ಶನಿವಾರ, ಆಗಸ್ಟ್ 3, 2013

ಮದುವೆಯ ಬಂಧ

ಚಿಮ್ಮುತಿರಲಿ ಒಲವ ಚಿಲುಮೆ
ಕೂಡಿ ನಿಮ್ಮ ಮನಸು
ಹೊಮ್ಮುತಿರಲಿ ನಿಮ್ಮ ಹಿರಿಮೆ
ಮಾಡಿ ಕನಸ ನನಸು

ಬಾಳಿ ನೂರು ಕಾಲ ಹೀಗೆ
ಹಾಲು ಜೇನ ಹಾಗೆ
ನಾಳೆ ನಿಮ್ಮದಿಂದಿಗಿಂತ
ಇರಲಿ ಚೆಂದವಾಗೆ

ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲಿಹುದು
ಇದಕೆ ನಾವೆ ಸಾಕ್ಷಿ

(ಗೆಳೆಯ ವೇದವ್ಯಾಸ ಮತ್ತು ಸ್ಮಿತಾ ಅವರ ಮದುವೆಯ ಸಂದರ್ಭದ ಹಾರೈಕೆ)

ಶುಕ್ರವಾರ, ಜೂನ್ 7, 2013

ಜೀವನ

ಬೆಟ್ಟದಂಚೆಂದು ಬೆದರದಿರು ಮನವೆ
ಜಲಪಾತಕ್ಕದೇ ತುದಿಯು ಮೂಲ
ಕಷ್ಟವೆಂದಿನಿತೂ ಬಾಡದಿರು ಮನವೆ
ಪ್ರತಿಯೊಂದಕ್ಕೂ ಇರುವುದೊಂದು ಕಾಲ

ದಹಿಸಿದರು ಎಂದು ಕೊರಗುವುದೆ ಬೆಣ್ಣೆ
ಘಮಿಸುವುದು ತಾನು ತುಪ್ಪವಾಗಿ
ಸೇರುವುದು ಎಲ್ಲರೂ ಒಂದು ದಿನ ಮಣ್ಣೆ
ಬದುಕು ನೀ ಇರುವಾಗ ಒಪ್ಪವಾಗಿ

ಎಷ್ಟು ಮೆರೆದರೆ ತಾನೆ ಏನು ಬಂತು
ಹುಟ್ಟಿನಲು ಸಾವಿನಲು ಒಂದೆ ವೇಷ
ಬಾಳೊಂದು ಪಾಪ ಪುಣ್ಯಗಳ ಕಂತು
ನಿನ್ನೆ ನಾಳೆಯ ನಡುವೆ ಬೇಕೆ ದ್ವೇಷ

ಭಾನುವಾರ, ಜೂನ್ 2, 2013

ಹ್ಯಾಂಗ್ ಔಟ್‍ನಿಂದ ಟಾಕ್‍ಗೆ

ಇತ್ತೀಚೆಗೆ ಗೂಗಲ್ ತನ್ನ ಆಂಡ್ರಾಯ್ಡ್ ಆವೃತ್ತಿಯ ಹರಟೆ ಸಾಧನ "ಟಾಕ್" ಜಾಗದಲ್ಲಿ "ಹ್ಯಾಂಗ್ ಔಟ್"ಎನ್ನುವ ಹೊಸ ಸಾಧನವನ್ನು ಸೇರಿಸಿತು. ಡೆಸ್ಕ್‌ಟಾಪ್ "ಹ್ಯಾಂಗ್ ಔಟ್"ನ ಮಾದರಿಯಲ್ಲೇ ಹೆಚ್ಚಿನ ವಿಶೇಷತೆಯೊಂದಿಗೆ ಕೂಡಿರಬಹುದೆಂದು ನಾನು ಮೊದಲಿದ್ದ ಟಾಕ್ ಅನ್ನು ಮೇಲ್ಮಟ್ಟಕ್ಕೇರಿಸಿಕೊಂಡೆ.

