ಶನಿವಾರ, ಸೆಪ್ಟೆಂಬರ್ 22, 2007

ಹೀಗೊಂದು ನಾಲ್ಕೂವರೆ ತಾಸಿನ ಪಯಣ

ಸಮಯದ ಅಭಾವವೋ ಹಬ್ಬಗಳ ಬಗ್ಗೆ ಅಸಡ್ಡೆಯೋ ಗೊತ್ತಿಲ್ಲ, ಎಂಜಿನಿಯರಿಂಗ್ ಓದುತ್ತಿದ್ದ ಹಿಂದಿನ ನಾಲ್ಕು ವರ್ಷಗಳಲ್ಲಿ ಯಾವ ಹಬ್ಬವನ್ನೂ ಒಮ್ಮೆ ಕೂಡ ಹಬ್ಬದಂತೆ ಆಚರಿಸಿರಲಿಲ್ಲ. ಹರಿಹರದಲ್ಲಿನ ಪೇಟೆ ಸಂಸ್ಕೃತಿಯಿಂದಾಗಿ ಎಷ್ಟೋ ಹಬ್ಬಗಳು ನನಗರಿವಿಲ್ಲದಂತೆ ಬಂದು ಹೋಗಿದ್ದವು. ಈಗ ಸಮಯವೂ ಇದೆ, ಮಾಡಲು ಕೆಲಸವೂ ಕಾಣುತ್ತಿಲ್ಲ; ಈಗಿರುವ ಸಮಯ ಭವಿಷ್ಯದಲ್ಲಿ ಸಿಗುವುದು ಕಷ್ಟ ಎಂದು ಎರಡು ದಿನ ಮೊದಲೇ ಚೌತಿಗೆಂದು ಊರಿಗೆ ಹೋಗಲು ನಿರ್ಧರಿಸಿದೆ. ಕಳೆದ ಬುಧವಾರ ಮಧ್ಯಾಹ್ನ ಅಗತ್ಯ ವಸ್ತುಗಳನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಗೆ ಬೀಗ ಹಾಕಿ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಕೊಡೆ ತರುವಂತೆ ಅಮ್ಮ ಎಚ್ಚರಿಸಿದ್ದು ನೆನಪಾಯಿತು. ಮನೆಗೆ ತಿರುಗಿ ಬಂದು ಎಲ್ಲಿ ಹುಡುಕಿದರೂ ಛತ್ರಿ ಸಿಗಬಾರದೆ? ಹಿಂದಿನ ಬಾರಿ ಊರಿಂದ ಬರುವಾಗ ಮುರಿದಿದ್ದ ಕೊಡೆಯನ್ನು ಅಲ್ಲಿಯೇ ಬಿಟ್ಟು ಅಮ್ಮನ ಹೊಸ ಕೊಡೆ ತೆಗೆದುಕೊಂಡು ಹೊರಟಿದ್ದಷ್ಟೇ ನೆನಪಿದೆ. ಸರಿಯಾಗಿ ಮನೆಗೆ ತಂದಿದ್ದೆನೋ ಅಥವಾ ದಾರಿ ಮಧ್ಯದಲ್ಲೇ ಅದು ಇನ್ನೊಬ್ಬರ ಸ್ವತ್ತಾಯಿತೋ ದೇವರೇ ಬಲ್ಲ! ನನಗೆ ಹಾಗೇ - ನೆನಪಿನ ಶಕ್ತಿ ಕಡಿಮೆ, ಜೀರ್ಣಶಕ್ತಿ ಜಾಸ್ತಿ!! ಸಿಗದ ಕೊಡೆಗೆ ಶಪಿಸುತ್ತಾ ಹೊರಟೆ. ಊಟ ಬೇರೆ ಆಗಿರಲಿಲ್ಲ. ಹರಿಹರ ಬಸ್‍ಸ್ಟ್ಯಾಂಡ್ ಬಳಿಯ ಗಣೇಶ್ ಕೆಫೆಯಲ್ಲಿ ರೈಸ್‍ಬಾತ್ ತಿಂದು ಬಸ್ ಹತ್ತುವಾಗ ಗಂಟೆ ಮೂರೂವರೆಯಾಗಿತ್ತು.

ಸಾಗರಕ್ಕೆ ೧೫ ಕಿಲೋಮೀಟರ್ ದೂರವಿರುವ ಮಲೆನಾಡಿನ ನಡುಮಧ್ಯದ ಚಿಕ್ಕ, ಚೊಕ್ಕ ಹಳ್ಳಿ ಮಂಚಾಲೆ. ಮಳೆಗಾಲದಲ್ಲಿ ಬಿಡದೆ ಹೊಯ್ದು ಬೇಸರ ಮೂಡಿಸುವ ಜಿಟಿಜಿಟಿ ಮಳೆ, ಚಳಿಗಾಲದಲ್ಲಿ ಕೊರೆಯುವ ಚುಮುಚುಮು ಚಳಿ, ಬೇಸಿಗೆಯಲ್ಲಿ ಸುಖಕರವೆನಿಸುವ ತಂಪು ಹವೆ - ಇದು ಅಲ್ಲಿಯ ಸಾಮಾನ್ಯ ವಾತಾವರಣ. ಮಳೆಗಾಲವಾಗಿದ್ದರಿಂದ ಕೊಡೆಯಿಲ್ಲದ ನಾನು ಎಂಥ ಸ್ಥಿತಿ ಎದುರಿಸಬೇಕೋ ಎಂದು ಅಂಜುತ್ತ, ಮೊಬೈಲ್‍ನಲ್ಲಿ ಹಾಕಿಕೊಂಡಿದ್ದ 'ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...' ಹಾಡನ್ನು ಮನಸ್ಸಿನಲ್ಲೇ ಗುನುಗುತ್ತ ಪಯಣಿಸಿದೆ.

