ಮಂಗಳವಾರ, ಅಕ್ಟೋಬರ್ 7, 2008

ವಿಹಂಗಮ ನೋಟ

ಗಾಳಿ ಜೋರಾಗುತ್ತಿದೆ... ಕ್ಷಣ-ಕ್ಷಣಕ್ಕೂ ಎತ್ತರೆತ್ತರಕ್ಕೇರುತ್ತಿದ್ದೇನೆ... ನನ್ನೊಡನಿದ್ದ ಗೆಳೆಯರೆಲ್ಲ ಕುಬ್ಜರಾಗುತ್ತಿದ್ದಾರೆ. ನಾ ನಡೆದು ಬಂದ ದಾರಿ ಕೇವಲ ಒಂದು ಗೆರೆಯಂತೆ ಕಾಣುತ್ತಿದೆ... ಎಷ್ಟೋ ದೂರದಲ್ಲಿರುವ ಕೆರೆಯೊಂದು ಪಕ್ಕದಲ್ಲಿರುವಂತೆ ಭಾಸವಾಗುತ್ತಿದೆ... "ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ..." ಎಂಬ ಗೀತೆ ನೆನಪಿಗೆ ಬರುತ್ತಿದೆ... ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದೊಂದು "ವಿಹಂಗಮ ನೋಟ".

ಪ್ರಮುಖ ಕಾರ್ಯಕ್ರಮಗಳಲ್ಲಿ ವೀಕ್ಷಕ ವಿವರಣೆಕಾರರು ಈ ಪದಪುಂಜ ಉಪಯೋಗಿಸುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಅನುಭವಿಸಿದ್ದೇವಾ? ವಿಮಾನದಲ್ಲಿ ಹೋಗುವಾಗ ಮೋಡದ ಮೇಲೆ ಹಾರುವ ಮನುಷ್ಯ ತಾನು ಕುಳಿತಲ್ಲಿಂದಲೇ ಕಿಟಕಿಯಿಂದ ನೋಡಿ ಖುಷಿ ಪಡಬಹುದೇ ಹೊರತು ತಾನೇ ಹಾರುವ ಕನಸನ್ನು ಸಾಕಾರಗೊಳಿಸಿಕೊಳ್ಳಲಾದೀತಾ? ಬಹುಶಃ ಇರಲಿಕ್ಕಿಲ್ಲ. ಆದರೆ ಮೊನ್ನೆ ಶನಿವಾರ ನಾನು ಅಂಥ ಒಂದು ಅನುಭವ ಪಡೆದೆ.

ಮೊನ್ನೆ ಶನಿವಾರ ಮೈಂಡ್-ಟ್ರೀಯ ಟ್ರೆಕ್ಕಿಂಗ್ ಕ್ಲಬ್ ಹಾಗೂ ಕೇರ್-ಇಂಡಿಯಾದ ಸಹಭಾಗಿತ್ವದಲ್ಲಿ ಹೊಸಕೋಟೆಯ ಬಳಿ ಪ್ಯಾರಾಸೇಲಿಂಗ್ ಆಯೋಜಿಸಲಾಗಿತ್ತು. ತಮ್ಮ ಗೆಳೆಯರನ್ನು ಕರೆದುಕೊಂಡು ಬರಬಹುದೆಂದು ಹೇಳಿದ್ದ ಕಾರಣ ಪ್ರವೀಣ ಈಮೇಲ್ ಕಳಿಸಿ ತಿಳಿಸಿದ್ದ. ಸರಿ, ಬರುತ್ತೇನೆ ಎಂದು ಹಿಂದೆ ಮುಂದೆ ನೋಡದೆ ಹೇಳಿದ್ದೆ.

ಸ್ಥಳ ಕೇವಲ ೧೫ ಕಿಲೋಮೀಟರ್ ದೂರದ ಹೊಸಕೋಟೆಯ ಬಳಿ ಎಂದು ತಿಳಿಸಲಾಗಿದ್ದ ಕಾರಣ ಬಸ್ಸಿನಲ್ಲಿಯೇ ಹೋಗುವುದೆಂದು ನಿರ್ಧರಿಸಿದ್ದೆವು. ಶನಿವಾರ ಬೆಳಿಗ್ಗೆ ಪ್ರವೀಣ, ಅರ್ಚನಾ ಮಾರ್ಕೆಟ್ಟಿನಿಂದ ಬಸ್ ಹತ್ತಿ ಮೊದಲೇ ಹೊರಟಿದ್ದರು. ಅಣ್ಣ-ತಮ್ಮ (ವಿನಯ್-ವಿಜಯ್... ಅವರನ್ನು ನಾವು ಕರೆಯುವುದೇ ಹಾಗೆ) ಎಂದಿನಂತೆ ಬೇಗ ಹೊರಡುತ್ತೇವೆ ಎಂದು ಹೇಳಿ ಲೇಟಾಗಿ ಹೊರಟಿದ್ದರು. ನಾನು ಅವರೆಲ್ಲ ಹೊರಟ ಮೇಲೆ ತಿಂಡಿ ತಿಂದು ಹೊರಟೆ.

