ಬುಧವಾರ, ಅಕ್ಟೋಬರ್ 14, 2009

ದೀಪಾವಳಿಗೆ... ಅದಕ್ಕೂ ಮುಂಚೆ...

"ದೀಪ್ ದೀಪ್ ದೀವಳಿಗ್ಯೋ... ಹಬ್ಬಕ್ಕೊಂದ್ ಹೋಳಿಗ್ಯೋ..." ಎಂದು ಕೂಗುತ್ತ ಊರ ಮುಂದೆ ಸಾಗಬೇಕು. ಹಚ್ಚಿಕೊಂಡು ತಂದ ಆರುತ್ತಿರುವ ಬೆಂಕಿಯ ಕೋಲುಗಳನ್ನು ರಸ್ತೆಬದಿಯಲ್ಲಿಯೋ, ಬೇಲಿ ಗೂಟಗಳಿಗೋ ಸಿಕ್ಕಿಸಬೇಕು. ಕೋಲು ಆರುವಷ್ಟರಲ್ಲಿ ಇನ್ನೊಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಎಲ್ಲ ಕೋಲುಗಳೂ ಖಾಲಿಯಾಗುವವರೆಗೂ ಹೀಗೇ ಕೂಗುತ್ತ ಸಾಗಬೇಕು. ಯಾರು ಜೋರಾಗಿ ಕೂಗುತ್ತಾರೋ ಅವರ ಹಬ್ಬದ ಸಡಗರ ಹೆಚ್ಚು ಎಂಬ ಭಾವನೆ. ಅಲ್ಲಿಗೆ ದೀಪಾವಳಿ ಮುಗಿಯುತ್ತದೆ. ಅದಕ್ಕೂ ಮುಂಚೆ...

ಅಡಿಕೆಮರದ ದಬ್ಬೆಯಾಗಲಿ ಅಥವಾ ನೇರವಾದ ಮರದ ಟೊಂಗೆಗಳಿಂದಾಗಲಿ ಸುಮಾರು ಎರಡರಿಂದ ಮೂರಡಿ ಉದ್ದದ ಕೋಲುಗಳನ್ನು ಮಾಡಿ ತುದಿಗೆ ಬಟ್ಟೆ ಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿಕೊಂಡು ಸಿದ್ಧಪಡಿಸಿಕೊಳ್ಳಬೇಕು. ದೀಪಾವಳಿಯ ಪೂಜೆಯ ಕಡೆಯ ಅಂಗವಾಗಿ ಮನೆದೇವರಿಗೆ ಮಹಾ ಮಂಗಳಾರತಿ ಮಾಡಿ ಅದೇ ದೀಪದಿಂದ ಒಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಈ ವರ್ಷದ ಹಬ್ಬವನ್ನು ಬೀಳ್ಕೊಟ್ಟು ಕಳುಹಿಸಿ ಬರಲು ಹೊರಡಬೇಕು. ಅದಕ್ಕೂ ಮುಂಚೆ...

ಬೆಳಿಗ್ಗೆ ಎದ್ದು ಕೊಟ್ಟಿಗೆಯನ್ನು ತೊಳೆದು ಶುಭ್ರಗೊಳಿಸಿ, ಸಿಂಗರಿಸಿ, ದನ-ಕರುಗಳ ಮೈ ತೊಳೆಯಬೇಕು. ಒಂದು ಲೋಟಕ್ಕೆ ಮಧ್ಯದಲ್ಲಿ ಒಂದು ದಾರ ಕಟ್ಟಿ ಕೆಂಪು-ಬಿಳಿ ಬಣ್ಣದಲ್ಲಿ ಅದ್ದಿ ಗೋವುಗಳ ಮೇಲೆ ಗೋಪಾದಗಳನ್ನು ಮೂಡಿಸಬೇಕು. ದೊಡ್ಡ ಹಸುಗಳ ಕೋಡುಗಳಿಗೆ ಬಣ್ಣ ಬಳಿಯಬೇಕು. ಕರುಗಳ ಕೊರಳಿಗೆ ಗಂಟೆ ಕಟ್ಟಿ ಸಂಭ್ರಮಿಸಬೇಕು. ಗೋವಿನ ಉಪಕಾರಗಳನ್ನು ಸ್ಮರಿಸುತ್ತ ಗೋಪೂಜೆ ಮಾಡಬೇಕು. ಗೋಗ್ರಾಸ ನೀಡಬೇಕು. ಪೂಜೆಯಾದ ಮೇಲೆ ಗೋವುಗಳನ್ನು ಮೇಯಲು ಬಿಟ್ಟು ಜಾಗಟೆ, ಗಂಟೆ ಮೊದಲಾದವುಗಳನ್ನು ಬಾರಿಸಬೇಕು. ಆ ಸದ್ದಿಗೆ ಬೆದರಿ ಓಡುವ ಅವುಗಳ ಜೊತೆ ನಾನೂ ಓಡಬೇಕು. ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಕೂತು "ರೇಸ್"ನಲ್ಲಿ ಭಾಗವಹಿಸಬೇಕು.

