ರೆಡ್ ಸಿಗ್ನಲ್ ಬಿದ್ದಿದೆ. ಫ್ರೀ ಲೆಫ್ಟ್ ಇಲ್ಲವೆಂದು ಬೋರ್ಡು ಹಾಕಿದ್ದಾರೆ. ಸಿಗ್ನಲ್ ಹಸಿರಾಗಲು ಕಾಯುತ್ತಾ ನಿಂತಿದ್ದೇನೆ. ನನ್ನ ಹಿಂದಿಂದ ಬಂದ ಒಬ್ಬ ನನ್ನ ಪಕ್ಕ ನಿಲ್ಲಿಸಿದ. ಆಚೀಚೆ ನೋಡಿದ. ಯಾರೂ ಪೋಲೀಸರಿಲ್ಲ. ವಾಹನಗಳೂ ಬರುತ್ತಿಲ್ಲ. ತನ್ನ ಪಾಡಿಗೆ ಎಡ ರಸ್ತೆಗೆ ತಿರುಗಿ ಹೋಗಿಬಿಟ್ಟ. ನಾನಿನ್ನೂ ಕಾಯುತ್ತಲೇ ಇದ್ದೇನೆ...
ನಾನೊಬ್ಬ ಮೂರ್ಖ.
ವೇಗವಾಗಿ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಸಿಗ್ನಲ್ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡಿದೆ. ಇದ್ದ ಬಲವನ್ನೆಲ್ಲಾ ಹಾಕಿ ಬ್ರೇಕ್ ತುಳಿದು ಬೈಕ್ ನಿಲ್ಲಿಸಿದೆ. ಅಷ್ಟರಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದೆ. ನನ್ನ ಹಿಂದಿನಿಂದ ಬಂದ ಇನ್ನೊಬ್ಬ ಇನ್ನೂ ಹಸಿರು ದೀಪವೆ ಇದೆಯೇನೋ ಎಂಬಂತೆ ಮುಂದಕ್ಕೆ ನಡೆದ. ಏನೂ ಆಗಲಿಲ್ಲ. ಆತ ಮುಂದೆ ನಡೆದ. ಮತ್ತೆ ನನ್ನ ಸರತಿ ಬರಲು ನಾನಿನ್ನೂ ೬ ನಿಮಿಷ ಕಾಯಬೇಕು...
ನಾನೊಬ್ಬ ಮೂರ್ಖ.
ಆಫೀಸಿನಿಂದ ಹೊರಗೆ ಬಂದೆ. ನನಗೆ ಹೋಗಬೇಕಾಗಿರುವುದು ಬಲಕ್ಕೆ. ಆದರೆ ಮಧ್ಯ ಡಿವೈಡರ್ ಇರುವುದರಿಂದ ಯೂ-ಟರ್ನ್ ಸಿಗುವವರೆಗೂ ಎಡಕ್ಕೆ ಹೋಗಿ ಅಲ್ಲಿ ತಿರುಗಿಸಿಕೊಂಡು ಬರಬೇಕು. ಏನಿಲ್ಲವೆಂದರೂ ೫ ನಿಮಿಷ ತಗುಲುತ್ತದೆ. ಇರಲಿ ಎಂದು ಎಡಕ್ಕೆ ಹೊರಳುತ್ತೇನೆ. ಅಲ್ಲಿ ಸಿಗ್ನಲ್ ಬಿದ್ದಿದೆ. ಅದೆಲ್ಲ ಮುಗಿದು ಮರಳಿ ಆಫೀಸಿನ ಮುಂದೆ ಬರುವಷ್ಟರಲ್ಲಿ ೧೦ ನಿಮಿಷವಾಗಿದೆ. ನನ್ನ ಸಹೋದ್ಯೋಗಿ, ಆಗಷ್ಟೆ ಹೊರಗೆ ಬಂದವನು ರಾಜಾರೋಷವಾಗಿ ಬಲಕ್ಕೆ ತಿರುಗಿ ಸ್ವಲ್ಪವೇ ದೂರದಲ್ಲಿ ಇರುವ ಕ್ರಾಸಿಂಗ್ ನಲ್ಲಿ ರಸ್ತೆ ದಾಟಿ ನನ್ನನ್ನು ಸೇರಿಕೊಂಡಿದ್ದಾನೆ. ನಾನು ಏನಿಲ್ಲವೆಂದರೂ ಒಂದೈದು ರೂಪಾಯಿ ಪೆಟ್ರೋಲ್ ಕಳೆದುಕೊಂಡೆ. ಆತ ಉಳಿಸಿದ...
