ಶನಿವಾರ, ನವೆಂಬರ್ 3, 2007

ಜೇನಿನ ಹೊಳೆಯೋ... ಹಾಲಿನ ಮಳೆಯೋ...

ನಮಸ್ಕಾರ! ಬಹಳ ದಿನವಾಗಿದೆ ಇಲ್ಲಿ ಬರೆದು... ಏನ್ ಮಾಡಲಿ ನಾನು ಏನ್ ಮಾಡಲಿ? ಕೇವಲ ನೀರು, ಶುದ್ಧ ಗಾಳಿ ಮುಂತಾದವುಗಳ ಅಭಾವದಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ನಾನು ಬಂದಾಗಿನಿಂದ (ನನಗೆ) ಹೊಸ ಅಭಾವಗಳು ಶುರುವಾಗಿವೆ. ಬರೆಯೋದಕ್ಕೆ ಬಹಳ ವಿಷಯಗಳಿವೆ, ಆದರೆ ಸಮಯದ ಅಭಾವ. ಸಾಕಷ್ಟು ಸಮಯವಿದೆ, ಆದರೆ ಕಂಪ್ಯೂಟರ್ ಅಭಾವ. ಸಾಕಷ್ಟು ಕಂಪ್ಯೂಟರ್ ಗಳೂ ಇವೆ, ಆದರೆ ಇಂಟರ್ನೆಟ್ ಅಭಾವ. ಹೀಗೆ ಅಭಾವಗಳ ಸುಳಿಗೆ ಸಿಕ್ಕು ಭಾವದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ದೋಣಿಗೆ ಹುಟ್ಟು ಹಾಕುವ ಕಾಲ ಕೂಡಿ ಬಂದಿದೆ.

ರಾಜಧಾನಿಗೆ ನಾನು ಬಂದಾಗಿನಿಂದ ಅನುಭವಿಸಿರುವ ಕಷ್ಟ ಎಂದರೆ ಎಲ್ಲರಿಗೂ ತಿಳಿದಿರುವ ಟ್ರಾಫಿಕ್ ಜಾಮ್. ಅದರಲ್ಲಿ ಸಿಕ್ಕಿ ಹಾಕಿಕೊಂಡಾಗ ಬಹಳಷ್ಟು ಜನ ಮಾಡುವ ಕೆಲಸವೆಂದರೆ ಎಫ್.ಎಂ. ಕೇಳುವುದು ("ಸಿಗ್ನಲ್ ಅಲ್ಲೇ ಶೇವಿಂಗ್ ಮಾಡಿ, ಟ್ರಾಫಿಕ್ ನಲ್ಲೇ ಮೇಕಪ್ ಮಾಡಿ, ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ" ಎನ್ನುವ ಅಮೇರಿಕಾ ಸಂಸ್ಕೃತಿ ಇಲ್ಲಿಲ್ಲವಲ್ಲ!). ಎಫ್.ಎಂ ಆದರೋ ಬರೀ ಕಂಗ್ಲಿಷ್ ಮಾತನಾಡುವ ಆರ್.ಜೆ. ಗಳ ತಂಡ, ಅವರ ನಿರುಪಯುಕ್ತ ಹರಟೆ ಹಾಗೂ ಅಲ್ಲೋ ಇಲ್ಲೋ ಕೆಲವು ಉತ್ತಮ ಹಾಡುಗಳು. ಆದರೆ ಬೇರೆ ಮನರಂಜನೆಯಿಲ್ಲದೆ ಬೆಂಗಾಡಾಗಿರುವ ಈ ಮನಸ್ಸಿಗೆ ಅದೇ ಓಯಸಿಸ್!

