ಸೋಮವಾರ, ಸೆಪ್ಟೆಂಬರ್ 22, 2008

ಮಳೆಗಾಲದ ಒಂದು ಸಂಜೆ...

ಮಳೆಗಾಲದ ಒಂದು ಸಂಜೆ. ಅಮ್ಮ ಮಾಡಿದ್ದ ಬಿಸಿ ಬಿಸಿ ಬೋಂಡ ತಿನ್ನುತ್ತಾ ಕಾಫಿ ಹೀರುತ್ತಾ ಜಗಲಿಯಲ್ಲಿ ಕೂತು ತಳಿಗಳ ಮೂಲಕ ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದೆ. ಮನಸ್ಸು ನಾಲ್ಕು ವರ್ಷ ಹಿಂದಕ್ಕೆ ಕರೆದೊಯ್ದಿತು.
***

ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೇ ತಿಂಗಳು. ೧೫ ದಿನದಲ್ಲಿ ಪರೀಕ್ಷೆ ಇದ್ದರೂ ಅರ್ಧ ಸಿಲೆಬಸ್ ಕೂಡ ಮುಗಿದಿರಲಿಲ್ಲ. ಶನಿವಾರ ಸ್ಪೆಷಲ್ ಕ್ಲಾಸ್ ಇಟ್ಟಿದ್ದರು. ಬಹಳಷ್ಟು ಮಂದಿ ಚಕ್ಕರ್ ಹಾಕಿದ್ದರು. ಇದ್ದವರು ನಾವೇ ೮ ಹುಡುಗರು, ೫ ಹುಡುಗಿಯರು. ನನ್ನನ್ನು ಮತ್ತು ಮೂವರು ಹುಡುಗಿಯರನ್ನು ಬಿಟ್ಟರೆ ಉಳಿದವರೆಲ್ಲ ಹಾಸ್ಟೆಲ್ ನಲ್ಲಿ ಇದ್ದವರು.

ಮನೆಯಲ್ಲಿ ಕೂತು ಓದಲಾಗದ ನಾನು ಪಾಠವನ್ನಾದರೂ ಕೇಳೋಣ ಎಂದು ಹೋಗಿದ್ದೆ. ಪಾಠವೇನೂ ಅಷ್ಟೊಂದು ಆಸಕ್ತಿದಾಯಕವಾಗಿರಲಿಲ್ಲ. ಸುಮ್ಮನೆ ಲೆಕ್ಚರರ್ ಹೇಳಿದ್ದನ್ನು ಕೇಳುತ್ತಾ, ನೋಟ್ಸ್ ಗೀಚುತ್ತಾ ಕುಳಿತಿದ್ದೆ. ಹೊರಗೆ ಆಚಾನಕ್ ಮಳೆ ಸುರಿಯಲಾರಂಭಿಸಿತು. ಸುಮಾರು ಮುಕ್ಕಾಲು ಘಂಟೆ ಕಳೆದ ಮೇಲೆ ಕ್ಲಾಸ್ ಮುಗಿಯಿತು. ಎಲ್ಲರೂ ಹೊರಗೆ ಬಂದೆವು. ಬೇಸಿಗೆಯಲ್ಲಿ ಮಳೆ ಬರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಯಾರ ಬಳಿಯೂ ಕೊಡೆ ಇರಲಿಲ್ಲ. ಕಾಲೇಜಿನ ಹಿಂದೇ ಹಾಸ್ಟೆಲ್ ಇದ್ದಿದ್ದರಿಂದ ೭ ಜನ ಹುಡುಗರೂ ಬೇಗ ಓಡಿ ಹೋಗಿ ರೂಮ್ ಸೇರಿಕೊಂಡುಬಿಟ್ಟರು. ೨ ಹುಡುಗಿಯರೂ ಅದೇ ಕೆಲಸ ಮಾಡಿದರು. ಉಳಿದ ಮೂವರು ಹುಡುಗಿಯರಲ್ಲಿ ಒಬ್ಬಳ ಬಳಿ ಸ್ಕೂಟಿ ಇತ್ತು. ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೊಬ್ಬಳನ್ನು ಕರೆದುಕೊಂಡು ಹೋಗಿಬಿಟ್ಟಳು. ಉಳಿದವರಿಬ್ಬರೇ: ನಾನು ಮತ್ತು ಆಕೆ.

