ಶನಿವಾರ, ಜುಲೈ 26, 2008

ಆರು ಹಿತವರೋ ಎನಗೆ

ಏಪ್ರಿಲ್ ನಲ್ಲಿ ನಡೆದ ವಿಷಯ. ಏನನ್ನೋ ತರಲು ಬ್ರಿಗೇಡ್ ರೋಡಿಗೆ ಹೋಗಬೇಕಾಗಿತ್ತು. ಟ್ರಿನಿಟಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದೆ. ಎದುರಿನಿಂದ ಒಬ್ಬ ವ್ಯಕ್ತಿ ಕುಂಟುತ್ತಾ ಬರುತ್ತಿದ್ದ. ಪೋಲಿಯೋ ಆಗಿದ್ದಿರಬೇಕು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದನೋ ಏನೋ, ನಡೆದಾಡಲು ಕಷ್ಟ ಪಡುತ್ತಿದ್ದ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್... ಐ ಡೋಂಟ್ ಹ್ಯಾವ್ ಮನಿ. ಪ್ಲೀಸ್ ಗಿವ್ ೧೦ ರುಪೀಸ್" ಎಂದು ಕೇಳಿದ. ನೋಡಿ ಕನಿಕರ ಮೂಡಿತು. ಹತ್ತು ರೂಪಾಯಿ ತೆಗೆದು ಕೊಟ್ಟೆ.

ಸುಮಾರು ಹದಿನೈದು ದಿನಗಳು ಕಳೆದಿರಬಹುದು. ಭಾನುವಾರವಾಗಿದ್ದರಿಂದ ಮಧ್ಯಾಹ್ನದ ಅಡಿಗೆಗೆ ತರಕಾರಿ ತರಲು ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿ ಬರುತ್ತಿದ್ದೆ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್..." ಎಂಬ ಧ್ವನಿ ಕೇಳಿತು. ಅದೇ ವ್ಯಕ್ತಿ! ಎಲಾ ಇವನ! ದುಡ್ಡು ಕಳೆದುಕೊಂಡು ಮೆಜೆಸ್ಟಿಕ್ಕಿಗೆ ಹೋಗುವುದು ಇವನ ಖಾಯಂ ಉದ್ಯೋಗ!! "ಸ್ವಲ್ಪ ದಿನದ ಹಿಂದೆ ಎಂ.ಜಿ.ರೋಡಿನಲ್ಲಿ ಸಿಕ್ಕಿ ಇದೇ ಕಥೆ ಹೇಳಿದ್ದೆಯಲ್ಲಾ" ಎಂದು ಗದರಿದೆ. ಅವನು ಕಕ್ಕಾಬಿಕ್ಕಿಯಾದವನಂತೆ ಕಂಡ. ಮತ್ತೇನೂ ಕೇಳದೆ ಹಾಗೇ ಮುಂದೆ ಹೋಗಿಬಿಟ್ಟ.

ಕಳೆದ ತಿಂಗಳು ಐ.ಟಿ.ಪಿ.ಎಲ್ ಪಕ್ಕದಲ್ಲಿರುವ ನಮ್ಮ ಆಫೀಸಿನ ಮುಂದೆ ನಡೆದು ಬರುತ್ತಿದ್ದೆ. ಅದೇ ವ್ಯಕ್ತಿ ಮತ್ತೆ ಕಂಡ. ಅವನಿಗೆ ನನ್ನ ಗುರುತು ಹೇಗೆ ಸಿಕ್ಕೀತು? "ಸಾರ್.." ಎಂದು ತನ್ನ ವರಸೆ ಆರಂಭಿಸಿದ. ಆದರೆ ಆತ ತನ್ನ ಬಾಯಿ ತೆಗೆಯುವಷ್ಟರಲ್ಲಿಯೇ ಅವನನ್ನು ಸುಮ್ಮನಿರಿಸಿ, ಮತ್ತೆ ಮತ್ತೆ ನನಗೇ ಗಂಟು ಬೀಳುತ್ತೀಯಾ ಎಂದು ಬೈದು ಮುಂದೆ ಹೋದೆ. ಕಾಲು ಹೀಗಾಗಿದ್ದರೂ ಈ ರೀತಿ ಜನರಿಗೆ ಸುಳ್ಳು ಹೇಳಿ ದುಡ್ಡು ಕೀಳುತ್ತಾರಲ್ಲಾ ಎಂದೆನಿಸಿತು.

ಅದಾದ ಮೇಲೆ ನನಗವನು ಕಂಡಿಲ್ಲ. ಆದರೆ ಯಾರೇ ಬೇಡುತ್ತಿರುವವರು ಕಂಡರೂ ಆತ ನನ್ನ ಮನಸ್ಸಿನಲ್ಲಿ ಪ್ರತ್ಯಕ್ಷವಾಗುತ್ತಾನೆ.

***

ಸ್ವಲ್ಪ ದಿನಗಳ ಹಿಂದೆ ರಾತ್ರಿ ಡೈರಿ ಸರ್ಕಲ್ ಬಳಿ ಬಸ್ ಕಾಯುತ್ತಾ ನಿಂತಿದ್ದೆ. ಯಾರೋ ಒಬ್ಬ ಬಂದು "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದ. ಹೌದೆಂದು ತಲೆಯಾಡಿಸಿದೆ. ಮಹಾರಾಷ್ಟ್ರದಿಂದ ಬಂದಿದ್ದಾಗಿಯೂ ತನ್ನ ಪರ್ಸ್ ಅನ್ನು ಯಾರೋ ಕದ್ದಿದ್ದಾರೆಂದೂ, ಈಗ ಇರಲು-ಉಣ್ಣಲು ದುಡ್ಡಿಲ್ಲವೆಂದೂ ತನ್ನ ಕಥೆ ಹೇಳಿದ. ತನಗೇನೂ ದುಡ್ಡು ಬೇಡ, ತನ್ನ ಮಗನಿಗೆ ಊಟಕ್ಕೆ ದುಡ್ಡು ಕೊಟ್ಟುಬಿಡಿ ಎಂದು ತನ್ನ ಮಗನನ್ನು ತೋರಿಸಿದ. ಅವನ ಹೆಂಡತಿಯೂ ಜೊತೆಯಲ್ಲಿದ್ದಳು. ಆಕೆಯೂ ದೀನವಾದ ಮುಖದಿಂದ ಬೇಡಿದಳು. ಆದರೆ ಹಿಂದಿನ ಅನುಭವದಿಂದಲೋ ಏನೋ, ಕೊಡುವುದಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಅವನು ಹೋದ ಮೇಲೆ ಏನೇನೋ ಯೋಚನೆಗಳು ಬಂದವು. ಅವನು ನಿಜವಾಗಿಯೂ ದುಡ್ಡು ಕಳೆದುಕೊಂಡವನಾಗಿದ್ದರೆ...? ಯಾರೋ ಸುಳ್ಳು ಹೇಳಿ ಭಿಕ್ಷೆ ಎತ್ತಿದ್ದರಿಂದಾಗಿ ನಿಜವಾಗಿ ಕಷ್ಟದಲ್ಲಿರುವವರೂ ಏನನ್ನೂ ಪಡೆಯಲಾಗುವುದಿಲ್ಲವಲ್ಲ ಎನಿಸಿತು.

ಮರುದಿನ ಆಫೀಸಿನಿಂದ ಮನೆಗೆ ಬರುವಾಗ ಸಂಜೆ ಮನೆಯ ಬಳಿ ಪಾನೀಪುರಿ ತಿನ್ನುತ್ತಾ ನಿಂತಿದ್ದೆ. ಹಿಂದಿನ ದಿನ ಕಂಡಿದ್ದ ಅದೇ ವ್ಯಕ್ತಿ ಅಲ್ಲಿಗೆ ಬರಬೇಕೆ? ಅವನ ಹೆಂಡತಿಯೂ ಮಗನೂ ಜೊತೆಗಿದ್ದರು. "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದಾಗ "ನಿನ್ನೆ ಡೈರಿ ಸರ್ಕಲ್ ನಲ್ಲಿ ಸಿಕ್ಕಿದ್ಯಲ್ಲಾ" ಎಂದೆ. ಕನ್ನಡದಲ್ಲಿ ನಾನು ಹೇಳಿದ್ದು ಅವನಿಗೆ ತಿಳಿಯಿತೋ ಬಿಟ್ಟಿತೋ, ಆದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ. ಅಲ್ಲಿ ಪಾನೀಪುರಿ ತಿನ್ನಲು ಬಂದವರೆಲ್ಲಾ ನನ್ನನ್ನೇ ನೋಡಲಾರಂಭಿಸಿದರು. ಅವರಲ್ಲೊಬ್ಬ "ಅವನು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ" ಎಂದ. ಆಗ ಆ ವ್ಯಕ್ತಿಯ ಪುರಾಣವನ್ನು ಅಲ್ಲಿದ್ದವರಿಗೆ ತಿಳಿಸಿದೆ. "ಹೀಗೆ ಭಿಕ್ಷೆ ಕೇಳುವವರು ಬಹಳ ಜನರಿದ್ದಾರೆ" ಎಂದು ಕೆಲವರು ಗೊಣಗಿಕೊಂಡರು.

***

ಬೆಂಗಳೂರಿನಲ್ಲಿ ಗೆಳೆಯರು, ಸಂಬಂಧಿಗಳು ಬೇಕೆಂದರೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಇವರು ಮತ್ತೆ ಮತ್ತೆ ನನಗೇ ಸಿಗುತ್ತಾರೆ ಎಂದರೆ ಅದೇನು ವಿಧಿವಿಲಾಸವೋ ಕಾಕತಾಳೀಯವೋ?

ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದೇ ತಿಳಿಯುವುದಿಲ್ಲ. ಆರು ಹಿತವರೋ ಎನಗೆ...

13 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ...
"ಆರು ಹಿತವರೋ ಎನಗೆ"
ಲೇಖನದ ಟೈಟಲ್ ಹಾಗೂ ಅಂತ್ಯದ ನಡುವಣದ ಎರಡೂ ಸಂಧರ್ಭಗಳು ಓದಿ ನೆನಪಿಟ್ಟುಕೊಳ್ಳುವಂತಿವೆ. ಹೀಗೆ ಯಾರಾದ್ರೂ ನಮ್ಮನ್ನ ಕೇಳ್ಕೊಂಡು ಬಂದ್ರೆ ಮುಂದೆ ಹುಷಾರಾಗಿರ್ಬಹುದು. ಒಳ್ಳೆಯ ಮಾಹಿತಿ.

ರಾಜೇಶ್ ನಾಯ್ಕ ಹೇಳಿದರು...

