ಮತ್ತದೇ ಏಕತಾನತೆಯಿಂದ ಬೇಸರವಾಗಿತ್ತು. ಮುಂದಿನ ಪಯಣಕ್ಕೆ ಸ್ಥಳ ಹುಡುಕಾಟ ಪ್ರಾರಂಭವಾಗಿತ್ತು. ಕಾಲೇಜಿನಲ್ಲಿದ್ದಾಗ ಜೋಗ ಪ್ರವಾಸ ತಪ್ಪಿಸಿಕೊಂಡಿದ್ದ ವಿಜಯ್-ವಿನಯ್ ಗೆ ಈಗ ಅಲ್ಲಿಗೆ ಹೋಗುವ ತೆವಲು ಬಂದುಬಿಟ್ಟಿತ್ತು. ಮಳೆಗಾಲ ಆಗಷ್ಟೆ ಆರಂಭವಾಗಿದ್ದರಿಂದ ಲಿಂಗನಮಕ್ಕಿ ಇನ್ನೂ ತುಂಬಿರಲಿಲ್ಲ. ಜೋಗದಲ್ಲಿ ನೀರಿರದಿದ್ದರೆ ಮಳೆಯಲ್ಲಿ ನೆನೆಯಲು ಅಲ್ಲಿಗೆ ಹೋದಂತಾಗುವುದಿಲ್ಲವೇ? ಹಾಗಾಗಿ ಗುಡ್ಡಬೆಟ್ಟ ಸುತ್ತುವುದು, ದೊಡ್ಡ ಜಲಪಾತಗಳಿಗೆ ಹೋಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಸುಮಾರು ಗೂಗ್ಲಿಂಗ್ ಮಾಡಿ ರಂಗನತಿಟ್ಟು, ಬಲಮುರಿಗೆ ಹೋಗಿ ಬಂದರೆ ಹೇಗೆ ಎಂದು ಕೇಳಿ ಕೆಲವರಿಗೆ ಮೇಲ್ ಕಳಿಸಿದೆ. ಒಂದರ್ಧ ಘಂಟೆಯಲ್ಲಿ ಸಕಾರಾತ್ಮಕ ಉತ್ತರ ಬಂತು. ಪ್ರವಾಸ ಇಷ್ಟ ಪಡುವವರೇ ಹಾಗೆ, ತಕ್ಷಣ ಓಕೆ ಅಂದುಬಿಡುತ್ತಾರೆ...
ನಾನು, ವಿಜಯ್, ವಿನಯ್ ಸ್ಥಳ ನಿರ್ಧರಿಸಿದೆವು. ಚಂದ್ರಕಾಂತ ಮತ್ತು ಅವನ ತಮ್ಮ ಕೂಡ ಬರಲೊಪ್ಪಿದರು. ಗುರುವಾರ ಸಂಜೆ ಕೆಲವರಿಗೆ ಫೋನ್ ಮಾಡಿ ತಿಳಿಸಿದೆವು. ಸೋಮ ಬರುತ್ತೇನೆಂದ. ಪ್ರವೀಣ ಊರಿಗೆ ಹೋಗಬೇಕಾದ್ದರಿಂದ ಬರಲಾಗುವುದಿಲ್ಲವೆಂದ. ಅಷ್ಟಕ್ಕೆ ಬಿಡಬಾರದೇ... ರಂಗನತಿಟ್ಟಿನಲ್ಲಿ ನೀರು ಹೆಚ್ಚಾಗಿ ಬೋಟಿಂಗಿಗೆ ಬಿಡುತ್ತಿಲ್ಲ ಎಂದು ತಲೆಯಲ್ಲಿ ಹುಳ ಬಿಟ್ಟ. ಏನೇ ಆದರೂ ಅಲ್ಲಿಗೆ ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದೆವು. ಸಂತೋಷ್ ಜೊತೆ ಚಾಟ್ ಮಾಡುತ್ತಿದ್ದ ನಾನು ಅವನನ್ನೂ ಕೇಳಿದೆ. ಅವನು ಕ್ಷಣವೂ ಯೋಚಿಸದೆ ಬರುತ್ತೇನೆ ಎಂದಿದ್ದು ನೋಡಿ ನನಗೂ ಆಶ್ಚರ್ಯವಾಯಿತು. ಬೆಂಗಳೂರು ಎಲ್ಲರ ಮೇಲೂ ತನ್ನ ಪ್ರಭಾವ ಬೀರಿದೆ ಎಂದುಕೊಂಡೆ. ಇನ್ನೂ ಕೆಲವರಿಗೆ ಏನೇನೋ ತೊಂದರೆಗಳಿದ್ದವಾದ್ದರಿಂದ ಬರಲಾಗುವುದಿಲ್ಲ ಎಂದರು.
ಸರಿ, ಶನಿವಾರ ಬೆಳಿಗ್ಗೆ ೬:೩೦ ರ ರೈಲಿನಲ್ಲಿ ಹೋಗುವುದು ಎಂದು ಎಲ್ಲರಿಗೂ ತಿಳಿಸಿದೆವು. "೫ ಘಂಟೆಗೆ ಮನೆ ಬಿಟ್ಟುಬಿಡು, ಬಸ್ ಸಿಕ್ಕಿ ಅಲ್ಲಿಗೆ ಬರುವಷ್ಟರಲ್ಲಿ ೬ ಆಗಿರುತ್ತದೆ" ಎಂದು ವಿನಯ್ ತನ್ನ ಲಾಜಿಕ್ ಮಂಡಿಸಿದ. ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ನನಗೂ ಗೊತ್ತು. ಆದರೆ ಹ್ಞೂ ಎನ್ನಲು ನನ್ನ ಗಂಟೇನು ಹೋಗಬೇಕು? ಸರಿ ಎಂದು ೫ ಕ್ಕೆ ೫ ನಿಮಿಷ ಇರುವಾಗ ಅಲಾರಂ ಇಟ್ಟು ಮಲಗಿದೆ.