ನಾನೊಬ್ಬ ಮೂರ್ಖ.
ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೆ ವಾಹನಗಳು ನಿಂತಿವೆ. ನಾನು ಕಾರನ್ನು ಅವುಗಳ ಹಿಂದೆ ನಿಲ್ಲಿಸಿದೆ. ನನ್ನ ಹಿಂದಿಂದ ಬಂದ ರಿಕ್ಷಾದವನೊಬ್ಬ ನಿಂತಿದ್ದ ಎಲ್ಲ ವಾಹನಗಳನ್ನೂ ಓವರ್ಟೇಕ್ ಮಾಡಿ ಗೇಟಿನ ಬಳಿ ಹೋಗಿ ನಿಲ್ಲಿಸಿದ. ಅವನ ಹಿಂದೆ ಇನ್ನೊಬ್ಬ ಕಾರಿನವನೂ ಅಲ್ಲೇ ಹೋಗಿ ನಿಲ್ಲಿಸಿದ. ರೈಲು ಹೋಯಿತು. ಗೇಟ್ ತೆಗೆದಾಗ ಮುಂದಿನಿಂದ ಬರುವ ವಾಹನಗಳಿಗೆ ಜಾಗವಿರಲಿಲ್ಲ. ಹಾಗಾಗಿ ಆ ರಿಕ್ಷಾ ಮತ್ತು ಕಾರಿನವರನ್ನೇ ಮೊದಲು ಬಿಡಲಾಯಿತು. ನನ್ನ ಮುಂದಿದ್ದ ಎಲ್ಲಾ ವಾಹನಗಳೂ ಹಳಿ ದಾಟಿ ನಾನು ದಾಟುವಷ್ಟರಲ್ಲಿ ೧೫ ನಿಮಿಷ ಆಯಿತು. ನಾನೂ ಆ ರಿಕ್ಷಾದವನಂತೆ ಮಾಡಬಹುದಿತ್ತೇನೋ, ಆದರೆ ಮಾಡಲಿಲ್ಲ...
ನಾನೊಬ್ಬ ಮೂರ್ಖ.
ಟ್ರಾಫಿಕ್ ಜಾಮ್ ಆಗಿದೆ. ಹಿಂದಿನಿಂದ ಅಂಬ್ಯುಲೆನ್ಸ್ ಒಂದು ಶಬ್ದ ಮಾಡುತ್ತಾ ಬರುತ್ತಿದೆ. ಹೇಗಾದರೂ ಅದಕ್ಕೆ ಜಾಗ ಮಾಡಿಕೊಡಬೇಕೆಂದು ಇದ್ದಿದ್ದರಲ್ಲೇ ಸ್ವಲ್ಪ ಆಚೀಚೆ ಸರಿದು ಅಂಬ್ಯುಲೆನ್ಸ್ ಗೆ ಜಾಗ ಮಾಡಿ ಕೊಟ್ಟೆ. ಅಷ್ಟರಲ್ಲಿ ಯಾರೋ ಒಬ್ಬ ಪಕ್ಕದಲ್ಲಿದ್ದವನು ಬೇಕೆಂದಲೇ ಅಂಬ್ಯುಲೆನ್ಸ್ ನ ಮುಂದಕ್ಕೆ ಬಂದು ನಿಂತ. ಅವನು ಸರಿಯುವವರೆಗೂ ಅಂಬ್ಯುಲೆನ್ಸ್ ಚಲಿಸುವಂತಿಲ್ಲ. ಟ್ರಾಫಿಕ್ ಪೋಲಿಸ್ ಅವನು ನಿಂತಿದ್ದ ಲೇನ್ ಅನ್ನು ಮೊದಲು ಬಿಟ್ಟು ಅಂಬ್ಯುಲೆನ್ಸ್ ಗೆ ಜಾಗ ಮಾಡಿಕೊಟ್ಟ. ಆತ ಟ್ರಾಫಿಕ್ ಜಾಮ್ ನಿಂದ ನಿಮಿಷ ಮಾತ್ರದಲ್ಲಿ ಹೊರಗೆ ಹೋದ. ನಾನಿನ್ನೂ ಇಲ್ಲೇ ನಿಂತಿದ್ದೇನೆ...