ಹರೀಶ್,

ಮಹಾರಾಷ್ಟ್ರದಲ್ಲೊಂದು ಹಳ್ಳಿಯಿದೆ. ಅಲ್ಲಿನ ಬಹುತೇಕ ಹೆಚ್ಚಿನ ಜನರು (ಕೆಲವೊಂದು ಸಮಯದಲ್ಲಿ ಒಂದು ಸಂಪೂರ್ಣ ಕುಟುಂಬವೇ) ಈ ರೀತಿ ಸುಳ್ಳು ಹೇಳಿ ಜನರಿಂದ ಹಣ ಕೀಳುವ ಕಾಯಕದಲ್ಲಿ ತೊಡಗಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ಚೆನ್ನೈನಲ್ಲಿ ’ನಿಮಗೆ ಮರಾಠಿ/ಹಿಂದಿ ಬರುತ್ತಾ, ನಾವು ಮಹಾರಾಷ್ಟ್ರದಿಂದ ಬಂದಿದ್ದೇವೆ..ಹಣ ಕಳೆದುಕೊಂಡು ಕಷ್ಟದಲ್ಲಿದ್ದೇವೆ...ಈಗ ಮರಳಿ ಊರಿಗೆ ಹೋಗಲು ಹಣ ಬೇಕು ..’ಎಂದು ಅಜ್ಜ, ಅಜ್ಜಿ, ಮಕ್ಕಳು, ಹೆಂಗಸರು ಮತ್ತು ಯುವಕರಿದ್ದ ಕುಟುಂಬವೇ ನನಗೆ ಗಂಟು ಬಿದ್ದಿತ್ತು. ಕನಿಕರ ಪಟ್ಟು ೨೦೦ ರೂಪಾಯಿ ನೀಡಿದ್ದೆ. ೨ ತಿಂಗಳ ಬಳಿಕ ಚೆನ್ನೈನ ಮತ್ತೊಂದೆಡೆ ಇದೇ ಕುಟುಂಬ ಇದೇ ರೀತಿ ಮತ್ತೊಬ್ಬರಲ್ಲಿ ಮಾತನಾಡುವುದನ್ನು ಕಂಡು ನಾನು ಬೇಸ್ತು ಬಿದ್ದದ್ದು ಅರಿವಾಯಿತು. ಈಗ ಮಂಗಳೂರು, ಹುಬ್ಬಳ್ಳಿ, ಉಡುಪಿಯಲ್ಲೂ ಈ ಗುಂಪುಗಳನ್ನು, ಅಜ್ಜ-ಅಜ್ಜಿಯರನ್ನು ಕಂಡಿದ್ದೇನೆ. ವ್ಯವಸ್ಥಿತ ಜಾಲದಂತೆ ಇವರು ಕಾರ್ಯ ನಿರ್ವಹಿಸುತ್ತಾರೆ.

ಸುಧೇಶ್ ಶೆಟ್ಟಿ ಹೇಳಿದರು...

nanagu inthaha anubhava bengaloorinalli aagiththu.
naanu haNa kodalu thayaaraagidde.
nanna geLeya bedavendu eledukondu hoda.

Harisha - ಹರೀಶ ಹೇಳಿದರು...

ಶಾಂತಲಕ್ಕ, ನಮ್ಮನ್ನು ಮರುಳು ಮಾಡುವವರು ಇದ್ದೇ ಇರುತ್ತಾರೆ. ಎಷ್ಟೇ ಹುಶಾರಾಗಿದ್ದರೂ ಕಷ್ಟ.

ರಾಜೇಶ್, ೧೧ ವರ್ಷದ ಹಿಂದೆ ೨೦೦ ರೂಪಾಯಿ! ದೊಡ್ಡ ಮಕಮಲ್ ಟೋಪಿಯನ್ನೇ ಹಾಕಿದ್ದಾರೆ ಅವರು!!
ಇಂಥ ಜಾಲವನ್ನು ಕಂಡುಹಿಡಿದು ಅಂಥವರನ್ನು ರಿಮಾಂಡ್ ಹೋಂಗಳಿಗೆ ಕಳಿಸಿದರೆ ಹೇಗೆ? :-)

ಸುಧೇಶ್, ಸದ್ಯ ಬಚಾವಾದಿರಿ. ನಿಮ್ಮ ಗೆಳೆಯನಿಗೆ ಧನ್ಯವಾದ ಹೇಳಿ :-)

Shrinidhi Hande ಹೇಳಿದರು...