ಬೆಳಿಗ್ಗೆ ಎದ್ದು ಇನ್ನೂ ಬಾತ್ರೂಮ್ಗೆ ಹೋಗಿದ್ದೆನಷ್ಟೇ.. ಮೊಬೈಲ್ ಹೊಡೆದುಕೊಳ್ಳಲಾರಂಭಿಸಿತು. ಹೊರಗೆ ಬರುವಂತಿಲ್ಲವಲ್ಲ!! ಎಲ್ಲ ಮುಗಿಸಿ ಹೊರ ಬರುವಷ್ಟರಲ್ಲಿ ೫:೧೫ ಆಗಿತ್ತು. ತಿರುಗಿ ಫೋನ್ ಮಾಡಿದೆ. ಅವರಿನ್ನೂ ರೆಡಿಯಾಗುತ್ತಿದ್ದರು. ಸಂತೋಷನಿಗೆ ಆರಾಮ್ ಇಲ್ಲ, ಹಾಗಾಗಿ ಬರುವುದಿಲ್ಲ ಎಂದು ತಿಳಿಯಿತು.
ಅಂತೂ ಇಂತೂ ೫:೪೫ ಸುಮಾರಿಗೆ ಬಸ್ ಹತ್ತಿ ಮತ್ತೆ ಫೋನ್ ಮಾಡಿದೆ. ಆಗಷ್ಟೆ ಅವರೆಲ್ಲ ಮನೆ ಬಿಟ್ಟಿದ್ದರು. ಸಿ.ವಿ.ರಾಮನ್ ನಗರದಿಂದ ಮೆಜೆಸ್ಟಿಕ್ಗೆ ಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆ ಬೇಕು. ರೈಲು ಸಿಕ್ಕ ಹಾಗೆ! ಕರ್ಮಕಾಂಡ ಎಂದುಕೊಳ್ಳುತ್ತಾ ಸೋಮನಿಗೆ ಫೋನ್ ಮಾಡಿದರೆ ಎತ್ತುತ್ತಲೇ ಇಲ್ಲ ಆಸಾಮಿ!!
ನಾನು ಮೆಜೆಸ್ಟಿಕ್ಗೆ ಹೋಗಿ ರೈಲಿನ ಬಗ್ಗೆ ವಿಚಾರಿಸಿದೆ. ೬:೩೦ಕ್ಕೆ ಒಂದು, ೭:೦೦ಕ್ಕೆ ಒಂದು ರೈಲಿರುವುದು ತಿಳಿಯಿತು. ಅಷ್ಟರಲ್ಲಿ ಸೋಮ ಬಂದ. ಉಳಿದ ನಾಲ್ವರು ಇನ್ನೂ ಬರಬೇಕಾಗಿದ್ದರಿಂದ ಮೊದಲ ರೈಲಿನ ಆಸೆ ಬಿಟ್ಟೆವು. ಸೋಮ ನಾನು ಟಿಕೆಟ್ ತೆಗೆಸಲು ಸಾಲಿನಲ್ಲಿ ನಿಂತಿದ್ದಾಗ ವಿಜಯ್-ವಿನಯ್-(ಚಂದ್ರ)ಕಾಂತ-ಪ್ರಶಾಂತರ ಆಗಮನವಾಯಿತು. ಶ್ರೀರಂಗಪಟ್ಟಣಕ್ಕೆ ಟಿಕೆಟ್ ತೆಗೆಸಿ ಪ್ಲಾಟ್ಫಾರ್ಮ್ ಹುಡುಕುವಷ್ಟರಲ್ಲಿ ರೈಲು ಬಂದಿತು.
ಅದೇ ತೂತುಕುಡಿ (Tuticorin) ಎಕ್ಸ್ಪ್ರೆಸ್.
ಮೆಜೆಸ್ಟಿಕ್ನಲ್ಲಿ ರೈಲು ನಿಂತಿದ್ದಾಗ ಮೀನಿನ ಕೆಟ್ಟ ವಾಸನೆ ಹೊಡೆಯುತ್ತಿದ್ದುದನ್ನು ಬಿಟ್ಟರೆ ಏನೂ ತೊಂದರೆಯಾಗಲಿಲ್ಲ. ರೈಲಿನಲ್ಲಿಯೇ ತಿಂಡಿ ತಿಂದೆವು. ಮೂರೂವರೆ ತಾಸಿನ ಪಯಣದ ನಂತರ ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣ ಬಂತು. ಅಲ್ಲಿ ಇಳಿದು ಆಚೆ-ಈಚೆ ನೋಡಿದೆವು. ರೈಲಿನ ಬ್ರಿಡ್ಜ್ ಕಂಡಿತು. ರೈಲು ಹೋದ ಮೇಲೆ ಅದರ ಹಿಂದೆ ನಾವೂ ಹೋದೆವು. ಅಲ್ಲಿನ ನೋಟ ಸುಂದರವಾಗಿತ್ತು. ರಂಗನತಿಟ್ಟಿಗೆ ಹೋಗುವ ದಾರಿಯನ್ನು ಕೇಳಿ ನಮ್ಮ ಚಾರಣ ಆರಂಭಿಸಿದೆವು.
