ಸೋಮವಾರ, ಸೆಪ್ಟೆಂಬರ್ 29, 2008

ಶ್ವಾನ ಪುರಾಣ

ನಾಯಿಯಷ್ಟು ಕೃತಜ್ಞ ಪ್ರಾಣಿ ಇನ್ನೊಂದಿಲ್ಲ. ಯಾರೋ ಒಬ್ಬ ಹೇಳಿದಂತೆ ತನಗಿಂತಲೂ ಹೆಚ್ಚು ತನ್ನ ಒಡೆಯನನ್ನು ಪ್ರೀತಿಸುವ ಪ್ರಾಣಿ ನಾಯಿಯೊಂದೇ. ಇಂತಿಪ್ಪ ನಾಯಿ ಕೆಲವೊಮ್ಮೆ ತನ್ನ ಕುಚೇಷ್ಟೆಗಳಿಂದ irritate ಮಾಡುವುದೂ ಇದೆ.

ಬೆಳಿಗ್ಗೆ ಎದ್ದು ಅಮ್ಮ ದೇವರ ಸ್ತುತಿ ಮಾಡುತ್ತಾ ಬಾಗಿಲಿಗೆ ರಂಗೋಲಿ ಹಾಕಿ ಒಳಗೆ ಹೋಗುತ್ತಾಳೆ. ಹೋಗಿ ಮತ್ತೆ ಹೊರಬರುವಷ್ಟರಲ್ಲಿ ರಂಗೋಲಿಯ ಮೇಲೆ ನಾಯಿಯೊಂದು ಬಂದು ಮಲಗಿರುತ್ತದೆ! "ಥತ್ ಹೊಲಸು ನಾಯಿ" ಎಂದು ಬಯ್ಯುತ್ತಾ ಅದನ್ನು ಓಡಿಸಿ ಒಳಗೆ ಹೋಗುವಷ್ಟರಲ್ಲಿ ಮತ್ತೆ ಹಾಜರ್!! ಇದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲವಾದರೂ ನನಗೆ ಯಾರೋ ಹಿರಿಯರು ಹೇಳಿದಂತೆ ರಂಗೋಲಿ ನಾಯಿಗಳಿಗೆ ಮಣೆ ಹಾಕಿಟ್ಟಂತೆ ಕಂಡು ಬರುವುದಂತೆ. ಅದೇ ಕಾರಣಕ್ಕೆ ಅವು ಅಲ್ಲಿ ಬಂದು ಆಸೀನವಾಗುವುದಂತೆ.

ಅಪ್ಪನ ಪೂಜೆ ಕೊನೆಯ ಹಂತಕ್ಕೆ ಬಂದಿರುತ್ತದೆ. ಮಂಗಳಾರತಿಯ ಸಮಯ ಅಪ್ಪ ಆರತಿ ಘಂಟೆ ಬಾರಿಸಲಾರಂಭಿಸಿದಾಗ ನಾನು ಹೋಗಿ ಜಾಗಟೆ ಬಾರಿಸುತ್ತೇನೆ. ಇದ್ದಕ್ಕಿದ್ದಂತೆ ಹೊರಗೆ ನಾಯಿಗಳ ಬೊಗಳಾಟ ಶುರುವಾಗುತ್ತದೆ. ಒಂದು ನಾಯಿ "ಊಽಽಽಽ" ಎಂದು ಬಾಯ್ತೆರೆಯುವುದೇ ತಡ, ಎಲ್ಲಿರುತ್ತವೆಯೋ ಏನೋ, ಊರಿನ ಎಲ್ಲಾ ನಾಯಿಗಳೂ ಒಮ್ಮೆಲೇ ದೇವರಿಗೆ ಸೇವೆ ಮಾಡಲಾರಂಭಿಸುತ್ತವೆ. ಅಪ್ಪನ ಪೂಜೆ ಮುಗಿದರೂ ಅವುಗಳ ಶಂಖಸೇವೆ ಮುಗಿದಿರುವುದಿಲ್ಲ.

