ಸೋಮವಾರ, ಮಾರ್ಚ್ 17, 2008

ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ

ಬೆಂಗಳೂರಿಗೆ ಬಂದ ಮೇಲೆ ಭಾನುವಾರಕ್ಕೊಂದು ಅರ್ಥ ಬಂದಿದೆ (ಹಾಗಂತ ಅನರ್ಥ ನಿಂತಿದೆ ಎಂದಲ್ಲ). ಸಣ್ಣವನಿದ್ದಾಗ ಆಟ ಆಡುವ ದಿನವಾಗಿದ್ದ ಭಾನುವಾರ ಕಾಲೇಜಿಗೆ ಹೋಗುವಾಗ ಎಂದರೆ ರೆಕಾರ್ಡ್ ಬರೆಯುವ, ಅಸೈನ್ಮೆಂಟ್ಸ್ ಮಾಡುವ ದಿನವಾಗಿತ್ತು. ಈಗ ಹಾಗಲ್ಲ ಭಾನುವಾರ ಅಂದ್ರೆ ವೀಕೆಂಡು :) ಆದರೂ ಕೆಲವು ಸಲ "ಬಟ್ಟೆ ಹರಿಯೋ ಅಷ್ಟು" (ಅದು ದಾವಣಗೆರೆಯ ನುಡಿಗಟ್ಟು.. ನಿಮಗೆ ಅರ್ಥ ಆಗ್ಲಿಲ್ವಾ? ಆಗೋದು ಬೇಡ ಬಿಡಿ) ಕೆಲಸ ಇರುತ್ತೆ.

ಆ ಕೆಲಸಗಳೇನೇ ಇರಲಿ, ಹೇಗಾದರು ಮಾಡಿ ಬೆಂಗಳೂರು ಸುತ್ತೋದು ನನ್ನ ಪದ್ಧತಿ. ನಾನೇನೂ ಎಂಜಿ ರೋಡು, ಬ್ರಿಗೇಡ್ ರೋಡು ಸುತ್ತೋದಿಲ್ಲ. ಫ್ರೆಂಡ್ಸ್ ನ ಮೀಟ್ ಮಾಡಿ ಬರೋದು, ಯಾವುದಾದರು ಸ್ಥಳಗಳಿಗೆ ಭೇಟಿ ಕೊಡೋದು ಹೀಗೆ... ಇತ್ತಿಚಿಗೆ (ಅಂದರೆ ಇದನ್ನು ಬರೆದಾದ ಮೇಲೆ) ಇನ್ನೊಂದು ಚಟ ಅಂಟಿಕೊಂಡಿದೆ... ಸಿನಿಮಾ ನೋಡೋದು (ಇಲ್ಲಿ ಸಿನಿಮಾ ನೋಡೋದಕ್ಕಿಂತ ಗೆಳೆಯರ ಭೇಟಿಯೇ ಮುಖ್ಯ ಅನ್ನೋದು ಬೇರೆ ವಿಷಯ).

ಹೋದ ವಾರವಷ್ಟೇ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದರಿಂದ ಈ ವಾರ ಎಲ್ಲಿಗೂ ಹೋಗುವ ಯೋಚನೆ ಇರಲಿಲ್ಲ. (ಕನ್ಫ್ಯೂಸ್ ಆಗ್ಬೇಡಿ, ನನಗಿನ್ನು ೨೨ ವರ್ಷ... ತೀರ್ಥಯಾತ್ರೆ ಬಗ್ಗೆ ಇನ್ಯಾವಾಗಲಾದ್ರೂ ಬರೀತೀನಿ. ಆದರೆ ಇದಕ್ಕೂ ಸಂದೀಪನ ತೀರ್ಥಯಾತ್ರೆಗೂ ಇರುವ ಸಂಬಂಧ ನಂದಿಬೆಟ್ಟಕ್ಕಷ್ಟೇ ಸೀಮಿತ). ಇನ್ನೇನಪ್ಪಾ ಮಾಡೋದು ಅಂತ ಶನಿವಾರ ಮಧ್ಯಾಹ್ನ ಹೀಗೇ ಬ್ರೌಸ್ ಮಾಡ್ತಾ ಕುಳಿತಿದ್ದೆ. ಸುಶ್ರುತನ ಮೌನಗಾಳದಲ್ಲಿ ಆ ಸಂಜೆ, ನಾವೆಲ್ಲ ಸೇರ್ತಿದೀವಿ... ಅಂತ ಬರೆದಿದ್ದನ್ನು ನೋಡಿದೆ. ಈ ಬಾರಿ ಸರಿಯಾಗಿ ಕಲಿತು ವಡಪ್ಪೆಯ ಎಡವಟ್ಟುಗಳು ಮರುಕಳಿಸದಂತೆ ಮಾಡುತ್ತಿದ್ದಾನೆ ಎಂದುಕೊಂಡೆ. ಊಹುಂ, ಅದಲ್ಲ ವಿಷಯ. ಕನ್ನಡ ಬ್ಲಾಗರ್ಸ್ ಮೀಟ್!

ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬ್ಲಾಗರ್ಸ್ ಮೀಟ್ ನಡೆದಿತ್ತು ಎಂಬ ಸುದ್ದಿ ನನಗೆ ಬಂದಿತ್ತು. ಅದು ಹೇಗೆ ನನ್ನ ಕಣ್ಣು ತಪ್ಪಿಸಿತೋ ನಾ ಕಾಣೆ. ಮೊದಲೇ ಗೊತ್ತಾಗಿದ್ದಿದ್ದರೆ ಹೋಗಿರುತ್ತಿದ್ದೇನೋ ಏನೋ. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಕನ್ನಡ ಬ್ಲಾಗರ್ಸ್ ಮೀಟ್ಗಾದ್ರೂ ಹೋಗಲೇ ಬೇಕು, ಆಗಿಂದಾಗ್ಗೆ ಅಂತರ್ಜಾಲದಲ್ಲಿ ನೋಡುವ ಹೆಸರಿನ ವ್ಯಕ್ತಿಗಳು ಯಾರಿರಬಹುದು? ಹೇಗಿರಬಹುದು? ಎಂಬ ಜಿಜ್ಞಾಸೆಯೊಂದಿಗೆ ಹೋಗುವ ನಿರ್ಧಾರಕ್ಕೆ ಬಂದೆ.

ಅಂತೆಯೇ ಭಾನುವಾರ ಬೆಂಗಳೂರಿನ ಪೂರ್ವಕ್ಕೊಂದು ಪ್ರದಕ್ಷಿಣೆ ಹಾಕಿ ದಕ್ಷಿಣಕ್ಕೆ ಹೊರಟೆ. Indian Institute of World Cultures ಎಲ್ಲಿದೆ ಎಂದು ಅವರಿವರನ್ನು ಕೇಳುತ್ತ ಹಾಗೂ ಹೀಗೂ ನಾಲ್ಕೂವರೆಗೆ ತಲುಪಿದೆ. ಮೊದಲಿಗೆ ಅಪರಿಚಿತ ಸ್ಥಳದಂತೆ ಕಂಡು ಬಂದರೂ ಐದೇ ನಿಮಿಷದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದರಿಂದ ಯು.ಬಿ.ಪವನಜ, ಹರಿಪ್ರಸಾದ್ ನಾಡಿಗ್, ಅಬ್ದುಲ್ ರಶೀದ್ ಅವರ ಅನುಭವಗಳು, ಅಭಿಪ್ರಾಯಗಳು, ಸಲಹೆಗಳನ್ನು ಕೇಳುತ್ತ ಕುಳಿತೆ. ಮಧ್ಯ ಚಹಾ ವಿರಾಮದಲ್ಲಿ ಕೆಲವರು ಪರಿಚಯವಾದರು. ಚಹಾನಂತರದ ಚರ್ಚೆ, ಅಭಿಪ್ರಾಯ ಹಂಚಿಕೆಗಳಲ್ಲಿ ಇನ್ನೂ ಕೆಲವರು ಪರಿಚಯವಾದರು. ಎಸ್ ಕೆ ಶ್ಯಾಮಸುಂದರ್ ಅವರ ಮಾತುಗಳು ಓದುಗರನ್ನು ಯೋಚಿಸುವಂತೆ ಮಾಡಲು ಸಫಲವಾಯಿತು.