ಕೆ.ಆರ್.ಪುರಂ ಬೆಂಗಳೂರಿನ ತುದಿ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ಹೋದಷ್ಟೂ ಹಳ್ಳಿಗಳು ಸಿಗುತ್ತಲೇ ಇದ್ದವು. ನಾಲ್ಕೈದು ಸ್ಟಾಪ್ ಆದ ಮೇಲೆ ಪ್ರವೀಣನಿಂದ ಫೋನು..

ಪ್ರವೀಣ: ಎಲ್ಲಿದೀಯ?
ನಾನು: ಬಸ್ಸಲ್ಲಿ.. ಯಾವೂರು ಅಂತ ಗೊತ್ತಿಲ್ಲ.
ಪ್ರವೀಣ: ನಾವು ಹೊಸಕೋಟೆಗೆ ಬಂದಿದೀವಿ... ಆದರೆ ಆ ಪ್ಲೇಸ್ ಇರೋದು ಇನ್ನೂ ಹಿಂದೆ, ಅದ್ಯಾವ್ದೋ ಬೂದಿಗೆರೆ ಕ್ರಾಸ್ ಅಂತೆ.
ನಾನು: ಸರಿ, ಇಳ್ಕೋತೀನಿ.

ಅಷ್ಟರಲ್ಲಿ ಬಸ್ ನಿಂತಿತ್ತು. ಬಹಳ ಜನ ಇಳಿದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದವನನ್ನು ಬೂದಿಗೆರೆ ಕ್ರಾಸ್ ಯಾವುದು ಎಂದು ಕೇಳಿದೆ. ಇದೇ ಬೂದಿಗೆರೆ ಕ್ರಾಸ್ ಅಂದ. ಬಸ್ ಆಗಲೇ ಹೊರಡಲು ಸಿದ್ಧವಾಗಿತ್ತು. ರೈಲಿನಿಂದ ಹಾರಿರುವವರಿಗೆ (ಆ ಕಥೆ ಇನ್ನೂ ಬರೆದಿಲ್ಲ; ಬಹುಶಃ ಬರೆಯುವುದೂ ಇಲ್ಲ) ಬಸ್ಸಿನಿಂದ ಹಾರುವುದು ಕಷ್ಟವೇ? ತಕ್ಷಣ ಹಾರಿಕೊಂಡೆ. ಎಲ್ಲರಿಗಿಂತ ಕೊನೆಗೆ ಹೊರಟು ಮೊದಲು ಅಲ್ಲಿಗೆ ಹೋಗಿ ಸೇರಿದ್ದೆ. ಎರಡು ಸ್ಟಾಪ್ ಮುಂದೆ ಹೋಗಿದ್ದ ಅಣ್ಣ-ತಮ್ಮ ಐದು ನಿಮಿಷಗಳಲ್ಲಿ ಬಂದರು. ಅದಾಗಿ ಒಂದು ನಿಮಿಷಕ್ಕೆ ಪ್ರವೀಣ-ಅರ್ಚನಾ ಸೇರಿಕೊಂಡರು.

ಸುತ್ತ-ಮುತ್ತ ಎಲ್ಲಿ ನೋಡಿದರೂ ಯಾವುದೇ ಪ್ಯಾರಾಶೂಟ್ ಕಾಣುತ್ತಿರಲಿಲ್ಲ. ಪ್ಯಾರಾಶೂಟ್ ನಿಂದ ಹಾರುವ ಜಾಗವೂ ಅದಾಗಿರಲಿಲ್ಲ. ಅಲ್ಲಿ ಯಾರನ್ನೋ ಕೇಳಿದೆವು. ಆದರೆ ಅವರಿಗೆ ಅದರ ಬಗ್ಗೆ ತಿಳಿದೇ ಇರಲಿಲ್ಲ. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ ಪ್ರವೀಣ ಯಾರಿಗೋ ಫೋನ್ ಮಾಡಿ ದಾರಿ ಕೇಳಿದ. ಅದರಂತೆ ಅದೇ ಕ್ರಾಸಿನಲ್ಲಿ ಸುಮಾರು ೨ ಕಿಲೋಮೀಟರ್ ನಡೆಯಬೇಕಿತ್ತು. ಸ್ವಲ್ಪ ಚಾರಣವೂ ಇರಲಿ ಎಂದು ಐದೂ ಜನ ಸೇರಿ ನಡೆಯಲಾರಂಭಿಸಿದೆವು.