ಹುಡುಗಿಯರನ್ನು ಕಂಡರೆ ನನಗೆ ಅದೆಂಥದೋ ಸಂಕೋಚವಿತ್ತು. ಎತ್ತಲೋ ನೋಡುತ್ತಾ ಸುಮ್ಮನೆ ನಿಂತಿದ್ದೆ. ೫ ನಿಮಿಷ ಆಕೆಯೂ ಸುಮ್ಮನೆ ನಿಂತಿದ್ದಳು. ಮೌನ ಆಕೆಗೆ ಬೇಸರ ತರಿಸಿರಬೇಕು. ಟೈಮ್ ಎಷ್ಟು ಎಂದು ಕೇಳಿದಳು. ಆಕೆಯತ್ತ ತಿರುಗಿ ೪:೪೦ ಎಂದೆ. ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ಚಿಂತೆ ಕಂಡು ಬಂದಿತ್ತು. ಎರಡು ನಿಮಿಷ ಮೌನ. ಮನೆ ಎಲ್ಲಿ ಎಂದು ಕೇಳಿದಳು. ಉತ್ತರಿಸಿ ಮತ್ತೆ ಸುಮ್ಮನಾದೆ. ಮತ್ತೆ ಎರಡು ನಿಮಿಷ ಮೌನ. ಆಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದರೂ ಮೆಕ್ಯಾನಿಕಲ್ ಆಗಿ ಉತ್ತರಿಸಿ ಸುಮ್ಮನೆ ಇದ್ದರೆ ತಪ್ಪಾದೀತೆಂದು ಆಕೆಯ ಮನೆಯ ಬಗ್ಗೆ ಕೇಳಿದೆ. ಇಲ್ಲೇ ವಿದ್ಯಾನಗರ ಎಂದಳು. ಕ್ಲಾಸ್ ಒಳಗೆ ಹೋಗಿ ಬೆಂಚ್ ಮೇಲೆ ಕುಳಿತು ಮಾತನಾಡೋಣ ಎಂಬಂತೆ ಸನ್ನೆ ಮಾಡಿದಳು. ಎಂದೂ ಹುಡುಗಿಯರ ಜೊತೆ ಸುಖಾಸುಮ್ಮನೆ ಮಾತನಾಡಿರಲಿಲ್ಲ. ಆಕೆ ಕರೆದ ಮೇಲೆ ಹೋಗಿ ಕೂರದೆ ಬೇರೆ ವಿಧಿಯಿರಲಿಲ್ಲ. ಸರಿ ಎಂದು ಹೋಗಿ ಕುಳಿತೆ.

ಆಕೆಯೇ ಮಾತು ಆರಂಭಿಸಿದಳು. ತನ್ನ ಮನೆಯ ಬಗ್ಗೆ, ತಾನು ಓದಿದ ಬಗ್ಗೆ, ತನಗೆ ಇಷ್ಟವಿರದಿದ್ದರೂ ಮನೆಯಲ್ಲಿ ಇಂಜಿನಿಯರಿಂಗಿಗೆ ಸೇರಿದ ಬಗ್ಗೆ... ಹೀಗೇ ಒಂದು ಘಂಟೆಯಾದರೂ ಕಳೆದಿರಬೇಕು. ಬಹುಶಃ ಆಕೆಯ ಮನಸ್ಸಿನಲ್ಲಿ ಇದ್ದಿದ್ದನ್ನು ಹೊರ ಹಾಕಲು ಆಕೆಗೆ ಯಾರಾದರೂ ಬೇಕಿತ್ತೇನೋ.

ಆಕೆ ಅಷ್ಟೊಂದು ಹೇಳುತ್ತಿದ್ದರೂ ನಾನು ಕೇಳುತ್ತಿದ್ದೆ ಬಿಟ್ಟರೆ ತಿರುಗಿ ಏನೂ ಕೇಳಿರಲಿಲ್ಲ. ಆಕೆ ನನ್ನ ಬಗ್ಗೆಯೂ ಏನೂ ಕೇಳಿರಲಿಲ್ಲ. ನನ್ನ ಮೌನ ಆಕೆಗೆ ಏನು ಅನಿಸಿಕೆ ಮೂಡಿಸಿತೋ. ಮಳೆ ಕಡಿಮೆಯಾಗಿದೆ ಹೋಗೋಣವೆ ಎಂದಳು. ಇಬ್ಬರೂ ಎದ್ದು ಹೊರಟೆವು.

