ತತ್ತ್ವಮಸಿ ವಾಕ್ಯವನು ಅರ್ಥಯಿಸಬೇಕಿದೆ
ನನ್ನೊಳಗೆ ನನ್ನನ್ನು ಹುಡುಕಾಡಬೇಕಿದೆ
ನಾನೇ ಜಗವೆಂದು ಮನಗಾಣಬೇಕಿದೆ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ
ಕಣ್ಣ ನಾ ಬಿಗಿಹಿಡಿಯೆ ಎಲ್ಲೆಲ್ಲೂ ಬೆಳಕಿಲ್ಲ
ಕಿವಿಯ ನಾ ಮುಚ್ಚಿರಲು ನಾದದಾ ಮೊಳಗಿಲ್ಲ
ನಾಸಿಕವ ಬಿಗಿಹಿಡಿಯೆ ಜಗದಿ ಪರಿಮಳವಿಲ್ಲ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ
ನನ್ನ ಕಲ್ಪನೆಯ ನರಕ, ನನ್ನ ಕಲ್ಪನೆಯ ನಾಕ
ನಾನೆಂಬ ಕಲ್ಪನೆಯ ಫಲದಿಂದಲೇ ಲೋಕ
ನಾನಿಲ್ಲವಾದರೆ ಇರಬಹುದೇ ಈ ಲೋಕ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ
ಎಲ್ಲವೂ ನನ್ನ ಮಾಯೆ, ಕೋಪವೇತಕೆ ಮನವೆ
ಎಲ್ಲರೂ ನನ್ನ ಛಾಯೆ, ತಾಪವೇತಕೆ ತನುವೆ
ನನ್ನನ್ನು ಬೇರ್ಪಡಿಸಿ ಹುಡುಕುವುದು ತರವೆ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ
ನಾ ಜನಿಸೆ ಜಗದುದಯ, ನಾ ಮಡಿಯೆ ಜಗದ ಲಯ
ನನ್ನಿಂದ ಜಗದ ನಡೆ ನಾನಲ್ಲವೇ ಜಗದೊಡೆಯ
ಅರಿತ ಮರುಕ್ಷಣದಿಂದ ಬದುಕು ಆನಂದಮಯ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿಅರಿತ ಮರುಕ್ಷಣದಿಂದ ಬದುಕು ಆನಂದಮಯ