ನಾನೊಬ್ಬ ಮೂರ್ಖ.
ನಾನೆಂದು ಈ ಮೂರ್ಖತನದಿಂದ ಪಾರಾಗುತ್ತೇನೆ? ನನಗೆ ಬುದ್ಧಿ ಬರುವುದು ಯಾವಾಗ?
16 ಕಾಮೆಂಟ್ಗಳು:
ಸಿಗ್ನಲ್ಲಲ್ಲಿ ಹಸಿರು ದೀಪ ಬೀಳುವವರೆಗೂ ಕಾಯುತ್ತೇನೆ ನಾನೂ ಮೂರ್ಖ. ನಿಯತ್ತಾಗಿ ಕ್ಯೂ ನಲ್ಲಿ ನಿಲ್ಲುತ್ತೇನೆ. ನಾನು ದೊಡ್ಡ ಮೂರ್ಖ. ಹೀಗೆ ಇನ್ನೂ ಹಲವಾರು ಮೂರ್ಖತನಗಳು ನಮ್ಮಲ್ಲಿ.
ವಿಪರ್ಯಾಸ! ಭವ್ಯ ಭಾರತದ ಬಹುಪಾಲು ಪ್ರಜೆಗಳು ಬುದ್ದಿವಂತರು . ಅದಕ್ಕೇ ದೇಶ ಹೀಗಿದೆ :(
ಹುಹ್! ಹಾಗಾದರೆ ನಾನೂ ಮೂರ್ಖ!
ಒನ್ ವೇ ಎಂದು ಬೋರ್ಡ್ ಇದ್ದ ಕಡೆ ನಾಲ್ಕು ಅಡಿ ಒಳಗೆ ಹೋದರೆ ತಕ್ಷಣವೆ ಎಡಗಡೆಗೆ ರೋಡ್ ಡೈವರ್ಷನ್ ಇದ್ದರು ಬೇರೆಯವರಂತೆ ನುಗ್ಗಿ ಹೋಗುವುದಿಲ್ಲ ನಾನೊಬ್ಬ ಮೂರ್ಖ...
ನನ್ನ ಕಾರಿನ ಹಿಂದಿನಿದ ವೇಗವಾಗಿ ಬಂದು ಹಾರನ್ ಮಾಡಿದವರಿಗೆಲ್ಲ ದಾರಿ ಬಿಟ್ಟುಕೊಟ್ಟು ಬಿಡುತ್ತೇನೆ ನಾನೊಬ್ಬ ಮೂರ್ಖ... ಬೈಕಿನಲ್ಲಿ ಹೋಗುವಾಗ ಟ್ರಾಫಿಕ್ ನಲ್ಲಿ ಕೆಂಪು ದೀಪ ಬಿದ್ದಾಗ ಬೇರೆಯವರಂತೆ ಫುಟ್ಪಾತ್ ಮೇಲೆ ಹತ್ತಿಸಿಕೊಂಡು ಹೋಗಿ ಮುಂದಕ್ಕೆ ಹೋಗಿ ನಿಲ್ಲುವುದಿಲ್ಲ.. ನಾನೊಬ್ಬ ಶತ ಮೂರ್ಖ ....
ವಿಕಾಸ್,
>> ಭವ್ಯ ಭಾರತದ ಬಹುಪಾಲು ಪ್ರಜೆಗಳು ಬುದ್ದಿವಂತರು. ಅದಕ್ಕೇ ದೇಶ ಹೀಗಿದೆ
ಸರಿಯಾಗಿ ಹೇಳಿದೆ ನೋಡು!