ಹರಟುತ್ತಾ ನಡೆಯುತ್ತಿದ್ದರೆ ದಾರಿ ಸವೆಸಿದ್ದೆ ತಿಳಿಯುವುದಿಲ್ಲ. ಬಹುಬೇಗ ೪ ಕಿಲೋಮೀಟರ್ ನಡೆದಿದ್ದೆವು. ರಂಗನತಿಟ್ಟು ಬಂದಿತ್ತು. ಎಲ್ಲರೂ ಟಿಕೆಟ್ ತೆಗೆದುಕೊಂಡು ಒಳಗೆ ಹೋದೆವು. ಬೋಟಿಂಗ್ ನಡೆಯುತ್ತಿತ್ತು. ನದಿಯಲ್ಲಿ ನೀರು ಹೆಚ್ಚುತ್ತಿತ್ತು. ನಾವು ಬೋಟಿಂಗಿಗೆ ಈಗ ಹೋಗುವುದೋ ನಂತರ ಹೋಗುವುದೋ ಎಂದು ಯೋಚಿಸುತ್ತಾ ಹೋಗುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ "ಹೋಗುವುದಾದರೆ ಬೇಗ ಹೋಗಿ, ನೀರು ಹೆಚ್ಚುತ್ತಿದೆ. ಸದ್ಯದಲ್ಲೇ ಬೋಟಿಂಗ್ ನಿಲ್ಲಿಸುತ್ತಾರೆ" ಎಂದರು.
ಸದ್ಯ ಸಿಕ್ಕಿತಲ್ಲ ಬೋಟಿಂಗ್ ಎಂಬ ಖುಷಿಯಲ್ಲಿ ಮೊದಲು ಬೋಟಿಂಗ್ ಮುಗಿಸಿದೆವು. ಇದ್ದ ಒಂದು ೧೦ ಬಗೆಯ ಪಕ್ಷಿಗಳನ್ನು, ಮೊಸಳೆಗಳನ್ನು ನೋಡಿ ದಡಕ್ಕೆ ಬಂದೆವು. ಹೊರಡುವಾಗ ಇದ್ದಿದ್ದಕ್ಕಿಂತ ಹೆಚ್ಚು ನೀರು ಬಂದಿತ್ತು. ನಮ್ಮದೇ ಕಡೆಯ ದೋಣಿ.. ನೀರಿನ ಸೆಳೆತ ಹೆಚ್ಚಿದ್ದರಿಂದ ಅದಾದ ನಂತರ ಯಾರನ್ನೂ ಬಿಡಲಿಲ್ಲ. ನಮ್ಮ ಅದೃಷ್ಟವನ್ನು ಮೆಚ್ಚಿಕೊಳ್ಳುತ್ತಾ ಮುಂದೆ ನಡೆದೆವು. ಬೋಟಿಂಗ್ ಇಲ್ಲ ಎಂದು ಹಿಂದಿನ ದಿನ ಹುಳ ಬಿಟ್ಟಿದ್ದ ಪ್ರವೀಣನಿಗೆ ಸೋಮನಿಂದ ಫೋನಾಯಣ. ಪಕ್ಷಿಗಳನ್ನು, ಬೋಟಿಂಗ್ ನಲ್ಲಿ ಬಂದ ಮಜವನ್ನು ಸ್ವಲ್ಪ ಹೆಚ್ಚೇ ಎಂಬಂತೆ ವರ್ಣಿಸಿ ಆದಷ್ಟೂ ಆತನ ಹೊಟ್ಟೆ ಉರಿಸಿದ್ದಾಯಿತು.
ನಂತರ ಅಲ್ಲಿಯೇ ಊಟ ಮುಗಿಸಿ ನದಿಯ ಪಕ್ಕದಲ್ಲಿದ್ದ ಕುಟೀರದಲ್ಲಿ ಕುಳಿತೆವು. ನದಿಯ ಜುಳು-ಜುಳು ನಾದ ಹಿತವಾಗಿತ್ತು. ವಿಜಯ ಅಲ್ಲೇ ನದಿಯ ಪಕ್ಕದಲ್ಲಿ ತಾನೊಂದು ಮನೆ ಕಟ್ಟಿದರೆ ಹೇಗೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಭಿಸಿದ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮರಳಿ ಶ್ರೀರಂಗಪಟ್ಟಣಕ್ಕೆ ಹೊರಟೆವು. ನಮ್ಮ ಬದುಕಿನ ಬಗ್ಗೆ ಹರಟುತ್ತಾ ಅಲ್ಲಲ್ಲಿ ನಿಲ್ಲುತ್ತಾ ಅಂತೂ ಪಟ್ಟಣ ತಲುಪಿದೆವು.
ಅಲ್ಲಿ ಹೋಗಿ ಬಲಮುರಿ ಎಷ್ಟು ದೂರ ಎಂದು ಕೇಳಿದರೆ ೧೯ ಕಿ.ಮೀ. ಎಂದು ಹೇಳಬೇಕೆ? ಸಮಯ ಸುಮಾರು ೩ ಆಗಿತ್ತು. ಸೋಮನಿಗೆ ಬೇರೆ ದಾವಣಗೆರೆಗೆ ಹೋಗಬೇಕಿತ್ತು. ಇನ್ನೇನು ಮಾಡುವುದು? ಸರಿ ಶ್ರೀರಂಗಪಟ್ಟಣವನ್ನೇ ನೋಡಿ ಹೋದರಾಯಿತು ಎಂದು ಎರಡು ರಿಕ್ಷಾಗಳನ್ನು ಹಿಡಿದು ಹೊರಟೆವು.