ಸುಮ್ಮನೆ ಇಷ್ಟೊತ್ತು ಬೋರ್ ಹೊಡೆಸಿದೆನಾ ಎಂದು ಕೇಳಿದಳು. ಇಲ್ಲ ಎಂದು ಗೋಣಾಡಿಸಿದೆ. ಏನಾದರೂ ಹೇಳಿಕೊಳ್ಳುವುದಿದ್ದರೆ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದೆಂದು ತಿಳಿಸಿದೆ. ಸರಿ ಎಂದು ಮುಗುಳ್ನಕ್ಕಳು. ಆಕೆಯ ಮುಖ ಮೊದಲಿಗಿಂತ ಸ್ವಲ್ಪ ನಿರಾಳವಾಗಿದ್ದಂತೆ ಕಂಡು ಬಂದಿತು. ಪರಿಚಯ ಆಗಲೇ ಸ್ನೇಹಕ್ಕೆ ತಿರುಗಿತ್ತು.

ಆ ದಿನ ರಾತ್ರಿ ಮಲಗಿದಾಗ ನಿದ್ದೆ ಬರಲಿಲ್ಲ. ಆಕೆಯ ಇತಿಹಾಸವೇ ಮನಸ್ಸಿನಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿತ್ತು. ವ್ಯವಸ್ಥೆಯ ಮೇಲೆ ಕೋಪ ಉಕ್ಕುತ್ತಿತ್ತು.

ಪಿ.ಯು.ಸಿಯಲ್ಲಿ ಪಿ.ಸಿ.ಬಿ ೯೬% ತೆಗೆದಿದ್ದಳು. ಮೆಡಿಕಲ್ ಗೆ ಹೋಗಿ ಒಂದು ಉತ್ತಮ ವೈದ್ಯೆಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿದ್ದ ಆಕೆಯ ತಂದೆಗೆ ಬರುತ್ತಿದ್ದುದು ೫,೫೦೦ ರೂ. ಸಂಬಳ. ಅದರಲ್ಲೇ ಆಕೆ, ಆಕೆಯ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ - ಹೀಗೆ ೫ ಜನರ ಸಂಸಾರ ನಡೆಯಬೇಕಿತ್ತು. ತಾಯಿ ತೀರಿಕೊಂಡು ೩ ವರ್ಷ ಆಗಿತ್ತಂತೆ. ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಆಕೆಯ ಮೇಲೆ ಬಿದ್ದಿತ್ತು. ಸರ್ಕಾರ-ಖಾಸಗಿ ಕಾಲೇಜುಗಳ ಜಗಳದಿಂದಾಗಿ ಮೆಡಿಕಲ್ ಸೀಟು ಕೈಗೆಟುಕದಂತಾಗಿತ್ತು.

ಮತ್ತೆ ಆಕೆ ಸಿಕ್ಕಿದ್ದು ಮಂಗಳವಾರ. ಸೋಮವಾರ ತಮ್ಮನಿಗೆ ಏನೋ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳಂತೆ. ಅದಾದ ಮೇಲೆ ಪರೀಕ್ಷೆ, ರಜೆ ಬಂದಿದ್ದರಿಂದ ಮತ್ತೆ ೨ ತಿಂಗಳು ಆಕೆ ಸಿಗಲೇ ಇಲ್ಲ.