ಸಣ್ಣವನಿದ್ದಾಗ ನನಗೆ ವಿಪರೀತ ನಾಯಿಮರಿಗಳ ಹುಚ್ಚಿತ್ತು. ವಿಪರ್ಯಾಸವೆಂಬಂತೆ ಅಕ್ಕಪಕ್ಕದ ಮನೆಯ ನಾಯಿಗಳೂ ನಮ್ಮ ಮನೆಯ ಸರಹದ್ದಿಗೆ ಬಂದೇ ಮರಿ ಹಾಕುತ್ತಿದ್ದವು. ಪಾಪ, ಅವಕ್ಕೇನು ಗೊತ್ತು, ನಾನು ಆಟ ಆಡಿಸುವ ನೆಪದಲ್ಲಿ ಮರಿಗಳನ್ನು ಗೋಳು ಹೊಯ್ದುಕೊಳ್ಳುತ್ತೇನೆ ಎಂದು!! ಕೆಲವೊಂದು ಬಾರಿ ಅವುಗಳನ್ನು ತೀರಾ ಹಿಂಸಿಸಿದ್ದೂ ಇದೆ.

ನಾಯಿಯೊಂದು ಮರಿ ಹಾಕಿ ಇನ್ನೂ ೨ ತಿಂಗಳಾಗಿತ್ತು. ಅವುಗಳಿಗೆ ಇನ್ನೂ ಸರಿಯಾಗಿ ಓಡಲೂ ಬರುತ್ತಿರಲಿಲ್ಲ; ನನ್ನ ಕೈಗೆ ಸಿಕ್ಕಿಬಿಡುತ್ತಿದ್ದವು. ನಮ್ಮ ಮನೆಯಲ್ಲಿ ಮನೆಯ ಕಟ್ಟೆಯಿಂದ ಬಾವಿ ಕಟ್ಟೆಗೆ ೨ ಅಡಿ ಅಷ್ಟೇ. ಆದರೆ ಆ ನಾಯಿ ಮರಿಗೆ ಅದನ್ನು ಹಾರಿ ದಾಟಲು ಬರುತ್ತಿರಲಿಲ್ಲ. ಅದನ್ನು ಕಲಿಸುವುದು ಬೇಡವೇ! ಅದಕ್ಕೆ ಸರಪಳಿ ಹಾಕಿ ಎಳೆದು ಆ ಕಡೆಯಿಂದ ಈ ಕಡೆಗೆ ಹಾರುವಂತೆ ಮಾಡಲು ಹೋಗಿ, ಅದು ಕೆಳಗೆ ಬಿದ್ದು, ಅದರ ಮೂತಿಗೆ ಪೆಟ್ಟಾಗಿ, "ಕುಂಯ್ಯ್" ಎಂದು ಕೂಗಿ, ಅಮ್ಮ ಬಂದು "ಅದು ದೊಡ್ಡಾದ ಮೇಲೆ ತಾನೇ ಹಾರದ್ನ ಕಲೀತು, ಬಿಡು ಅದನ್ನ" ಎಂದು ಕೂಗಿದರೂ ಕೇಳದೆ, ನನ್ನೊಳಗಿನ ದ್ರೋಣಾಚಾರ್ಯನಿಗೆ ಇದೊಂದು ಸವಾಲೆಂಬಂತೆ ಸ್ವೀಕರಿಸಿ, ಇನ್ನೂ ಒಂದು ಹತ್ತಿಪ್ಪತ್ತು ಬಾರಿ ಪ್ರಯತ್ನಿಸಿ, ಸೋತು, "ಮಳ್ಳ್ ನಾಯಿ ಮರಿ. ಇಷ್ಟ್ ದೂರ ಹಾರಲೂ ಬರ್ತಿಲ್ಲೆ" ಎಂದು ಶಪಿಸುತ್ತಾ ಇನ್ನೊಂದು ನಾಯಿ ಮರಿಗೆ ಟ್ರೇನಿಂಗ್ ಶುರು ಮಾಡುತ್ತಿದ್ದೆ. ಈಗ ನೆನೆಸಿಕೊಂಡರೆ ನಗು ಬರುತ್ತದೆ, ಪಶ್ಚಾತ್ತಾಪವೂ ಆಗುತ್ತದೆ. ಪಾಪ, ಎರಡು ತಿಂಗಳ ಮರಿಗಳು... ಏನೇನೋ ಮಾಡುತ್ತಿದ್ದೆ. ಒಮ್ಮೆ ದೊಡ್ಡ ನಾಯಿಯೊಂದರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದ್ದೂ ಇದೆ! ಪುಣ್ಯಕ್ಕೆ ಕಚ್ಚಿರಲಿಲ್ಲ!!

