ಶನಿವಾರ, ಸೆಪ್ಟೆಂಬರ್ 13, 2008

ಜೀವಕ್ಕೆ ಬೆಲೆಯೆಲ್ಲಿದೆ?

ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...

ಇದಕ್ಕೆ ಕೊನೆಯೆಂದು? ಎಲ್ಲಿ?

ಮೊನ್ನೆ ೯/೧೧. ಅದು ಆಗಿ ೭ ವರ್ಷಗಳಾಗಿವೆ. ವಿಶ್ವದಾದ್ಯಂತ ಅದನ್ನು ನೆನಪಿಟ್ಟುಕೊಂಡು ಶೋಕ ಆಚರಿಸುತ್ತಾರೆ. ಭಾರತದಲ್ಲಿ ಲೆಕ್ಕವಿಲ್ಲದಷ್ಟು ದಾಳಿಗಳಲ್ಲಿ ಲೆಕ್ಕ ತಪ್ಪುವಷ್ಟು ಜನ ಮಡಿದಿದ್ದಾರೆ. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ತಮ್ಮ ಸುತ್ತಮುತ್ತ ಏನಾದರೂ ಆದರೆ ಎಲ್ಲೂ ಹೋಗದೆ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಬೇರೆಡೆ ಆದ ದಾಳಿಗಳಿಗೂ ಇವರಿಗೂ ಸಂಬಂಧವೇ ಇರುವುದಿಲ್ಲ. ೧೧೫ ಕೋಟಿ ಜನರಲ್ಲಿ ೧೫ ಜನ ಸತ್ತರೆ ಯಾರಿಗೆ ಏನು ನಷ್ಟ ಎಂಬ ಧೋರಣೆಯೆ? ಸತ್ತವರೇನು ನಮ್ಮ ನೆಂಟರಲ್ಲ ಎಂಬ ಭಾವನೆಯೆ?

೨೦೦೫ರ ಡಿಸೆಂಬರ್ ೨೮ರಂದು ಭಾರತೀಯ ವಿಜ್ಞಾನ ಮಂದಿರದ (IISc) ಮೇಲೆ ನಡೆದ ಮೇಲೆ ಅಲ್ಲಿನ ಸೆಕ್ಯುರಿಟಿ ಹೆಚ್ಚಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿಗೆ ಹೋದರೆ ನಿಮ್ಮನ್ನು ಕೇಳುವವರೆ ಇರುವುದಿಲ್ಲ. ವಾಹನ ತೆಗೆದುಕೊಂಡು ಹೋದರೆ ತಡೆದು ನಿಲ್ಲಿಸುತ್ತಾರೆ. ನೀವು ಏನೇ ಹೇಳಿ, ಒಳಗೆ ಬಿಡುತ್ತಾರೆ, ಹೆಚ್ಚೆಂದರೆ ಒಂದು ಎಂಟ್ರಿ ಮಾಡಿ ಎನ್ನುತ್ತಾರೆ; ಮುಗಿಯಿತು. ಮುಂದೆಲ್ಲೂ ಯಾರೂ ಏನನ್ನೂ ಕೇಳುವುದಿಲ್ಲ. ಕನಿಷ್ಠ ಒಂದು ಸಣ್ಣ ಸಾಫ್ಟ್‌‍ವೇರ್ ಕಂಪೆನಿಯಲ್ಲಿ ಇರುವ ಭದ್ರತಾ ವ್ಯವಸ್ಥೆ ಕೂಡ ಇಲ್ಲ.

೨೦೦೧ರ ಡಿಸೆಂಬರ್ ೧೩ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆದಾಗ ಹಾಗೆ, ಹೀಗೆ, ಪ್ರಜಾಪ್ರಭುತ್ವಕ್ಕಾದ ಅವಮಾನ ಎಂದ ರಾಜಕೀಯ ಪಕ್ಷಗಳು ಮಾಡಿದ್ದೇನು? ಅಂಥ ಕೆಲಸ ಮಾಡಿ ಸಿಕ್ಕಿ ಬಿದ್ದವರಿಗೇ ಶಿಕ್ಷೆ ಕೊಡಲು ಹಿಂದೆ ಮುಂದೆ ನೋಡುವ ಭ್ರಷ್ಟ ಸರ್ಕಾರಗಳಿಂದ ಏನನ್ನು ತಾನೇ ನಿರೀಕ್ಷಿಸಲಾದೀತು? ಇನ್ನು ಜನರಾದರೂ ಏನು ಮಾಡಲಾದೀತು?

ಇನ್ನೊಬ್ಬರನ್ನು ಕೊಲ್ಲಿ, ಹಿಂಸಿಸಿ ಎಂದು ಯಾವ ಧರ್ಮವೂ ಹೇಳುವುದಿಲ್ಲ. ಆದರೂ ಇಂತಹ ಕೃತ್ಯಗಳನ್ನು ಏಕೆ ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ. War doesn't decide who's right; it decides who's left ಎಂದು ಎಲ್ಲೋ ಕೇಳಿದ ನೆನಪು... ಜೀವಕ್ಕೆ ಬೆಲೆಯೇ ಇಲ್ಲವೆ?

