ಸೋಮವಾರ, ಡಿಸೆಂಬರ್ 1, 2008

ವೋಟಿಗಾಗಿ! ಒಂದು ಸೀಟಿಗಾಗಿ!!

ಒಂದು ಕಡೆ ಭಯೋತ್ಪಾದಕರಿಂದ ದಾಳಿಯಾದರೆ ಸಾಕು... ಆಯಕಟ್ಟಿನ ಜಾಗಗಳಲ್ಲಿ ತಾತ್ಕಾಲಿಕವಾಗಿ ಭದ್ರತೆ ಹೆಚ್ಚುತ್ತದೆ; ಪತ್ರಕರ್ತರು ಯುದ್ಧಪಿಪಾಸುಗಳಂತೆ ವರ್ತಿಸುತ್ತಾ ಕ್ಷಣ-ಕ್ಷಣದ ಸುದ್ದಿಯನ್ನು ರೋಚಕವಾಗಿ ನೀಡುತ್ತಾರೆ; ನಾ ಮುಂದು ತಾ ಮುಂದು ಎಂದು ಎಲ್ಲ ನ್ಯೂಸ್ ಚಾನೆಲ್ಲುಗಳಲ್ಲೂ ಅದರ ಅತಿರಂಜಿತ ವರದಿ ಆರಂಭವಾಗುತ್ತದೆ; ನಡೆಯುತ್ತಿರುವುದರ ಬಗ್ಗೆ ತಲೆ-ಬುಡ ಗೊತ್ತಿಲ್ಲದವರಿಂದ ಅವುಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ; ರಾಜಕಾರಣಿಗಳೆಲ್ಲ ಘಟನೆಯನ್ನು ಖಂಡನಾರ್ಹ, ಪೈಶಾಚಿಕ ಕೃತ್ಯ ಎಂದೆಲ್ಲ ಹೇಳಿಕೆ ಕೊಟ್ಟು ಮೊಸಳೆ ಕಣ್ಣೀರು ಸುರಿಸುತ್ತಾರೆ; ತಕ್ಷಣದ ಪರಿಹಾರವಾಗಿ ಕೆಲ ಅಧಿಕಾರಿಗಳ, ಸಚಿವರ ತಲೆದಂಡ ಪಡೆಯಲಾಗುತ್ತದೆ. ಮಾಡಲು ಕೆಲಸವಿಲ್ಲದೆ ಸುಮ್ಮನೆ ಕುಳಿತವರನ್ನು ಸೇರಿಸಿ ತನಿಖೆಗೆಂದು ಒಂದು ಆಯೋಗ ರಚಿಸಲಾಗುತ್ತದೆ; ಬ್ಲಾಗಿಗರೆಲ್ಲ ಘಟನೆಯನ್ನು ವಿವಿಧ ಕೋನಗಳಿಂದ ವಿಮರ್ಶಿಸಿ ತಮ್ಮ ವೈಚಾರಿಕತೆ ಮೆರೆಯುತ್ತಾರೆ; ಅಂಕಣಕಾರರು ಎಷ್ಟೋ ವರ್ಷ ಹಿಂದಿನ ಘಟನೆಗಳನ್ನೆಲ್ಲ ಹೆಕ್ಕಿ ತೆಗೆದು ಆಗ ಹಾಗಾಗಿತ್ತು, ಈಗ ಹೀಗಾಗಿದೆ ಎಂದು ತಮ್ಮ ಇತಿಹಾಸ ಪಾಂಡಿತ್ಯ ಪ್ರದರ್ಶಿಸುತ್ತಾರೆ. ನನ್ನಂಥ ಕೆಲವರು ಹೊಲಸು ರಾಜಕಾರಣದಿಂದಲೇ ಇದೆಲ್ಲ ಆಗುತ್ತಿರುವುದು ಎಂದು ಹಲುಬುತ್ತಾರೆ; ಇನ್ನು ಕೆಲವು ಬಾಯಿಬಡುಕ ಬುದ್ಧಿಜೀವಿಗಳು ಪರಿಸ್ಥಿತಿಯ ಗಂಭೀರತೆ ಅರಿತು ಸುಮ್ಮನಾಗಿಬಿಡುತ್ತಾರೆ; ಎಲ್ಲರಲ್ಲೂ ದೇಶದ ಬಗ್ಗೆ ಎಂದೂ ಮೂಡದ ಅಭಿಮಾನ, ಕಾಳಜಿ ಒಟ್ಟಿಗೆ ಮೂಡಿ ಬರುತ್ತದೆ... ಅಷ್ಟೇ. ಘಟನೆ ಮರುಕಳಿಸದಂತೆ ಮಾಡಲು ಯಾರೂ ಮುಂದಾಗುವುದಿಲ್ಲ. ಸ್ವಲ್ಪ ದಿನ ಆದ ಮೇಲೆ ಹತ್ತರಲ್ಲಿ ಹನ್ನೊಂದರಂತೆ ಆ ಘಟನೆಯೂ ಕರಾಳ ಅಧ್ಯಾಯ ಎಂದು ಚರಿತ್ರೆಯಲ್ಲಿ ದಾಖಲಾಗಿಬಿಡುತ್ತದೆ.

