ತಾರೆ"
"ನಂಬರ್ ಹೇಳಿ, ನಾನೇ ಮಾಡ್ತೀನಿ"
"9844xxxxxx"
ಕಾಲ್ ಮಾಡಿದೆ. ಕಟ್ ಮಾಡುವಷ್ಟರಲ್ಲಿ ಎತ್ತಿಬಿಟ್ಟಿದ್ದ ಆಕೆಯ ಅಣ್ಣ. ಸ್ಪೈಸ್ ಟು ಸ್ಪೈಸ್ ತಾನೆ, ಹೋಗಲಿ, ಎಂದು ಸುಮ್ಮನಿದ್ದೆ. ಒಂದರ್ಧ ನಿಮಿಷದಲ್ಲಿ ಅವರಣ್ಣನ ಕರೆ ಬಂತು. ಆಕೆಯ ಕೈಗೆ ಮೊಬೈಲ್ ಕೊಟ್ಟು ಹೊರಗೆ ನೋಡುತ್ತಾ ಕುಳಿತೆ. ಒಂದು ನಿಮಿಷ, ಎರಡು ನಿಮಿಷ, ಐದು ನಿಮಿಷ.. ಊಹುಂ, ಅವಳ ಕರೆ ಅಂತ್ಯವಾಗುವ ಯಾವುದೇ ಲಕ್ಷಣಗಳಿರಲಿಲ್ಲ. ಯಾವ ಬಸ್ ಹತ್ತಿದ್ದೇನೆ, ಎಷ್ಟು ಹೊತ್ತಿಗೆ ಹತ್ತಿದ್ದೇನೆ, ಏನು ಊಟ ಮಾಡಿದೆ.. ಹೀಗೇ ಸಾಗುತ್ತಿತ್ತು ಆಕೆಯ ಮಾತು. ಅದೂ ಅಲ್ಲದೆ ಆಕೆಯ ಸೋ-ಕಾಲ್ಡ್ ಅಣ್ಣನನ್ನು "ಮಗಾ" ಎಂದು ಸಂಬೋಧಿಸುತ್ತಿದ್ದಳು. ಅಷ್ಟರಲ್ಲಿ ಕಂಡಕ್ಟರ್ ಬಂದು ಟಿಕೆಟ್ ಕೇಳಿದ. ಸುಮ್ಮನೆ ತನ್ನ ಟಿಕೆಟ್ ತೆಗೆಸುವ ಬದಲು "ಎಲ್ಲಿಗೆ ಹೋಗ್ತಿದೀರಿ ನೀವು?" ಎಂದು ನನ್ನನ್ನು ಕೇಳಿದಳು. ಎಲಾ ಇವಳ! ತನ್ನ ಟಿಕೆಟ್ ತೆಗೆಸಲು ನನ್ನ ಬಗ್ಗೆ ಯಾಕೆ ಕೇಳ್ತಿದ್ದಾಳೆ ಎಂದುಕೊಂಡೆ. ಆದರೂ ಮುಖದಲ್ಲೇನೂ ತೋರಗೊಡದೆ, "ಬೆಂಗಳೂರು" ಎಂದು ನನ್ನ ಟಿಕೆಟ್ ತೆಗೆದುಕೊಂಡೆ. "ನನಗೂ ಬೆಂಗಳೂರಿನ ಟಿಕೆಟ್ ಕೊಡಿ" ಎಂದಳು. ಹಾಗೆಯೇ ಆಕೆಯ ಕರೆಯೂ ಮುಗಿದಿತ್ತು. ಮೊಬೈಲ್ ವಾಪಸ್ ಕೊಟ್ಟಳು. "ಮತ್ತೆ ಮಾಡ್ತಾ ಇರ್ತಾರಂತೆ" ಎಂದಳು.