ನವೆಂಬರ್ ಬಂದ ತಕ್ಷಣ ಜಾಗೃತವಾಗುವ ಕನ್ನಡ ಸಂಘಗಳು ಎಂದಿನಂತೆ ಈ ಬಾರಿಯೂ ತಮ್ಮ ಕೆಲಸ ಮಾಡಿದವು, ರೇಡಿಯೋ ಜಾಕಿಗಳು ಯಥಾಪ್ರಕಾರ ಕಂಗ್ಲಿಷ್ ಮೆರೆದರು. ಇವೆಲ್ಲದರ ಮಧ್ಯೆ ಕನ್ನಡ ಬಾರದವರ/ಬಂದರೂ ಮಾತನಾದದವರ ಸಂದರ್ಶನ ಬೇರೆ. ಕರ್ನಾಟಕದಲ್ಲೇ ಓದಿ, ಬೆಳೆದಿದ್ದರೂ ಕನ್ನಡ ಮಾತನಾಡಲು ನಾಚುವ(?) ದೀಪಿಕಾ ಪಡುಕೋಣೆಯ ಸಂದರ್ಶನ ಇದರಲ್ಲೊಂದು. ಕನ್ನಡದ ಐಶ್ವರ್ಯ ಎಂದು ಹೆಸರಾಗಿರುವ ಇವಳಿಗೆ ಕನ್ನಡ ಮಾತನಾಡಲು ಅಂಜಿಕೆಯೇ ಅಳುಕೇ? ಆರ್.ಜೆ. ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿದ್ದರೂ ಹಿಂದಿ ಅಥವಾ ಆಂಗ್ಲದಲ್ಲಿಯೇ ಉತ್ತರಿಸುತ್ತಿದ್ದ ಆಕೆಯ ಧೈರ್ಯ ಮೆಚ್ಚಲೇಬೇಕು. ಇನ್ನು ಐಶ್ವರ್ಯಾ ಬಚ್ಚನ್ ಅಂತೂ ತನಗೆ ಕನ್ನಡ ಬರುತ್ತದೆಂದು ಹೇಳಿಕೊಳ್ಳಲೂ ಇಷ್ಟಪಡುವುದಿಲ್ಲ. ಕನ್ನಡ ರಾಜ್ಯೋತ್ಸವದಂದೇ ಆಕೆ ಹುಟ್ಟಿದ್ದು ಕನ್ನಡಿಗರ ಕರ್ಮಕಾಂಡ. ಒಟ್ಟಿನಲ್ಲಿ ಇನ್ನೊಂದು ರಾಜ್ಯೋತ್ಸವ ಮುಗಿದಿದೆ. ನವೆಂಬರ್ ತಿಂಗಳಿನಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಕನ್ನಡಿಗರ ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿದೆ. ಜೇನಿನ ಹೊಳೆಯೋ... ಹಾಲಿನ ಮಳೆಯೋ... ಎಂಬ ಮಾತು ಡಾ|| ರಾಜ್ ರೊಂದಿಗೆ ಅವಸಾನವಾಗಿದೆಯೋ ಎಂಬ ಶಂಕೆ ಉಂಟಾಗುತ್ತಿದೆ.

ಸೋಮವಾರ, ಅಕ್ಟೋಬರ್ 8, 2007

ದೋಣಿ ಸಾಗಲಿ, ಮುಂದೆ ಹೋಗಲಿ...

ಹರಿಹರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ... ಇದೇ ತಿಂಗಳು ೧೧ನೇ ತಾರೀಖಿನಿಂದ ಕೆಲಸಕ್ಕೆ ಸೇರಬೇಕಾಗಿರುವುದರಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಹೊಸ ಬಾಳನ್ನು ಆರಂಭಿಸುತ್ತಿದ್ದೇನೆ. ಬಾಲ್ಯದ ಹುಡುಗಾಟಗಳು, ಗೆಳೆಯರ ಸಂಗ, ಶಾಲೆ-ಕಾಲೇಜುಗಳ ಜೀವನ ಇವೆಲ್ಲವಕ್ಕೂ ಸಾಕ್ಷಿಯಾದ ಈ ಊರು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇದೇನಪ್ಪಾ, ಕೆಲಸಕ್ಕೆ ಸೇರುವವನಿಗೆ ಇಷ್ಟೊಂದು ಫೀಲಿಂಗಾ ಅನ್ಬೇಡಿ. ಇದಕ್ಕೆ ಕಾರಣವಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಷ್ಟೇ ಅಲ್ಲದೆ ನಮ್ಮ ಕುಟುಂಬವೂ ನಮ್ಮೂರಾದ ಮಂಚಾಲೆಯಲ್ಲಿ ನೆಲೆಸಲಿದೆ. ಹಾಗಾಗಿ ನಾನು ಮತ್ತೆ ಹರಿಹರಕ್ಕೆ ಎಂದು ಬರುತ್ತೇನೆ ಎಂಬುದು ಅನಿಶ್ಚಿತ. ಆದರೆ ಒಂದಂತೂ ಸತ್ಯ. ಅಸಂಖ್ಯ ಮಧುರ ನೆನಪುಗಳನ್ನು ನೀಡಿದ ಹರಿಹರ ಸದಾ ನನ್ನ ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುತ್ತದೆ...