ಮೂರನೆಯ ಸೆಮಿಸ್ಟರ್ ಪ್ರಾರಂಭವಾದ ಮೇಲೆ ಆಕೆಯದು ಬೇರೆ ಬ್ರಾಂಚ್ ಆಗಿದ್ದರಿಂದ ಬೇರೆ ಎಲ್ಲಿಯೋ ಇರುತ್ತಿದ್ದಳು. ಆಗಾಗ ಅಲ್ಲಲ್ಲಿ ಕಂಡಾಗ ಮುಗುಳ್ನಗುತ್ತಿದ್ದಳು. ಒಮ್ಮೆ ರೀಡಿಂಗ್ ರೂಮಿನಲ್ಲಿ ಸಿಕ್ಕಾಗ ತನ್ನ ತಂದೆಗೆ ಬಡ್ತಿ ಸಿಕ್ಕಿದೆಯೆಂದೂ, ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯೆಂದೂ ತಿಳಿಸಿದ್ದಳು. ನಂತರ ಎಷ್ಟೋ ದಿನಗಳ ಕಾಲ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಬಹಳ ದಿನಗಳ ಮೇಲೆ ಹೀಗೇ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದಾಗ ಆಕೆಯ ವಿಷಯ ಬಂದಿತು. ಆಕೆ ಇಂಜಿನಿಯರಿಂಗ್ ಅನ್ನು ಬಿಟ್ಟುಬಿಟ್ಟಿದ್ದಳಂತೆ. ತಮ್ಮನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹಣ ಬೇಕಿದ್ದರಿಂದ ಎಲ್ಲಿಯೋ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ...

ಹೌದು, ಸ್ವಲ್ಪ ದಿನಗಳ ಹಿಂದೆ ತಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ೯೭% ತೆಗೆದಿದ್ದಾನೆ ಎಂದು ಹೇಳಿ ಸ್ವೀಟ್ ಕೊಟ್ಟು ಖುಷಿ ಪಟ್ಟಿದ್ದಳು. ಈಗ ಅದೇ ತಮ್ಮನಿಗಾಗಿ ತನ್ನ ವಿದ್ಯಾಭ್ಯಾಸ ತ್ಯಜಿಸಿದ್ದಳು. ಅದೇ ಕೊನೆ, ಅದಾದ ಮೇಲೆ ಆಕೆ ನನಗೆ ಕಾಣಲೇ ಇಲ್ಲ.
***

"ಕುಡ್ದಾಗಿದ್ರೆ ಲೋಟ ತಂದು ಕೈಸಾಲೆಲ್ಲಿ ಇಡು" ಎಂದು ಅಮ್ಮ ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದು. ಕಾಫಿ ತಣ್ಣಗಾಗಿತ್ತು. ಮಳೆ ನಿಂತಿತ್ತು. ಕಣ್ಣಿನಲ್ಲಿ ಹನಿ ಮೂಡಿತ್ತು.

23 ಕಾಮೆಂಟ್‌ಗಳು:

ಮನಸ್ವಿ ಹೇಳಿದರು...

ಸ್ನೇಹಿತರ ಹತ್ತಿರ ನಮ್ಮೆಲ್ಲ ನೋವು, ನಲಿವು, ಹಂಚಿಕೊಳ್ಳಬಹುದು, ನೆನಪುಗಳೇ ಹಾಗೆ, ಕಾಡುತ್ತಲೇ ಇರುತ್ತವೆ, ಬರಹ ಇಷ್ಟವಾಯಿತು...

ಸಂದೀಪ್ ಕಾಮತ್ ಹೇಳಿದರು...

ಮಳೆಗಾಲದಲ್ಲಿ ರೋಮಾಂಟಿಕ್ ಕಥೆ ಹೇಳ್ತೀಯಾ ಅಂದುಕೊಂಡ್ರೆ ಅಳು ಬರೋ ಕಥೆ ಹೇಳ್ತೀಯಲ್ಲಪ್ಪ:(
ಓಹ್ ಸಾರಿ ಅದು ಕಥೆ ಅಲ್ಲ ಅಲ್ವ??

Sushrutha Dodderi ಹೇಳಿದರು...

ನಾನೂ ರೋಮಾಂಟಿಕ್ ಕಥೇನೇ ಅಂದ್ಕೊಂಡು ಓದ್ತಾ ಹೋದೆ.. ಆಮೇಲ್ ನೋಡಿದ್ರೆ ಮಳೆಹನಿ: ಕಣ್ಣಲ್ಲಿ.. :(

Harisha - ಹರೀಶ ಹೇಳಿದರು...

ಆದಿತ್ಯ, ಧನ್ಯವಾದ :-)

ಸಂದೀಪ್, ಮಳೆಗಾಲದಲ್ಲಿ ರೊಮ್ಯಾಂಟಿಕ್ ಕಥೆ ಕೇಳಿ ಕೇಳಿ ಬೋರ್ ಆಗಿರುತ್ತೆ ಅಂತಾನೆ ಇದನ್ನ ಬರ್ದಿದ್ದು... ಅಂದ ಹಾಗೆ ಇದು ನಡೆದ ಘಟನೆ ಅಲ್ಲ, ಕಥೆನೇ!