ಶಿವಮೊಗ್ಗದಲ್ಲಿ ನೋಡಿದರೆ ಧಾರಾಕಾರ ಮಳೆ. ಸಾಗರದ ಕಡೆ ಕಾರ್ಮೋಡ ಆವರಿಸಿತ್ತು. ಅಲ್ಲಿಯೇ ಸಂಜೆಯಾಗಿದ್ದರಿಂದ ತ್ಯಾಗರ್ತಿಯ ಕಡೆಗೆ ಹೋಗುವ ಲಾಸ್ಟ್ ಬಸ್ ಮಿಸ್ ಆಗುವುದು ಕೂಡ ಖಾತ್ರಿಯಾಗಿತ್ತು. ನನ್ನ ಬಳಿಯಿದ್ದಿದ್ದು ಎರಡೇ ಮಾರ್ಗ: ಸಾಗರದಿಂದ ಕೇಳಿದಷ್ಟು ದುಡ್ಡು ಕೊಟ್ಟು ರಿಕ್ಷಾ ಮಾಡಿಕೊಂಡು ಹೋಗಬೇಕು ಅಥವಾ ಶಿವಮೊಗ್ಗ-ಸಾಗರ ಮಧ್ಯೆ ಜೋಗಿನಗದ್ದೆಯ ಬಳಿ ಬಿ.ಹೆಚ್ ರಸ್ತೆಯಲ್ಲಿಳಿದು ಸುಮಾರು ೪ ಕಿಲೋಮೀಟರ್ ನಡೆದು ಮನೆ ತಲುಪಬೇಕು. ನಡೆಯುವಾಗ ಕಾಡುಕೋಣಗಳು ಭೇಟಿ ಕೊಟ್ಟರೆ ಇನ್ನೂ ಕಷ್ಟ. ಆದರೂ ಏಕೋ ಎರಡನೆಯದೇ ವಾಸಿ ಎನಿಸಿತು. ಶಿವಮೊಗ್ಗ ದಾಟಿದ ಮೇಲೆ ನನ್ನ ಸ್ಪೈಸ್ ಸಿಗ್ನಲ್ ರೀಚ್ ಆಗುವುದು, ಕತ್ರೀನಾ ಕೈಫ್ ಭರತನಾಟ್ಯ ಮಾಡುವುದು ಎರಡೂ ಒಂದೇ. ಮನೆಗೆ ತಿಳಿಸೋಣವೆಂದು ಶಿವಮೊಗ್ಗದಿಂದಲೇ ಫೋನ್ ಮಾಡಿದೆ. "ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದೊಳಗಿಲ್ಲ" ಎಂಬ ಧ್ವನಿ ಕೇಳಿ ಆಶ್ಚರ್ಯವಾಯಿತು. ಎಲಾ ಬಿಎಸ್ಸೆನ್ನೆಲ್ಲೆ! ಲ್ಯಾಂಡ್‍ಲೈನ್ ಕೂಡ ನಾಟ್ ರೀಚೆಬಲ್ಲಾ? ಒಟ್ಟಿನಲ್ಲಿ ನನ್ನ ಗ್ರಹಚಾರ ಆ ದಿನ ಸರಿ ಇರಲಿಲ್ಲ ಎಂಬುದು ಪದೇ ಪದೇ ಮನವರಿಕೆಯಾಗುತ್ತಿತ್ತು. ಏನಾದರಾಗಲಿ ಎಂದು ನಿರ್ಧರಿಸಿ, ಡ್ರೈವರ್ ಬಳಿ ಜೋಗಿನಗದ್ದೆ ಬಳಿ ಬಸ್ ನಿಲ್ಲಿಸುವಂತೆ ಹೇಳಿ ಅಲ್ಲೇ ಮುಂದಿನ ಅಡ್ಡ ಸೀಟಿನಲ್ಲಿ ಕುಳಿತೆ. ಬಸ್ ಹೊರಟಾಗ 'ಎಲ್ಲಿಗೆ ಪಯಣ... ಯಾವುದೋ ದಾರಿ... ಏಕಾಂಗಿ ಸಂಚಾರಿ...' ಎಂಬ ಎವರ್‌ಗ್ರೀನ್ ಚಿತ್ರಗೀತೆ ನನಗರಿವಿಲ್ಲದಂತೆ ನೆನಪಿಗೆ ಬಂದಿತ್ತು.

