ಮಂಗಳವಾರ, ಫೆಬ್ರವರಿ 16, 2010

ಮೌನಾಗ್ನಿ

ಮಲ್ಲಿಗೆಯು ಸುವಾಸನೆ ಬೀರಲಿಲ್ಲ
ನಿನ್ನ ನೀಳ ಕೇಶ ರಾಶಿಯಂತೆ
ನಕ್ಷತ್ರಗಳು ಹೊಳೆಯಲಿಲ್ಲ
ನಿನ್ನ ಕಮಲದ ಕಂಗಳಂತೆ
ಮೊಗ್ಗುಗಳು ಅರಳಲಿಲ್ಲ
ನಿನ್ನ ಹವಳದ ತುಟಿಗಳಂತೆ

ಅಮೃತಶಿಲೆಯು ನುಣುಪಾಗಿ ತೋರಲಿಲ್ಲ
ನಿನ್ನ ಸುಕೋಮಲ ಕೆನ್ನೆಯಂತೆ
ನವಿಲುಗಳು ನಾಟ್ಯ ಮಾಡಲಿಲ್ಲ
ನಿನ್ನ ವೈಯಾರದ ನಡಿಗೆಯಂತೆ
ಹಕ್ಕಿಯ ಕಲರವ ಇಂಪಾಗಿ ಕೇಳಲಿಲ್ಲ
ನಿನ್ನ ಕಾಲ್ಗೆಜ್ಜೆಯ ಸದ್ದಿನಂತೆ

ಹರಿವ ನೀರು ಜುಳು ಜುಳು ನಾದ ಹೊರಡಿಸಲಿಲ್ಲ
ನೀನು ಗುನುಗುನಿಸುವ ಮಧುರ ಮಾತಿನಂತೆ
ಜೇನು ಕೂಡ ಸಿಹಿ ನೀಡಲಿಲ್ಲ
ನಿನ್ನ ಅಧರ ಸ್ಫುರಿಸಿ ನೀಡಿದಂತೆ
ಸೂರ್ಯನ ಕಿರಣವು ಕಾವೇರಿಸಲಿಲ್ಲ
ನಿನ್ನ ಬಿಗಿದಪ್ಪುಗೆಯು ಕಾವೇರಿಸಿದಂತೆ

ಹಾಗೆಯೇ ಬೆಂಕಿ ಕೂಡ ಸುಟ್ಟಿರಲಿಲ್ಲ
ಈ ನಿನ್ನ ಮೌನ ನನ್ನ ಸುಡುತ್ತಿರುವಂತೆ

ಶನಿವಾರ, ಜನವರಿ 30, 2010

ಶುಭಕಾಮನೆ

ಕನವರಿಕೆಗಳನ್ನೆಲ್ಲ ಕನಸುಗಳಾಗಿಸಿ,
ಕನಸುಗಳನ್ನೆಲ್ಲ ಮನಸಿನಾಳಕ್ಕೆ ನಾಟಿಸಿ,
ನನಸಾಗಲೇ ಬೇಕೆಂಬ ಹಠ ಮಾಡಿಸಿ,
ನೋವನ್ನೆಲ್ಲ ಮರೆಸಿ,
ನಲಿವಿಗೆ ದಾರಿ ತೋರಿಸಿ,
ನನ್ನ ಜೀವನಕ್ಕೆ ಪ್ರೀತಿ ತೋರಿಸಿ,
ನನ್ನ ಅಭ್ಯುದಯಕ್ಕೆ ಕಾರಣಳಾದ ಗೆಳತಿಯೇ,
ಕೋರುವೆ ನಿನ್ನ ಜನ್ಮದಿನಕೆ ಹರಸಿ,
ಶುಭಕಾಮನೆ

ಬುಧವಾರ, ಅಕ್ಟೋಬರ್ 14, 2009

ದೀಪಾವಳಿಗೆ... ಅದಕ್ಕೂ ಮುಂಚೆ...

"ದೀಪ್ ದೀಪ್ ದೀವಳಿಗ್ಯೋ... ಹಬ್ಬಕ್ಕೊಂದ್ ಹೋಳಿಗ್ಯೋ..." ಎಂದು ಕೂಗುತ್ತ ಊರ ಮುಂದೆ ಸಾಗಬೇಕು. ಹಚ್ಚಿಕೊಂಡು ತಂದ ಆರುತ್ತಿರುವ ಬೆಂಕಿಯ ಕೋಲುಗಳನ್ನು ರಸ್ತೆಬದಿಯಲ್ಲಿಯೋ, ಬೇಲಿ ಗೂಟಗಳಿಗೋ ಸಿಕ್ಕಿಸಬೇಕು. ಕೋಲು ಆರುವಷ್ಟರಲ್ಲಿ ಇನ್ನೊಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಎಲ್ಲ ಕೋಲುಗಳೂ ಖಾಲಿಯಾಗುವವರೆಗೂ ಹೀಗೇ ಕೂಗುತ್ತ ಸಾಗಬೇಕು. ಯಾರು ಜೋರಾಗಿ ಕೂಗುತ್ತಾರೋ ಅವರ ಹಬ್ಬದ ಸಡಗರ ಹೆಚ್ಚು ಎಂಬ ಭಾವನೆ. ಅಲ್ಲಿಗೆ ದೀಪಾವಳಿ ಮುಗಿಯುತ್ತದೆ. ಅದಕ್ಕೂ ಮುಂಚೆ...