"ಎ ವೆನ್ಸ್‍ಡೇ" ನಿಜವಾಗಿಯೂ ಆಗಬೇಕೆಂಬುದು ಎಲ್ಲರ ತಲೆಯಲ್ಲೂ ಬರುತ್ತದೆ. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು? ಬುಧವಾರ ಬರುತ್ತದೆ, ಹೋಗುತ್ತದೆ. ಮತ್ತೆ ಮತ್ತೆ ದಾಳಿಗಳು ನಡೆಯುತ್ತವೆ. ಶಾಂತಿಪ್ರಿಯ ಭಾರತದಲ್ಲಿ ಶಾಂತಿಪ್ರಿಯರದೇ ಮಾರಣಹೋಮವಾಗುತ್ತದೆ. ಅಶಾಂತಿ ಸೃಷ್ಟಿಸುವವರ ಅಟ್ಟಹಾಸ ಅಹಿಂಸೆಯ ಕೂಗಿನ ಸದ್ದಡಗಿಸುತ್ತದೆ. ಅಷ್ಟಕ್ಕೂ ಈ ದೇಶದಲ್ಲಿ ಯಾರಿಗೆ ಶಿಕ್ಷೆಯಾಗುತ್ತದೆ? ನಿಜವಾದ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಿದರೂ ಅದು ಕಾರ್ಯರೂಪಕ್ಕೆ ಬರಲು ವರ್ಷಗಟ್ಟಲೆ ಹಿಡಿಯುತ್ತದೆ. ಬದುಕಿರುವವರೆಗೆ ಜೈಲಿನಲ್ಲಿ ಬಿಟ್ಟಿ ಊಟ ಬೇರೆ. ಭಯೋತ್ಪಾದಕರಾದರೆ ಒಪ್ಪೊತ್ತಿಗೆ ಕೂಳಿಲ್ಲದವರಿಗೆಲ್ಲ ಆಜೀವಪರ್ಯಂತ ಊಟ ಸಿಗುತ್ತದೆ ಎಂದಾದರೆ ಯಾರು ಬೇಡ ಎನ್ನುತ್ತಾರೆ? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಹಿಂದೆ ದಂಡಪಿಂಡಗಳು ಧಾರಾವಾಹಿಯಲ್ಲಿ ಬರುತ್ತಿದ್ದ ಸಾಲುಗಳು:
ರಿಸರ್ವೇಷನ್ನು ಇವರ ಜಾತಿಗೆ ಇಲ್ಲ
ಲಂಚ ಕೊಡುವುದಕ್ಕೆ ದುಡ್ಡೇ ಇಲ್ಲ
ಇನ್ಫ್ಲುಯೆನ್ಸ್ ಮಾಡಲು ಯಾವ ಮಿನಿಸ್ತ್ಟ್ರೂ ಗೊತ್ತಿಲ್ಲಾ...

ಯಾರಿಗೆ ಇವಿಲ್ಲವೋ ಅವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ರಿಸರ್ವೇಷನ್ ಇದ್ದವರಿಗೆ ಕಾರ್ಯಾಂಗ ಸಹಕರಿಸುತ್ತದೆ. ಲಂಚ ಕೊಟ್ಟವರಿಗೆ ನ್ಯಾಯಾಂಗ ಸಹಕರಿಸುತ್ತದೆ. ಇನ್ಫ್ಲುಯೆನ್ಸ್ ಮಾಡುವವರಿಗೆ ಇಡೀ ಶಾಸಕಾಂಗವೇ ಸಹಕರಿಸುತ್ತದೆ. ಈ ಕೆಟ್ಟ ವ್ಯವಸ್ಥೆಯ ನಡುವೆ ಬಡವಾಗುವವನು? ಜನಸಾಮಾನ್ಯ... ಸ್ಟುಪಿಡ್ ಕಾಮನ್ ಮ್ಯಾನ್..

