ಮಂಗಳವಾರ, ಡಿಸೆಂಬರ್ 7, 2010

ಮೌನದ ಮಾತಲ್ಲಿ......

ಕಣ್ಣುಗಳೆರಡು ಒಂದನ್ನೊಂದು ಸಂಧಿಸಲಾಗದೆ ಗೋಡೆಗಳ ಮೇಲಿನ ಚಿತ್ರಪಟಗಳ ಮೊರೆ ಹೋಗಿದ್ದವು. ಅಲ್ಲಿದ್ದ ಇಬ್ಬರ ನಡುವೆ ಇದ್ದುದು ಕೃತಕ ನಗೆ ಮಾತ್ರ. ಆದರೆ ಆ ನಗೆಯ ಮರೆಯಲ್ಲಿ ತುಂಬಿಕೊಂಡಂಥವು ನೂರಾರು ಭಾವಗಳು. ತಮ್ಮನ್ನು ತಾವೇ ಎಂದು ಬಿಂಬಿಸಿಕೊಳ್ಳಲಾರದೆ ತಾತ್ಕಾಲಿಕ ನಗೆಯ ರೂಪದ ಮುಖವಾಡ ತೊಟ್ಟಿದ್ದವು. ಆದರೆ ಮೊಗವಾಡದ ಒಳಗಿಂದ ಇಣುಕಿ ನೋಡುವ ಕಣ್ಣುಗಳು ಅದ್ಹೇಗೆ ತಾನೇ ಸುಮ್ಮನಿದ್ದಾವು?! ತಮಗರಿವಿಲ್ಲದಂತೆ ಜಾರಿಸಿದವು ಕಣ್ಣೀರ ಹನಿಗಳನು ತುಂಬಿಕೊಂಡು ಭಾರದ ಭಾವಗಳನು. ಆ ಕ್ಷಣದಲ್ಲಿ ಅಲ್ಲೊಂದು ದಿವ್ಯ ಮೌನ. ಅಲ್ಲಿದ್ದುದು ಕೇವಲ ಮೌನದ ಮಾತು. ಭಾವನೆಗಳು ಬೇರೆಯಾದರೇನು, ದುಃಖದ ಮೂಲ ಒಂದು ಎಂದು ಸಾರಿದ್ದವು ಜಾರಿ ಬಿದ್ದ ಹನಿಗಳು. ಬಿದ್ದ ಹನಿಗಳು ಒಂದಾಗಿ ಹೇಳಿದವು ನೊಂದ ಹೃದಯಗಳೇ ಒಂದಾಗಿ ಎಂದು. ಆದರೆ ಅದಾಗಲೇ ನೊಂದ ಹೃದಯಗಳು ಬೆಂದು ಹೋಗಿದ್ದವು. ಕಣ್ಣೀರ ಹನಿಗಳ ಕಥೆಯ ಕೇಳುವ ಮನಸ್ಸು ಕರಗುವ ಬದಲು ಸುಟ್ಟು ಕರಕಲಾಗಿದ್ದಿತು. ಕೋಪ ತಾಪಗಳು ಸುಟ್ಟು ಬೂದಿಯಾಗಿದ್ದವು. ಎರಡೂ ಹೃದಯಗಳಲ್ಲೂ ಈಗ ಯಾವ ಕೋಪವಿಲ್ಲ, ತಾಪವಿಲ್ಲ. ಹಾಗಾದರೆ ಆ ಎರಡು ಮನಗಳು ಮತ್ತೆ ಸೇರಿಯಾವೆ? ಒಂದಾಗಲು ಬಯಸಿ ಹುಡುಕುತ್ತಿವೆ ತಮ್ಮ ಕಳೆದು ಹೋದ ಪ್ರೀತಿಯನ್ನು, ಊಹುಂ... ಸಿಗಲಿಲ್ಲ! ಅರಿವಾಯಿತು ಎರಡೂ ಹೃದಯಗಳಿಗೆ ತಮ್ಮ ಪ್ರೀತಿ ಸಿಗಲು ಸಾಧ್ಯವೇ ಇಲ್ಲ! ತಾವೇ ಹಚ್ಚಿದ ಕೋಪ ತಾಪಗಳ ಕೆನ್ನಾಲಿಗೆಯು ತಮ್ಮ ಮಂಜಿನಂಥ ಪ್ರೀತಿಯನ್ನು ಎಂದೋ ಕರಗಿಸಿ ಇನ್ನಿಲ್ಲವಾಗಿಸಿದೆ ಎಂದು ನಶ್ವರತೆಯ ಬಿಂದುವಿನಲ್ಲಿ ಕಣ್ಣುಗಳು ಸಂಧಿಸಿ ಮುಚ್ಚಿದವು ಶಾಶ್ವತವಾಗಿ.


