ಬುಧವಾರ, ಡಿಸೆಂಬರ್ 10, 2008

ನೀನಾರಿಗಾದೆಯೋ ಎಲೆ ಮಾನವಾ? ಹರಿ ಹರಿ ಗೋವು ನಾನು

ಗೋರಕ್ಷಣೆಯ ಬಗ್ಗೆ ಅನೇಕ ಕಡೆ, ಅನೇಕ ರೀತಿಯಲ್ಲಿ ಚರ್ಚೆಗಳಾಗುತ್ತಿವೆ. ಅದೇನೇ ಇರಲಿ, ಇದರ ಬಗ್ಗೆ ಈಚೆಗೆ ಧರ್ಮಭಾರತಿಗಾಗಿ ಯಜ್ಞೇಶ್ ಬರೆದಿರುವ ಲೇಖನ ಓದಿದಾಗ "ನೀನ್ಯಾರಿಗಾದೆಯೋ ಎಲೆ ಮಾನವ" ಎಂಬ ನುಡಿಗಟ್ಟಿನ ಪೂರ್ಣಪಾಠ ಹಾಕಬೇಕೆನಿಸಿತು. ಹಾಕಿದ್ದೇನೆ:

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||


ನಗರಗಳಲ್ಲಿ ಗುಬ್ಬಿ ಗಿಳಿಗಳು ಕಣ್ಮರೆಯಾಗಿವೆ. ಇತ್ತೀಚಿಗೆ ನಾನು ಎಲ್ಲೋ ಓದಿದಂತೆ ಮಿಂಚು ಹುಳು, ಕೆಲವು ಬಗೆಯ ಏಡಿಗಳು ಕೂಡ ವಿನಾಶದಂಚಿನಲ್ಲಿದೆ. ಗೋವು ಒಂದೇ ಅಲ್ಲ, ಎಲ್ಲ ಪ್ರಾಣಿ ಪಕ್ಷಿಗಳನ್ನೂ ಕಾಪಾಡುವ ಜವಾಬ್ದಾರಿ ಈಗ ಮನುಷ್ಯನ ಮೇಲಿದೆ.

ಎಮ್ಮೆ ತಮ್ಮಣ್ಣ ಚಿತ್ರದಲ್ಲಿರುವ ಹಾಡಿನ ವೀಡಿಯೊ ಕೂಡ ಇದೆ..

(ಕೊಂಡಿ ನೀಡಿದ ಅಂತರ್ವಾಣಿಯ ಜಯಶಂಕರ್ ಅವರಿಗೆ ಧನ್ಯವಾದಗಳು)

ಕೊಸರು (ಸಂಪದದಲ್ಲಿ ಗಿರೀಶ್ ಬರೆದಿದ್ದು): ನೀನಾರಿಗಾದೆಯೋ ಎಲೆ ಮಾನವಾ!!

15 ಕಾಮೆಂಟ್‌ಗಳು:

ಮನಸ್ವಿ ಹೇಳಿದರು...

ಹರೀಶ ಗೋವಿನ ಮಹತ್ವ ತಿಳಿಸುವ ಪದ್ಯವನ್ನು ನಿಮ್ಮ ಬ್ಲಾಗ್ ನಲ್ಲಿ ಹಾಕಿರುವುದು ತುಂಬಾ ಖುಷಿ ಕೊಟ್ಟಿತು..
ನಿಜ ಮೊಬೈಲ್ ನೆಟ್ವರ್ಕ್ ಎಲ್ಲೆಲ್ಲಿ ಸಿಕ್ತ ಅಲ್ಲಲ್ಲಾ ಗುಬ್ಬಿಗಳ ಸಂತತಿ ನಾಶ ಆಗ್ತಾ ಇದ್ದು ಅಂತ ಎಲ್ಲೋ ಕೇಳಿದ ನೆನಪು.. ನೀನಾರಿಗಾದೆಯೋ ಎಲೆ ಮಾನವಾ? ಅಂತ ಎಲ್ಲ ಪ್ರಾಣಿ ಪಕ್ಷಿ ಕೇಳ್ತಿದ್ವೇನ ಅವಕ್ಕೂ ಮಾತು ಬಂದಿದ್ರೆ :(

Ittigecement ಹೇಳಿದರು...