Long walk to Parasailing

ಎರಡಾಯಿತು, ಮೂರಾಯಿತು... ಊಹೂಂ.. ಎಷ್ಟು ಕಿಲೋಮೀಟರ್ ನಡೆದರೂ ಯಾವ ಪ್ಯಾರಾಶೂಟ್ ಕೂಡ ಕಾಣುತ್ತಿಲ್ಲ!! ಅಲ್ಲಿ ಸಿಕ್ಕಿದವರ್ಯಾರಿಗೂ ಅದರ ಬಗ್ಗೆ ತಿಳಿದಿರಲೂ ಇಲ್ಲ. ಅಷ್ಟರಲ್ಲಿ ತಿಂಡಿ ತಿನ್ನಬೇಕೆಂದು ಯಾವುದೋ ಒಂದು ಸಣ್ಣ ಅಂಗಡಿಗೆ ಹೋಗಿ ಚಿತ್ರಾನ್ನ ತಿಂದು ಮುಂದೆ ಹೊರಟೆವು. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ ಸಂದೀಪ ಹಿಂದೆ ಅಲ್ಲಿಗೆ ಹೋಗಿದ್ದು ನೆನಪಾಯಿತು. ಅವನಿಗೆ ಫೋನಾಯಿಸಿದೆ. ಅವನು ಗುಂಡಿ-ಹಂಪಿನಿಂದ ಹಿಡಿದು ಪ್ಯಾರಾಶೂಟ್ ಹಾರುವ ಜಾಗದವರೆಗೆ ಕಣ್ಣಿಗೆ ಕಟ್ಟುವಂತೆ ದಾರಿ ವಿವರಿಸಿದ. ಅವನ ಮಾತು ಮುಂದೆ ಅಲ್ಲಿಗೆ ಹೋಗುವವರಿಗೆ ಬೇಕಾಗಬಹುದೇನೋ:

"ಹೊಸಕೋಟೆ ರೋಡಿನಲ್ಲಿ ಬೂದಿಗೆರೆ ಕ್ರಾಸ್ ಬರ್ತು. ಅಲ್ಲಿ ಎಡಕ್ಕೆ ತಿರುಗು. ಸುಮಾರು ದೂರ ಹೋದ ಮೇಲೆ ಬಾಲ್ಡ್ವಿನ್ ಸ್ಕೂಲ್ ಸಿಗ್ತು. ಅದೇ ದಾರೀಲಿ ಮುಂದೆ ಹೋಗು. ದೊಡ್ಡ ಹಂಪು ಬತ್ತು. ಮುಂದೆ ಹೋಗು. ಇನ್ನೊಂದು ಹಂಪು ಬತ್ತು. ಅಷ್ಟರಲ್ಲಿ ಒಂದು ಊರು ಬರ್ತು. ಹಂಗೆ ಸುಮಾರು ಮೂರು-ನಾಲ್ಕು ಹಂಪು ಸಗ್ತು. ಅಷ್ಟೊತ್ತಿಗೆ ಊರು ದಾಟಿರ್ತು. ಅದಾದಮೇಲೆ ಆಂಡ್ರೂ ವುಡ್ಕ್ರಾಫ್ಟ್ ಅಂತೆಂತೋ ಸಿಗ್ತು. ಅಲ್ಲಿ ಬಲಕ್ಕೆ ತಿರುಗು. ಅದೊಂದ್ ಸಣ್ಣ ರಸ್ತೆ. ಹಂಗೆ ಮುಂದೆ ಹೋದ್ರೆ ಒಂಥರಾ ಡೆಡ್ ಎಂಡ್ ಸಿಗ್ತು. ಆದ್ರೆ ಅದು ಡೆಡ್ ಎಂಡ್ ಅಲ್ಲ.. ಅಲ್ಲಿ ಬಲಕ್ಕೆ ತಿರುಗು. ಒಂದು ಮಡ್ ರೋಡ್ ಸಿಗ್ತು. ಅದೇ ದಾರೀಲಿ ಸೀದಾ ಹೋದ್ರೆ ಫೀಲ್ಡ್ ಸಿಗ್ತು.. ಅಲ್ಲೇ ಅವು ಪ್ಯಾರಾಸೇಲಿಂಗ್ ನಡ್ಸ್ತ. ನಿಂಗ ನಡ್ಕಂಡು ಬರಕ್ಕಾಗಿತ್ತಿಲ್ಲೆ... ಬೈಕ್ ತಗಂಡ್ ಹೋಗಕ್ಕಾಗಿತ್ತು..."