ಈ ಹೊಸ ಆವೃತ್ತಿಯಲ್ಲಿ ಕೆಲವು ತೊಂದರೆಗಳು ಕಂಡವು,
೧. ಸಂಪರ್ಕ ಪಟ್ಟಿಯಲ್ಲಿರುವವರ ಸ್ಥಿತಿ (ಲಭ್ಯ, ಕಾರ್ಯನಿರತ) ತಿಳಿಯುವುದಿಲ್ಲ.
೨. ನಮ್ಮ ಸ್ಥಿತಿ ಮತ್ತು ಸಂದೇಶವನ್ನು ತಿಳಿಯಲು, ಮಾರ್ಪಡಿಸಲು ಸಾಧ್ಯವಿಲ್ಲ.
೩. ಅದೃಶ್ಯ ಸ್ಥಿತಿ ಬೆಂಬಲಿತವಿಲ್ಲ.
೪. ಕಡತ ವಿನಿಮಯ ಸಾಧ್ಯವಿಲ್ಲ.
೫. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಉಪಯೋಗಿಸಲು ಸಾಧ್ಯವಿಲ್ಲ.

ಈ ಕಾರಣಗಳಿಂದಾಗಿ ಹೊಸ ಹ್ಯಾಂಗ್ ಔಟ್ ತನ್ನ ತೊಂದರೆಗಳನ್ನು ನಿವಾರಿಸಿಕೊಂಡು ಬಳಕೆದಾರ ಸ್ನೇಹಿಯಾಗುವವರೆಗೂ ಟಾಕ್‍ಗೆ ಹಿಂತಿರುಗಲು ನಿರ್ಧಾರಿಸಿದೆ. ಗೂಗಲ್ ತನ್ನ ಆಟದಂಗಡಿಯಿಂದ ಟಾಕ್ ಅನ್ನು ತೆರವುಗೊಳಿಸಿದ್ದರಿಂದ ಹಳೆಯ ಟಾಕ್ ಅನ್ನು ಮರು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಲವು ಹುಡುಕಾಟಗಳ ನಂತರ ಸರಳವಾಗಿ ಟಾಕ್‍ಗೆ ಹಿಂತಿರುಗುವ ದಾರಿ ಸಿಕ್ಕಿತು.

* ಗೂಗಲ್ "ಹ್ಯಾಂಗ್ ಔಟ್"ನಿಂದ "ಟಾಕ್"ಗೆ ಹಿಂತಿರುಗುವುದು ಹೇಗೆ?
>> ಅಪ್ಲಿಕೇಶನ್ ಮ್ಯಾನೇಜರ್‍ನ ಮೂಲಕ ಅಪ್ಡೇಟ್‍ಗಳನ್ನು ತೆಗೆದುಹಾಕಿದರಾಯಿತು! 
(Application manager-> Hangouts -> Uninstall updates)



ಗೂಗಲ್ 'ಆನೆ ನಡೆದಿದ್ದೇ ದಾರಿ' ಎಂಬಂತೆ ಇಂತಹ ಹುಚ್ಚಾಟಗಳನ್ನು ಮುಂದುವರೆಸಿದರೆ ಆರ್ಕುಟ್‍ನಿಂದ ಪಾಠ ಕಲಿತಿಲ್ಲವೆಂದೇ ಅರ್ಥ...

ಬುಧವಾರ, ಜನವರಿ 30, 2013

ಉಡುಗೊರೆ

ಜನ್ಮದಿನಕೆ ಹೇಗೆ ನೀಡಲಿ 
ಉಡುಗೊರೆ

ಉಪಮೆ ರೂಪಕ ದೀಪಕಗಳಿಂದ 
ಅಲಂಕರಿಸಿದ ಕಾವ್ಯ ನೀಡಲೇ?
ನಿನ್ನಂತ ನಿರಾಭರಣ ಸುಂದರಿಗೆ 
ಅಲಂಕಾರಿಕ ಕಾವ್ಯವೇ!

