ಗುರುವಾರ, ಆಗಸ್ಟ್ 28, 2008

ಸುಭಾಷಿತಗಳು

ಒಳ್ಳೆಯ ಮಾತನ್ನು ಯಾರೇ ಹೇಳಲಿ, ಹೇಗೇ ಹೇಳಲಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತದಲ್ಲಿ ಇಂಥ ಸೂಕ್ತಿಗಳ ಭಂಡಾರವೇ ಇದೆ. ಸುಭಾಷಿತಗಳ ಬಗ್ಗೆ ಹೀಗೆ ಹೇಳಲ್ಪಟ್ಟಿದೆ:

सुभाषितरसस्याग्रे सुधा भीता दिवं गता |

ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ |

ಅಂದರೆ, ಸುಭಾಷಿತದ ರಸದ ಮುಂದೆ ಅಮೃತವೂ ಕೂಡ ಹೆದರಿ ಸ್ವರ್ಗಕ್ಕೆ ಹೋಯಿತು ಎಂದು. ಸಂಸ್ಕೃತದಲ್ಲಿರುವ ಸಾವಿರಾರು ಸುಭಾಷಿತಗಳನ್ನು ಓದುತ್ತಾ ಹೋದಂತೆ ಇದು ಅತಿಶಯೋಕ್ತಿಯೆನಿಸದು.

ಭರ್ತೃಹರಿಯ ಶೃಂಗಾರ ಶತಕ, ನೀತಿ ಶತಕ, ವೈರಾಗ್ಯ ಶತಕ ಇವು ಒಂದಕ್ಕಿಂತ ಒಂದು ಚೆನ್ನಾಗಿವೆ. ಅಲ್ಲದೆ ಕಾಳಿದಾಸ, ಭಾಸ, ಮುಂತಾದ ಕವಿಗಳ ನಾಟಕ, ಕಾವ್ಯಗಳ ಮಧ್ಯೆ ಬರುವ ಸುಭಾಷಿತಗಳೂ ಅಮೂಲ್ಯ ನೀತಿಗಳನ್ನು ಹೇಳುತ್ತವೆ. ಅಲ್ಲದೆ ರಾಮಾಯಣ, ಮಹಾಭಾರತಗಳ ನಡುವೆ ಕೂಡ ಸುಭಾಷಿತಗಳು ಕಂಡುಬರುತ್ತವೆ.

ನನಗೆ ಕೆಲವು ಸುಭಾಷಿತಗಳು ಪ್ರಿಯವಾದವುಗಳು. ಬರೆಯಬೇಕೆಂದಾಗಲೆಲ್ಲ ಕೆಲವು ಸುಭಾಷಿತಗಳನ್ನು ಬರೆಯುತ್ತಿರುತ್ತೇನೆ...

ಸದ್ಯಕ್ಕೆ ನನ್ನ ಫೇವರಿಟ್ ಸುಭಾಷಿತ:

न चोरहार्यं न च राजहार्यं
न भ्रातृभाज्यं न च भारकारी |
व्यये कृते वर्धत एव नित्यं
विद्याधनं सर्वधनप्रधानम् ||

ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ ||

ಕಳ್ಳರಿಂದ ಕದಿಯಲಾಗದ, ರಾಜರಿಂದ ಕಸಿದುಕೊಳ್ಳಲಾಗದ, ಅಣ್ಣತಮ್ಮಂದಿರಲ್ಲಿ ಹಂಚಿಕೊಳ್ಳಲು ಬಾರದ, ಭಾರವಲ್ಲದ, ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯಾಧನವೇ ಎಲ್ಲ ಧನಗಳಲ್ಲಿ ಮುಖ್ಯವಾದುದು, ಉತ್ತಮವಾದುದು.

