ಶನಿವಾರ, ಸೆಪ್ಟೆಂಬರ್ 8, 2007

ಚಕ್ ದೇ ಇಂಡಿಯಾ!

ನಾನು ಸಿನಿಮಾ ನೋಡೋದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ವಿದ್ಯಾರ್ಥಿ ಜೀವನದ ಮಜಾ ಮುಗಿಸಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ರಜೆ ಅನುಭವಿಸುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ನಾನು ಅವುಗಳನ್ನು ನೋಡದೆ ವಿಧಿಯಿಲ್ಲ. ಹಾಗಾಗಿ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳನ್ನು ನೋಡುವ ಅದೃಷ್ಟ ನನ್ನದಾಯಿತು. ನಾನು ಇತ್ತೀಚೆಗೆ ನೋಡಿದ ಚಕ್ ದೇ ಇಂಡಿಯಾ ಒಂದು ಒಳ್ಳೆಯ ಸಿನಿಮಾ. ಮೊದಲಿನಿಂದ ಕೊನೆಯವರೆಗೆ ತನ್ನ ವೇಗವನ್ನು ಕಾಪಾಡಿಕೊಂಡು ಹೋಗಿದ್ದು, ಎಲ್ಲೂ ಬೋರ್ ಬರದೇ ಇರೋ ಹಾಗೆ ಇದೆ. ಭಾರತದ ಸಮೂಹ ಮಾಧ್ಯಮಗಳ ದುಃಸ್ಥಿತಿ, ಆಟಗಾರರ ಮನಸ್ಥಿತಿ, ಕ್ರಿಕೆಟ್‍ಗೆ ಕೊಡುತ್ತಿರುವ ಅತಿ ಎನಿಸುವಂತಹ ಗೌರವ ಇವೆಲ್ಲವುಗಳನ್ನು ಹದವಾಗಿ ಬೆರೆಸಿರುವ ರೀತಿ ಮನಸ್ಸಿಗೆ ಹತ್ತಿರವಾಗುತ್ತದೆ. ಅದರಲ್ಲಿನ ಕೆಲವು ಸಂಭಾಷಣೆಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಅವುಗಳಲ್ಲೊಂದು "ಹಮ್ಲಾ ಗೋಲ್ ಪರ್ ನಹೀ, ಗೋಲ್‍ಕೀಪರ್ ಕೇ ದಿಮಾಗ್ ಪರ್ ಕರೋ" ಎಂದು ಶಾರುಖ್ ಖಾನ್ ಹೇಳುವುದು. ಅದರರ್ಥ ಮನದಟ್ಟಾಗುವಂತೆ ಮಾಡಿದ್ದು ಇತ್ತೀಚಿನ ನ್ಯಾಟ್‍ವೆಸ್ಟ್ ಸರಣಿಯ ೬ನೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಔಟ್ ಆದ ಪರಿ.

ಯುವರಾಜ್ ಸಿಂಗ್ ಬೌಲಿಂಗ್ ದಾಳಿಯಲ್ಲಿ ಮಸ್ಕರೆನ್ಹಾಸ್ ಸತತ ೫ ಸಿಕ್ಸ್ ಹೊಡೆದು ಆತನನ್ನು ಯುವರಾಜ ಪದವಿಯಿಂದ ಕೆಳಗಿಳಿಸಿದ್ದಾಗಿತ್ತು. ಈ ಸಂದರ್ಭದಲ್ಲಿ ಯುವರಾಜ ಸೇಡು ತೀರಿಸಿಕೊಂಡು ತನ್ನ ಪಟ್ಟ ಮರಳಿ ಪಡೆಯಲು ಬಯಸುವುದು ಸಹಜ. ಹೀಗಿರುವಾಗ ಇಂಗ್ಲಿಷ್ ನಾಯಕ ಕಾಲಿಂಗ್‍ವುಡ್ ಅವರು ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲು ಬಂದ ಅಲ್ಪ ಸಮಯದಲ್ಲೇ ಮಸ್ಕರೆನ್ಹಾಸ್ ಅವರನ್ನು ದಾಳಿಗಿಳಿಸಿ ಮಾನಸಿಕವಾಗಿ ಒತ್ತಡ ಹೇರಿದರು. ಮೊದಲ ಎಸೆತದಲ್ಲೇ ಕ್ಯಾಚ್ ಕೊಟ್ಟ ಯುವರಾಜ್‍ಗೆ ತಮ್ಮ ಪದವಿ ಮರಳಿ ಸಿಗಲೇ ಇಲ್ಲ. Hats off to Collingwood and his mind-game!

ಬಹುತೇಕ ಭಾರತೀಯರಲ್ಲಿ ಕಂಡುಬರುವ ಒಂದು ಸಮಸ್ಯೆಯೆಂದರೆ ಕುತ್ತಿಗೆಯವರೆಗೆ ಬರುವವರೆಗೆ ಕೆಲಸ ಮಾಡದಿರುವುದು. ಅದೇನೋ ಹೇಳ್ತಾರಲ್ಲ, ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದ್ರು ಅಂತ, ಹಾಗೆ. ಈ ವಿಚಾರದಲ್ಲಿ ನಾನಂತೂ ಕಟ್ಟಾ ಭಾರತೀಯನೆಂದು ಹೇಳಿಕೊಳ್ಳಲೇಬೇಕು. ನೀವೂ ಭಾರತೀಯರೇ? ನಂಗೊತ್ತಿಲ್ಲ, ಗೊತ್ತಾಗೋದೂ ಬೇಡ ಬಿಡಿ... ನಿಮ್ಮ ಪರ್ಸನಲ್ ವಿಷ್ಯ ನಂಗ್ಯಾಕೆ?

ಆ ಮಾತು ಈಗ ಯಾಕಪ್ಪಾ ಅಂದ್ರೆ, ನಮ್ಮ ಕ್ರಿಕೆಟ್ ತಂಡ ಇಂಗ್ಲೆಂಡ್‍ನಲ್ಲಿ ಆಡಿದ ರೀತಿ ನೋಡಿದ್ರೆ ಅದರಲ್ಲಿರೋರೆಲ್ಲ ಅಪ್ಪಟ ಭಾರತೀಯರೇ ಅನ್ಸೋದಿಲ್ವೇ? ನೀವೇ ಹೇಳಿ, ೪ನೇ ಪಂದ್ಯದಲ್ಲಿ ೧೧೪ ರನ್‍ಗೆ ೭ ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ಬ್ರಿಟಿಷರಿಗೆ ಗೆಲ್ಲುವ ಅವಕಾಶ ಮಾಡಿಕೊಟ್ಟು, ಸರಣಿಯಲ್ಲಿ ೩-೧ ರ ಹಿನ್ನಡೆ ಅನುಭವಿಸಿ, 'ಮಾಡು ಇಲ್ಲವೆ ಮಡಿ' ಸ್ಥಿತಿಗೆ ಹೋಗಿ, ನಂತರ ಫೀನಿಕ್ಸ್‍ನಂತೆ ಮತ್ತೆ ಸತತವಾಗಿ ೨ ಪಂದ್ಯಗಳನ್ನು ಗೆದ್ದು ಸರಣಿ ಸಮವಾಗಿಸಿಕೊಳ್ಳುವುದು ಇನ್ಯಾರಿಗೆ ಸಾಧ್ಯ? ಅದರಲ್ಲೂ ೬ನೇ ಪಂದ್ಯದಲ್ಲಿ ಭಾರತ ಗೆಲ್ಲುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ೩೧೬ ರನ್‍ ಬೆನ್ನಟ್ಟುವುದು ಬಾಳೆಹಣ್ಣು ತಿಂದಹಾಗಲ್ಲ. ಅದಕ್ಕೆ ಉತ್ತಮ ಆಟ, ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗೆಲ್ಲಲೇಬೇಕೆಂಬ ಛಲ ಬೇಕು. ಛಲವನ್ನು ಭಾರತ ತಂಡದವರು ಪ್ರದರ್ಶಿಸುವುದು ಬಹಳ ಕಡಿಮೆ. ಆದರೆ ಈ ಪಂದ್ಯ ಅಂತಹ ವಿರಳ ಸಂದರ್ಭಗಳಲ್ಲೊಂದಾಗಿತ್ತು. ಇದಕ್ಕೆ ಓವಲ್ ಕ್ರೀಡಾಂಗಣದಲ್ಲಿ ಹಾಕಿದ್ದ ಚಕ್ ದೇ... ಚಕ್ ದೇ ಇಂಡಿಯಾ ಹಾಡು ಸ್ಫೂರ್ತಿಯಾಗಿರಬಹುದೇ? ಇರಬಹುದು...