ವಿಶಿಷ್ಟ  ಪದ ರಚನೆಗಳ ಕಾವ್ಯ 
ರಚಿಸಿ ಕೊಡಲೇ?
ನಿನ್ನ ಮಾತಿನ ಲಹರಿಯ 
ಮುಂದೆ ರೀತಿ ಕಾವ್ಯವೇ!

ವಿಶಿಷ್ಟ  ಅರ್ಥ ಹೊಳೆಯಿಸುವ 
ಪದ್ಯ ರಚಿಸಿ ಹೇಳಲೇ?
ನಿನ್ನ ಸ್ನೇಹ ನನ್ನ ಜೀವನಕ್ಕೆ ನೀಡಿದ 
ಅರ್ಥದ ಮುಂದೆ ಧ್ವನಿ ಕಾವ್ಯವೇ!

ಹೇಗೆ ಇರಲಿ ಕಾವ್ಯ 
ರಸದ ಪಾಕದಲ್ಲಿ ಅದ್ದಿ ಕೊಡಲೇ?   
ನಿನ್ನ ಸವಿ ಮಾತಿನ ಆಹ್ಲಾದತೆ ಮುಂದೆ 
ರಸ ಕಾವ್ಯವೇ!

ಇದೋ ತೆಗೆದುಕೋ 
ಔಚಿತ್ಯದ ಬಟ್ಟಲಲಿರುವ 
ರಸದ ಪಾಕದಲಿ ಅದ್ದಿದ 
ವಿಶಿಷ್ಟ ವಿನ್ಯಾಸದ ಅಲಂಕಾರಿಕ 
ಕಾವ್ಯ ಜಾಮೂನಿನ ಉಡುಗೊರೆ .

 

ಮಂಗಳವಾರ, ಜನವರಿ 29, 2013

ನಿರಂತರ


          ಹರಿಯುತಿದೆ  ಜೀವನ ವಾಹಿನಿ 
          ನಿಂತಲ್ಲಿ ನಿಲ್ಲದೆ ,
          ನಿಲ್ಲು ಎಂದರೂ ನಿಲ್ಲದೇ 

           ನಿಲ್ಲುವುದಾದರೂ  ಎಷ್ಟು ದಿನ ?
            ಅಲ್ಲಲ್ಲ .....       ಎಷ್ಟು ಕ್ಷಣ?
          
         ನಿಲ್ಲುವುದಾದರು ಯಾರಿಗಾಗಿ 
         ನಿಲ್ಲುವುದಾದರು ಯಾತಕ್ಕಾಗಿ 

         ಪ್ರಶ್ನೆ 
         ಉತ್ತರವಿಲ್ಲ!
         ಹಾಗಾಗಿ ಅದು ನಿಲ್ಲುವುದಿಲ್ಲ 

        ನಾವಾದರೂ  ನಿಲ್ಲಬಹುದೇ?

        ಜೀವನ ವಾಹಿನಿಗೆ 
        ದಡವೂ ಇಲ್ಲ 
        ತಳವೂ ಇಲ್ಲ 
        ಹರಿಯುವುದು ನಿರಂತರ 
        ನಿಲ್ಲುವುದಾದರೂ ಎಲ್ಲಿ?

        ಜೀವನ ವಾಹಿನಿ ನಿಲ್ಲಲಾರದು 
         ನಾವೂ  ಕೂಡ ನಿಲ್ಲಬಾರದು.  
          
(ಗೆಳೆಯ ಹರೀಶನ ತಾಯಿ ವಿಧಿವಶರಾಗಿದ್ದು ದುರ್ದೈವದ ಸಂಗತಿ. ಅವರಿಗೆ ಈ ನನ್ನ ಕವನ ಅರ್ಪಣೆ )