ಟಿಪ್ಪು ಮಡಿದ ಜಾಗ, ಅವನ ಕಾರಾಗೃಹ ಮುಂತಾದ ಸ್ಥಳಗಳನ್ನು ನೋಡಿ ಮುಂದೆ ಹೋದೆವು. ಅವನ ಬೇಸಿಗೆ ಅರಮನೆಯಾಗಿದ್ದ ದರಿಯಾ ದೌಲತ್ ಈಗ ವಸ್ತುಸಂಗ್ರಹಾಲಯವಾಗಿದೆ. ನಾಣ್ಯಗಳು, ಖಡ್ಗಗಳು, ಚಿತ್ರಗಳು, ಬಂದೂಕುಗಳು ಹೀಗೆ ಎಲ್ಲವನ್ನೂ ನೋಡುತ್ತಾ ಹೊರಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆಯಾಗಿರಬೇಕು. ಅಲ್ಲೇ ಸುತ್ತಲಿರುವ ಉದ್ಯಾನದಲ್ಲಿ ಸ್ವಲ್ಪ ಸಮಯ ಕೂತು ಟಿಪ್ಪು ಸುಲ್ತಾನ್, ಆತನ ತಾಯಿ, ತಂದೆ ಹೈದರಾಲಿ ಮತ್ತಿತರನ್ನು ಹೂತಿರುವ ಜಾಗವಾದ ಗುಂಬಜ್ ಗೆ ಹೋಗಿ, ಸುಂದರ ಗುಮ್ಮಟವನ್ನೂ ಟಿಪ್ಪುವಿನ ಸಮಾಧಿಯನ್ನೂ ನೋಡಿ ಮುಂದೆ ಸಂಗಮಕ್ಕೆ ಹೋದೆವು.
ಎಲ್ಲ ಸ್ಥಳಗಳ ಭೇಟಿ ಮುಗಿಸಿ ರೈಲ್ವೆ ನಿಲ್ದಾಣಕ್ಕೆ ಹೋಗುವಷ್ಟರಲ್ಲಿ ಮೈಸೂರಿಗೆ ಹೋಗುವ ರೈಲು ಹೋಗಿಬಿಟ್ಟಿತ್ತು. ಸೋಮ ಸುಮಾರು ಎರಡು ಕಿಲೋಮೀಟರ್ ದೂರದ ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹಿಡಿಯಬೇಕಿತ್ತು. ಆದರೆ ಸದ್ಯದಲ್ಲೇ ಬೆಂಗಳೂರಿಗೆ ಹೋಗುವ ರೈಲು ಬರಲಿದೆ ಎಂದು ತಿಳಿಯಿತು. ತಡಮಾಡದೆ ಅದರಲ್ಲಿ ಹೋಗುವುದು ಎಂದು ನಿರ್ಧರಿಸಿದೆವು. ವಿಜಯ ಕೆ.ಆರ್.ಪುರಂ ಗೆ ಟಿಕೆಟ್ ತೆಗೆಸೋಣ ನಮ್ಮೆಲ್ಲರ ಮನೆಗೂ ಹತ್ತಿರವಾಗುತ್ತದೆ ಎಂದ. ಸೋಮನಿಗೆ ಟಾಟಾ ಹೇಳಿ ಕೆ.ಆರ್.ಪುರಂಗೆ ಟಿಕೆಟ್ ತೆಗೆಸಿದೆವು. ಅಷ್ಟರಲ್ಲಿ ರೈಲು ಬಂದು ನಿಂತುಬಿಟ್ಟಿತ್ತು. ಆಹಾ! ಎಲ್ಲರೂ ರೈಲಿಗೆ ಕಾದರೆ ಇಲ್ಲಿ ರೈಲೇ ನಮಗಾಗಿ ಕಾದಿತ್ತು. ನಾವು ಒಳಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ನಿಧಾನವಾಗಿ ಹೊರಟಿತು.
ನಾವು ಬೆಳಿಗ್ಗೆ ಬಂದಿದ್ದ ಅದೇ ತೂತುಕುಡಿ ಎಕ್ಸ್ಪ್ರೆಸ್.
ಮುಂದೆ ೯ ಘಂಟೆಗೆ ಕೆ.ಆರ್.ಪುರಂ, ೯:೩೦ ಗೆ ಮನೆ ಎನ್ನುತ್ತಾ ಚಂದ್ರಕಾಂತ ನಿದ್ದೆಗೆ ಶರಣಾದ. ಉಳಿದ ನಾವು ನಾಲ್ಕು ಜನ ಮಧ್ಯ ಮಧ್ಯ ಹರಟುತ್ತಾ, ತಿನ್ನುತ್ತಾ, ಹಾಡು ಕೇಳುತ್ತಾ ಸಮಯ ಕಳೆದೆವು. ೯:೩೦ ರ ಸುಮಾರಿಗೆ ರೈಲು ಮೆಜೆಸ್ಟಿಕ್ ತಲುಪಿತು. ಆದರೆ ನಾವು ಟಿಕೆಟ್ ತೆಗೆಸಿದ್ದು ಕೆ.ಆರ್.ಪುರಕ್ಕಲ್ಲವಾ.. ಹಾಗೆ ರೈಲು ಹೊರಡುವುದನ್ನೇ ಕಾಯುತ್ತಾ ಕುಳಿತೆವು. ಎಷ್ಟೆಂದರೂ ರಾಜಧಾನಿಯ ನಿಲ್ದಾಣವಲ್ಲವೇ? ಅರ್ಧ ಘಂಟೆ ರೈಲು ಅಲ್ಲೇ ನಿಂತಿತು. ಅಂತೂ ೧೦:೦೫ ರ ಸುಮಾರಿಗೆ 'ಬೆಂಗಳೂರು ಸಿಟಿ' ಬಿಟ್ಟೆವು. ನಂತರ ೧೫ ನಿಮಿಷದಲ್ಲಿ ಕಂಟೋನ್ಮೆಂಟ್ ನಿಲ್ದಾಣ. ಕೆ.