"ಕುನ್ನಿಗೆ ಕೆಲಸವಿಲ್ಲ, ಕೂರಲು ತೆರಪಿಲ್ಲ" ಎಂದು ಒಂದು ಗಾದೆಯಿದೆ. ಏನೂ ಕೆಲಸವಿಲ್ಲದಿದ್ದರೂ ನಾಯಿಗಳು ಸುಮ್ಮನೆ ಕೂರುವುದಿಲ್ಲ. ಎಲ್ಲೆಲ್ಲೋ ಸುತ್ತುತ್ತಿರುತ್ತವೆ. ಒಂದು ಸಾರಿ ಊರಿನಿಂದ ಹರಿಹರಕ್ಕೆ ಹೊರಟಿದ್ದೆವು. ನಾಯಿ ಮರಿಯೊಂದು ಮೊದಲ ಬಾರಿ ತನ್ನ ತಾಯಿಯೊಂದಿಗೆ ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿತ್ತು. "ನಾಯಿಗೆ ಅಡ್ಡ ಜಂಬರ ಬಂದ ಹಾಗೆ" ಎನ್ನುವ ಇನ್ನೊಂದು ಗಾದೆಯಿದೆ. ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿದ್ದ ಆ ಮರಿಯ ತಾಯಿ ಏನನ್ನೋ ಮೂಸುತ್ತಾ, ಹೋಗುವ ದಾರಿ ಬಿಟ್ಟು ಎಲ್ಲೋ ಹೋಗಿಬಿಟ್ಟಿತು. ಆದರೆ ಮರಿ ನಮ್ಮ ಜೊತೆಯೇ ಬಂದಿತು. ಬಸ್ ಸ್ಟ್ಯಾಂಡಿಗೆ ಹೋಗಿ ನಾವು ಮುಟ್ಟಿದರೂ ಅದರ ತಾಯಿಯ ಸುಳಿವಿಲ್ಲ. ಬಸ್ ಬಂದಿತು. ನಾವು ಹತ್ತಿದೆವು. ಸುಮ್ಮನೆ ಮನೆಗೆ ಹೋಗುವ ಬದಲು ಆ ಮರಿ ಬಸ್ ಹಿಂದೆಯೇ ಓಡಿ ಬರಲಾರಂಭಿಸಿತು. ಬಸ್ಸಿನಲ್ಲಿದ್ದ ನನಗೆ ಸಂಕಟ. ಸುಮಾರು ಒಂದು ಕಿಲೋಮೀಟರ್ ನಮ್ಮ ಬಸ್ಸನ್ನೇ ಹಿಂಬಾಲಿಸಿತು. "ಮನೆಗೆ ಹೇಗೆ ತಿರುಗಿ ಹೋಗುತ್ತದೆ? ಅದಕ್ಕೆ ಮನೆ ದಾರಿ ಗೊತ್ತಿಲ್ಲ, ದಾರಿ ತಪ್ಪುತ್ತದೆ" ಎಂದು ಜೋರಾಗಿ ಬಸ್ಸಿನಲ್ಲಿಯೇ ಅತ್ತು ರಾದ್ಧಾಂತ ಮಾಡಿದ್ದೆ. ಅವುಗಳಿಗೆ ವಾಸನೆಯಿಂದಲೇ ಬಂದ ದಾರಿ ತಿಳಿಯುತ್ತದೆ, ಅಳಬೇಡ ಎಂದು ಅಮ್ಮ ಹೇಳಿದರೂ ನಂಬಿರಲಿಲ್ಲ. ಹರಿಹರಕ್ಕೆ ಹೋದ ಕೂಡಲೇ ಊರಿನಲ್ಲಿದ್ದ ಅತ್ತೆಗೆ ಅಮ್ಮನಿಂದ ಪತ್ರ ಬರೆಸಿದ್ದೆ, ಮನೆಗೆ ನಾಯಿ ಮರಿ ವಾಪಸ್ ಬಂದಿದೆಯೋ ಇಲ್ಲವೋ ಎಂದು. ವಾರದ ನಂತರ ಉತ್ತರ ಬಂದಿತ್ತು, ಮರಿ ಸುರಕ್ಷಿತವಾಗಿ ಮನೆ ಸೇರಿದೆ ಎಂದು. ಆಗಲೇ ನನಗೆ ಸಮಾಧಾನವಾಗಿದ್ದು.