ಇವೆಲ್ಲದರ ಮಧ್ಯೆ (ಅಪ್ಪಿ ತಪ್ಪಿ ಸಿಕ್ಕಿ ಬಿದ್ದ) ಭಯೋತ್ಪಾದಕರ ಬಗ್ಗೆ ವಿಚಾರಣೆ ನಡೆಯುವ ಹೊತ್ತಿಗೆ ಸರಿಯಾಗಿ ಇಷ್ಟು ಹೊತ್ತು ಬೆಚ್ಚಗೆ ಮನೆಯಲ್ಲಿ ಕೂತು ಟಿವಿಯಲ್ಲಿ ವರದಿ ನೋಡುತ್ತಿದ್ದ ಗುಂಪೊಂದು ಹೊರಬಂದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ರಾಗ ತೆಗೆಯುತ್ತದೆ. "ಮಾನವ ಹಕ್ಕು"ಗಳ ಬಗ್ಗೆ ಇಷ್ಟೊಂದು ಪುಕಾರೆತ್ತುವ ಜನ "ಮಾನವ ಕರ್ತವ್ಯ"ಗಳ ಬಗ್ಗೆ ಯಾಕೆ ಚಕಾರವೆತ್ತುವುದಿಲ್ಲ? ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಇವರು ಓದಿಲ್ಲವೇ?

ಈ ಜನಸಾಮಾನ್ಯನ ಸ್ಟುಪಿಡಿಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ಅಮೆರಿಕಾದಲ್ಲಿ ೯/೧೧ ರ ನಂತರ ಯಾವ ಅಹಿತಕರ ಘಟನೆಯೂ ನಡೆದಿಲ್ಲ ಎಂದು ಅಲ್ಲಿನ ವ್ಯವಸ್ಥೆಯನ್ನು ಕೊಂಡಾಡುತ್ತಾನೆ. ಅದೇ ವ್ಯವಸ್ಥೆಯನ್ನು ಭಾರತದಲ್ಲಿ ಅಳವಡಿಸಲು ಹೋದರೆ ಅದನ್ನು ವಿರೋಧಿಸುತ್ತಾನೆ. ಸಿಂಗಾಪುರದಲ್ಲಿನ ಸ್ವಚ್ಛತೆಯನ್ನು ಕೊಂಡಾಡುವ ತಾನೇ ಎಲ್ಲೆಂದರಲ್ಲಿ ಉಗುಳುವುದು, ಕಸ ಹಾಕುವುದು ಮಾಡುತ್ತಾನೆ. ಜಪಾನಿನಲ್ಲಿ ಅಪಘಾತಗಳೇ ಆಗುವುದಿಲ್ಲ ಎಂದು ಹೇಳುವ ತಾನು ೨ ನಿಮಿಷ ಸಿಗ್ನಲ್ಲಿನಲ್ಲಿ ನಿಲ್ಲಲೂ ಪರದಾಡುತ್ತಾನೆ, ಫುಟ್ಪಾಥಿನ ಮೇಲೆ ಹೋಗುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ತಿಂಗಳು ಕಳೆದರೂ ಕಂಡ ಕಂಡಲ್ಲಿ ಹೊಗೆ ಬಿಡುತ್ತಾನೆ. ಮಾಡಬಾರದೆಂದು ಯಾವುದನ್ನು ಹೇಳಲಾಗಿದೆಯೋ ಅದನ್ನು ಹಠಕ್ಕೆ ಬಿದ್ದು ಮಾಡುತ್ತಾನೆ.

ರಾಮರಾಜ್ಯ ಎಂದು ಕನಸು ಕಾಣುವ ಎಲ್ಲರೂ ಅದೇ ರಾಮನಿಗಾಗಿ ಅಯೋಧ್ಯೆಯ ದೇಗುಲದಿಂದ ಕನ್ಯಾಕುಮಾರಿಯ ಸೇತುವೆಯವರೆಗೆ ಹೋರಾಡುತ್ತಾರೆ. ಭಾರತದ ನೆಲ ಜಲ ಉಪಯೋಗಿಸುವ ಮಂದಿಯೇ ಭಾರತವನ್ನು ವಿರೋಧಿಸಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಭಾರತದ ಹೆಸರಿಗೆ ಕಳಂಕ ತರುವ ಕೆಲಸಗಳು ದೇಶದೆಲ್ಲೆಡೆ ನಡೆಯುತ್ತಿದ್ದರೆ ಅವುಗಳ ಪರಿವೆಯಿಲ್ಲದ ಜನ ಶಾಸ್ತ್ರೀಯ ಕನ್ನಡ ಎನ್ನಬೇಕೋ ಬೇರೆ ಹೆಸರಿಡಬೇಕೋ ಎಂಬ ಮಹತ್ವದ ಚರ್ಚೆ ನಡೆಸುತ್ತಾರೆ. ವಿರೋಧ ಪಕ್ಷಗಳು ಸಂವಿಧಾನದಲ್ಲಿನ ವಾಚ್ ಡಾಗ್ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ನಾಯಿಯಂತೆ ಬೊಗಳುತ್ತವೆ.