ಇವತ್ತು ಒಬ್ಬನ ಬಳಿ ೧ ಕೋಟಿ ರೂಪಾಯಿ ಇದೆ ಎಂದುಕೊಂಡರೆ ನಾಳೆ ಇರುವುದು ಅವನಿಗೇ ಅನುಮಾನ. ದರೋಡೆ ಆಗಬಹುದು, ಇನ್‌ಕಂ ಟ್ಯಾಕ್ಸ್ ದಾಳಿ ಆಗಬಹುದು ಅಥವಾ ಇನ್ನೇನೋ ಆಗಿ ಸರ್ಕಾರ ಎಮರ್ಜೆನ್ಸಿ ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಅದೇ ಸಂಪಾದಿಸಿದ ಜ್ಞಾನ ನಾಳೆ ಖಂಡಿತ ಇರುತ್ತದೆ. ಸಂಪಾದಿಸಿದ ದುಡ್ಡು ಇಡಲು ಜಾಗ ತಿನ್ನುತ್ತದೆ, ಭಾರವಾಗುತ್ತದೆ, ಆದರೆ ಇವತ್ತು ನಾನು ೨೦೦ ಪುಟ ಓದಿದೆ, ನನ್ನ ತಲೆ ೫೦ ಗ್ರಾಂ ಹೆಚ್ಚು ತೂಗುತ್ತಿದೆ ಎಂದು ಯಾರಾದರೂ ಹೇಳಲಾಗುತ್ತದೆಯೇ? ಊಹೂಂ, ಇಲ್ಲ. ಅಪ್ಪನ ಬಳಿ ೪ ಡಿಗ್ರಿ ಇದೆ. ನಾಳೆ ಮಕ್ಕಳು ಬೇರೆಯಾದರೆ ಅಣ್ಣನಿಗೆರಡು ಡಿಗ್ರಿ, ತಮ್ಮನಿಗೆರಡು ಡಿಗ್ರಿ ಇರಲಿ ಎನ್ನಲಾಗುತ್ತದೆಯೇ? ಇಲ್ಲ. ಅವರವರು ಸಂಪಾದಿಸಿದ್ದು ಅವರಿಗೆ. ಅಷ್ಟೆ ಅಲ್ಲ, ಬೇರೆ ಎಲ್ಲ ಸಂಪತ್ತುಗಳಿಗೆ ವ್ಯತಿರಿಕ್ತವಾಗಿ ವ್ಯಯಿಸಿದಷ್ಟೂ, ಬೇರೆಯವರಿಗೆ ಹಂಚಿದಷ್ಟೂ ಹೆಚ್ಚಾಗುವ ಏಕೈಕ ಸಂಪತ್ತು ಜ್ಞಾನಸಂಪತ್ತು. ಹಾಗಾಗಿಯೇ, ವಿದ್ಯಾಧನಂ ಸರ್ವಧನ ಪ್ರಧಾನಂ.

ವಿ. ಸೂ: ನನಗೆ ಸುಭಾಷಿತಗಳ ಬಗ್ಗೆ ಬರೆಯಲು ಪ್ರೇರೇಪಣೆಯಾದ ಹಂಸಾನಂದಿ ಅವರಿಗೆ ಧನ್ಯವಾದಗಳು :-)

8 ಕಾಮೆಂಟ್‌ಗಳು:

hamsanandi ಹೇಳಿದರು...

ಬರೀತಾ ಇರಿ ಹೀಗೇ, ಓದ್ತಾ ಇರೋಣ!

ನಾನು ಈ ಮೊದಲು ಹೇಳಿದ ಭರ್ತೃಹರಿಯ ಬಗ್ಗೆಯ ನನ್ನ ಬರಹ ಈ ಕೆಳಗಿನ ಕೊಂಡಿಯಲ್ಲಿದೆ. ಚಿಟಕಿಸಿ.

http://www.sampada.net/article/5558

(ಇದು ೩-೪ ವರ್ಷಗಳ ಹಿಂದೆ ನಾನು ಬರೆದ ಬರಹ)

-ಹಂಸಾನಂದಿ

ಸಂದೀಪ್ ಕಾಮತ್ ಹೇಳಿದರು...