ಮನಸ್ಸು ಒಂದೇ ಸಮನೆ ತರ್ಕ ಶುರು ಮಾಡಿತು. ಯಾರೇ ಆಗಲಿ, ಬೇರೆಯವರ, ಅದೂ ಅಪರಿಚಿತರ ಮೊಬೈಲ್ ತೆಗೆದುಕೊಂಡು ಇಷ್ಟೊಂದು ಮಾತನಾಡುತ್ತಾರೆಯೆ? "ಏನ್ ಮಗಾ" ಎಂದು ಅಣ್ಣನನ್ನು ಕರೆಯುತ್ತಿದ್ದ ಆಕೆಯ ಭಾಷೆಯೋ ಬಯಲಸೀಮೆಯಲ್ಲೇ ಹುಟ್ಟಿ ಬೆಳೆದ ನನಗೂ ಮುಜುಗರ ತರಿಸುವಂತಿತ್ತು. ಒಂದು ಹುಡುಗಿ ತನ್ನ ಅಣ್ಣನೊಂದಿಗೆ ಹೀಗೆ ಮಾತನಾಡಬಹುದೆ? ಅಥವಾ ಆಕೆ ಅಣ್ಣನಲ್ಲದೆ ಬೇರೆ ಯಾರೊಂದಿಗೋ ಮಾತನಾಡುತ್ತಿದ್ದಿರಬಹುದೆ? ಅಷ್ಟಕ್ಕೂ ತಾನು ಟಿಕೆಟ್ ತೆಗೆಸಲು ನನ್ನ ಗಮ್ಯಸ್ಥಾನ ಕೇಳುವ ಅವಶ್ಯಕತೆಯಾದರೂ ಏನಿತ್ತು? ಹಿಂದಿನ ವಿಚಾರಗಳೆಲ್ಲವೂ ಮಾಯವಾಗಿ ಮನಸ್ಸು ಪೂರ್ತಿ ಬೇರೆ ವಿಚಾರಗಳೇ ತುಂಬಿಕೊಂಡವು. ಬೆಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ಗೆಳೆಯರು ನೆನಪಾದರು. ಒಬ್ಬೊಬ್ಬರದೂ ಒಂದೊಂದು ಕಥೆ. ಒಬ್ಬನು ಮೊಬೈಲ್‍ನಲ್ಲಿ ಮಾತನಾಡುತ್ತ ಬಸ್ ಇಳಿಯುವಾಗ ಕೈಯಿಂದಲೇ ಕಸಿದುಕೊಂಡು ಓಡಿಹೋಗಿದ್ದರು. ಇನ್ನೊಬ್ಬನ ಬಳಿ ಕಾಲ್ ಮಾಡಿಕೊಡುತ್ತೇನೆಂದು ಹೇಳಿ ಮೊಬೈಲ್ ತೆಗೆದುಕೊಂಡು ಅವನು ಅತ್ತಿತ್ತ ನೋಡುತ್ತಿದ್ದಾಗ ಚಳ್ಳೆ ಹಣ್ಣು ತಿನ್ನಿಸಿದ್ದರು. ಎರಡನೆಯ ಪ್ರಸಂಗಕ್ಕೂ ಈಗ ನಡೆಯುತ್ತಿದ್ದ ವಿದ್ಯಮಾನಕ್ಕೂ ತಾಳೆಯಾಗುವಂತೆ ಕಂಡುಬಂದಿತು. ನನ್ನ ಕೈಯಲ್ಲಿದ್ದಿದ್ದು Nokia N73m. ಕೇವಲ ಮೂರು ತಿಂಗಳ ಹಿಂದೆ ಕೊಂಡಿದ್ದು. ಅವರಣ್ಣ ಸ್ವಲ್ಪ ಹೊತ್ತಿನ ನಂತರ ಮತ್ತೆ ಕಾಲ್ ಮಾಡುತ್ತಾನೆ ಎಂದು ಬೇರೆ ಹೇಳಿದ್ದಳು. ಒಮ್ಮೆ ಯಾವ ಬಸ್ಸಿಗೆ ಬರುತ್ತಿದ್ದಾಳೆ ಎಂದು ತಿಳಿದ ಮೇಲೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮಾತನಾಡುವಂಥದ್ದು ಏನಿದ್ದೀತು? ಮುಂದೆ ಘಟಿಸಬಹುದಾದ ಘಟನೆಗಳು, ಅವುಗಳ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿ ಒಮ್ಮೆ ಎದೆ ಝಲ್ಲೆಂದಿತು.