ವಿಘ್ನನಿವಾರಕನಿಗೆ ನನ್ನ ಕಷ್ಟ ಅರ್ಥವಾಗಿರಬೇಕು. ಮಳೆ ನಿಂತಿತ್ತು. ದೂರದೂರದವರೆಗೆ ಮೋಡದ ಸುಳಿವು ಕೂಡ ಇರಲಿಲ್ಲ. ಗಾಡಿಕೊಪ್ಪ ದಾಟುವಷ್ಟರಲ್ಲಿ ಮನೆಯಿಂದಲೇ ಫೋನ್ ಬಂತು. ಅಲ್ಲಿವರೆಗೆ ಸ್ಪೈಸ್ ಸಿಗ್ನಲ್ ಇದ್ದಿದ್ದು ಹಾಗೂ ಸ್ಪಷ್ಟವಾಗಿ ಕೇಳುತ್ತಿದ್ದುದು ಎರಡೂ ನನ್ನ ಕೋಟಿ ಜನ್ಮದ ಪುಣ್ಯದ ಫಲಗಳೇ ಇರಬೇಕು. ತಿಳಿಸಬೇಕಾಗಿದ್ದ ವಿಷಯಗಳನ್ನೆಲ್ಲ ತಿಳಿಸಿ ನೆಮ್ಮದಿಯಿಂದ ಕುಳಿತೆ. ಆರ್ದ್ರಾ ಮಳೆಯ ರುದ್ರಾವತಾರವಾಗಿ ಬಹುದಿನಗಳ ನಂತರ ಬಿದ್ದಿದ್ದ ಮಳೆಯಿಂದಾಗಿ ಎದ್ದಿದ್ದ ಮಣ್ಣಿನ ಹೊಲ-ಸುವಾಸನೆಯೊಂದಿಗೆ ಹೊಲಸು-ವಾಸನೆಯೊಂದು ಮೂಗಿಗೆ ಬಡಿಯಿತು. ಹಿಂದಿನ ದಿನ ಬಸ್ ಡಿಕ್ಕಿ ಹೊಡೆದು ಸತ್ತಿದ್ದ ೯ ದನ-ಕರುಗಳ ಕಳೇಬರಗಳ ವಾಸನೆ ಅದೆಂದು ಡ್ರೈವರ್ ಹೇಳಿದ. ಅವುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವಷ್ಟರಲ್ಲಿ ಉಳ್ಳೂರು ಬಂದಿತು. ನನಗೆ ಬೇಕಾದ ಸ್ಟಾಪ್ ಬಳಿ ಸರಿಯಾಗಿ ನಿಲ್ಲಿಸದಿದ್ದರೆ ಕತ್ತಲೆಯಲ್ಲಿ ಎಲ್ಲೆಂದು ಹೋಗುವುದು? ಹಿಂದೊಮ್ಮೆ ಅಮ್ಮನ ಗಾಬರಿಯಿಂದಾಗಿ ಬನಕೊಪ್ಪ-ಹಾರೇಕೊಪ್ಪ ಸ್ಟಾಪ್ ಬಳಿಯೇ ಇಳಿದು ೧ ಕಿಲೋಮೀಟರ್ ಬೋನಸ್ ನಡೆದದ್ದು ಇನ್ನೂ ನೆನಪಿದೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ರಸ್ತೆ ನೋಡುತ್ತಾ ಕುಳಿತೆ.

ಏಳು ಗಂಟೆಯ ವೇಳೆ ನಾನು ಬಸ್ ಇಳಿಯುವಷ್ಟರಲ್ಲಿ ಅಪ್ಪ ಬೇಡ ಎಂದಿದ್ದರೂ ಬಂದಿದ್ದರು. ಮಳೆ ಬರುತ್ತಿರಲಿಲ್ಲವಾದ್ದರಿಂದ ಅವರು ತಂದಿದ್ದ ಕೊಡೆಯೇನೂ ಉಪಯೋಗಕ್ಕೆ ಬರದಿದ್ದರೂ ಕೈಯಲ್ಲಿದ್ದ ಬ್ಯಾಟರಿ ಸಹಾಯಕ್ಕೆ ಬಂತು. ವಾರದ ಹಿಂದಷ್ಟೇ ಹಿಡಿದಿದ್ದ ಕಾಳಿಂಗ ಸರ್ಪದ ಬಗ್ಗೆ, ಮನೆಯ ಹೊಸ ಲ್ಯಾಂಡ್‍ಲೈನ್ ಫೋನಿನ ಬಗ್ಗೆ - ಹೀಗೇ ಲೋಕಾಭಿರಾಮವಾಗಿ ಹರಟುತ್ತಾ ಮನೆ ಸೇರುವಷ್ಟರಲ್ಲಿ ರಾತ್ರಿ ಎಂಟಾಗಿತ್ತು...

ಕಾಮೆಂಟ್‌ಗಳಿಲ್ಲ: