ಶುಕ್ರವಾರ, ಆಗಸ್ಟ್ 31, 2007

ಮದುವೆಯ ಈ ಬಂಧ!

ಶಿರಸಿಯ ಲಿಂಗದಕೋಣ ಕಲ್ಯಾಣಮಂಟಪ ಸುಸಜ್ಜಿತವಾಗಿದ್ದು ಸುತ್ತಲಿನ ಹತ್ತೂರಿಗೆ ಹೆಸರುವಾಸಿಯಾಗಿದೆ. ಶಿರಸಿ-ಸಿದ್ಧಾಪುರದ ಸುತ್ತಮುತ್ತಲಿನ ಬಹುತೇಕ ಮದುವೆಗಳು ಅಲ್ಲಿ ನಡೆಯುತ್ತವೆ. ಅಲ್ಲಿ ಎರಡು ಸಭಾಂಗಣಗಳಿದ್ದು ಮೇಲೆ ಹಾಗೂ ಕೆಳಗೆ ಪ್ರತ್ಯೇಕ ಮದುವೆಗಳು ನಡೆಯುವುದು ಸರ್ವೇಸಾಮಾನ್ಯ. ಇನ್ನು ಕೆಲವು ಬಾರಿ, ಮೇಲೆ ಯಾವುದೇ ಮದುವೆಗಳಿಲ್ಲದಿದ್ದರೆ ಕೆಳಗೆ ಮದುವೆ ನಡೆಸುವುದು, ಸಾಂಪ್ರದಾಯಿಕ ಪದ್ಧತಿಯಂತೆ ನೆಲದ ಊಟ ಹಾಕುವುದು, ಮೇಲೆ ಬಫೇ ಸಿಸ್ಟಂ ನಲ್ಲಿ ಊಟ ಹಾಕುವುದು ಕೂಡ ಹೊಸದೇನಲ್ಲ. ಬಂದವರಿಗೆ ಗಡಿಬಿಡಿಯಿದ್ದರೆ (ಇಲ್ಲದಿದ್ದರೂ) ಬೇಗ ಉಂಡು ಹೋಗಲು ಇದರಿಂದ ಸಹಕಾರಿಯಾಗುತ್ತದೆಂಬುದನ್ನು ಬಾಯಿ ಬಿಟ್ಟೇನೂ ಹೇಳಬೇಕಿಲ್ಲ.

ಸಮಯಕ್ಕೆ ಸರಿಯಾಗಿ ಬರುವುದು ಶಿರಸಿ ಕಡೆಯ ಒಂದು ಪದ್ಧತಿ. ಹಾಗೆಂದು ಇವರೇನೂ ಮಹಾ ಸಮಯಪಾಲಕರೆಂದುಕೊಳ್ಳಬೇಡಿ. ನಾನು ಹೇಳಿದ ಪದ್ಧತಿ ಊಟದ ಸಮಯಕ್ಕೆ ಸರಿಯಾಗಿ ಬರುವುದು. ಮದುವೆ ಬೆಳಿಗ್ಗೆ ೯-೩೦ ಕ್ಕೇ ಇರಲಿ, ೧೨-೦೦ ಘಂಟೆಗೇ ಇರಲಿ, ಹೆಚ್ಚಿನ ಮಹಾಪುರುಷರು ಬರುವುದು ೧೨-೩೦ ರ ನಂತರವೇ. ೧೨-೧೫ ರವರೆಗೆ ಖಾಲಿ ಹೊಡೆಯುವ ಸಭಾಂಗಣ ೧ ಘಂಟೆ ಸುಮಾರಿಗೆ ಜನರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ೨-೧೫ ಕ್ಕೆ ನೋಡಿದರೆ ಮತ್ತೆ ೧೨-೧೫ ರ ಸ್ಥಿತಿ! ಗಂಡು-ಹೆಣ್ಣಿನ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಇದು ಇಂದಿನ ವೇಗದ ಬದುಕಿನ ಫಲವೋ, ಅಥವಾ ಶಿಥಿಲವಾಗುತ್ತಿರುವ ಮಾನವ ಸಂಬಂಧಗಳ ಪ್ರತೀಕವೋ ತಿಳಿಯದು.