ಉದ್ಯಾನನಗರಿಯ ಬದುಕು ಸುಂದರವಾಗಿರುತ್ತದೆಂದು ಆಶಿಸುತ್ತಾ ಬಾಳೆಂಬ ದೋಣಿ ಹೀಗೇ ಮುಂದುವರಿಯುತ್ತದೆಂದು ಬಯಸುತ್ತೇನೆ. ಕುವೆಂಪು ರಚಿಸಿರುವ ಮಿಸ್ ಲೀಲಾವತಿ ಚಿತ್ರದ ಈ ಹಾಡು ಈ ಸಮಯದಲ್ಲಿ ಪ್ರಸ್ತುತವೆಂದೆನಿಸುತ್ತಿದೆ:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುಡುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿರೆ ||೨||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

(ಈ ಹಾಡನ್ನು ಕನ್ನಡಆಡಿಯೋ.ಕಾಂ ನ ಈ ಪುಟದಿಂದ ಕೇಳಬಹುದು)

ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು

ಶುಕ್ರವಾರ, ಸೆಪ್ಟೆಂಬರ್ 28, 2007

ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......

ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.

ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.

ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!

ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಬುಧವಾರ, ಸೆಪ್ಟೆಂಬರ್ 26, 2007

ಶಿರಸಿಗೆ ಸ್ಪೈಸ್ ಬಂದಿದೆ!!

ಹೌದು. ಉತ್ತರ ಕನ್ನಡದ ಪ್ರಮುಖ ಪಟ್ಟಣವಾಗಿದ್ದರೂ ಶಿರಸಿಯಲ್ಲಿ ಇಷ್ಟು ದಿವಸ ಸ್ಪೈಸ್ ನೆಟ್‌ವರ್ಕ್ ಇರಲಿಲ್ಲ. ಇಂದು ಅಲ್ಲಿಗೆ ಹೋಗಿದ್ದ ನನಗೆ ಆಶ್ಚರ್ಯ! ಏಕೆಂದರೆ ಸ್ಪೈಸ್ ಇರುವುದಷ್ಟೇ ಅಲ್ಲ, ನೆಟ್‌ವರ್ಕ್ ಕೂಡಾ ಚೆನ್ನಾಗಿಯೇ ಇದೆ (ನಾನೊಬ್ಬನೇ ಸ್ಪೈಸ್ ಗ್ರಾಹಕ ಅಲ್ಲಿದ್ದಿದ್ದು ಅಂತೀರಾ? ಅನ್ನಿ). ಒಟ್ಟಿನಲ್ಲಿ ಶಿರಸಿ ಈಗ hot and spicy!!

