ಗುರುವಾರ, ಸೆಪ್ಟೆಂಬರ್ 30, 2010

ತುಮುಲ

ದಟ್ಟಡವಿಯ ಪಯಣದಲಿ ಹೊತ್ತು ಮುಗಿಯುವ ಮುನ್ನ
ನಿಶೆಯು ಆವರಿಸೆ ನೀ ಅಳುಕದಿರು ಮನವೇ...

ಮರುಭೂಮಿ ಮಡಿಲಲ್ಲಿ ಬಾಯಾರಿ ಅಲೆವಾಗ
ಮರಳ ಮರೀಚಿಕೆಯ ಕಂಡು ಸೋಲದಿರು ಮನವೇ...

ಭರವಸೆಯ ಬೆನ್ನತ್ತಿ ಕನಸ ಕುದುರೆಯನೇರೆ
ಸ್ವಪ್ನ ಗೋಪುರವ ಕಂಡು ಮರುಗದಿರು ಮನವೇ...

ಸಂಸಾರ ಸಾಗರದಿ ಅಂಬಿಗನು ಮೈಮರೆಯೆ
ಅಲೆಯ ಸೆಳೆತಕ್ಕೆ ನೀ ಅಂಜದಿರು ಮನವೇ...

ಕತ್ತಲೆಯ ಜಗದಲ್ಲಿ ಅಜ್ಞಾನ ಕದನದಲಿ
ನೆರಳೂ ಜೊತೆ ಬಿಡಲು ನೀ ಚಿಂತಿಸದಿರು ಮನವೇ...

ಬದುಕೆಂಬ ಆಟದಲಿ ಸೋಲು ಗೆಲುವುಗಳ
ಮೀರಿ ತಟಸ್ಥ ಭಾವದಿ ಸ್ಥಿತಪ್ರಜ್ಞನಾಗು ಮನವೇ...

ಸೋಮವಾರ, ಆಗಸ್ಟ್ 16, 2010

ನನ್ನರಸಿ... ನಿನ್ನರಸಿ

ನನ್ನರಸಿ ನನ್ನರಸಿ, ಕಾದಿರುವೆ ನಿನ್ನರಸಿ
ಬರಡಾದ ಬಾಳಿಗೆ ನೆರಳನು ತೋರೆ
ಆವರಿಸಿ, ನನ್ನ ನೀ ವರಿಸಿ

ನನ್ನರಸಿ ನನ್ನರಸಿ, ಬಸವಳಿದೆ ನಿನ್ನರಸಿ
ಉಸಿರಾಗಿ ಬಂದು ಹಸಿರನು ತಾರೆ
ಮಳೆ ಸುರಿಸಿ, ಪ್ರೀತಿಯ ಮಳೆ ಸುರಿಸಿ

ನನ್ನರಸಿ ನನ್ನರಸಿ, ದಣಿದಿರುವೆ ನಿನ್ನರಸಿ
ಮನದೊಳು ಚಿಮ್ಮಿಸೆ ಅಮೃತ ಧಾರೆ
ಸುಧೆ ಹರಿಸಿ, ಒಲವಿನ ಸುಧೆ ಹರಿಸಿ

ನನ್ನರಸಿ ನನ್ನರಸಿ, ಬಳಲಿರುವೆ ನಿನ್ನರಸಿ
ಸಿಹಿ ಕಹಿ ಹಂಚಿ ಬಾಳಲು ಬಾರೆ
ಕಣ್ಣೊರೆಸಿ, ನನ್ನಯ ಕಣ್ಣೊರೆಸಿ

ಚಿತ್ರ ಕೃಪೆ: FCIT

ಗುರುವಾರ, ಮೇ 20, 2010

ನಾ ಕೂಡ ನಲಿವೆ

ನಮ್ಮೂರ ಜಾತ್ರೆಲ್ಲಿ ಕಪ್ಪಡರೋ ಹೊತ್ತಲ್ಲಿ
ನನಗಾಗಿ ಕಾದಿದ್ದು ನಿಜವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ರಥಬೀದಿ ಬದಿಯಲ್ಲಿ ಗೆಳತಿಯರ ಸಂದಲ್ಲಿ
ಕುಡಿನೋಟ ಬೀರಿದ್ದು ದಿಟವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮುಸ್ಸಂಜೆ ಮಬ್ಬಲ್ಲಿ ನಿನ್ನ ತುಟಿಯಂಚಲ್ಲಿ
ನನಗಲ್ಲಿ ಕಂಡಿದ್ದು ನಗುವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮರೆಯಾಗೋ ಮೊದಲಲ್ಲಿ ನಿನ್ನ ಕಣ್ಣಂಚಲ್ಲಿ
ಮಿಂಚಾಗಿ ಮೂಡಿದ್ದು ಒಲವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಗುರುವಾರ, ಏಪ್ರಿಲ್ 15, 2010

ದೂರ

ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?

ಭಾನುವಾರ, ಏಪ್ರಿಲ್ 11, 2010

ಬಯಕೆ

ಕನವರಿಕೆಯ ಮಾತು ನಿನ್ನ ಮನದ ಮೂಲದಿ ತೆರೆಯಲಿ,
ಹಗಲುಗನಸಲಿನ್ನು ಎನ್ನ ನೆರಳು ನಿನಗೆ ತೋರಲಿ,
ಸಿಹಿನಗುವು ಮೂಡಲಿ ಇನ್ನು ನೀ..
ನನ್ನ ಸನಿಹ ಬಯಸಲಿ.