ಆರ್.ಪುರ ನಿಲ್ದಾಣ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಬಾಗಿಲ ಬಳಿ ಹೋಗಿ ಹೊರಗೆ ನೋಡುತ್ತಾ ನಿಂತೆವು. ಅಲ್ಲೆಲ್ಲೋ ಓಲ್ಡ್ ಮದ್ರಾಸ್ ರೋಡ್ ಕಂಡಿತು. ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ರೈಲು ನಿಧಾನವಾಗಲು ಪ್ರಾರಂಭಿಸಿತು. ಮರಳಿ ಗೂಡಿಗೆ ಬಂದೆವಲ್ಲ ಎಂದು ಎಲ್ಲರೂ ನಿಟ್ಟುಸಿರಿಟ್ಟೆವು. ಅದೋ ಬಿಗ್ ಬಜಾರ್.. ಅದೋ RMZ... ಅದೋ.. ಯಾವಾಗಲೂ ಟ್ರಾಫಿಕ್ ಜಾಮ್ ಮಾಡಿ ಎಲ್ಲರನ್ನೂ ಕಾಡುವ ಬ್ರಿಡ್ಜ್! ಇನ್ನೇನು ಕೆ.ಆರ್.ಪುರಂ ಬಂದೇ ಬಿಟ್ಟಿತು... ಓಹ್! ಇಲ್ಲ... ರೈಲು ಬಲಕ್ಕೆ ತಿರುಗುತ್ತಿದೆ.. ನಾವು ಆ ಬ್ರಿಡ್ಜ್ ಮೇಲೆ ಹೋಗುತ್ತಿದ್ದೇವೆ! ಪಕ್ಕದಲ್ಲಿ ಬಾಟಾ ಶೋರೂಂ ಕಾಣುತ್ತಿದೆ!! ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು. ಕೆ.ಆರ್.ಪುರಂನ ಕೇಬಲ್ ಬ್ರಿಡ್ಜ್ ನಮ್ಮನ್ನು ಅಣಕಿಸುತ್ತಿತ್ತು.. ನಾವೆಲ್ಲ ಕನ್ಫ್ಯೂಸ್ ಆಗಿದ್ದರೆ ಕಾಂತ .. "ಅಲ್ನೋಡ್ರೋ ನಮ್ಮನೆ ದಾರಿ... ನಮ್ಮನೆ... ಹೊಯ್ತಲ್ಲೋ.. ನೋಡಿದ್ರಾ" ಎಂದ... ಅಣ್ಣ-ತಮ್ಮಂದಿರ (ಜೊತೆಗೆ ಅದಕ್ಕೆ ಒಪ್ಪಿದ ನಮ್ಮ) ಐಡಿಯಾ ಎಂದಿನಂತೆ ಮತ್ತೆ ಕೈಕೊಟ್ಟಿತ್ತು.
ತೂತುಕುಡಿ ಎಕ್ಸ್ಪ್ರೆಸ್ ಹತ್ತಿ ನಾವು ದಾರಿ ತಪ್ಪಿದ್ದೆವು.
ರೈಲು ಕ್ಷಣ-ಕ್ಷಣಕ್ಕೂ ವೇಗ ಪಡೆದುಕೊಳ್ಳುತ್ತಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬೆಂಗಳೂರಿನಿಂದ ಸುಮಾರು ದೂರ ಹೋಗಿಬಿಟ್ಟಿದ್ದೆವು. ಮುಂದಿನ ಸ್ಟಾಪ್ ಎಲ್ಲಿದೆ ಎಂದು ಗೊತ್ತಿಲ್ಲ!! ತಮಿಳುನಾಡಿಗೆ ಹೊರಟಿದ್ದರಿಂದ ಹೊಸೂರು ಇರಬಹುದು ಎಂದು ಊಹಿಸಿದೆ. ಮನಸ್ಸಿನಲ್ಲೇ ಸರಿಯಾಗಿ ಮಾಹಿತಿ ಕೊಡದೆ ಶ್ರೀರಂಗಪಟ್ಟಣದಲ್ಲಿ ನಮಗೆ ಕೆ.ಆರ್.ಪುರಕ್ಕೆ ಟಿಕೆಟ್ ಕೊಟ್ಟವನನ್ನು ಶಪಿಸಿದೆವು. ನಮಗೆ ಚಿಂತೆಯಾಗಿದ್ದರೆ ಕಾಂತ ಮತ್ತೆ "ನೀನು ಕರ್ನಾಟಕದಿಂದ ಹೊರಗಡೆ ಯಾವಾಗಾದ್ರೂ ಹೋಗಿದೀಯ? ಇವತ್ತು ಹೋಗಬಹುದು" ಎಂದ. ಹಾಕಿ ತದುಕುವಷ್ಟು ಸಿಟ್ಟು ಬಂದಿತ್ತು. ಆದರೆ ತದುಕಲಿಲ್ಲ. ಚೈನ್ ಎಳೆಯುವ ಯೋಚನೆ ಕೂಡ ಬಂದಿತ್ತು. ಆದರೆ ಅದು ತಪ್ಪು ಎಂದು ತಿಳಿದಿದ್ದರಿಂದ ತೆಪ್ಪಗೆ ನಿಂತೆವು... ನಿಂತೆವು?... ಹೌದು.. ಕೂರಲು ಜಾಗವಿರಲಿಲ್ಲ.