ನಾಯಿ ಮರಿ


ಒಂದು ಕಪ್ಪು ನಾಯಿ ಮರಿ. ನಾನು ಅದನ್ನು ಎಷ್ಟು ಹಚ್ಚಿಕೊಂಡಿದ್ದೆನೋ, ಅದೂ ನನ್ನನ್ನು ಅಷ್ಟೇ ಹಚ್ಚಿಕೊಂಡಿತ್ತು. ನನ್ನ, ನಾಯಿ ಮರಿಯ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ದಿನವೂ ಎದ್ದು ಮೊದಲು ನಾನು ಮಾಡುತ್ತಿದ್ದ ಕೆಲಸ ಬಚ್ಚಲ ಮನೆಯ ಬಳಿ ಹೋಗಿ ಅಲ್ಲಿ ಅಡಿಕೆ ಸಿಪ್ಪೆಯ ಬುಟ್ಟಿಯೊಂದರಲ್ಲಿ ಮಲಗಿರುತ್ತಿದ್ದ ಆ ನಾಯಿ ಮರಿ ನೋಡುವುದು. ಆಮೇಲೆ ಮುಖ ತೊಳೆದುಬಂದು ದೇವರಿಗೆ ಕೈ ಮುಗಿಯುತ್ತಿದ್ದೆ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಅಲ್ಲಿ ಬುಟ್ಟಿಯೂ ಇರಲಿಲ್ಲ, ಮರಿಯೂ ಇರಲಿಲ್ಲ. "ಅಮ್ಮಾ" ಎಂದು ಕೂಗಿದೆ. "ನಾಯಿ ಮರಿ ಎಲ್ಲಿ" ಎಂದು ಕೇಳಿದೆ. "ನಾಯಿ ಮರಿ ಸತ್ ಹೋತು, ಅಂಗಳದಲ್ಲಿದ್ದು" ಎಂದಾಗ ಅಲ್ಲಿಗೆ ಓಡಿದೆ. ಅದನ್ನು ನೋಡಿದ ಕೂಡಲೇ ಅಳು ಬಂದಿತು. ಅಳುವಷ್ಟೂ ಅತ್ತು, ಅದನ್ನು ನಮ್ಮ ಮನೆಯ ಆಳೊಬ್ಬ ಹೋಗಿ ತೋಟದಲ್ಲಿ ಗುಂಡಿ ತೋಡಿ ಹೂತು ಬರುವವರೆಗೂ ಅದರೊಂದಿಗಿದ್ದು ಶ್ರದ್ಧಾಂಜಲಿ ಅರ್ಪಿಸಿದ್ದೆ. ಅದಾದ ನಂತರ ಎಷ್ಟೋ ಬಂಧುಗಳು ಮಡಿದಿದ್ದಾರೆ, ಆದರೆ ನಾನು ಆ ನಾಯಿ ಮರಿ ಸತ್ತಾಗ ಅತ್ತಷ್ಟು ಎಂದೂ ಅತ್ತಿಲ್ಲವೇನೋ.

ಈಗ ಇವೆಲ್ಲ ಯಾವುದೋ ಕಾಲದ ನೆನಪಿನಂತೆ ಕಾಡುತ್ತವೆ. ನನಗೂ ನಾಯಿಗಳಿಗೂ ಈಗ ಅಷ್ಟಕ್ಕಷ್ಟೇ. ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್‍ವೇರ್ ಇಂಜಿನಿಯರ್‌ಗಳು ಮತ್ತು ಬೀದಿ ನಾಯಿಗಳು. ಸಾಫ್ಟ್‍ವೇರ್ ಇಂಜಿನಿಯರ್‌ಗಳಿಗೆ ರಾತ್ರಿ client interaction ಇರುವಂತೆಯೇ ನಮ್ಮ ಮನೆಯ ಬಳಿ ದಿನಾ ರಾತ್ರಿ ೧೨:೩೦ ಕ್ಕೆ conference ಮಾಡುವ ನಾಯಿಗಳೂ ನಿದ್ದೆ ಮಾಡುವುದಿಲ್ಲ; ಮಾಡಲೂ ಬಿಡುವುದಿಲ್ಲ. ಬಹುಶಃ ಅವುಗಳ client ಕೂಡ ಅಮೇರಿಕಾದಲ್ಲಿರಬೇಕು...