ಒಟ್ಟಿನಲ್ಲಿ, (ಎಸ್.ಪಿ.ಭಾರ್ಗವಿ ಚಿತ್ರದ್ದಿರಬೇಕು) ಈ ದೇಶದ್ ಕಥೆ ಇಷ್ಟೇ ಕಣಮ್ಮೋ... ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ... ಸೋ.. ಇರೋ ಒಂದೈವತ್ತರವತ್ತೆಪ್ಪತ್ತೆಂಭತ್ತು ವರ್ಷ ... ಮಸ್ತ್ ಮಜಾ ಮಾಡಿ!

(ದಾಸರ ಕ್ಷಮೆ ಕೋರಿ...)

ಎಲ್ಲಾರು ಮಾಡುವುದು ವೋಟಿಗಾಗಿ
ಒಂದು ಸೀಟಿಗಾಗಿ, ಬಿ.ಡಿ.ಎ. ಸೈಟಿಗಾಗಿ ||

ಇಂದು ಭರವಸೆ ಕೊಟ್ಟು
ಬಂದು ನಾಳೆ ಅದಕ್ಕಾಗಿ
ಒಂದು ಪ್ಯಾಕೇಜ್ ಘೋಷಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಇನ್ನೈದು ವರ್ಷ ಬರಲಾರೆ
ನೆನ್ನುತ ಗಂಡಿಗೆ ಮದ್ಯ
ಹೆಣ್ಣಿಗ್ ಸೀರೆ ಹಂಚುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಸಾಲದ ಬಡ್ಡಿ ಬಾರದೆಂದು ಪ್ರತಿ
ಸಲ ನೋಡಿದ್ದರೂ ಮನ್ನಾ ಮಾಡಿ
ಸಾಲವನ್ನೇ ಬದುಕಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಶಾಂತಿಯಿಂದ ಇದ್ದ ಜನಕೆ
ಇಂತಿ ನಿಮ್ಮ ಮೀಸಲಾತಿ
ಅಂತ ಎತ್ತಿ ಕಟ್ಟುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಜಾತಿ ನೋಡಿದ ನಂತರವೇ
ಮತ ಹಾಕುವಂತೆ ಜನರ
ಮತಿಗೇಡಿಗಳಾಗಿಸೋದು
ವೋಟಿಗಾಗಿ ಒಂದು ಸೀಟಿಗಾಗಿ ||

ಅಭ್ಯರ್ಥಿಯ ಹಿನ್ನೆಲೆ ಮರೆಸಿ
ಸಭ್ಯತೆಯ ತೋರಗೊಟ್ಟು
ಅಭ್ಯುದಯ ಮಾಡುವೆವೆನ್ನುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ಭಯೋತ್ಪಾದಕನಾಗಿದ್ದರೂ
ಆಯೋಗ ರಚನೆ ಮಾಡಿ ಶಿಕ್ಷಾ
ಪ್ರಯೋಗ ಮುಂದೂಡುವುದು
ವೋಟಿಗಾಗಿ ಒಂದು ಸೀಟಿಗಾಗಿ ||

ದೇಶದ್ಮಾನ ಹರಾಜಿಟ್ಟು ಸ್ವಂತ
ಕೋಶ ತುಂಬಿಸ್ಕೊಳ್ಳೊ
ಆಷಾಢಭೂತಿಗಳ ಕಿತ್ತೆಸೆಯಿರಿ
ದೇಶಕ್ಕಾಗಿ ನಿಮ್ಮುದ್ಧಾರಕ್ಕಾಗಿ ||

17 ಕಾಮೆಂಟ್‌ಗಳು:

Ittigecement ಹೇಳಿದರು...