ನನಗೆ ತಿಳಿದಂತೆ ಸಂದೀಪ ಅಲ್ಲಿಗೆ ಹೋಗಿದ್ದು ಮಾರ್ಚ್ ೨೦೦೭ರಲ್ಲಿ. ಅಂದರೆ ಸುಮಾರು ಒಂದೂವರೆ ವರ್ಷದ ಹಿಂದೆ. ಆದರೆ ಆತ ಹೇಳಿದ ದಾರಿ ಮಾತ್ರ ಎಳ್ಳಷ್ಟೂ ತಪ್ಪಿರಲಿಲ್ಲ. ಭೇಷ್ ದೋಸ್ತ!!!

ಅಷ್ಟರಲ್ಲಿ ದಾರಿ ದೂರವಿದೆ ಎಂದು ತಿಳಿದ ಪ್ರವೀಣ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದ ಮೈಂಡ್-ಟ್ರೀಯ ರವಿ ಎಂಬುವವರಿಗೆ ಫೋನ್ ಮಾಡಿ ಬಂದು ಕರೆದುಕೊಂಡು ಹೋಗುವಂತೆ ತಿಳಿಸಿದ್ದ. ಅವರು ತಮ್ಮ ಕಾರನ್ನು ತಂದು ಕರೆದುಕೊಂಡು ಹೋದರು. ನಾವು ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ೧೦ ಘಂಟೆಯಾಗಿತ್ತು. ನಡೆದುಕೊಂಡೇ ಹೋಗಿದ್ದರೆ ಖಂಡಿತ ಮಧ್ಯಾಹ್ನದ ಒಳಗೆ ನಾವು ಅಲ್ಲಿರುತ್ತಿರಲಿಲ್ಲ.

ನಂತರ ಅಲ್ಲಿ ನಮ್ಮ ಹೆಸರು ನೋಂದಾಯಿಸಿ ಕಾಯುತ್ತಾ ಕುಳಿತೆವು. ನಾವೇ ಕಡೆಗೆ ಹೋಗಿದ್ದರಿಂದ ನಾವು ತುಸು ಹೆಚ್ಚೇ ಕಾಯಬೇಕಾಯಿತು. ಅದಾದ ನಂತರ ಒಬ್ಬೊಬ್ಬರಾಗಿ ಹಾರಾಟ ನಡೆಸಿದೆವು.

Parasailing

ಮೊದಲಿಗೆ ಒಂದು ಜಾಕೆಟ್, ನಂತರ ಹೆಲ್ಮೆಟ್, ನಂತರ ಪ್ಯಾರಾಶೂಟ್... ಹೀಗೆ ಎಲ್ಲವನ್ನೂ ತೊಡಿಸಿ ಆದ ಮೇಲೆ ಮಾರುತಿ ಜಿಪ್ಸಿಯೊಂದರಲ್ಲಿ ಎಳೆಯುತ್ತಿದ್ದರು. ನಾಲ್ಕೈದು ಹೆಜ್ಜೆ ನಾವೂ ಓಡಬೇಕು. ಪ್ಯಾರಾಶೂಟ್ ಮೇಲೇರುತ್ತದೆ. ನಂತರ ನಾನು ಮೇಲೆ ತಿಳಿಸಿದಂತೆ ವಿಹಂಗಮ ನೋಟ. ಇದನ್ನು ಅನುಭವಿಸಿಯೇ ತಿಳಿಯಬೇಕು. ಸುಮಾರು ೧೦೦-೧೫೦ ಅಡಿ ಮೇಲೆ ಇರಬಹುದು (ಆಯೋಜಕರು ೩೦೦ ಅಡಿ ಎತ್ತರ ಎಂದು ಹೇಳುತ್ತಾರೆ, ಆದರೆ ಅದು ನಮಗಂತೂ ರಿಯಲಿಸ್ಟಿಕ್ ಅಂತ ಅನಿಸಲಿಲ್ಲ). ಎರಡು ನಿಮಿಷ ಹಕ್ಕಿಯಂತೆ ಬಾನಿನಲ್ಲಿ ಹಾರಾಡಿದ ಮೇಲೆ ಮತ್ತೆ ಭೂಮಿಗೆ. ಒಟ್ಟಿನಲ್ಲಿ ಒಂದು ಅಪೂರ್ವ ಅನುಭವ ನಮ್ಮದಾಗಿತ್ತು.