ಅಡಿಕೆಮರದ ದಬ್ಬೆಯಾಗಲಿ ಅಥವಾ ನೇರವಾದ ಮರದ ಟೊಂಗೆಗಳಿಂದಾಗಲಿ ಸುಮಾರು ಎರಡರಿಂದ ಮೂರಡಿ ಉದ್ದದ ಕೋಲುಗಳನ್ನು ಮಾಡಿ ತುದಿಗೆ ಬಟ್ಟೆ ಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿಕೊಂಡು ಸಿದ್ಧಪಡಿಸಿಕೊಳ್ಳಬೇಕು. ದೀಪಾವಳಿಯ ಪೂಜೆಯ ಕಡೆಯ ಅಂಗವಾಗಿ ಮನೆದೇವರಿಗೆ ಮಹಾ ಮಂಗಳಾರತಿ ಮಾಡಿ ಅದೇ ದೀಪದಿಂದ ಒಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಈ ವರ್ಷದ ಹಬ್ಬವನ್ನು ಬೀಳ್ಕೊಟ್ಟು ಕಳುಹಿಸಿ ಬರಲು ಹೊರಡಬೇಕು. ಅದಕ್ಕೂ ಮುಂಚೆ...

ಬೆಳಿಗ್ಗೆ ಎದ್ದು ಕೊಟ್ಟಿಗೆಯನ್ನು ತೊಳೆದು ಶುಭ್ರಗೊಳಿಸಿ, ಸಿಂಗರಿಸಿ, ದನ-ಕರುಗಳ ಮೈ ತೊಳೆಯಬೇಕು. ಒಂದು ಲೋಟಕ್ಕೆ ಮಧ್ಯದಲ್ಲಿ ಒಂದು ದಾರ ಕಟ್ಟಿ ಕೆಂಪು-ಬಿಳಿ ಬಣ್ಣದಲ್ಲಿ ಅದ್ದಿ ಗೋವುಗಳ ಮೇಲೆ ಗೋಪಾದಗಳನ್ನು ಮೂಡಿಸಬೇಕು. ದೊಡ್ಡ ಹಸುಗಳ ಕೋಡುಗಳಿಗೆ ಬಣ್ಣ ಬಳಿಯಬೇಕು. ಕರುಗಳ ಕೊರಳಿಗೆ ಗಂಟೆ ಕಟ್ಟಿ ಸಂಭ್ರಮಿಸಬೇಕು. ಗೋವಿನ ಉಪಕಾರಗಳನ್ನು ಸ್ಮರಿಸುತ್ತ ಗೋಪೂಜೆ ಮಾಡಬೇಕು. ಗೋಗ್ರಾಸ ನೀಡಬೇಕು. ಪೂಜೆಯಾದ ಮೇಲೆ ಗೋವುಗಳನ್ನು ಮೇಯಲು ಬಿಟ್ಟು ಜಾಗಟೆ, ಗಂಟೆ ಮೊದಲಾದವುಗಳನ್ನು ಬಾರಿಸಬೇಕು. ಆ ಸದ್ದಿಗೆ ಬೆದರಿ ಓಡುವ ಅವುಗಳ ಜೊತೆ ನಾನೂ ಓಡಬೇಕು. ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಕೂತು "ರೇಸ್"ನಲ್ಲಿ ಭಾಗವಹಿಸಬೇಕು.