4 ಕಾಮೆಂಟ್‌ಗಳು:

ಮನಸ್ವಿ ಹೇಳಿದರು...

ಸತ್ತ ಮೇಲೆ ಜೀವಕ್ಕೆ! ಪರಿಹಾರ ಕೊಟ್ಟು ಬೆಲೆ ಕಟ್ಟುತ್ತದೆ ಸರ್ಕಾರ.. ಭಯೋತ್ಪಾದನೆಗೆ ಕೊನೆ ಎಂದು?
ಟಿ.ವಿ ನ್ಯೂಸ್ ಚಾನಲ್ಲುಗಳು ಈ ವಿಚಾರಗಳನ್ನೇ ವೈಭವೀಕರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ನೋಡಿದರೆ ಬೇಸರವಾಗುತ್ತದೆ, ಸುದ್ದಿ ಮಾದ್ಯಮಗಳು ರಕ್ತ ಸಿಕ್ತ ವಾತಾವರಣದ ಚಿತ್ರಗಳನ್ನು ತೋರಿಸುತ್ತಾ ವಿಶ್ಲೇಷಣೆ ಮಾಡುವುದನ್ನು ನೋಡಿದರೆ ಕೋಪ ಉಕ್ಕಿ ಬರುತ್ತದೆ.

ವಿ.ರಾ.ಹೆ. ಹೇಳಿದರು...

ಐ ಐ ಎಸ್ ಸಿ ಯಲ್ಲಿ ಸೆಕ್ಯುರಿಟಿ ಸರಿಯಾಗಿಲ್ಲ ಅನ್ನುವ ಕೊರಗಿಗಿಂತ ಆರಾಮಾಗಿ ಎಲ್ಲಿ ಬೇಕಾದರಲ್ಲಿ ಓಡಾಡಿಕೊಂಡು ನಂಬಿಕೆಯಿಂದ ಬದುಕುತ್ತಿದ್ದ ಭಾರತ ದೇಶದಲ್ಲಿ ಇಂತಹ ಸೆಕ್ಯುರಿಟಿ ಬೇಕು ಎಂದು ಬಯಸುವಂತೆ ಮಾಡಿರುವ ಉಗ್ರರ ಬಗ್ಗೆ ಕೋಪಬರುತ್ತದೆ. ಜೊತೆಗೆ ಅವರನ್ನು ಧರ್ಮಾಧಾರದಲ್ಲಿ ಓಲೈಸುವ ರಾಜಕೀಯ ಪಕ್ಷಗಳ ಮೇಲೂ!

ವಿಪರೀತ ಜನಸಂಖ್ಯೆ ಇರುವ ದೇಶಗಳ ಕತೆಯೇ ಇಷ್ಟು. ಜೀವಕ್ಕೆ ಬೆಲೆಯಿಲ್ಲ ಇಲ್ಲಿ.

Harisha - ಹರೀಶ ಹೇಳಿದರು...

@ಆದಿತ್ಯ:
ಸಿಟ್ಟು ಬರುತ್ತೆ, ಬಂದೇ ಬರುತ್ತೆ.. ಉಪ್ಪು ಖಾರ ತಿನ್ನೋ ದೇಹ ಆಲ್ವಾ? ಹಾಗಂತ ನ್ಯೂಸ್ ನೋಡೋದು ಬಿಡಕ್ಕಾಗುತ್ತಾ :-) ನಂಗೆ ಸಿಟ್ಟು ಬರೋದು ಸರ್ಕಾರದ ಮೇಲೆ

@ವಿಕಾಸ್:
ಮತ್ತೆ ಮತ್ತೆ ಮರುಕಳಿಸುವ ಇಂಥ ಘಟನೆಗಳಿಗೆ ಜನಸಂಖ್ಯೆ ಕಾರಣವೇ? ಅಥವಾ ನಮ್ಮ, ನಮ್ಮನ್ನಾಳುವವರ ದಿವ್ಯ ನಿರ್ಲಕ್ಷ್ಯ ಕಾರಣವೇ?
ಅಂದ ಹಾಗೆ.. "ನಕ್ಸಲೀಯರೇ ಬೆಂಗಳೂರಿಗೆ ಬನ್ನಿ!" ಅಂತ ಕರ್ದಿದ್ಯಲ್ಲಪ್ಪ.. ಈಗೆಂತ ಮಾಡ್ತೆ?

sunaath ಹೇಳಿದರು...

ಭಾರತದಲ್ಲಿ ಜೀವಕ್ಕೆ ಬೆಲೆ ಇಲ್ಲ.
ಆದರೆ ಮತಕ್ಕೆ (ವೋಟಿಗೆ) 'ಕಿಮ್ಮತ್ತು'ಇದೆ. ಹೀಗಾಗಿ 'ಮತ'ಭೇದಕ್ಕೆ ಕುಮ್ಮಕ್ಕು ಇದೆ.