ಸುಶ್, ಆದಿತ್ಯ:
ಬಹಳ ಸಂತೋಷ! ಸದ್ಯ ನಾನೊಬ್ಬನೇ ಮೂರ್ಖ ಅಲ್ಲವಲ್ಲ!!
ನೀವೊಬ್ಬರೇ ಅಲ್ಲ. ಟ್ರಾಫಿಕ್ ಬಗ್ಗೆ ಅಲ್ಪ ಕಾಳಜಿ ಇರೋ ಪ್ರತಿಯೊಬ್ಬರೂ ಈ ರೀತಿ ಆಗ್ಗಾಗ್ಗೆ ಮೂರ್ಖರಾಗ್ತ ಇರ್ತಾರೆ. ಒಟ್ಟಿನಲ್ಲಿದು ಮೂರ್ಖರ ಸಂತೆ!
-ಜಿತೇಂದ್ರ
namagu mysore nalli bahala saala agidhe signal ge wait madodhe murkathana
Hey,pleased to meet you.
ನಾನೂ ಒಬ್ಬ ಮೂರ್ಖನೆಂದು declare ಮಾಡಿಕೊಳ್ಳುವದರಲ್ಲಿ ಸಂತೋಷವಾಗುತ್ತಿದೆ.
ಒಂದು ಮೂರ್ಖರ ಕ್ಲಬ್ ತೆಗೆಯೋಣವೆ? ಈಗ ನಮ್ಮೆಲ್ಲರನ್ನೂ ಸೇರಿಸಿ ಇಲ್ಲಿ ಆರು ಜನ ಮೂರ್ಖರಿದ್ದೇವೆ.
I think TN sitaram can call his next serial ಮೂರ್ಖ,ಮೂರ್ಖ,ಮೂರ್ಖ
ಜಿತೇಂದ್ರ, ಉಲ್ಟಾ-ಪಲ್ಟಾದ ಹುಚ್ಚರ ಸಂತೆಗೂ ಈ ಮೂರ್ಖರ ಸಂತೆಗೂ ಏನೋ ಲಿಂಕ್ ಕಾಣಿಸ್ತಿದ್ಯಲ್ಲ!!
ಸಚ್ಚಿದಾನಂದ, ಹಾಗೆಲ್ಲ ಹೇಳ್ಬಾರ್ದು!! ಸರಿಯಾದ ಸಿಗ್ನಲ್ ಗೆ ಕಾದು ಹೋಗೋದು ಎಲ್ಲರಿಗೂ ಸುರಕ್ಷಿತ, ಅಲ್ವ? ೫ ನಿಮಿಷ ತಡವಾದರೆ ಕೆಟ್ಟು ಹೋಗೋದೇನಿದೆ? ಅಷ್ಟು ಸರಿಯಾದ ಸಮಯಕ್ಕೆ ಹೋಗಬೇಕೆಂದಿದ್ದರೆ ೫ ನಿಮಿಷ ಮೊದಲೇ ಹೊರಟರಾಯಿತು!
ಸುನಾಥ್, ಹೋ! ನಾನಂತೂ ರೆಡಿ. ನೀವೇ ಅಧ್ಯಕ್ಷರು ;-)
ಅಂದ ಹಾಗೆ, ನೀವು ಬೆಂಗಳೂರಿಗೆ ಬಂದಿದ್ದಿರಿ ಎಂಬ ಸುದ್ದಿ (ನಂಬಲನರ್ಹ ಮೂಲಗಳಿಂದ) ಬಂತು. ನಿಮ್ಮನ್ನು ಭೇಟಿಯಾಗದೆ ಇದ್ದಿದ್ದಕ್ಕೆ ಬೇಸರವಿದೆ :-(
ಶ್ರೀನಿಧಿ, 'ಮುಕ್ತ ಮುಕ್ತ' ಮುಗಿದ ಮೇಲೆ ವೀಕ್ಷಕರಿಗೆ ಸ್ವಲ್ಪ ಮುಕ್ತಿ ಬೇಕು. ಅದಾದಮೇಲೆ ನಿಮ್ಮ ರೆಕಮೆಂಡೇಶನ್ ಅನ್ನು ಪರಿಶೀಲಿಸಲಾಗುವುದು!