ಅಂತರ್ಜಾಲದಲ್ಲಿ ಕನ್ನಡ ಬೆಳೆದು ಬಂದ ಬಗೆ, ತಂತ್ರಜ್ಞಾನದಲ್ಲಿ ಕನ್ನಡ ಈಗ ಯಾವ ಹಂತದಲ್ಲಿದೆ, ಇನ್ನೂ ಏನೆಲ್ಲ ಕೆಲಸಗಳು ಬಾಕಿ ಇವೆ, ಬ್ಲಾಗಿಗರ ಸಂಖ್ಯೆ ಏಕೆ ಕಡಿಮೆ ಇದೆ ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು ಬಹಳ ಸಂತಸ ನೀಡಿತು. ಆದರೆ ಇವೆಲ್ಲಾ ಸಂತಸಗಳ ನಡುವೆ ಒಂದು ದುಃಖ ಮಾತ್ರ ಉಳಿದುಹೋಯಿತು. ಬಂದಿದ್ದ ಎಲ್ಲ ಬ್ಲಾಗಿಗರ ಪರಿಚಯವಾಗಲಿಲ್ಲವಲ್ಲ ಎಂಬುದೇ ಆ ದುಃಖ. ಕೇವಲ ೩ ಘಂಟೆಗಳಲ್ಲಿ ನೂರಾರು ಜನರ ವೈಯಕ್ತಿಕ ಪರಿಚಯ ಕಷ್ಟವಾಗುತ್ತಿತ್ತೆನ್ನುವುದು ನಿಜ. ಆದರೆ ಮುಂದಿನ ಬಾರಿ ನಾವು ಭೇಟಿಯಾದಾಗ ಎಲ್ಲರ ಪರಿಚಯಕ್ಕೆಂದೇ ಒಂದಷ್ಟು ಸಮಯ ಮೀಸಲಿರಿಸಿ ಎಲ್ಲ ಬ್ಲಾಗಿಗರನ್ನೂ ಪರಿಚಯಸ್ಥರನ್ನಾಗಿ ಮಾಡುವ ಜವಾಬ್ದಾರಿ ಸಂಘಟಕರ ಮೇಲಿದೆ.

ಒಟ್ಟಿನಲ್ಲಿ ಈ ಭಾನುವಾರ ಬ್ಲಾಗಿಗರನ್ನು, ಬ್ಲಾಗುಗಳನ್ನು ಓದಿ ಸಂತಸ ಪಡುವವರನ್ನು ಒಂದೆಡೆ ಸೇರಿಸಲು ಒಂದು ವೇದಿಕೆಯಾಯಿತು. ಇದಕ್ಕಾಗಿ "ಪ್ರಣತಿ" ತಂಡದವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅಲ್ಲದೆ ಇದು ಕೇವಲ ವೇದಿಕೆಯಾಗಿ ಉಳಿಯದೆ ಅಂತರ್ಜಾಲದಲ್ಲಿ ಕನ್ನಡದ ಮಹಾಕಾವ್ಯಕ್ಕೆ ಮುನ್ನುಡಿಯಾಗಲಿ ಎಂದು ಆಶಿಸುವೆ.

ಇತರರ ಅನಿಸಿಕೆಗಳು:

7 ಕಾಮೆಂಟ್‌ಗಳು:

ಅಮರ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅಮರ ಹೇಳಿದರು...

ಪ್ರಿಯ ಮಿತ್ರರೇ,

ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು, ನಮ್ಮ ಮುಂದಿನ ಕಾರ್ಯಕ್ರಮ ಮಾಡುವಾಗ ಖಂಡಿತ
ನಿಮ್ಮ ಸಲಹೆಗಳನ್ನ ಪರಿಗಣಿಸುತ್ತೆವೆ.... ಎಲ್ಲಾ ಬ್ಲಾಗಿಗಳನ್ನು ಒಂದೆಡೆ ಕಲೆಹಾಕುವ ನಮ್ಮ ಪುಟ್ಟ
ಪ್ರಯತ್ನಕ್ಕೆ ನಿಮ್ಮಿಂದ ದೊರೆತ ಬೆಂಬಲಕ್ಕೆ ನಾವು ಕೃತಜ್ಞರು.