15 ಕಾಮೆಂಟ್‌ಗಳು:

Aditya Bedur ಹೇಳಿದರು...

ಲೇಖನ ತುಂಬಾ ಚನ್ನಾಗಿದೆ, ನಮ್ಮ ಮನೆಯಲ್ಲೂ ಕೂಡ ಮೂವತ್ತು ವರುಷದಿಂದ ನಾಯಿ ಸಾಕುತ್ತ ಬಂದಿದ್ದೇವೆ.. ಮನೆಯಲ್ಲಿ ಒಂದು ನಾಯಿಯು ಇಲ್ಲ ಎಂದರೆ ಸಮಾದಾನವೇ ಆಗುವುದಿಲ್ಲ, ನಾವು ನಮ್ಮ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಿಕೊಂಡಿದ್ದೇವೆ.. ನಾಯಿ ಮರಿಗಳ ಜೊತೆ ಆಟ ಆಡುತ್ತಾ ಇದ್ದರೆ ಅದೇನೋ ಕುಷಿ..
ನಾಯಿಗೆ ಹುಷಾರಿಲ್ಲೇ ಅಂದ್ರೆನೆ ಏನೋ ಒಂತರ ಸಂಕಟ ಆಗ್ತು,
ಇನ್ನು ನಾಯಿ ಮರಿ ಸತ್ತು ಹೋದ್ರೆ ಅಳು ಬಂದೇ ಬಿಡ್ತು...

ಕೊನೆಯ ಸಾಲು ತುಂಬಾ ಚನಾಗಿದ್ದು, ಕ್ಲೈಂಟ್ ಜೊತೆ ಕಾನ್ಫರೆನ್ಸ್ ಮತ್ತು ಪಾರ್ಟ್ನರ್ ಗಳಿಗೆ ಕಾಲ್ ಮಾಡ್ತಾ ಇರ್ತ ಕಾಣ್ತು, ಅದ್ಕೆ ಅಷ್ಟು ಲೌಡ್ ಆಗಿ ಊ.............! ಅಂತ ನಿದ್ದೆ ಮಾಡಕ್ಕೆ ಬಿಡದೆ ಹೋದಂಗೆ ಕೂಗದು... ಅನುಸ್ತು

Sushrutha Dodderi ಹೇಳಿದರು...

"ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್‍ವೇರ್ ಇಂಜಿನಿಯರ್‌ಗಳು ಮತ್ತು ಬೀದಿ ನಾಯಿಗಳು"

:D ಏನಯ್ಯಾ ನೀನು!

Harisha - ಹರೀಶ ಹೇಳಿದರು...

ಆದಿತ್ಯ, ಇನ್ನೊಂದು ನಾಯಿ ಸಾಕಿ ಮನೆಯ ನಾಲ್ಕೂ ದಿಕ್ಕಿಗೆ ಒಂದೊಂದನ್ನು ಕಟ್ಟಿಬಿಡಿ.. ಚತುರ್ದಿಕ್ಪಾಲಕರಾಗುತ್ತವೆ... ;-)

ನಮ್ಮನೇಲಿ ನನ್ನಷ್ಟೇ ವಯಸ್ಸಿನ ನಾಯಿಯೊಂದಿತ್ತು. ಈಗ ಸುಮಾರು ೩ ವರ್ಷದ ಹಿಂದೆ ಸತ್ತು ಹೋಯಿತು. ಅದರ ಬಗ್ಗೆ ಬರೆದಿದ್ದರೆ ಇದೊಂದು ಮಹಾಪುರಾಣವಾಗುತ್ತಿತ್ತೇನೋ!

ಸುಶ್ರುತ, ನಿಜ ಹೇಳಕ್ಕೆ ಏನಯ್ಯಾ!! ನಾನು ಸಾಫ್ಟ್‍ವೇರ್ ಇಂಜಿನಿಯರ್‌ ಇದ್ದಿಕ್ಕು, ಆದರೆ ನಾನು ಹೇಳಿದ್ದು ಸುಳ್ಳಾ?

ವಿ.ರಾ.ಹೆ. ಹೇಳಿದರು...