*** (ಇದೊಂದು ಎರಡು ಆಯಾಮಗಳ ಕಥೆ) ***


ಕಳೆದ ವರ್ಷ ಇದೇ ಸಮಯದಲ್ಲಿ ಕೋಪನ್‌ಹೇಗನ್‌ನಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಅದರಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾಗವಹಿಸಿದ್ದವು. ನನ್ನ ಕಥೆಯಲ್ಲಿ ಈ ಎರಡು ಬಣಗಳೇ ಎರಡು ಹೃದಯಗಳಾಗಿ ಮಿಡಿದಿವೆ. ಎಲ್ಲ ರಾಷ್ಟ್ರಗಳಿಗೂ ಹವಾಮಾನ ವೈಪರೀತ್ಯದ ಪರಿಣಾಮದುಂಟಾಗುವ ಭಾವನೆಗಳು ಒಳಗೆ ತುಂಬಿಕೊಂಡಿದ್ದರೂ ಎಲ್ಲರೂ ಕೃತಕ ನಗೆಯ ಮೂಲಕ ಸವಾಲನ್ನು ಹಗುರಾಗಿ ಸ್ವೀಕರಿಸಿದಂತೆ ತೋರ್ಗೊಡುತ್ತಿದ್ದರು. ಹವಾಮಾನ ವೈಪರೀತ್ಯದ ಗಹನತೆ ಅರಿತಾಗ ಎಲ್ಲರಿಗೂ ಒಳಗೊಳಗೇ ಆತಂಕ, ಆದರೆ ಜವಾಬ್ದಾರಿಯನ್ನು ಹೊರಲಾರದೆ ದಿವ್ಯ ಮೌನ. ಎಲ್ಲ ರಾಷ್ಟ್ರಗಳ ಅವಶ್ಯಕತೆ ಬೇರೆಯಾದರೂ ನಾಳೆ ನಾವು ಅನುಭವಿಸಬೇಕಾಗಿರುವ ದುಃಖದ ಮೂಲ ಒಂದೇ ಎಂದು ಹೇಳುತ್ತಿವೆ, ಆಗಲೇ ಅನುಭವಿಸುತ್ತಿರುವ ರಾಷ್ಟ್ರಗಳು. ಎಲ್ಲ ರಾಷ್ಟ್ರಗಳೂ ಅದನ್ನು ಉಪೇಕ್ಷಿಸಿ ತಮ್ಮ ಪ್ರತಿಷ್ಠೆಯನ್ನು ತೋರಲು ಸಮಸ್ಯೆಯನ್ನು ಹಾಗೇ ಬಿಟ್ಟಿದ್ದಾರೆ ಎಂದು ಭಾವಿಸಿ ಅದರ ಅಂತ್ಯವೇನಾಗಬಹುದೆಂಬುದನ್ನು ಕಥೆಯು ಹೇಳುತ್ತದೆ. ತಾವೇ ಮುಂದೊಂದು ದಿನ ತಮ್ಮ ಪ್ರತಿಷ್ಠೆ, ಅಹಂ (ಕೋಪ-ತಾಪ) ಅನ್ನು ತೊರೆದು ಒಂದಾಗಿ ಭುವಿಯ ರಕ್ಷಣೆಗೆ ಬಂದರೂ ಭೂ ತಾಪದಿಂದ ಹಿಮವೆಲ್ಲ ಕರಗಿ ಜಗತ್ತೇ ಮುಳುಗಿ ಹೋಗಿರುತ್ತದೆ. ಆಗ ಎಲ್ಲರೂ ನಿಸ್ಸಹಾಯಕರಾಗಿ ಕಣ್ಮುಚ್ಚಿ ಚಿರನಿದ್ರೆಗೆ ಜಾರಬೇಕಾಗುತ್ತದೆ.

ಈಗ ಈ ದೃಷ್ಟಿಕೋನದಿಂದ ಮತ್ತೊಮ್ಮೆ ಕಥೆಯನ್ನು ಓದುವಿರಾ?

9 ಕಾಮೆಂಟ್‌ಗಳು:

sunaath ಹೇಳಿದರು...

ಮೊದಲ ಭಾಗವನ್ನು ಓದಿದಾಗ ಕತೆಯೊಂದರ ಸೊಬಗಿನ ಬರವಣಿಗೆ ಎನ್ನಿಸಿತು. ಎರಡನೆಯ ಭಾಗವನ್ನು ಓದಿ, ಬಳಿಕ ಮರುಓದಿದಾಗ, ಕಟುವಾಸ್ತವ ಕಣ್ಣೆದುರಿಗೆ ಕಟ್ಟಿತು. ಜಾಗತಿಕ ಪರಿಸ್ಥಿತಿಗೆ ಕನ್ನಡಿ ಹಿಡಿದ ಸೋಮಶೇಖರರಿಗೆ ಅಭಿನಂದನೆಗಳು.