ಸುಮಾರು ೨೫ ನಿಮಿಷ ಹಾಗೇ ಹೋಗಿ ರೈಲು ಅದ್ಯಾವುದೋ ಜಾಗದಲ್ಲಿ ನಿಧಾನಿಸಿ ನಿಂತಿತು. ಅದನ್ನೇ ಕಾಯುತ್ತಿದ್ದ ನಾವು ಐದೂ ಮಂದಿ ಹಾರಿಕೊಂಡೆವು. ಯಾವುದೋ ಹಳ್ಳಿಯಿರಬೇಕು.. ಪ್ಲಾಟ್ಫಾರ್ಮ್ ಇರಲಿಲ್ಲ. ಅಲ್ಲಿದ್ದ ನಿಲ್ದಾಣದಲ್ಲಿ "ಕಾರ್ಮಿಲ್ಲರಾಂ" ಎಂದು ಕನ್ನಡದಲ್ಲೇ ಬರೆದಿದ್ದರು. ಸದ್ಯ ಇನ್ನೂ ಕರ್ನಾಟಕ ಬಿಟ್ಟಿಲ್ಲ ಎಂದು ನಮಗೆ ಸಂತೋಷವಾದರೆ ಕಾಂತ "ಛೆ, ತಮಿಳುನಾಡು ನೋಡುವ ಅವಕಾಶ ತಪ್ಪಿಹೋಯಿತು" ಎಂದು ಗೊಣಗಿಕೊಂಡ. ಹಾಗೇ ಸ್ಟೇಷನ್ ನ ಒಳಗೆ ಹೋದಾಗ ಒಬ್ಬ ಸ್ಟೇಷನ್ ಮಾಸ್ಟರ್ ಕಂಡ. ವಿಜಯ ಆತನನ್ನೇ ವಿಚಾರಿಸಿದ. ಆತ "ಈಗ ನಿಮಗೆ ಬಸ್ ಸಿಗುವುದಿಲ್ಲ.. ೯:೧೫ ಕ್ಕೆ ಕೊನೆಯ ಬಸ್.. ರೈಲು ಇರುವುದು ಬೆಳಿಗ್ಗೆಯೇ.. ಹೀಗೇ ಹೋಗಿ, ಮೇನ್ ರೋಡ್ ಸಿಗುತ್ತೆ.. ಟೆಂಪೋ ಲಾರಿ ಏನಾದರೂ ಸಿಗಬಹುದು" ಎಂದು ಹೇಳಿ ಕಳುಹಿಸಿದ. ಇವನು ಗೋಣಾಡಿಸಿಕೊಂಡು ಬಂದ. ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ೩ ದಾರಿಗಳು ಎದುರಾದವು. ಎತ್ತ ಹೋಗಬೇಕೆಂದು ತಿಳಿದಿರಲಿಲ್ಲ. ಮತ್ತೆ ವಿಜಯ ತಿರುಗಿ ಹೋಗಿ ಕೇಳಿಕೊಂಡು ಬಂದ. ಹಾಗೇ ಸುಮಾರು ೧ ಕಿಲೋಮೀಟರ್ ನಡೆದೆವು. ಯಾವುದೋ ಒಂದು ಹೈವೇ ಸಿಕ್ಕಿತು. ಹತ್ತೂಮುಕ್ಕಾಲು ಘಂಟೆಯಾಗಿತ್ತು. ಒಂದು ಅಂಗಡಿಯೂ ತೆರೆದಿರಲಿಲ್ಲ. ನಾವು ಕೈ ಮಾಡಿದ ಯಾವ ವಾಹನಗಳೂ ನಿಲ್ಲಲಿಲ್ಲ. ಅಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಬಿಟ್ಟರೆ ಒಬ್ಬನೇ ಒಬ್ಬ ನರಪಿಳ್ಳೆಯ ಸುಳಿವೂ ಇಲ್ಲ!!
ಹಾಗೇ ಏನಾದರೂ ಯಾರಾದರೂ ಸಿಗಬಹುದೆಂದು ಮುಂದೆ ನಡೆಯುತ್ತಾ ಹೋದೆವು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಹೋಟೆಲ್ ಬಾಗಿಲು ಹಾಕಿ ಅದರ ಕೆಲಸಗಾರರು ಹೋಗುತ್ತಿದ್ದರು. ಅವರ ಬಳಿ ಅದು ಯಾವ ಸ್ಥಳ ಎಂದು ಕೇಳಿದೆವು. ಅದು ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿ ಎಂಬ ಊರಾಗಿತ್ತು. ಅಲ್ಲಿ ಶುರುವಾಯಿತು ನಮ್ಮ ಪರದಾಟ. ಯಾವ ವಾಹನಗಳನ್ನೂ ನಿಲ್ಲಿಸುತ್ತಿಲ್ಲ, ಕ್ಯಾಬ್ಗಳು ಕಾಣುತ್ತಿಲ್ಲ... ಏನು ಮಾಡುವುದೆಂದು ಯೋಚಿಸುತ್ತಿರುವಾಗ ಅಣ್ಣ ತಮ್ಮಂದಿರ ವಿಚಾರ ಲಹರಿ ಎತ್ತೆತ್ತಲೋ ಸಾಗಿತ್ತು. ಮಲ್ಲಿಗೆ (ಮಲ್ಲಿ=ಮಲ್ಲಿಕಾರ್ಜುನ) ಕಾಲ್ ಮಾಡಿ ಆ ಸ್ಥಳದ ಅಕ್ಷಾಂಶ, ರೇಖಾಂಶ (latitude, longitude) ವಿಚಾರಿಸಿದರು. ಕರ್ಮಕಾಂಡ! ಅದರ ಜೊತೆ ಬಿ.ಎಂ.ಟಿ.ಸಿ ಬಸ್ ಸಂಖ್ಯೆ, ಅವುಗಳ ವೇಳಾಪಟ್ಟಿ ಎಲ್ಲಾ ವಿಚಾರಿಸಿದ್ದಾಯಿತು... ಅವನ್ನೆಲ್ಲ ತಿಳಿದುಕೊಂಡು ಏನು ಮಾಡಿದರೋ ಗೊತ್ತಿಲ್ಲ.