ಹೀಗಿರುವಾಗ ಭಾನುವಾರ ಒಂದು ಮದುವೆಗೆ ಹೋಗಿದ್ದೆ. ಬಹಳ ಬಂಧು-ಮಿತ್ರರಿದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದುವೆಗೆ ಬಂದಿದ್ದರು. ಮದುವೆ ನಡೆಯಿತು. ಈಗ ಊಟದ ಸಮಯ. ಮೇಲಿನ ಸಭಾಂಗಣದಲ್ಲಿ ಯಾವುದೇ ಮದುವೆಯಿರದಿದ್ದರೂ ಬಫೇ ಇಟ್ಟಿರಲಿಲ್ಲ. ಇದನ್ನು ಮೊದಲೇ ಅರಿತಿದ್ದ ಕೆಲವರು ೧೨-೩೦ ಕ್ಕೆ ಪ್ರಾರಂಭವಾಗುವ ಸಂತರ್ಪಣೆಗೆ ೧೨ ಘಂಟೆಗೇ ಹೋಗಿ ಕುಳಿತಿದ್ದರು. ಹಾಗಾಗಿ ಮೊದಲ ಪಂಕ್ತಿಗೆ ಊಟ ಮಾಡಬೇಕೆಂದು ೧೨-೨೫ ಕ್ಕೆ ಎದ್ದು ಸಿದ್ಧವಾದವರಿಗೆ ಜಾಗವೇ ಇಲ್ಲದಂತಾಗಿ ನಂತರದ ಬಾರಿಗೆ ಕಾಯುವಂತಾಯಿತು. ಇನ್ನು ಎರಡನೇ ಪಂಕ್ತಿಗೆ ಹೋಗಲು ಸಾಲು ಬೇರೆ!! ೫೦ ಜನರ ಬಸ್ನಲ್ಲಿ ಸೀಟು ಹಿಡಿಯುವುದಕ್ಕಿಂತ ೨೦೦ ಜನರು ಹಿಡಿಸುವ ಈ ಭೋಜನಶಾಲೆಯಲ್ಲಿ ಜಾಗ ಹಿಡಿಯುವುದೇ ಕಷ್ಟಕರವಾಗಿತ್ತು. ಇದರಿಂದ ನಿಧಾನವಾಗಿ ಬಂದವರ ಗೊಣಗಾಟ ಆರಂಭವಾಯಿತು. "ಬಫೇ ಇಡಬೇಕಾಗಿತ್ತು. ಇಲ್ಲಿ ಇಷ್ಟೊಂದು ರಶ್ ಆಗ್ತಿರಲಿಲ್ಲ", "ಬಫೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಮನೆಯಲ್ಲಿರಬಹುದಾಗಿತ್ತು" ಎಂಬ ಮಾತುಗಳು ಕೇಳಿ ಬಂದವು. ಆದರೆ ಕಾಯದೆ ವಿಧಿಯಿರಲಿಲ್ಲ! ತಮ್ಮ ಮನೆಯ ಜನರೊಂದಿಗೆ ಒಟ್ಟಿಗೆ ಕುಳಿತು ಉಣ್ಣುವ ಅವಕಾಶ ಬಹುಶಃ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಮನೆಯವರೆಲ್ಲರಿಗೂ ಊಟವಾಗದೆ ಮನೆಗೆ ಹೋಗುವಂತಿಲ್ಲವಲ್ಲ! ಉಂಡಾದವರು ಕುಟುಂಬದವರಿಗಾಗಿ, ಉಳಿದವರು ಊಟಕ್ಕಾಗಿ ಕಾಯುವುದೇ ಕೆಲಸವಾಯಿತು. ಬಂದ ಸುಮಾರು ೮೦೦ ಮಂದಿಗೆ ಊಟವಾಗುವ ಹೊತ್ತಿಗೆ ಸಮಯ ೩-೩೦ ಆಗಿತ್ತು. ಬ್ರಾಹ್ಮಣೋ ಬಹುಜನಪ್ರಿಯಃ ಎಂಬ ಉಕ್ತಿ ಬ್ರಾಹ್ಮಣೋ ಭೋಜನಪ್ರಿಯಃ ಎಂದು ಏಕೆ ಬದಲಾವಣೆಗೊಂಡಿದೆ ಎಂಬುದು ಅರಿವಿಗೆ ಬಂದಿತ್ತು.