ಪ್ರತಿ ಶನಿವಾರ, ಭಾನುವಾರ ಅಲ್ಲಿ ಪ್ಯಾರಾಸೇಲಿಂಗ್ ಆಯೋಜಿಸುತ್ತಾರಂತೆ. ಒಬ್ಬರಿಗೆ ೩೫೦/- ರೂಪಾಯಿಗಳು. ನೀವೂ ಅಲ್ಲಿಗೆ ಹೋಗುವುದಾದರೆ ಸ್ವಂತ ವಾಹನ ತೆಗೆದುಕೊಂಡು ಸಂದೀಪ ಹೇಳಿದ ದಾರಿ ಅನುಸರಿಸಿ ಹೋಗುವುದು ಒಳ್ಳೆಯದು. ಬಿ.ಎಂ.ಟಿ.ಸಿ. ಬಸ್ಸಿನಲ್ಲಿಯೇ ಹೋಗುವುದಾದರೆ "ಬೂದಿಗೆರೆ" ಬಸ್ಸಿಗೆ ಹೋಗಬಹುದು. ೩೧೬ ಸೀರೀಸ್ ನ ಕೆಲವು ಬಸ್ಸುಗಳು ಹೋಗುತ್ತವೆ. ಮಂಡೂರಿಗಿಂತ ಸ್ವಲ್ಪ ಮುಂದೆ ಬಲಕ್ಕೆ ಹೋಗುವ ಕ್ರಾಸಿನಲ್ಲಿ ಇಳಿದುಕೊಳ್ಳಬೇಕು.

ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ನೋಡಿ

9 ಕಾಮೆಂಟ್‌ಗಳು:

ಪಲ್ಲವಿ ಎಸ್‌. ಹೇಳಿದರು...

ಸೊಗಸಾದ ಬರವಣಿಗೆ ಹರೀಶ್‌. ನಿಮ್ಮ ದೋಸ್ತ್‌ ನೆನಪಿನ ಶಕ್ತಿ ಮೆಚ್ಚಬೇಕು. ಆದರೆ, ನೀವು ಪ್ಯಾರಾಸೇಲಿಂಗ್‌ ಮಾಡಿದ ಅನುಭವ ಇನ್ನಷ್ಟು ವಿವರವಾಗಿ ಮೂಡಿಬರಬಹುದಿತ್ತಲ್ಲ? ಬಹುಶಃ ಎರಡನೇ ಕಂತು ಅದಕ್ಕಾಗಿ ಇರಬಹುದು ಅಂತ ಅಂದುಕೊಳ್ಳುತ್ತೇನೆ.

- ಪಲ್ಲವಿ ಎಸ್‌.

ವಿ.ರಾ.ಹೆ. ಹೇಳಿದರು...

ಯೆಸ್ಸ್.. ನಾನೂ ಅಲ್ಲೇ ಹಾರಿದ್ದು :)

ಆದ್ರೆ ಇನ್ನೇನು ಮೇಲೆ ಹೋದ್ವಿ ಅನ್ನೋವಷ್ಟರಲ್ಲೇ ಕೆಳಗಿಳಿತಾ ಇರ್ತೀವಿ , ಅದೇ ಬೇಜಾರು. ಆದ್ರೂ ಇದೊಂದು ಅದ್ಭುತ ಅನುಭವವಂತೂ ಹೌದು.

sunaath ಹೇಳಿದರು...

Wonderful ಈ ಅನುಭವ!

Ittigecement ಹೇಳಿದರು...

NAAVU KOODA MELE HAARIDANTE ITTU. INNU SWALPA VIVARISI.. CHENNAGIDE. THANK YOU..

ಯಜ್ಞೇಶ್ (yajnesh) ಹೇಳಿದರು...