ಸೋಮಶೇಖರ ಹುಲ್ಮನಿ ಹೇಳಿದರು...

ಸುನಾಥ್ ರವರೆ ,
ತಮ್ಮ ಅನಿಸಿಕೆಗೆ ನಾನು ಆಭಾರಿಯಾಗಿದ್ದೇನೆ .

ತೇಜಸ್ ಜೈನ್ Tejas jain ಹೇಳಿದರು...

ಉತ್ತಮವಾದ ಪ್ರಯೋಗ :)
ಮೊದಲ ಭಾಗವು ಪದಗಳ ಮೀರಿ ಮೌನವಾಗಿ ಮಾತನಾಡಿದೆ...

ಸೋಮಶೇಖರ ಹುಲ್ಮನಿ ಹೇಳಿದರು...

ತೇಜು ,
ನೀನು ಹೇಳಿದ ಮೇಲೆ ನನ್ನ ಕತೆಯ ಶೀರ್ಷಿಕೆ ಸರಿಯಾಗಿದೆ ಎಂದು ಅನಿಸಿದ್ದು !

Sudhi ಹೇಳಿದರು...

ಬಹಳ ಚೆನ್ನಾಗಿ ಮಾತನಾಡಿದೆ ನಿಮ್ಮ ಮೌನದ ಮಾತು.

ಸೋಮಶೇಖರ ಹುಲ್ಮನಿ ಹೇಳಿದರು...

ಸುಧಿಯವರೇ ,
ಮೌನದ ಮಾತನ್ನು ಕೇಳಿಸಿಕೊಂಡದಕ್ಕೆ ಧನ್ಯವಾದಗಳು

ತೇಜಸ್ವಿನಿ ಹೆಗಡೆ ಹೇಳಿದರು...

ಹರೀಶ್,

ಎರಡನೆಯ ಭಾಗ ಓದಿದಮೇಲೆ ಅರ್ಥೈಸಿಕೊಳ್ಳುವ ಪರಿಯೇ ಬದಲಾಗುತ್ತದೆ. ನಿಮ್ಮ ಕಳಿಕಳಿ ಮೆಚ್ಚುವಂಥದ್ದು. ನಿಜ.... ನನಗೂ ಹಾಗೇ ಅನಿಸುತ್ತದೆ. ಪ್ರಳಯದ ಕಾಲ ಹೆಚ್ಚು ದೂರವಿಲ್ಲ ಎಂದು! :(

Harisha - ಹರೀಶ ಹೇಳಿದರು...

@ತೇಜಕ್ಕ, ಇದನ್ನು ಬರ್ದಿದ್ದು ನಾನಲ್ಲ... ನನ್ನ ಫ್ರೆಂಡ್ ಸೋಮಶೇಖರ.. ನಿಮ್ಮ ಹೊಗಳಿಕೆ ಸೇರಬೇಕಾಗಿದ್ದು ನನಗಲ್ಲ, ಅವನಿಗೆ.

@ಸೋಮ, ನಿನ್ನ ಮೌನದ ಮಾತು ಚೆನ್ನಾಗಿ ಸದ್ದು ಮಾಡುತ್ತಿದೆ... ಹೀಗೇ ಮುಂದುವರಿಸು ಬರವಣಿಗೆಯನ್ನು.

ಸೋಮಶೇಖರ ಹುಲ್ಮನಿ ಹೇಳಿದರು...

ತೇಜಸ್ವಿನಿ ಯವರೇ ,
ಇಲ್ಲಿ ಕಳಕಳೀದ್ದವ್ರಿಗೆ ಅಧಿಕಾರ ಇರಲ್ಲ ,ಅಧಿಕಾರ ಇದ್ದವರಿಗೆ ಕಳಕಳಿ ಇರಲ್ಲ ,
ಕಳಕಳಿ ಇದ್ರೂ ರಾಜಕೀಯ ಅವರನ್ನು ಮಾಡಲು ಬಿಡಲ್ಲ .
ನೀವಂದಂತೆ ಪ್ರಳಯನಾದ್ರು ಆದ್ರೆ ಒಳ್ಳೇದು ಅನ್ಸುತ್ತೆ ....!?

ಹರೀಶ ,
ನಿನ್ನ ಮಾತ ಕೇಳಿ ನಾನು ಮೌನದ ಸದ್ದು ಅನ್ನೋ ಇನ್ನು ಹುಟ್ಟು ಪಡೆಯದ ಕತೆಗೆ ಹೆಸರಿಟ್ಟಿದ್ದೇನೆ!