ಅಷ್ಟರಲ್ಲಿ ಅಲ್ಲೊಂದು ಕ್ಯಾಬ್ ಕಂಡಿತು. ಹೋಗಿ ವಿಚಾರಿಸಿದೆ. ೫೦೦ ರೂ ಹೇಳಿದ. ಸುಮ್ಮನೆ ಹೋಗಬಹುದಿತ್ತು. ಆದರೆ ಚಂದ್ರಕಾಂತನ ಚೌಕಾಶಿ ವ್ಯಾಪಾರಕ್ಕೆ ಬೇಸತ್ತು ಆ ಶೀಘ್ರಕೋಪಿ (short-tempered) ಡ್ರೈವರ್ ಹೋಗಿಯೇ ಬಿಟ್ಟ.
ಸರಿ ಇನ್ನೇನು ಮಾಡುವುದು ಎನ್ನುತ್ತಾ ಆಚೀಚೆ ನೋಡುತ್ತಿರುವಾಗ ವಿನಯನಿಗೆ ಒಂದು (ನಿಜಕ್ಕೂ) ಒಳ್ಳೆಯ ಉಪಾಯ ಹೊಳೆಯಿತು. ತನ್ನ ಆಫೀಸಿನ ಕ್ಯಾಬ್ಗೆ ಕರೆ ಮಾಡಿ ಕರೆಸಿದ. ಆ ಕ್ಯಾಬ್ ಡ್ರೈವರ್ಗೆ ನಾವೆಲ್ಲಿದ್ದೇವೆ ಎಂದು ತಿಳಿದಿರಲಿಲ್ಲ (ಅಸಲಿಗೆ ನಮಗೇ ತಿಳಿದಿರಲಿಲ್ಲ). ಆದರೂ ಕಷ್ಟ ಪಟ್ಟು ಅಲ್ಲಿಗೆ ಹುಡುಕಿಕೊಂಡು ಬಂದ. ಅವನಿಗೆ ಥ್ಯಾಂಕ್ಸ್ ಹೇಳಲೇ ಬೇಕು.
ಬಾಂಬ್ ದಾಳಿಯಿಂದ ಕಂಗೆಟ್ಟಿದ್ದ ಬೆಂಗಳೂರಿನಲ್ಲಿ ಪೊಲೀಸರ ಕಾಟ ಬೇರೆ. ಹಾಗಾಗಿ ಒಂದು ಇಂಡಿಕಾದಲ್ಲಿ ಐದು ಜನ ಹೇಗೋ ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಂಡೆವು. ಅಂತೂ ಬೆಂಗಳೂರಿಗೆ ಸುರಕ್ಷಿತವಾಗಿ ಬಂದು ಮುಟ್ಟಿದೆವು.
ನಾವು ಹತ್ತಿದ್ದ ತೂತುಕುಡಿ ಎಕ್ಸ್ಪ್ರೆಸ್ ಮರೆಯಲಾಗದ ಒಂದು ಅನುಭವ ತಂದಿತ್ತು.
10 ಕಾಮೆಂಟ್ಗಳು:
ಹರೀಶ...
ತಿಳಿಹಾಸ್ಯದೊಂದಿಗೆ ಸಾಗುವ ಲೇಖನ ಗಂಭೀರತೆಯತ್ತ ತಿರುಗಿ ಸಾಗುವ ಪರಿ ಇಷ್ಟವಾಯ್ತು.
ಚೆನ್ನಾಗಿದೆ ನಿಮ್ಮ ಅನುಭವ!!
ಕಳೆದ ವಾರ ರಂಗನತಿಟ್ಟಿಗೆ ಹೋದಾಗ ದೋಣಿ ವಿಹಾರ ಇರಲಿಲ್ಲ. ಹಕ್ಕಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಬಹುಶ: ಜಾಸ್ತಿ ನೀರು ಹರಿದ ಪರಿಣಾಮವಿರಬೇಕು.
ಶಾಂತಲಕ್ಕ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗೋ ಥರ ಬರದ್ದಿ ಅಂತ ಗೊತ್ತಾತು :-)
ಅರವಿಂದ್, ಇಂಥ ಮಳೆಗಾಲ ಮುಗಿಯುವ ಸಮಯದಲ್ಲಿ ಹೋಗಿ ಬರುವಂಥ ಸ್ಥಳಗಳ ಪಟ್ಟಿ ಬೇಕಿತ್ತು..
ತುಂಬಾ ಏನು ಇಲ್ಲೇ ಸ್ವಲ್ಪ ಸ್ವಲ್ಪ ಕನ್ಫ್ಯೂಸ್ ಆಗ್ತು ಅಷ್ಟೆ.. ಅದು ಗಡಿಬಿಡಿಲಿ ಬರೆದ ಲೇಖನ ನಿಂದು ಅಂತ ಗೊತ್ತಾತು, ಚನ್ನಗಿದ್ದು
ರಂಗನ ತಿಟ್ಟಲ್ಲಿ ನೀರು ಬೇಗವೇ ಏರಿದೆ ಅನ್ಸತ್ತೆ; ಎಷ್ಟೋ ಸಲ ದಸರ ಮುಗಿಯೋ ವರೆಗೆ ನೀರು ಬಿಟ್ಟಿರೋದಿಲ್ಲ ಕೆ.ಆರ್.ಎಸ್. ನಿಂದ.