ಅವರ ಸಾಚಾತನ ಅರಿಯಲು ಹೀಗೆ ಮಾಡಿ- ಹಣದ ಬದಲು ಟಿಕೆಟ್ ನಾನೇ ತೆಗೆಸುತ್ತೇನೆ, ಬಸ್ ಹತ್ತು... ಎನ್ನಿ... ಅವರು ಖ೦ಡಿತವಾಗಿ ಹಣವೇ ಬೇಕು ಎ೦ದು ಪೀಡಿಸುತ್ತಾರೆ... ಮಗುವಿಗೆ ತಿ೦ಡಿ ಕೊಡಹೋದರೂ ಇದೇ ಗೋಳು

Vish ಹೇಳಿದರು...

harish avarige namaskara,,

nagu banthu nimma lekhana odi. yaake andare ninage pade pade sikka bikshakare siktha iddare antha.. ene agali lekhana thumba chennagide.

Harisha - ಹರೀಶ ಹೇಳಿದರು...

ಶ್ರೀನಿಧಿ ಅವರೇ, ನಮಗೆ ಸಮಯ ಇದ್ದರೆ ಹಾಗೆಲ್ಲ ಮಾಡಬಹುದು.. ನಾವೇ ತರಾತುರಿಯಲ್ಲಿದ್ದರೆ? :-)

ಹೌದು ವಿಶ್, ನನಗೇ ಗಂಟು ಬೀಳುತ್ತಿದ್ದಾರೆ.. ನಿಮ್ಮ ಅಡ್ರೆಸ್ಸ್ ಕೊಡಿ.. ಮುಂದಿನ ಬಾರಿ ಸಿಕ್ಕಿದಾಗ ಅವರಿಗೆ ಕೊಟ್ಟು ನಿಮ್ಮ ಬಳಿ ಕಳಿಸುತ್ತೇನೆ ;-)
ಕಮೆಂಟಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಬ್ಲಾಗಿಗೆ, ಬ್ಲಾಗ್ ಲೋಕಕ್ಕೆ ಸ್ವಾಗತ :-)

Shruthi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Harisha - ಹರೀಶ ಹೇಳಿದರು...

ಶ್ರುತಿ, ನಿಜ. ಯಾರನ್ನೂ ನಂಬಕ್ಕಾಗಲ್ಲ. ಕಾಲ ಕೆಟ್ಟು ಹೋಗಿದೆ :D

ಶರಶ್ಚಂದ್ರ ಕಲ್ಮನೆ ಹೇಳಿದರು...

"ಆಪ್ ಕೊ ಹಿಂದಿ ಮಾಲೂಮ್ ಹೈ ಕ್ಯಾ" ಅನುಭವ ನನಗೂ ಆಗಿದೆ. ನಾನು ಹತ್ತು ರೂಪಾಯಿ ಕಳೆದುಕೊಂಡಿದ್ದೇನೆ ಸಿಲ್ಕ್ ಬೋರ್ಡ್ ಹತ್ತಿರ.

Harisha - ಹರೀಶ ಹೇಳಿದರು...

ಶರಶ್ಚಂದ್ರ, ನೀವು ಸಿಲ್ಕ್ ಬೋರ್ಡಿನ ಬಳಿ ದುಡ್ಡು ಕಳೆದುಕೊಂಡಿದ್ದೀರಿ ಅಂದಮೇಲೆ ಆ ಕುಟುಂಬ ಬೆಂಗಳೂರು ತುಂಬಾ ತಿರುಗಾಡುತ್ತದೆ ಎಂದಾಯಿತು...

ನಿಮ್ಮ ಕಮೆಂಟಿಗೆ ಧನ್ಯವಾದಗಳು.

ಅನಾಮಧೇಯ ಹೇಳಿದರು...

"ಆಪ್ ಕೊ ಹಿಂದಿ ಮಾಲೂಮ್ ಹೈ ಕ್ಯಾ" aanubava nange Hyderbad li agittu!!!!!!!

Harisha - ಹರೀಶ ಹೇಳಿದರು...

ಸೂರಜ್,
ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಇದೊಂದು ದೇಶವ್ಯಾಪಿ ಜಾಲವಿರಬಹುದೇ ಹಾಗಾದರೆ?!!