ಕೊನೇ ಘಳಿಗೆಯಲ್ಲಿ ಕೆಲಸ ಮಾಡುವ ಅಥವಾ ತಿರುಗಿ ಬೀಳುವ ಸಂಪ್ರದಾಯ ಕೇವಲ ಹಾಕಿ, ಕ್ರಿಕೆಟ್‍ಗೆ ಸಂಬಂಧಿಸಿದ್ದಲ್ಲ. ಹಾಗೆ ನೋಡಿದರೆ ಅದಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದೆ ಅಣ್ವಸ್ತ್ರದ ವಿಷಯದಲ್ಲಿ ಅಮೆರಿಕಾ ಆರ್ಥಿಕ ದಿಗ್ಬಂಧನ ವಿಧಿಸಿದಾಗ ಭಾರತೀಯ ವಿಜ್ಞಾನಿಗಳು ಜಗ್ಗಲಿಲ್ಲ. ಬದಲಿಗೆ ಪ್ಲುಟೋನಿಯಮ್‍ನಿಂದ ಶಕ್ತಿ ಪಡೆಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು. Necessity is the mother of invention ಅಂತಾರಲ್ಲ, ಹಾಗೆ. ಒಂದು ಕಾಲದಲ್ಲಿ ಡಾಲರ್‌ನ ಪ್ರಭಾವದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ರೂಪಾಯಿ ಈಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಇದು ಅಮೆರಿಕಾ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಸಮಯದಲ್ಲಿ ಆಗಿರುವ ಬೆಳವಣಿಗೆ ಎಂಬುದನ್ನು ಮರೆಯಬಾರದು. ಒಟ್ಟಿನಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕೂಡ ತಿರುಗಿ ಬೀಳುವ ಶಕ್ತಿ ತೋರಿಸುತ್ತಿರುವ ಭಾರತಕ್ಕೆ "ಚಕ್ ದೇ" ಎನ್ನೋಣವೇ?

2 ಕಾಮೆಂಟ್‌ಗಳು:

Suresh S Murthy ಹೇಳಿದರು...

ನಿಜವಾಗ್ಲು ಕಣೋ, ನಮ್ಮಲ್ಲಿ ಮನೆ ಮಾಡಿರವಂತಹ, "ಕುತ್ತಿಗೆಗೆ ಬಂದರೆ ನೋಡಿಕೋಂಡರಾಯಿತು ಬಿಡು" ಅನ್ನೋ ಮನೋಭಾವ ಬಹಳ ಕೆಟ್ಟದ್ದು! ಒಳೆಯ ಅಂಕಣ ಬರೆದ್ದದ್ದಕ್ಕಾಗಿ ಧನ್ಯವಾದಗಳು!! ಅಲ್ಲಲ್ಲಾ.. ಚಕ್ ದೇ!!

Harisha - ಹರೀಶ ಹೇಳಿದರು...

ಇಲ್ಲೇನೋ ಚಕ್ ದೇ ಅಂದ್ವಿ. ಆದ್ರೆ, ಅಂಪೈರ್‍ಗಳು ತಮ್ಮ ಇದ್ದ ಬದ್ದ ದ್ವೇಷವನ್ನೆಲ್ಲಾ ಭಾರತದವರ ಮೇಲೆ ತೀರಿಸ್ಕೊಳ್ತಾ ಇದಾರಲ್ಲ... ಏನ್ ಮಾಡಲಿ ನಾನು ಏನ್ ಮಾಡಲಿ ;)