ಶುಕ್ರವಾರ, ಫೆಬ್ರವರಿ 1, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೨)

ಮೊದಲನೆಯ ಭಾಗದಿಂದ ಮುಂದುವರೆದಿದೆ

ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.

ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.

ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್‍ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!

ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:

"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...

ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.

"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...

ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.

"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"

ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.

ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.

ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.

ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...

"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"

ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...

ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.

*******

ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.

"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!

12 ಕಾಮೆಂಟ್‌ಗಳು:

Seema S. Hegde ಹೇಳಿದರು...

ಅಬ್ಬಾ! ಏನೆಲ್ಲ ಕಲ್ಪನೆ ಮಾಡಿದಿದ್ದಿ.
ಬದುಕಿದೆ ಹಂಗಾದ್ರೆ!! ಬರದಿದ್ದು ಚೊಲೋ ಆಜು. ತುದಿಯ ತನಕನೂ interest ಉಳಿಸಿದ್ದೆ. Good work :)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ್ ಅವರೆ...
ಕುತೂಹಲಕಾರಿಯಾಗಿತ್ತು ಕತೆ, ಚೆನ್ನಾಗಿ ಬರೆದಿದ್ದೀರಾ.

Harisha - ಹರೀಶ ಹೇಳಿದರು...

ಸೀಮಾ, ಶಾಂತಲ, ಧನ್ಯವಾದಗಳು

ತೇಜಸ್ ಜೈನ್ Tejas jain ಹೇಳಿದರು...

ಬಾಳದೋಣಿಯ ನಾವಿಕನಿಗೆ ಪ್ರತೀ ಅಲೆಯೂ ಸುಂದರ ಕಾವ್ಯ........

Avinash R K ಹೇಳಿದರು...

mundina bhaga vannu kalpane maadi bari... avalu yenu madidalu aamele anta..... it improves ur imagination... haagu vondu kathe sigutte.. kannada film industry ge...

ಶ್ರೀನಿಧಿ.ಡಿ.ಎಸ್ ಹೇಳಿದರು...

ಹರೀಶ್, ಸೊಗಸಾಗಿ ಬರೆಯುತ್ತೀರಿ. ನಿಮ್ಮ ಜೊತೆ ಒಂದು ಸಂತಸದ ಸುದ್ದಿ ಹಂಚಿಕೊಳ್ಳೋಣಾ ಅಂತ.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

Harisha - ಹರೀಶ ಹೇಳಿದರು...

ತೇಜಸ್, ಏನಪ್ಪಾ ಹಾಗಂದ್ರೆ?

ಅವಿನಾಶ್, ಈ ಘಟನೆ ನಿಜವಾಗಿ ನಡೆದಿದ್ದು.. ಕಲ್ಪಿಸಿಕೊಂದಿದ್ದಲ್ಲ.. ಹಾಗಾಗಿ ಮುಂದೆ ಕಲ್ಪಿಸಿಕೊಲ್ಲಕ್ಕೆ ಹೋಗಲ್ಲ.. ಅಲ್ದೇ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಕಥೆ ಬರೆಯೋ ಅಷ್ಟು ದೊಡ್ಡ ಕಥೆಗಾರ ಅಲ್ಲ ನಾನು... ಅದಿರ್ಲಿ, ಕನ್ನಡ ಚಿತ್ರಗಳಲ್ಲಿ ಕಥೆ ಇರುತ್ತಾ? :)

ಶ್ರೀನಿಧಿ, ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು... ಬ್ಲಾಗರ್ಸ್ ಮೀಟ್ ಬಗ್ಗೆ ನನ್ನ ಅಭಿಪ್ರಾಯವನ್ನು ಇಲ್ಲಿ ಬರೆದಿದ್ದೇನೆ.. ನೀವು ನೋಡಿರಬಹುದು.

Shrinidhi Hande ಹೇಳಿದರು...

ನಿಮ್ಮ N73 m ಪುಣ್ಯ ಮಾಡಿತ್ತು...

Harisha - ಹರೀಶ ಹೇಳಿದರು...

@Shrinidhi Hande:
ಈ ಮೊಬೈಲ್ ನನ್ನ ಕೈಗೆ ಸಿಕ್ಕಿರೋದು ಅದು ಮಾಡಿದ ಏಳೇಳು ಜನ್ಮದ ಪಾಪದ ಫಲ ಎಂಬುದು ನನ್ನೆಲ್ಲಾ ಸ್ನೇಹಿತರ ಅಂಬೋಣ. ನನಗೂ ಹಾಗೇ ಅನ್ನಿಸುತ್ತೆ (ಅದಕ್ಕೆ ಕಾರಣವೂ ಇದೆಯೆನ್ನಿ)... ನೀವೊಬ್ಬರೇ ಅದಕ್ಕೆ ವ್ಯತಿರಿಕ್ತವಾಗಿ ಹೇಳಿರೋದು!!

ಧನ್ಯವಾದಗಳು :-)

ಸಂದೀಪ್ ಕಾಮತ್ ಹೇಳಿದರು...

ಸಕ್ಕತ್ ಹಾಟ್ ಮಗಾ:)

Harisha - ಹರೀಶ ಹೇಳಿದರು...

ಥ್ಯಾಂಕ್ಸ್ ಮಚ್ಚಾ :-)

Avidada ಹೇಳಿದರು...

aiyyo harisha... ond hudki mansu artha madkolok agalvalo ninge..