ಶನಿವಾರ, ಜುಲೈ 23, 2011

ಅಲೆ

ಕಣ್ಣ ಕಡಲೊಳಗೊಂದು ಕನಸು ಹೆಣೆಯುವ ಅಲೆಯು
ಪುಟ್ಟ ಬೀಜದಿಂ ಮರವು ಬೆಳೆಯುವಂತೆ
ಕನಸ ಹಿಡಿಯುವ ಮುನ್ನ ಬಣ್ಣ ಬಣ್ಣದ ಬಣ್ಣ
ಮಳೆಬಿಲ್ಲು ಆಗಸದಿ ಮೂಡುವಂತೆ

ತುಟಿಯ ನಡುಕದಲ್ಲೊಂದು ಮೌನ ಮಾತಿನ ಅಲೆಯು
ತಂಗಾಳಿ ತನ್ಹೆಸರ ಕೂಗಿದಂತೆ
ಪ್ರಾಣ ಸುಳಿಯುವ ಮುನ್ನ ಜೀವ ಜೀವವೂ ಶೂನ್ಯ
ಉರಿಯ ತೊರೆದಿರುವ ದೀಪದಂತೆ

ಕೆನ್ನೆ ಕುಳಿಗಳಲೊಂದು ಮುಗ್ಧ ನಗುನಿನ ಅಲೆಯು
ಬೆಳ್ಳಕ್ಕಿ ಗರಿಬಿಚ್ಚಿ ಹಾರಿದಂತೆ
ಗರಿಯ ಬಿಚ್ಚುವ ಮುನ್ನ ತೀರ ತೀರವೂ ಮನ್ನ
ಮೊದಲ ತೊದಲನುಡಿ ಮೂಡುವಂತೆ

ಕುಡಿನೋಟದೊಳಗೊಂದು ಬಿಕ್ಕಿ ಬೆರೆಯುವ ಅಲೆಯು
ಮಳೆನೀರು ಸಾಗರ ಸೇರುವಂತೆ
ಹನಿಯು ಬೆರೆಯುವ ಮುನ್ನ ಕೋಟಿ ಕೋಟಿಯೂ ಭಿನ್ನ
ವಸುಧೆಯೊಳು ಮನುಜರು ಮೆರೆಯುವಂತೆ

ಮನದ ತೆರೆಯೊಳಗೊಂದು ಮಿಡಿವ ಹೃದಯದ ಅಲೆಯು
ಕೋಗಿಲೆಯು ಮನಬಿಚ್ಚಿ ಹಾಡುವಂತೆ
ಮನವು ತೆರೆಯುವ ಮುನ್ನ ತಾನು ತನ್ನದೇ ಎಲ್ಲಾ
ರಾಜತಾನೆಂದು ಭ್ರಮರ ಸಾರುವಂತೆ

11 ಕಾಮೆಂಟ್‌ಗಳು:

Subrahmanya ಹೇಳಿದರು...

ಒಳ್ಳೆಯ ಭಾವಗೀತೆ.

sunaath ಹೇಳಿದರು...

ತೇಜಸ್,
ಚೆನ್ನಾಗಿ ಬರೆದಿದ್ದೀರಿ. ಇಷ್ಟವಾಯಿತು.

ಸೋಮಶೇಖರ ಹುಲ್ಮನಿ ಹೇಳಿದರು...

ತೇಜು
ಉಪಮೆಗಳು ತುಂಬಾ ಅರ್ಥಪೂರ್ಣವಾಗಿವೆ....
ಭಾವಗೀತೆ ಯ ಆಳ ಅರಿಯಲು ನಾನು ಮೂರು ಬಾರಿ ಓದಬೇಕಾಯ್ತು...
ಎಷ್ಟು ಅರ್ಥವಾಯ್ತೋ ಗೊತ್ತಿಲ್ಲ !

Harisha - ಹರೀಶ ಹೇಳಿದರು...

ತೇಜು.. ಏನೋ ಇದು! ಒಂದೊಂದ್ ಸಲ ಓದಿದಾಗ್ಲೂ ಒಂದೊಂದು ಹೊಸ ಅರ್ಥ ಹೊಳೀತಾ ಇದೆ!