ಸುಶ್ರುತ, ಕಣ್ಣಲ್ಲಿ ಹನಿ ಬಂದ್ರೆ ನಾ ಬರ್ದಿದ್ದು ಸಾರ್ಥಕ.. :-)

ಸಂದೀಪ್ ಕಾಮತ್ ಹೇಳಿದರು...

ಹರೀಶ ಕಣ್ಣೀರಲ್ಲಪ್ಪ ಧೂಳು ಹೋಗಿತ್ತು !
.
.
.
ಥತ್ ಹುಡುಗ್ರಿಗೆ ಅಳೋಕೂ ಸ್ವಾತಂತ್ರ್ಯ ಇಲ್ವಲ್ಲಪ್ಪ:(

sunaath ಹೇಳಿದರು...

ಕತೆಯ ರಚನೆ ಚೆನ್ನಾಗಿದೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ...
ಚಂದದ ಕಥೆ. ಕಥೆಯೇ ಆದರೂ ಎಷ್ಟು ವಾಸ್ತವ! ನೈಜತೆಯಿದೆ ಕಥೆಯೊಳಗೆ. ಕಥೆಯ ಅಂಚು ಇಷ್ಟುವಾಯಿತು.
ಕಥೆಯ ಮುಕ್ತಾಯ ಮುಗಿಯದೆ ಮನದೊಳಗೆ ಉಳಿದುಬಿಡುತ್ತದೆ.

Raveesh Kumar ಹೇಳಿದರು...

ಹರೀಶ್ ರವರೇ, ಕೊನೇಲಿ ಕತೇನ ದುರ೦ತ ಮಾಡಿ ಬಿಟ್ಟಿರಲ್ಲ. ಅದೇನೆ ಇರಲಿ ನಿರೂಪಣೆ ಇಷ್ಟವಾಯಿತು.

Harisha - ಹರೀಶ ಹೇಳಿದರು...

ಸಂದೀಪ್, ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು! ನಿಮ್ಮಿಷ್ಟ ಬಂದಷ್ಟು ಅಳಿ!

ಸುನಾಥ್, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಬರುತ್ತಿರಿ :-)

ಶಾಂತಲಕ್ಕ, ನನ್ನ ಕಾಲೇಜಿನಲ್ಲೇ ನಡೆದ ಯಾವುದೋ ಘಟನೆ ಬರ್ಯಕ್ಕೆ ಹೋಗಿ ಏನೋ ಆಗಿ ಕೊನೆಗೆ ಕಥೆ ಬರ್ದಿಟ್ಟಿ.. ಬರ್ತಾ ಇರು :D

ರವೀಶ್, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.. ಬರುತ್ತಿರಿ :-)

ರೂpaश्री ಹೇಳಿದರು...

"ಇದು ನಡೆದ ಘಟನೆ ಅಲ್ಲ, ಕಥೆನೇ!" ಅಂತಾ ನೀವ್ ಹೇಳ್ ಬಿಟ್ಟ್ರಿ.. ಆದ್ರೆ ನನ್ನ ಹೈಸ್ಕೂಲ್ ಸಹಪಾಠಿ ರೇವತಿಯ ಕಥೆ ಹೀಗೆ ಆಯ್ತು, ಇಂಜಿನೀಯರಿಂಗ್ ಸೇರಿದ್ದ ಅವಳು ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅದನ್ನು ಬಿಟ್ಟು ಕೆಲಸಕ್ಕೆ ಸೇರಿದಳು. ಈಗವಳ ತಮ್ಮ ಇಂಜಿನೀಯರ್, ತಂಗಿ ಡಾಕ್ಟರ್ ಆಗಿದ್ದಾರೆ.
ನೀವು ಕಥೆ ಹೇಳುವ ಶೈಲಿ ಚೆನ್ನಾಗಿದೆ ಹರೀಶ್:)

Harisha - ಹರೀಶ ಹೇಳಿದರು...