ಹರೀಷ್...
ನಾನು ನನ್ನ ಮನದ ಹೊಯ್ದಾಟವನ್ನು ಶಬ್ಧಗಳಿಂದ ಹೇಳಲಾಗದ್ದನ್ನು ತುಂಬ ಚೆನ್ನಾಗಿ ವಿವರಿಸಿದ್ದೀರಿ...
ನನ್ನ ವೋಟ್ ನಿಮಗೆ...

Harisha - ಹರೀಶ ಹೇಳಿದರು...

ಪ್ರಕಾಶಣ್ಣ, ನನಗೆ ವೋಟ್ ಬೇಡ.. ನಿಮ್ಮೆಲ್ಲರ ಪ್ರೋತ್ಸಾಹ ಸಾಕು :-)

shivu.k ಹೇಳಿದರು...

ಹರೀಶ್,

ನಿಮ್ಮ ಬರವಣಿಗೆಯನ್ನು ಹೊಗಳಿದರೆ ನನ್ನನ್ನೆ ಹೊಗಳಿಕೊಂಡಂತೆ. ಅಥವ ಸುಮ್ಮನಿದ್ದರೆ ಅದು ನನ್ನ ಮೇಲೆ ನನಗೆ ಜಿಗುಪ್ಸೆ ಬಂದಂತೆ. ಏನು ಮಾಡಲಿ ಹೇಳಿ ಹರೀಶ್, ನಿಮ್ಮ ಬರಹ ನನ್ನ ಮನದಲ್ಲಿನ ಭಾವನೆಗಳನ್ನೇ ಪ್ರತಿಬಿಂಬಿಸುತ್ತದೆ. ಮುಂದೇನು ಮಾಡುವುದು ನನಗೂ ಇದರ ಬಗ್ಗೆ ಚಿಂತೆಯಿದೆ.

ಅಂತರ್ವಾಣಿ ಹೇಳಿದರು...

ಅಂಬಿಗರೆ,
ನಮ್ಮ ರಾಜಕಾರಣದ ಕುರಿತಾದ ಕವನ ಚೆನ್ನಾಗಿದೆ. ಸತ್ಯವಾದೆ.

Harisha - ಹರೀಶ ಹೇಳಿದರು...

ಶಿವು, ಎಲ್ಲರ ಮನಸ್ಸಿನಲ್ಲೂ ಈಗ ಹತಾಶೆ, ದ್ವೇಷ ಮನೆ ಮಾಡಿವೆ.. ಯಾವಾಗ ಸಿಡಿಯುತ್ತವೆಯೋ ಗೊತ್ತಿಲ್ಲ...
ಪ್ರತಿಕ್ರಿಯೆಗೆ ಧನ್ಯವಾದಗಳು.

ಜಯಶಂಕರ್, ನಾನು ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ.. ನಾನು ಹೇಳುವುದೆಲ್ಲವೂ ಸತ್ಯ! ;-)
ಪ್ರತಿಕ್ರಿಯೆಗೆ ಧನ್ಯವಾದಗಳು.

NilGiri ಹೇಳಿದರು...

ಹರೀಶ್, ನೀವು ಹೇಳಿದ್ದು ನಿಜ. ನಮ್ಮೆಲ್ಲರ ಸಹನೆ ಸಿಡಿಯುವ ದಿನಗಳು ದೂರವಿಲ್ಲ.

Deepika ಹೇಳಿದರು...

harisha... Tumbaa chenagi bardidiyaa.... kavana anthu tumbaa chenagide... Very meaningfull.
All the best

Unknown ಹೇಳಿದರು...

ಇರಬೇಕು. ಎಲ್ಲವೂ ಇರಬೇಕು ಇಲ್ಲಿ. ಕಳ್ಳರು ಬೇಕು ಪೋಲೀಸರಿಗಾಗಿ. ವೇಶ್ಯೆ ವಿಟರಿಗಾಗಿ- ರೋಗಿ ವೈದ್ಯರಿಗಾಗಿ- ಜಗಳ ವಕೀಲರಿಗಾಗಿ- ಜನರ ಕಷ್ಟ ಪುರೋಹಿತರಿಗಾಗಿ- ನಷ್ಟ ಲಾಭಕ್ಕಾಗಿ- ಕೆಟ್ಟಜನರು ಒಳ್ಳೆಯವರಿಗಾಗಿ- ದಡ್ದರು ಬುದ್ದಿವಂತರಿಗಾಗಿ- ಹಸಿದವರು ಹೊಟ್ಟೆತುಂಬಿದವರಿಗಾಗಿ- ಹೀಗೆ ಮುಂದುವರೆಯುತ್ತದೆ ಪಟ್ಟಿ. ಯಾರ್ಯಾರು ಯಾರಿಗಾಗಿ ಎನ್ನುವುದು ಅವರವರ ತಾಕತ್ತಿಗೆ ಬಿಟ್ಟ ವಿಚಾರ. ಒಟ್ಟಿನಲ್ಲಿ ಬೇರೆಯವರಿಗಾಗಿ ಇರುವವರು ಇಲ್ಲ ಇರಲಿಲ್ಲ ಇರುವುದಿಲ್ಲ

Harisha - ಹರೀಶ ಹೇಳಿದರು...