ಅಲ್ಲಿಂದ ಬರುವಾಗ ಇನ್ನೊಂದು ಸಂಗತಿ ನಡೆಯಿತು. ಶಿರಸಿಯಿಂದ ಹಾವೇರಿಗೆ ಬರುವಾಗ ಬಸ್ಸಿನಲ್ಲಿ ಒಬ್ಬ ಶಾಲೆಯ ಹುಡುಗ ಸುಮ್ಮನೇ ಕೂರದೇ ಉಣ್ಣೆಯಿಂದ ನೇಯ್ಗೆ ಮಾಡುತ್ತಿದ್ದ. ಅಕ್ಕ ಪಕ್ಕ ಕುಳಿತಿದ್ದ ಅವನ ಗೆಳೆಯರು ಹರಟೆ ಹೊಡೆಯುತ್ತಿದ್ದರೂ ಅವನು ಮಾತನಾಡುತ್ತಲೇ ನನ್ನ ಕಾರ್ಯ ಮುಂದುವರೆಸಿದ್ದ. ಅವನು ಯಾರೆಂದು ನನಗೆ ತಿಳಿದಿಲ್ಲ; ಆದರೆ ಅವನು ಮಾಡುತ್ತಿದ್ದ ಕೆಲಸ ಮಾತ್ರ ಜೀವನಕ್ಕೊಂದು ಪಾಠ, ಅನುಕರಣೀಯ.



ಕೆಲಸ ಮಾಡಲೇಬೇಕೆಂದಿದ್ದರೆ ಹೇಗೆ ಬೇಕಾದರೂ ಮಾಡಬಹುದೆಂಬುದಕ್ಕೆ ಇದೇ ಸಾಕ್ಷಿಯಲ್ಲವೇ? ಮನಸ್ಸಿದ್ದರೆ ಮಾರ್ಗ.

ಸೋಮವಾರ, ಸೆಪ್ಟೆಂಬರ್ 24, 2007

ತಲೆನೋವಿಗೆ ಒಂದು ಡಜನ್ ಕಾರಣಗಳು...

  • ಮೈಗ್ರೇನ್ ಅಥವಾ ಇನ್ಯಾವುದೋ ತಲೆಗೆ ಸಂಬಂಧಿಸಿದ ರೋಗ ಬಂದಿರುವುದು

  • ಬಹಳ ನಿದ್ದೆಗೆಡುವುದು

  • ದೀರ್ಘ ಕಾಲ ಟಿವಿ ನೋಡುವುದು

  • ಮಳೆಯಲ್ಲಿ ನೆನೆದು ತಲೆ ಒರೆಸಿಕೊಳ್ಳದಿರುವುದು

  • ಟಾಯ್ಲೆಟ್‍ಗೆ ಸಮಯಕ್ಕೆ ಸರಿಯಾಗಿ ಹೋಗದೆ ಮಲಬದ್ಧತೆಯಾಗುವುದು

  • ಶಾಲೆಗೆ ಚಕ್ಕರ್ ಹಾಕಲು ನೆಪ ಬೇಕಾಗಿರುವುದು

  • ಮನೆಗೆಲಸ ತಪ್ಪಿಸಿಕೊಳ್ಳಲು ನೆಪ ಬೇಕಾಗಿರುವುದು

  • ಹೆಂಡತಿಯೊಡನೆ ಶಾಪಿಂಗ್ ಹೋಗದಿರಲು ನೆಪ ಬೇಕಾಗಿರುವುದು

  • ಬಿಸಿ ಕಾಫಿ ಅಥವಾ ಚಹಾ (ದಿನದ ೨೫ ನೇ ಬಾರಿ) ಕುಡಿಯಲು ನೆಪ ಬೇಕಾಗಿರುವುದು

  • ಭಾರತ ಸೋಲುತ್ತಿರುವ ಕ್ರಿಕೆಟ್ ಮ್ಯಾಚ್‍ನ ಆಡಿಯೋ ಕಾಮೆಂಟರಿ ಕೇಳುವುದು

  • ಬರಿಯ ಸ್ಪ್ಯಾಮ್‍ಗಳೇ ತುಂಬಿರುವಾಗ ಈಮೇಲ್ ಚೆಕ್ ಮಾಡುವುದು

  • ಮೆಡಿಕಲ್ ಓದುತ್ತಿರುವ ಗೆಳೆಯರೊಂದಿಗೆ ಕಾಲು ಗಂಟೆಗಿಂತ ಹೆಚ್ಚು ಮಾತನಾಡುವುದು