ರೂಪಶ್ರೀ ಅವರೇ, ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ನಾನು ಕಲ್ಪಿಸಿಕೊಂಡು ಕಥೆ ಬರೆದಿದ್ದು ಇದೆ ಮೊದಲು. ಇಂಥ ಘಟನೆ ನಡೆಯಬಹುದು ಎನಿಸಿತು. ಹಾಗೇ ಬರೆದುಬಿಟ್ಟೆ. ಆದರೆ ನಿಮ್ಮ ಗೆಳತಿಯ ಬದುಕಿನಲ್ಲಿ ಇಂಥದ್ದೇ ಪ್ರಸಂಗ ನಡೆದಿದೆ ಎಂದು ನೀವು ಹೇಳಿದ ಮೇಲೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ನಿಮ್ಮ ಗೆಳತಿ ರೇವತಿಯವರ ತ್ಯಾಗ ಮನೋಭಾವಕ್ಕೆ ನನ್ನದೊಂದು ನಮನ.

ಸಂದೀಪ್ ಕಾಮತ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Harisha - ಹರೀಶ ಹೇಳಿದರು...

ಸಂದೀಪ್, ಮಿಂಚಂಚೆ ಕಳಿಸಿದ್ದೇನೆ... ನಿಮ್ಮ ಇಮೇಲ್ ಐಡಿ ಇಲ್ಲಿದ್ದರೆ ಸ್ಪ್ಯಾಮ್ ಆಗುವ ಸಂಭವವಿದೆ... ಬೇಕಿದ್ದರೆ ಡಿಲೀಟ್ ಮಾಡಿ..

ತೇಜಸ್ವಿನಿ ಹೆಗಡೆ ಹೇಳಿದರು...

ಹರೀಶ್,

ಕಥಾ ನಿರೂಪಣೆ ತುಂಬಾ ಇಷ್ಟವಾಯಿತು. ಕಥೆ ಕೊನೆಯವರೆಗೂ ಒಂದು ಕುತೂಹಲವನ್ನುಳಿಸಿಕೊಂಡಿದೆ. ಇದನ್ನು ಕಥೆಯೆಂದು ಹೇಳಿದರೂ ಅದೆಷ್ಟೋ ಹುಡಗ/ಹುಡಿಗಿಯರು ಬೇರೆ ಬೇರೆ ಕಾರಣಗಳಿಂದಾಗಿ ಈ ರೀತಿ ತಮ್ಮ ಕನಸುಗಳನ್ನು ಬಲಿಕೊಡುತ್ತಿರುತ್ತಾರೆ. ಹಾಗಾಗಿ ಇದನ್ನು ವಾಸ್ತವತೆಯೊಳಗಣ ಕಥಾಚಿತ್ರಣವೆನ್ನಬಹುದೇನೋ!!

Harisha - ಹರೀಶ ಹೇಳಿದರು...

ತೇಜಕ್ಕಾ, ಕಥೆ ಇಷ್ಟವಾಗಿದ್ದು ಸಂತೋಷ. ಇದನ್ನು ಯಾವ categoryಗೆ ಸೇರ್ಸ್ಲಕ್ಕು ಓದುಗರೇ ನಿರ್ಧರಿಸುವುದು ಒಳ್ಳೆಯದು. ಒಂದಂತೂ ನಿಜ, ಇದು ನಡೆದಿದ್ದಲ್ಲ :-)

shivu.k ಹೇಳಿದರು...

ಹರೀಶ್ ಒಳ್ಳೆ ರೊಮ್ಯಾಂಟಿಕ್ ಕಥೆ ಹೇಳುತ್ತಾ ಹಾಗೆ ಮೇಲೆ ತೇಲಿಸಿ ಕೊನೆಯಲ್ಲಿ ವಾಸ್ತವಕ್ಕೆ ಕರೆದುಕೊಂಡು ಬಂದು ಕೆಳಗೆ ಬೀಳಿಸಿಬಿಟ್ಟಿರಲ್ಲ! ಕುತೂಹಲದಿಂದ ಸಾಗುತ್ತದೆ ಕೊನೆಯವರೆಗೆ.
ಶಿವು.ಕೆ

Harisha - ಹರೀಶ ಹೇಳಿದರು...

ಶಿವು, ಕಥೆ ನಿಮಗಿಷ್ಟವಾದದ್ದು ಸಂತೋಷ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಅಂತರ್ವಾಣಿ ಹೇಳಿದರು...