ಹರೀಶ್....
ನಾವು ಕನ್ನಡ ಶಾಲೆಯಲ್ಲಿರುವಾಗ ನಮ್ಮ ಗುರುಗಳು..ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದು ಕಿವಿಯಲ್ಲಿ ಇನ್ನೂ ಇದೆ..
ಅವರು ಹೇಳಿದ ಪಾಠ ಮನಕಲಕುವಂತಿತ್ತು.
ನೆನಪಿಸಿದ್ದಾಕ್ಕೆ ತುಂಬಾ,,ತುಂಬಾ ಧನ್ಯವಾದಗಳು..
ಅದರ ಕರುವಿಗೆ ಅಂಥ ಕೊಟ್ಟ ಹಾಲನ್ನು ನಾವು ಕುಡಿದು ಏನೆಲ್ಲಾ ಮಾಡಿಬಿಡ್ತೀವಿ...!
ಈ ಮನುಷ್ಯ ವಿಶ್ವಾಸ ದ್ರೋಹಿ...
ಮತ್ತೊಮ್ಮೆ ಧನ್ಯವಾದಗಳು..

NilGiri ಹೇಳಿದರು...

ಮನುಷ್ಯ ಜನ್ಮ ದೊಡ್ಡ ಜನ್ಮ ಆನ್ನುತ್ತಾರೆ. ಈ ಪದ್ಯ ಓದಿದರೆ, ನಾಚಿಕೆಯಾಗುತ್ತದೆ. ಈ ಪದ್ಯ ನೆನಪಿಸಿದಕ್ಕೆ ಧನ್ಯವಾದಗಳು ಹರೀಶ್.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ...
‘ನೀನಾರಿಗಾದೆಯೋ ಎಲೆ ಮಾನ್ತವ’ದ ಪೂರ್ತಿಪಾಠ ಕೊಟ್ಟಿದ್ದಕ್ಕೆ ಮತ್ತು ವಿಡಿಯೋ ವೀಕ್ಷಿಸುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ನಿಂಗೆ.

Harisha - ಹರೀಶ ಹೇಳಿದರು...

ಎಲ್ಲರಿಗೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಆದಿತ್ಯ, ಎಲ್ಲ ಪ್ರಾಣಿ ಪಕ್ಷಿಗಳು ಕೇಳ ಹಂಗಾಗಿದ್ರೆ ಮನುಷ್ಯ ತಾನು ಮಾಡ ಎಲ್ಲ ಕೆಲಸಗಳಿಗೂ ಬೈಸಿಗ್ಯಳಕ್ಕಾಗಿತ್ತು..

ಪ್ರಕಾಶಣ್ಣ, ಹೌದು.. ಕರುವಿಗೆ ಅಂತ ಇರೋ ಹಾಲನ್ನ ನಾವು ಕರೆದು ಅದಕ್ಕಿಲ್ಲದಂತೆ ಮಾಡಿಬಿಡುತ್ತೇವೆ. ಅಪ್ಪ ಅಮ್ಮನ ಹತ್ತಿರ ಬೈಸಿಕೊಳ್ಳುವುದು ಯಾವಾಗಲೂ ಇದ್ದಿದ್ದೇ.. ಅದ್ಕೆ ಕೆಲವು ಸಲ ನಾನು ಊರಿಗೆ ಹೋದಾಗ ಹಾಲು ಕರೆಯುವ ಮೊದಲೇ ಕರು ಬಿಟ್ಟುಬಿಡುತ್ತೇನೆ.. ಕರು ಹಾಲು ಕುಡಿಯುವಾಗ ಎಂಥದೋ ಒಂದು ಥರ ಖುಷಿ...

Harisha - ಹರೀಶ ಹೇಳಿದರು...

ಗಿರಿಜಾ ಅವರೇ, ಪ್ರತಿಕ್ರಿಯೆಗೆ ಧನ್ಯವಾದಗಳು.

ಶಾಂತಲಕ್ಕ, ನೀ ಹೇಳಿದ ಥ್ಯಾಂಕ್ಸ್ ನಲ್ಲಿ ಅರ್ಧ ಜಯಶಂಕರ್‌ಗ... ಉಳಿದ ಥ್ಯಾಂಕ್ಸ್ ನಿಂಗೆ.. ಪ್ರತಿಕ್ರಿಯಿಸಿದ್ದಕ್ಕೆ :-)

shivu.k ಹೇಳಿದರು...

ಹರೀಶ್,
ಈ ಗೋವಿನ ಹಾಡು ಕೇಳಿ ತುಂಬಾ ದಿನವಾಗಿತ್ತು. ನೆನಪಿಸಿದಿರಿ..ಮೊಬೈಲುಗಳಿಂದ ಗುಭ್ಬಿಗಳ ಜೊತೆ ಮಿಂಚುಹುಳು ನಾಶವಾಗ್ತಿರುವುದು ತಿಳಿದಿರಲಿಲ್ಲ್ಲ. ಮಾಹಿತಿಗೆ ಧನ್ಯವಾದಗಳು

Harisha - ಹರೀಶ ಹೇಳಿದರು...