ಗಿರಿಜಾ ಅವರೇ, ಬೇಗ ಭಾರತಕ್ಕೆ ಮರಳಿ.. ಇಲ್ಲಿ ಸ್ವಚ್ಛಗೊಳಿಸೋದು ಬಹಳ ಇದೆ!

ದೀಪಿ, ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸು. All the best ಯಾಕೆ ಅಂತ ತಿಳೀಲಿಲ್ಲ.. :-) ಬರ್ತಾ ಇರು..

ಶರ್ಮರೆ, ಎಲ್ಲರೂ ಇರಬೇಕು ನಿಜ. ಆದರೆ ಬೇರೆಯವರ ಬದುಕು ಕಸಿಯುವ ಹಕ್ಕು ಯಾರಿಗೂ ಇಲ್ಲ/ಇರಬಾರದು.. ಅಲ್ವಾ?

Lakshmi Shashidhar Chaitanya ಹೇಳಿದರು...

ನಿಜ್ವಾಗ್ಲು...ನೀವ್ ಹೇಳಿದ್ದೆಲ್ಲಾ ಸತ್ಯ..

Harisha - ಹರೀಶ ಹೇಳಿದರು...

ಲಕ್ಷ್ಮೀ, ನೀವು "ನಿಜ್ವಾಗ್ಲು" ಅಂತ ಹೇಳಿ ಯಾಕೋ ಡೌಟ್ ಬರೋ ಹಾಗ್ ಮಾಡ್ಬಿಟ್ರಿ :-)
ಪ್ರತಿಕ್ರಿಯೆಗೆ ಧನ್ಯವಾದಗಳು.

ಅನಾಮಧೇಯ ಹೇಳಿದರು...

janara bhaavanegaLa jothe chellaaTavaaDuvava sO called jana naayakarannu chennagi jhaaDisideera...

Unknown ಹೇಳಿದರು...

ಹರೀಶ್ ಧನ್ಯವಾದಗಳು.

ನಿಮ್ಮ ಅಂಚೆ ವಿಳಾಸವನ್ನು ನನಗೆ ಈ ಮೈಲ್ ಮಾಡಿ.

shreeshum@gmail.com

Harisha - ಹರೀಶ ಹೇಳಿದರು...

ವಿಜಯ್, ಎಲ್ಲರೂ ಝಾಡಿಸುತ್ತಿದ್ದಾರೆ.. ಅಂಥವರಲ್ಲಿ ನಾನೊಬ್ಬ, ಅಷ್ಟೆ.. ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ರಾಘವೇಂದ್ರ ಶರ್ಮರೆ, ನನ್ನ ವಿಳಾಸ ಕಳಿಸಿದ್ದೇನೆ. ಧನ್ಯವಾದಗಳು.

shivu.k ಹೇಳಿದರು...

ಹರೀಶ್,
ನನ್ನ ಬ್ಲಾಗಿಗೆ ಬಂದು ಟೋಪಿ ನೋಡಿ ಟೋಪಿ ಹಾಕಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ......

sunaath ಹೇಳಿದರು...

ಹರೀಶ,
ದಾಸರ ಪದವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ. ಮತ್ತು ಆ ವಿಚಾರಗಳು ಸತ್ಯವಾಗಿವೆ.

Harisha - ಹರೀಶ ಹೇಳಿದರು...

ಶಿವೂ, ನೀವು ಕರೆದರೂ ಬರುವೆ, ಕರೆಯದಿದ್ದರೂ ಬರುವೆ.. ನಿಮ್ಮ ಫೋಟೋ, ಲೇಖನಗಳ ಸೆಳೆತ ಅಂಥದ್ದು.. :-)
ಧನ್ಯವಾದಗಳು :-)

ಸುನಾಥಂಕಲ್, ನಿಮಗೆ ಇಷ್ಟವಾಗಿದ್ದು ಸಂತೋಷ.. ಬರುತ್ತಿರಿ.. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.