Flashback kathe chanda ide maaraayare...

Unknown ಹೇಳಿದರು...

ನಮ್ಮ ದೇಶದಲ್ಲಿ ಇಂತಹ ಎಷ್ಟೋ ಹೆಣ್ಣು ಮಕ್ಕಳು ಇರುತ್ತಾರೆ. ಬದುಕಿನಲ್ಲಿ ತೀರಾ ಎಂತಹ ತ್ಯಾಗಕ್ಕೂ ಸಿದ್ದವಾಗಿ ನಿಲ್ಲೋದು ಹೆಣ್ಣೆ.ತಂದೆ,ತಾಯಿ,ಬಂಧು-ಭಾಂಧವರೊಡನೆ ಹೇಳಲಾಗದ ಎಷ್ಟೋ ವಿಷಯಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು.ನಿಜಕ್ಕೂ ತುಂಬಾ ಚೆನ್ನಾಗಿದೆ.

Shrinidhi Hande ಹೇಳಿದರು...

ನಮ್ಮ ದೇಶದಲ್ಲಿ ಸಾವಿರಾರು ಜನರು ಇ೦ತಹ ಕಾರಣ ಗಳಿಂದಾಗಿ ವಿಧ್ಯಾಭ್ಯಾಸ ತ್ಯಜಿಸುತ್ತಾರೆ. ಅದರಲ್ಲೂ ಹುಡುಗಿಯರನ್ನು ಮೊದಲು ಬಲಿ ಕೊಡಲಾಗುತ್ತದೆ. ಇದಕ್ಕೇನಾದರೂ ಪರಿಹಾರ ಸಾಧ್ಯವೇ?

Soumya. Bhagwat ಹೇಳಿದರು...

ವಾಸ್ತವಕ್ಕೆ ತೀರಾ ಹತ್ತಿರವಿರುವ ಕಥೆ.

ಅನು. ಹೇಳಿದರು...

ನೈಜ ಘಟನೆಗಳಿಗೆ ತುಂಬಾ ಹತ್ತಿರವಾಗಿ,ನಿನ್ನ ಮನದಾಳದ ಮಾತುಗಳಿಗೆ ಜೀವ ತುಂಬಿದಂತೆ, ಕಥೆ...ಬರೀ ಕಥೆಯಾಗಿರದೇ ಮುಂದೇನೋ ಹೇಳಲು ಮಾತುಗಳು ತಡವರಿಸುತ್ತಿದೆಯೇನೋ ಅನಿಸುವಸ್ಟರಲ್ಲಿ ಮುಕ್ತಾಯ ಮಾಡಿದ ಕಥೆಯ ಹಂದರ ಸೊಗಸಾಗಿದೆ..ನಮ್ಮ ನಡುವೆ ಇಂತಹ ತ್ಯಾಗಮಯಿಗಳು ಇರುವುದೂ ಅಸ್ಟೇ ನಿಜ..

Harisha - ಹರೀಶ ಹೇಳಿದರು...

@ಅಂತರ್ವಾಣಿ, ಧನ್ಯವಾದ ಜಯಶಂಕರ್.. ಅಂತರ್ವಾಣಿ ಯಾಕೋ ಸುಮ್ಮನಾದಹಾಗಿದೆ?

@usha, ಹೌದು ಉಷಾ ಅವರೇ.. ಸ್ನೇಹಿತರ ಬಳಿ ಹೇಳಿಕೊಳ್ಳುವಷ್ಟು ಬಂಧು-ಬಾಂಧವರಲ್ಲಿ ಹೇಳಿಕೊಳ್ಳಲಾಗುವುದಿಲ್ಲ

@Shrinidhi Hande, ನೀವೇ ಏನಾದ್ರೂ ಯೋಚಿಸಬೇಕು ಶ್ರೀನಿಧಿ ಅವರೇ.. :-)

@Soumya. B, ಧನ್ಯವಾದ.. ಬ್ಲಾಗಿಗೆ ಬರುತ್ತಿರಿ

@kavana, ಹೌದು.. ಹೆಣ್ಣನ್ನು ತ್ಯಾಗಮಯಿ ಎಂದೇ ಬಿಂಬಿಸಲಾಗುತ್ತದೆ.. ಮತ್ತು ಅದು ಸತ್ಯ ಕೂಡ..