ಮತ್ತೆ ಶ್ರೀರಂಗ ಪಟ್ಟಣದ ಸಂಗಮದಲ್ಲಿ, ಅರ್ಕಾವತಿ ಮತ್ತೆ ಹೇಮಾವತಿ ಎರಡೂ ಇಲ್ಲ :) ಅದು ಕಾವೇರಿಯ ಎರಡು ಕವಲುಗಳು ಸೇರುವ ಜಾಗ. ಹತ್ತಿರದಲ್ಲೇ ಲೋಕಪಾವನಿ ಕೂಡ ಸೇರುತ್ತೆ.
ಕಾವೇರಿಗೆ ಹೇಮಾವತಿ ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ, ಮತ್ತೆ ಅರ್ಕಾವತಿ ಮೇಕೆದಾಟುವಿನ ಬಳಿ ಸೇರುತ್ತವೆ.
@ಆದಿತ್ಯ (ಮನಸ್ವಿ):
ಅನಿಸಿದ್ದನ್ನ ಹೇಳಿದ್ದಕ್ಕೆ ಥ್ಯಾಂಕ್ಸ್... ಅದಕ್ಕೇ ದೊಡ್ಡೋರು ಅನ್ನೋದು "ಅವಸರವೇ ಅಪಘಾತಕ್ಕೆ ಕಾರಣ" :-)
@ಹಂಸಾನಂದಿ:
ಅಯ್ಯಯ್ಯೋ!!! ಅಲ್ಲಿ ತೆಪ್ಪಕ್ಕೆ ಹುಟ್ಟು ಹಾಕ್ತಿದ್ದ ಹುಡುಗರನ್ನ ಕೇಳಿದಾಗ ಅವರು ಹೇಳಿದ ವಿಷಯ ಅದು :-) ಯಾವುದೋ ಸ್ಮಾರಕದ ಬಳಿ ಕಾವೇರಿಯೇ ಎರಡು ಕವಲುಗಳಾಗಿ ಮತ್ತೆ ಸೇರಿದ್ದನ್ನು ತೋರಿಸುವ ಬೋರ್ಡನ್ನು ನೋಡಿದ್ದೆ. ಆದರೆ ಆ ಹುಡುಗರು ಹೇಳಿದ್ದು ಸರಿ ಇರಬಹುದೇನೋ ಎಂದುಕೊಂಡೆ. ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಹಂಸಾನಂದಿ ಅವರೇ, ಲೇಖನವನ್ನು ತಿದ್ದಿದ್ದೇನೆ.. ಚಿತ್ರಗಳನ್ನೂ ಹಾಕಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು.
ಹರೀಶ,
ಇಂತಹ ಅನುಭವಗಳಿಂದಲೇ ಜಗತ್ತನ್ನು ಕಾಣಲು ಸಾಧ್ಯವಾಗುವದು.
Good luck.
ಎಲ್ಲಿಗೇ ಪಯಣಾ... ಯಾವುದೋ ದಾರಿ...
ಹಂಗಾಗಿ ಹೋಯ್ತಲ್ಲ ಸಾರ್ ನಿಮ್ಮ ಪಯಣ. ನೀವು ರಂಗನತಿಟ್ಟು ಹೋಗುವುದಕ್ಕೆ ಮೊದಲು ನನ್ನ ಬ್ಲಾಗನ್ನು ನೋಡಿದ್ರೆ ನೀವು ಖಂಡಿತ ದಾರಿ ತಪ್ಪುತ್ತಿರಲಿಲ್ಲ. ಯಾಕಂದ್ರೆ ಶ್ರೀರಂಗಪಟ್ಟಣ ಹತ್ತಿರ ನಗುವನಹಳ್ಳಿ ಅಂತ ಊರಿದೆ. ಅಲ್ಲಿ ನಿಮಗೆ ಬ್ಲೂ ಟೈಲ್ದ್ ಗ್ರೀನ್ ಬಿ ಈಟರ್ ಪಕ್ಷಿಗಳ ಕಾಲೋನಿ ಇದೆ. ಅದು ತುಂಬಾ ಚೆನ್ನಾಗಿದೆ. ನೂರಾರು ಪಕ್ಷಿಗಳು ಇರುತ್ತವೆ. ನಾನು ಅದರ ಸಂಪೂರ್ಣ ಫೋಟೊಗ್ರಾಪ್ ಮಾಡಿದ್ದೇನೆ.ಅದನ್ನು ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ. ಮುಂದಿನ ಬಾರಿ ದಾರಿ ತಪ್ಪದೆ ಅಲ್ಲಿಗೆ ಹೋಗಿ ಕಾವೇರಿ ನದಿ
ಅದರ ಪಕ್ಕ ಈ ಪಕ್ಷಿಗಳ ಕಾಲೋನಿ ಆಹಾ...
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ನಂತರ ನಿಮ್ಮ ಅಬಿಪ್ರಾಯಗಳನ್ನು ಬ್ಲಾಗಿನಲ್ಲಿ ಬರೆಯಿರಿ.
ಮತ್ತೊಂದು ವಿಷಯ ನಿಮ್ಮ ಬರವಣಿಗೆ ಚೆನ್ನಾಗಿದೆ.
ಶಿವು.ಕೆ
ದಾರಿ ತಪ್ಪಿದರೂ ದಾರಿಗೇ ಮರಳಿದಿರಲ್ಲವಾ..!
ಕಾಮೆಂಟ್ ಪೋಸ್ಟ್ ಮಾಡಿ