:-)

ನಾಯಿಮರಿ ನಾಯಿಮರಿ...

ಮನಸ್ವಿ ಹೇಳಿದರು...

ನಾನು ಅದೇ ಪ್ರಯತ್ನದಲ್ಲೇ ಇದಿದ್ದಿ.. ನನ್ನ ಸೋದರ ಅತ್ತೆಯ ಮನೆವ್ರಿಗೆ ರವಿ ಬೆಳೆಗೆರೆ ಪರಿಚಯ ಇದ್ದ ಅವನ ಮನೆ ಪಗ್ ನಾಯಿ ಮರಿ ಹಾಕಿದ್ದು ಅಂತ ಹೇಳಿದ್ನಡ, ಬೇಕಾದರೆ ಕೊಡ್ತೀನಿ ಹೇಳಿದ್ದ ಅಂತ ಅಂದ್ವಪ, ಅದು ನಮ್ಮನೆಗೆ ಬಂದಿದ್ರೆ ನೀನು ಹೇಳಿದ ಹಂಗೇನೆ ನಾಲಕ್ಕೂ ದಿಕ್ಕಿಗೆ ಒಂದೊಂದು ನಾಯಿ ಕಟ್ಬಿಡ್ತಿದ್ದಿ, ಆದ್ರೆ :( ಅದು ಬರ ತರ ಕಣ್ತಲ್ಲೇ...

Harisha - ಹರೀಶ ಹೇಳಿದರು...

ವಿಕಾಸ್, ... ತಿಂಡಿ ಬೇಕೆ? ;-)

ಆದಿತ್ಯ (ಮನಸ್ವಿ), ರವಿ ಬೆಳಗೆರೆ ಮನೆ ನಾಯಿನೇ ಯಾಕೋ? ಬೇರೆ ನಾಯಿ ಬೇಕಾದಷ್ಟು ಸಿಗ್ತಿತ್ತಪ್ಪ..

ಮನಸ್ವಿ ಹೇಳಿದರು...

ಬೇರೆದೆಲ್ಲ ಸಿಕ್ತು ಆದ್ರೆ ಬ್ಯಾಡ! ರವಿ ಬೆಳಗೆರೆ ಮನೆ ನಾಯಿನೇ ಆದ್ರೆ ನೈಟ್ ಬೀಟ್ ಗೆ ಬೆಸ್ಟ್ ಅಂತ!

ಸಂದೀಪ್ ಕಾಮತ್ ಹೇಳಿದರು...

ಪ್ರಪಂಚದಲ್ಲಿ ಅತ್ಯಂತ ಒಳ್ಳೆ ಪ್ರಾಣಿ ಅಂದ್ರೆ ನಾಯಿ.ಬಾಂಬ್ ಡಿಟೆಕ್ಷನ್ ಗೆ ಇದಕ್ಕೆ ಪರ್ಯಾಯ ಇನ್ನೂ ಬಂದಿಲ್ಲ!
ಚೆನ್ನಾಗಿದೆ ಹರೀಶ!

Harisha - ಹರೀಶ ಹೇಳಿದರು...

ಆದಿತ್ಯ,
ರವಿ ಬೆಳಗೆರೆಯ ನಾಯಿಗಾಗಿ ಕಾಯಿ.. ದೇವರು ನಿನಗೆ ಸನ್ಮಂಗಳವನ್ನುಂಟುಮಾಡಲಿ :-)

ಸಂದೀಪ್,
ಈಗೀಗ ದೇಶದಲ್ಲಿರೋ ನಾಯಿಗಳಿಗಿಂತ ಹೆಚ್ಚು ಬಾಂಬುಗಳು ಪತ್ತೆ ಆಗ್ತಿವೆ; ಯಾರನ್ನ ಅಂತ ಹೊಗಳೋದು? ನಾಯಿನೋ, ಭಯೋತ್ಪಾದಕರನ್ನೋ?

NilGiri ಹೇಳಿದರು...

ನಮ್ಮ ಮನೆಯಲ್ಲಿದ್ದ " ಸನ್ನಿ"ಯ ನೆನಪು ಬಂತು. ಅದು ಸತ್ತ ಮೇಲೆ ಮತ್ತೊಂದು ನಾಯಿಮರಿ ತರಲೇ ಇಲ್ಲ. ತಂದು ಸಾಕಿ, ಅದು ಸತ್ತ ಮೇಲೆ ಅತ್ತೂ ಕರೆದು ಮಾಡುವುದು ಬೇಡ ಅಂತ ಅಮ್ಮನ ಗಲಾಟೆ!

sunaath ಹೇಳಿದರು...