"ಬಲ್ಲೇಳು ಬಲಿವೀಂದ್ರನು ರಾಯ ಬಂದಾನು ತನ್ನ ರಾಜ್ಯಕೆ..." ಎಂದು ಜ್ಯೋತಿ ಹಿಡಿದು ನಡುರಾತ್ರಿಯಲ್ಲಿ ಹಾಡುತ್ತ ಮನೆ-ಮನೆಗೆ ಬರುವ ಹಬ್ಬಾಡುವವರನ್ನು ಸ್ವಾಗತಿಸಬೇಕು. "ಜಾನ್ಪೂರ್ಣಂ ಜಗಂಜ್ಯೋತಿ... ನಿರ್ಮಲವಾದ ಮನವೇ ಕರ್ಪೂರದಾರತಿ..." ಎಂದು ಅವರು ಹಾಡುವ ಅರ್ಥಪೂರ್ಣ ಪದ್ಯಗಳನ್ನು ಗಮನವಿಟ್ಟು ಆಲಿಸಬೇಕು. ಅವರು ತಂದ ಜ್ಯೋತಿಯಿಂದ ನಮ್ಮ ಮನೆಯ ದೀಪವನ್ನೂ ಬೆಳಗಿಕೊಳ್ಳಬೇಕು. ಅವರ ಜ್ಯೋತಿಗೆ ಎಣ್ಣೆಯನ್ನು ಹಾಕಬೇಕು. ಅವರಿಗೆ ಯಥೋಚಿತ ಅಡಿಕೆ-ಅಕ್ಕಿ-ದುಡ್ಡನ್ನು ದಾನ ಮಾಡಬೇಕು. ಅದಕ್ಕೂ ಮುಂಚೆ...

ನರಕ ಚತುರ್ದಶಿಯಂದು ಬೆಳಿಗ್ಗೆ ಬೇಗ ಎದ್ದು ಮೈ, ಕೈ, ಕಿವಿಗೆಲ್ಲ ಎಣ್ಣೆ ಹಾಕಿಕೊಳ್ಳಬೇಕು. ಹಿಂದಿನ ದಿನ ರಾತ್ರಿ ತುಂಬಿಸಿಟ್ಟ ಬಚ್ಚಲ ಮನೆಯ ಹಂಡೆಯ ಬಿಸಿ ಬಿಸಿಯಾದ ನೀರಿನಲ್ಲಿ ಹಚ್ಚಿಕೊಂಡಿದ್ದ ಎಣ್ಣೆಯೆಲ್ಲ ಹೋಗುವಂತೆ ಸ್ನಾನ ಮಾಡಬೇಕು. ದೇವರ ಮನೆ, ವಾಸ್ತು ಕಂಬ, ವಾಸ್ತು ಬಾಗಿಲು, ಒರಳು, ಒನಕೆ, ಒಲೆ, ಅಕ್ಕಿ ಮರಿಗೆ, ಬಾವಿ, ಬಚ್ಚಲು, ತುಳಸಿ, ದುಡ್ಡಿನ ಪೆಟ್ಟಿಗೆ - ಹೀಗೆ ಮುಖ್ಯವಾದ ಕಡೆಗಳಲ್ಲಿ ಎಲೆ, ಅಡಿಕೆ, ಹಿಂಗಾರ, ಪಚ್ಚೆ ತೆನೆ ಇಡಬೇಕು. ಎಲ್ಲ ಕಡೆಯಲ್ಲಿಯೂ ಪೂಜೆ ಮಾಡಿ, ಆರತಿ ಮಾಡಿ, ಸುಖ-ಸಮೃದ್ಧಿಗಳು ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಬಲೀಂದ್ರನನ್ನು ಪೂಜಿಸಬೇಕು. ಅದಕ್ಕೂ ಮುಂಚೆ...