ಶಿವು ಅವರೇ, ಮಿಂಚು ಹುಳು ನಾಶವಾಗುತ್ತಿರುವುದು ಮೊಬೈಲ್ ಬಳಕೆಯಿಂದಲ್ಲ. ಪ್ರಖರ ಬೆಳಕಿನ ಕಾರಣದಿಂದ ತನ್ನ ಸಂಗಾತಿಯನ್ನು ಆಕರ್ಷಿಸಲಾಗದೆ ಅವುಗಳ ಸಂತಾನ ಕಡಿಮೆಯಾಗುತ್ತಿದೆ ಎಂದು ಓದಿದೆ.. ಎಲ್ಲಿ ಓದಿದ್ದೆಂದು ಮರೆತು ಹೋಗಿದೆ.. ಹುಡುಕಿದರೆ ಸಿಗುತ್ತಿಲ್ಲ :(
ಪ್ರತಿಕ್ರಿಯೆಗೆ ಧನ್ಯವಾದಗಳು.. ಬರುತ್ತಿರಿ.

ಯಜ್ಞೇಶ್ (yajnesh) ಹೇಳಿದರು...

ಹರೀಶ್,
ನಿಮ್ಮ ಬ್ಲಾಗಿನಲ್ಲಿ ಗೋವಿನ ಲೇಖನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಿಶೇಷ ಧನ್ಯವಾದಗಳು. ನನಗೆ ನೀನ್ಯಾರಿಗಾದೆಯೋ ಎಲೆ ಮಾನವ ಬೇಕಾಗಿತ್ತು. ನಿಮ್ಮ ಬ್ಲಾಗಿನಲ್ಲಿ ಸಿಕ್ತು. ಥ್ಯಾಂಕ್ಸ್.

PaLa ಹೇಳಿದರು...

ಹರೀಶ್,

ವಿನಾಷದ ಅಂಚಿನಲ್ಲಿರುವ ಮಿಂಚುಹುಳ ಮತ್ತು ಗುಬ್ಬಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ.

--
ಪಾಲ

ವಿ.ರಾ.ಹೆ. ಹೇಳಿದರು...

ಇದು ಜನಪದ ಹಾಡಾ? ಅಥ್ವಾ ಯಾರಾದ್ರೂ ಬರೆದಿದ್ರೆ ಬರೆದವರ್ಯಾರು?

Harisha - ಹರೀಶ ಹೇಳಿದರು...

ಯಜ್ಞೇಶ್, ಲೇಖನ ಬರೆದು ಜನಜಾಗೃತಿ ಮೂಡಿಸುತ್ತಿರುವ ನಿಮಗೂ ಧನ್ಯವಾದಗಳು.

ಪಾಲಚಂದ್ರ, ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಾಣಿ-ಪಕ್ಷಿಗಳನ್ನು ರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.

ವಿಕಾಸ, ಇದು ಜನಪದ ಅಲ್ಲ ಕಾಣ್ತು. ಯೂಟ್ಯೂಬ್ ನಲ್ಲಿ ಇದನ್ನು ಬರೆದವರು ಜಿ.ವಿ.ಅಯ್ಯರ್ ಅಂತ ಇದ್ದು.

Unknown ಹೇಳಿದರು...

ಅರ್ಥಗರ್ಬಿತವಾಗಿದೆ. ನಾನು ನೋಡಿದ ಮಟ್ಟಿಗೆ ಗುಬ್ಬಿ ಇಲ್ಲೊಂದೇ ಅಲ್ಲ ಊರಕಡೆಯೂ ಕಾಣಸಿಗುತ್ತಿಲ್ಲ!

ತೇಜಸ್ವಿನಿ ಹೆಗಡೆ ಹೇಳಿದರು...

ಹರೀಶ್,

ತುಂಬಾ ಅರ್ಥವತ್ತಾಗಿದೆ ಹಾಡು. ಹಾಕಿದ್ದಕ್ಕೆ ಧನ್ಯವಾದಗಳು. "ಧರಣಿ ಮಂಡಲ ಮಧ್ಯದೊಳಗೆ.." ಈ ಗೋವಿನ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು.

ಅಘನಾಶಿನಿ ಹೇಳಿದರು...

ಹರಿ ಹರಿ!!! ಕೊಂಡಿಕೊಟ್ಟಿದ್ದಕ್ಕಾಗು ಅನ೦ತ ಧನ್ಯವಾದಗಳು...ಇತಿ ಪ್ರೀತಿಯ, ಗ೦ಗಣ್ಣ.