ಪ್ರತಿಕ್ರಿಯಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.
nmOh thanks...
I can help him with the title song if required...
ದಿನವು ಆಗುವೆವು ನಾವು... ಮೂರ್ಖ,ಮೂರ್ಖ,ಮೂರ್ಖ
ಹೆಹ್ಹೆ ಚೆನ್ನಾಗಿದೆ :-)
ಮೂರ್ಖರ ಮೂರ್ಖತನದ ಪರಮಾವಧಿಯನ್ನು ಧೃಢೀಕರಿಸಲು ಯಾವುದದ್ರೂ ವೆಬ್ ಸೈಟ್ ಇದೆಯಾ ??
ನಾನೂ ಚೆಕ್ ಮಾಡಿಸ್ಕೋಬೇಕಿತ್ತು .(ನನ್ ಹತ್ರ ಗಾಡಿ ಇಲ್ಲ ,ಇಲ್ಲಾಂದ್ರೆ ಟ್ರಾಫಿಕ್ ನಲ್ಲೆ ಚೆಕ್ ಮಾಡ್ತಾ ಇದ್ದೆ)
ಹಾಯ್ ಹರೀಶ್..
ಹಾಗಾದ್ರೆ ನಾನೇ ಬೆಟರ್ರು..ನನು ಬಿಎಂಟಿಸಿ ಬಸ್ಸಲ್ಲೇ ಓಡಾಡೋದು!!!..ಸತ್ಯ, ಶಿಸ್ತು, ದಕ್ಷತೆಗೆ ಈಗಿನ ಕಾಲದಲ್ಲಿ ಬೆಲೆಯಿದೆಯೇ?
-ಚಿತ್ರಾ
@ಸಂದೀಪ್:
ಗಾಡಿ ಇಲ್ಲದೆ ಆರಾಮಾಗಿದೀರ! ಸುಖಪುರುಷ!!
ವೆಬ್ ಸೈಟ್ ಯಾವುದೂ ಇದ್ದಂತಿಲ್ಲ... ನಾವೇ ಸ್ಟಾರ್ಟ್ ಮಾಡಬಹುದೇನೋ!
An idiot + An idea = A .com
ಅಂತಾರಲ್ಲ!!
@ಚಿತ್ರಾ:
ಹೋದ ವಾರ ನಾನು ಮೇಖ್ರಿ ಸರ್ಕಲ್ ಬಳಿ ಹೋಗ್ತಿರ್ಬೇಕಾದ್ರೆ ಒಂದು ಬಿ.ಎಂ.ಟಿ.ಸಿ ಬಸ್ಸು ಎಡದಿಂದ ಓವರ್ಟೇಕ್ ಮಾಡಿ ಇದ್ದಕ್ಕಿದ್ದಂತೆ ಬಲಕ್ಕೆ ಬಂದು ನನ್ನ ಕಾರಿನ ಮುಂದಿನ ಎಡಭಾಗದ ಇಂಡಿಕೇಟರಿನ ಗ್ಲಾಸ್ ಕಿತ್ತು ಹೋಯ್ತು.... ಆ ಬಸ್ಸಲ್ಲಿ ನೀವೇನಾದ್ರೂ ಇದ್ರಾ?
ನಿಮ್ಮ ಮೂರ್ಖತನ ಚಿರಾಯುವಾಗಿರಲಿ. ಆಗ ಮಾತ್ರ ಬದುಕು ಇತರರ ಪಾಲಿಗೂ ಸಹ್ಯವಾಗಲು ಸಾಧ್ಯ.
- ಪಲ್ಲವಿ ಎಸ್.
ಕಾಮೆಂಟ್ ಪೋಸ್ಟ್ ಮಾಡಿ