ವಾವ್! ಚೆನ್ನಾಗಿದೆ ಸುಭಾಷಿತ .

ಆದ್ರೀ ಈಗಿಗ ವಿದ್ಯೆನೂ ಕದೀತಾರೆ ಗುರು.ಬರೀ ವಿದ್ಯೇನ ನೇರವಾಗಿ ಕದಿಯೋಕಾಗಲ್ಲ ಅಂತ ವಿದ್ಯಾವಂತರನ್ನೇ ಕದೀತಾರೆ :((ಪ್ರತಿಭಾ ಪಲಾಯನದ ಬಗ್ಗೆ ಸುಮ್ನೆ ತಮಾಷೆಗೆ ಹೇಳ್ದೆ ಜಗಳ ಮಾಡ್ಬೇಡ್ರಪ್ಪೊ!)

Harisha - ಹರೀಶ ಹೇಳಿದರು...

@ಹಂಸಾನಂದಿ:
ಬರೀತಿರ್ತೀನಿ!
ನಿಮ್ಮ ಲೇಖನ ನೋಡಿದೆ.. ಚೆನ್ನಾಗಿ ವಿವರವಾಗಿ ಬರೆದಿದ್ದೀರಿ.

@ಸಂದೀಪ್:
ಅದು ಅವರು ಕದಿಯೋದಲ್ಲ.. ಇವರೇ ಹೋಗೋದು..

ಅದೂ ಅಲ್ದೆ, ಅವರು ಅದನ್ನ ಉಪಯೋಗಿಸಿಕೊಳ್ಳಬಹುದೇ ಹೊರತು ಕಲಿತ ವಿದ್ಯೆಯನ್ನೇನೂ ಮಾಡಲಾಗುವುದಿಲ್ಲವಲ್ಲ!

sunaath ಹೇಳಿದರು...

ಸುಭಾಷಿತಗಳನ್ನು, ಮಹಾಕವಿಗಳ ಚುಟುಕುಗಳನ್ನು ಕೊಡ್ತಾ ಇರಿ. ಓದಲು ಖುಶಿಯಾಗುತ್ತದೆ.

NilGiri ಹೇಳಿದರು...

ಸುಭಾಷಿತಗಳನ್ನು ಅರ್ಥ ಸಮೇತ ವಿವರಿಸಿದ್ದು ನನ್ನಂತಹವರಿಗೆ ಬಹಳ ಅನುಕೂಲ!

ಧನ್ಯವಾದಗಳು.

Harisha - ಹರೀಶ ಹೇಳಿದರು...

@ಸುನಾಥ್:
ನಿಜ ಹೇಳಿದಿರಿ! ನೀವು ಬಂದು ಓದಿದರೆ ನಮಗೂ ಖುಷಿ :-)

@ಗಿರಿಜಾ:
ಬರೆದಿತ್ತುಕೊಂದರೆ ನಮಗೂ ಮುಂದೆ ಅನುಕೂಲ.. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :-)

ಅಂತರ್ವಾಣಿ ಹೇಳಿದರು...

ತುಂಬಾ ಸಂತೋಷವಾಯಿತು...ಓದಿ,

ನಿನಗೆ ಬಯ್ಯ ಬೇಕು ಅನಿಸುತ್ತದೆ...ಒಂದೇ ಒಂದು ಹಾಕಿದ್ದೀಯಲ್ಲ ಅದಕ್ಕೆ.... ಇನ್ನು ಹೆಚ್ಚು ಹೆಚ್ಚು ಹಾಕು.

BlackBox ಹೇಳಿದರು...

ಉತ್ತಮವಾದ ಲೇಖನ!
ನೀವು ಸುಭಾಷಿತಮಂಜರಿಯನ್ನು ಇಷ್ಟ ಪಡುತ್ತೀರೆಂದು ಭಾವಿಸುತ್ತೇನೆ.

ಧನ್ಯವಾದಗಳು