"ಬಲ್ಲೇಳು ಬಲಿವೀಂದ್ರನು ರಾಯ ಬಂದಾನು ತನ್ನ ರಾಜ್ಯಕೆ..." ಎಂದು ಜ್ಯೋತಿ ಹಿಡಿದು ನಡುರಾತ್ರಿಯಲ್ಲಿ ಹಾಡುತ್ತ ಮನೆ-ಮನೆಗೆ ಬರುವ ಹಬ್ಬಾಡುವವರನ್ನು ಸ್ವಾಗತಿಸಬೇಕು. "ಜಾನ್ಪೂರ್ಣಂ ಜಗಂಜ್ಯೋತಿ... ನಿರ್ಮಲವಾದ ಮನವೇ ಕರ್ಪೂರದಾರತಿ..." ಎಂದು ಅವರು ಹಾಡುವ ಅರ್ಥಪೂರ್ಣ ಪದ್ಯಗಳನ್ನು ಗಮನವಿಟ್ಟು ಆಲಿಸಬೇಕು. ಅವರು ತಂದ ಜ್ಯೋತಿಯಿಂದ ನಮ್ಮ ಮನೆಯ ದೀಪವನ್ನೂ ಬೆಳಗಿಕೊಳ್ಳಬೇಕು. ಅವರ ಜ್ಯೋತಿಗೆ ಎಣ್ಣೆಯನ್ನು ಹಾಕಬೇಕು. ಅವರಿಗೆ ಯಥೋಚಿತ ಅಡಿಕೆ-ಅಕ್ಕಿ-ದುಡ್ಡನ್ನು ದಾನ ಮಾಡಬೇಕು. ಅದಕ್ಕೂ ಮುಂಚೆ...

ನರಕ ಚತುರ್ದಶಿಯಂದು ಬೆಳಿಗ್ಗೆ ಬೇಗ ಎದ್ದು ಮೈ, ಕೈ, ಕಿವಿಗೆಲ್ಲ ಎಣ್ಣೆ ಹಾಕಿಕೊಳ್ಳಬೇಕು. ಹಿಂದಿನ ದಿನ ರಾತ್ರಿ ತುಂಬಿಸಿಟ್ಟ ಬಚ್ಚಲ ಮನೆಯ ಹಂಡೆಯ ಬಿಸಿ ಬಿಸಿಯಾದ ನೀರಿನಲ್ಲಿ ಹಚ್ಚಿಕೊಂಡಿದ್ದ ಎಣ್ಣೆಯೆಲ್ಲ ಹೋಗುವಂತೆ ಸ್ನಾನ ಮಾಡಬೇಕು. ದೇವರ ಮನೆ, ವಾಸ್ತು ಕಂಬ, ವಾಸ್ತು ಬಾಗಿಲು, ಒರಳು, ಒನಕೆ, ಒಲೆ, ಅಕ್ಕಿ ಮರಿಗೆ, ಬಾವಿ, ಬಚ್ಚಲು, ತುಳಸಿ, ದುಡ್ಡಿನ ಪೆಟ್ಟಿಗೆ - ಹೀಗೆ ಮುಖ್ಯವಾದ ಕಡೆಗಳಲ್ಲಿ ಎಲೆ, ಅಡಿಕೆ, ಹಿಂಗಾರ, ಪಚ್ಚೆ ತೆನೆ ಇಡಬೇಕು. ಎಲ್ಲ ಕಡೆಯಲ್ಲಿಯೂ ಪೂಜೆ ಮಾಡಿ, ಆರತಿ ಮಾಡಿ, ಸುಖ-ಸಮೃದ್ಧಿಗಳು ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಬಲೀಂದ್ರನನ್ನು ಪೂಜಿಸಬೇಕು. ಅದಕ್ಕೂ ಮುಂಚೆ...

"ದೊಡ್ಹಬ್ಬ" ದೀಪಾವಳಿಗೆ ಊರಿಗೆ ಹೋಗಬೇಕು! ಅದಕ್ಕೂ ಮುಂಚೆ... ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

ಗುರುವಾರ, ಅಕ್ಟೋಬರ್ 1, 2009

ಮನಸಿನ ಕನಸು

ಬಾನಲಿ ಸುಂದರ ಚಂದಿರನೋಟ
ನಿಲ್ಲದ ಕಾಲವ ಸೂಚಿಸಿದೆ
ಮೈಮರೆಸುವ ಈ ನಿನ್ನಯ ನೋಟ
ಚಂದಿರನನ್ನೂ ನಾಚಿಸಿದೆ

ಗುಡುಗಿನ ಜೊತೆಗೆ ಮಿಂಚಿನ ಆಟ
ಭೂಮಿಗೆ ಮಳೆಯನು ಸುರಿಸುತಿದೆ
ಮಿಂಚಿನ ನೋಟದ ನಿನ್ನೊಡನಾಟ
ನನ್ನಲಿ ಪ್ರೀತಿಯ ಹರಿಸುತಿದೆ

ನಡೆಸುವೆ ನಾನು ಬಲು ಹುಡುಕಾಟ
ಮರೆಯಾದರೆ ನೀನೊಂದೊಪ್ಪೊತ್ತು
ಹಗಲಿರುಳೆನ್ನದೆ ನಿನ್ನದೆ ಕಾಟ
ಕಾರಣ ವಯಸ್ಸಿದು ಇಪ್ಪತ್ತು!