ಚೆನ್ನಾಗಿದ್ದು ಅನುಭವದ ವಿವರ. ನಂಗೂ ಹೋಗಕು ಅಂತ ಅನಿಸ್ತಾಯಿದ್ದು :)

ಶ್ರೀನಿಧಿ.ಡಿ.ಎಸ್ ಹೇಳಿದರು...

nice writappu:) hun, naanoo hogiide alligeya!

Harisha - ಹರೀಶ ಹೇಳಿದರು...

ಪಲ್ಲವಿ, ನಮ್ಮ ಬ್ಲಾಗಿಗೆ ಇದು ನಿಮ್ಮ ಮೊದಲ ಭೇಟಿ ಎಂದು ಕಾಣುತ್ತದೆ.. ಸ್ವಾಗತ. ಬರವಣಿಗೆ ನಿಮಗಿಷ್ಟವಾಗಿದ್ದು ಸಂತೋಷ. ಪ್ಯಾರಾಸೇಲಿಂಗ್ ಅನುಭವವನ್ನು ಸಂದೀಪ ಚೆನ್ನಾಗಿ ವಿವರಿಸಿದ್ದಾನೆ. ಬರೆಯುವಾಗ ಅದಕ್ಕಿಂತ ಹೆಚ್ಚು ವಿವರಣೆ ಅನಗತ್ಯ ಎನಿಸಿತು, ಹಾಗಾಗಿ ಅದರ ಬಗ್ಗೆ ಹೆಚ್ಚು ಬರೆದಿಲ್ಲ. ನಿಮ್ಮೆಲ್ಲರ ಅಭಿಪ್ರಾಯ ನೋಡಿದ ಮೇಲೆ ನನ್ನ ಅನಿಸಿಕೆ ತಪ್ಪೆಂದು ಅನಿಸುತ್ತಿದೆ. ಮುಂದಿನ ಬಾರಿ ತಿದ್ದಿಕೊಳ್ಳಲು ಪ್ರಯತ್ನಿಸುವೆ.

ವಿಕಾಸ್, ಹೌದು.. ಪ್ಯಾರಾಶೂಟ್ ಕೆಳಗಿಳಿಯುವಾಗ ಮನಸ್ಸು "ಇಳಿಯಬೇಡ, ಹಾರು.." ಎನ್ನುತ್ತಿರುತ್ತದೆ..

ಸುನಾಥ್, ಸತ್ಯ! ಧನ್ಯವಾದಗಳು.

ಪ್ರಕಾಶ್, ಎಲ್ಲರೂ ವಿವರಣೆ ಕಡಿಮೆ ಎನ್ನುತ್ತಿರುವುದನ್ನು ನೋಡಿದ್ರೆ ಏನೋ ಪ್ರಾಬ್ಲಮ್ ಇರ್ಲೇ ಬೇಕು ಲೇಖನದಲ್ಲಿ.. ಮುಂದಿನ ಬಾರಿ ಅದನ್ನು ಹುಡುಕಿ ತಿದ್ದಿಕೊಳ್ಳಲು ಪ್ರಯತ್ನಿಸುವೆ.

ಯಜ್ಞೇಶ್, ಹೋಗ್ಬಾ.. ಬೆಂಗಳೂರಲ್ಲಿದ್ದವ್ಕೆ ಇದು ಆರಾಮಾಗಿ ಹೋಗ್ಬಪ್ಪ ಜಾಗ...

ಶ್ರೀನಿಧಿ, ನಿಮ್ಮದೂ ಇದು ಮೊದಲ ಭೇಟಿ ಎಂದು ಕಾಣುತ್ತದೆ, ಸ್ವಾಗತ.. ಪ್ರತಿಕ್ರಿಯೆಗೆ ಧನ್ಯವಾದಗಳು..

ಅನಾಮಧೇಯ ಹೇಳಿದರು...

ಬೆಂಗಳೂರಿನಲ್ಲಿದ್ದಿದ್ದರೆ,,,.,,, ನೀನು ಇದನ್ನ ಮೊದಲೇ ಬರೆದಿದ್ದರೆ,..,,, ನಾನೂ ಹೋಗಬಹುದಿತ್ತೇನೋ..!!! ;-)

Harisha - ಹರೀಶ ಹೇಳಿದರು...

ಗಣೇಶ, ನೀನು ಬೆಂಗಳೂರಲ್ಲಿದ್ದಾಗ ನಂಗೆ ಇದರ ಬಗ್ಗೆ ತಿಳಿದಿದ್ದರೆ ನಿಂಗೂ ಹೇಳ್ತಿದ್ದೆ..