ಮಂಗಳವಾರ ಪ್ರಯಾಣ ಶುಭಕರವಲ್ಲ ಎಂದು ಕೆಲವು ಗೆಳೆಯರು ಸೋಮವಾರವೇ ಹರಿಹರದಿಂದ ಹೊರಟಿದ್ದರು. ಏನಾದರೂ ಆಗಲಿ ಎಂದು ಅವರ ಮುಂದೆ ಕೊಚ್ಚಿಕೊಂಡು ಹೊರಟುಬಂದಿದ್ದ ನನಗೆ ಯಾಕಾದರೂ ಹೊರಟೆನೋ ಎಂದೆನಿಸಲು ಪ್ರಾರಂಭವಾಗಿತ್ತು. ನಾನು ಒಬ್ಬನೇ ಬೇರೆ ಇದ್ದೆ. ಅಕಸ್ಮಾತ್ ನಾನೆಂದುಕೊಂಡಂತೆಯೇ ಆದರೆ ಮೊಬೈಲ್ ನನ್ನ ಕೈ ಬಿಡುವುದು ಶತಃಸಿದ್ಧ. ಕೈಯಲ್ಲಿ ಎರಡು ಬ್ಯಾಗ್ ಬೇರೆ. ಮೊಬೈಲ್ ಕಸಿದುಕೊಂಡು ಓಡಿದರೆ ಅವರನ್ನು ಬೆನ್ನಟ್ಟುವಂತೆಯೂ ಇಲ್ಲ. ಈಗೇನು ಮಾಡುವುದು?
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ಸಂಗೋಽಸ್ತು ಅಕರ್ಮಣಿ
ಎಂಬ ಭಗವದ್ಗೀತೆಯ ವಾಕ್ಯ ನೆನಪಾಯಿತು.
(ಭಾಗ-೨ರಲ್ಲಿ ಮುಂದುವರೆದಿದೆ)
11 ಕಾಮೆಂಟ್‌ಗಳು:
Hi harish,
My apologies for not commenting in kannada. No baraha on this machine. Very well written maga:)You have kept us in full suspense. Please break it at the earliest!!! Looking forward to the next part!
v.interesting....
ಮುಂದೆವರೆಸು ಗುರೂ.... ಬೇಗ
ಕುತೂಹಲಕಾರಿಯಾಗಿದೆ! ಬೇಗ ಬರಲಿ ಭಾಗ ಎರಡು.. :-)
ಯಾವಾಗ...
೨ನೇ ಭಾಗ?
ಬರಲಿ ಬೇಗ.
ಹರೀಶ,
ತುಂಬ ಚೆನಾಗಿದೆ. ಮುಂದಿನ ಭಾಗಕ್ಕೆ ಕಾಯ್ತಾ ಇದೀನಿ..
ಸಿಂಧು
Full suspense !!!
ಯಾವಾಗ ಮುಂದುವರಿತು ಹೇಳಿ ಕಾಯ್ತಾ ಇದ್ದಿ.
ಅಣ್ಣನ್ನ ’ಮಗಾ’ ಅನ್ನೋವ್ರು ಗೊತ್ತಿಲ್ಲ, ತಮ್ಮನ್ನ ಹಾಗೆ ಕರ್ಯೋ ಒಳ್ಳೇ ಹೆಣ್ಣ್ ಮಕ್ಕ್ಳು ನಮ್ಮ್ ಬೆಂಗ್ಳೂರ್ನಾಗೆ ಅವ್ರೆ ಸಾರ್:) ಸುಮ್ನೆ ಇನ್ಫಾರ್ಮೇಶನ್ ಇರ್ಲಿ ಅಂತ ಹೇಳ್ದೆ, ನಿಮ್ಮ್ ಕಥೆ ಮುಂದುವರೆಸಿ:))
೪೦೦kbps ಅಂತಾ ಕೊಚ್ಚುಕೊಂತಾ ಇದ್ದೆ? ಯಾವಾಗ ಮುಂದಿನ ಭಾಗ?
suri, if u dont hav baraha? dont worry, click here - not for baraha, but a good kannada transliteration tool...
ಮುಂದೇನಾಯಿತು? ಕಾದಾಂಬರಿಯನ್ನಾಗಿಸದೇ ಬೇಗ ಹೇಳಿ ಬಿಡಿ ಗುರು
ತುಸು ಹೆಚ್ಚು ಕಾಯಿಸಿದ್ದಕ್ಕೆ ಕ್ಷಮೆಯಿರಲಿ :-)
ನನಗೆ ಪ್ರೋತ್ಸಾಹ ನೀಡಿರುವ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು. ಮುಂದಿನ ಭಾಗವನ್ನು ಹಾಕಿದ್ದೇನೆ...
ಹರೀಶ್,
ಒಳ್ಳೆ ದೆತೆಕ್ಟಿವೆ ಕಥೆ ತರ ಬರೆದಿದೀರ ... ಎರಡನೆ ಭಾಗ ಓದುವ ತನಕ ಆತಂಕ
ಸೂಪರ್ ಆಗಿ ಇದೆ :)
ಕಾಮೆಂಟ್ ಪೋಸ್ಟ್ ಮಾಡಿ