ಪ್ರಣತಿಯಪರವಾಗಿ...
-ಅಮರ

**

ಅನಾಮಧೇಯ ಹೇಳಿದರು...

Nice to know that the function went off quite well.
I strongly disagree with the claim that - each and every blogger should have been introduced!. This is practically impossible and conceptually unacceptable!.

Dr.D.M.Sagar

Harisha - ಹರೀಶ ಹೇಳಿದರು...

ಅಮರ್ ಅವರೇ, ನಿಮ್ಮ ಹಾಗೂ ಪ್ರಣತಿ ಬಳಗದ ಮುಕ್ತ ಮನಸ್ಸಿಗೆ ನನ್ನ ಮುಕ್ತ ಮನಸ್ಸಿನ ಶ್ಲಾಘನೆಗಳು :)

ಡಾ. ಸಾಗರ್ ಅವರೇ, ನೀವು ಹೇಳಿದಂತೆ ಪ್ರತಿಯೊಬ್ಬರೂ ತಮ್ಮ ಪರಿಚಯವನ್ನು ವೇದಿಕೆಯ ಮೇಲೆ ಮಾಡಿಕೊಳ್ಳುವುದು ಅಸಾಧ್ಯ ಎನ್ನುವುದು ನಿಜ. ಆದರೆ ಕಾರ್ಯಕ್ರಮದ ಸ್ವಲ್ಪ ಸಮಯವನ್ನು ನಮ್ಮ ನಮ್ಮಲ್ಲಿಯೇ ಮಾತನಾಡಿಕೊಳ್ಳಲು/ಪರಿಚಯ ಮಾಡಿಕೊಳ್ಳಲು ಮೀಸಲಿರಿಸಿದ್ದರೆ ಚೆನ್ನಾಗಿತ್ತು ಎನ್ನುವುದು ನನ್ನ ಅನಿಸಿಕೆ. ಅದೇನೇ ಇರಲಿ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ, ಬರೆಯುತ್ತಿರಿ.

Suresh S Murthy ಹೇಳಿದರು...

Hello Harish,

Eebaari miss aitu. Mundin sala khanditha blogger's meetige baralu yatnisuve:)

bhadra ಹೇಳಿದರು...

ನಮಸ್ಕಾರ
ಇದೇ ಮೊದಲ ಬಾರಿಗೆ ನಿಮ್ಮ ಬ್ಲಾಗಿನ ಬಾಗಿಲನ್ನು ತುಳಿಯುತ್ತಿರುವೆ

ಈ ಬ್ಲಾಗು ನವರಸ ಭರಿತವಾಗಿದೆ. ಮಯೂರ ಅಥವಾ ತುಷಾರ ಮಾಸ ಪತ್ರಿಕೆಯನ್ನು ಓದಿದಂತೆ ಭಾಸವಾಗುತ್ತಿದೆ.
ಕಥೆ, ಕವನ, ಲೇಖನ, ಪ್ರಬಂಧ ಇತ್ಯಾದಿ ಎಲ್ಲವೂ ಒಂದೇ ತಾಣದಲ್ಲಿ ಓದಲು ಸಿಗುತ್ತಿದೆ. ಇಲ್ಲಿರುವ್ ಬರಹಗಾರರೆಲ್ಲರಿಗೂ ನನ್ನ ವಂದನೆಗಳು.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Harisha - ಹರೀಶ ಹೇಳಿದರು...

@ಸೂರಿ, ಬರಿ ಯತ್ನಿಸುವೆ ಅಲ್ಲ... ಖಂಡಿತ ಬರಬೇಕು...

@ಶ್ರೀನಿವಾಸ್, ನಿಮ್ಮ ಅನಿಸಿಕೆ ನೋಡಿ ನಮಗೆ ನವೋತ್ಸಾಹ ಮಾಡಿದೆ... ಇಂತಹ ಇನ್ನೂ ಹಲವಾರು ಲೇಖನಗಳನ್ನು ನೀಡಲು ಪ್ರಯತ್ನಿಸುತ್ತೇವೆ.