ತೇಜಸ್ ಜೈನ್ Tejas jain ಹೇಳಿದರು...

@ಸುಬ್ರಹ್ಮಣ್ಯ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

@ಸುನಾಥರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

@ಸೋಮ,ಹರೀಶ...
ಪದ್ಯದ ಅರ್ಥ, ಅದನ್ನು ಅರ್ಥೈಸುವವರ ಯೋಚನಾ ಮಟ್ಟದ ಮೇಲೆ ಕರ್ತುವಿನ ಆಲೋಚನಾ ವ್ಯಾಪ್ತಿಯನ್ನೂ ಮೀರಿ ಬೆಳೆಯುತ್ತದೆ...ಅಲ್ಲವೇ? ಮೆಚ್ಚಿದಕ್ಕೆ ಧನ್ಯವಾದಗಳು.. :)

Unknown ಹೇಳಿದರು...

ತೇಜು.. ಬಾಳ ದೋಣಿಯ ಪಯಣದಲಿ ಸಿಕ್ಕ ಈ ಅಲೆ ಅತ್ಯಂತ ಮನಮೋಹಕವಾಗಿದೆ. ನಿನ್ನ ಭಾವನೆಗಳ ಬಣ್ಣದಿ ಸಮಯ ಸಿಕ್ಕಾಗ ತುಸು ನಾಜೂಕಿನಲಿ ಮತ್ತೊಂದು ಅಲೆಯು ಮೂಡಲಿಯಂದು ಹಾರೈಸುವೆ.

prabhamani nagaraja ಹೇಳಿದರು...

ಸು೦ದರ ಉಪಮೆಗಳ ಭಾವಗೀತಾತ್ಮಕ ಕವನ ಚೆನ್ನಾಗಿದೆ. ಅಭಿನ೦ದನೆಗಳು.

ಅನಾಮಧೇಯ ಹೇಳಿದರು...

ಚೆನ್ನಾಗಿ ಬರೆದಿದ್ದೀರಿ :)

ಅನಾಮಧೇಯ ಹೇಳಿದರು...

ಸಣ್ಣ ಸೂಚನೆ.
"ಅಲ್ಲಿ ಬರೆದ ಅನಿಸಿಕೆಯನ್ನು ಕಾಪಿ ಮಾಡಿಕೊಂಡು ಮತ್ತೆ ಇಲ್ಲಿ ಬಂದು ಪೇಸ್ಟ್ ಮಾಡಬೇಕಾಗುವುದು."

ಅವಶ್ಯಕತೆ ಇಲ್ಲ. ಈ ಬುಕ್ ಮಾರ್ಕನ್ನ add ಮಾಡಿಕೊಂಡರೆ ಯಾವ textbox ನಲ್ಲಾದರು direct ಆಗಿ type ಮಾಡಬಹುದು :)

Harisha - ಹರೀಶ ಹೇಳಿದರು...

@anigmaticjourney, ಗಮನಿಸಿದ್ದಕ್ಕೆ ಧನ್ಯವಾದ..
ಗಣಕದಲ್ಲಿ ಏನೂ ಬದಲಾವಣೆ ಇಲ್ಲದೇ, ಇದ್ದುದರಲ್ಲಿಯೇ ಎಲ್ಲರಿಗೂ ಸಾಧ್ಯವಾಗಬಲ್ಲ ವಿಧಾನವಾದ್ದರಿಂದ ಅದನ್ನು ಬಹಳ ಹಿಂದೆ ಬರೆಯಲಾಗಿತ್ತು :-)

ತೇಜಸ್ ಜೈನ್ Tejas jain ಹೇಳಿದರು...

@ವಿಶು, ನಿನ್ನ ಹಾರೈಕೆಗೆ ಧನ್ಯವಾದಗಳು... :)

@prabhamani nagaraja, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

@anenigmaticjourney, ಮೆಚ್ಚಿದ್ದಕ್ಕೆ ಧನ್ಯವಾದಗಳು...