ಹರೀಶ,
ನಾಯಿಯ ಬಗೆಗೆ ನನ್ನ ಅಭಿಪ್ರಾಯ ನಿಮ್ಮದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ದಯವಿಟ್ಟು ಕ್ಷಮಿಸಿ.

ನೋಡಿ, ನಾಯಿ ಮತ್ತು ತೋಳ, they are cousins.
ಆದರೆ, ತೋಳ ಕಾಡಿನಲ್ಲಿ ಸ್ವತಂತ್ರ ಜೀವನ ನಡೆಸುತ್ತಾ ಇದೆ. ಈ ನಾಯಿ ಅನ್ನೋದು, ಮನುಷ್ಯನ ಹಂಗಿಗೆ ಬಿದ್ದು, ಅವನೆದುರಿಗೆ ಬಾಲ ಆಡಿಸುತ್ತಾ, ಆತ ಎಸೆಯೋ ಕೂಳಿಗೆ ದಾಸನಾಗಿದೆ. ಅದಕ್ಕೆ 'ನಾಯಿಪಾಡು' ಅಂತಾರಲ್ವೆ?

ಸಾಕಿದ ನಾಯಿಯ ಕೂಡ ಮನುಷ್ಯನ ಆಪ್ತಬಾಂಧವ್ಯ ಬೆಳೆಯುತ್ತದೆ. ಯಜಮಾನನಿಗಾಗಿ ಸಾಕಿದ ನಾಯಿ ತನ್ನ ಜೀವವನ್ನೇ ಕೊಡುತ್ತದ್, ಅನ್ನೋ ಮಾತು ಸತ್ಯ; ಆದರೆ ಇದೇ ನಾಯಿ ತನ್ನ ಜಾತಿಬಂಧುವನ್ನು ಕಂಡರೆ ಬೊಗಳುತ್ತದೆ.

ಇದು ನನಗೆ ಸರಿ ಬರೋದಿಲ್ಲ.

Harisha - ಹರೀಶ ಹೇಳಿದರು...

@ಗಿರಿಜಾ (ನೀಲಗಿರಿ):
ಹೌದು.. ಕೆಲವೊಮ್ಮೆ petಗಳು ನಮ್ಮ ಕುಟುಂಬಕ್ಕೆ ಅತಿ ಹತ್ತಿರವಾಗಿಬಿಡುತ್ತವೆ.

@ಸುನಾಥ್:
ನಾಯಿ, ಸಿಂಹ, ಆನೆ ಮತ್ತು ಬ್ರಾಹ್ಮಣ - ಈ ನಾಲ್ವರು ಸ್ವಭಾವತಃ ವೈರಿಗಳು -- ಹಾಗಂತ ಸಂಸ್ಕೃತದಲ್ಲಿ ಉಕ್ತಿಯೊಂದಿದೆ.

ನಾಯಿಗಳು ತಮ್ಮದೇ ಆದ ಒಂದು ಸರಹದ್ದನ್ನು ಹಾಕಿಕೊಂಡಿರುತ್ತವೆ. ಆ ಸರಹದ್ದಿನ ಒಳಗಿನ ಕ್ಷೇತ್ರದಲ್ಲಿ ಅವು ಅತಿ ಧೈರ್ಯಸ್ಥವಾಗಿರುತ್ತವೆ. ಬೇರೆ ಯಾವುದೇ ಅಪರಿಚಿತ ನಾಯಿ ಬಂದರೂ ಅವುಗಳ ನಡುವೆ ಜಗಳ ನಡೆಯುವುದು ಶತಃಸಿದ್ಧ.

ಸಿಂಹವೂ ಅಷ್ಟೇ. ಕಾಡಿನಲ್ಲಿ ಒಂದು ಸಿಂಹ ಹಕ್ಕು ಚಲಾಯಿಸುತ್ತಿದೆ ಎಂದಾದರೆ, ಅಲ್ಲಿಗೆ ಅಂತಹ ಇನ್ನೊಂದು ಸಿಂಹ ಬಂದರೆ ಅವುಗಳ ಮಧ್ಯೆ ಜಗಳವಾಗಿ ಅವುಗಳಲ್ಲಿ ಒಂದು ಸಿಂಹ ಸಾಯುವುದು ಖಂಡಿತ.