ಒಲವಿನ ದಾಹ, ಸ್ನೇಹದ ಕೂಟ
ಸೋತಿತು ಹೇಗೋ ಈ ಮನಸು
ಬಾರದು ನಿದ್ದೆ, ರುಚಿಸದು ಊಟ
ಮನದಲಿ ಬರಿ ನಿನದೇ ಕನಸು

ಶುಕ್ರವಾರ, ಸೆಪ್ಟೆಂಬರ್ 18, 2009

ಮರಳಿ ಮರೆಯಾಗಿ...

ಬಾಳ ದೋಣಿ ಅಂಬಿಗರಿಲ್ಲದೆ ಅನಾಥವಾಗಿ ಬರೋಬ್ಬರಿ ಏಳು ತಿಂಗಳಾಯಿತು. ಕೆಲಸದ ಒತ್ತಡ, ಬರೆಯಬೇಕೆಂದರೂ ಬೇಡವೆನ್ನುವ ಮನಸು, ಓದುವುದರಲ್ಲೂ ಕಂಡುಬಂದ ನಿರಾಸಕ್ತಿ - ಹೀಗೆ.. ಕಾರಣಗಳು ಹಲವಾರು. ಇಲ್ಲಿಯವರೆಗೆ ನಡೆದಿದ್ದನ್ನು ಸಂಕ್ಷಿಪ್ತವಾಗಿ ಹೇಳಿಕೊಳ್ಳುವ ಬಯಕೆ:
  • ಫೆಬ್ರುವರಿಯಲ್ಲಿ ಬೆಂಗಳೂರಿನ ಸಮೀಪವಿರುವ ಸ್ಕಂಧಗಿರಿಗೆ ಹೋಗಿದ್ದೆವು. ಆದರೆ ನಾವು ಹೋದ ದಿನ ಮೋಡವೇ ಇಲ್ಲದೆ ನನಗೆ ಮತ್ತೆ ನಿರಾಸೆಯಾಯಿತು.
  • ಮಾರ್ಚಿನಲ್ಲಿ ಊರಿನಿಂದ ಬರುವಾಗ ಬಸ್ಸಿನಲ್ಲಿ "ದಟ್ಸ್-ಕನ್ನಡ"ದ ಶ್ಯಾಮಸುಂದರ್ ಅವರನ್ನು ಭೇಟಿಯಾಗಿದ್ದೆ. ಬ್ಲಾಗಿಗರ ಕೂಟ ನಡೆದು ಅಂದಿಗೆ ಸರಿಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ಅದನ್ನು ನೆನಪಿಸಿಕೊಂಡೆವು.
  • ಏಪ್ರಿಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಕೇರಳದ ವಯನಾಡಿಗೆ ಹೋಗಿದ್ದೆವು. ಅದೊಂದು ಅಭೂತಪೂರ್ವ ಅನುಭವ.
  • ಈಗ ಸುಮಾರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಲಿನಕ್ಸ್ ಅನ್ನೇ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಇಲ್ಲದೆಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ. ಈ ಲೇಖನವನ್ನು ಬರೆಯುತ್ತಿರುವುದೂ ಉಬುಂಟು ಲಿನಕ್ಸ್ ನಲ್ಲಿಯೇ. ಆರಂಭದಲ್ಲಿ ಕನ್ನಡ ಬಳಸುವಲ್ಲಿ ಸ್ವಲ್ಪ ತೊಡಕಾದಾಗ ಸಹಕರಿಸಿದ ಓಂ ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
  • ಮುಂಚೆ ಸೌಹಾರ್ದಯುತವಾಗಿದ್ದ ಕನ್ನಡ ಬ್ಲಾಗ್ ಲೋಕಕ್ಕೆ ಈಗ ಗುಂಪುಗಾರಿಕೆ ತಲೆದೋರಿದಂತೆ ಕಾಣುತ್ತಿದೆ. (ಇದು ನನ್ನ ಸ್ವಂತ ಅನಿಸಿಕೆ ಮಾತ್ರ) ಇದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಅಪಾಯಕಾರಿ ಬೆಳವಣಿಗೆ.
  • ಸಾವಿರದಷ್ಟು ಬ್ಲಾಗ್ ಬರಹಗಳನ್ನು ಓದುವುದು ಬಾಕಿ ಇದೆ. ಎಂದು ಓದಿ ಮುಗಿಸುವೆನೋ ತಿಳಿದಿಲ್ಲ. ಬ್ಲಾಗ್ ಓದುವಲ್ಲಿ, ಬರೆಯುವಲ್ಲಿ ಈಗೆರಡು ವರ್ಷಗಳ ಹಿಂದೆ ಇದ್ದ ಆಸಕ್ತಿ, ಹುರುಪು ಈಗ ಉಳಿದಿಲ್ಲ.