"ದೊಡ್ಹಬ್ಬ" ದೀಪಾವಳಿಗೆ ಊರಿಗೆ ಹೋಗಬೇಕು! ಅದಕ್ಕೂ ಮುಂಚೆ... ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

13 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಸರ್ವರಿಗೂ ಈ ದೀಪಾವಳಿ ಮನದ ಕತ್ತಲೆಯನ್ನು ತೊಳೆದು ಬೆಳಕಿನ ಕಿರಣವನ್ನು ಬೀರುತ್ತಾ ಮನದ ಮೂಲೆ ಮೂಲೆಯನ್ನೂ ಬೆಳಗಲೆಂದು ಹಾರೈಸುವೆ.

ಸುಂದರವಾದ ಲೇಖನ ಹರೀಶ್. ನಿನಗೂ ಹಾರ್ದಿಕ ಶುಭಾಶಯಗಳು.

Sushrutha Dodderi ಹೇಳಿದರು...

ಶುಕ್ರವಾರ ನೈಟು. ಪರ್ವತ ಟ್ರಾವೆಲ್ಸ್.
:-)

sunaath ಹೇಳಿದರು...

ನಿಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು.

shivu.k ಹೇಳಿದರು...

ಆಹಾ! ಈ ರೀತಿ ಹಿಮ್ಮುಖವಾಗಿ ಬರೆಯುತ್ತಾ ನಿಮ್ಮ ದೀಪಾವಳಿ ಆಚರಣೆಯನ್ನು ಚೆನ್ನಾಗಿ ವಿವರಿಸಿದ್ದೀರಿ...ಊರಲ್ಲಿ ಹಬ್ಬ ಚೆನ್ನಾಗಿ ಮಾಡಿ...

ಸೊಗಸಾದ ಲೇಖನಕ್ಕೆ ಧನ್ಯವಾದಗಳು.

ದೀಪಾವಳಿ ಹಬ್ಬದ ಶುಭಾಶಯಗಳು.

Harisha - ಹರೀಶ ಹೇಳಿದರು...

ತೇಜಕ್ಕಾ, ಧನ್ಯವಾದ. ಈ ಹಬ್ಬ ಸಂತಸದ ಹಾಗೂ ಸುರಕ್ಷಿತ ದೀಪಾವಳಿಯಾಗಲಿ.

ಸುಶ್, :-(
ನಾನು ಬಸ್ಸಿಗೆ ಬುಕ್ ಮಾಡ್ಸಲ್ಲೆ... ಇದ್ದಲ ಸಿಕ್ಕಿದ್ ಬಸ್ಸಿಗೆ ಹೋಪದು.. ದೀಪಾವಳಿಯ ಶುಭಾಶಯ :-)

ಸುನಾಥಂಕಲ್, ಪ್ರತಿಕ್ರಿಯೆಗೆ ಧನ್ಯವಾದಗಳು. ದೀಪಾವಳಿಯ ಶುಭಾಶಯಗಳು :-)

ಶಿವು, ಸುಮ್ಮನೆ ಹೇಗಿರುತ್ತೆ ನೋಡೋಣ ಅಂತ ಈ ರೀತಿ ಹಿಮ್ಮುಖವಾಗಿ ಬರೆದೆ. ಊರಿನಲ್ಲಿ ಹಬ್ಬಕ್ಕೆ ಈಗ ಮೊದಲಿನಷ್ಟು ಸಂಭ್ರಮ ಇರೋದಿಲ್ಲ. ನಿಮಗೂ ದೀಪಾವಳಿಯ ಶುಭಾಶಯಗಳು :-)

ಮನಸ್ವಿ ಹೇಳಿದರು...

ದೀಪಾವಳಿಗೊಂದು ನಿನ್ನಿಂದ ಸುಂದರ ಲೇಖನ....

ನಿಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು

Ittigecement ಹೇಳಿದರು...

ಹರೀಷ್....

ಲೇಖನ ಓದಿ ಊರಿಗೆ ಹೋಗುವ ಆಸೆ ಹುಟ್ಟಿಸಿ ಬಿಟ್ಯಲ್ಲ ಮಾರಾಯಾ...!

ಹಸು ಕರುಗಳಿಗೆ ಶೃಂಗಾರ ಮಾಡಿ...
ಊರಿನವರೆಲ್ಲ ಒಂದೆಡೆ ಸೇರಿ..
ಆ ಸಂಭ್ರಮ... ಸಂತೋಷ..
ಸಡಗರ...
ವಾವ್....!

ಸಾಯಂಕಾಲ ಊರಿನ ಹಿರಿಯರಿಗೆಲ್ಲ ನಮಸ್ಕರಿಸಲೇ ಬೇಕು...
ಆ ದಿನ ವೈರತ್ವ ಇರುವದೇ ಇಲ್ಲ....
ವೈರಿಯ ಮನೆಯ ಮಕ್ಕಳು ವೈರಿಯ ಮನೆಗೆ ಹೋಗಿ ನಮಸ್ಕಾರ ಮಾಡಿ ಹಿರಿಯರ ಆಶೀರ್ವಾದ ಪಡೆಯುವ...
ಆ ಸಂಪ್ರದಾಯಗಳು...
ಆಚರಣೆಗಳು...!

ಚಂದವಾದ ಬರಹ...!

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು...
ಬೆಳಕಿನ ಹಬ್ಬ..
ಕತ್ತಲು ಓಡಿಸಿ...
ಬಾಳಲ್ಲಿ ಬೆಳಕನ್ನು ತರಲಿ....

Harisha - ಹರೀಶ ಹೇಳಿದರು...

ಆದಿತ್ಯ, ನಿಂಗೂ ದೀಪಾವಳಿಯ ಶುಭಾಶಯ‌ :-)

ಪ್ರಕಾಶಣ್ಣ, ನಾನು ನೋಡಿದ ಹಂಗೆ ನಾನು ಚಿಕ್ಕವನಾಗಿದ್ದಾಗಿನ ಸಂಭ್ರಮ ಈಗಿಲ್ಲೆ. ನಿಂಗ ಮಕ್ಕಳಾಗಿದ್ದಾಗ ಇದ್ದ ಸಂಭ್ರಮ ಬಹುಶಃ ಇನ್ನೂ ಹೆಚ್ಚಿತ್ತು. ಬರ್ತಾ ಬರ್ತಾ ಹಬ್ಬಗಳೆಲ್ಲ ಕೇವಲ ರಜಾ ದಿನಗಳಾಗ್ತಾ ಇದ್ದ :-(

ದೀಪಾವಳಿಯ ಶುಭಾಶಯ‌ :-)

Roopa ಹೇಳಿದರು...

ನಿಮಗೂ ದೀಪಾವಳಿಯ ಶುಭಾಶಯಗಳು.

Harisha - ಹರೀಶ ಹೇಳಿದರು...

ರೂಪಾ,
ನಿಮಗೂ ದೀವಳಿಗೆಯ ಹಾರ್ದಿಕ ಶುಭಾಶಯಗಳು. ಬರುತ್ತಿರಿ.. ಬರೆಯುತ್ತಿರಿ :-)

Deepika ಹೇಳಿದರು...

ಹರಿಶಣ್ಣ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಪೂಜಾ ವಿಧಾನ ತುಂಬಾ ಚೆನ್ನಾಗಿ ವಿವರಿಸಿದೀರ. ಧನ್ಯವಾದಗಳು

Harisha - ಹರೀಶ ಹೇಳಿದರು...

ದೀಪಿಕಾ, ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಎಲ್ಲರ ದೀಪಾವಳಿ ಹಬ್ಬವೂ ಚೆನ್ನಾಗಿ ಆಯಿತು ಅಂತ ಅಂದ್ಕೊಂಡಿದೀನಿ.

Unknown ಹೇಳಿದರು...

""""" ಸುಂದರವಾದ ಲೇಖನ """"""