ಎರಡು ಮದಗಜಗಳು ಎದುರಾದರೆ ಮುಗಿದೇ ಹೋಯಿತು. ಸುತ್ತ ಮುತ್ತ ಏನಾಗುತ್ತಿದೆ ಎನ್ನುವುದನ್ನೂ ಮರೆತು ಹೋರಾಡುತ್ತವೆ. ಅವುಗಳ ಜಗಳ ಅವುಗಳಿಗೇ ಪ್ರೀತಿ.

ಇನ್ನು ಬ್ರಾಹ್ಮಣರು. ಹಿಂದಿನ ಕಾಲದಲ್ಲಿ ವೇದಾಭ್ಯಾಸ ಮಾಡಿಕೊಂಡಿರುತ್ತಿದ್ದ ಬ್ರಾಹ್ಮಣರು ಇನ್ನೊಬ್ಬ ಬಂದಾಗ ಅವನ ಜೊತೆ ವಾದ ಮಾಡುವುದು, ಅದು ಸರಿಯಾಗಿ ಇತ್ಯರ್ಥವಾಗದೇ ಇದ್ದಲ್ಲಿ ಅವರಿಬ್ಬರ ಮಧ್ಯೆ ವೈರ ಶುರುವಾಗುವುದು ಇದು ಸಾಮಾನ್ಯವಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮೂಲವನ್ನೇ ಬ್ರಾಹ್ಮಣರು ಮರೆತಿರುವಾಗ ಇದು ಅನ್ವಯವಾಗುತ್ತದೆ ಎಂದು ಹೇಳುವುದು ಕಷ್ಟ.

ನೀವು ನಾಯ-ತೋಳ ಹೋಲಿಸಿದಂತೆ ಬೆಕ್ಕು-ಹುಲಿಗಳನ್ನೂ ಹೋಲಿಸಬಹುದು. ಹಾಗೆಂದಮೇಲೆ ನಿಮಗೆ ಬೆಕ್ಕಿನ ಮೇಲೂ ದ್ವೇಷವಿರಬೇಕು.. :-)

ಅದಿರಲಿ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಅನಾಮಧೇಯ ಹೇಳಿದರು...

sushrutha hElOdi sari :) nice write-up

- vijayraj

shivu.k ಹೇಳಿದರು...

ನಿಮ್ಮ ನಾಯಿಪುರಾಣ ಬಲು ಮಜಾ ಐತೆ. ನಿಮಗೆ ನಾಯಿ ಕಂಡ್ರೆ ತುಂಬಾ ಇಷ್ಟ ಅಂತ ಗೊತ್ತಾಯ್ತು. ಹಾಗಾದರೆ ಬನ್ನಿ ನನ್ನ ಬ್ಲಾಗಿನಲ್ಲೊಂದು ನಾಯಿ ಪುರಾಣ ಇದೆ ಓದಿದ ಮೇಲೆ ಖಂಡಿತ ತೀರ್ಮಾನಿಸಿ ನಾಯಿ ಇಷ್ಟನೋ ಇಲ್ಲವೋ ಅಂತ. ಬ್ಲಾಗ್ ವಿಳಾಸ:http://camerahindhi.blogspot.com
ಹಾಗೆ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ಪಾರಿವಾಳ ಪುರಾಣವಿದೆ ಓದಿದರೆ ನಿಮಗೆ ಇಷ್ಟವಾಗಬಹುದು. ಬನ್ನಿ.
ಶಿವು.ಕೆ

Harisha - ಹರೀಶ ಹೇಳಿದರು...

ವಿಜಯ್, ಏನ್ರೀ ಅದು!! ಸುಶ್ರುತಂಗೆ support ಕೊಟ್ಟು politics ಮಾಡ್ತೀರಾ? ;-)

ಶಿವು, ನಿಮ್ಮ ಬ್ಲಾಗಿನ ಲೇಖನಗಳನ್ನು ನೋಡಿದೆ. ಬಹಳಷ್ಟು ಇಷ್ಟವಾದವು.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. :-)