ಬಂದವರೆಲ್ಲ ಮಾತನಾಡುತ್ತ ಕುಳಿತಿದ್ದಾಗ ಕೆಲವು ಹೆಂಗಸರು ಹೀಗೆ ಮಾತಾಡುತ್ತಿದ್ದುದು ಕೇಳಿಬಂತು: "ಹಿಂದೆಲ್ಲ ೩-೪ ದಿನ ಮೊದಲೇ ಬಂದು ಎಲ್ಲ ತಯಾರಿ ನಡೆಸುತ್ತಿದ್ದೆವು. ಒಟ್ಟಿಗೆ ಬೆರೆತು ಮಾತನಾಡಲು ಸಮಯವಿರುತ್ತಿತ್ತು. ಈಗ ಕಲ್ಯಾಣಮಂಟಪದಲ್ಲಿ ಮದುವೆ ಆಗಿರೋದ್ರಿಂದ ಆ ಅವಕಾಶವೂ ಇಲ್ಲ. ಇವತ್ತು ಬಫೇ ಇಲ್ಲದೇ ಇದ್ದಿದ್ದಕ್ಕೆ ಎಲ್ಲರೂ ಸಿಕ್ಕು ಮಾತನಾಡುವಂತಾಯಿತು". ಯೋಚಿಸಿ ನೋಡಿ! ಅಕ್ಷರಶಃ ಸತ್ಯವಲ್ಲವೆ? ಮನೆಯನ್ನೆಲ್ಲ ಸುಣ್ಣ-ಬಣ್ಣ ಮಾಡಿ, ಅಂಗಳಕ್ಕೆಲ್ಲ ಚಪ್ಪರ ಹಾಕಿ, ಊರಿನ ಜನರೆಲ್ಲ ಒಂದಾಗಿ ಸೇರಿ ನಡೆಸುತ್ತಿದ್ದ ಅಂದಿನ ಕಾಲದ ಮದುವೆಯ ಸೊಬಗು ಮತ್ತೆ ನೋಡಲು ಸಿಕ್ಕೀತೇ? ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಆಗಬೇಕಾದ ವಿವಾಹ ಇಂದಿನ ಸಿನಿಮಾಗಳಲ್ಲಿ ತೋರಿಸುವಂತೆ ಹಾರ ಬದಲಾಯಿಸುವ ಶಾಸ್ತ್ರವಾಗುವ ಕಾಲ ಬರದಿದ್ದರೆ ಸಾಕು...

2 ಕಾಮೆಂಟ್‌ಗಳು:

Suresh S Murthy ಹೇಳಿದರು...

ಮದುವೆ ಅಂದರೆ ಹಾಗೆ ಕಣೊ! ಶೀಘ್ರದಲ್ಲೆ ನಾನೂ ಸಹ ಈ ಬಗ್ಗೆ ಬರೆಯುತ್ತೇನೆ..

Harisha - ಹರೀಶ ಹೇಳಿದರು...

ಮದುವೆ ಅಂದರೆ ಹೇಗೆ ಕಣೋ? :)

ನಿನ್ನ ಲೇಖನ ಯಾವಾಗ ಹಾಕ್ತೀಯ?